ಸಂತೋಷ ಬಂದಾಗ ಹಿಗ್ಗಬಾರದು, ಕಷ್ಟ ಬಂದಾಗ ಕುಗ್ಗಬಾರದು …ಕಷ್ಟ – ಸುಖವನ್ನು ಸಮವಾಗಿ ಸ್ವೀಕರಿಸಿದಾಗಲೇ ಜೀವನ ಸುಂದರವಾಗಿ ಕಾಣುವುದು, ಆತ್ಮಹತ್ಯೆ ಮಹಾ ಪಾಪ, ಮಂಗಳಾ ಶಂಕರ್ ಅವರು ಬರೆದ ಉತ್ತಮ ಸಂದೇಶವಿರುವ ಕತೆಯನ್ನು ತಪ್ಪದೆ ಮುಂದೆ ಓದಿ..
ಸಮಸ್ಯೆಗಳ ಸುಳಿಯಲ್ಲಿ ಬಳಲಿದ ಮಾನಸಾಗೆ ಗಂಡ ಹಟಾತ್ತನೆ ಆಕ್ಸಿಡೆಂಟ್ ಅಲ್ಲಿ ಅಸು ನೀಗಿದ್ದು ,ಅವಳಿಗೆ ಪ್ರಪಾತಕ್ಕೆ ಬಿದ್ದ ಹಾಗಾಕಿತ್ತು. ಮನಸ್ಥರ್ಯವಿಲ್ಲದೆ ತನ್ನ ಕಷ್ಟವೇ ಹೆಚ್ಚೆಂದು ಪ್ರಮಾದ (ಆತ್ಮಹತ್ಯೆ) ಮಾಡಿಕೊಳ್ಳಲೆತ್ನಿಸಿದಾಗ ಅಲ್ಲೇ ಇದ್ದ ರುಕ್ಕಮ್ಮ ಅಲ್ಲವೇ ಪೆದ್ದಿ “ಕೂರೆಗೆದ್ರುಕೊಂಡು ಸೀರೆ ಬಿಚ್ಚಿದ ಹಾಗಾಯ್ತಲ್ಲೇ “ ನಿನ್ನ ಕತೆ… ಈಸ ಬೇಕು, ಇದ್ದು ಜಯಿಸ ಬೇಕು… ಕಷ್ಟ ಮನುಷ್ಯನಿಗೆ ಬರದೆ ಮರಕ್ಕೆ ಬರುತ್ಯೇ ಅಂದವಳು. ಅಲ್ಲಲ್ಲಲಾ… ಮರಕ್ಕೂ ಅದೇನೋ ನಿಷೆ ರೋಗ ಬರುತ್ತೆ, ಅಂತದ್ರಲ್ಲಿ ನೀನು ಮಕ್ಕಳ ಮುಖ ನೋಡಿಕೊಂಡು ಧೈರ್ಯ ತಂದುಕೋ ಹುಟ್ಟಿದ ಮೇಲೆ ಎಲ್ಲಾ ಸಾಯೋದೆ, ಒಬ್ಬರು ಮುಂದೆ… ಮತ್ತೊಬ್ಬರು ಹಿಂದೆ… ಅಷ್ಟೇ ಎಂದು ತಿಳುವಳಿಕೆ ಹೇಳಿದರು.

ದುಡಿಯುವ ಗಂಡನಿಲ್ಲ. ಗಂಡ ಮಾಡಿದ ಸಾಲದ ಹೊರೆ ಮಕ್ಕಳ ವಿದ್ಯಾಭ್ಯಾಸ, ಅತ್ತೆ- ಮಾವರ ಯೋಗಕ್ಷೇಮ, ಎಲ್ಲಾ ಒಟ್ಟಿಗೆ ಅವಳ ಬೆನ್ನಿಗೆ ಬಿದ್ದಾಗ ದುಡುಕಿನ ನಿರ್ಧಾರ ತೆಗೆದು ಕೊಂಡಿದ್ದಳು. ಆದರೆ ಸಮಯಕ್ಕೆ ಸರಿಯಾಗೆ ರುಕ್ಕಮ್ಮ ಧೈರ್ಯ ತುಂಬಿದ್ದು, ಮುಳುಗುವವನಿಗೆ ಹುಲ್ಲು ಕಡ್ಡಿಯ ಆಸರೆ ದೊರೆತಂತಾಯಿತು. ಕೆಟ್ಟ ನಿರ್ಧಾರದಿಂದ ಹೊರಬಂದ ಮೇಲೆ ತನ್ನ ಜವಾದ್ದಾರಿ ಅರಿತು ತಾನು ಸಂಸಾರದ ನೊಗ ಹೊರುವ ಎತ್ತಾಗ ಬೇಕು ಎಂದು ನಿರ್ಧರಿಸಿದಳು. ಕಪಾಟಿನಲ್ಲಿದ್ದ ತನ್ನ ವಿದ್ಯಾಭ್ಯಾಸದ ಅಂಕ ಪಟ್ಟಿ, ಮದುವೆಗೆ ಮೊದಲು ದುಡಿಯುತಿದ್ದ ಕಂಪನಿಯ ಸೇವಾ ಧೃಡೀಕರಣ ಪತ್ರ, ತೆಗೆದು ಜೆರಾಕ್ಸ ಮಾಡಿಸಿದಳು. ತನಗೆ ತಿಳಿದ ಕಛೇರಿಗಳಿಗೆ ನೀಡಿ ಕೆಲಸದ ಅವಶ್ಯಕತೆಯ ಸವಿವರ ಪತ್ರ ಲಗತ್ತಿಸಿ ಮನೆಗೆ ಬಂದಳು. ಮೈಸೂರಿನ ಸುಪ್ರಸಿದ್ದ ಅಗರಬತ್ತಿ ಕಂಪನಿಯವರು ಇವಳ ಅರ್ಜಿ ಮತ್ತು ವಿವರಗಳನ್ನು ಗಮನಿಸಿ ಅವಳಿಗೆ ಕೆಲಸಕ್ಕೆ ಬಂದು ಸೇರುವಂತೆ ಪತ್ರ ಕಳಿಸಿದರು.
ಪತ್ರ ತಲುಪಿದ ಕೂಡಲೆ ಮಾನಸ ದೇವರ ಪಟದ ಬಳಿ ಇಟ್ಟು ನಾಳೆಯಿಂದ ಹೊಸ ಜೀವನಕ್ಕೆ ಕಾಲಿಡುತ್ತಿದ್ದೇನೆ. ನನ್ನ ಕೈ ಹಿಡಿದು ನೆಡೆಸಿರೆಂದು ತುಪ್ಪದ ದೀಪ ಹಚ್ಚಿದಳು. ಬೆಳಗ್ಗೆ ಎಂದಿನಂತೆ ಬೇಗ ಎದ್ದು ಮನೆ ಕೆಲಸ ಮುಗಿಸಿ ಮಕ್ಕಳು, ಅತ್ತೆ- ಮಾವನಿಗೆ ತಿಂಡಿ ತಿನ್ನಲು ಕೊಟ್ಟು, ತಾನು ಇಂದಿನಿಂದ ಕೆಲಸಕ್ಕೆ ಹೋಗಿಬರುವುದಾಗಿ ತಿಳಿಸಿದಳು. ಆಗ ಮಕ್ಕಳು ಮತ್ತು ಹಿರಿಯರ ಕಣ್ಣಲ್ಲಿ ಹೊಳಪು ಕಂಡು ಅವಳ ಅತ್ಮ ಸ್ಥರ್ಯ ಮತ್ತೂ ಇಮ್ಮಡಿಸಿತು. ಸ್ವಾಭಿಮಾನದಿಂದ ಬದುಕು ಕಟ್ಟಿ ಕೊಳ್ಳುವತ್ತಾ ದಿಟ್ಟ ಹೆಜ್ಜೆ ಇಟ್ಟಳು.
ಅವಳ ಕಾರ್ಯ ವೈಖರಿಯನ್ನು ಗಮನಿಸಿ ಕಂಪನಿಯವರು ಅವಳಿಗೆ ಉದ್ಯೋಗದಲ್ಲಿ ಬಡ್ತಿ ನೀಡುವುದರ ಜೊತೆ ಕೈ ತುಂಬ ಸಂಬಳ ಕೊಟ್ಟರು, ಅದರಿಂದ ಅವಳ ಬದುಕು ಹಸನಾಯಿತು. ದುಡುಕಿ ಜೀವನದಲ್ಲಿ ತನ್ನ ಕಷ್ಟವೇ ದೊಡ್ಡದೆಂದು ಭಾವಿಸಿ ತನ್ನ ಜೀವನ ನೀರಿನಲ್ಲಿ ಮುಳುಗಿದ ಹಡಗು ಎಂದು ಕೊಂಡಿದ್ದರೆ ತನ್ನ ನಂಬಿದ ಇಷ್ಟು ಜೀವಿಗಳು ದ್ರೋಹ ಬಗೆದಂತಾಗುತ್ತಿತ್ತು. ಸದ್ಯ ನಾನು ಮುಳುಗುತ್ತಿದ್ದ ಜೀವನವೆಂಬ ದೋಣಿಯನ್ನು ಹುಟ್ಟು ಹಾಕಿ ಅಲೆಗಳ ಹೊಡೆತದಿಂದ ತಪ್ಪಿಸಿ ದಡ ಸೇರಿಸುವಲ್ಲಿ ಯಶಸ್ವಿಯಾದೆನಲ್ಲವೇ ಎಲ್ಲರ ಬದುಕಲ್ಲೂ ಹೀಗೆ ಕಷ್ಟ- ನಷ್ಟಗಳು ಬಂದರೆ ಈಸ ಬೇಕು ಇದ್ದು ಜಯಿಸಬೇಕೆನ್ನುವ ಮನಸ್ಥಿತಿ ಬರಬೇಕೆಂದುಕೊಂಡಳು ಮಾನಸ.
- ಮಂಗಳಾ ಶಂಕರ್ – ಮೈಸೂರು