ಯಶಸ್ವಿಯಾಗಿ ಕಾಮಿಡಿ ಮಾಡಬೇಕಿದ್ದರೆ ಬರೀ ಸೆನ್ಸ್ ಆಫ್ ಹ್ಯೂಮರ್ (ಹಾಸ್ಯಪ್ರಜ್ಞೆ) ಮಾತ್ರ ಸಾಕಾಗುವುದಿಲ್ಲ. ಇದರ ಜೊತೆಗೆ ಸೆನ್ಸ್ ಆಫ್ ಟೈಮಿಂಗ್ ಕೂಡ ಬಹುಮುಖ್ಯವಾಗಿರುತ್ತದೆ. ಈ ಎರಡರ ಮೇಲೂ ಇವರ ಹಿಡಿತ ಅತ್ಯದ್ಭುತ. ಉತ್ತರ ಭಾರತದ ಗ್ರಾಮೀಣ ಬದುಕಿನ ವಿಡಂಬನೆ-ಹಾಸ್ಯಗಳನ್ನು ಸಮರ್ಥವಾಗಿ ಪ್ರತಿನಿಧಿಸುವ ಇವರು, ಸ್ವತಃ ತಮ್ಮ ತಂದೆ ಮತ್ತು ಶಿಕ್ಷಣ ನೀಡಿದ ಗುರುಗಳನ್ನೇ ಹಾಸ್ಯದ ಸರಕಾಗಿಸುತ್ತಾರೆ. ಅರ್ಧ ಗಂಟೆಯ ಒಂದು ಕಾರ್ಯಕ್ರಮಕ್ಕೆ 50 ಲಕ್ಷಕ್ಕೂ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಇವರು ದೇಶದ ಅತೀ ಶ್ರೀಮಂತ ಕಾಮಿಡಿಯನ್ ಕೂಡ ಹೌದು. ಹೀಗೆ ಯಶಸ್ಸು ಮತ್ತು ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗಲೇ ಅಲ್ಪಕಾಲದ ಗಂಭೀರ ಅಸೌಖ್ಯದ ನಂತರ ಸಣ್ಣ ಪ್ರಾಯದಲ್ಲೇ ರಾಜು ಶ್ರೀವಾಸ್ತವ್ ಬದುಕಿನ ಯಾತ್ರೆ ಮುಗಿಸಿದ್ದಾರೆ.

ಈ ನಗುವನ್ನು ಹೊಂಚುಹಾಕಿ ಹಿಂಬಾಲಿಸಿಕೊಂಡು ಬರುವ ಅಳುವಿನ ಮರ್ಮವೆನೆಂಬುದು ಇಂದಿಗೂ ನಿಗೂಢ. ಪ್ರತಿಯೊಬ್ಬ ಮನುಷ್ಯನೂ ತನ್ನ ಮನೆ ಮತ್ತು ಪರಿಸರದಲ್ಲಿ ಜೀವನದಲ್ಲಿ ಒಮ್ಮೆಯಾದರೂ” ಹೆಚ್ಚು ನಗಬೇಡ, ಅಳಬೇಕಾದೀತು” ಎಂಬ ಕಾಳಜಿಯಿಂದ ಕೂಡಿದ ಅಲಿಖಿತ ನಿಯಮದಂತಿರುವ ಮಾತನ್ನು ಯಾರಿಂದಲಾದರೂ ಕೇಳಿಯೇ ಕೇಳಿರುತ್ತಾನೆ. ಈ ಮಾತು ನಿರಂತರವಾಗಿ ನಿತ್ಯವೂ ನಗುವಿನ ಹಿಂದೆಯೇ ಕೇಳಿಬರುತ್ತದೆಯೆಂದರೆ ಇದು ಬರೀ ನಗಾಡಿ ಸುಮ್ಮನಿರುವ ವಿಚಾರವೂ ಅಲ್ಲ. ಬಹುತೇಕ ನಂಬಿಕೆಗಳಿಗೆ ಪ್ರಾಯೋಗಿಕ ಮತ್ರು ಸಾಕ್ಷ್ಯಗಳ ಬುನಾದಿಯೂ ಇರುತ್ತದೆ. ಸಾಮಾನ್ಯವಾಗಿ ಊಹೆಗೆ ನಿಲುಕದ್ದನ್ನು ಮೌಢ್ಯವೆನ್ನುವುದು ಮನುಷ್ಯನ ಜಾಯಮಾನ. ವಿಪರೀತ ನಗಿಸುವವನು ಮತ್ತು ನಗುವವನು ಅಷ್ಟೇ ಅಳುತ್ತಾನೆ ಎನ್ನುವುದು ಮೌಢ್ಯ ಮತ್ತು ಕುರುಡು ನಂಬಿಕೆಗಳನ್ನು ಮೀರಿ ಸ್ಥಾಪಿಸಲ್ಪಟ್ಟ ಸತ್ಯವಾಗಿರುವುದನ್ನು ನಮ್ಮ ಸುತ್ತಮುತ್ತಲಿನ ಅತಿಹೆಚ್ಚು ನಗಿಸುವವರ ಮತ್ರು ಹಾಸ್ಯಗಾರರ ಬದುಕನ್ನು ಅವಲೋಕಿಸಿದಾಗ ತಿಳಿಯುತ್ತದೆ. ಹಾಗಾದರೆ ಹಾಸ್ಯಗಾರಿಕೆಯು ಅವಲಕ್ಷಣವೇ? ಹಾಸ್ಯಗಾರನು ಶಾಪಗ್ರಸ್ತನೇ? ಎಂಬಂತಹ ಪ್ರಶ್ನೆಗಳು ಮೂಡುತ್ತವೆ.

ನವರಸಗಳಲ್ಲಿ ಹಾಸ್ಯದ ಅಭಿವ್ಯಕ್ತಿ ಮತ್ತು ಪ್ರಸ್ತುತಿ ಅತ್ಯಂತ ಕ್ಲಿಷ್ಟಕರವಾದುದು. ಪ್ರತಿಯೊಂದು ಅಭಿನಯ ಮತ್ತು ಭಾವಗಳನ್ನು ತರಬೇತಿ ಮತ್ತು ಅನುಭವದ ಮೂಲಕ ಪ್ರಸ್ತುತಪಡಿಸಬಹುದು. ಆದರೆ ಹಾಸ್ಯ ಹಾಗಲ್ಲ. ಹಾಸ್ಯ ಕಲಾವಿದ ಹುಟ್ಟಿನಿಂದಲೇ ಸ್ವತಂತ್ರವಾಗಿ ರೂಪುಗೊಳ್ಳುತ್ತಾನೆ. ಅವನಿಗೆ ಯಾವ ತರಬೇತಿಯೂ ಇರುವುದಿಲ್ಲ ಮಾತ್ರವಲ್ಲ, ಅದರ ಅಗತ್ಯ ಮತ್ತು ಅದರಿಂದ ಪ್ರಯೋಜನವೂ ಇರುವುದಿಲ್ಲ. ಹಾಸ್ಯ ಕಲಾವಿದನ ಮಗನೂ ಅನುವಂಶೀಯ ಗುಣವನ್ನು ಹೊಂದಿ ಹಾಸ್ಯ ಕಲಾವಿದನಾಗುವುದಿಲ್ಲ. ಹಾಸ್ಯದ ಮಾತೊಂದು ಪ್ರಸ್ತುತಿಯಾಗುವುದಕ್ಕಿಂತ ಮುಂಚೆ ಒಮ್ಮೆ ಹಾಸ್ಯಗಾರನ ಬಾಯಿಯಿಂದಲೇ ಸ್ವಗತವಾಗಿ ಹೊರಹೊಮ್ಮಿದರೂ ಮರುಕ್ಷಣವೇ ಅದು ಹಾಸ್ಯದ ರಸವನ್ನು ಕಳೆದುಕೊಳ್ಳುತ್ತದೆ. ಯಾರ ಬರೆವಣಿಗೆ, ಸಲಹೆ, ಸಹಾಯ, ಅನುಕರಣೆ, ಅನುಸರಣೆಗಳೂ ಹಾಸ್ಯ ಕಲಾವಿದನಿಗೆ ಉಪಯೋಗಕ್ಕೆ ಬರುವುದಿಲ್ಲ. ಇದೊಂದು ರೀತಿಯಲ್ಲಿ ಥ್ಯಾಂಕ್ ಲೆಸ್ ಆ್ಯಂಡ್ ಶೇಪ್ ಲೆಸ್ ಜಾಬ್. ಆಂಗಿಕ ಭಾವ, ಹಾಸ್ಯ ಪ್ರಜ್ಞೆ, ಟೈಮಿಂಗುಗಳು ಕಾಲಕ್ರಮೇಣ ಹಳಸಾಗಿ ಕಲಾವಿದ ನೇಪಥ್ಯಕ್ಕೆ ಸರಿಯುತ್ತಾನೆ. ಹೀಗಿನ ಪ್ರತಿಕೂಲತೆಗಳ ನಡುವೆಯೂ ದಶಕಗಳ ಕಾಲ ಬಹಳಷ್ಟು ಹಾಸ್ಯ ಕಲಾವಿದರು ಜನಮಾನಸದಲ್ಲಿ ಮನ್ನಣೆಗೆ ಪಾತ್ರರಾಗುತ್ತಾರೆ. ಹಾಸ್ಯರಸವು ಬಹುಬೇಗ ಜನರಿಗೆ ತಲುಪುತ್ತದೆ ಮತ್ತು ಸುತ್ತಲಿನ ಸಂಚಲನಗಳಿಗೆ ಕಾರಣವಾಗುತ್ತದೆ. ಹೀಗಾಗಿಯೇ ಆಳುವ ಸರಕಾರಗಳೂ ಕೂಡ ಹಾಸ್ಯಗಾರರಿಗೆ ಹೆದರುತ್ತದೆ.
ರಾಜ, ಆಡಳಿತ, ವ್ಯವಸ್ಥೆಗಳ ಬಗ್ಗೆ ಯಾರು ಏನೇ ಹೇಳಿದರೂ ಒಂದು ಸಮಯದ ನಂತರ ಜನ ಮರೆತುಬಿಡುತ್ತಾರೆ. ಆದರೆ ಹಾಸ್ಯ ಕಲಾವಿದರು ಆಳ್ವಿಕೆಯ ರೀತಿ ನೀತಿಗಳನ್ನು ಹಾಸ್ಯದ ಸರಕಾಗಿ ಉಪಯೋಗಿಸಿಕೊಂಡರೆ ಆಳುವವರೂ ಕಂಪಿಸಿದ ಉದಾಹರಣೆ ಸಮಕಾಲೀನ ಇತಿಹಾಸದಲ್ಲಿ ಮಾತ್ರವಲ್ಲ ಗತ ಇತಿಹಾಸದಲ್ಲೂ ಹೇರಳವಾಗಿ ಕಾಣಬಹುದು. ಕಾಲಗಳ ಹಿಂದೆ ಹಾಸ್ಯಗಾರಿಕೆಯನ್ನು ನಿಷೇಧಿಸಿದ ಮತ್ತು ಹಾಸ್ಯಗಾರರನ್ನು ಬಂಧಿಸಿದ ಹಾಗೂ ಸಾಮೂಹಿಕವಾಗಿ ಕೊಂದ ನಿರಂತರ ನಿದರ್ಶನಗಳಿವೆ. ಹಾಸ್ಯಗಾರರು ತಮ್ಮ ಕಲಾಪ್ರೌಢಿಮೆಗಳಿಂದ ಚಿತ್ರರಂಗ ಮತ್ತು ರಾಜಕೀಯ ರಂಗದಲ್ಲಿ ಉನ್ನತ ಸ್ಥಾನಮಾನಗಳನ್ನು ಗಳಿಸಿದ್ದನ್ನು ಪ್ರತಿಯೊಂದು ಭಾಗಗಳಲ್ಲಿಯೂ ಕಾಣಬಹುದು. ಹಳೆಯ ಕಾಲದ ರಾಜನ ಆಸ್ಥಾನಗಳಲ್ಲಿಯೂ ಆಸ್ಥಾನ ವಿದೂಷಕರಿರುತ್ತಿದ್ದರು. ಹಾಸ್ಯವು ವ್ಯಂಗ್ಯವಾಗಿ ಪರಿಣಮಿಸಿದ ಪರಿಣಾಮವಾಗಿ ರಾಜನಿಂದ ತಲೆಹಾರಿಸಿಕೊಂಡ ಘಟನೆಗಳ ಬಗ್ಗೆ ಚರಿತ್ರೆಯ ನಿಖರ ಉಲ್ಲೇಖಗಳಿವೆ. ಬಹಳಷ್ಟು ವಿನೋದಪ್ರೀಯ ರಾಜರ ಆಪ್ತ ಒಡನಾಡಿಗಳು ಹಾಸ್ಯಗಾರರೇ ಆಗುತಿದ್ದರು. ಹಾಸ್ಯ ಪ್ರವೃತ್ತಿಯು ವ್ಯಕ್ತಿತ್ವದ ಪ್ರಮುಖ ಆಕರ್ಷಣೆ.

ಸದ್ಯದ ಭಾರತದ ರಾಜಕಾರಣ ಸ್ವಲ್ಪಮಟ್ಟಿಗೆ ಗಂಭೀರ ಮತ್ತು ತೀವ್ರ ಸ್ಪರ್ಧೆ-ತಿಕ್ಕಾಟಗಳಿಂದ ಕೂಡಿದ ರಾಜಕಾರಣವಾಗಿದೆ. ದಶಕಗಳ ಹಿಂದೆ ದೇಶದ ಪಾರ್ಲಿಮೆಂಟಿನ ಒಳಗೆ ವಾಜಪೇಯಿ, ಲಾಲೂ ಪ್ರಸಾದ್ ಯಾದವ್, ಪ್ರಮೋದ್ ಮಹಾಜನ್, ಮುರಸೋಳಿ ಮಾರನ್, ಪಿ ಎ ಸಂಗ್ಮಾ, ಶರದ್ ಪವಾರ್, ಅರ್ಜುನ್ ಸಿಂಗ್ ಮುಂತಾದ ಗಂಭೀರ ಹಾಸ್ಯಪ್ರಜ್ಞೆಯವರು ಇದ್ದರು. ಇವರಲ್ಲಿ ಲಾಲೂ ಯಾದವ್ ವೃತ್ತಿಪರ ಕಾಮಿಡಿಯನ್ ತರಹವೇ ಇದ್ದರು. ಇವರ ಮಾತುಗಳಿಗೆ ಪಾರ್ಲಿಮೆಂಟ್ ಸ್ಪೀಕರ್ ಕೂಡ ಸ್ಥಾನದ ಗಂಭೀರತೆಯನ್ನು ಮರೆತು ಪೀಠದ ಮೇಲೆ ಬಿದ್ದು ಬಿದ್ದು ನಗುತಿದ್ದರು. ಲಾಲೂರವರ ಎದುರಾಳಿಗಳು ಅದೆಷ್ಟೇ ಮುಖ ಮುಚ್ಚಿಕೊಂಡು ನಗು ಮರೆಸಲು ಪ್ರಯತ್ನಿಸಿದರೂ ಮುಖದ ಮೇಲಿನ ಅಡ್ಡ ಕೈಯನ್ನೇ ತಳ್ಳಿಕೊಂಡು ನಗು ಹೊರಬಂದು ಸದ್ದು ಮಾಡುತಿತ್ತು. ಸಾರ್ವಕಾಲಿಕವಾದ ಭಾರತೀಯ ರಾಜಕಾರಣ ಕಂಡ ಮಹಾ ಕಾಮಿಡಿಯನ್ ಎಂದರೆ ಅದು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್. ನಗುವಿನ ನಂತರದ ಅಳುವಿನ ಸರದಿಯೋ ಏನೋ? ವರ್ಣರಂಜಿತ ವ್ಯಕ್ತಿತ್ವದ, ದೇಶ ಕಂಡ ಅತ್ಯಂತ ಯಶಸ್ವಿ ಮಾಜಿ ರೈಲ್ವೆ ಮಂತ್ರಿಯಾದ ಲಾಲೂ ಬದುಕಿನ ಸಂಧ್ಯಾಕಾಲದಲ್ಲಿ ಜೈಲಿನಲ್ಲಿ ಬದುಕುವಂತಾಯಿತು. ಬದುಕಿನ ರೈಲು ಮಾತ್ರ ಹಳಿ ತಪ್ಪಿ ದುರಂತಮಯವಾಯಿತು. ಹಾಸ್ಯದ ಮಾತುಗಳ ಮೂಲಕ ಸದನವನ್ನು ಸದಾ ಆಕರ್ಷಿಸುತ್ತಿದ್ದ ಪ್ರಮೋದ್ ಮಹಾಜನ್ ಎಂಬ ಭಾರತೀಯ ರಾಜಕಾರಣದ ಮಹಾ ಸಂಘಟಕ, ರಾಜಕಾರಣದ ಉತ್ತುಂಗದಲ್ಲಿರುವಾಗಲೇ ತಮ್ಮನ ಗುಂಡೇಟಿಗೆ ಬಲಿಯಾದರು. ಕರ್ನಾಟಕ ರಾಜಕಾರಣದಲ್ಲಿ ಮಾಜಿ ಮುಖ್ಯಮಂತ್ರಿ ಜೆ ಹೆಚ್ ಪಟೇಲರದ್ದು ವರ್ಣರಂಜಿತ ವ್ಯಕ್ತಿತ್ವ. ಇವರ ಪ್ರತೀ ಮಾತು ಹಾಸ್ಯಭರಿತವಾಗಿರುತ್ತದೆ. ಇವರು ನಡೆಸುವ ಪತ್ರಿಕಾಗೋಷ್ಠಿಗಳು ಹೆಚ್ಚುಕಡಿಮೆ ಹಾಸ್ಯ ಕಾರ್ಯಕ್ರಮಗಳೇ ಆಗಿರುತ್ತಿದ್ದವು. ವಿದೂಷಕ ಎಂದು ಜರೆಯುತ್ತಾ, ಇವರನ್ನು ಕಂಡರೆ ಆಗದ ಯಡಿಯೂರಪ್ಪ ಮತ್ತು ದೇವೇಗೌಡರೂ ಕೂಡ ಮರೆಗೆ ಸರಿದು ಬರುತ್ತಿರುವ ನಗು ತಡೆಯಲಾರದೆ ಗೋಡೆಗೆ ಕೈಬಡಿದು ನಗುತಿದ್ದರು. ಅಧಿಕಾರದ ಅವಧಿ ಮುಗಿದ ನಂತರ ಪಟೇಲ್ ನೇಪಥ್ಯಕ್ಕೆ ಸರಿದು ಯಾರಿಗೂ ಯಾಕೂ ಬೇಡವಾದರು. ಸಾಮಾನ್ಯವಾಗಿ ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿಗಳ ಮಕ್ಕಳು ರಾಜಕಾರಣದಲ್ಲಿ ಸುಲಭದಲ್ಲಿ ನೆಲೆ ಕಂಡುಕೊಳ್ಳುತ್ತಾರೆ. ಆದರೆ ಪಟೇಲರು ಅಧಿಕಾರ ಕಳೆದುಕೊಳ್ಳುತ್ತಿದ್ದಂತೆಯೇ ಅವರ ಕುಲಕುಟುಂಬವೇ ಕರ್ನಾಟಕದ ರಾಜಕಾರಣದಿಂದ ಕಣ್ಮರೆಯಾಯಿತು.
ಫೋಟೋ ಕೃಪೆ : google
ರಾಜ್ಯ ರಾಜಕಾರಣದ ಚಾಣಾಕ್ಷ ರಾಜಕಾರಣಿ ಸಿ ಎಂ ಇಬ್ರಾಹಿಂ ವಿಪರೀತ ಹಾಸ್ಯ ಪ್ರವೃತ್ತಿಯವರು. ಮಹಾನ್ ಪ್ರತಿಭಾವಂತರು. ಬಹುಭಾಷಾ ಪಂಡಿತ. ದೇವೇಗೌಡರು ಪ್ರಧಾನಮಂತ್ರಿಯಾಗಿದ್ದಾಗ ದೇಶದ ಆಡಳಿತದಲ್ಲಿ ನಿರ್ಣಾಯಕ ಭೂಮಿಕೆ ನಿಭಾಯಿಸುತ್ತಿದ್ದ ಚತುರ ರಾಜಕಾರಣಿ ಈ ಇಬ್ರಾಹಿಮ್. ಗೌಡರ ಕಾಲವೇ ಕೊನೆ, ನಂತರದ ದಿನಗಳಲ್ಲಿ, ಯಾರದ್ದೋ ಔದಾರ್ಯದ ವಿಧಾನಪರಿಷತ್ ಸ್ಥಾನ ಬಿಟ್ಟರೆ ಮತ್ಯಾವ ಅಧಿಕಾರ ಇಲ್ಲಿಯವರೆಗೆ ಅವರಿಗೆ ಸಿಗಲೇ ಇಲ್ಲ. ಈ ಇಬ್ರಾಹಿಮ್ ಅದೆಂತಹ ಪ್ರಚಂಡ ವಾಗ್ಮಿಯೆಂದರೆ, ವಿಪರೀತ ಕಿರುಚಾಡಿ ಸುಳ್ಳುಗಳನ್ನೆಲ್ಲ ಸತ್ಯವಾಗಿಸುವ ದೇಶದ ಯಾವ ಟಿವಿ ಆ್ಯಂಕರುಗಳಿಗೂ ಇವರನ್ನು ಎದುರು ಕೂರಿಸಿಕೊಂಡು ವಿಷಯವನ್ನು ಚರ್ಚಿಸುವ ಧೈರ್ಯವಿಲ್ಲ. ಅಪಕ್ವ ವಿಚಾರಗಳನ್ನು ಅಡ್ಡಾದಿಡ್ಡಿಯಾಗಿ ಅರಚುವ ಮಾಧ್ಯಮದವರನ್ನು ಹಣ್ಣುಗಾಯಿ ನೀರುಗಾಯಿ ಮಾಡುವಲ್ಲಿ ಇಬ್ರಾಹಿಮಿಗೆ ಸರಿಸಾಟಿ ಯಾರೂ ಇಲ್ಲ. ಇವರೊಂದಿಗೆ ಅಪರೂಪಕ್ಕೆಲ್ಲಾದರೂ ಸಂದರ್ಶನ ಮಾಡುವ ಕನ್ನಡದ ಹಿರಿಯ ಟಿವಿ ಆ್ಯಂಕರುಗಳೂ ಕೂಡ ಎರಡು ಕೈಯನ್ನು ಎರಡು ತೊಡೆಗಳ ಮೇಲಿಟ್ಟುಕೊಂಡು ಕ್ಷೀಣ ಧ್ವನಿಯಲ್ಲಿ ವಿಧೇಯರಾಗಿಯೇ ಮಾತನಾಡುತ್ತಾರೆ. ಹೆಚ್ಚಿಗೆ ಮಾತನಾಡಿದರೆ” ನೋಡ್ ರಂಗಣ್ಣ, ಕೇಳ್ ಅಜಿತಾ” ಎಂದು ಹಾಕಿಕೊಂಡು ಹಿಗ್ಗಾಮುಗ್ಗಾ ಜಡಿಯುವ ಇಬ್ರಾಹೀಮರನ್ನು ಟಿವಿ ಆ್ಯಂಕರುಗಳು ಪ್ರಮುಖ ವಿಚಾರಗಳ ಕುರಿತು ಚರ್ಚೆಗೆ ಅಷ್ಟಾಗಿ ಮೈಮೇಲೆ ಎಳೆದುಕೊಳ್ಳುವುದಿಲ್ಲ. ಮಾಧ್ಯಮದವರ ಪ್ರತಾಪ ಏನಿದ್ದರೂ ಸರಿಯಾಗಿ ವಿಷಯ ಹ್ಯಾಂಡಲ್ ಮಾಡಲು ಬಾರದ ಜಮೀರ್ ಆಹ್ಮದ್ ತರಹದ ಅರ್ಧ ಕನ್ನಡ ಅರ್ಧ ಉರ್ದು ಮಾತನಾಡುವವರ ಮುಂದೆ ಮಾತ್ರ. ಜಮೀರ್ ಎದುರು ಮಾತನಾಡಿದ ಹಾಗೆ ಇಬ್ರಾಹಿಮ್ ಎದುರು ಮಾತನಾಡಿದರೆ, ಇಬ್ರಾಹಿಮ್ ಟಿವಿ ಆ್ಯಂಕರುಗಳನ್ನು ಜಜ್ಜಿ ಜಮೀರ್ ಮಾಡಿಬಿಡುತ್ತಾರೆ. ಇಷ್ಟು ಚಾಣಾಕ್ಷರಾಗಿದ್ದರೂ ಇಬ್ರಾಹಿಂ ರಾಜಕಾರಣದಲ್ಲಿ ಮಾತ್ರ ದುರಂತ ನಾಯಕ. ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿಯೂ ಇವರು ಗೆಲ್ಲುವುದಿಲ್ಲ. ಪ್ರತಿಭೆ ಮತ್ತು ವ್ಯಾಪಕ ಸಂಪರ್ಕಗಳ ಹೊರತಾಗಿಯೂ ಸರ್ಕಾರದ ಆಡಳಿತಾತ್ಮಕ ಸ್ಥಾನ ಇಂದಿಗೂ ಇವರ ಪಾಲಿಗೆ ಗಗನಕುಸುಮ.
ಫೋಟೋ ಕೃಪೆ : google
ಸೂಕ್ಷ್ಮವಾಗಿ ಅವಲೋಕಿಸಿದರೆ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಹಾಸ್ಯಪ್ರವೃತ್ತಿಯವರು ಒಂದು ಹಂತದ ನಂತರ ದುರಂತ ಬದುಕು ಮತ್ತು ಅಂತ್ಯವನ್ನು ಕಂಡಿದ್ದಾರೆ. ಇದಕ್ಕೆ
ನಿರ್ದಿಷ್ಟವಾದ ಇಂತಹದ್ದೇ ಸಿದ್ಧಾಂತವಿಲ್ಲದಿದ್ದರೂ ಇದರ ಹಿಂದೆ ಅದೇನೋ ಇದೆ ಎಂಬುದು ಮಾತ್ರ ಸ್ಪಷ್ಟ. ನಾಗರಿಕತೆಯ ಚಲನೆಯ ಮೂಲಕ ಸ್ಥಾಪಿಸಲ್ಪಟ್ಟ ಬಹಳಷ್ಟು ಪ್ರಜ್ಞೆಗಳಿಗೆ ತರ್ಕ ಮತ್ತು ತತ್ವಗಳಿಲ್ಲ. ಆದರೆ ಮಹತ್ವವಿದೆ. ಅವುಗಳು ಅನುಭವದ ಆಧಾರದಲ್ಲಿ ಬಾಯಿಯಿಂದ ಬಾಯಿಗೆ ಹರಡಿಕೊಂಡೇ ಬಂದಿವೆ. ಧರ್ಮಗ್ರಂಥಗಳಲ್ಲಿಯೂ ಕೂಡ ಮಂದಹಾಸ ಮತ್ತು ತಿಳಿಹಾಸ್ಯದ ಹೊರತಾದ ನಗು ನಿಯಂತ್ರಿಸಿ ಎಂದೇ ಇದೆ. ನಿಯಂತ್ರಣವಿಲ್ಲದಿದ್ದರೆ ಏನಾಗುತ್ತದೆ ಎಂದು ಎಲ್ಲೂ ಇಲ್ಲ. ಆದರೆ ಹಾಸ್ಯಗಾರರ ಬದುಕಿನಲ್ಲಿ ಮಾತ್ರ ಏನೇನೋ ಆಗಿರುವುದು ಮತ್ತು ಆಗುತ್ತಿರುವುದು ಹೌದು. ನಗುವಿನ ಹಿಂದಿನ ಅಳುವಿನ ನಿಶ್ಚಿತ ಉಪಸ್ಥಿತಿ ಯೋಚಿಸುವಂತೆ ಮಾಡುತ್ತದೆ. ನಗಬೇಡ, ಅಳಬೇಕಾದೀತು ಎಂಬ ನಿತ್ಯದ ಆ ಮಾತಿನಲ್ಲೇನೋ ಮರ್ಮವಿದೆ. ಬಹುಶಃ ನಗಿಸುವ ಭರದಲ್ಲಿ ಅಂಟಿಕೊಂಡು ಬರುವ ಅಪಹಾಸ್ಯವು ಶಾಪವಿರಬೇಕು. ಅಂತೂ, ಹಾಸ್ಯವು ಅಳುವಿನ ಸನಿಹದಲ್ಲೇ ಸುಳಿಯುವುದು ಮಾತ್ರ ಸತ್ಯ. ಅದೆಷ್ಟೇ ತಲೆಕೆಡಿಸಿಕೊಂಡರೂ ಹಾಸ್ಯಗಾರರ ಬದುಕೇಕೆ ಬರ್ಬರ ಎಂಬ ಪ್ರಶ್ನೆ ಉತ್ತರವಿಲ್ಲದ ಪ್ರಶ್ನೆಯಾಗಿಯೇ ಕಟ್ಟಕಡೆಗೆ ಉಳಿಯುತ್ತದೆ. ನಗುವ ಮುಂಚೆ ನೂರು ಬಾರಿ ಆಲೋಚಿಸಬೇಕೆ?
- ಮುಷ್ತಾಕ್ ಹೆನ್ನಾಬೈಲ್ (ಚಿಂತನಕಾರರು, ಲೇಖಕರು )ಕುಂದಾಪುರ