ಮಲೆನಾಡಿನ ಅರಣ್ಯಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಬೋಗಿ ಮರಗಳು. ಅದರ ವಿಶೇಷತೆಗಳ ಕುರಿತು ಪಶುವೈದ್ಯರಾದ ಡಾ.ಯುವರಾಜ್ ಹೆಗಡೆ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ಮುಂದೆ ಓದಿ….
ಇವು ಗಗನಚುಂಬಿ ಬೋಗಿ ಮರಗಳು. ಮಲೆನಾಡಿನ ಅರಣ್ಯಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಕಾಡುಮರಗಳೇ ಆದರೂ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಮಾತ್ರ ಬೆಳೆಯುವುದು ಇವುಗಳ ವಿಶೇಷ. ನಿಮಗೆಲ್ಲಾ ತಿಳಿದಂತೆ ಬೋಗಿ ಮರದ ನಾಟ ಹೆಚ್ಚು ಗಟ್ಟಿ , ದೀರ್ಘ ಬಾಳಿಕೆ ಬರುವ ಕಾರಣ ಅವುಗಳನ್ನು ಕಿಟಕಿ, ಬಾಗಿಲಿನ ಚೌಕಟ್ಟುಗಳಿಗೆ ಬಳಸುತ್ತಾರೆ.
ಅಂದ ಹಾಗೆ ಇದು ನನ್ನ ಕಣ್ಣಿಗೆ ಬಿದ್ದದ್ದು ಸಾಲೂರು ಸಮೀಪ ಬೈಸರವಳ್ಳಿ ಕೃಷ್ಣ ಮೂರ್ತಿ ಅವರ ಮನೆಯ ದಾರಿಯಲ್ಲಿ. ಅವರ ಕುಟುಂಬ ಸುಮಾರು 70-80 ವರ್ಷಗಳಿಂದ ( ಅವರ ತಂದೆಯ ಕಾಲದಿಂದ) ಈ ವೃಕ್ಷಗಳನ್ನು ಉಳಿಸಿಕೊಂಡು, ಕಾಡುಗಳ್ಳರಿಂದ ಕಾಪಾಡಿಕೊಂಡು ಬಂದಿದ್ದಾರೆ. ಪೃಕೃತಿಯ ಮಡಿಲಿನಲ್ಲಿ ಬದುಕಿರುವ ಇವರದ್ದು ಕೃಷಿ ಮತ್ತು ಹೈನುಗಾರಿಕೆ ಮುಖ್ಯ ಕಸುಬಾಗಿದ್ದು ತಮ್ಮ ಸುತ್ತಲಿನ ಅರಣ್ಯ ಸಂರಕ್ಷಣೆಯ ಬಗ್ಗೆ ವಿಶೇಷ ಕಾಳಜಿ ತೋರುತ್ತಾರೆ. ಮನೆಯ ಅನತಿ ದೂರದಲ್ಲಿ ಇರುವ ಕೆರೆಯ ನೈರ್ಮಲ್ಯದ ಕುರಿತಾಗಿ ಕೂಡ ಗಮನ ಹರಿಸಿದ್ದಾರೆ. ಇದರ ಫಲವಾಗಿ ಆ ಭಾಗದಲ್ಲಿ ವನ್ಯ ಜೀವಿಗಳು ಸಹ ಸಾಕಷ್ಟು ಸಂಖ್ಯೆಯಲ್ಲಿ ವಾಸವಾಗಿವೆ . ಜಿಂಕೆ, ಕೆಂದಳಿಲು, ಮೊಲ, ಬರ್ಕ ಆಗಾಗ್ಗೆ ಚಿರತೆ, ಕತ್ತೆ ಕಿರುಬಗಳು ಸಹ ತಮ್ಮ ಹಾಜಾರಾತಿ ಹಾಕಿ ಹೋಗುತ್ತವೆ. ಎತ್ತರದ ಬೋಗಿ ಮರದ ಕಡೆಯಿಂದ ಹಾರ್ನ್ ಬಿಲ್ ಹಕ್ಕಿಯ ವಿಶಿಷ್ಟ ಧ್ವನಿ ಎಲ್ಲಾ ಕಾಲದಲ್ಲಿಯೂ ಕೇಳಬಹುದು. ಒಮ್ಮೆ ಮರವೇರಿದಾಗ ಕೃಷ್ಣ ಮೂರ್ತಿ ಬಟ್ಟರು ತಮ್ಮ ಮನೆಯ ಫೋಟೋವನ್ನು ಅಲ್ಲಿಂದಲೇ ಕ್ಲಿಕ್ಕಿಸಿದ್ದಾರೆ, ಅದನ್ನು ನೀವು ಇಲ್ಲಿ ನೋಡಬಹುದು.
ಮನೆಯ ಸುತ್ತಲೂ ಸಣ್ಣ ಶಬ್ದವಾದರೂ ಅವರ ಆಲ್ಸೇಷಿಯನ್ ಮಿಶ್ರತಳಿ ಶ್ವಾನಗಳು ಅಬ್ಬರಿಸಿ ಯಜಮಾನರಿಗೆ ಸುಳಿವು ನೀಡುವುದಲ್ಲದೆ , ಕಾಡುಗಳ್ಳರಿಂದ ಹಾಗೂ ಬೇಟೆಗಾರರಿಂದ ರಕ್ಷಿಸಲು ಸಹಾಯಕಾರಿಯಾಗಿವೆ. ಇಂದು ಚಿಕಿತ್ಸೆಗೆಂದು ಅವರ ಮನೆಗೆ ಭೇಟಿ ನೀಡಿದಾಗ ಕಾಲು ದಾರಿ ಪಾಚಿಯಿಂದಾಗಿ ಜಾರಿಕೆ ಇರುವ ಕಾರಣ 400 ಮೀಟರ್ ದೂರದಲ್ಲಿ ಬೈಕ್ ನಿಲ್ಲಿಸಿ ಹೋಗಿದ್ದೆ. ಹಿಂದಿರುಗುವಾಗ, ಶ್ವಾನಗಳು ನನ್ನನ್ನು ಮನೆಯಿಂದ ಬೈಕ್ ನಿಲ್ಲಿಸಿದ ಜಾಗದವರೆಗೂ ತಂದು ಬಿಟ್ಟು ಜವಾಬ್ದಾರಿ ಮೆರೆದವು. ಅಷ್ಟರಲ್ಲಾಗಲೇ ಇಂಬಳಗಳು ಪಾದದಿಂದ ಎದೆಯೆತ್ತರಕ್ಕೆ ಏರಿ ಬಟ್ಟೆಯೆಲ್ಲಾ ರಕ್ತಗೆಂಪು ಮಾಡಿ ತಮ್ಮ ಅಸ್ತಿತ್ವವನ್ನು ಸಾರಿ ಹೇಳುತ್ತಿದ್ದವು.
ತಂಡಿ ಗಾಳಿ, ಮಳೆಗಾಲದ ಜಡಿಮಳೆಯ ಅರ್ಭಟ, ಮಂಗಾಟೆ ಹಕ್ಕಿಯ ಹಾಡು, ನನಗಿಷ್ಟವಾದ ಪ್ರಕೃತಿಯನ್ನು ಆಸ್ವಾದಿಸುತ್ತಾ ಬರುತ್ತಿರುವಾಗಲೇ ನಮ್ಮ ಅರಣ್ಯ ಇಲಾಖೆಯವರು ಬೆಳೆಸಿ, ಸಂರಕ್ಷಿಸಿದ ಅಕೇಶಿಯಾ ನಡುತೋಪುಗಳು ಎದುರಾಗಿ ನನ್ನೆಡೆಗೆ ಕೇಕೆ ಹಾಕುತ್ತ ಗಹಗಹಿಸುತಿದ್ದವು. ವಿಪರ್ಯಾಸ ನೋಡಿ… “ಅರಣ್ಯವನ್ನು ಸಂರಕ್ಷಿಸಬೇಕಾದ ಜವಾಬ್ದಾರಿ ಇರುವವರು ನೆಟ್ಟದ್ದು ಅಕೇಶಿಯಾ, ಪ್ರಕೃತಿಯ ನಡುವೆ ಬದುಕಿರುವವರು ಉಳಿಸಿರುವುದು ನೈಸರ್ಗಿಕ ಅರಣ್ಯ, ಜೀವ ವೈವಿಧ್ಯತೆ”.
- ಡಾ ಯುವರಾಜ್ ಹೆಗಡೆ (ಪಶುವೈದ್ಯರು,ವೈದಕೀಯ ಬರಹಗಾರರು) ತೀರ್ಥಹಳ್ಳಿ.