ಹಿಮಪಾತ ಮತ್ತು ಹಿಮನದಿ ಸ್ಪೋಟದ ನಡುವಿನ ವ್ಯತ್ಯಾಸಹಿಮಪಾತ ಮತ್ತು ಹಿಮನದಿ ಸ್ಪೋಟದ ನಡುವೆ ಭಾರೀ ವ್ಯತ್ಯಾಸವಿದೆ. ಉತ್ತರ ಖಂಡದ ಚಮೋಲಿಯಲ್ಲಿ ಭಾನುವಾರ ಸಂಭವಿಸಿದ್ದು ‘ಹಿಮನದಿ ಸ್ಪೋಟ’. ಒಂದಷ್ಟು ಒಳ್ಳೆಯ ಮಾಹಿತಿಗಳನ್ನು ಲೇಖಕ ಶಿವಕುಮಾರ್ ಬಾಣಾವರ ಅವರು ಓದುಗರಿಗೆ ನೀಡಿದ್ದಾರೆ. ಓದಿ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ .

ಹಿಮನದಿ ಸ್ಪೋಟ: ಗಂಗಾ ನದಿಯ ಉಪನದಿ ಗಳಲ್ಲಿ ಒಂದಾದ ಋಷಿಗಂಗಾ ನದಿಯು ಉತ್ತರಖಂಡದ ಚಮೋಲಿ ಜಿಲ್ಲೆಯ ನಂದಾದೇವಿ ಪರ್ವತದಲ್ಲಿ ಹುಟ್ಟುತ್ತದೆ. ಐದು ಹಿಮನದಿಗಳ ನೀರಿನಿಂದ ಜಿನುಗಿದ ನೀರಿನಿಂದ ಋಷಿಗಂಗಾ ನದಿ ಜನ್ಮತಳೆಯುತ್ತದೆ. ಒಂದರಿಂದ ಮೂರು ಕಿಲೋಮೀಟರ್ ನಷ್ಟು ಉದ್ದವಿರುವ ಈ ಹಿಮನದಿಗಳ ಸರಾಸರಿ ಅಗಲ ಐನೂರು ಮೀಟರ್. ಇವುಗಳಲ್ಲಿ ಅತ್ಯಂತ ದೊಡ್ಡದಾದ ಹಿಮನದಿಯ ನೀರ್ಗಲ್ಲು ಭಾನುವಾರ (೦೭-೦೨-೨೦೨೧) ಮುರಿದು ಬಿದ್ದಿದೆ.

ಹಿಮನದಿಯ ಬೃಹತ್ ಮಂಜುಗಡ್ಡೆ ಗಳು ಮುರಿದು ಬಿದ್ದಾಗ, ನದಿಯು ಅತೀವ ಒತ್ತಡದಿಂದ ಉಕ್ಕಿ ಹರಿಯುವ ವಿದ್ಯಮಾನವನ್ನು “ಹಿಮನದಿ ಸ್ಪೋಟ” ಎಂದು ಕರೆಯಲಾಗುತ್ತದೆ. ಆರ್ಕ್ಟಿಕ್, ಅಂಟಾರ್ಟಿಕಾ ದೃ ಪ್ರದೇಶಗಳನ್ನು ಒಳಗೊಂಡಂತೆ, ಹಿಮಾಲಯದ ಹಿಮನದಿಗಳು ಅಥವಾ ಆ ಭಾಗದ ಸರೋವರಗಳಲ್ಲಿ ಇಂತಹ ಅಪಾಯ ಇದ್ದೇ ಇರುತ್ತದೆ.

ಹಿಮಪಾತ ಮತ್ತು ಹಿಮನದಿ ಸ್ಪೋಟದ ನಡುವೆ ಭಾರೀ ವ್ಯತ್ಯಾಸವಿದೆ. ಉತ್ತರ ಖಂಡದ ಚಮೋಲಿಯಲ್ಲಿ ಭಾನುವಾರ ಸಂಭವಿಸಿದ್ದು ‘ಹಿಮನದಿ ಸ್ಪೋಟ’.

ಕಡಿದಾದ ಪರ್ವತಗಳ ಮೇಲೆ ಶೇಖರವಾಗಿರುವ ಹಿಮರಾಶಿಯು, ತಗ್ಗಿನತ್ತ ನುಗ್ಗಿಬರುವುದನ್ನು ಹಿಮಪಾತ ಎನ್ನಲಾಗುತ್ತದೆ. ಪರ್ವತದ ಮೇಲ್ಮೈನಲ್ಲಿ ಶೇಖರವಾಗಿರುವ ಹಿಮರಾಶಿಯು ಭಾರ ಹೆಚ್ಚಾದಾಗ ಇದು ಸಂಭವಿಸುತ್ತದೆ. ಪರ್ವತ ಪ್ರದೇಶದಲ್ಲಿ ಸಣ್ಣ ಪ್ರಮಾಣದಲ್ಲಿ ಭೂಮಿ ಕಂಪಿಸಿದಾಗಲೂ ಹಿಮಪಾತ ಸಂಭವಿಸುತ್ತದೆ. ಸ್ಕೀಯಿಂಗ್ ಆಡುವ ವೇಳೆ ಹಿಮ ಸರಿಯುವುದರಿಂದಲೂ ಹಿಮಪಾತ ಉಂಟಾಗುತ್ತದೆ.

ಕಡಿದಾದ ಜಾಗದಲ್ಲಿ ಇದು ಸಂಭವಿಸುವ ಕಾರಣ ಹಿಮರಾಶಿಯು ಭಾರೀ ವೇಗದಲ್ಲಿ ತಗ್ಗಿನತ್ತ ನುಗ್ಗುತ್ತದೆ. ಅಡ್ಡವಾಗಿ ಸಿಗುವ ಎಲ್ಲ ವಸ್ತುಗಳನ್ನೂ ಕೊಚ್ಚಿಕೊಂಡು ಸಾಗುತ್ತದೆ. ಹಿಮಪಾತಕ್ಕೆ ಸಿಲುಕುವವರಲ್ಲಿ ಶೇಕಡಾ ತೊಂಬತ್ತೈದರಷ್ಟು ಮಂದಿ ಮೃತಪಡುತ್ತಾರೆ ಎಂದು ನ್ಯಾಷನಲ್ ಜಿಯಾಗ್ರಫಿಕಲ್ ಚಾನೆಲ್ ಹೇಳಿದೆ. ಹಿಮರಾಶಿಯ ಮಧ್ಯೆ ಸಿಲುಕಿ, ಉಸಿರುಗಟ್ಟುವುದರಿಂದ ಸಾವು ಸಂಭವಿಸುತ್ತದೆ.

ಮೇಘಸ್ಪೋಟ: ಪರ್ವತ ಪ್ರದೇಶದಲ್ಲಿ ಧಿಡೀರ್ ಎಂದು ಸುರಿಯುವ ರಕ್ಕಸ ಮಳೆಯನ್ನು ಮೇಘಸ್ಪೋಟ ಎನ್ನಲಾಗುತ್ತದೆ. ವರ್ಷವೆಲ್ಲಾ ಸುರಿಯಬೇಕಿದ್ದ ಮಳೆಯು, ದಿನದ ಒಂದೆರಡು ತಾಸಿನಲ್ಲಿ ಸುರಿಯುತ್ತದೆ. ಇದರಿಂದ ನದಿಯಲ್ಲಿ ಭಾರೀ ಪ್ರವಾಹ ಉಂಟಾಗುತ್ತದೆ. ಈಚಿನ ವರ್ಷಗಳಲ್ಲಿ ಕೇದಾರನಾಥ ಪ್ರದೇಶದಲ್ಲಿ ಮೇಘಸ್ಪೋಟ ಸಂಭವಿಸಿತ್ತು.

ಹಿಮಪಾತ ಮತ್ತು ಮೇಘಸ್ಪೋಟಗಳು ಆಗಾಗ ಸಂಭವಿಸುತ್ತಿರುತ್ತವೆ. ಆದರೆ ಹಿಮನದಿ ಸ್ಫೋಟವು ಅಪರೂಪದ ಪ್ರಾಕೃತಿಕ ಘಟನೆಯಾಗಿದೆ.

ಫೋಟೋ ಕೃಪೆ : Atlast Travel

ಮಂಜುಗಡ್ಡೆಯು ತನ್ನಲ್ಲಿ ಲಕ್ಷಾಂತರ ಟನ್ನುಗಳಷ್ಟು ನೀರನ್ನು ಹಿಡಿದಿಟ್ಟುಕೊಂಡಿರುತ್ತದೆ. ಅಂದರೆ ಒಂದೊಂದು ಹಿಮಗಡ್ಡೆಯ ಒಡಲಲ್ಲೂ ಹತ್ತಾರು ಸರೋವರಗಳಷ್ಟು ನೀರು ಇರುತ್ತದೆ. ಆಯಾ ಕಾಲಕ್ಕೆ ಅನುಗುಣವಾಗಿ ಹಿಮಗಟ್ಟುವ ಹಾಗೂ ಕರಗುವ ವಿದ್ಯಮಾನ ನಡೆಯುತ್ತಿರುತ್ತದೆ. ಈ ಬೃಹತ್ ಹಿಮಗಡ್ಡೆಗಳು ಒಮ್ಮೆಲೇ ಒಡೆದು ತುಂಡಾಗುತ್ತವೆ. ಇದನ್ನೇ ಹಿಮನದಿ ಸ್ಪೋಟ ಎನ್ನಲಾಗುತ್ತದೆ. ಆಗ ನದಿಯಲ್ಲಿ ಒತ್ತಡ ಹೆಚ್ಚಾಗಿ, ಅದು ಭೋರ್ಗರೆದು ಹರಿಯುತ್ತದೆ. ಹಿಮಗಡ್ಡೆ ಚೂರಾಗಿ ಬಿದ್ದಾಗ ಉಂಟಾಗುವ ಪ್ರವಾಹವು ನದೀ ಪಾತ್ರದ ಜೀವಸಂಕುಲವನ್ನು ಅಪಾಯಕ್ಕೆ ನೂಕುತ್ತದೆ. ನದಿಗೆ ಅಡ್ಡಲಾಗಿ ಕಟ್ಟಿರುವ ಅಣೆಕಟ್ಟು ಸೇತುವೆಗಳು ಈ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗುತ್ತದೆ.ಜಾಗತಿಕವಾಗಿ ಉಷ್ಣಾಂಶ ಏರಿಕೆ ಆಗುತ್ತಿರುವುದೇ ಇಂತಹ ಅವಘಡಗಳಿಗೆ ಕಾರಣ. ಹವಾಮಾನ ಬದಲಾವಣೆ ಕುರಿತ ಅಂತರ್ ಸರ್ಕಾರಿ ಸಮಿತಿಯ ೨೦೦೧ ರ ವರದಿಯ ಪ್ರಕಾರ, ಹಸಿರುಮನೆ ಅನಿಲಗಳ ಹೊರಸೂಸುವಿಕೆ ಮೊದಲಾದ ಕಾರಣಗಳಿಂದ ೨೧೦೦ ನೇ ಇಸವಿಯ ವೇಳೆಗೆ ತಾಪಮಾನವು ೧.೪ ಡಿಗ್ರಿ ಸೆಲ್ಸಿಯಸ್ ನಿಂದ ೫.೮ ಡಿಗ್ರಿ ಸೆಲ್ಸಿಯಸ್ ಗೆ ಏರಿಕೆಯಾಗಲಿದೆ. ಜಾಗತಿಕ ಹಿಮರಾಶಿಯ ಕಾಲು ಭಾಗದಷ್ಟು ೨೦೫೦ ರ ವೇಳೆಗೆ, ಅರ್ಧ ಭಾಗವು ೨೧೦೦ ರ ಹೊತ್ತಿಗೆ ನಷ್ಟವಾಗಲಿದೆ.

ಹಿಮನದಿ ಸ್ಪೋಟಕ್ಕೂ ಹವಾಮಾನ ವೈಪರೀತ್ಯಕ್ಕೂ ನಂಟಿದೆ. ಜಾಗತಿಕ ತಾಪಮಾನ ಏರುವುದರಿಂದ ಹಿಮಾಲಯ ಶ್ರೇಣಿಯ ಹಿಮಗಡ್ಡೆಗಳು ವೇಗವಾಗಿ ಕರಗುತ್ತಿವೆ. ಈ ಹಿಮ ಕರಗುವಿಕೆಯು ದೊಡ್ಡ ದೊಡ್ಡ ಹಿಮ ಸರೋವರಗಳ ನಿರ್ಮಾಣಕ್ಕೆ ಕಾರಣವಾಗುತ್ತದೆ. ನದಿಗಳಿಗೆ ಕಟ್ಟಿರುವ ಅಣೆಕಟ್ಟುಗಳಲ್ಲಿ ಬೇಸಿಗೆಯಲ್ಲಿ ಸಹಜವಾಗಿ ನೀರಿನ ಪ್ರಮಾಣ ಏರಿಕೆಯಾಗಿ, ಅಣೆಕಟ್ಟು ಒತ್ತಡಕ್ಕೆ ಸಿಲುಕುತ್ತದೆ. ಈಗ ಉತ್ತರಾಖಂಡದಲ್ಲಿ ಆಗಿರುವ ರೀತಿಯಲ್ಲಿ ಹಿಮನದಿ ಸ್ಪೋಟಗೊಂಡು ನದಿಗೆ ನೀರು ಧುಮ್ಮಿಕ್ಕುತ್ತದೆ.

ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡದಲ್ಲಿ ಈ ಅವಘಡದ ಸಂಭಾವ್ಯತೆ ಹೆಚ್ಚು. ಭಾರತಕ್ಕೆ ಹೊಂದಿಕೊಂಡ ಹಿಮಾಲಯ ಶ್ರೇಣಿಯಲ್ಲಿ ಹಿಮನದಿ ಸ್ಪೋಟದ ಪ್ರಕರಣ ದಾಖಲಾಗಿದ್ದು ೧೯೨೬ ರಲ್ಲಿ. ಜಮ್ಮು ಮತ್ತು ಕಾಶ್ಮೀರದ ಶ್ಯಾಕ್ ಹಿಮನದಿಯ ಅಣೆಕಟ್ಟಿನಿಂದ ನೀರು ಬಿಡುಗಡೆಯಾದಾಗ ಪ್ರವಾಹ ಸಂಭವಿಸಿ, ೪೦೦ ಕಿಮೀ ದೂರದಲ್ಲಿರುವ ಅಬುಡಾನ್ ಗ್ರಾಮ ಮತ್ತು ಸುತ್ತಮುತ್ತಲಿನ ಪ್ರದೇಶ ಭಾರೀ ಹಾನಿಗೆ ಒಳಗಾಗಿತ್ತು.


  • ಲೇಖಕರು: ಬಾಣಾವರ ಶಿವಕುಮಾರ್

5 1 vote
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW