”ಲೈಬ್ರರಿಯಲ್ಲಿ 20 ಕ್ಕೂ ಹೆಚ್ಚು ನಾಯಿಗಳು ನನ್ನ ಹಿಂಬಾಲಿಸಿ ಒಳನುಗ್ಗಿದ್ದವು. ಲೈಬ್ರರಿಯನ್ನ ಬಂದು ಹೇಳಿದಾಗಲೇ ಕಣ್ಣಾಡಿಸಿ ನೋಡಿದ್ದು, ಯಾವ ಯಾವ ಕಬೋರ್ಡ್ಗಳಿಗೆ “ಕಾಲೆತ್ತಿ ಸಿಂಚನ” ಮಾಡುವವೋ ಎಂಬ ಭಯದಲ್ಲಿ ಕೂಡಲೆ ಹೊರ ಬಂದವನ ಜೊತೆಗೆ ಕಿಂದರ ಜೋಗಿಯ ಹಿಂದೆ ಬಂದ ಇಲಿಗಳ ಹಿಂಡಿನಂತೆ ನಾಯಿಗಳು ಹಿಂಬಾಲಿಸಿದವು”.- ಡಾ.ಯುವರಾಜ್ ಹೆಗಡೆ, ಮುಂದೆ ಓದಿ…
ನಾನು ಬೀದರ್ ಪಶುವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಅಭ್ಯಾಸ ಮಾಡುತ್ತಿದ್ದ ಸಮಯ. ನೂರಾರು ಎಕರೆ ಜಾಗದಲ್ಲಿ ನಮ್ಮ ಕಾಲೇಜು ಮತ್ತು ಹಾಸ್ಟೆಲ್ ಎಲ್ಲವೂ ಒಂದೇ ಆವರಣದಲ್ಲಿ ಇತ್ತು. ಹಾಸ್ಟೆಲ್ ಬಳಿ ಒಂದಿಷ್ಟು ನಾಯಿಗಳಿಗೆ ಆಶ್ರಯ ನೀಡಿದ್ದೆವು.ಅಲ್ಲಿದ್ದವರು ಪಶುವೈದ್ಯಕೀಯ ವಿದ್ಯಾರ್ಥಿಗಳಾಗಿದ್ದ ಕಾರಣ ಸಹಜವಾಗಿ ಅವುಗಳ ಮೇಲೆ ತುಸು ಹೆಚ್ಚೇ ಪ್ರೀತಿ ತೋರುತ್ತಿದ್ದರು ಎನ್ನಬಹುದು. ಅವುಗಳಿಗೆ ಇಡುವ ಹೆಸರು ಕೂಡ ಅಷ್ಟೇ ಮಜವಾಗಿರುತ್ತಿತ್ತು. ನಿಶಾ, ಲೈಲಾ, ರೂಬಿ, ಮೋಟ, ಕಾಲೇಜಿನ ಅನೇಕ ಹುಡುಗಿಯರ ಹೆಸರುಗಳು, ಅವರಿಗಾಗದ ಪ್ರಾಧ್ಯಾಪಕರ ಹೆಸರುಗಳು ಹೀಗೆ ಬಹಳ ವಿಶಿಷ್ಟವಾಗಿ ಹೆಸರಿಟ್ಟು ಪ್ರತಿ ಭಾರಿಯೂ ಅವುಗಳನ್ನು ಕರೆಯುವಾಗ ಒಂಥರಾ ಮಜಾ ತೆಗೆದುಕೊಳ್ಳುತ್ತಿದ್ದರು.ಅದರಲ್ಲಿಯೂ ಆ ಹೆಸರಿನ ವ್ಯಕ್ತಿಗಳು ಹತ್ತಿರ ಬಂದಾಗಲಂತೂ ಅದೇ ಹೆಸರಿನ ನಾಯಿಗಳನ್ನು ಜೋರಾಗಿ ಕರೆದು ಕುಚೇಷ್ಟೆ ಮಾಡುವುದು ಸಾಮಾನ್ಯವಾಗಿತ್ತು.
ಫೋಟೋ ಕೃಪೆ : indiaTV News
ನಾವು ಸ್ವಲ್ಪ ಜನ ವಿದ್ಯಾರ್ಥಿಗಳು ಹಾಸ್ಟೆಲ್ ಬಳಿ ಮೆಸ್ ನಲ್ಲಿ ಉಳಿದ ಆಹಾರ ಪದಾರ್ಥವನ್ನು ನಾಯಿಗಳಿಗೆ ಹಾಕಿ ಅವುಗಳ ಪ್ರೀತಿ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದೆವು. ನಮ್ಮನ್ನು ಕಂಡೊಡನೆ ಸಾಷ್ಟಾಂಗ ನಮಸ್ಕಾರ ಹಾಕಿ, ವಿಶೇಷ ಗೌರವ ಕೂಡ ಕೊಡುತ್ತಿದ್ದವು. ಅಗಾಗ್ಗೆ ಅವುಗಳನ್ನು ಮೊದಲ ವರ್ಷದ ಜೂನಿಯರ್ ವಿದ್ಯಾರ್ಥಿಗಳ ಮುಂದೆ ನಿಲ್ಲಿಸಿ ಅನಾಟಮಿ ಕುರಿತು ಪ್ರಶ್ನೆ, ಉತ್ತರಗಳನ್ನೂ ಹೇಳಿಕೊಡುತ್ತಿದ್ದೆವು. ಹೀಗೆ ಮುಂದುವರೆದು ಅವುಗಳ ಸಂಖ್ಯೆ 20 ಕ್ಕೂ ಅಧಿಕವಾಗಿ ಬೆಳೆದಿತ್ತು.
ಅದು ಸ್ನಾತಕೋತ್ತರ ಪದವಿಯ ಮೊದಲ ವರ್ಷದ ಪರೀಕ್ಷೆಯ ಸಮಯ. ಸಂಜೆ 7 ಗಂಟೆಯ ಸುಮಾರಿಗೆ ನಾನು ಗ್ರಂಥಾಲಯದ ಒಂದು ಮೂಲೆಯಲ್ಲಿ ಕುಳಿತು ಒಂದಷ್ಟು ಪುಸ್ತಕಗಳನ್ನು ತಿರುವಿ ಹಾಕಿ ಏಕಾಗ್ರತೆಯಿಂದ ಓದಲಾರಂಬಿಸಿದ್ದೆ. ಸುತ್ತಲಿನ ಪ್ರಪಂಚವೂ ಅಷ್ಟು ಗಮನದಲ್ಲಿಲ್ಲ. ಇದ್ದಕ್ಕಿದ್ದಂತೆ ಲೈಬ್ರೇರಿಯನ್ ಜಾದವ್ ನನ್ನ ಮುಂದೆ ನಿಂತು ದುರುಗುಟ್ಟಲಾರಂಬಿಸಿದರು. ಚಕಿತನಾದ ನಾನು ಏನು ಎಂಬಂತೆ ಕಣ್ಣಿನಲ್ಲಿಯೇ ಪ್ರಶ್ನಿಸಿದಾಗ ಆತ ” ಇದೇನ್ರಿ ಸರ್ರಾ, ಲೈಬ್ರರಿಯನ್ನ ನಿಮ್ಮ ಹಾಸ್ಟೆಲ್ ಮಾಡಿರೇನ್ರಿ” ಎಂದಾಗ ಸುತ್ತಲೂ ಕಣ್ಣಾಡಿಸಿದ ನನಗೆ ದಂಗು ಬಡಿದಂತಾಯಿತು. ಹಾಸ್ಟೆಲ್ ನಾಯಿಗಳಿಗೆ ನಾನು ಲೈಬ್ರರಿಯಲ್ಲಿ ಕುಳಿತಿರುವುದು ಗೊತ್ತಾಗಿ 20 ಕ್ಕೂ ಹೆಚ್ಚು ನಾಯಿಗಳು ಒಳನುಗ್ಗಿದ್ದವು. ಲೈಬ್ರರಿಯಲ್ಲಿ ಎತ್ತ ನೋಡಿದರೂ ನಾಯಿಗಳು. ನನಗೆ ಸಮಜಾಯಿಷಿ ಕೊಡಲು ಉತ್ತರವೂ ಇರಲಿಲ್ಲ, ಅಲ್ಲಿ ಸಮಯ ಕಳೆಯುವಂತೆಯೂ ಇರಲಿಲ್ಲ. ಏಕೆಂದರೆ ಯಾವ ಯಾವ ಕಬೋರ್ಡ್ಗಳಿಗೆ “ಕಾಲೆತ್ತಿ ಸಿಂಚನ” ಮಾಡುವವೋ ಎಂಬ ಭಯದಲ್ಲಿ ಕೂಡಲೆ ಹೊರ ಬಂದವನ ಜೊತೆಗೆ ಕಿಂದರ ಜೋಗಿಯ ಹಿಂದೆ ಬಂದ ಇಲಿಗಳ ಹಿಂಡಿನಂತೆ ಹಿಂಬಾಲಿಸಿದವು.
ಫೋಟೋ ಕೃಪೆ :tiphero
ಇದಾದ ಒಂದು ವಾರಗಳ ಕಾಲ ಜೂನಿಯರ್ ವಿದ್ಯಾರ್ಥಿಗಳು ತಮ್ಮ ಅನೇಕ ವಿಚಾರಗಳನ್ನು ವಿಮರ್ಶೆ ಮಾಡಲು ಲೈಬ್ರರಿಗೆ ಬರಹೇಳಿ ಕಾಡಿದರೂ ಈ ಶ್ವಾನಗಳ ಸಹವಾಸ ಅರಗಿಸಿಕೊಳ್ಳಲಾಗದೆ ಅತ್ತ ಸುಳಿದಿರಲಿಲ್ಲ .ಕೊನೆಗೆ 15-20 ಚೈನುಗಳನ್ನು ತಂದು ಲೈಬ್ರರಿಗೆ ಹೋಗುವ ಮುನ್ನ ಅವುಗಳನ್ನು ಒಂದು ಕಡೆ ಜಡಿದು ಹೋಗಲಾರಂಬಿಸಿದೆ.
- ಡಾ.ಯುವರಾಜ್ ಹೆಗಡೆ (ಪಶುವೈದ್ಯರು,ವೈದಕೀಯ ಬರಹಗಾರರು) ತೀರ್ಥಹಳ್ಳಿ