ಫಿಟ್ಸ್ ಅಪಾಯಕಾರಿಯಲ್ಲ, ಮುನ್ನೆಚ್ಚರಿಕೆ ಇರಲಿ



ಮೂರ್ಛೆ ರೋಗ, ಮಲರೋಗ, ಫಿಟ್ಸ್ ಅಥವಾ “ಅಪಸ್ಮಾರ” ವ್ಯಾಧಿಯ ಬಗ್ಗೆ ಅನೇಕ ತಪ್ಪುಕಲ್ಪನೆಗಳಿವೆ. ವಿಶ್ವವಿಖ್ಯಾತ ವ್ಯಕ್ತಿಗಳಾಗಿದ್ದ ಪೈಥಾಗರಸ್, ಅರಿಸ್ಟಾಟಲ್, ಲಿಯೋನಾರ್ಡೋ ಡಾ ವಿಂಚಿ ಮುಂತಾದವರೂ ಅಪಸ್ಮಾರದಿಂದ ಬಳಲಿದ್ದರೂ, ಮಹೋನ್ನತ ಸಾಧನೆಗಳಿಗೆ ಅಪಸ್ಮಾರವು ಎಂದೂ ತೊಡಕಾಗಿರಲಿಲ್ಲ ಎನ್ನುವ ಸತ್ಯವೂ ಭಾರತೀಯರಿಗೆ ತಿಳಿದಿಲ್ಲ. ಈ ವ್ಯಾಧಿಯ ಕುರಿತು ಮಹತ್ವದ ಮಾಹಿತಿಯನ್ನು ಆಕೃತಿಕನ್ನಡ ಓದುಗರಿಗೆ ತಿಳಿಸಿಕೊಟ್ಟಿದ್ದಾರೆ ಡಾ. ಪ್ರಕಾಶ ಬಾರ್ಕಿಯವರು. ಓದಿ ತಪ್ಪದೆ ಶೇರ್ ಮಾಡಿ…

ಸಹಸ್ರಾರು ವರ್ಷಗಳ ಹಿಂದೆ ಆಯುರ್ವೇದ ವೈದ್ಯ ಶಾಸ್ತ್ರದಲ್ಲಿ ವಿಸ್ತ್ರತವಾಗಿ ಉಲ್ಲೇಖಿಸಲ್ಪಟ್ಟಿರುವ “ಅಪಸ್ಮಾರ” ಎನ್ನುವ ಕಾಯಿಲೆಯನ್ನು ಆಡುಭಾಷೆಯಲ್ಲಿ #ಮೂರ್ಛೆ_ರೋಗ, ಮಲರೋಗ ಅಥವಾ ಫಿಟ್ಸ್ ಎಂದು ಕರೆಯುವರು.

ಇಂಗ್ಲೀಷನಲ್ಲಿ ಎಪಿಲೆಪ್ಸಿ ( Epilepsy), ಸೀಜರ್ (Siezure) ಎನ್ನುವರು.

ಅಪಸ್ಮಾರ ನರವ್ಯೂಹದ 4 ನೆ ಮುಖ್ಯವಾದ ಕಾಯಿಲೆಯಾಗಿದ್ದು, ಯಾವ ವಯಸ್ಸಿನಲ್ಲಾದರೂ ಭಾದಿಸಬಹುದು. ಸಮಾಜದಲ್ಲಿ ಅಪಸ್ಮಾರದ ಬಗೆಗಿನ ತಪ್ಪು ತಿಳುವಳಿಕೆಗಳಿಂದ, ಜನರು ಈ ಸಮಸ್ಯೆ ಬಗ್ಗೆ ಮಾತನಾಡಲು ಹಿಂದಡಿಯಿಡುತ್ತಾರೆ. ಅಪಸ್ಮಾರ ಹೊಂದಿದವರು ಮಾನಸಿಕವಾಗಿ ಕುಗ್ಗಿ, ಖಿನ್ನತೆಗೆ ಒಳಗಾಗುತ್ತಾರೆ.

ಅಪಸ್ಮಾರ ಎಂಬುದು ಸಾಮಾನ್ಯ ಕಾಯಿಲೆ. ಇದು ಶಾಪವಲ್ಲ. ಸೂಕ್ತ ಚಿಕಿತ್ಸೆ ಹಾಗೂ ವೈದ್ಯಕೀಯ ನೆರವಿನಿಂದ ಸಂಪೂರ್ಣವಾಗಿ ಗುಣಪಡಿಸಬಹುದು. ಆದ್ರೆ ಆತ್ಮವಿಶ್ವಾಸ ಹಾಗೂ ಮನೋಬಲ ನಿಮ್ಮಲ್ಲಿ ಇರಬೇಕು. ಸೂಕ್ತ ಚಿಕಿತ್ಸೆ , ಔಷಧ ಮೂಲಕ ಇದನ್ನು ನಿವಾರಿಸಬಹುದು.

ವಾಸ್ತವದಲ್ಲಿ ಅಪಸ್ಮಾರ ಒಂದು ಪ್ರತ್ಯೇಕ ರೋಗವೆ ಅಲ್ಲ. ಅದು ಮೆದುಳಿನ ರೋಗ ಲಕ್ಷಣ. ಮೆದುಳಿನ ನರಗಳ ಚಟುವಟಿಕೆಗಳಲ್ಲಿ ಉಂಟಾಗುವ ಏರುಪೇರು ಅಥವಾ ಅವ್ಯವಸ್ಥೆಯಿಂದ ಆಗುವ ತೊಂದರೆ.

ವಿಶ್ವದಾದ್ಯಂತ 65 ಮಿಲಿಯನ್ ಜನರು ಅಪಸ್ಮಾರದಿಂದ ಬಳಲುತ್ತಿದ್ದಾರೆ.

[ಪ್ರತಿವರ್ಷ ನವೆಂಬರ್ 17 ರಂದು ಭಾರತ‌ ದೇಶದಲ್ಲಿ ಅಪಸ್ಮಾರ ಖಾಯಿಲೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ರಾಷ್ಟ್ರೀಯ ಅಪಸ್ಮಾರ ದಿನವೆಂದು ಆಚರಿಸುವರು]

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರ್ಚ್ 26 ರಂದು “ಪರ್ಪಲ್ ದಿನ”(Purple Day) ಎಂದು ಆಚರಿಸಿ “ಅಪಸ್ಮಾರ”ದ ಬಗ್ಗೆ ಜಾಗೃತಿಯನ್ನ ವಿಶ್ವದಾದ್ಯಂತ ಮಾಡಲಾಗುತ್ತಿದೆ. ತನ್ನಿಮಿತ್ತ ಈ ಲೇಖನ

ಅಪಸ್ಮಾರ ಎಂದರೇನು?

ಆರೋಗ್ಯವಂತ ವ್ಯಕ್ತಿಗಳ ಮೆದುಳಿನಲ್ಲಿ ಸಾಮಾನ್ಯವಾಗಿ ಸೂಕ್ಷ್ಮ ಪ್ರಮಾಣದ ವಿದ್ಯುತ್ ತರಂಗಗಳು ಉತ್ಪಾದನೆಯಾಗುತ್ತವೆ. ನಿಯಮಿತ ಪ್ರಮಾಣದಲ್ಲಿ ಉತ್ಪನ್ನವಾಗುವ ಈ ವಿದ್ಯುತ್ ಪ್ರವಾಹದ ನೆರವಿನಿಂದ ಮೆದುಳಿನ ಕಣಗಳು ನಮ್ಮ ದೇಹದ ವಿವಿಧ ರೀತಿಯ ನಿಯಂತ್ರಣ ಕ್ರಿಯೆಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತವೆ.

ಮೆದುಳಿನಲ್ಲಿ ಉಂಟಾಗುವ ವಿದ್ಯುತ್ ತರಂಗಗಳ ಪ್ರವಾಹದಲ್ಲಿ ಒಮ್ಮೇಲೆ ಏರುಪೇರಾಗಿ, ಕ್ಷಿಪ್ರಗತಿಯಿಂದ ಬಿಡುಗಡೆಯಾಗುವ ತೀವ್ರಗತಿಯ ವಿದ್ಯುತ್ ತರಂಗಗಳಿಂದಾಗಿ ದೇಹದಲ್ಲಿ ಉಂಟಾಗುವ “ಸೆಳೆತ”(Seizure)ವನ್ನ”ಅಪಸ್ಮಾರ”(Epilepsy)ಎನ್ನುವರು.

  • ಅಪಸ್ಮಾರ (Epilepsy) ಅಂದರೆ ಸೆಳೆವು(Siezure) ಬರುವ ಮೆದುಳಿನ ರೋಗಗ್ರಸ್ತ ಸ್ಥಿತಿ.
  • ಮೆದುಳಿನ ನರವ್ಯೂಹಗಳ (Neuron) ಮಧ್ಯೆ ಉಂಟಾಗುವ ವಿದ್ಯುತ್ ತರಂಗಗಳ ಅಡಚಣೆಯೇ ಸೆಳವು(Siezure).
    ಅಪಸ್ಮಾರ ರೋಗಗಕ್ಕಿಂತ ಅದರ ಬಗೆಗೆ ಜನಸಾಮಾನ್ಯರಲ್ಲಿರುವ ತಪ್ಪು ತಿಳಕವಳಿಕೆಗಳು ಅಪಾಯಕಾರಿಯಾಗಿವೆ.

ಅಪಸ್ಮಾರ ಹೊಂದಿದ ವ್ಯಕ್ತಿಗಳಲ್ಲಿ ಪ್ರಜ್ಞೆ ಸಂಪೂರ್ಣ ಅಥವಾ ಅರ್ಧ ಕಳೆದುಕೊಂಡಿರುತ್ತಾರೆ. ಸೆಳವು 30 ಸೆಕೆಂಡುಗಳಿಂದ 1 ನಿಮಿಷದವರೆ ಮಾತ್ರ ಇದ್ದರೂ ತೀವ್ರವಾಗಿರತ್ತೆ.

ಫೋಟೋ ಕೃಪೆ : Times of India

ಅಪಸ್ಮಾರದ ಲಕ್ಷಣಗಳು : 

ಅಪಸ್ಮಾರದ ವಿವಿಧ ಪ್ರಭೇದಗಳಿಗೆ ಅನುಗುಣವಾಗಿ ವಿಭಿನ್ನ ಲಕ್ಷಣಗಳು ಕಂಡುಬರುತ್ತವೆ. ಆದರೆ ಸಾಮಾನ್ಯವಾಗಿ ಕಂಡುಬರುವ ಲಕ್ಷಣಗಳು ಇಂತಿವೆ.

ಸಾಮಾನ್ಯ ಅಪಸ್ಮಾರದ ರೋಗಿಗಳಲ್ಲಿ ಕೈಕಾಲುಗಳು ನಡುಗುವುದು ಅಥವಾ ಮೈ ಝುಮ್ ಎನಿಸುವುದು. ಶರೀರದಲ್ಲಿ ವಿದ್ಯುತ್ ಪ್ರವಹಿಸಿದಂತಹ ಸಂವೇದನೆ ಉಂಟಾಗಿ, ಏನೆನ್ನೋ ಕಂಡಂತೆ- ಪ್ರಖರವಾದ ಬೆಳಕು ಝಗಝಗಿಸಿದಂತೆ , ಶಬ್ಧ ಕೇಳಿಸಿದಂತೆ ಹಾಗೂ ಕಾರಣವಿಲ್ಲದೆ ತೀವ್ರ ಭಯಪೀಡಿತರಾದಂತೆ ಮತ್ತು ಕೆಲವರಿಗೆ ಹೊಟ್ಟೆಯಲ್ಲಿ ಚಿಟ್ಟೆಗಳು ಹಾರಾಡಿದಂತೆ ಅನಿಸುವುದು, ಕೆಲವರಿಗೆ ಮೂಗಿನಲ್ಲಿ ಘಾಟು ವಾಸನೆ ಬಂದಂತಾಗುವುದು. ತಲೆನೋವು, ಕಣ್ಣುಗಳು ಮಂಜಾಗುವುದು, ಸಂವೇದನೆಗಳಲ್ಲಿ ಬದಲಾವಣೆ,ತಲೆ ತಿರುಗುವಿಕೆ, ವಾಕರಿಕೆ, ಜಾಗೃತಿ ಅಥವಾ ಅರಿವಿಲ್ಲದಂತಾಗುವುದು, ಅತಿಯಾಗಿ ಬೆವರುವಿಕೆ, ಉಸಿರಾಟದ ತೊಂದರೆ ಇತ್ಯಾದಿ ಲಕ್ಷಣಗಳು ಕಂಡುಬರುವುದುಂಟು.

ಸಂಕೀರ್ಣ ಅಪಸ್ಮಾರದಲ್ಲಿ( Complex siezures) ರೋಗಿಯು ಗೊಂದಲಕ್ಕೆ ಒಳಗಾದಂತೆ ವರ್ತಿಸುವುದು, ತನ್ನಷ್ಟಕ್ಕೆ ತಾನೇ ಗೊಣಗುವುದು, ಮೈಮೇಲಿನ ಬಟ್ಟೆಗಳನ್ನು ಎಳೆದಾಡುವುದು- ಹರಿಯುವುದು ಹಾಗೂ ಬಾಯಿ ಚಪ್ಪರಿಸುವುದು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕೆಲರೋಗಿಗಳಂತೂ ಕ್ಷಣಮಾತ್ರದಲ್ಲಿ ನೆಲಕ್ಕುರುಳಿ, ಕೈಕಾಲುಗಳನ್ನು ಸೆಟೆದುಕೊಳ್ಳುತ್ತಾ, ಹಲ್ಲುಗಳನ್ನು ಕಡಿಯುತ್ತಾ , ಬಾಯಿಯಿಂದ ಜೊಲ್ಲು- ನೊರೆಯನ್ನು ಸುರಿಸಿ ಒಂದೆರಡು ಕ್ಷಣಗಳಲ್ಲೇ ಪ್ರಜ್ಞಾಹೀನರಾಗುತ್ತಾರೆ. ಈ ಸಂದರ್ಭದಲ್ಲಿ ರೋಗಿ ತನ್ನ ನಾಲಗೆಯನ್ನು ಕಚ್ಚಿದಲ್ಲಿ ತೀವ್ರ ರಕ್ತಸ್ರಾವ ಸಂಭವಿಸುವ ಸಾಧ್ಯತೆಗಳಿವೆ. ಇಂತಹ ಲಕ್ಷಣಗಳೊಂದಿಗೆ ಕೆಲರೋಗಿಗಳು ತಮಗರಿವಿಲ್ಲದೇ ಮಲಮೂತ್ರಗಳನ್ನು ವಿಸರ್ಜಿಸುವುದು ಅಪರೂಪವೇನಲ್ಲ.

“ಸ್ಟೇಟಸ್ ಎಪಿಲೆಪ್ಟಿಕಸ್” (status epileptic) ಎನ್ನುವ ಗಂಭೀರ ಸ್ಥಿತಿಯಲ್ಲಿ, ಅಪಸ್ಮಾರದ ಸೆಳೆತಗಳು ತಾವಾಗಿ ಶಮನಗೊಳ್ಳದೇ ತುಸು ದೀರ್ಘಕಾಲ ಬಾಧಿಸುವುದರಿಂದ, ರೋಗಿಯ ಪ್ರಾಣಕ್ಕೆ ಸಂಚಕಾರ ಬರುವುದುಂಟು. ಇಂತಹ ರೋಗಿಗಳಲ್ಲಿ ತಡ ಮಾಡದೆ, ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡುವುದು ಪ್ರಾಣಾಪಾಯದಂತೆ ಪಾರುಮಾಡಿದಂತೆ.

ಫೋಟೋ ಕೃಪೆ :health.clevelandclinic

ಕೆಲವು ಮಕ್ಕಳಲ್ಲಿ ಜ್ವರದ ತಾಪಮಾನ ಹೆಚ್ಚಾದಾಗ ಕಣ್ಣುಗಡ್ಡೆ ಮೆಲ್ಗಡೆ ತಿರುಗಿಸಿ, ಕೈ- ಕಾಲು ಅದರುವುದರ ಜೊತೆ ಅಪಸ್ಮಾರದ ಲಕ್ಷಣಗಳು ಕಂಡುಬರುತ್ತವೆ, ಇದನನ್ನ “ಫೆಬ್ರೈಲ್ ಕನ್ವಲ್ಶನ್” (Febrile convulsion) ಎನ್ನುವರು. ಇದು ನಿಜವಾದ ಮೂರ್ಛೆ ರೋಗವಲ್ಲ.

#ಪ್ರಥಮ_ಚಿಕಿತ್ಸೆ:

ಯಾವುದಾದರು ವ್ಯಕ್ತಿ ನಿಮ್ಮ ಕಣ್ಣೇದುರಿಗೆ ಒಮ್ಮೇಲೆ ಪ್ರಜ್ಞೆ ತಪ್ಪಿ ಬಿದ್ದು, ಈ ಮೇಲಿನ ಲಕ್ಷಣಗಳು ಕಂಡು ಬಂದರೆ. ಪ್ರಾಥಮಿಕ ಚಿಕಿತ್ಸೆ ನೀಡುವುದು ಅವಶ್ಯಕ.

ರೋಗಿಯ ದೇಹದ ಭಾಗಕ್ಕೆ, ಯಾವುದೇ ರೀತಿಯ ಅಪಾಯವಾಗದಂತೆ ಆತನಿಗೆ ಕಾಳಜಿವಹಿಸಬೇಕಾಗುತ್ತದೆ. ಚೂಪಾದ ವಸ್ತುಗಳು, ಕಲ್ಲು, ನೀರು, ಬೆಂಕಿ ಇಂತಹ ವಸ್ತುಗಳಿಂದ ದೂರವಿರಿಸಬೇಕು. ಉಸಿರಾಟ ಕ್ರಿಯೆ ಸರಳವಾಗಿ ನಡೆಯುವಂತೆ ನೋಡಿಕೊಳ್ಳುವುದು ತುಂಬಾ ಅಗತ್ಯ. ನಾಲಿಗೆ ಕಚ್ಚಿಕೊಳ್ಳುವ ಸಂಭವ ಹೆಚ್ಚಿರುವುದರಿಂದ ರಕ್ಷಣೆಗಾಗಿ ಹಲ್ಲುಗಳು ನಡುವೆ ಬಟ್ಟೆಯನ್ನು ಇಡುವುದು ತುಂಬಾ ಮಹತ್ವದ್ದು.

ಫೋಟೋ ಕೃಪೆ :health.clevelandclinic

ಅಪಸ್ಮಾರದಿಂದ ಕಂಪಿಸುತ್ತಿರುವಾಗ ಆ ವ್ಯಕ್ತಿಯನ್ನು ಕುಳಿತುಕೊಳ್ಳಿಸುವುದಕ್ಕೆ ಹೋಗಲೆಬಾರದು. ಅದರ ಬದಲು ಸಮತಟ್ಟಾದ ನೆಲದ ಮೇಲೆ ಮಲಗಿಸಿ ದೇಹದ ಸೆಳೆತ ನಿಲ್ಲುವವರೆಗೂ ಆ ವ್ಯಕ್ತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿ ತದನಂತರ ವೈದ್ಯರನ್ನು ಸಂಪರ್ಕಿಸುವುದು ತುರ್ತು ಅಗತ್ಯವೆಂದು ಭಾವಿಸಬೇಕು.

ಈ ರೋಗದಿಂದ ಬಳಲುವವರು ನಿರಂತರವಾಗಿ ವೈದ್ಯರು ನೀಡುವ ಮಾರ್ಗದರ್ಶನವನ್ನು ಚಾಚು ತಪ್ಪದೇ ಪಾಲಿಸುವುದು ಅತೀ ಅಗತ್ಯವಾಗಿರುತ್ತದೆ. ಎಂದಿಗೂ ನಿರ್ಲಕ್ಷ್ಯ ಸಲ್ಲದು. ಏಕೆಂದರೆ ರೋಗಿ ಮಾಡುವ ಸಣ್ಣ ಪ್ರಮಾಣದ ನಿರ್ಲಕ್ಷ್ಯವು ದೊಡ್ಡ ಪ್ರಮಾಣದಲ್ಲಿ ಅಪಾಯವನ್ನು ತಂದೊಡ್ಡಬಹುದಾಗಿರುತ್ತದೆ.

ಕಾರಣಗಳು : 
10 ರಲ್ಲಿ 6 ಜನ ಅಪಸ್ಮಾರ ರೋಗಿಗಳಿಗೆ ಕಾರಣವೇ ತಿಳಿದಿಲ್ಲ. ಆದರೂ ಸಾಮಾನ್ಯವಾಗಿವಾಗಿರುವ ಕಾರಣಗಳೆಂದರೆ.

ಯುವಕರಲ್ಲಿ ಅಪಸ್ಮಾರ ಕಾಣಿಸಿಕೊಳ್ಳಲು ಕಾರಣಗಳು:

  • ಆನುವಂಶಿಕ ಕಾರಣಗಳು
  • ಜನನದ ಸಮಯದಲ್ಲಿ ಉಂಟಾದ ತೊಂದರೆಗಳು
  •  ಮೆದುಳಿಗೆ ಅಥವಾ ತಲೆಗೆ ಆಘಾತ ಉಂಟಾಗಿದ್ದರೆ
  • ಮೆದುಳಿಗೆ ಸಂಬಂಧಿಸಿದ ಕಾಯಿಲೆ ಇದ್ದರೆ. ಉದಾ:ಬ್ರೇನ್ ಟ್ಯೂಮರ್, ಮೆನೆಂಜೈಟಿಸ್(ಮೆದುಳಿನ ಉರಿಯೂತ)
  • ಮೆದುಳಿಗೆ ರಕ್ತಸಂಚಾರ ಅಥವಾ ಆಮ್ಲಜನಕ ಕೊರತೆ ಉಂಟಾದರೆ.
  • ಅತೀಯಾದ, ನಿರಂತರ ಮಧ್ಯಪಾನ ಸೇವಿಸುವವರು, ಏಕಾಏಕಿ ಬಿಟ್ಟರೆ “ಅಪಸ್ಮಾರ ಕಾಣಿಸಿಕೊಳ್ಳಬಹುದು.
  • ಅತೀಯಾದ ಔಷಧಗಳ ಸೇವನೆ. ನಿದ್ರಾಹೀನತೆಗೆ ಉಪಯೋಗಿಸುವ “ಬೆನ್ಜೋಡಯಜಪಿನ್” ಔಷಧಿ ನಿಲ್ಲಿಸಿದಾಗ ಸಹ ಅಪಸ್ಮಾರ ಗೋಚರಿಸಬಹುದು.
  •  ರಕ್ತದಲ್ಲಿ ಗ್ಲೊಕೋಸ್, ಕ್ಯಾಲ್ಸಿಯಂ, ಸೋಡಿಯಂ ಪ್ರಮಾಣ ಕಡಿಮೆಯಾದರೆ.
  • ನಿರ್ಜಲೀಕರಣ (Dehydration).

ಫೋಟೋ ಕೃಪೆ :health.clevelandclinic

ವೃದ್ಧರಲ್ಲಿ ಅಪಸ್ಮಾರ ಕಾಣಿಸಿಕೊಳ್ಳಲು ಕಾರಣಗಳು:

* ಆಲ್ಝೈಮರ್ ಕಾಯಿಲೆ
* ಮಿದುಳಿನಲ್ಲಿ ಆದ ಗಾಯದಿಂದ
* ಲಕ್ವ ಹೊಡೆಯುವುದರಿಂದ.

ನವಜಾತ ಶಿಶುಗಳಲ್ಲಿ ಅಪಸ್ಮಾರಕ್ಕೆ ಕಾರಣಗಳು:

  •  ಮಗು ಜನಿಸುವ ಸಮಯದಲ್ಲಿ ಆಮ್ಲಜನಕದ ಕೊರತೆ ಉಂಟಾದರೆ ಈ ರೋಗ ಬರಬಹುದು.
  • ಮಗು ಜನ್ಮವನ್ನು ಪಡೆಯುವಾಗಲೇ ಮಿದುಳಿಗೆ ಸಂಬಂಧಿಸಿದ ವಿರೂಪತೆ ಅಥವಾ ದೋಷಗಳನ್ನು ಹೊಂದಿದ್ದರೆ.
  • ರಕ್ತದಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಾಗಿರುವುದರಿಂದ.
  • ರಕ್ತದಲ್ಲಿ ಕ್ಯಾಲ್ಸಿಯಂ,ಮೆಗ್ನಿಷಿಯಮ್ ಪ್ರಮಾಣ ಮತ್ತು ಎಲೆಕ್ಟೋಲೈಟ್ಸ್ ಕಡಿಮೆಯಾಗಿದ್ದರೆ ಅಪಸ್ಮಾರ ಕಾಣಿಸಿಕೊಳ್ಳುವುದು.
  • ಗರ್ಭಾವಸ್ಥೆಯಲ್ಲಿ ಇರುವಾಗ ತಾಯಿ ಬಳಸುವ ಔಷಧಿಗಳ ಪ್ರಭಾವದಿಂದ.
  • ಮಿದುಳಿನಲ್ಲಿ ರಕ್ತಸ್ರಾವ ಉಂಟಾಗಿದ್ದರೆ.

ಶಿಶು ಮತ್ತು ಮಕ್ಕಳಲ್ಲಿ ಅಪಸ್ಮಾರ ಕಾಣಿಸಿಕೊಳ್ಳಲು ಕಾರಣ:

ಶಿಶು ಮತ್ತು ಮಕ್ಕಳಲ್ಲೂ ಸಹ ಅಪಸ್ಮಾರ ಅಥವಾ ಮೂರ್ಛೆ ರೋಗ ಉಂಟಾಗಬಹುದು. ಪ್ರಮುಖ ಕಾರಣಗಳು ಎಂದರೆ

  • ಸೋಂಕುಗಳು
  • ಬ್ರೇನ್ ಟ್ಯೂಮರ್ ಮತ್ತು ಜ್ವರ.

ಅಪಸ್ಮಾರ ಪತ್ತೆ ಹೇಗೆ?
ಅಪಸ್ಮಾರ ಪತ್ತೆ ಹಚ್ಚಲು, ಖಾತ್ರಿ ಮಾಡಿಕೊಳ್ಳಲು ಕೆಲ ಪರೀಕ್ಷೆ ಮತ್ತು ಸ್ಕ್ಯಾನ್ ಗಳನ್ನ ಮಾಡಲಾಗತ್ತೆ.

ಫೋಟೋ ಕೃಪೆ : https://www.military.com/

  •  ಇ.ಇ.ಜಿ (EEG) :
    ಮೆದುಳಿನ ಮೆಲ್ಮೈ ಅಂದರೆ ತಲೆ ಬುರುಡೆ ಮೇಲೆ ಎಲೆಕ್ಟ್ರೋಡ್ ಗಳನ್ನ ಅಂಟಿಸಿ ಮೆದುಳಿನ ಚಟುವಟಿಕೆಗಳನ್ನು ರೇಕಾರ್ಡ್ ಮಾಡಲಾಗತ್ತೆ. ಇಸಿಜಿ ರೆಕಾರ್ಡ್ ನ್ನು “ನರರೋಗ ತಜ್ಞ”ರು ಪರಿಶೀಲಿಸಿ ಅಸಾಮಾನ್ಯ ದೋಷಗಳನ್ನು ಪತ್ತೆ ಮಾಡುವರು.
  • ಮೆದುಳಿನ ಎಂ.ಆರ್.ಆಯ್ (MRI) ಅಥವಾ ಸಿ.ಟಿ(CT) ಸ್ಕಾನ್.
    ಮೆದುಳಿನಲ್ಲಿರುವ ಅಸಾಧಾರಣ ದೋಷ ಅಂದರೆ ಗಡ್ಡೆ, ಅನೈಸರ್ಗಿಕ ಬೆಳವಣಿಗೆ, ಮೆದುಳಿನ ವಿರೂಪತೆ ಮುಂತಾದವುಗಳನ್ನ ಸ್ಕ್ಯಾನ್ ನಿಂದ ಪತ್ತೆ ಮಾಡುವರು.
  • ವಿಡಿಯೋ ಇ.ಇ.ಜಿ (Video EEG): ಮೆದುಳಿನ ಮೆಲ್ಮೈನಿಂದ ಅದರ ಚಟುವಟಿಕೆಯನ್ನು ದಾಖಲಿಸಲು ನೆತ್ತಿಯ ಮೇಲೆ ಎಲೆಕ್ಟ್ರೋಡಗಳನ್ನು ಅಂಟಿಸಿ, ಡಿಟೆಕ್ಟರ್ ಮಷೀನಿಗೆ ಸಂಪರ್ಕ ಕಲ್ಪಿಸಲಾಗತ್ತೆ. ಮೂರ್ಛೆರೋಗ ಆಕ್ರಮಣ ವೇಳೆ ರೋಗಿಯ ಚಟುವಟಿಕೆಯ ವಿಡಿಯೋ ರೆಕಾರ್ಡ್ ಜೊತೆ ಮೆದುಳಿನಲ್ಲಾಗುವ ವಿದ್ಯುತ್ ಚಟುವಟಿಕೆಗಳನ್ನು ಸೆರೆ ಹಿಡಿಯಲಾಗತ್ತೆ.
    ವಿಡಿಯೋ ಜೊತೆ ಇ.ಇ.ಜಿ ತಾಳೆ ಮಾಡುವ “ನರರೋಗ ತಜ್ಞ”ರು ಅಪಸ್ಮಾರದ ವಿಧ ಹಾಗೂ ಆಕ್ರಮಿಸಿದ ಮೆದುಳಿನ ಜಾಗವನ್ನು ಗುರುತಿಸುತ್ತಾರೆ.

ಚಿಕಿತ್ಸೆ :  ಅಪಸ್ಮಾರ ತೊಂದರೆಗೆ ದೀರ್ಘಕಾಲದ ತನಕ ಚಿಕಿತ್ಸೆ ನೀಡಬೇಕಾಗುತ್ತೆ. ಚಿಕಿತ್ಸೆ ನಿಯಮಿತವಾಗಿದ್ದರೆ ಅಪಸ್ಮಾರ ಸಂಪೂರ್ಣ ಹತೋಟಿಯಲ್ಲಿರುವುದು.

ಫೋಟೋ ಕೃಪೆ : military.com

ಔಷಧಿ: ಇಇಜಿ (EEG), ಸ್ಕ್ಯಾನ್, ಪರೀಕ್ಷೆ ಆಧರಿಸಿ, ರೋಗಿಯ ವಯಸ್ಸು, ವ್ಯಾಧಿಯ ತೀವ್ರತೆ, ಆತನ ಸಾಮಾನ್ಯ ಆರೋಗ್ಯದ ಮಟ್ಟಗಳನ್ನು ಗಮನದಲ್ಲಿಟ್ಟುಕೊಂಡು, ಅವಶ್ಯಕ ಔಷದಗಳನ್ನು ಸೂಚಿಸುವರು. ಈ ಸಂದರ್ಭದಲ್ಲಿ ರೋಗಿಯಲ್ಲಿ ಇರಬಹುದಾದ ಬೇರೆ ಆರೋಗ್ಯದ ಸಮಸ್ಯೆಗಳಿಗೂ ಸೂಕ್ತ ಚಿಕಿತ್ಸೆಯನ್ನು ನೀಡಲೇಬೇಕಾಗುವುದು.

ಸೂಕ್ಷ್ಮನ್ಯುರೋಸರ್ಜರಿ: ಮೂರ್ಛೆರೋಗ ಚಿಕಿತ್ಸೆ ಸಂಕೀರ್ಣವಾದರೂ, ಸೂಕ್ಷ್ಮ ನ್ಯುರೋ ಸರ್ಜರಿ ಚಿಕಿತ್ಸಾ ವಿಧಾನಗಳಿಂದ ಸಮಸ್ಯೆಯನ್ನ ನಿವಾರಿಸಬಹುದು. ಆಯ್ಕೆ ವೈದ್ಯರಿಗೆ ಬಿಟ್ಟಿದ್ದು.
ಮೆದುಳಿನ ಅಸಾಧಾರಣ ಪ್ರದೇಶದ ಸಂಪರ್ಕ ಕಡಿತಗೊಳಿಸುವ ಅಥವಾ ಅದನ್ನು ನಿಷ್ಕ್ರೀಯಗೊಳಿಸಿ ಪರಿತ್ಯಕ್ತಗೊಳಿಸುವ ಮೂಲಕ ಕೆಲವು ರೋಗಿಗಳಲ್ಲಿ “ಸೂಕ್ಷ್ಮ ನ್ಯುರೋ ಸರ್ಜರಿ” ಕೆಲವೂಮ್ಮೆ ಸಹಾಯವಾಗುತ್ತೆ. ಇದರಿಂದ ಅಕ್ಕಪಕ್ಕದ ಸಾಮಾನ್ಯ ಮೆದುಳಿಗೆ ಆಕ್ರಮಣಗಳು ಹಬ್ಬುವುದನ್ನು ತಡೆಗಟ್ಟಬಹುದಾಗಿದೆ.

ತಜ್ಞ ವೈದ್ಯರು ಸೂಚಿಸಿದ ಔಷಧಗಳನ್ನು ಪ್ರತಿನಿತ್ಯ ನಿಗದಿತ ಸಮಯದಲ್ಲಿ, ನಿಗದಿತ ಪ್ರಮಾಣದಲ್ಲಿ ಮತ್ತು ನಿಗದಿತ ಅವಧಿಗೆ ಸೇವಿಸಲೇಬೇಕು. ನಿಗದಿತ ಅವಧಿಗೆ ಮುನ್ನ ಔಷಧಗಳ ಪ್ರಭಾವದಿಂದಾಗಿ ತನ್ನ ಅಪಸ್ಮಾರ ಗುಣವಾಗಿದೆ ಎನ್ನುವ ಭ್ರಮೆಯಿಂದ ಔಷಧ ಸೇವನೆಯನ್ನು ನಿಲ್ಲಿಸಿದಲ್ಲಿ ವ್ಯಾಧಿಯು ಮತ್ತೆ ಮರುಕಳಿಸುವುದು. ಮಾತ್ರವಲ್ಲ, ಇದರಿಂದಾಗಿ ಚಿಕಿತ್ಸೆಯ ಅವಧಿಯೂ ಇನ್ನಷ್ಟು ದೀರ್ಘವಾಗುವುದು.

ಸಾಮಾನ್ಯವಾಗಿ ಎರಡರಿಂದ ಐದು ವರ್ಷಗಳ ಕಾಲ ವೈದ್ಯರು ಸೂಚಿಸಿದಂತೆ ಸೇವಿಸಲೆಬೇಕಾಗಿರುವ ಔಷಧಗಳನ್ನು ಮತ್ತೆ ವೈದ್ಯರ ಸಲಹೆಯಂತೆ ಕ್ರಮೇಣ ಕಡಿಮೆ ಮಾಡುತ್ತಾ ಬಂದು, ಅಂತಿಮವಾಗಿ ನಿಲ್ಲಿಸುವುದು ನಿಶ್ಚಿತವಾಗಿಯೂ ಹಿತಕರ.

ಅಪಸ್ಮಾರದಿಂದ ಬಳಲುತ್ತಿರುವವರಲ್ಲಿ ಮೂರನೆಯ ಒಂದು ಭಾಗದಷ್ಟು ಜನರಿಗೆ ಅನಿಯಂತ್ರಿತ ಸೆಳೆತ ಬರುವುದರಿಂದ, ಈಗ ಲಭ್ಯವಿರುವ ಯಾವುದೇ ಚಿಕಿತ್ಸೆಯು ನಾಟುವುದಿಲ್ಲ.

ಫೋಟೋ ಕೃಪೆ : powerofpositivity

#ಆಯುರ್ವೇದ_ಚಿಕಿತ್ಸೆ

ಆಯುರ್ವೇದದ ಪ್ರಕಾರ ಅಪಸ್ಮಾರ ನಾಲ್ಕು ವಿಧಗಳು : ವಾತಜ, ಪಿತ್ತಜ, ಕಫಜ, ಸನ್ನಿಪಾತಜವೆಂದು. ಶೋಧನ ಅಂದರೇ ಪಂಚಕರ್ಮ ಚಿಕಿತ್ಸೆ ಮತ್ತು ಶಮನ ಚಿಕಿತ್ಸೆಯನ್ನ ನೀಡಲಾಗತ್ತೆ.
ಪ್ರತ್ಯೇಕ ಅಪಸ್ಮಾರಕ್ಕೆ, ಚಿಕಿತ್ಸೆಯು ಬೇರೆ ಬೇರೆಯಾಗಿದೆ. ನುರಿತ ಆಯುರ್ವೇದ ವೈದರು ರೋಗಿಯನ್ನು ಪರೀಕ್ಷಿಸಿ, ನಿಗಧಿತ ಚಿಕಿತ್ಸೆ ನೀಡುವರು.

ಅಪಸ್ಮಾರ ಚಿಕಿತ್ಸೆ ಮಾಡಲು ಹಲವು ಔಷಧಿಗಳನ್ನು ಬಳಸಲಾಗತ್ತೆ. ಅವುಗಳಲ್ಲಿ ಕೆಲವು ಈ ಕೆಳಗಿನಂತಿವೆ.

  • ಪಂಚಗವ್ಯ ಘೃತ. *ಅಶ್ವಗಂಧಾರಿಷ್ಠ.
  • ಮಹಾ ಪಂಚಗವ್ಯ ಘೃತ. *ಬಲಾ ತೈಲ
  • ಬ್ರಾಹ್ಮಿ ಘೃತ. *ಅಜಾತ ಭಸ್ಮ
  • ಹಿಂಗು ಸೈಂಧವ ಘೃತ. *ಯೋಗೆಂದ್ರ ರಸ.
  • ವಚಾದಿ ಘೃತ. *ವಾತಕುಲಾಂತಕ ರಸ.
  • ಮಧುಕಾದಿ ಘೃತ. *ಮಹಾ ಮೃತ್ಯುಂಜಯ ರಸ.
    ಮುಂತಾದವುಗಳು….

ಫೋಟೋ ಕೃಪೆ : magazine.lneonline

ಗಿಡಮೂಲಿಕೆಗಳ ಚಿಕಿತ್ಸೆಗಳು : 

  • ಬ್ರಾಹ್ಮಿ (ಒಂದೆಲಗ) : ಎನ್ನುವ ಗಿಡಮೂಲಿಕೆಯು ಅಪಸ್ಮಾರ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಆಯುರ್ವೇದ ಔಷಧದಲ್ಲಿ ಬಳಸಲಾಗುವ ಅತ್ಯುತ್ತಮ ಗಿಡಮೂಲಿಕೆ ಇದು. ಈ ಗಿಡಮೂಲಿಕೆಯ ಎಲೆಗಳು ಎಥನೋಲಿಕ್ ಸಾರವನ್ನು ಹೊಂದಿದ್ದು, ಗಮನಾರ್ಹವಾದ “ಆಂಟಿಕಾನ್ವೆಲ್ಸೆಂಟ್” ಚುವಟಿಕೆಯನ್ನು ಹೊಂದಿದೆ.
  • ತುಳಸಿ : ಅಪಸ್ಮಾರದ ರೋಗಿಗಳಲ್ಲಿ ರೋಗಗ್ರಸ್ತವಾಗುವಿಕೆಯನ್ನು ಕಡಿಮೆ ಮಾಡಲು ಇದನ್ನೂ ಬಳಸಲಾಗುತ್ತದೆ. ಒಂದು ಅಧ್ಯಯನದ ಪ್ರಕಾರ, ತುಪ್ಪಳದ ಹೈಡ್ರೋಆಲ್ಕೊಲಿಕ್ ಸಾರವು ಅಪಸ್ಮಾರದ ದಾಳಿಯನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದೆ. ಮತ್ತೊಂದು ಅಧ್ಯಯನದ ಪ್ರಕಾರ ಪವಿತ್ರ ತುಳಸಿ “ಆಂಟಿಕನ್ವೆಲ್ಸೆಂಟ್” ಚಟುವಟಿಕೆಯ ಪರಿಣಾಮಕಾರಿತ್ವವನ್ನು ತೋರಿಸಿದೆ. ಸೂಪ್ ಮತ್ತು ಸಲಾಡ್ಗಳಲ್ಲಿ ತುಳಸಿ ಸೇರಿಸಿ.
  • ಬೂದು ಕುಂಬಳಕಾಯಿ : ಬೂದಿ ಬಾಯಿ/ಕರಿ ಕುಂಬಳಕಾಯಿ ಎಂಬುದು ಸಾಮಾನ್ಯವಾಗಿ ಭಾರತದಲ್ಲಿ ತಿನ್ನಲಾದ ತರಕಾರಿ. ಈ ತರಕಾರಿ ಆಂಟಿಕನ್ವೆಲ್ಸಂಟ್ ಚಟುವಟಿಕೆಯನ್ನು ಹೊಂದಿದೆ ಮತ್ತು ಅಪಸ್ಮಾರದ ತೀವ್ರತೆ ಅಥವಾ ಇತರ ಸೆಳೆತಗಳನ್ನು ಕಡಿಮೆ ಮಾಡುತ್ತದೆ. ಕುಂಬಳಕಾಯಿ ವಿಟಮಿನ್ ಬಿ 6, ವಿಟಮಿನ್ ಸಿ, ಕಬ್ಬಿಣ, ಮ್ಯಾಂಗನೀಸ್, ಮೆಗ್ನೀಸಿಯಮ್ ಮುಂತಾದ ಅಗತ್ಯವಾದ ಪೋಷಕಾಂಶಗಳನ್ನು ಒಳಗೊಂಡಿದೆ. ರೋಗಗ್ರಸ್ತವಾಗುವಿಕೆಯನ್ನು ನಿಯಂತ್ರಿಸಲು ಮತ್ತು ತಡೆಗಟ್ಟಲು ನಿತ್ಯವೂ ಕುಂಬಳಕಾಯಿಯ ರಸವನ್ನು ಕುಡಿಯುವುದು ಉತ್ತಮ.

ವಿಟಮಿನ್ ಇ ಅಪಸ್ಮಾರ ಹೊಂದಿರುವ ಜನರಲ್ಲಿ ವಿಟಮಿನ್ ಇ ಕೊರತೆಯು ಸಾಮಾನ್ಯವಾಗಿರುತ್ತದೆ. 2016 ರಲ್ಲಿ ನಡೆಸಿದ ಅಧ್ಯಯನವು ಮೂರ್ಛೆ ರೋಗ ಹೊಂದಿರುವ ಜನರು ವಿಟಮಿನ್ ಇ ಹೆಚ್ಚು ಸೇವಿಸಿದರೆ ಸಮಸ್ಯೆ ನಿವಾರಣೆ ಹೊಂದುವುದು. ಬಾದಾಮಿ, ಸೂರ್ಯಕಾಂತಿ ಬೀಜಗಳು, ಹಸಿರು ಎಲೆಗಳ ತರಕಾರಿಗಳು, ಕುಂಬಳಕಾಯಿಯ ಬೀಜಗಳು ಮುಂತಾದ ಆಹಾರವು ವಿಟಮಿನ್ ಇ ಅನ್ನು ಸಮೃದ್ಧವಾಗಿ ಹೊಂದಿವೆ.

ಫೋಟೋ ಕೃಪೆ : magazine

B6_ಜೀವಸತ್ವ “ಪೈರಿಡಾಕ್ಸಿನ್” ಎಂದು ಕರೆಯಲ್ಪಡುವ ವಿಟಮಿನ್ B6, ಪೈರಿಡಾಕ್ಸಿನ್-ಅವಲಂಬಿತ ರೋಗಗ್ರಸ್ತವಾಗುವಿಕೆಗಳು ಎಂಬ ಅಪರೂಪದ ಅಪಸ್ಮಾರವನ್ನು ನಿರ್ವಹಿಸಲು ಬಳಸಲಾಗುತ್ತದೆ. ಈ ರೀತಿಯ ಅಪಸ್ಮಾರವು ಗರ್ಭದಲ್ಲಿ ಅಥವಾ ಹುಟ್ಟಿದ ನಂತರ ಕಂಡುಬರುತ್ತದೆ. ವಿಟಮಿನ್ B6 ಅನ್ನು ಸೂಕ್ತ ರೀತಿಯಲ್ಲಿ ಚಯಾಪಚಯಿಸಲು ದೇಹದ ಅಸಾಮರ್ಥ್ಯದಿಂದಾಗಿ ಇದರ ಕೊರತೆ ಉಂಟಾಗುತ್ತದೆ. ಕೋಳಿ, ಟರ್ಕಿ, ಮೀನು, ತರಕಾರಿಗಳು, ಮೊಟ್ಟೆ ಮುಂತಾದ ಜೀವಸತ್ವ B6 ಆಹಾರಗಳನ್ನು ಸೇವಿಸಿ.

ಮೆಗ್ನೀಸಿಯಮ್ ದೇಹದಲ್ಲಿನ ಮೆಗ್ನೀಸಿಯಮ್ ಕೊರತೆಯು ಅಪಸ್ಮಾರ ರೋಗ ಲಕ್ಷಣವನ್ನು ಪ್ರಚೋದಿಸುತ್ತದೆ. ಮೆಗ್ನೀಸಿಯಮ್ ಪೂರಕ ಆಹಾರಗಳು ಅಪಸ್ಮಾರ ಲಕ್ಷಣವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಸಂಶೋಧನೆ ತೋರಿಸಿದೆ. ಡಾರ್ಕ್ ಚಾಕೊಲೇಟ್ಗಳು, ಬಾದಾಮಿ, ಪಾಲಕ, ಗೋಡಂಬಿ ಬೀಜಗಳು ಮುಂತಾದ ಮೆಗ್ನೀಸಿಯಮ್ ಭರಿತ ಆಹಾರಗಳನ್ನು ಸೇವಿಸಿ.



ಫೋಲಿಕ್ ಆಮ್ಲವು ನರಗಳ ಸರಿಯಾದ ಕಾರ್ಯಚಟುವಟಿಕೆಗೆ ಪ್ರಯೋಜನಕಾರಿ ಮತ್ತು ಶಿಶುಗಳಲ್ಲಿ ನರಗಳ ದೋಷಗಳನ್ನು ತಡೆಯುತ್ತದೆ. ಮೆದುಳಿನ ಮತ್ತು ನರ ಕೋಶಗಳ ಸರಿಯಾದ ಕಾರ್ಯನಿರ್ವಹಣೆ ಮತ್ತು ಅಭಿವೃದ್ಧಿಯಲ್ಲಿ “ಫೋಲಿಕ್ ಆಮ್ಲ”ವು ಮುಖ್ಯ ಪಾತ್ರ ವಹಿಸುತ್ತದೆ. ಫೋಲಿಕ್ ಆಮ್ಲದ ಸೇವನೆಯು ಅಪಸ್ಮಾರದ ರೋಗಿಗಳಲ್ಲಿ ರೋಗಗ್ರಸ್ತವಾಗುವಿಕೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಹಸಿರು ಎಲೆಗಳ ತರಕಾರಿಗಳು, ಬೀನ್ಸ್, ಏಕದಳ ಧಾನ್ಯಗಳು, ಸಿಟ್ರಸ್ ಹಣ್ಣುಗಳು, ಕೋಸುಗಡ್ಡೆ, ಮುಂತಾದ ಫೋಲಿಕ್ ಆಮ್ಲ ಸಮೃದ್ಧ ಆಹಾರಗಳನ್ನು ಸೇವಿಸಿ.

ವಿಟಮಿನ್  ಡಿ ಕೇಂದ್ರ ನರಮಂಡಲದ ಅಸ್ವಸ್ಥತೆಗಳಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಮತ್ತು ಹೆಚ್ಚಿನ ಅಪಸ್ಮಾರ ರೋಗಿಗಳಲ್ಲಿ ವಿಟಮಿನ್ ಡಿ ಕೊರತೆಯ ಹೆಚ್ಚಿರತ್ತೆ ಇದರಿಂದಾಗಿ ನಿರಂತರವಾದ ರೋಗಗ್ರಸ್ತವಾಗುವಿಕೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ರೋಗಗ್ರಸ್ತವಾಗುವಿಕೆಯನ್ನು ಕಡಿಮೆ ಮಾಡಲು 40% ರಷ್ಟು ವಿಟಮಿನ್ ಡಿ ಪೂರೈಕೆಯ ಅಗತ್ಯ. ವಿಟಮಿನ್-ಡಿ “ಆಂಟಿಕೊನ್ವೆಲ್ಸೆಂಟ್” ಚಟುವಟಿಕೆ ಹೊಂದಿದ್ದು, ಪರಿಣಾಮಕಾರಿಯಾಗಿದೆ. ಮೊಟ್ಟೆ, ಮೀನುಗಳು, ಚೀಸ್, ಬೀಜಗಳಲ್ಲಿ ವಿಟಮಿನ್ ಡಿ ಸಮೃದ್ಧವಾಗಿದೆ.

ಫೋಟೋ ಕೃಪೆ : nutraingredients-asia

ಒಮೆಗಾ 3 ಬಹು ಅಪರ್ಯಾಪ್ತ ಕೊಬ್ಬು

ಅಪಸ್ಮಾರವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವುದು.

ಮೀನಿನ ಎಣ್ಣೆಯಲ್ಲಿ ಕಂಡುಬರುವ ಈ ಕೊಬ್ಬಿನಾಮ್ಲಗಳು ಮಕ್ಕಳಲ್ಲಿ ಅಪಸ್ಮಾರ ಸೆಳೆತದ ಆಕ್ರಮಣಗಳ ತೀವ್ರತೆಯನ್ನು ಕಡಿಮೆ ಮಾಡುವುದು ಮತ್ತು ಅಪಸ್ಮಾರದ ರೋಗಿಗಳಲ್ಲಿ ಮೆದುಳಿನ ಜೀವಕೋಶದ ಹಾನಿ ಕಡಿಮೆ ಮಾಡವುದು.

ಒಮೆಗಾ -3 ಆಹಾರ ಪೂರಕಗಳಲ್ಲಿ ಮೀನು ಎಣ್ಣೆ, ಕಾಡ್ ಲಿವರ್ ಆಯಿಲ್ ಮತ್ತು ಪಾಚಿಯ ಎಣ್ಣೆ (ಪಾಚಿಗಳಿಂದ ಬರುವ ಸಸ್ಯಾಹಾರಿ ಮೂಲ) ಸೇರಿವೆ. ಅವು ಒಮೆಗಾ -3 ಗಳ ವ್ಯಾಪಕ ಶ್ರೇಣಿಯ ಪ್ರಮಾಣಗಳು ಮತ್ತು ರೂಪಗಳನ್ನು ಒದಗಿಸುತ್ತವೆ.

ಫೋಟೋ ಕೃಪೆ : stylesatlife

#ಯೋಗ: ಒತ್ತಡ ಹೆಚ್ಚಳವು ಫಿಟ್ಸ್ ತೀವ್ರತೆಯನ್ನು ಉಂಟುಮಾಡುತ್ತದೆ. ಯೋಗ ಒತ್ತಡವನ್ನು ಕಡಿಮೆ ಮಾಡಲು ಮತ್ತು ನರ ಕೋಶಗಳನ್ನು ಸಡಿಲಿಸುವುದಕ್ಕೆ ಅನುಕೂಲಕರ ನೈಸರ್ಗಿಕ ಪರಿಹಾರವೆಂದು ಪರಿಗಣಿಸಲಾಗುತ್ತದೆ. ಹೀಗೆ ನಿಮ್ಮ ನರ ಮತ್ತು ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತದೆ . ಬೆಳಿಗ್ಗೆ ಅಥವಾ ಸಂಜೆಯಲ್ಲಿ ಪ್ರತಿ ದಿನದ ಯೋಗವನ್ನು ಅಭ್ಯಾಸ ಮಾಡುವುದು ಉತ್ತಮ.

ಕೆಲವು ಮುನ್ನೇಚ್ಚರಿಕೆ ಇರಲಿ :  ಅಪಸ್ಮಾರ ಪೀಡಿತರು ಕೆಲವು ಮುನ್ನೇಚ್ಚರಿಕೆ ತೆಗೆದುಕೊಳ್ಳುವುದರಿಂದ, ಸುಖಿ ಜೀವನ ನಡೆಸಬಹುದು.

ಎತ್ತರದ ಪ್ರದೇಶಗಳಲ್ಲಿ ಕೆಲಸ ಮಾಡುವುದು, ಏಕಾಂಗಿಯಾಗಿ ವಾಹನ ಚಲಾವಣೆ ಮಾಡುವುದು, ಒಬ್ಬರೇ ಈಜಾಡಲು ಹೋಗುವುದು, ಅತೀ ಎತ್ತರದ ಬೆಟ್ಟ, ಗುಡ್ಡಗಳನ್ನು ಹತ್ತಲು ಪ್ರಯತ್ನಿಸುವುದು, ದೂರದ ಒಂಟಿ ಪ್ರಯಾಣ ಇವೆಲ್ಲವೂ ತುಂಬಾ ಅಪಾಯಕಾರಿಗಳಾಗಿವೆ. ಇಂತಹ ಸಂಗತಿಗಳನ್ನು ನಿರ್ಲಕ್ಷಿಸಿದೆ ದೂರ ಇಡಿ. ಇವು ಕೆಲವೊಮ್ಮೆ ಜೀವಕ್ಕೂ ಅಪಾಯವಾಗ ಬಹುದು. ಪದೇ ಪದೆ ಮೂರ್ಛೆ ಹೋಗುವುದರಿಂದ ಮೆದುಳು ಹಾಗೂ ನರಮಂಡಲಕ್ಕೆ ಅಪಾಯ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿರು ವುದರಿಂದ, ರೋಗದ ಬಗ್ಗೆ ನಿರ್ಲಕ್ಷ್ಯ ವಹಿಸದೇ ಸಕಾಲದಲ್ಲಿ ಚಿಕಿತ್ಸೆ ತೆಗೆದುಕೊಳ್ಳುವುದು ತುಂಬಾ ಅತ್ಯಗತ್ಯ.



ತಪ್ಪು ಕಲ್ಪನೆಗಳಿಂದ ಹೊರಬನ್ನಿ : 

  • ಅಪಸ್ಮಾರದಿಂದ ಪ್ರಜ್ಞೆ ತಪ್ಪಿದಾಗ ಕೈಯಲ್ಲಿ ಕಬ್ಬಿಣದ ಕೊಡುವುದರಿಂದ, ಹೆಬ್ಬೆರಳು ಒತ್ತುವುದರಿಂದ ಪ್ರಜ್ಞೆ ಮರಳುವುದಿಲ್ಲ.
  •  ಅಪಸ್ಮಾರ ಪೂರ್ವ ಜನ್ಮದ ಪಾಪಕರ್ಮವಲ್ಲ
  •  ದೆವ್ವ, ಭೂತಚೇಷ್ಟೆಯು ಅಲ್ಲ.
  • ಮಾಟ, ಮಂತ್ರಗಳಿಂದ ವಾಸಿಯಾಗುವುದಿಲ್ಲ.
  • ಸಾಂಕ್ರಾಮಿಕ ರೋಗವಲ್ಲ. ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದಿಲ್ಲ.
  • ಇದು ಮಾನಸಿಕ ರೋಗವಲ್ಲ.
  • ಫಿಟ್ಸ್ ಬರುವ ಮಗುವನ್ನು ಶಾಲೆಗೆ ಕಳಿಸಬಹುದು. ಅವರಿಗೂ ಎಲ್ಲರಂತೆ ಕಲಿಯುವ ಸಾಮರ್ಥ್ಯ, ಚುರುಕುತನವಿರತ್ತೆ.
  • ಅಪಸ್ಮಾರವಿರುವವರು ದಾಂಪತ್ಯ ಜೀವನಕ್ಕೆ ಕಾಲಿಡಬಹುದು.
  • ಮದುವೆ ಮಾಡುವುದರಿಂದ ಅಪಸ್ಮಾರ ತನ್ನಿಂದ ತಾನೆ ವಾಸಿಯಾಗುವುದಿಲ್ಲ.
  • ಅಪಸ್ಮಾರ ಇರುವ ಮಹಿಳೆ ಮಕ್ಕಳನ್ನು ಹೆರಬಹುದು ಮತ್ತು ಎದೆ ಹಾಲು ಕುಡಿಸಬಹುದು.

ಅನಾದಿಕಾಲದಿಂದ ಭಾರತೀಯರಲ್ಲಿ “ಅಪಸ್ಮಾರ” ವ್ಯಾಧಿಯ ಬಗ್ಗೆ ಅನೇಕ ತಪ್ಪುಕಲ್ಪನೆಗಳಿವೆ. ಆದರೆ ವಿಶ್ವವಿಖ್ಯಾತ ವ್ಯಕ್ತಿಗಳಾಗಿದ್ದ ಪೈಥಾಗರಸ್, ಅರಿಸ್ಟಾಟಲ್, ಲಿಯೋನಾರ್ಡೋ ಡಾ ವಿಂಚಿ, ಚಾರ್ಲಸ್ ಡಿಕೆನ್ಸ್, ಸಾಕ್ರೆಟಿಸ್, ಸರ್ ಐಸಾಕ್ ನ್ಯೂಟನ್ ಮುಂತಾದ ಇವರೂ ಅಪಸ್ಮಾರದಿಂದ ಬಳಲಿದ್ದರೂ, ಮಹೋನ್ನತ ಸಾಧನೆಗಳಿಗೆ ಅಪಸ್ಮಾರವು ಎಂದೂ ತೊಡಕಾಗಿರಲಿಲ್ಲ ಎನ್ನುವ ಸತ್ಯವೂ ಭಾರತೀಯರಿಗೆ ತಿಳಿದಿಲ್ಲ. ಅಪಸ್ಮಾರ ಪೀಡಿತರು ಸೂಕ್ತ ಚಿಕಿತ್ಸೆ ಮತ್ತು ಶಿಸ್ತುಬದ್ಧ ಜೀವನಶೈಲಿಯಿಂದ ಆರೋಗ್ಯಕರ ಮತ್ತು ಸ್ವಾಭಾವಿಕ ಜೀವನ ನಡೆಸಲು ಸಾಧ್ಯ ಎನ್ನುವುದನ್ನು ಮರೆಯದಿರಿ.


  • ಡಾ. ಪ್ರಕಾಶ ಬಾರ್ಕಿ (ವೈದಕೀಯ ಬರಹಗಾರರು, ಆಯುರ್ವೇದ ವೈದ್ಯರು) ಕಾಗಿನೆಲೆ

0 0 votes
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW