ಕೂಲಿಕಾರರಿಗೆ, ಮನೆಕೆಲಸವರಿಗೆ ಸರಿಯಾದ ಸಮಯಕ್ಕೆ ಸಂಬಳ ಸಿಗುತ್ತದೆ. ಆದರೆ ವಿದ್ಯೆಯನ್ನು ಕಲಿಸುವ ಅನುದಾನರಹಿತ ಶಿಕ್ಷಕರಿಗೆ ಸಂಪೂರ್ಣ ಸಂಬಳ ಕೊಡದೆ, ಸಂಬಳ ಹಿಡಿದು ಕೊಡುವ ವಿದ್ಯಾ ಸಂಸ್ಥೆಗಳ ವಿರುದ್ಧ ಪ್ರೊ.ರೂಪೇಶ್ ಪುತ್ತೂರು ಅವರು ವ್ಯಕ್ತ ಪಡಿಸಿರುವ ಅಸಮಾಧಾನದ ಒಂದು ಪುಟ್ಟ ಲೇಖನ.ಮುಂದೆ ಓದಿ…
ಅಪ್ಪನಲ್ಲಿ ದುಡ್ಡು ಕೇಳಿದರೆ ಕೊಡುತ್ತಿದ್ದರು, ಆದರೆ ಅದಕ್ಕೆ ಲೆಕ್ಕ ಕೇಳುತ್ತಿದ್ದರು.”ಎಲ್ಲಿ? ಯಾಕೆ? ಎತ್ತ?”.
ಅದೇ ತಾಯಿಯನ್ನು ಪುಸಲಾಯಿಸಿದರೆ….
ಏನಾದರೂ ಅಪ್ಪ ಕೊಟ್ಟ ದುಡ್ಡು ಸಂತೆ, ಅಂಗಡಿಯಲ್ಲಿ ಖರ್ಚಾಗಿ ಬಾಕಿ ಇದ್ದ ರೂಪಾಯಿ ಸಾಸಿವೆ ಡಬ್ಬಿ, ರಾಗಿ #ಡಬ್ಬಿಯಿಂದ ತೆಗೆದು ಕೊಡುತ್ತಿದ್ದರು. ಎಂದೂ ಆ ಡಬ್ಬಿಗೆ ನಾನು ನೇರ ಕೈ ಹಾಕಿದವನಲ್ಲ. ಆ ಯೋಚನೆ ನನಗೆ ಯಾಕೋ ಇರಲೇ ಇಲ್ಲ.

ಫೋಟೋ ಕೃಪೆ : hindustan times
ಹದಿನಾರನೇ ವಯಸ್ಸಿನಿಂದ ಬಿಎಸ್ಸಿ ತನಕ ಮನೆಯಲ್ಲಿ #ಕ್ರಿಕೆಟ್_ಪಂದ್ಯಕ್ಕೆ ಹೋಗುತ್ತೇನೆ ಎಂದು, ಒಂದು ಜೊತೆ ಹಳೆ ಬಟ್ಟೆ ಪ್ಯಾಕ್ ಮಾಡಿ, ಭಾನುವಾರ ಕೂಲಿ ಕೆಲಸಕ್ಕೆ , ಊರಿನ ಆಲದ ಮರದ ಕೆಳಗೆ ತಲೆಗೆ ಬಟ್ಟೆ ಹಾಕಿ ಕಾಯುತ್ತಿದ್ದೆ. ಪ್ರಥಮ ಆದ್ಯತೆ ಕಾಂಕ್ರೀಟ್ ಕೆಲಸ, ಯಾಕೆಂದರೆ ಕೂಲಿ ಹದಿನೈದು ರೂಪಾಯಿ. ಬೇರೆ ಎಲ್ಲಾ ಕೆಲಸಕ್ಕೂ ಕಮ್ಮಿ ಕೂಲಿ.
ಮೇಸ್ತ್ರಿಗಳು ಯಾರೂ ಅಂದು ವಿದ್ಯಾವಂತರಾಗಿರಲಿಲ್ಲ. ಶಾಲೆಯ ಬಾಗಿಲು ನೋಡದವರೇ ಗರಿಷ್ಟ. ಮತ್ತೆ ಕೆಲವರು ೧-೨ಕ್ಲಾಸು ಕಲಿತವರು ಅಷ್ಟೇ. ಬೆಳಿಗ್ಗೆ ಕೆಲಸ ಶುರುವಾಗಿ, ಒಂದು ಹನ್ನೊಂದು ಗಂಟೆಗೆ ನಮಗೆ ಚಹಾ ಹಾಗೂ ತಿನ್ನಲು ದೋಸೆ/ ಅವಲಕ್ಕಿ / ಚೌಚೌ ಬಾತ್ ಏನಾದರೊಂದು ಸಿಗುತ್ತಿತ್ತು. ಅದನ್ನು ನಿಂತೇ ತಿನ್ನುತ್ತಿದ್ದೆವು. ನಂತರ ಪುನಃ ಕೆಲಸ ಮುಂದುವರಿಸಿ, ಸುಮಾರು ಒಂದು ಗಂಟೆಗೆ ಬಿಸಿ ಬಿಸಿ ಸುಡುಸುಡುವ ಊಟ. ಅದರ ನಂತರ ೨ಗಂಟೆಯವರೆಗಿನ ಬಿಡುವಿನಲ್ಲಿ ಒಂದು ನಿದ್ರೆ ಬರುತ್ತೆ.
ಆ ನಿದ್ದೆ ಉಫ್ ಅವರ್ಣನೀಯ.!!!
ಕೊಂಚ ಮಲಗಿದವರನ್ನು ೨ಗಂಟೆಗೆ ಐದು ನಿಮಿಷ ಮೊದಲೇ, ಮೇಸ್ತ್ರಿ ಬಂದು ಎಬ್ಬಿಸುತ್ತಾರೆ. ನಂತರ ಬಿರುಸಿನ ಕೆಲಸ ಶುರು. ನಾಲ್ಕು ಗಂಟೆಗೆ ಕೆಲಸ ಮಾಡುತ್ತಲೇ ಇರುವಾಗ ಒಂದು ಟೀ ಜೊತೆ ಗೋಳಿಬಜೆ/ ಚಟ್ಟಂಬಡೆ/ಬನ್ನು… ಕೆಲಸ ಮಾಡುತ್ತಲೇ ತಿನ್ನಬೇಕು,ಕುಡಿಯಬೇಕು. ಸುಮಾರು ಸಂಜೆ 5.30-6.00 ಗಂಟೆಗೆ ಕೆಲಸದ ಮುಕ್ತಾಯ. ನಾವು ಕೈ, ಕಾಲು ಶುದ್ಧೀಕರಿಸಿ ವಸ್ತ್ರ ಬದಲಾಯಿಸುವ ಹೊತ್ತಿಗೆ. ಮೇಸ್ತ್ರಿ ಅಂದಿನ ಕೂಲಿ ತಪ್ಪದೆ ಅಲ್ಲೇ ಕೊಡುತ್ತಾನೆ. ಅವನಿಗೆ ಆ ಮನೆ ಮಾಲಿಕ ದುಡ್ಡು ಕೊಟ್ಟಿರುವುದಿಲ್ಲವಾದರೂ, ಆ ಮೇಸ್ತ್ರಿ ನಮ್ಮ ಕೂಲಿ ಅಲ್ಲೇ ಕೊಡುತ್ತಾನೆ. ನಾನು ಮೇಸ್ತ್ರಿ ಯೊಂದಿಗೆ ತುಂಬಾ ಕೆಲಸ ಮಾಡಿದವನು. ಆದರೆ ಆ ಅವಿದ್ಯಾವಂತರಾದ ಆ ಮೇಸ್ತ್ರಿ ಗಳು ಎಂದೂ ನಮ್ಮ ಕೂಲಿಗೆ ಅಲೆದಾಡಿಸಿಲ್ಲ. ಕೆಲಸ ಆದ ಮೇಲೆ “#ಮನೆ_ಮಾಲೀಕ ದುಡ್ಡು ಕೊಟ್ಟಿಲ್ಲ” ಎಂಬ ಮಾತು ಹೇಳಿ ಕೂಲಿ ಕಾರ್ಮಿಕರ ರಕ್ತ ಬೆವರನ್ನು ಕುಡಿದು ಕುಪ್ಪಳಿಸಲಿಲ್ಲ.

ಇಂದು ಬೆಂಗಳೂರಿನ ಒಂದು ಪ್ರತಿಷ್ಠಿತ #ವಿದ್ಯಾಸಂಸ್ಥೆ, ಸುಮಾರು ಕನಿಷ್ಟ 500 ಕೋಟಿ corpus fund ಇರುವ ಸಂಸ್ಥೆ. ಹಲವು ವಿದ್ಯಾಲಯವನ್ನು ಮುಚ್ಚುತ್ತಾ ಬರುತ್ತಿರುವ ಸಂಸ್ಥೆ, ಕಳೆದ ಐದಾರು ತಿಂಗಳಿಂದ ಅನುದಾನ ರಹಿತ ಶಿಕ್ಷಕರಿಗೆ ಸಂಪೂರ್ಣ ಸಂಬಳ ಕೊಡದೆ, ಹಿಡಿದು ಇಟ್ಟ ಸಂಬಳದ ಬಡ್ಡಿ ತಿಂದು ತೇಗುವ ಆಡಳಿತ ಮಂಡಳಿ, ಎರಡು ವರುಷದಿಂದ ಇಂಕ್ರಿಮೆಂಟ್ ಕೊಡದೆ ನೌಕರರ ಪರದಾಟ ನೋಡಿ ಮನರಂಜನೆ ಹೀರುವ ಆಡಳಿತ ಮಂಡಳಿ, ಪ್ರತೀ ಸಂಸ್ಥೆಯ ಹಿರಿಯ ಶಿಕ್ಷಕರಿಗೆ ಜಾತಿ-ಮೈಬಣ್ಣದ ಆದಾರದ ಸಂಬಳ ಕೊಡುತ್ತಿದ್ದರೂ, ವಯಸ್ಸಾದ ಅಸಹಾಯಕತೆ ಶಿಕ್ಷಕರ (ಶಿಕ್ಷಕೇತರರ) ಊರುಗೋಲಾಯಿತು. ವಿದ್ಯಾರ್ಥಿಗಳು ಫೀಜು ಕಟ್ಟಿದರೂ ಸಂಬಳ ಕೊಡದೆ ಹಾಗೇ ಇರುವುದು ಕಂಡು , ಆಡಳಿತ ಮಂಡಳಿಯಲ್ಲಿ ತಮ್ಮ ಕಣ್ಣೀರಿಡಲು ಶಿಕ್ಷಕ-ಶಿಕ್ಷಕೇತರರು ಹೋದಾಗ. ಪೋಲಿಸರನ್ನು ಠಾಣೆಯಿಂದ ಕರೆಸಿದ (ಅಲ್ಲೇನಾಯಿತು ಊಹಿಸಿ) ಪ್ರಸಂಗ ಬಹಳಾ ಚಿಂತಿಸುವಂತೆ ಮಾಡಿತ್ತು.
ಒಂದು ಕಡೆ ಈ ಆಡಳಿತ ಮಂಡಳಿಯ ಮಹಾನ್ ವಿದ್ಯಾವಂತರು ಮತ್ತು ಇನ್ನೊಂದು ಕಡೆ ನನಗೆ ಅಂದಂದಿನ ದಿನಗೂಲಿ ಕೊಟ್ಟು ಕಳಿಸುವ ಅವಿದ್ಯಾವಂತರಲ್ಲಿ ಅವಿದ್ಯಾವಂತ ಮೇಸ್ತ್ರಿ
ಇವರಲ್ಲಿ ಮನುಷ್ಯನಾರು? ಅನುದಾನ ರಹಿತ ಶಿಕ್ಷಕ ಸರ್ಕಾರ ಹೇಳಿದ ಎಲ್ಲಾ ಕೆಲಸ ಮಾಡಬೇಕು. ಇಲ್ಲದಿದ್ದಲ್ಲಿ ಆಡಳಿತ ಮಂಡಳಿಗೆ ಹೇಳಿ, ಅನುದಾನ ರಹಿತನಿಗೆ ಶಿಕ್ಷೆ ಕೊಟ್ಟು ತೇಗುತ್ತದೆ. ಆದರೆ ಇದೇ ಸರ್ಕಾರದ ಯಾವುದೇ ಹುದ್ದೆಗೂ ಈ ನುರಿತ ಅನುದಾನ ರಹಿತನು ಅನರ್ಹ!!!
ಆಡಳಿತಮಂಡಳಿ ಕೊಡುವ ಕ್ರೂರತೆಗೆ ಸರ್ಕಾರ ಮೌನ ಸಂತಸ ವ್ಯಕ್ತಪಡಿಸುತ್ತದೆ. ಒಂದೇ ಸಂಸ್ಥೆಯ ೨೦ ವರುಷ ನುರಿತ ಅನುದಾನ ರಹಿತ ಶಿಕ್ಷಕನ ಸಂಬಳ ತಿಂಗಳಿಗೆ ರೂ. 35,000/- . ಯಾವುದೇ ಶಿಕ್ಷಕ ಸಂಘದವರಿಗೆ ಈ ಅನುದಾನರಹಿತರನ್ನು ಕಾಣುವುದು ಸಂಘದ fund rise activityಗೆ ಮಾತ್ರ ಎಂಬುವುದು ವಿಪರ್ಯಾಸ.
ಕೂಲಿ ಕೆಲಸ ಮಾಡಿ ಮೇಸ್ತ್ರಿ ಆಗಬಹುದು.
ಆದರೆ ಅನುದಾನ ರಹಿತ ಶಿಕ್ಷಕನ ಯಾವುದೇ experience ಅವನನ್ನು ಗುಲಾಮನಲ್ಲಿ ಗುಲಾಮ ಮಾಡಿಸುತ್ತದೆ. ಅನುದಾನ ರಹಿತನ ಜೀವಂತ ಶವದ ಮೇಲೆ ಜೈತ್ರಯಾತ್ರೆ ಹೋಗುವವರನ್ನು ನೋಡುತ್ತಾ…..
ನಿಮ್ಮವ ನಲ್ಲ
*ರೂಪು*
- ಪ್ರೊ.ರೂಪೇಶ್ ಪುತ್ತೂರು (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು, ಲೇಖಕರು)
