ಮಹಾಕುಂಭಮೇಳದಲ್ಲಿ ಸ್ನಾನದ ಪುಣ್ಯ ಸಿಕ್ಕಿರದಿದ್ದರೇ ಅದಕ್ಕಾಗಿ ಸ್ಟಾರ್ಟ್ ಅಪ್ ಸಂಸ್ಥೆಯ ಮೂಲಕ ಡಿಜಿಟಲ್ ಸ್ನಾನ ಮಾಡಿಸಿಕೊಂಡು ಪಾಪ ಕಳೆದುಕೊಳ್ಳಬಹುದಂತೆ, ಇಂದಿನ ಸೋಷಿಯಲ್ ಮೀಡಿಯಾ ಹಾಗೂ ಡಿಜಿಟಲ್ ಯುಗದಲ್ಲಿ ದುಡ್ಡು ಮಾಡುವುದು ಬಹಳ ಸುಲಭ. ಬಂಡವಾಳ ಹೂಡದೇ ಕೋಟಿ ಕೋಟಿ ಸಂಪಾದಿಸಬಹುದು. ಡಿಜಿಟಲ್ ಸ್ನಾನ ಇದರ ಮರ್ಮವೇನು? ಹಿರಿಯೂರು ಪ್ರಕಾಶ್ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…
ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಐತಿಹಾಸಿಕ ಮಹಾ ಕುಂಭಮೇಳಕ್ಕೆ ಹೋಗಲಾಗುತ್ತಿಲ್ಲವೇ ? ಡೋಂಟ್ ವರೀ… ಅಷ್ಟು ದೂರ ಹೋಗೋದು ಕಷ್ಟವಾದಲ್ಲಿ, ನೀವಿದ್ದ ಜಾಗದಿಂದಲೇ ನಿಮ್ಮ ಫೋಟೊ ಜೊತೆಗೆ ₹ 1100 ಕಳಿಸಿದಲ್ಲಿ ನಿಮ್ಮನ್ನು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿಸಿ ಕೃತಾರ್ಥರನ್ನಾಗಿ ಮಾಡುತ್ತಾರಂತೆ !
ಅಂದರೆ…. ಈ ಸೇವೆ ಕೊಡುವವರ ವಾಟ್ಸಪ್ ಗೆ ನೀವು ಕಳಿಸಿದ ಫೋಟೋವನ್ನು ಪ್ರಿಂಟ್ ತೆಗೆದು ಅದನ್ನು ತ್ರಿವೇಣಿ ಸಂಗಮದಲ್ಲಿ ಮುಳುಗಿಸಿ ನಿಮಗೂ ಕುಂಭ ಸ್ನಾನದ ಪುಣ್ಯ ಸಿಗುವಂತೆ ಮಾಡುತ್ತಾರೆ ! ಇದನ್ನು ಸಿಂಪಲ್ಲಾಗಿ ಬೇಕಾದರೆ ಡಿಜಿಟಲ್ ಸ್ನಾನ ಎನ್ನಬಹುದು. ಪ್ರಯಾಗ್ ಎಂಟರ್ ಪ್ರೈಸಸ್ ಎನ್ನುವ ನೂತನ ಸ್ಟಾರ್ಟ್ ಅಪ್ ಸಂಸ್ಥೆ ಈ ಸೌಲಭ್ಯವನ್ನು ಕುಂಭಮೇಳಕ್ಕೆ ಹೋಗದವರಿಗಾಗಿ ಆಯೋಜಿಸಿದೆಯಂತೆ !

ಎಂಬಲ್ಲಿಗೆ….. ಎಲ್ಲಿಂದ ಎಲ್ಲಿಗೆ ಬಂತು ನೋಡಿ, ಮನುಷ್ಯನ ದುಡ್ಡು ಮಾಡುವ ದುರಾಲೋಚನೆ ಹಾಗೂ ಜನರ ಧಾರ್ಮಿಕ ನಂಬಿಕೆಗಳ ದೌರ್ಬಲ್ಯವನ್ನು ವ್ಯಾಪಾರವನ್ನಾಗಿಸಿ ಹಣ ಮಾಡುವ ಪಕ್ಕಾ ಕಲೆ !
ಕುಂಭ ಮೇಳದಲ್ಲಿ ಸ್ನಾನ ಮಾಡಿದರೆ ಪಾಪವೆಲ್ಲಾ ಕಳೆದು ಪುಣ್ಯ ಲಭಿಸುತ್ತದೆ ಎಂಬುದು ಬಹುಸಂಖ್ಯಾತ ಹಿಂದೂಗಳ ನಂಬಿಕೆ. ಅದರಂತೆ ಕೋಟ್ಯಾಂತರ ಭಕ್ತರು ಈಗಾಗಲೇ ಸ್ನಾನ ಮಾಡಿ ಪುಣ್ಯ ಸಂಪಾದಿಸಿರುವ ಧನ್ಯತೆಯಲ್ಲಿದ್ದರೆ ಅಲ್ಲಿಗೆ ಹೋಗಲಾಗದೇ ಪುಣ್ಯ ಮಿಸ್ ಆಗಿ ಪರಿತಪಿಸುವವರ ಅನುಕೂಲಕ್ಕಾಗಿ ಈ ಐಡಿಯಾ ಹೊಳೆದು ಅದನ್ನು ಎನ್ ಕ್ಯಾಶ್ ಮಾಡಿಕೊಳ್ಳುವ ಇವರ ತಲೆಗೆ , ಹಣ ಮಾಡುವ ಕಲೆಗೆ ಹ್ಯಾಟ್ಸಾಫ಼್ ಹೇಳಲೇಬೇಕು !
ನಮ್ಮ ಫೋಟೋಗಳನ್ನು ತ್ರಿವೇಣಿ ಸಂಗಮದಲ್ಲಿ ಮುಳುಗಿಸಿ ಅದಕ್ಕೆ ಡಿಜಿಟಲ್ ಸ್ನಾನ ಎಂಬ ಹೆಸರಿನಿಂದ ನೀರಲ್ಲಿ ಮುಳುಗಿಸುವುದರಿಂದ ಕುಂಭಮೇಳ ಸ್ನಾನದ ಪುಣ್ಯ ಸಂಪಾದಿಸುವ ಹಾಗಿದ್ದರೆ ನಮ್ಮ ಬದುಕಿನ ಬಹುತೇಕ ಅಗತ್ಯಗಳನ್ನೆಲ್ಲವನ್ನೂ ಸಹಾ ಡಿಜಿಟಲ್ ರೂಪದಲ್ಲೇ ಮಾಡಿಕೊಂಡು ನಿರಾಳವಾಗಿರ ಬಹುದಲ್ಲವೇ ?
ಈ ಐಡಿಯಾ ಹುಟ್ಟುಹಾಕಿರುವ ಉತ್ತರದ ಭೂಪರಿಗೂ ಗೊತ್ತು ! ನಮ್ಮ ದೇಶದಲ್ಲಿ ಬಹುತೇಕ ಜನ ಬಹುಬೇಗ ಮರುಳಾಗುವುದು, ಬೀಳುವುದು, ಏಳುವುದು, ಭಾವಾವೇಶಕ್ಕೊಳಗಾಗುವುದು ಕೇವಲ ಜಾತಿ -ಧರ್ಮ, ದೇವರು, ಭಕ್ತಿ ಇಂತಹ ವಿಷಯಗಳಲ್ಲಿ ಮಾತ್ರ. ಹೀಗಾಗಿ ಅವುಗಳ ಮೂಲ ಸರಿಯಾಗಿ ಹಿಡಿದು ಇಂದಿನ ಪರಿಸ್ಥಿತಿಗೆ ಹೊಂದಿಕೊಳ್ಳುವಂತೆ ಮಾರ್ಕೆಟಿಂಗ್ ಮಾಡಿದಲ್ಲಿ ದುಡ್ಡು ಮಾಡುವ ವಿಚಾರದಲ್ಲಿ ಅದೆಂದೂ ವಿಫಲವಾಗದು ಎಂಬ ಧೃಢ ನಂಬಿಕೆ ಹೀಗೆಲ್ಲಾ ಡಿಜಿಟಲ್ ಸ್ನಾನದ ಐಡಿಯಾವನ್ನು ಸೃಜಿಸುತ್ತಿದೆ. ಮುಖ್ಯವಾಗಿ ಈ ಐಡಿಯಾದಿಂದ ಅವರಿಗೆ ಏನಾದರೂ ಆದರೆ ಅದು ಸಿರ್ಫ಼್ ಲಾಭವೇ ಹೊರತು ನಷ್ಟವೇನಿಲ್ಲ. ಏಕೆಂದರೆ ಇಲ್ಲಿ ಯಾರದ್ದೂ ನಯಾಪೈಸೆ ಬಂಡವಾಳವೇನೂ ಇರುವುದಿಲ್ಲ .
ಇಲ್ಲಿ ನನಗೆ ವಿಸ್ಮಯ ಮೂಡಿಸುತ್ತಿರುವುದು ಇಂಥಾದ್ದೊಂದು ಡಿಜಿಟಲ್ ಸ್ನಾನದ ಆಲೋಚನೆಯನ್ನು ಕಾರ್ಯರೂಪಕ್ಕೆ ತರುವವರ ಆತ್ಮವಿಶ್ವಾಸದ ಬಗ್ಗೆ ! ಬಹುಶಃ ಇಂತಹ ಆತ್ಮವಿಶ್ವಾಸ ನಮ್ಮ ದೇಶದಲ್ಲಿ ಮಾತ್ರವೇ ಬರಲು ಸಾಧ್ಯ.
ಇಂದಿನ ಸೋಷಿಯಲ್ ಮೀಡಿಯಾ ಹಾಗೂ ಡಿಜಿಟಲ್ ಯುಗದಲ್ಲಿ ದುಡ್ಡು ಮಾಡುವುದು ಬಹಳ ಸುಲಭ. ಬಂಡವಾಳ ಹೂಡದೇ ಕೋಟಿ ಕೋಟಿ ಸಂಪಾದಿಸುವ ಚಾಟಿಯಿಲ್ಲದೇ ಬೇರೆಯವರ ಬುಗುರಿ ಆಡಿಸುವ ಅನೇಕ ಮಲ್ಟಿ ನ್ಯಾಷನಲ್ ಕಂಪನಿಗಳ ಕಾಸ್ಟ್ಲೀ ಸೇವೆಗೆ ಈಗಾಗಲೇ ನಮ್ಮನ್ನು ನಾವು ಒಪ್ಪಿಸಿಕೊಂಡು ಅದನ್ನೇ ಜೀವನದ ಭಾಗವನ್ನಾಗಿಸಿಕೊಂಡು ಜೀವಿಸುತ್ತಿದ್ದೇವೆ. ಹೀಗಿರುವಾಗ ಡಿಜಿಟಲ್ ಸ್ನಾನದ ಐಡಿಯಾ ಅಚ್ಚರಿಯಂತೆ ತೋರುತ್ತಿಲ್ಲ. ಅದರಲ್ಲೂ ಜನರ ಧಾರ್ಮಿಕ ನಂಬಿಕೆಯೆಂಬ ಜೇನುಗೂಡಿಗೆ ಜಾಣತನದಿಂದ ಕೈಹಾಕಿ ಜೇನನ್ನು ಹೀರುವ ಕಲಾಕಾರರು ಇರುವವರೆಗೂ ಚುನಾವಣೆಯಲ್ಲಿ ಅಧಿಕಾರ ಹಿಡಿಯುವುದಾಗಲೀ, ಹಣ ಸಂಪಾದಿಸುವುದಾಗಲೀ ಮ್ಯಾಟರ್ರೇ ಅಗೋಲ್ಲ…..
ಇದು ಸರೀನೋ ತಪ್ಪೋ… ಏನೆಲ್ಲಾ ವಿಶ್ಲೇಷಣೆ ಮಾಡಿದರೂ “ಡಿಜಿಟಲ್ ಸ್ನಾನ” ಕ್ಕಾಗಿ ತಮ್ಮ ಫೋಟೋ ಮತ್ತು ಹಣವನ್ನು ಕಳಿಸುವವರಂತೂ ಇದ್ದೇ ಇರುತ್ತಾರೆ. ಏಕೆಂದರೆ ಇದು ಧಾರ್ಮಿಕ ನಂಬಿಕೆಗಳಿಗೆ ಸಂಬಂಧಿಸಿದ ವಿಚಾರ. !!

** ಮರೆಯುವ ಮುನ್ನ **
ಇಂದಿನ ಡಿಜಿಟಲ್ ಜ಼ಮಾನದಲ್ಲಿ ಎರಡು ರೀತಿಯಲ್ಲಿ ಸುಲಭವಾಗಿ ದುಡ್ಡು ಮಾಡಬಹುದು. ಒಂದು, ಅಕ್ರಮ ಮಾರ್ಗಗಳ ಮೂಲಕ ತಂತ್ರಜ್ಞಾನವನ್ನು ಬಳಸಿ ಜನರ ಖಾತೆಗೆ ಕನ್ನ ಹಾಕಿ ಸೈಬರ್ ಕ್ರೈಂ ಗಳ ಮೂಲಕ ಫ಼್ರಾಡ್ ಮಾಡಿ ಹಣ ಮಾಡುವ ಸೈಬರ್ ವಂಚನೆ. ಇದಂತೂ ದಿನೇದಿನೇ ನೂರಾರು ಕೋಟಿಗಳಲ್ಲಿ ಹೆಚ್ಚುತ್ತಲೇ ಇದೆ.
ಮತ್ತೊಂದು, ಜನರ ಅಸಹಾಯಕತೆಯಿಂದ ಅಥವಾ ನಂಬಿಕೆಗಳಿಂದ ಉದ್ಭವಿಸಬಹುದಾದ ಅವಶ್ಯಕತೆಗಳನ್ನು ಡಿಜಿಟಲ್ ಮಾಧ್ಯಮಗಳ ಮೂಲಕ ಎನ್‌ಕ್ಯಾಶ್ ಮಾಡಿ ದುಡ್ಡು ಮಾಡಿಕೊಳ್ಳುವುದು. ಈ ಎರಡು ವಿಧಾನದಲ್ಲೂ ಅಂಥವರಲಿದ್ದಿರಬಹುದಾದ ಬಂಡವಾಳವೆಂದರೆ ಅವರ ಡಿಜಿಟಲ್ ಜಾಣತನ ಹಾಗೂ ಜನರ ಅಸಹಾಯಕತೆ !!
ಜ಼ಮಾನಾ ಕಿ ಸಾತ್ ಜಾನಾ ಹೈ ನಾ…..?
ಪ್ರೀತಿಯಿಂದ…
- ಹಿರಿಯೂರು ಪ್ರಕಾಶ್
