” ಅತ್ತೆಮ್ಮತ್ತೆಮ್ಮ ನಿನ ಮಗಳು ಬಲು ಬಿತ್ತಾರಿ ಕಾಣಮ್ಮ, ಬಿತ್ತಾರಿ ಸೊಂಟಕ್ಕೆ….” ಜಾನಪದಲ್ಲಿ ಮನಸ್ಸಿನ ಆಳದ ಮಾತುಗಳಿದ್ದವು, ಇಂದಿನ ದಿನ ಮಕ್ಕಳು ಮೊಬೈಲ್ನಲ್ಲಿ, ಕಂಪ್ಯೂಟರ್ ಗಳಲ್ಲಿ ನೀಲಿ ಚಿತ್ರಗಳನ್ನು ವೀಕ್ಷಿಸುತ್ತಾರಂತೆ. ಇಂಥವರಿಗಿಂತಲೂ ಎದೆಯಲ್ಲಿ ಏನೂ ಇಟ್ಟುಕೊಳ್ಳದೆ ನೇರಾನೇರ ಮಾತನಾಡುತ್ತಿದ್ದ ಅಂದಿನ ಹಳ್ಳಿಗಾಡಿನ ಮಕ್ಕಳೇ ಮೇಲಲ್ಲವೆ – ಕೇಶವರೆಡ್ಡಿ ಹಂದ್ರಾಳ, ಮುಂದೆ ಓದಿ…
ಮಳೆಗಾಲ ಶುರುವಾಗಿ ಮಳೆ ಸುರಿಯಲು ಪ್ರಾರಂಭವಾದರೆ ನಮ್ಮ ಹಳ್ಳಿಗಾಡಿನ ಬದುಕಿನಲ್ಲಿ ಚೈತನ್ಯ ಚಿಗುರೊಡೆಯುತ್ತದೆ. ಈಗಿಗಿಂತಲೂ ನಮ್ಮ ಚಿಕ್ಕಂದಿನ ದಿನಗಳಲ್ಲಿ ಮಳೆ ಭೂಮಿಗೆ ಸುರಿದಂತೆ ಜನರ ಮನದಲ್ಲಿ ಸಂಭ್ರಮದ ಹೊಳೆಯೂ ಹರಿಯುತ್ತಿತ್ತು. ಭೂಮಿಯೊಂದಿಗಿನ ನಂಟು ಶ್ರಮದೊಂದಿಗೆ ಬೆಸೆದು ವಿವಿಧ ರೀತಿಯ ಕೃಷಿ ಚಟುವಟಿಕೆಗಳು ಗರಿಗೆದರುತ್ತಿದ್ದವು. ಹೊಲಗದ್ದೆಗಳಲ್ಲಿ ಗಂಡು ಹೆಣ್ಣು ಎಂಬ ಭೇದವಿಲ್ಲದೆ ಶ್ರಮವನ್ನು ಮರೆಯಲು ಆರೋಗ್ಯಕರವಾದ ತಮಾಷೆಗಳಲ್ಲಿ ತೊಡಗುತ್ತಿದ್ದರಲ್ಲದೆ ಜನಪದ ಹಾಡುಗಳನ್ನು ರಾಗಬದ್ದವಾಗಿ ಹಾಡುತ್ತಿದ್ದರು. ರಾಗಿ ಮತ್ತು ಭತ್ತದ ಪೈರು ನಾಟಿ ಮಾಡುವಾಗ ಹೊಲಗಳಲ್ಲಿ ಏಳೆಂಟು ಜನ ಒಮ್ಮೆಗೆ ಹಾಡುತ್ತಿದ್ದ ಪದಗಳು ಗಾಳಿಯಲ್ಲಿ ಅಲೆಅಲೆಯಾಗಿ ಅಲೆದಅಲೆದು ಹೊಲಗದ್ದೆಗಳನ್ನು ತುಂಬಿಕೊಳ್ಳುತ್ತಿದ್ದವಲ್ಲದೆ ಊರಿನ ಕೇರಿಗಳನ್ನೂ ತಲುಪುತ್ತಿದ್ದವು. ಶಾಲೆಯಲ್ಲಿ ಒಂದಕ್ಷರವೂ ಕಲಿಯದ ಅನಕ್ಷರಸ್ಥ ಹೆಣ್ಣು ಮಕ್ಕಳ ಕೊರಳುಗಳಿಂದ ಇಂಥ ಸುಮಧುರ ಪದಗಳು ಕಾರಂಜಿಗಳಂತೆ ಹೇಗೆ ಚಿಮ್ಮುತ್ತಿದ್ದವೋ ? ನಿಜಕ್ಕೂ ಈಗಲೂ ನನಗೆ ವಿಸ್ಮಯದ ಸಂಗತಿಯೇ ಸರಿ. ಗಂಟೆಗಟ್ಟಲೆ ಹೊಲಗದ್ದೆಗಳಲ್ಲಿ ಶ್ರಮ ತಣಿಸುವ ಪದಗಳನ್ನು, ಮದುವೆ ಮನೆಗಳಲ್ಲಿ ಸೋಬಾನೆ ಹಾಡುಗಳನ್ನು ಯಾವ ಬತ್ತದ ನೆನಪಿನ ಬುತ್ತಿಯಿಂದ ಹೊರ ತೆಗೆಯುತ್ತಿದ್ದರೋ…? ನನಗೆ ಈಗಲೂ ಜನಪದ ಸಾಹಿತ್ಯವೇ ಎಲ್ಲಾ ಸಾಹಿತ್ಯದ ತಾಯಿ ಬೇರು ಅನ್ನಿಸುತ್ತದೆ. ಜನಪದಕ್ಕೆ ಶ್ರೇಷ್ಠತೆಯ ವ್ಯಾಧಿ ಯಾವೊತ್ತೂ ಅಂಟಲಾರದು. ಏಕೆಂದರೆ ಅದು ನೇರಾನೇರವಾದದ್ದು ಮತ್ತು ವಾಸ್ತವವಾದದ್ದು. ಅದಕ್ಕೆ ಸುಣ್ಣ ಬಣ್ಣಗಳ ಗೊಡವೆಯೇ ಬೇಕಿಲ್ಲ. ಆದ್ದರಿಂದಲೇ ಅದು ಶಕ್ತಿಯುತವಾಗಿ ಶತಮಾನಗಳು ಉರುಳಿದರೂ ನಿರಂತರವಾಗಿ ಉಸಿರಾಡಿಕೊಂಡಿದೆ.
(ಖ್ಯಾತ ಚಿಂತನಕಾರ ಡಾ.ವಡ್ಡಗೆರೆ ನಾಗರಾಜಯ್ಯ ಅವರ ತಾಯಿ ಮತ್ತು ಕರ್ನಾಟಕ ಜಾನಪದ ಪರಿಷತ್ತು, ನಾಡೋಜ ಎಚ್.ಎಲ್.ನಾಗೇಗೌಡ ಪ್ರಶಸ್ತಿ ಪುರಸ್ಕೃತೆ ಜಾನಪದ ಹಾಡುಗಾರ್ತಿ ವಡ್ಡಗೆರೆ ಕದರಮ್ಮ, ಅವರ ಬಾಯಲ್ಲಿ ಜಾನಪದ, ಸೋಬಾನ ಹಾಡುಗಳು).
ನಾನು ಎಂ ಎ ಫಸ್ಟ್ ಕ್ಲಾಸಿನಲ್ಲಿ ಪಾಸಾಗಿದ್ದರೂ ಮೂರು ವರ್ಷಗಳ ಕಾಲ ಊರಿನಲ್ಲಿ ಬೇಸಾಯ ಮಾಡಿಕೊಂಡೇ ಇದ್ದೆ. ಆಳುಗಳ ಸಮಕ್ಕೆ ಹೊಲಗದ್ದೆಗಳಲ್ಲಿ ಎಲ್ಲಾ ಕೆಲಸಗಳನ್ನೂ ಮಾಡುತ್ತಿದ್ದೆ. ರಾಗಿ, ಬತ್ತದ ಪೈರು ಹಾಕುವಾಗ ಮಣ್ಣಿನ ಬದಿಯಲ್ಲಿ ಕಾಲುಗಳನ್ನು ಎಳೆಯುತ್ತಾ ಪೈರು ಹಾಕುವ ಹೆಂಗಸರಿಗೆ ಪೈರಿನ ಸಿವುಡುಗಳನ್ನು ಅಂದಿಸುತ್ತಿದ್ದದ್ದು ಮಜ ಕೊಡುವ ಕೆಲಸವಾಗಿರುತ್ತಿತ್ತು. ಪಟ ಹಸನು ಮಾಡುತ್ತಾ ಪೈರಿನ ಸಿವುಡುಗಳನ್ನು ಕೊಡುತ್ತಿದ್ದ ಗಂಡಸರು ವರಸೆಯಾಗುವ ಹೆಂಗಸರ ಕೈಗೆ ಸಿವುಡಗಳನ್ನು ಕೊಡದೆ ಅವರ ಕಾಲುಗಳ ಕೆಳಕ್ಕೆ ಬೇಕಾಗಿಯೇ ದೂರದಿಂದ ಎಸೆಯುತ್ತಿದ್ದರು. ಗದ್ದೆಯ ನೀರು ಅವರ ಕಾಲು ಸಂದುಗಳಿಗೆ ಚಿಮ್ಮುತ್ತಿತ್ತು. ಆಗ ಹೆಂಗಸರು ” ಓಹೋ ಮಾಮಣ್ಣೋ ಜಾಸ್ತಿ ವಗಲು ಮಾಡ್ಬೇಡ, ಅದನ್ನೂ ಕಿತ್ತು ಪೈರ್ ಜೊತೆ ನಾಟಿ ಮಾಡ್ಬಿಟ್ಟೇನು. ಆಮ್ಯಾಕೆ ಉಚ್ಚೆ ಉಯ್ಯೋಕೆ ಊದ್ಗೊಳ್ವೆ ಕಟ್ಕಬೇಕಾದೀತು” ಎಂದು ಹುಸಿಕೋಪದಿಂದ ತಗುಲಿಕೊಳ್ಳುತ್ತಿದ್ದರು. ಆಗ ಜೊತೆಯ ಹೆಂಗಸರು ” ಪಾಪ, ಸುಮ್ಕಿರಮ್ಣೆ ಎಲ್ಲೋ ಕೈತಪ್ಪಿ ಬಂದು ಬಿದ್ದಿರ್ಬೇಕು. ಮನೇಲಿರೋ ಒಂದು ಊದ್ಗೊಳ್ವೆನೂ ಈಯಪ್ಪ ಉಚ್ಚೆ ಉಯ್ಯೋಕೆ ಸಿಗಾಕ್ಕೊಂಡ್ರೆ ಹೆಣ್ತಿ ಯಾವುದ್ರಾಗೆ ಒಲೆ ಊದ್ತಾಳೆ, ಮೊದ್ಲೆ ಮಳೆಗಾಲ ಬೇರೆ. ಹಸಿ ಸೌದೆ ಜೊತೆ ಒದ್ದಾಡಿ ಹೊಗೆ ಜೊತೆ ಉಸಿರು ಕಟ್ಕಂಡಾತು ” ಎಂದು ಪರಿಸ್ಥಿತಿಯನ್ನು ತಿಳಿಗೊಳಿಸುವುದರೊಂದಿಗೆ ಎಲ್ಲರ ನಗುವೂ ಬೆರೆತು ಮಡಿಗಳಲ್ಲಿನ ನೀರೂ ಕಿಲಕಿಲ ನಕ್ಕಂತೆ ಭಾಸವಾಗುತ್ತಿತ್ತು.
ಅಂಥ ಭಾಷೆಯಲ್ಲಿ ಹಳ್ಳಿಗರು ಯಾವೊತ್ತೂ ಸೂಚ್ಯಾರ್ಥಗಳನ್ನು ಹುಡುಕುತ್ತಿರಲಿಲ್ಲ. ದೊಡ್ಡವರೇ ಏನು ನಾವು ಮಕ್ಕಳು ಕೂಡಾ ಅಂಥ ಭಾಷೆಯನ್ನು ಯಾವ ಮುಜುಗರವೂ ಇಲ್ಲದೆ ಮಾತನಾಡುತ್ತಿದ್ದೆವು. ನಮ್ಮ ಆಟಗಳ ಸಮಯದಲ್ಲೂ ಕೆಲವು ಹಾಡುಗಳಲ್ಲಿ ದೇಶಿಯ ಭಾಷೆಯ ಒರಟುತನ ನುಸುಳುತ್ತಿತ್ತು. ಆದರೆ ಯಾವೊತ್ತೂ ವೊಲ್ಗಾರಿಟಿಯನ್ನು ಮಾತ್ರ ನಮ್ಮ ಆಡು ಭಾಷೆಗಳಲ್ಲಿ ಗುರುತಿಸುತ್ತಲೂ ಇರಲಿಲ್ಲ. ದೇಹದ ಭಾಗಗಳ ಹೆಸರನ್ನು ಯಾವ ನಯ ನಾಜೂಕೂ ಇಲ್ಲದೆ ಅವುಗಳ ಮೂಲ ಹೆಸರುಗಳಲ್ಲೇ ಉಚ್ಚಾರಣೆ ಮಾಡಲಾಗುತ್ತಿತ್ತು. ಆದರೆ ಮಲೆನಾಡು ಮತ್ತು ಕರಾವಳಿ ಪ್ರದೇಶಗಳ ಗ್ರಾಮಗಳಲ್ಲಿ ನಮ್ಮ ಬಯಲು ಸೀಮೆಯ ಭಾಷೆ ಬಳಕೆಯಿಲ್ಲದಿರುವುದು ಮುಂದೆ ನಾನು ಮಂಗಳೂರು, ಸಿರಸಿ ಮುಂತಾದ ಸ್ಥಳಗಳಲ್ಲಿ ಕೆಲಸ ಮಾಡುವಾಗ ಅರಿವಿಗೆ ಬಂದಿತ್ತು. ಬೀದಿಗಳಲ್ಲಿ ಬುಗುರಿ ಆಟ ಆಡುವಾಗ ” ಬಂಗರಿ ಬಂಗರಿ ಎಂಥಾ ಬಂಗರಿ, ಬೇವಿನ ಬಂಗರಿ, ಜಾಲಿ ಬಂಗರಿ, ಬೆಳ್ಳಿ ಬಂಗರಿ, ಚಿನ್ನದ ಬಂಗರಿ ಬುಲಾಕು ರಾಣಿನ ಹಿಡ್ಕೊಂಡ್ ದೆಂಗ್ರಿ ” ಎಂದು ಜೋರಾಗಿ ಹಾಡುತ್ತಾ ಮೈ ಮರೆಯುತ್ತಿದ್ದೆವು. ಯಾರಾದರೂ ದೊಡ್ಡೋರಿದ್ದರೆ ” ಉಗಿರೋ ಮುಖಕ್ಕೆ ಆಹಾ ಎಂಥಾ ಹಾಡೇಳ್ತಿದ್ದೀರಪ್ಪ ” ಎಂದು ಬೈಯ್ಯುತ್ತಿದ್ದರು. ಅಂಥ ಟೈಮಿನಲ್ಲಿ ಮರಾಠಿಗರ ರಾಣೆಮ್ಮಜ್ಜಿಯೋ ಇಲ್ಲವೆ ಸೂಲಗಿತ್ತಿ ತಿಮ್ಮಕ್ಕಜ್ಜಿಯೋ ಇದ್ದರೆ ಬೈದವರನ್ನು ” ಓಹೋ ಮುಚ್ಕೊಳ್ರಪ್ಪ ಸಾಕಿನ್ನ. ಪಾಪ, ಆ ಹುಡುಗ್ರು ಏನಂಥ ಹೊಲ್ಸು ಮಾತಾಡಿದ್ರು. ಜಗತ್ನಾಗೆ ಇಲ್ಲದಿದ್ದೇನಾದ್ರೂ ಅವುರ್ ಬಾಯಿಂದ ಉದುರ್ತಾ ಅವ್ವೇನು. ನೀವೂ ಮಕ್ಳಾಗಿದ್ದಾಗ ಅದುನ್ನೆ ಹಾಡ್ತಿರ್ಲಿಲ್ವಾ ..” ಎಂದು ತಗುಲಿಕೊಳ್ಳುತ್ತಿದ್ದರು. ಆಟವಾಡುವಾಗ ಸಡನ್ನಾಗಿ ಮಳೆ ಬಂದರೆ ಕುಣಿಯುತ್ತಾ ” ಮಳೆ ಬಂತ್ ಮಳೆ ಬಂತ್ ಮಾತಾಡ್ಕಳಿ, ಕೆಮ್ಮಣ್ಣು ಗುಡ್ಡೆ ಮೇಲ್ ಕೇದಾಡ್ಕಳಿ ” ಎಂದು ಮನೆಯ ಮುಂದೆಯೇ ಕೂಗಾಡುತ್ತಿದ್ದೆವು.

ಫೋಟೋ ಕೃಪೆ : business-standard
ಮದುವೆ, ವಸಗೆ ಮುಂತಾದ ಸಮಾರಂಭಗಳಲ್ಲಿ ಬಸ್ತೆಮ್ಮ, ಸಂಜೀವಮ್ಮ, ಸಿನ್ಗಂಗಮ್ಮ, ಗಂಗಮ್ಮ ಓಬಮ್ಮ, ಗೂನಮ್ಮ, ನಾರಾಯಣಮ್ಮ ಮುಂತಾದವರು ಸಂಧರ್ಭಕ್ಕೆ ತಕ್ಕಂತೆ ತಲೆದೂಗುವಂತೆ ಸೋಬಾನೆ ಹಾಡುಗಳನ್ನು ಸರಾಗವಾಗಿ ಗಂಟೆಗಟ್ಟಲೆ ಹಾಡುತ್ತಿದ್ದರು ಕೆಲವು ಪದಗಳನ್ನು ವ್ಯಕ್ತಿ ಮತ್ತು ಸಂದರ್ಭಗಳ ಮೇಲೆ ಕಟ್ಟಿ ತಕ್ಷಣವೇ ಹಾಡುತ್ತಿದ್ದರು. ಆಲೆಮನೆ ಇಟ್ಟಾಗಲಂತೂ ಬಸ್ತೆಮ್ಮ ಕಂಪಲ್ಸರಿಯಾಗಿ ಬಂದು ಒಂದೆರಡು ಪದಗಳನ್ನು ಹಾಡಿ ಮಡಿಲು ತುಂಬಾ ಬೆಲ್ಲ ಹಾಕಿಸಿಕೊಂಡು ಹೋಗುತ್ತಿದ್ದಳು. ಆಕೆ ಎಲೆಡಿಕೆ ನಮಿಲಿ ಹಾಡಲು ಶುರುಮಾಡಿದರೆ ಆಲೆಮನೆಯಲ್ಲಿ ಕೆಲಸ ಮಾಡುತ್ತಿದ್ದವರಲ್ಲದೆ ಹೊಲಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದವರು ಕ್ಷಣಹೊತ್ತು ಕೆಲಸ ನಿಲ್ಲಿಸಿ ಬಸ್ತೆಮ್ಮನ ಮುಂದೆ ಕೂತುಕೊಳ್ಳುತ್ತಿದ್ದರು. ಮೂರ್ನಾಲ್ಕು ಪದಗಳನ್ನು ಹಾಡಿ ಕೊನೆಯದಾಗಿ ” ನಿನ್ ಆಲೆಮನೆಗೆ ನನ್ ಮಿಂಡುನ್ತುಣ್ಣೆ ಸೋಬಾನೆ ಸೋಬಾನವೆ, ನಿನ್ನ ಬೆಲ್ದುಂಡಿಗೆ ನನ್ ಮಿಂಡುನ್ತುಣ್ಣೆ ಸೋಬಾನ ಸೋಬಾನವೆ, ನಿನ್ ಕಬ್ಬಿನಾಲ್ಗೆ ನನ್ ಮಿಂಡುನ್ತುಣ್ಣೆ ಸೋಬಾನ ಸೋಬಾನವೆ, ನಿನ್ ಕಬ್ಬಿನ್ ಪಿಚ್ಗೆಗ್ ನನ್ ಮಿಂಡುನ್ತುಣ್ಣೆ ಸೋಬಾನ ಸೋಬಾನವೆ, ನಿನ್ ಕಾಕಂಬಿಗ್ ನನ್ನ ಮಿಂಡುನ್ತುಣ್ಣೆ ಸೊಬಾನ ಸೋಬಾನವೆ ” ಎಂದು ಹಾಡಿ ಮಂಗಳ ಹಾಡುತ್ತಿದ್ದಳು. ಆಲೆಮನೆಯ ಯಜಮಾನ ಕಬ್ಬು, ಬೆಲ್ಲ ಕೊಡಲು ನಿರಾಕರಿಸಿದಾಗ ಹಾಡುವ ಪದ, ಇದು ಜನಪದ ಬಂಡಾಯದ ಪದವೇ ಇರಬೇಕು. ಜನಪದದಲ್ಲೂ ಶೃಂಗಾರ, ಬಂಡಾಯ, ಶೌರ್ಯ, ಪ್ರೇಮ, ಕಾಮ, ದುಃಖದ ಅಂಶಗಳು ಯೇಥೇಚ್ಚವಾಗಿ ಸಂಯೋಜನೆಗೊಂಡಿವೆ. ಆದ್ದರಿಂದಲೇ ಜನಪದ ಸದಾ ಜೀವಂತಿಕೆಯಿಂದ ಕೂಡಿರುತ್ತದೆ. ಕೋಲಾಟ, ಮೇಲಾಟ, ಹುಣ್ಣಿಮೆ ಹಬ್ಬ, ಸುಗ್ಗಿ ಹಬ್ಬ ಮುಂತಾದ ಸಂದರ್ಭಗಳಲ್ಲಿ ಮಹಿಳೆಯರೂ ಹೆಚ್ಚಾಗಿ ಭಾಗವಹಿಸುತ್ತಾ ತಮ್ಮ ಪ್ರತಿಭೆಗಳನ್ನು ಮೆರೆಯುತ್ತಿದ್ದರು. ಹಳ್ಳಿಗರ ಕಷ್ಟ ಕೋಟಲೆ, ದುಃಖ ದುಮ್ಮಾನಗಳನ್ನು ಮರೆಸುವಲ್ಲಿ ಜನಪದ ಸಾಹಿತ್ಯ, ಸಂಸ್ಕೃತಿ, ಜನಪದ ಕಲೆ ಮಹತ್ವದ ಪಾತ್ರ ವಹಿಸುತ್ತಿದ್ದವು. ಜನಪದ ಅಂದರೇನೇ ಪ್ರೀತಿ, ವಿಶ್ವಾಸ, ಸಹಕಾರ ತುಂಬಿದ ಸಮುದಾಯದ ಬದುಕು. ಕೃಷಿ ಬದುಕಿನ ಕಣಕಣದಲ್ಲೂ ಜನಪದ ಹಾಸುಹೊಕ್ಕಾಗಿದೆ.
ಜಾಗತೀಕರಣದಿಂದಾಗಿ ಮನುಷ್ಯ ಸಂಬಂಧಗಳು ವ್ಯಾವಹಾರಿಕ ಸಂಬಂಧಗಳಾಗಿ ರೂಪಾಂತರಗೊಳ್ಳುತ್ತಿರುವ ಪ್ರಸ್ತುತ ಕಾಲಮಾನದಲ್ಲಿ ಜನಪದ ಕೂಡಾ ನಿಧಾನವಾಗಿ ಸವಕಲಾಗುತ್ತಿದೆ. ಹಳೆಯ ತಲೆಮಾರುಗಳೊಂದಿಗೆ ಜನಪದ ಸಾಹಿತ್ಯ, ಸಂಸ್ಕೃತಿ, ಆಚರಣೆಗಳೂ ಮರೆಯಾಗುತ್ತಿವೆ. ಆಧುನಿಕ ಸಂಪರ್ಕ ಸಾಧನಗಳು, ತಂತ್ರಜ್ಞಾನ ಮನುಷ್ಯನ ಅಭಿವೃದ್ಧಿಯನ್ನು ದ್ವಿಗುಣಗೊಳಿಸುತ್ತಿದ್ದರೂ ಅವನಿಂದ ಮಾನವೀಯತೆಯನ್ನು ಕಸಿದುಕೊಳ್ಳುತ್ತಿವೆ. ಬದಲಿಗೆ ಸ್ವಾರ್ಥ, ಕುಟಿಲತೆ, ಕುತಂತ್ರವನ್ನು ತುಂಬುತ್ತಿವೆ. ನಾನು ಮದುವೆಯಾದಾಗ ನಡೆದ ಘಟನೆಯೊಂದನ್ನು ನೆನಪಿಸಿಕೊಳ್ಳುತ್ತಾ ಈ ಲೇಖನವನ್ನು ಮುಗಿಸುತ್ತೇನೆ. ನಾನು ಸರಳವಾಗಿ ಪ್ರೇಮ ವಿವಾಹವಾಗಿ ಊರಿಗೆ ಹೋದಾಗ ನನ್ನ ಹೆಂಡತಿಯನ್ನು ನೋಡಲು ಸಿನ್ಗಂಗಮ್ಮ, ಸಂಜೀವಮ್ಮ, ಬಸ್ತೆಮ್ಮ, ಗಂಗಮ್ಮ, ಓಬಮ್ಮ ಎಲ್ಲರೂ ಬಂದಿದ್ದರು. ಹಟ್ಟಿ ಮುಂದೆ ನಿಂತವರಿಗೆ ಅಡಿಕೆಲೆಗೆಂದು ನೂರು ರೂಪಾಯಿ ಕೊಟ್ಟಿದ್ದೆ. ಸಂಜೀವಮ್ಮ ಮತ್ತು ಸಿನ್ಗಂಗಮ್ಮ ಸೋಬಾನೆ ಹಾಡನ್ನು ಶುರುಮಾಡಿಯೇ ಬಿಟ್ಟರು. ಹತ್ತು ನಿಮಿಷ ಹಾಡಿ ಮಂಗಳ ಹಾಡುವಾಗ ” ಕರಿತುಣ್ಣೆ ಕೇಶ್ವಣ್ಗೆ ಬಿಳಿ ಹೆಂಡ್ತಿ ಸಿಕ್ಕಿದ್ಲು ಸೋಬಾನ ಸೋಬಾನವೆ ” ಎಂದು ಮುಗಿಸಿದ್ದರು. ನನ್ನ ಹೆಂಡತಿ ಕಕರುಮಕರುಗೊಂಡು ನಾಚಿಕೆಯಿಂದ ಮನೆ ಒಳಕ್ಕೆ ಓಡಿದ್ದಳು. ಅಲ್ಲೇ ಕುಳಿತಿದ್ದ ನಮ್ಮಪ್ಪ ” ಆಹಾ ಸಂಜೀವಮ್ಮ ನೀವಿದ್ದೀರಲ್ಲ..” ಎಂದು ಟವೆಲ್ ಕೊಡವಿಕೊಂಡು ಬಣವೆಯ ಕಡೆ ನಡೆದಿದ್ದ. ಮೊನ್ನೆ ಊರಿಗೆ ಹೋದಾಗ ಎಲ್ಲಾ ನೆನಪಾಗಿತ್ತು. ಊರಿನಲ್ಲಿ ನಮ್ಮಪ್ಪನನ್ನೂ ಸೇರಿಸಿಕೊಂಡು ಯಾರೂ ಉಳಿದಿಲ್ಲ. ಜನಪದರಿಲ್ಲದ ಊರುಗಳೀಗ ಭಣಗುಡುತ್ತಿವೆ.

ಕತೆಗಾರ ಕೇಶವರೆಡ್ಡಿ ಹಂದ್ರಾಳ ಮತ್ತು ಮೊಮ್ಮಗ ಧೀರ
ಹಿಂಗಾರಿನಲ್ಲಿ ಮಳೆ ಬರದೆ ಮಳೆರಾಯನನ್ನು ಮಾಡುವಾಗ ” ಅತ್ತೆಮತ್ತೆಮ್ಮ ನಿನ ಮಗಳು ಬಲು ಬಿತ್ತಾರಿ ಕಾಣವ್ವ..” ಹುಣ್ಣಿಮೆ ಹಬ್ಬದಲ್ಲಿ ” ಬೆಳದಿಂಗ್ಳು ಬೆಳಕಿನಾಗೆ ನಮ್ಮಣ್ಣ ಹುರುಳಿಯಾ ಚೆಲ್ಲಲೋದ. ” ಮುಂತಾದ ಹಾಡುಗಳು ಈಗಲೂ ಎದೆ ಕಿವಿಗಳಲ್ಲಿ ರಿಂಗುಣಿಸುತ್ತಿವೆ. ನಮ್ಮ ನೆರೆಯ ಹಳ್ಳಿಯ ಗೆಳೆಯ ಅಗ್ರಹಾರ ಕೃಷ್ಣ ಮೂರ್ತಿಯವರು ಬಹಳ ಹಿಂದೆಯೇ ಬೆಳದಿಂಗ್ಳಪ್ಪನ ಪೂಜೆಯ ಹಾಡುಗಳ ಸಂಪಾದನೆಯನ್ನು ಮಾಡಿದ್ದಾರೆ. ನಮ್ಮ ಸೀಮೆಯ ಕಡೆ ಚಂದ್ರಮ್ಮನನ್ನು ಕೂರಿಸಿ ಹೆಣ್ಣು ಮಕ್ಕಳು ಹಾಡುತ್ತಿದ್ದ ಬೆಳಂದಿಗಳ ಹಾಡುಗಳು ಹುಣ್ಣಿಮೆಯ ಬೆಳದಿಂಗಳಿನಂತೆಯೇ ಇವೆ. ಅಗ್ರಹಾರ ನನಗೂ ಒಂದು ಪ್ರತಿಯನ್ನು ಕೊಟ್ಟಿದ್ದರು. ಓದಲು ತೆಗೆದುಕೊಂಡು ಹೋದ ಯಾರೋ ಕೊಡಲು ಮರೆತಿದ್ದಾರೆ. ಯಾರಿಗೆ ಕೊಟ್ಟೆನೆಂದು ನಾನೂ ಮರೆತಿರುವೆ. ಇಂದಿನ ದಿನ ಮಿಡ್ಲಿಸ್ಕೂಲಿಗೆ ಹೋಗುವ ಮಕ್ಕಳು ಕೂಡಾ ಮೊಬೈಲ್ನಲ್ಲಿ, ಕಂಪ್ಯೂಟರ್ ಗಳಲ್ಲಿ ನೀಲಿ ಚಿತ್ರಗಳನ್ನು ವೀಕ್ಷಿಸುತ್ತಾರಂತೆ. ಇಂಥವರಿಗಿಂತಲೂ ಎದೆಯಲ್ಲಿ ಏನೂ ಇಟ್ಟುಕೊಳ್ಳದೆ ನೇರಾನೇರ ಮಾತನಾಡುತ್ತಿದ್ದ ಅಂದಿನ ಹಳ್ಳಿಗಾಡಿನ ಮಕ್ಕಳೇ ಮೇಲಲ್ಲವೆ. ಲೇಖನ ಓದಿದ ನಂತರ ಇದರಲ್ಲಿ ವೊಲ್ಗಾರಿಟಿಯಿದೆಯೆಂದು ಮಾತ್ರ ಅನ್ನಬೇಡಿ.
ಈ ಪುಟ್ಟ ಲೇಖನವನ್ನು ಇಂದಿಗೆ ಎರಡು ವರ್ಷಗಳನ್ನು ಪೂರೈಸುತ್ತಿರುವ ನನ್ನ ಮೊಮ್ಮಗ ಧೀರ ನ ಜೇಬಿಗೆ ಪ್ರೀತಿಯಿಂದ.
- ಕೇಶವರೆಡ್ಡಿ ಹಂದ್ರಾಳ (ಸುಮಾರು ಐನೂರು ಕಥೆಗಳು , ಮುನ್ನೂರು ಪ್ರಬಂಧಗಳು ಕನ್ನಡದಲ್ಲಿ ಪ್ರಕಟಗೊಂಡಿವೆ. ಕೆ ಎ ಎಸ್ ಅಧಿಕಾರಿಯಾಗಿ ನಿವೃತ್ತಿಯನ್ನು ಹೊಂದಿದ್ದಾರೆ)
