ಧರ್ಮೋ ರಕ್ಷತಿ ರಕ್ಷಿತಃ – ಸೌಮ್ಯ ಸನತ್

ಮಹಾಭಾರತದ ಯುದ್ಧ ಮುಗಿದ ಮೇಲೆ ವಿಜಯ ಪಾಂಡವರಿಗಾದರೂ ಧರ್ಮರಾಜನ ಮನಸ್ಸು ತಳಮಳವಾಗಿತ್ತು, ಯುದ್ದದಿಂದ ಸರ್ವನಾಶವಾದ ಸ್ಥಳದ ದೃಶ್ಯವನ್ನು ನೋಡಿ ಇನ್ನಷ್ಟು ಜರ್ಜರಿತನಾದ, ಕೊನೆಗೆ ಎಲ್ಲವನ್ನು ಬಿಟ್ಟು ಸ್ವರ್ಗಕ್ಕೆ ಹೋಗಲು ನಿರ್ಧರಿಸಿದ. ಮುಂದೇನಾಯಿತು ಧರ್ಮವನ್ನು ನೀನು ರಕ್ಷಿಸಿದೆಯಾದರೆ ಧರ್ಮವು ನಿನ್ನನ್ನು ರಕ್ಷಿಸುತ್ತದೆ ಎನ್ನುವ ಅರ್ಥಪೂರ್ಣ ಸಂದೇಶವಿರುವ ಸೌಮ್ಯ ಸನತ್ ಅವರ ಈ ಲೇಖನ ತಪ್ಪದೆ ಮುಂದೆ ಓದಿ… 

ಅಂದು ಮಹಾಭಾರತದ ಯುದ್ಧ ಮುಗಿದಿತ್ತು. ಪಾಂಡವರು ವಿಜಯಶಾಲಿಗಳಾಗಿದ್ದರು. ಹಸ್ತಿನಾಪುರದಂಥ ವಿಶಾಲ ಸಾಮ್ರಾಜ್ಯ ಪಾಂಡವರ ಕೈ ಸೇರಿತ್ತು. ಅಶ್ವಮೇಧ ಯಾಗವನ್ನು ಮುಗಿಸಿ ಧರ್ಮರಾಜ ಕೀರ್ತಿ ಯಶಸ್ಸು ಗೌರವವನ್ನು ಪಡೆದಿದ್ದ. ಆದರೆ ಧರ್ಮರಾಜನ ಮನಸ್ಸು ತಹತಹಿಸುತ್ತಿತ್ತು. ಶಾಂತಿ ಇರಲಿಲ್ಲ. ಸದಾ ಚಿಂತೆ ಅವರನ್ನು ಕಾಡುತ್ತಿತ್ತು. ಹಗಲು ರಾತ್ರಿ ಅವನು ಏನನ್ನೋ ಯೋಚಿಸಿ ದುಃಖಿಸುತ್ತಿದ್ದ.

ಶ್ರೀಕೃಷ್ಣ, ಧೃತರಾಷ್ಟ್ರ, ಗಾಂಧಾರಿ, ಕುಂತಿ ಎಲ್ಲರೂ ಅವರನ್ನು ಬಿಟ್ಟು ಹೊರಟು ಹೋದರು. ಅವರ ವಿಯೋಗದಿಂದ ಧರ್ಮರಾಜ ಜರ್ಜರಿತನಾಗಿದ್ದ. ನಗರ ಹಳ್ಳಿ ಎಲ್ಲವೂ ಹಾಳಾಗಿತ್ತು. ಕೆರೆ, ಕೊಳ್ಳ, ನದಿಗಳಲ್ಲಿ ರಕ್ತದ ಕಾಲುವೆ ಹರಿದಿತ್ತು. ಎಲ್ಲೆಲ್ಲೂ ಮೂಳೆಗಳ ರಾಶಿ ಪತಿಯನ್ನು ಕಳೆದುಕೊಂಡ ವಿಧವೆಯವರ ಆಕ್ರಂದನ. ಮಕ್ಕಳ ಚೀತ್ಕಾರ ತಾಯಂದಿರ ರೋಧನ ಎಲ್ಲೆಡೆ ನಡೆದಿತ್ತು, ಯಾರಿಗೂ ಶಾಂತಿಯಿರಲಿಲ್ಲ ನೆಮ್ಮದಿಯಿರಲಿಲ್ಲ.

 

ಸರ್ವನಾಶದ ಈ ದೃಶ್ಯವನ್ನು ಯುಧಿಷ್ಠರನಿಗೆ ನೋಡಲಾಗಲಿಲ್ಲ, ಎಲ್ಲವನ್ನು ಬಿಟ್ಟು ಸ್ವರ್ಗಕ್ಕೆ ಹೋಗಲು ನಿರ್ಧರಿಸಿದ. ಸೋದರರು ಮತ್ತು ದ್ರೌಪದಿಯೊಡಗೂಡಿ ಸ್ವರ್ಗದ ಕಡೆ ಹೊರಟ. ದಾರಿಯ ಮಧ್ಯೇ ಮಂಜಿನ ರಾಶಿಯಿತ್ತು. ಸೋದರರು ದ್ರೌಪದಿ ಎಲ್ಲರೂ ಒಬ್ಬೊಬ್ಬರಾಗಿ ಮಂಜಿನಲ್ಲಿ ಕರಗಿದರು.

ಫೋಟೋ ಕೃಪೆ : wordpress

ಧರ್ಮರಾಜ ಒಬ್ಬನೇ ದಾರಿಯ ಕಷ್ಟಗಳು ನಿವಾರಿಸಿಕೊಂಡು ಸ್ವರ್ಗದ ಬಾಗಿಲಿನವರಿಗೆ ಬಂದ. ಸ್ವರ್ಗದ ಬಾಗಿಲು ಕಾಯುತ್ತಿದ್ದ ಕಾವಲುಗಾರ ಅವನನ್ನು ತಡೆದ.ಯುಧಿಷ್ಠರನ ಜೊತೆಯಲ್ಲಿ ಸದಾ ಅವನನ್ನು ಹಿಂಬಾಲಿಸುತ್ತಿದ್ದ ನಾಯಿ ಇತ್ತು. ” ಮಹಾರಾಜ ನಿಮ್ಮನ್ನು ಮಾತ್ರ ಒಳಗೆ ಬಿಡುತ್ತೇನೆ. ನಿಮ್ಮ ಜೊತೆಯಲ್ಲಿರುವ ಈ ನಾಯಿಗೆ ಸ್ವರ್ಗ ಪ್ರವೇಶವಿಲ್ಲ” ಕಾವಲು ಭಂಟ ದೃಢ ಧ್ವನಿಯಲ್ಲಿ ಹೇಳಿದ.

ಯುಧಿಷ್ಠರ ಒಂದು ಕ್ಷಣ ತಡೆದು ಹೇಳಿದ: ಈ ನಾಯಿ ಸದಾ ನನ್ನ ಹಿಂಬಾಲಿಸಿದೆ ಸ್ವರ್ಗ ಪ್ರವೇಶದ ಈ ಸಮಯದಲ್ಲಿ ನಾನು ಇದನ್ನು ಇಲ್ಲಿಯೇ ಬಿಟ್ಟು ಒಬ್ಬನೇ ಸ್ವರ್ಗಕ್ಕೆ ಹೋಗಲಾರೆ ನನಗೆ ಬೇಡ ಹೀಗೆ ಹಿಂದಿರುಗುತ್ತೇನೆ.

ಆ ಕ್ಷಣ ಎಲ್ಲೆಡೆ ಬೆಳಕು ಮಿಂಚಿತು ನಾಯಿ “ಧರ್ಮದೇವತೆ”ಯಾಗಿ ನಿಂತಿತು. “ನಾನು ಧರ್ಮದೇವತೆ!ನೀನು ಸದಾ ನನ್ನ ಜೊತೆಯಲ್ಲಿ ಇಟ್ಟುಕೊಂಡು ಬಂದಿದ್ದೆಯೇ ಎಂದೂ ಅಧರ್ಮವನ್ನು ಯೋಚಿಸಿಲ್ಲ. ಧರ್ಮವನ್ನು ಬಿಟ್ಟಿಲ್ಲ ಈಗ ಸ್ವರ್ಗಕ್ಕೆ ನಿನಗೆ ಪ್ರವೇಶ ಇದ್ದರೂ ನೀನು ನನ್ನ ಕೈ ಬಿಡಲಿಲ್ಲ . ಸ್ವರ್ಗದ ಮೋಹ ನಿನ್ನನ್ನು ಬಾಧಿಸಲಿಲ್ಲ ಧರ್ಮವನ್ನು ರಕ್ಷಿಸಿದ್ದಿಯೆ ಆದ್ದರಿಂದ ಧರ್ಮ ನಿನ್ನನ್ನು ಸದಾ ರಕ್ಷಿಸುತ್ತದೆ.ನಿಮಗೆ ಮಂಗಳವಾಗಲಿ. ಈಗ ನೀನು ಯಾವುದೇ ಅಳುಕಿಲ್ಲದೆ ಸ್ವರ್ಗಕ್ಕೆ ಹೋಗಬಹುದು “ಇಷ್ಟು ಹೇಳಿ ಧರ್ಮದೇವತೆ ಅಂತರ್ಧಾನವಾದನು. ಆ ದಿನ ಯುಧಿಷ್ಠರನ ಧರ್ಮ ಅವನನ್ನು ಕಾಪಾಡಿತು.

ಫೋಟೋ ಕೃಪೆ : google

ಸೃಷ್ಟಿಯಲ್ಲಿ ಸೂರ್ಯ, ಚಂದ್ರ, ನಕ್ಷತ್ರಾದಿಗಳು ನಿತ್ಯ ತಮ್ಮ ಕಾರ್ಯ ಮಾಡುತ್ತವೆ. ಭೂಮಿ ನಮ್ಮನ್ನು ಸಲಹುತ್ತದೆ, ತಂದೆ ತಾಯಿ ತಮ್ಮ ಮಕ್ಕಳನ್ನು ಸಲಹುತ್ತಾರೆ, ನದಿ ಹರಿಯುತ್ತದೆ, ಹೀಗೆ ಅನೇಕ ಪ್ರಕೃತಿದತ್ತ ಕ್ರಿಯೆಗಳು ಸಹಜವಾಗಿ ನಮಗರಿವಿಲ್ಲದಂತೆ ನಿತ್ಯ ನಡೆದೇ ಇರುತ್ತವೆ. ಇದು ಪ್ರಕೃತಿ ಸಹಜ ಧರ್ಮ. ಹಾಗೆಯೇ ಮಾನವ ಸಹಜ ಧರ್ಮವೆಂದರೆ, ಪರೋಪಕಾರ, ಸುಳ್ಳನ್ನಾಡದಿರುವುದು, ದ್ರೋಹ ಬಗೆಯದಿರುವುದು, ಕಳ್ಳತನ ಮಾಡದಿರುವುದು, ಕಪಟತನ ಇಲ್ಲದಿರುವುದು, ಅನ್ಯರ ಅಪಹಾಸ್ಯ ಹಿಂಸೆ ಮಾಡದಿರುವುದು, ಇತ್ಯಾದಿ ಸದ್ಗುಣಗಳೇ ಮಾನವ ಸಹಜ ಧರ್ಮ.

“ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ. ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ ಇದೇ ನಮ್ಮ ಕೂಡಲಸಂಗಮ ದೇವರನೊಲಿಸುವ ಪರಿ.” ಎಷ್ಟು ಸರಳವಾಗಿ ದೇವರನ್ನು ಒಲಿಸುವ ಪರಿಯನ್ನು ಬಸವಣ್ಣನವರು ತೋರಿಸಿಕೊಟ್ಟಿದ್ದಾರೆ !! ಇಂಥಾ ಅತ್ಯಂತ ಸರಳ ಆಚಾರ ವಿಚಾರಗಳನ್ನು ಬಿಟ್ಟು ಏನೂ ಅರ್ಥವಾಗದ ಹುಸಿ ತತ್ವಗಳ ಹಿಂದೆ ಹಾಯ್ದು ನಮಗಿರುವ ಒಂದೇ ಒಂದು ಜೀವನವನ್ನು/ ಜನ್ಮವನ್ನು ನರಕ ಮಾಡಿಕೊಳ್ಳುತ್ತಿದ್ದೇವಲ್ಲಾ! ಈ ಜನ್ಮ ಕಳೆದ ಬಳಿಕ ಮತ್ತೆ ಜನ್ಮವನ್ನು ಹಸನು ಮಾಡಿಕೊಳ್ಳಲು ಸಿಗುತ್ತದೇನು? ಇಲ್ಲ. ಎಲ್ಲವೂ ಇಲ್ಲಿಯೇ ಕೊನೆ. ಇಲ್ಲಿ ಸರಿಯಾಗಿ ಬದುಕಿದರೆ ದೇವನ ಪಾದಕ್ಕೆ ಸಂದಂತೆ, ಇಲ್ಲಿ ಸಲ್ಲದವನು ಎಲ್ಲಿಯೂ ಸಲ್ಲಲು ಸಾಧ್ಯವಿಲ್ಲ ಎಂದು ಬಸವಣ್ಣನವರು ಹೇಳುತ್ತಾರೆ “ಮತ್ರ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ, ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯಾ. ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರು ಕೂಡಲಸಂಗಮದೇವಾ.”

ಫೋಟೋ ಕೃಪೆ : google

ಮಾನವನು ಧರ್ಮ ವಿಚಾರದಲ್ಲಿ ಪ್ರಾಣಿ, ಪಕ್ಷಿ, ನಿಸರ್ಗಗಳಿಂದ ಕಲಿಯಬೇಕಾದದ್ದು ಬಹಳಷ್ಟಿದೆ. ಕೆಲವರು ಹೇಳುತ್ತಾರೆ ಅವನು ಕಾಡು ಮನುಷ್ಯನ ಹಾಗೆ, ಪ್ರಾಣಿಯ ತರ ಬದುಕುತ್ತಾನೆ, ಸಂಸ್ಕಾರವಿಲ್ಲ ಇತ್ಯಾದಿಯಾಗಿ ಹಳಿಯುವುದನ್ನು ಕಾಣುತ್ತೇವೆ. ವಾಸ್ತವವಾಗಿ ನಾವು ಪ್ರಾಣಿಗಳಿಂದ ಬಹಳಷ್ಟು ಕಲಿಯಬೇಕು. ಪ್ರಾಣಿಗಳು ಯಾವುದೋ ಧರ್ಮಪಾಲನೆಗಾಗಿ ಇತರ ಸ್ವಜಾತೀಯ ಪ್ರಾಣಿಗಳನ್ನು ಕೊಲ್ಲುವುದಿಲ್ಲ, ಹೊಟ್ಟೆ ತುಂಬುವಷ್ಟು ತಿನ್ನುತ್ತವೆ, ಮನುಷ್ಯನಂತೆ ನಾಳೆಗಾಗಿ ಸಂಗ್ರಹಿಸುವುದಿಲ್ಲ. ಮೋಸ ಕುಟಿಲ ವಂಚನೆ ಸುಳ್ಳು ಕಪಟ ಇತ್ಯಾದಿ ನಕಾರಾತ್ಮಕ ಗುಣಗಳು ಅವುಗಳಲ್ಲಿಲ್ಲ. ಸಹಬಾಳ್ವೆಯಂಥಾ ಸದ್ಗುಣಗಳು ಅವುಗಳಲ್ಲಿ ಮೇಳೈಸಿವೆ. ಈ ಸದ್ಗುಣಗಳನ್ನು ಮಾನವನು ಅಳವಡಿಸಿಕೊಳ್ಳುವುದೇ ನಿಜವಾದ ಧರ್ಮದ ಅಳವಡಿಕೆ. ಈ ಗುಣಗಳಿಲ್ಲದೆ ಕೇವಲ ದೇವರು ಧರ್ಮವೆಂದು ಬಾಳುವ ಜೀವನವದು ವ್ಯರ್ಥ.

ಸದ್ಗುಣಗಳನ್ನು ಪಾಲಿಸುವಾತನಿಗೆ ಸಹಜವಾಗಿ ಆ ಸದ್ಗುಣಗಳೇ ರಕ್ಷಣೆ ನೀಡುವವು. ಇದನ್ನೇ ‘ಧರ್ಮೋ ರಕ್ಷತಿ ರಕ್ಷಿತಃ’ (ಧರ್ಮವನ್ನು ನೀನು ರಕ್ಷಿಸಿದೆಯಾದರೆ ಧರ್ಮವು ನಿನ್ನನ್ನು ರಕ್ಷಿಸುತ್ತದೆ )ಎಂದಿರುವರು ಹಿರಿಯರು. ಪ್ರಕೃತಿ ಸಹಜ ಧರ್ಮವೇ ಎಲ್ಲ ಮಾನವರ ಸಹಜ ಧರ್ಮವಾಗಬೇಕು. ಇದನ್ನು ಪಾಲಿಸಿದರೆ ಭೂಮಿಯಿದು ಕಲ್ಪನೆಯ ಸ್ವರ್ಗವನ್ನು ಮೀರಿಸೀತು, ಅಲ್ಲವೇ?.


  • ಸೌಮ್ಯ ಸನತ್

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW