‘ದೂರದರ್ಶನ ಉಮೇಶ್’ ಇನ್ನಿಲ್ಲ

ನಮ್ಮ ದೂರದರ್ಶನ ಉಮೇಶ್ ಎಂದೇ ಖ್ಯಾತಿಯ, ಸಮುದಾಯ ಮತ್ತು ರಂಗನಿರಂತರ, ರಂಗ ಸಂಪದ ತಂಡಗಳೊಟ್ಟಿಗೆ ಗುರುತಿಸಿಕೊಂಡು ರಂಗ ಚಟುವಟಿಕೆಗಳನ್ನು ನಡೆಸಿ, ದೂರ ದರ್ಶನದಲ್ಲಿ ಪ್ರಸಾದನ ಕಲಾವಿದ ಎಂಬ ಹುದ್ದೆಗೆ ಸೇರಿ, ಹಲವು ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದ ಉಮೇಶ ಇನ್ನಿಲ್ಲ. ಹಿರಿಯ ರಂಗಕರ್ಮಿ ಗುಂಡಣ್ಣ ಚಿಕ್ಕಮಗಳೂರು ಅವರಿಂದ ಅಕ್ಷರ ನಮನಗಳು…

ಸೇತೂರಾಂ ಅವರ ನಿರ್ದೇಶನದ ಹಲವಾರು ಧಾರವಾಹಿಗಳಿಗೆ ಹಲವು ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ, ಬಹು ಜನರ ಶೋತೃವಾಗಿದ್ದ ಉಮೇಶ ಇನ್ನಿಲ್ಲ. ಬೆಳಗಿನ ಜಾವದಲ್ಲಿ ಧಾರುಣ ಸುದ್ದಿ ಗೆಳೆಯ ನಂದಕಿಶೋರ್ ನಿಂದ ತಲುಪಿದೆ.

ಇತ್ತೀಚಿನ ವರುಷಗಳಲ್ಲಿ ಅವನಿಗೆ ಅನಾರೋಗ್ಯ ತೀವ್ರವಾಗಿ ಕಾಡಿತ್ತು. ಫೆಬ್ರವರಿ 23ರಂದು ನಾನು ನನ್ನ ಮನೆಯವರನ್ನು ಆಸ್ಟ್ರೋ ಆರ್ ವಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಗ, ಮಧ್ಯಾನ್ಹ 3 – 4 ರ ಸುಮಾರಿಗೆ ಉಮೇಶನೂ ತನ್ನ ಆರೋಗ್ಯ ತಪಾಸಣೆಗೆ ಬಂದಿದ್ದ. ಅಸ್ಪಷ್ಟ ಮಾತುಗಳು ಮತ್ತು ಅಸಹಜ ದೈಹಿಕ ಕ್ರಿಯೆಗಳಿಂದ ಬಳಲುತಿದ್ದ ಉಮೇಶನ ಮುಂದೆ ನಿಲ್ಲಲು ನನಗೆ ಮನಸ್ಸಾಗಲಿಲ್ಲ. ಏನಾದರೂ ಸಹಾಯ ಬೇಕಾ? ಎಂದಾಗ ಅವನ ಜೊತೆ ಇದ್ದವರು ಇಲ್ಲ ಸಾರ್, ನಾವು ಇಲ್ಲಿ ರೆಗ್ಯುಲರ್ ಆಗಿ ಬರುತ್ತೇವೆ, ತೊಂದರೆ ಇಲ್ಲ ಎಂದರು. ಬಹಳ ಕ್ರಿಯಾಶೀಲ ದಿನಗಳಲ್ಲಿ ಕಂಡಂತ ಉಮೇಶನನ್ನು ಹೀಗೆ ನೋಡಲು ಸಾಧ್ಯವಾಗದಾಯಿತು. ಬಲವಂತವಾಗಿ ನಾನು ನನ್ನ ಕೆಲಸದ ಮೇಲೆ ಮುಂದುವರೆದೆ.

ಅವನ ಹುಟ್ಟು ಹಬ್ಬದ ಸಂಭ್ರಮಾಚರಣೆ ಅವನ ಮನೆಯಲ್ಲಿ ಸುಮಾರು ಎರಡು ವರುಷಗಳ ಹಿಂದೆ ನಡೆಯಿತು. ಕೆಲವೇ ಕೆಲವು ಆತ್ಮೀಯರಿಂದ ನಡೆದ ಆ ಸಂಭ್ರಮಾಚರಣೆಯಲ್ಲಿ ನಾನೂ ಒಬ್ಬ. ಅಂದು ಸಾಕಷ್ಟು ರಂಗಭೂಮಿ, ಧಾರವಾಹಿ, ದೂರದರ್ಶನ, ಜುಟ್ಟಿ, ಎಲ್ಲದರ ಬಗ್ಗೆಯೂ ಮಾತನಾಡಿದೆವು. ಗತಕಾಲದ ರಂಗ ಇತಿಹಾಸವನ್ನು ಮೆಲಕು ಹಾಕಿದೆವು.
ಅದೇ ನಮ್ಮ ಆತ್ಮೀಯ ಕೊನೆಯ ಭೇಟಿ.

ಇತ್ತೀಚಿನ ದಿನಗಳ ಸೇತೂ ದಾರವಾಹಿಯಲ್ಲೂ ಅವನು ತನ್ನ ಅನಾರೋಗ್ಯ ಕಾರಣ ಕಾರ್ಯ ನಿರ್ವಹಿಸಲಿಲ್ಲ. ರಂಗ ಶಂಕರದ ಕೂಡುಜಗಲಿಗೂ ಅವನು ಬರುವುದ ನಿಲ್ಲಿಸಿದ್ದ. ಜುಟ್ಟಿ, ಉಮೇಶ, ನಂದ…ಇವರುಗಳು ಇಲ್ಲದ ಕೂಡು ಜಗಲಿ, ಯಾರಿದ್ದರೂ ಅಷ್ಟೇ…..

ಸಮುದಾಯದಿಂದ ತನ್ನ ಸಾಮಾಜಿಕ ಚಟುವಟಿಕೆಗಳನ್ನು ಪ್ರಾರಂಭಿಸಿದ ಉಮೇಶ, ನಂತರ ಸಿ ಜಿ ಕೆ ಆಪ್ತನಾಗಿ ಗುರುತಿಸಿಕೊಂಡು ರಂಗ ನಿರಂತರದಲ್ಲಿ ಕಾರ್ಯ ನಿರ್ವಹಿಸಿದ. ಸಿಜಿಕೆ ರಂಗ ಸಂಪದದಲ್ಲಿ ನಿರ್ದೇಶನ ಮಾಡಿದಾಗ ಅಲ್ಲಿಗೂ ಹೋದ. ರಂಗಭೂಮಿಯಲ್ಲಿ ಅನುಭವ ಇದೆ ಎಂದು ನಾವು ಸಮುದಾಯದಿಂದ ಕೊಟ್ಟ ಅನುಭವದ ಪತ್ರ, ಅವನನ್ನು ದೂರ ದರ್ಶನದ ಉದ್ಯೋಗಿಯನ್ನಾಗಿ ಮಾಡಿತು. ಆದರೆ ಅವನು ಕೇವಲ ದೂರ ದರ್ಶನದ ಉದ್ಯೋಗಿಯಾಗಿ ಉಳಿಯಲಿಲ್ಲ. ರಂಗಭೂಮಿಯಲ್ಲಿ ಯಾವುದೇ ಪ್ರಮುಖ ಕ್ರಿಯಾಶೀಲ. ಕಾರ್ಯಕ್ರಮಗಳು, ನಡೆದರೂ ಅಲ್ಲಿ ಉಮೇಶ ಒಂದಲ್ಲ ಒಂದು ವಿಭಾಗದಲ್ಲಿ ಗುರುತಿಸಿಕೊಂಡು ಇರುತಿದ್ದ….

ಅಪಾರ ಜನರನ್ನು ಸಂಪಾದಿಸಿದ್ದ ಉಮೇಶನಿಗೆ, ಯಾವ ಕೆಲಸವೂ, ಸಂಪರ್ಕವೂ ಅಸಾಧ್ಯವಾದುದಲ್ಲ…. ತನ್ನ ಶಕ್ತಿ ಮೀರಿ ಇತರರಿಗೆ ರಂಗ ಮತ್ತು ಕ್ರಿಯಾಶೀಲ ಸಹಾಯ ಮಾಡಿದ ಉಮೇಶ, ಇಂದು ಇಲ್ಲ ಎನ್ನುವುದು ನೋವಿನ ವಿಷಯವೇ. ಆದರೆ, ಅವನು ಬಳಲುತಿದ್ದ ರೀತಿಗೆ, ಸಮಾಧಾನದ ನಿಟ್ಟುಸಿರು ಬಿಡಬಹುದು.

ಸಾಕು ಕಣೋ ಉಮೇಶ…..

ನಿನ್ನ ಶಕ್ತಿ ಮೀರಿ ಕೆಲಸ ಮಾಡಿದ್ದೀಯ…

ಯಾರಿಗೂ ಕೇಡನ್ನೂ ಬಯಸಿಲ್ಲ…

ಇದು ನೀನು ನಿಜವಾಗಿಯೂ ವಿಶ್ರಮಿಸುವ ಗಳಿಗೆ..

ವಿಶ್ರಮಿಸು ಗೆಳೆಯಾ..

ನಿನ್ನ ನೋಡಲು ನಾನು ಬರಲಾರೆ, ಕ್ಷಮೆ ಇರಲಿ..

ಪ್ರೀತಿ,ಗೌರವಗಳಿಂದ


  • ಗುಂಡಣ್ಣ ಚಿಕ್ಕಮಗಳೂರು – ನವದೆಹಲಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW