‘ಚೌಚೌ ಬಾತ್’ ಅಂಕಣ (ಭಾಗ – ೩೪)

ಅಪ್ಪ ಕುಡಿದು ಶಾಲೆಗೆ ಬಂದಾಗ ಶಾಲಾ ಆಡಳಿತ ಮಂಡಳಿಯವರು ಅನಿವಾರ್ಯವಾಗಿ ಶಾಲೆಯಿಂದ ಅವರಪ್ಪನನ್ನು ಹೊರಕ್ಕೆ ತಳ್ಳಬೇಕಾಯಿತು. ಅದನ್ನು ನೋಡಿತ್ತಿದ್ದ ಶಾಲಾ ಮಕ್ಕಳ ಮುಂದೆ ಕುಡುಕನ ಮಗ ಎನ್ನುವ ಮುಜುಗರಕ್ಕೆ ಆ ಹುಡುಗ ಬಿದ್ದ, ಮುಂದೇನಾಯಿತು ಸರ್ವಮಂಗಳ ಜಯರಾಮ್ ಅವರ ‘ಚೌಚೌ ಬಾತ್’ ಅಂಕಣದಲ್ಲಿ ‘ತಾಯಿಯ ಆಶಯ’ ಕುರಿತು ಬರೆದಿದ್ದಾರೆ ತಪ್ಪದೆ ಮುಂದೆ ಓದಿ…

ಶಾಲೆಯಲ್ಲಿ ಮಧ್ಯಾಹ್ನ ಊಟದ ಸಮಯ. ಮಕ್ಕಳೆಲ್ಲ ಊಟ ಮುಗಿಸಿ ಶಾಲಾ ಅಂಗಳದಲ್ಲಿ ಆಟವಾಡುತ್ತಿದ್ದರು. ನಾನು ಮತ್ತು ನಮ್ಮ ಹಿರಿಯ ಶಿಕ್ಷಕಿ ಇಬ್ಬರೂ ಊಟ ಮುಗಿಸಿ ಮಧ್ಯಾಹ್ನದ ಸಹಿ ಹಾಕಲು ಆಫೀಸ್ ರೂಮ್ನ ಕಡೆಗೆ ಹೆಜ್ಜೆ ಹಾಕುತ್ತಿದ್ದೆವು. ಶಾಲಾ ಆವರಣದಲ್ಲಿ ಒಬ್ಬ ವ್ಯಕ್ತಿ ಅರೆ ನಗ್ನಾವಸ್ಥೆಯಲ್ಲಿ ಕುಡಿದು ತೂರಾಡುತ್ತಿದ್ದ. ಕೆಳಗೆ ಬಿದ್ದು ಬಿದ್ದು ಏಳಲಾಗದೆ ಒದ್ದಾಡುತ್ತಿದ್ದ. ಮಕ್ಕಳೆಲ್ಲರೂ ಅವನ ಕಡೆ ನೋಡಿ ನಗುತ್ತಿದ್ದರು. ಹುಚ್ಚನೆಂದು ಪರಿಭಾವಿಸಿ ಕೆಲವರು ಕಲ್ಲು ತೂರುತ್ತಿದ್ದರು. ಆದರೆ ಆ ವ್ಯಕ್ತಿಯನ್ನು ಬೀಳದಂತೆ ಹಿಡಿದು ಮೇಲಕ್ಕೆತ್ತಿ, ಆತನ ಬಟ್ಟೆಯನ್ನು ಒಬ್ಬ ಹುಡುಗ ಸರಿ ಮಾಡುತ್ತಿದ್ದ. ಅವನು ಒಂಬತ್ತನೇ ತರಗತಿಯ ವಿದ್ಯಾರ್ಥಿ. ಆಗ ನನ್ನ ಜೊತೆ ಇದ್ದ ಶಿಕ್ಷಕಿ ಏಯ್… ಮುಟ್ಟಬೇಡವೋ ಅವನನ್ನು, ಹುಚ್ಚನಂತೆ ಕಾಣ್ತಾ ಇದ್ದಾನೆ, ಗಲೀಜು ಬೇರೆ… ಅವನನ್ನು ಆಚೆ ಕಳಿಸಿ ನೀನು ಕೈ ತೊಳೆದುಕೋ ಹೋಗು ಎಂದು ಹೇಳಿದರು.

ಫೋಟೋ ಕೃಪೆ : google

ಆಗ ಆ ಹುಡುಗ “ಮಿಸ್ ….ಇವರು ನಮ್ಮ ಅಪ್ಪ” ಎಂದಾಗ ನಮ್ಮಿಬ್ಬರಿಗೂ ಆಶ್ಚರ್ಯ. ತಲೆತಗ್ಗಿಸಿಕೊಂಡು ನಿಂತ ಆ ಹುಡುಗನನ್ನು… “ಯಾಕೆ ಹೀಗೆ ನಿಮ್ಮಪ್ಪ, ಏನಾಗಿದೆ ಇವರಿಗೆ” ಎಂದಾಗ “ಮಿಸ್ ಇವರು ನಮ್ಮಪ್ಪ, ದಿನವೂ ಕುಡಿಯುತ್ತಾರೆ, ಹೀಗೇ ಮನೆಯಲ್ಲಿ ಕುಡಿದು ಬಂದು ದಿನಾ ಗಲಾಟೆ ಮಾಡುತ್ತಾರೆ” ಎಂದು ಹೇಳಿದ.

“ಅದ್ಸರಿ ಈಗ ಇಲ್ಲಿ ಏಕೆ ಬಂದಿರುವುದು ಇವರು” ಎಂದು ಕೇಳಿದಾಗ, ಇವತ್ತು ನನ್ನ ಬರ್ತಡೇ ….ಮಿಸ್, ಅದಕ್ಕೆ ಬಂದಿದ್ದಾರೆ ಎಂದ. ತನ್ನ ಸಹಪಾಠಿ ಮಿತ್ರರ ಮುಂದೆ ಈ ರೀತಿ ತನ್ನ ಅಪ್ಪ ವರ್ತಿಸುತ್ತಿರುವುದರಿಂದ ಅವನಿಗೆ ವಿಪರೀತ ಅವಮಾನವಾಗಿತ್ತು. ಹೇಗಾದರೂ ಮಾಡಿ ಅಪ್ಪನನ್ನು ಶಾಲಾ ಆವರಣದಿಂದ ಹೊರಹಾಕಬೇಕು ಎಂಬುವಷ್ಟರಲ್ಲಿ ನಾವಿಬ್ಬರೂ ನೋಡಿದ್ದೆವು. ಆ ಹುಡುಗನ ಮುಖ ಚಿಕ್ಕದಾಯಿತು. ತನ್ನ ತಂದೆಯಿಂದ ತನಗೆ ಎಷ್ಟು ಅವಮಾನವಾಯಿತು ಎಂಬುದನ್ನು ಆತನ ಮುಖವೇ ಸ್ಪಷ್ಟವಾಗಿ ಹೇಳುತ್ತಿತ್ತು. ಮೇಲಾಗಿ ಅಂದೇ ಆತನ ಹುಟ್ಟು ಹಬ್ಬ ಬೇರೆ. ಶುಭ್ರವಾದ ಬಟ್ಟೆಗಳನ್ನು ಧರಿಸಿ ಸ್ವಚ್ಚವಾಗಿಯೇ ಬಂದಿದ್ದ. ಶಿಕ್ಷಕರಿಗೆ ಹಾಗೂ ತನ್ನ ಸಹಪಾಠಿಗಳಿಗೆ ಕೊಡಲು ಚಾಕ್ಲೇಟ್ ಕೂಡ ತಂದಿದ್ದ. ಅವನ ಅಪ್ಪ ಬಂದು ಈ ರೀತಿ ಶಾಲಾ ಆವರಣದಲ್ಲಿ ಗದ್ದಲ ಮೂಡಿಸಿದ್ದಕ್ಕೆ ಅವನಿಗೆ ಮುಜುಗರವಾಗಿತ್ತು. ಅವನ ಗೆಳೆಯರೆಲ್ಲ ಅವರ ಅಪ್ಪನನ್ನು ಗೇಲಿ ಮಾಡಿಕೊಂಡು ನಗುತ್ತಿದ್ದರು. ಹೇಗೋ ಕಷ್ಟಪಟ್ಟು ಅವನನ್ನು ಶಾಲೆಯ ಗೇಟಿನಿಂದ ಹೊರಗೆ ಕಳಿಸಿ ಬಂದ. ಆದರೂ ಆ ಹುಡುಗನ ಮನಸ್ಸು ಅವನ ಅಪ್ಪನ ಬಗ್ಗೆಯೇ ಚಿಂತಿಸುತ್ತಿರುತ್ತದೆ. ರಸ್ತೆಯಲ್ಲಿ ತನ್ನ ತಂದೆಗೆ ಏನಾಯಿತೋ ಏನೋ, ಮನೆ ತಲುಪಿದರೋ ಇಲ್ಲವೋ ಎಂಬ ಆತಂಕ ಇದ್ದೇ ಇರುತ್ತದೆ.

ಫೋಟೋ ಕೃಪೆ : google

ನಂತರ ಮದ್ಯಾನ್ಹ ಶಾಲೆಗೆ ಹೋದಾಗ ಆ ಹುಡುಗನನ್ನು ವಿಚಾರಿಸಿದೆ. ಆಗ ಅವನು “ಮಿಸ್ ನಮ್ಮ ಅಮ್ಮ ಗಾರ್ಮೆಂಟ್ಸ್ ಗೆ ಹೋಗುತ್ತಾರೆ. ಅವರೇ ನಮ್ಮನ್ನು ಸಾಕುತ್ತಿರುವುದು. ನಮ್ಮ ಮನೆಯಲ್ಲಿ ನಾನು ಮತ್ತು ನನ್ನ ತಮ್ಮ, ಅಪ್ಪ-ಅಮ್ಮ ಇದ್ದೇವೆ.ನಮ್ಮ ಅಪ್ಪನದು ಏನೂ ದುಡಿಮೆ ಇಲ್ಲ. ನಮಗೆ ಜಮೀನು ಇದೆ, ಆದರೆ ಅಪ್ಪ ವ್ಯವಸಾಯ ಮಾಡಲ್ಲ” ಎಂದು ಹೇಳಿದ.

ನಮ್ಮ ಸರ್ಕಾರಿ ಶಾಲೆಯಲ್ಲಿ ನೂರಾರು ಹುಡುಗರದ್ದು ಇಂತದ್ದೇ ಕಥೆ. ಅಪ್ಪ ಕುಡುಕ ಇಲ್ಲವೇ ಸೋಮಾರಿ, ಜವಾಬ್ದಾರಿ ಇಲ್ಲದೆ ಅಲೆಯುವವ, ಅಮ್ಮ ಕೂಲಿ ನಾಲಿಗೋ, ಗಾರ್ಮೆಂಟ್ಸ್ ಗೋ ಹೋಗಿ ಇಡೀ ಸಂಸಾರವನ್ನು ಸಾಕಬೇಕು. ಜೊತೆಗೆ ಗಂಡನ ಕುಡಿತಕ್ಕೂ, ಬೀಡಿ ಸಿಗರೇಟಿನ ಖರ್ಚಿಗೂ ದುಡ್ಡು ಹೊಂದಿಸಿ ಕೊಡಬೇಕು. ಹೇಗಾದರೂ ಸರಿ ಸಮಾಜದಲ್ಲಿ ನಗೆಪಾಟಲಿಗೀಡಾಗದೆ ಸಂಸಾರವೆಂಬ ಬಂಡಿಯನ್ನು ಸಾಗಿಸಲೇಬೇಕೆಂಬ ಹಠಕ್ಕೆ ಬಿದ್ದಿದ್ದಾಳೆ ಹೆಣ್ಣು ಇಂದು. ಆಕೆಯ ಹಪಾಹಪಿ ಇಷ್ಟೇ. ನಾವಾದರೂ ಎರಡು ಅಕ್ಷರ ಕಲಿಯಲಿಲ್ಲ, ನಮ್ಮ ಮಕ್ಕಳಾದರೂ ಶಾಲೆ ಕಲಿತು ಮುಂದೆ ಬರಬೇಕು ಎಂಬುದು ಆ ತಾಯಿಯ ಆಶಯ.

ಅಂಕಣದ ಹಿಂದಿನ ಸಂಚಿಕೆಗಳು :


  • ಸರ್ವಮಂಗಳ ಜಯರಾಮ್ – ಗೌರಿಬಿದನೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading