‘Selfi ಮಮ್ಮಿ Google ಡ್ಯಾಡಿ’ – ಎನ್.ವಿ.ರಘುರಾಂಆರ್ಭಟ ಸಿನಿಮಾಗಳ ಮಧ್ಯೆ ಸಿಂಪಲ್ ಕತೆ, ಉತ್ತಮ ಸಂದೇಶವಿರುವ ‘Selfi ಮಮ್ಮಿ Google ಡ್ಯಾಡಿ’ ಚಿತ್ರದ ಬಗ್ಗೆ ಲೇಖಕ ಎನ್.ವಿ.ರಘುರಾಂ ಅವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ, ಮುಂದೆ ಓದಿ…

‘Selfi ಮಮ್ಮಿ Google ಡ್ಯಾಡಿ’ ಹೆಸರಿನಲ್ಲಿಯೇ ಇದು ಮೊಬೈಲ್ ವಿಷಯದ ಬಗ್ಗೆ ಎಂದು ಊಹಿಸಬಹುದು. ಹೌದು! ಅದು ಸ್ವಲ್ಪ ಮಟ್ಟಿಗೆ ನಿಜ ಕೂಡ. ಅಂದಹಾಗೆ ಈಗ ಮೊಬೈಲ್ ಇಲ್ಲದವರು ಯಾರು? ಅದೀಗ ಸರ್ವವ್ಯಾಪಿ. ಆಕಸ್ಮಾತ್ ಊಟ, ತಿಂಡಿ, ನಿದ್ದೆ ಇವುಗಳಲ್ಲಿ ವ್ಯತ್ಯಾಸ ಆದರೂ ತಡೆದುಕೊಳ್ಳಬಹುದು. ಆದರೆ ಸ್ವಲ್ಪ ಕಾಲ ನೆಟ್‌ವರ್ಕ್ ಇಲ್ಲದೇ ಹೋದರೆ ಪ್ರಪಂಚದಿಂದಲೇ ದೂರ ಹೋದ ಬಾವ ಆವರಿಸಿ ಚಡಪಡಿಸುವ ಜನರು ಈಗ ಸಾಮಾನ್ಯ. ಏಕಂದರೆ ಆ ಮೊಬೈಲ್ನಲ್ಲಿ ಈಡೀ ಪ್ರಪಂಚವೇ ಅಡಗಿದೆ! ಹಾಗಾಗಿ ನಮ್ಮ ಜೀವನವೂ ಮೊಬೈಲ್ ನ ಸುತ್ತ ಸುತ್ತುತ್ತಿರುತ್ತದೆ.

ಫೋಟೋ ಕೃಪೆ :ottplay

ಈ ಮೊಬೈಲ್ ಸ್ವಾತ್ರಂತ್ರ್ಯ ಹೋರಾಟದ ಕಾಲದಲ್ಲೇ ಬಂದಿದ್ದರೆ, ಆಗ ಗಾಂಧೀಯವರು ಒಂದು ಸಂದೇಶ ಮೊಬೈಲ್ನಲ್ಲಿ ಕೊಟ್ಟಿದ್ದರೆ ಏನಾಗಬಹುದಿತ್ತು ಎಂದು ಯೋಚಿಸಿ ನೋಡಿ. ಈ ತರಹದ ದೃಶ್ಯವೊಂದರಿಂದ ಪ್ರಾರಂಭವಾಗುವ ಸಿನಿಮಾ ಮೊದಲ ದೃಶ್ಯದಿಂದಲೇ ಪ್ರೇಕ್ಷಕರನ್ನು ನಗಿಸಲು ಪ್ರಾರಂಭ ಮಾಡುತ್ತದೆ. ಅದರ ಜೊತೆಗೆ ನಾವುಗಳೆಲ್ಲರೂ ಮೊಬೈಲ್ ದಾಸ್ಯರಾಗಿರುವುದನ್ನು ಹಾಸ್ಯದ ಮೂಲಕ ಅನಾವರಣ ಮಾಡುತ್ತಾ ಹೋಗುತ್ತದೆ. selfi ಗೀಳಿನ ಮಮ್ಮಿಯ ಮೂಲಕ ಸಾಮಾಜಿಕ ಜಾಲತಾಣಗಳ ಶಕ್ತಿಯ ಪರಿಚಯ ಮಾಡಿದರೆ, google ಮೂಲಕ ಪ್ರಪಂಚವನ್ನು ನೋಡುವ ಡ್ಯಾಡಿಯ ಮೂಲಕ ಇಂಟರ್ನೆಟ್ ಶಕ್ತಿ ಪರಿಚಯಿಸಿತ್ತಾರೆ ನಿರ್ದೇಶಕರು. ಈ ‘selfi ಮಮ್ಮಿ google ಡ್ಯಾಡಿ’ ಮಕ್ಕಳು ಮೊಬೈಲ್ ಗೇಮ್ಸೇ ಗೀಳು ಅಂಟಿಸಿಕೊಳ್ಳುವುದರಲ್ಲಿ ಆಶ್ಚರ್ಯವೇನು? ಆ ಗೀಳು ಗೊತ್ತಾಗುವುದು ಕೂಡ ಶಾಲೆಯ ಮುಖ್ಯೋಪಾಧ್ಯಾಯಿನಿ ಮೂಲಕ. ನಂತರ ಮಕ್ಕಳ ಮೊಬೈಲ್ ಗೀಳು ಬಿಡಿಸುವ ಅಪ್ಪ, ಅಮ್ಮನ ಪ್ರಯತ್ನವನ್ನು ಬುದ್ಧಿವಂತಿಕೆಯಿಂದ ವಿಫಲಗೊಳಿಸುವ ಮಕ್ಕಳು ಪ್ರತಿ ದೃಶ್ಯದಲ್ಲೂ ಪ್ರೇಕ್ಷಕರನ್ನು ಸೆರೆಹಿಡಿದಿಡುತ್ತಾರೆ. ಇದರ ಜೊತೆಗೆ ಟಿ.ವಿ. ಧಾರವಾಹಿಗಳ ದಾಸರಾಗಿರುವ ಅಜ್ಜ, ಅಜ್ಜಿಯರ ಕಥೆ ಇದರ ಜೊತೆ ಮಿಳಿತವಾಗಿ ಹಾಸ್ಯದ ರಸಾಯನವೇ ಬಡಿಸುತ್ತದೆ. ತಮ್ಮ ಎಲ್ಲಾ ಪ್ರಯತ್ನ ವಿಫಲವಾದಾಗ ಅಪ್ಪ, ಅಮ್ಮ ‘ಮೊಬೈಲ್ ಡಿ ಅಡಿಕ್ಷನ್ ಸೆಂಟರ್’ಗೆ ಮಕ್ಕಳನ್ನು ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಯಾರು ಅಡ್ಮಿಟ್ ಆದರು? ಅವರ ಪ್ರಯತ್ನಕ್ಕೆ ಫಲ ಸಿಕ್ಕಿತೆ? ಇದೆಲ್ಲವನ್ನು ಸಿನಿಮಾದಲ್ಲಿಯೇ ನೋಡಿ ಆನಂದಿಸಬೇಕು.

ಮಧುಚಂದ್ರ ನಿರ್ದೇಶನದ ಈ ಸಿನಿಮಾದಲ್ಲಿ ಗೂಗಲ್ ಡ್ಯಾಡಿಯಾಗಿ ಸೂರ್ಯನ ಪಾತ್ರ ಮಾಡಿರುವ ಸೃಜನ್ ಲೊಕೇಶ್ ಸಂಯಮದ ಅಭಿನಯ ನೀಡಿದ್ದಾರೆ. Selfi ಮಮ್ಮಿಯಾಗಿ ಶಾಲೂ ಪಾತ್ರದಲ್ಲಿ ಮೇಘನರಾಜ್ ಬಹಳ ಕಾಲ ಮನದಲ್ಲಿ ಉಳಿಯುವ ಅಮೋಘ ಅಭಿನಯ ಮಾಡಿದ್ದಾರೆ. ದತ್ತಣ್ಣ ಮತ್ತು ಗಿರಿಜಾ ಲೊಕೇಶ್ ‘ಧಾರಾವಾಹಿಗಳಲ್ಲಿ ಮುಳುಗಿರುವ’ ಪಾತ್ರಗಳಲ್ಲಿ ಎಂದಿನ ಸಹಜ ಅಭಿನಯ ಮಾಡಿದ್ದಾರೆ. ಮಕ್ಕಳ ಪಾತ್ರದಲ್ಲಿ ಬೇಬಿಶ್ರೀ, ಮಾಸ್ಟರ್ ಅಲಾಪ್, ಮಾಸ್ಟರ್ ಸಮರ್ಥ ಅತ್ಯಂತ ಸಹಜವಾಗಿ ನಟಿಸಿದ್ದಾರೆ. ಮುಂದಿನ ‘ಸ್ಟಾರ್ಸ’ ಇವರಾದರೆ ಏನೂ ಆಶ್ಚರ್ಯವಿಲ್ಲ.ಅಚ್ಯುತ್ ಕುಮಾರ್ ಸ್ವಲ್ಪ ದೈಹಿಕವಾಗಿ ಸೊರಗಿದಂತೆ ಕಂಡರೂ ನಟನೆಯಲ್ಲಿ ಎಂದಿನಂತೆ ಅದ್ಬುತ. ಹಿತಮಿತವಾದ ಸಂಗೀತ, ಅಚ್ಚುಕಟ್ಟಾದ ಛಾಯಾಗ್ರಹಣ ಸಮ್ಮಿಳನವಿದೆ ಈ ಸಿನಿಮಾದಲ್ಲಿ.
ಮಕ್ಕಳ ಮೊಬೈಲ್ ಗೇಮ್ಸ್ ಗೀಳಿನ ಬಗ್ಗೆ ಮೇಲಿನ ಹೊದಿಕೆ ಇರುವ ಸಿನಿಮಾ, ಕುಟುಂಬದಲ್ಲಿನ ಸಂಬಂಧಗಳು ಹೇಗೆ ಈ ತಂತ್ರಜ್ಞಾನದ ಯುಗದಲ್ಲಿ ಮಾರ್ಪಡಾಗಿದೆ ಎಂದು ತಿಳಿಸುತ್ತಾ ಸಂಬಂಧಗಳ ಸುಧಾರಣೆಗೆ ಪ್ರಯತ್ನ ಮಾಡುವುದರ ಬಗ್ಗೆ ಗಮನ ಹರಿಸುವಂತೆ ಹಾಸ್ಯದ ಮೂಲಕ ತಿಳಿ ಹೇಳಿದೆ. ಆಕಾಶಬುಟ್ಟಿ ಸಿನಿಮಾಸ್ ನಿರ್ಮಿಸಿರುವ ಈ ಚಿತ್ರ ಮನೆಮಂದಿಯಲ್ಲಾ ಕೂತು ಸಂತೋಷದಿಂದ ನೋಡುವ ಒಂದಿಷ್ಟು ಒಳ್ಳೆಯ ಸಂದೇಶ ಇರುವ ಚಿತ್ರ. ಮರೆಯದೇ ಬೆಳ್ಳಿ ತೆರೆಯ ಮೇಲೆ ನೋಡಿ, ಮರೆತು ನಿರಾಶರಾಗದಿರಿ!


  • ಎನ್.ವಿ.ರಘುರಾಂ . (ನಿವೃತ್ತ ಅಧೀಕ್ಷಕ ಅಭಿಯಂತರ (ವಿದ್ಯುತ್ ), ಕ.ವಿ.ನಿ.ನಿ, ಬೆಂಗಳೂರು)

 

5 2 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW