ಶಿಕ್ಷೆಯೋ… ರಕ್ಷೆಯೋ… – ಅಮೃತ ಎಂ ಡಿ 



ಕಳೆದು ಹೋದ ಸಮಯ ಮತ್ತೆ ಬರುವುದಿಲ್ಲ.ಇಂದಿನ ಪೋಷಕರು ಮಕ್ಕಳಿಗೆ ಗೆಲ್ಲುವುದನ್ನ ಹೇಳಿಕೊಡುತ್ತಿದ್ದಾರೋ ಹೊರತು ಸೋತಾಗ ಬೇಕಾದ ಆತ್ಮವಿಶ್ವಾಸ ತುಂಬುತ್ತಿಲ್ಲ. ಶಿಕ್ಷಕಿ,ಚಿಂತಕಿ ಅಮೃತ ಎಂ ಡಿ  ಅವರಿಂದ ಒಂದು ಚಿಂತನ ಲೇಖನ, ಮುಂದೆ ಓದಿ…

21 ನೆ ಶತಮಾನದಲ್ಲಿ ಯಾರಿಗೆ ಯಾವ ತೆರವಾದ ಶಿಕ್ಷಣ ಕೊಡಬೇಕು ಎನ್ನುವುದಕ್ಕಿಂತ ಸ್ವಾಸ್ತ್ಯ ಸಮಾಜಕ್ಕೆ ಯಾವ ರೀತಿಯ ಕೊಡುಗೆ ಕೊಡಬೇಕು ಎನ್ನುವುದು ನನ್ನ ಪ್ರಶ್ನೆ. ಓಡುತ್ತಿರುವ ಕಾಲಘಟ್ಟದಲ್ಲಿ ಎಲ್ಲರೂ ಸಹ ಅತಿ ಬುದ್ಧಿವಂತರು, ಪ್ರಜ್ಞಾವಂತರು, ಎಲ್ಲ ಅವಕಾಶಗಳು ಅಂಗೈಯಲ್ಲಿಯೆ ಇರುತ್ತದೆ. ಹೇಗೆ ಬಳಸಬೇಕು, ಹೇಗೆ ಬೆಳಸಬೇಕು ಎಂಬ ವಿಚಾರ ತಿಳಿದಿರುವುದಿಲ್ಲ.

ಮಕ್ಕಳಿಗೆ ಬೌದ್ಧಿಕ ಬೆಳವಣಿಗೆಗೆ ನೀಡುವ ಸಹಕಾರ, ಅವರನ್ನು ವಿಚಾರವಂತರಾಗಿ ಮಾಡುತ್ತಿದೆಯಾ..? ಅಂಕ ಗಳಿಕೆಯಷ್ಟೇ ಅಲ್ಲ ಶಿಕ್ಷಣವೆಂದರೆ, ವಿದ್ಯೆ ಅಂಕಗಳಿಕೆಯೇ ಅಂಕಣವಲ್ಲ, ವಿನಯತೆ, ವಿನಮ್ರತೆಯ ಹೊದ್ದಿರುವ ಚಾದರವಾಗಬೇಕು, ಸುತ್ತಣ ನಿಂತ ನೂರು ಜನರಿಗೆ ನೆರಳಾಗುವ ಮಂಟಪವಾಗಬೇಕು, ಎಂದು ಬತ್ತದ ಜ್ಞಾನದ ಒರತೆಯಾಗಬೇಕು, ಎಲ್ಲರೊಳಗೆ ಬೆರೆತು ಕಲೆತು ಪ್ರಯಾಣಿಸುವ ಪಯಣವಾಗಬೇಕು.

ಕಳೆಯುವ ಸಮಯ ಕಳೆದು ಹೋಗುತ್ತದೆ, ಮತ್ತೆಂದೂ ಅದು ಹಿಂದುರುಗಿ ಬರವಲ್ಲದು, ಬದುಕ ಬಂಡಿ ಜಾರಿ ಹೋಗುತ್ತದೆ. ಮತ್ತೆಂದೂ ದಡ ಸೇರಲಾಗದು, ಸೇರಿದರು ಅವಿರತ ಹೋರಾಟದ ಫಲವದು. ಬಯಸಿದಂತೆ ಬೇಡಿಕೆಗಳ ಪೂರೈಸಿಕೊಂಡು ಬದುಕು ಕಟ್ಟುವ ಕಾಯಕವು, ಬೀಸುವ ಗಾಳಿಗೆ ಮೈಯ್ಯೊಡ್ಡಿ ಅದೆ ಗಾಳಿಯನ್ನು ಬೊಗಸೆ ತುಂಬಿಸಿಕೊಳ್ಳುವೆ ಎಂಬ ಅತಿಯಾಸೆಯೆ ಹೊರತು ಮತ್ತೇನು ಅಲ್ಲ.

ಫೋಟೋ ಕೃಪೆ : istockphoto

‘ಬದುಕು ಜಟಕಾ ಬಂಡಿ ವಿಧಿ ಅದರ ನಾಯಕ’ ಎಂಬುದು ಬಹಳ ಹಳೆಯ ಮತ್ತು ಅರ್ಥಬದ್ಧವಾದ ವ್ಯಾಖ್ಯಾನ. ಆದ್ರೆ ಇಂದು ಬದುಕು ಓಡುವ ಕುದುರೆ, ಲಗಾಮು ಹಾಕಿ ನಿಲ್ಲಿಸದೆ ಹೋದರೆ ಅಣಿ ತಪ್ಪಿದ ಆಲೋಚನೆಗೆ ತಡೆಗೋಡೆ ಕಟ್ಟಲಾಗದು.

ಇಂದಿನ ಮಕ್ಕಳ ಸ್ಥಿತಿ ಬಹಳ ಸೂಕ್ಷ್ಮ. ಇಂದಿನ ಪೋಷಕರು ಮಕ್ಕಳಿಗೆ ಗೆಲ್ಲುವುದನ್ನ ಹೇಳಿಕೊಡುತ್ತಿದ್ದಾರೋ ಹೊರತು ಸೋತಾಗ ಬೇಕಾದ ಆತ್ಮವಿಶ್ವಾಸ ತುಂಬುತ್ತಿಲ್ಲ. ಅವಶ್ಯಕತೆಗಳ ಪೂರೈಸಲು, ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶಾತಿ ಕೊಡಿಸಲು ಎಣೆಗಾಡುತ್ತಿದ್ದಾರೋ ಹೊರತು,ಮಗುವಿನ ಮನಸ್ಥಿತಿಯ ಅರಿಯುತ್ತಿಲ್ಲ. ಬಹಳ ಹಿಂದೆ ಕೂಡ ಸಾಲು ಸಾಲು ಪದವಿ ಪಡೆದವರು ಬೋಧಿಸುತ್ತಿರಲಿಲ್ಲ. ಆದರೆ ಅವರ ಬೋಧನೆಯಲ್ಲಿನ ಗುಣಮಟ್ಟವ ಇಂದು ಡಾಕ್ಟರೇಟ್ ಪಡೆದವರು ಕೂಡ ಬೋಧಿಸಲಾರರು.

ಬಹುವಾಗಿ ಕಾಡಿದ ಪ್ರಶ್ನೆ ನನಗೆ ಇದು, ಇಂದಿಗೂ ಉತ್ತರ ದಕ್ಕಿಲ್ಲ, ನಿಜವಾದ ಶಿಕ್ಷಣವೆಂದರೆ ಏನು..? ಪ್ರತಿಷ್ಟಿತ ಶಾಲೆಯಲ್ಲಿ ಪ್ರವೇಶ ಪಡೆದು, ಉನ್ನತ ಶ್ರೇಣಿಯಲ್ಲಿ ಪಾಸಾಗುವುದೇ..? ಅಂಕಗಳ ಬೆನ್ನತ್ತಿ ಹೋದವನಿಗೆ ಬದುಕಿನ ಮೇಲಿನ ಹಿಡಿತ ಎಂತದ್ದು..? ಹಿಂದಿನ ವಾರ್ತಾ ಪತ್ರಿಕೆಯ ತಿರುಗಿ ಹಾಕಿದರೆ ಬಹುಶಃ ಅರಿವಾಗಬಹುದು, ಮಕ್ಕಳ ಮನಸ್ಥಿತಿ ಎಂಥದ್ದು. ಸಣ್ಣ ಬೈಗುಳ,ಒಂದು ಚಿಕ್ಕ ಸೋಲನ್ನು ಎದುರಿಸಲಾಗದೆ ಆತ್ಮಹತ್ಯೆಗೆ ಶರಣಾದವ್ರು ಎಷ್ಟು ಜನ. ಹದಿಹರೆಯದವರು ಸ್ವತಃ ಸಾವಿಗೆ ಹೀಡಾದರೆ ಅದು ಅವರ ತಪ್ಪಲ್ಲ, ಮಕ್ಕಳ ಮನಸ್ಥಿತಿಯ ಮೇಲೆ ಬಿದ್ದ ಬಲವಾದ ಪೆಟ್ಟಿನ ಗುರುತರವದು..

ಫೋಟೋ ಕೃಪೆ: indianyouth

ಮನಸ್ಸಿನ್ನು ಪಕ್ವವಾಗುವ ಕಾಲವದು, ಸರಿ ತಪ್ಪಿನ ವಿಶ್ಲೇಷಣೆ ತಿಳಿಯದ ಮರುಳತನದ ಮಬ್ಬು ಆವರಿಸಿರುತ್ತದೆ. ಆ ಮರುಳತನಕ್ಕೆ ಪೆಟ್ಟು ಬಿದ್ದರೆ ಬರುವ ಫಲಿತಾಂಶ ಊಹೆಗೂ ನಿಲುಕದ್ದು. ಶಿಕ್ಷಣ ಲೋಕಜ್ಞಾನಕ್ಕೆ ಅವಶ್ಯಕ ಆದರೆ, ಶಿಕ್ಷಣದಲ್ಲಿನ ಪಯಣ ಆರೋಗ್ಯಕರವಾಗಿರಬೇಕು. ಕೇವಲ ಪಠ್ಯವನ್ನು, ಅಲ್ಲಿರೋ ಪ್ರಶ್ನೆಗಳಿಗೆ ಉತ್ತರಿಸುವವ ಬುದ್ಧಿವಂತನಿರಬಹುದು.. ಆ ಬುದ್ಧಿವಂತನಿಗೆ ಮಿಡಿಯುವ ಮನಸ್ಸಿಲ್ಲದಿದ್ದರೆ ಸಾಲು ಸಾಲು ಪದವಿ ಪಡೆದುದ್ದರ ಸಾರ್ಥಕತೆ ಏನು..?

ನಾ ಕೂಡ ಕಲಿತ ಶಿಕ್ಷಣ ಪ್ರಶ್ನೆಗೆ ಉತ್ತರ ಬರೆದೂ. ಪ್ರಥಮ ದರ್ಜೆಯಲ್ಲಿ ಉತ್ತೀರ್ಣವಾಗಿಯೇ. ನೈತಿಕತೆ ಪಾಠ ಎಲ್ಲಿ ಸಿಕ್ಕಿತು ಹೇಗೆ ಸಿಕ್ಕಿತು, ಬಹುಶಃ ಹೈ ಸ್ಕೂಲ್ ಶಾಲಾ ಅಂಗಳದಲ್ಲಿ ಕಲಿತ , ಕಲಿಸಿದ ಆ ಗುರುಗಳಿಗೆ ಒಂದು ನಮನ.. ಇಂದಿನ ವ್ಯಕ್ತಿತ್ವದ ರೂಪುಗಾರಿಕೆ ಆ ಪ್ರೌಢಾವಸ್ಥೆಯ ಶಿಕ್ಷದಲ್ಲಿಯೆ ಸಿಕ್ಕಿದ್ದು..

ಓದು ಓದು ಎಂದರೆ ಮಗು ಯಂತ್ರದಂತೆ ಆಗಿಬಿಡುತ್ತದೆ. ಓದಿನ ವಿಷಯದಲ್ಲಿ ಒತ್ತಡ ಏರದಂತೆ, ಮಗುವಿಗೆ ಆಗು- ಹೋಗುಗಳ ಪರಿಚಯಿಸಿ ಕೊಡಬೇಕು ಯಾರು ಸಹ ಪರಿಪೂರ್ಣ ಬದುಕನ್ನು ಬದುಕಲು ಸಾಧ್ಯವೇ ಇಲ್ಲ, ಆದ್ರೆ ಪರಿಪೂರ್ಣತೆಯ ಕಡೆಗೆ ಸಾಗಬಹುದಲ್ಲವೇ..? ಮೊದಲು ಕರಗುವ ಕಾರುಣ್ಯವಿರಬೇಕು, ವಿನಯತೆ ಇದ್ದ ಕಡೆ ವಿದ್ಯೆ ಬಂದೆ ಬರುತ್ತದೆ. ಮಗುವಿಗೆ ಯಾವ ಶಾಲೆಯಲ್ಲಿ, ಇಷ್ಟು ಫೀ ಕಟ್ಟಿ ಓದಿಸುವೆ, ನನ್ನ ಮಗ/ಮಗಳು ಶಾಲೆಗೆ ಮೊದಲು ಎಂಬ ಖುಷಿಯ ಜೊತೆಗೆ, ನನ್ನ ಮಕ್ಕಳಿಗೆ ಮಾನವೀಯತೆ ಬೆಲೆ ತಿಳಿದಿದೆ, ಹಣ ಕಾಸಿನ ಬೆಲೆ ತಿಳಿದಿದೆ, ಮತ್ತೊಬ್ಬರ ಕಷ್ಟಕ್ಕೆ ಮಿಡಿಯುವ ಅಂತಃಕರಣವಿದೆ, ಹಿರಿಯ ಕಿರಿಯರನ್ನು ಗೌರವಿಸುವ, ಪ್ರೀತಿಸುವ ಉದಾತ್ತ ಗುಣವಿದೆ ಎಂದು ಹೇಳಿ.



ನನ್ನ ಪ್ರಕಾರ ಶಿಕ್ಷಣ ಎಂದರೆ ಒಂದೆಡೆ ಕ್ರೋಡಿಕರಿಸುವ ಅಂಕಪಟ್ಟಿಯಲ್ಲಿನ ಶ್ರೇಣಿಗಳ ಲೆಕ್ಕ ಹಾಕುವುದಲ್ಲ. ನೂರು ಸಲ ಸೋತರು ನೂರನೆ ಒಂದು ಸಲ ಗೆಲ್ಲುವ ಹಠ ತುಂಬುವುದು. ನನ್ನ ಪ್ರಕಾರ ಶಿಕ್ಷಣ ಎಂದರೆ ಗಂಟೆಗಟ್ಟಲೆ ಪುಸ್ತಕದಲ್ಲಿನ ಪಠ್ಯ ಗಟ್ಟು ಹೊಡೆದು ಒಪ್ಪಿಸಿ ಶಬಾಸ್ ಗಿರಿ ತೆಗೆದುಕೊಳ್ಳುವುದಲ್ಲ, ಪಾತಾಳಕ್ಕೆ ಬದುಕು ಕುಸಿದರು ಮೇಲೆ ಜಿಗಿದು ನಗುವ ಆತ್ಮವಿಶ್ವಾಸದ ಬುಟ್ಟಿ.
ನನ್ನ ಪ್ರಕಾರ ಶಿಕ್ಷಣ ಎಂದ್ರೆ ನಾಲ್ಕು ಗೋಡೆಯ ನಡುವೆ ನಾಲ್ಕು ವಿಷಯಗಳ ಕಂಠಪಾಠ ಮಾಡುವುದಲ್ಲ, ಬದುಕಿನ ಏರಿಳಿತದಲ್ಲಿ ಕುಗ್ಗದೆ ಹಿಗ್ಗದೆ ನಡೆಯುವುದು..

ಒಂದು ಹೊಸ ಬೆಳಕು ಮೂಡಿಸುವ ಹೊಸ ಜಗತ್ತಿನಲ್ಲಿ ಹೊಸದಾಗಿ ಶುರು ಆಗುತ್ತಿರುವ ಹೊಸ ವೃತ್ತಿಯಲ್ಲಿ ಶಿಕ್ಷಣವೆಂದರೆ ಶಿಕ್ಷೆಯಲ್ಲ ರಕ್ಷೆ ಎನ್ನುವುದನ್ನು ಮನವರಿಕೆ ಮಾಡಲು ಹೊರಟ ಪಯಣ..


  • ಅಮೃತ ಎಂ ಡಿ  (ಗಣಿತ ಶಾಸ್ತ್ರ ವಿಭಾಗ ಸ್ನಾತಕೋತ್ತರ ಪದವೀಧರೆ ,ಯುವ ಕವಿಯತ್ರಿ, ಲೇಖಕಿ, ಶಿಕ್ಷಕಿ)

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW