‘ಚಂದ್ರಾಮ ಬರಲೇ ಇಲ್ಲ’ ಕವನ… – ದೇವರಾಜ್ ಹುಣಸಿಕಟ್ಟಿಬಾಳ ಬಾಂದಳದಿ ಸಂಸಾರದ ಚಂದ್ರಮ ಕನಸಾದವರ ಕುರಿತು ಕವಿ ದೇವರಾಜ್ ಹುಣಸಿಕಟ್ಟಿ ಅವರು ಬರೆದ ಸುಂದರ ಕವನಗಳು ಓದುಗರ ಮುಂದೆ, ತಪ್ಪದೆ ಓದಿ…

ಹುಟ್ಟುತ್ತ ಹೆಣ್ಣಾಗಿ
ಬೆಳೆಯುತ್ತ ಗಂಡಾಗಿ
ಅದಲು ಬದಲಾದ
ಲಿಂಗದೊಳಗಣ ಒಳಗುಟ್ಟು
ರಟ್ಟಾದವರ ಬಾಳ ಬಾಂದಳಕೆ
ಚಂದ್ರಾಮ ಬರಲೇ ಇಲ್ಲ….

ಮೈ ತೊಗಲನೆ
ಮಾರಾಟಕಿಟ್ಟು
ಹರೆಯದ ಕನಸುಗಳನೆ
ಸಪ್ಪಳವಿಲ್ಲದೆ ಸುಟ್ಟು..
ಉಳ್ಳವರ ಹಸಿದ ತೊಗಲಿನ
ಬೇನೆಗಳಿಗೆ ಸುಖವ ಕೊಟ್ಟು…
ಹಾಸಿಗೆಯ ಹದಕೆ
ರಕ್ತವನೇ ಬಸಿದು
ಒಂಟಿಯಾಗಿಯೇ ಉಳಿದವರ
ಬಾಳ ಬಾಂದಳಕೆ ಚಂದ್ರಾಮ
ಬರಲೇ ಇಲ್ಲ….

ದೇವರ ಹೆಸರಲಿ
ಕಾಲಿಗೆ ಗೆಜ್ಜೆಯ ಕಟ್ಟಿಸಿ
ಕೊರಳಿಗೆ ಮುತ್ತಿನ ಸರವನೇ
ಸದ್ದಿಲ್ಲದೇ ಬಿಗಿಸಿ
ಜಡೆಗೆ ಜಂಜಡವ ಮುಡಿಸಿ
ಸಂಪ್ರದಾಯದ ನೆಪದಲಿ
ತಿಂದುಂಡು ಬೀಗಲು
ಬಳಕೆಯಾದ ದೇವದಾಸಿಯರ
ಬದುಕ ಬಾಂದಳಕೆ
ಚಂದ್ರಾಮ ಬರಲೇ ಇಲ್ಲ…

ಮಬ್ಬು ಬೆಳಕಿನ ಕತ್ತಲಲ್ಲಿ
ರಾತ್ರಿ ಕ್ಲಬ್ಬು -ಪಬ್ಬುಗಳಲಿ
ಮೈ ಮನ ಹರಡಿ
ಕುಣಿದು ದಣಿದು ಸೋತವರ
ಮನದ ಬಾಳ ಬಾಂದಳದಲ್ಲಿ
ಚಂದ್ರಾಮ ಬರಲೇ ಇಲ್ಲ…

ನಾಕಾಣೆ ಬಿಂದಿ ಹಚ್ಚಿ
ಎಂಟಾಣೆ ನಗು ಖರ್ಚು ಮಾಡಿ
ಎಳವೆಯಲ್ಲಿಯೇ ಮದುವೆ ಮಾಡಿ
ಹದಿಹರೆಯಕೆ ವಿದುವೆಯಾದವರ
ಬಾಳ ಬಾಂದಳಕೆ
ಚಂದ್ರಾಮ ಬರಲೇ ಇಲ್ಲ….


  • ದೇವರಾಜ್ ಹುಣಸಿಕಟ್ಟಿ (ಶಿಕ್ಷಕರು, ಕವಿಗಳು) ರಾಣೇಬೆನ್ನೂರ.

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW