ಯಾವುದೇ ಕಾರಣವಿಲ್ಲ, ಅನ್ನುವುದಕ್ಕಾಗಿಯೇ ಗೆಳೆತನ ಎನ್ನವುದಿದೆ. ಕಾರಣಗಳಿದ್ದರೆ ಅದು ವ್ಯಾಪಾರವಾಗಿರುತ್ತಿತ್ತು – ಡಾ. ರಾಜಶೇಖರ ನಾಗೂರ, ತಪ್ಪದೆ ಮುಂದೆ ಓದಿ ಸ್ನೇಹದ ಬೆಲೆ…
ಹಾರಲು ಬರದ ಇರುವೆಯು ಈ ಭೂಮಿಗೆ ಹೇಳುತ್ತದೆ ‘ಈ ಪ್ರಪಂಚ ಅದೆಷ್ಟು ವಿಶಾಲವೆಂದು’. ಅದೇ ಹಾರಲು ಬರುವ ಹಕ್ಕಿಯು ಗಾಳಿಗೆ ಹೇಳುತ್ತದೆ ‘ಈ ಪ್ರಪಂಚ ಅದೆಷ್ಟು ಚಿಕ್ಕದು ಎಂದು’. ಅವರವರ ನೋಡುವ ಸಾಮರ್ಥ್ಯಕ್ಕೆ ಅನುಗುಣವಾಗಿ ಈ ಪ್ರಪಂಚ ಗೋಚರಿಸುತ್ತದೆ. ಹಾಗೆಯೇ ಈ ಸ್ನೇಹವು ಅಷ್ಟೇ. ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಅರ್ಥ ಪಡೆದು ಗೋಚರವಾಗುತ್ತದೆ.
ಸ್ನೇಹವು, ದೇವರಂತೆ ಸ್ಥಿರಸ್ಥಾಯಿಯಾಗಿ ಪ್ರತಿಷ್ಠಾಪನೆಯಾಗಬೇಕಾದರೆ ನಾವು ನಂಬಿಕೆ, ನಿಸ್ವಾರ್ಥತೆ, ಪ್ರೀತಿ ಮತ್ತು ಭರವಸೆಗಳ ನಾಲ್ಕು ಗೋಡೆಗಳನ್ನು ಸುತ್ತಲೂ ನಿಲ್ಲಿಸಿ ಗುಡಿ ಕಟ್ಟಲೇಬೇಕು. ಯಾರಿಗೆ ಈ ನಾಲ್ಕು (ನಂಬಿಕೆ, ನಿಸ್ವಾರ್ಥತೆ, ಪ್ರೀತಿ ಹಾಗೂ ಭರವಸೆ) ಗೋಡೆಗಳನ್ನು ಕಟ್ಟುವ ತಾಕತ್ತಿದೆ ಅಂತವರಿಗೆ ಮಾತ್ರ ಸ್ನೇಹ ಸುಧೆಯ ಘಮಲನ್ನು ಆಸ್ವಾದಿಸಿ ಆಘ್ರಾಣಿಸಲು ಶಕ್ಯವಾಗುವುದು. ವ್ಯವಹಾರಿಕ ಮನಸುಗಳಲ್ಲಿ ಸ್ನೇಹ ಎಂದೆಂದೂ ನೆಲೆ ನಿಲ್ಲುವುದಿಲ್ಲ.
ದೇವಸ್ಥಾನದಲ್ಲಿ ದೇವರ ಮುಂದೆ ಹೂವು, ದೀಪದ ಜ್ವಾಲೆ, ತಂಪಾದ ನೀರು, ಈ ಮೂರು ಇರುತ್ತವೆ. ನೀರನ್ನು ಮೈಮೇಲೆ ಹಾಕಿಕೊಂಡು ದೀಪವನ್ನು ಮುಂದಿಟ್ಟುಕೊಂಡು, ಹೂವನ್ನು ಮಾತ್ರ ಮುಡಿಗೇರಿಸಿಕೊಳ್ಳುವ ದೇವರಿಗೆ ಗೊತ್ತಿದೆ ಯಾರನ್ನು ಎಲ್ಲಿಡಬೇಕೆಂದು. ಹೀಗೆಯೇ ಜೀವನದಲ್ಲಿ ಉರಿಯುವವರನ್ನು ದೂರವಿಡಿ, ಹರಿದು ಹೋಗುವವರನ್ನು ಹರಿದು ಹೋಗಲು ಬಿಡಿ, ಕೋಮಲವಾಗಿ ಜೊತೆ ನೆಲೆ ನಿಲ್ಲುವವರನ್ನು ಹೂವಂತೆ ಮುಡಿಗೇರಿಸಿಕೊಳ್ಳಿ.
ಪರಿಸ್ಥಿತಿಯನ್ನು ಬದಲಾಯಿಸುವ ಸ್ನೇಹಿತರನ್ನು ಇಟ್ಟುಕೊಳ್ಳಿ. ಪರಿಸ್ಥಿತಿಗೆ ತಕ್ಕಂತೆ ಬದಲಾಗುವ ಸ್ನೇಹಿತರನ್ನಲ್ಲ. ಹಾರಾಡುವುದೆಲ್ಲವೂ ಹಕ್ಕಿಯಲ್ಲ. ಸೊಳ್ಳೆಯೂ ಆಗಿರಬಹುದು. ಹೀಗಾಗಿ ಆಕಾಶದೆತ್ತರಕ್ಕೆ ಹಾರುವ ಹಕ್ಕಿಯ ಸ್ನೇಹ ಬೇಕೋ ಅಥವಾ ಚಂರಂಡಿಯ ಮೇಲೆ ಹಾರಾಡುವ ಸೊಳ್ಳೆಯ ಸ್ನೇಹ ಬೇಕೋ ನಾವೇ ನಿರ್ಧರಿಸಬೇಕು. ಅಲ್ವಾ! ಹಾಗಾದರೆ ಕೂಡಲೇ ನಿರ್ಧರಿಸಿ. ಬದುಕು ಬಹಳ ಚಿಕ್ಕದಿದೆ.
ದಿನೇ ದಿನೇ ಕಡಿಮೆಯಾಗುತ್ತಿರುವ ಆಯಸ್ಸಿನಲ್ಲಿ, ಒಳ್ಳೆಯ ಸ್ನೇಹ ಸುಧೆಯನ್ನು ದಿನೇ ದಿನೇ ಹೆಚ್ಚಿಸಿಕೊಳ್ಳೋಣ. ಅಲ್ವಾ
- ಡಾ. ರಾಜಶೇಖರ ನಾಗೂರ