ಕಾಶಿ ಅನುಭವ (ಭಾಗ೬) – ಡಾ. ಪ್ರಕಾಶ ಬಾರ್ಕಿಮಾನವನ ಅಂತಿಮ ಯಾತ್ರಾರಾಧನೆ ನೈಜತೆ ಅನುಭವಿಸಲು “ಮಣಿಕರ್ಣಿಕಾ ಘಾಟ್”ಗೆ ಭೇಟಿ ನೀಡಲೆಬೇಕು. ಕೆಲ ಕ್ಷಣ ಕಳೆದರೆ ಸಾಕು…”ಸಾವಿನ ಭಯ” ಮಂಜಿನಂತೆ ಕರಗಿ ಆವಿಯಾಗುವುದು ದಿಟ. ಮುಂದೆ ಓದಿ ಡಾ. ಪ್ರಕಾಶ ಬಾರ್ಕಿ ಅವರ ಲೇಖನಿಯಲ್ಲಿ ಕಾಶಿ ಅನುಭವ.

#ಮಹಾ_ಸ್ಮಶಾನ

ನವೆಂಬರ್ ತಿಂಗಳಲ್ಲಿ ವಾರಣಾಸಿಯ ಬಿಸಿಲು ಚುರುಕು ಮುಟ್ಟಿಸುವಷ್ಟು ತೀಕ್ಷ್ಣ, ಸಂಜೆ ನೇಸರ ಕಣ್ಮರೆಯಾಗುವ ಮೊದಲೆ ಸಣ್ಣಗೆ ಮೈ ನಡುಗುವ ಚಳಿ ಆರಂಭವಾಗುತ್ತೆ. ಡಿಸೆಂಬರ್’ಗೆ ವೇಗದಲ್ಲಿ ಅಪ್ಪಳಿಸಲು “ತಾಲೀಮು” ನಡೆಸುತ್ತಿರುತ್ತೆ ಕೊರೆಯುವ ಚಳಿ.

ಮಧ್ಯಾಹ್ನದ ಬಿಸಿಲಿಗೆ ಬೆದರಿ.. ಎರಡು ಗ್ಲಾಸ್ “ಲಸ್ಸಿ” ಹೀರಿದ್ದಾಯಿತು, ಆಹ್ಹಾ..!! ಆ ಸ್ವಾದವೆ ಒಂದು ಹಬ್ಬ. ನಾಲಿಗೆ ನೀರೂರುತ್ತೆ‌. ಲಸ್ಸಿ ಮೇಲೊಂದಿಷ್ಟು “ಖೋವಾ”, ಅದರ ಮೇಲೆ ತೇಲುವ Dry fruits.

ನಂತರ.. “ಕಾಶಿ” ಪಾಲಕ (ಕ್ಷೇತ್ರ ಪಾಲಕ)ನಾದ “ಕಾಲ ಭೈರವ”ನ ದರ್ಶಿಸಿ. “ಕಾಶಿಯಲ್ಲಿದ್ದಷ್ಟು ದಿನ ನೀನೇ ಜವಾಬ್ದಾರಿ..!!” ಅಂತೇಳಿ, “ಅನುಮತಿ ಬೇಡಿ. ನಮ್ಮ ಸಂಪೂರ್ಣ ದೇಖರೇಖಿ, ಜವಾಬ್ದಾರಿ ಆತನ ಹೆಗಲಿಗೆ ಹಾಕಿದ್ದಾಯಿತು.

ಫೋಟೋ ಕೃಪೆ :trawell.in

ಜೀವನದ ಅಂತಿಮ ಯಾತ್ರೆ ಜರುಗುವ ಅಮೋಘ “ಘಾಟ್”ನತ್ತ ಮನಸ್ಸು ಎಳೆಯುತಿತ್ತು. ಹರಡಿಕೊಂಡ ಪುರಾತನ ಕೋಟೆಗಳಂತ ಕಟ್ಟಡಗಳು, ಕಟ್ಟಡಗಳು ಒಂದಕ್ಕೊಂದು “ಕಿವಿಯಲ್ಲಿ ಗುಟ್ಟು ಹೇಳಿಕೊಳ್ಳುವಂತೆ” ತಾಗಿಕೊಂಡು ನಿಂತಿವೆ‌. ಅವುಗಳ ಮಧ್ಯದ ಕೊರಕಲು ಸಂಧಿಯೇ “ಬೀದಿ”.

ಕಿರಿದಾದ ಬೀದಿ. ಅಲ್ಲಲ್ಲಿ ಮೆಲುಕು ಹಾಕುತ್ತಾ, “ಧ್ಯಾನ”ದಲ್ಲಿರುವಂತಿರುವ “ಗೋವು”ಗಳು. ದಡ್ಡನೆ ಎದುರಾಗುವ “ರಾಮ್ ನಾಮ್ ಸತ್ಯ ಹೈ….!!” ಪಠಿಸುತ್ತಿದ್ದ “ಶವ ಯಾತ್ರೆಯ” ಜನರ ಸಣ್ಣ ಗುಂಪುಗಳು, ಬೋಳು ತಲೆಯಲ್ಲಿ ವಾಪಸ್ಸಾಗುವ ಕೆಲವರು, ನಾಸಿಕ ಅಡರುವ ಗಂಧ, ಊದುಬತ್ತಿಯ ಘಮ. ಬೀದಿಯಲ್ಲಿ ಚಲ್ಲಿದ ಹೂಗಳ ಪಕಳೆಗಳು. “ಹ್ಞೂಂ‌..ಕರಿಸುತ್ತಾ” ಮಗ್ಗುಲಿನಿಂದ ಓಡುವ ಬೈಕುಗಳು….

ಅಲ್ಲಿಯೇ.. “ಬನಾರಸ್ ಪಾನ್” ಕಟ್ಟುವ ಅಂಗಡಿಗಳು‌. ಬೀದಿಯ ಮೂಲೆಯೊಂದರಲ್ಲಿ ಕೂತು, ಎಲ್ಲವನ್ನೂ ಅಚ್ಚರಿಯಿಂದ ಕಣ್ಣರಳಸಿ ಆಸ್ವಾದಿಸುತ್ತಿದ್ದೆ.

ಒಂದರ ಮೇಲೊಂದರಂತೆ ಪುರುಸೊತ್ತಿಲ್ಲದೆ… ಶವಗಳನ್ನು ಹೊತ್ತು ಬರುತ್ತಿದ್ದ ಜನರ ಗುಂಪುಗಳಿಗೆ ಅಂತ್ಯವಿರಲಿಲ್ಲ.

“ಘಾಟ್” ನೋಡುವ ಸೆಳೆತ.. ಇನ್ನಿಲ್ಲದಂತೆ ನನ್ನ ಹುರಿದುಂಬಿಸಿತು. ಬೀದಿಯ ಅಂತ್ಯದಲ್ಲಿನ ತಿರುವಿನಲ್ಲಿ ತಿರುಗಿ… ಹತ್ತಡಿ ಇಟ್ಟೆ “ಶವಗಳನ್ನು ದಹಿಸಲು” ಸರತಿ ಸಾಲುಗಟ್ಟಿತ್ತು. Demonetization ಸಮಯದಲ್ಲಿ ಬ್ಯಾಂಕು, ಎಟಿಎಮ್ ಮುಂದೆ ಸಾಲುಗಟ್ಟಿದ ಜನರಂತೆ.

ಒಂದು ಶವದ ಪಕ್ಕದಲ್ಲಿ ವಾಲಿಕೊಂಡು‌‌.. “#ಘಾಟ್“ಗೆ ನುಗ್ಗಿದೆ. ಅದೇ ಪವಿತ್ರ “ಮಣಿಕರ್ಣಿಕಾ ಘಾಟ್”

ಫೋಟೋ ಕೃಪೆ : google

ಹಿಂದೂ ಸಂಸ್ಕೃತಿಯಲ್ಲಿ ಮನುಷ್ಯ ಪ್ರಾಣ ತ್ಯಜಿಸಿದ ನಂತರ ಅವನ ಮೃತ ಶರೀರಕ್ಕೆ ವಿಧಿವತ್ತಾಗಿ ಕ್ರಿಯೆಗಳನ್ನು ನಡೆಸಿ ಕೊನೆಯದಾಗಿ ಅಂತಿಮ ಕ್ರಿಯೆ ಅಥವಾ ದಹನ ಕಾರ್ಯ ಕೈಗೊಳ್ಳಲಾಗುತ್ತೆ. ಇದಕ್ಕೆ ಇದರದೆ ಆದ ವಿಶೇಷತೆ, ನಂಬಿಕೆ ಹಾಗೂ ವಿಶ್ವಾಸಗಳಿವೆ. ಇದರ ಕುರಿತು ಅನೇಕ ಹಿಂದೂ ಪುರಾಣ-ಗ್ರಂಥಗಳಲ್ಲಿಯೂ ಸಹ ಉಲ್ಲೇಖವಿದೆ.

ಶವ ಸಂಸ್ಕಾರಕ್ಕೆ ಅಂತಲೇ ಹಿಂದೂ ಪುರಾಣಗಳಲ್ಲಿ ಉಲ್ಲೇಖಿಸಿದಂತೆ “ಕೆಲ ಸ್ಥಳ”ಗಳು ಅತೀ ಪವಿತ್ರ. ಅಂತಹ ಸ್ಥಳಗಳಲ್ಲಿ ಮನುಷ್ಯನ ಅಂತ್ಯಕ್ರಿಯೆ ನಡೆಸಿದಾಗ ಆ ಮನುಷ್ಯನು ನೇರವಾಗಿ ಮೋಕ್ಷ ಹೊಂದುತ್ತಾನೆ ಎಂಬ ಪ್ರಬಲವಾದ ವಿಶ್ವಾಸ.

ಕಾಶಿಯ “ಹರಿಶ್ಚಂದ್ರ ಘಾಟ್”ನಲ್ಲಿ ಸಹ ಶವ ಸಂಸ್ಕಾರ ನಡೆಯುತ್ತಿದ್ದರೂ, ಪ್ರಧಾನವಾದದ್ದು ಮಾತ್ರ “ಮಣಿಕರ್ಣಿಕಾ ಘಾಟ್”

ಗಂಗಾ ನದಿಯ ದಡದಲ್ಲಿನ ವಿಶಾಲವಾದ ಹರವು‌. ಅಲ್ಲಿ ಏಕಕಾಲಕ್ಕೆ “ಜೀವನದ ಅಂತಿಮ ಯಾತ್ರೆ”ಯಾದ “ದಹನ”ಕ್ಕೆ ಸಿದ್ದವಾಗಿ ನಶ್ಚಿಂತೆಯಿಂದ “ಕಟ್ಟಿಗೆಯ ಚಿತೆ” ಮೇಲೊರಗಿದ ದೇಹಗಳು, ಪಕ್ಕಕ್ಕೆ ಧಗಧಗಿಸುವ ಅಗ್ನಿಗೆ ಬೆಂದು ಬೂದಿಯಾದ ಹಲವು. ಬೂದಿಯಾಗುವ ಆತುರದಲ್ಲಿದ್ದ ಮಗದಷ್ಟು ಮುರುಟಿದ ದೇಹಗಳು. ಅಗ್ನಿ ಆತುರದಿಂದ ಕೆನ್ನಾಲಿಗೆ ಚಾಚಿ “ಚಿತೆ” ಆವರಿಸುತ್ತಲೆ ಇತ್ತು. “#ಸಾಮೂಹಿಕ_ವಿವಾಹ“ದಂತೆ..ಸಾವಿಗೆ ಶರಣಾದ ದೇಹಗಳ “ಅಂತಿಮ ಸಂಸ್ಕಾರ” ನಡೆಯುತ್ತಲೆ ಇತ್ತು.

ಫೋಟೋ ಕೃಪೆ : google

ಘಾಟ್ ತುಂಬಾ ಅಲ್ಲಲ್ಲಿ ಗುಂಪು ಗುಂಪಾದ ಜನರ ಹಿಂಡು, ಜೀವನ ಕಟ್ಟಿಕೊಳ್ಳಲು ಚಹಾ ಮಾರುವ ಹುಡುಗರು, ಜೀವನ ಮುಗಿಸಿ ಮೋಕ್ಷಕ್ಕಾಗಿ “ಅಗ್ನಿ” ಆವರಿಸಿಕೊಂಡವರು ಹಲವರು, ಕಣ್ಣೀರೊರೆಸಿಕೊಳ್ಳುತ್ತಾ “ಮುಂದಿನ ಜೀವನದ” ಬಗ್ಗೆ ಯೋಚಿಸುತ್ತಿದ್ದಾ ದುಃಖಿಸುತ್ತಿದ್ದವರು ನೂರಾರು.

ಇಹದ ಪರಿವೆಯಿಲ್ಲದಂತೆ ಓಡಾಡುತ್ತಿದ್ದ ಸಾಧುಗಳು, ಅಳುವವರಿಲ್ಲದೆ ಹೆಣವಾದ ಹೂ ಮಾಲೆಗಳು ಗಂಗೆಯ ದಡದಲ್ಲಿ ತೇಲುತ್ತಿದ್ದ ದೃಶ್ಯ, ಶವ ಸುಡುವ “ಕಮಟು” ವಾಸನೆ, ಕಣ್ಣಿಗಡರುತ್ತಿದ್ದ “ಹೊಗೆ”, ಗಂಗೆ ಒಡಲು ಸೇರುತ್ತಿದ್ದ “ಸುಟ್ಟ ಶವ”ಗಳ ಭಸ್ಮ…..

ಎಲ್ಲವೂ.. ವಿಕ್ಷಿಪ್ತ ನೋಟ.

ನಮ್ಮ ದೇಹವೂ ಒಮ್ಮೆ “ಹೀಗೆ ಸುಟ್ಟು ಬೂದಿ”ಯಾಗುವ “ನಗ್ನ ಸತ್ಯ” ಕಣ್ಮುಂದೆ ಹಾದುಹೋಗುತ್ತಿತ್ತು. ದೇಹ ಸುಡುತ್ತಿದ್ದ ಚಿತೆಗಳ ನಡುವೆ ಹಾದು.. ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿ ದೂರದಲ್ಲಿ ಕೂತು ವೀಕ್ಷಿಸುತ್ತಿದ್ದೆ. ಸಾಲು ಸಾಲು ಶವಗಳು ಅಗ್ನಿಯ ಕೆನ್ನಾಲಿಗೆ ಬಯಸಿ ಬರುತ್ತಲೆ ಇದ್ದವು.

ಮಣಿಕರ್ಣಿಕಾ ಘಾಟ್ ನಲ್ಲಿ ಅಂತ್ಯಕ್ರಿಯೆ ನಡೆದರೆ ಆ ತೀರಿ ಹೋದ ಮನುಷ್ಯನ ಆತ್ಮ ನೇರವಾಗಿ ಶಿವನ ಕೃಪೆ ಪಡೆದು ಮೋಕ್ಷ ಪಡೆಯುತ್ತದೆ ಎಂಬ ನಂಬಿಕೆಯಿದೆ. ಆದ್ದರಿಂದಲೇ ದಿನದ ಇಪ್ಪತ್ನಾಲ್ಕು ಘಂಟೆ ಶವ ಸಂಸ್ಕಾರ ನಡೆಯುತ್ತಲೆ ಇರುತ್ತವೆ. ಮೋಕ್ಷದ ಹೆಬ್ಬಾಗಿಲು ಅಂತಲೇ ಪ್ರಸಿದ್ದಿ. “ಮೋಕ್ಷ ನಗರಿ” ವಾರಣಾಸಿ ಎನ್ನಲೂ ಸಹ ಈ ಘಾಟ್ ಕಾರಣವಾಗಿದೆ. ಮಾನವನ ದುಃಖಗಳ ಅಂತ್ಯಕ್ಕೆ ವೇದಿಕೆ ಎಂದು ಸಹ ಪರಿಗಣಿಸಲಾಗಿದೆ.

ಫೋಟೋ ಕೃಪೆ : google

ಇಲ್ಲಿನ ಚಿತ್ರಣ ವಿಚಿತ್ರ, ಭಯ ಮಿಶ್ರಿತ ಭಾವನೆಯನ್ನು ಮನದಲ್ಲಿ ಅರಳಿಸುತ್ತೆ. ಒಂದು ರೀತಿಯ ವಿಕ್ಷಿಪ್ತ ಕುತೂಹಲ ಕೆರಳಿಸಿ ಅತೀ ಹೆಚ್ಚು ಪ್ರವಾಸಿಗರು, ಯಾತ್ರಿಗಳನ್ನು ತನ್ನೆಡೆಗೆ ಸೆಳೆಯುತ್ತದೆ. ದೇಶ-ವಿದೇಶಿಯರು ಅತೀ ಹೆಚ್ಚು “Documentary” (ಕಿರು ಚಿತ್ರ)ಗಳನ್ನು ಮಾಡಿದ್ದು ಸಹ ಇದೇ ಮಣಿಕರ್ಣಿಕಾ ಘಾಟ್ ಮೇಲೆ.

“ಮಹಾ ಸ್ಮಶಾನ” ಅಂತಲೇ ಪ್ರಸಿದ್ಧಿಯಾದ ಮಣಿಕರ್ಣಿಕಾ ಘಾಟ್ ತಾಂತ್ರಿಕ ವಿದ್ಯೆ ಕಲಿಯುವವರಿಗೆ ಅತೀವ ನೆಚ್ಚಿನ ಸ್ಥಳ. ಸಾಧನೆಯ ಕ್ಷೇತ್ರ. ಈ ಘಾಟ್ ಅಘೋರಿಗಳ ಗುರುಗಳಾದ ಪ್ರಸಿದ್ಧ “ತೈಲಂಗ ಸ್ವಾಮಿ”ಗಳಿಗೆ ಪ್ರಿಯವಾಗಿತ್ತು. ಅತೀಮಾನುಷ ಶಕ್ತಿಗಳ ತಾಣ. ಕುತೂಹಲಕಾರಿ ಧಾರ್ಮಿಕ ಕೇಂದ್ರ.ಅಪಾರ ವಿಶೇಷತೆಯುಳ್ಳ ಮಣಿಕರ್ಣಿಕಾ ಘಾಟ್ ಇಂದಿಗೂ ವಾರಣಾಸಿಯಲ್ಲಿರುವ ಒಂದು ವಿಚಿತ್ರ ಅನುಭೂತಿ ನೀಡುವ ತಾಣ.

ದೇಶ ವಿದೇಶದಿಂದ ಬರುವ ಸಾವಿರಾರು ಯಾತ್ರಿಗಳ ಮುಖ್ಯ ಉದ್ದೇಶವೆ “ಮೋಕ್ಷ”. ಹಲವರು ಹೀಗೆ ಮೋಕ್ಷಕ್ಕಾಗಿ ತಹತಹಿಸಿ ಜೀವನದ ಅಂತಿಮ ದಿನಗಳನ್ನು ಕಳೆಯಲು, ಪ್ರಾಣಪಕ್ಷಿ ಹಾರಿದ ನಂತರ “#ಮಣಿಕರ್ಣಿಕಾ_ಘಾಟ್“ನಲ್ಲಿ ಶವ ಸಂಸ್ಕಾರಕ್ಕೆ ಒಳಗಾಗಲು ವಾರಣಾಸಿಗೆ ಬಂದು ಅಂತಿಮ ದಿನ, ಕ್ಷಣಗಳನ್ನು ನೂಕುತ್ತಾರೆ.

ಮಾನವನ ಅಂತಿಮ ಯಾತ್ರಾರಾಧನೆ ನೈಜತೆ ಅನುಭವಿಸಲು “ಮಣಿಕರ್ಣಿಕಾ ಘಾಟ್”ಗೆ ಭೇಟಿ ನೀಡಲೆಬೇಕು. ಕೆಲ ಕ್ಷಣ ಕಳೆದರೆ ಸಾಕು… “ಸಾವಿನ ಭಯ” ಮಂಜಿನಂತೆ ಕರಗಿ ಆವಿಯಾಗುವುದು ದಿಟ.


  •  ಡಾ. ಪ್ರಕಾಶ ಬಾರ್ಕಿ (ವೈದಕೀಯ ಬರಹಗಾರರು, ಆಯುರ್ವೇದ ವೈದ್ಯರು) , ಕಾಗಿನೆಲೆ

5 1 vote
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW