ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಎಂದು ತೋರಿಸಿಕೊಟ್ಟಿದ್ದು ಅಪ್ಪುಅವರು, ಅದೇ ರೀತಿ ನಮ್ಮ ನಡುವೆ ಮತ್ತೊಬ್ಬ ಸರಳ ನಟರಿದ್ದಾರೆ ಅವರೇ ಗೋಲ್ಡನ್ ಸ್ಟಾರ್ ಗಣೇಶ್ ಅವರು. ಎಷ್ಟೋ ಸಂದರ್ಭದಲ್ಲಿ ಸಹಕಲಾವಿದರಿಗೆ, ಅಭಿಮಾನಿಗಳಿಗೆ ಸಹಾಯ ಹಸ್ತ ಚಲ್ಲಿದ್ದಾರೆ ಅವರ ಕುರಿತು ಖ್ಯಾತ ಸಿನಿ ಪತ್ರಕರ್ತ ಗಣೇಶ ಕಾಸರಗೋಡು ಅವರು ಬರೆದ ಲೇಖನವಿದು.ಮುಂದೆ ಓದಿ…
#ಕಾಮಿಡಿ_ಟೈಂ‘ ಕಾರ್ಯಕ್ರಮದ ಮೂಲಕ ಗಣೇಶ್ ಜನಪ್ರಿಯತೆಯ ಉತ್ತುಂಗಕ್ಕೇರಿದ್ದ ಕಾಲ. ಆಗೊಮ್ಮೆ ನನ್ನ ‘ಚಿತ್ರತಾರಾ’ ಸಿನಿಮಾ ಪತ್ರಿಕೆಯ ಆರನೇ ಸಂಚಿಕೆ ಬಿಡುಗಡೆಗಾಗಿ ನರಗುಂದ – ನವಲಗುಂದಕ್ಕೆ ಜತೆಯಾಗಿ ಹೋಗಿದ್ದೆವು. ಹಾಗೆ ಹೋದಾಗ ನರಗುಂದದಲ್ಲಿ ಭೇಟಿಯಾದದ್ದೇ 90 ರ ಹರೆಯದ ಅಜ್ಜಿ ಶಿವಗಂಗಮ್ಮ. ಈಕೆ ಗಣೇಶನ ಭಯಂಕರ ಫ್ಯಾನು! ಕಾಯಿಲೆಯಿಂದಾಗಿ ಹಾಸಿಗೆವಾಸಿಯಾದ ಈ ಹಣ್ಣು ಹಣ್ಣು ಮುದುಕಿ ಸಂಜೆ ಐದಾದರೆ ಸಾಕು ಟಿವಿ ಮುಂದೆ ಹಾಜರ್. ಅದು ‘ಕಾಮಿಡಿ ಟೈಂ’ ಪ್ರಸಾರವಾಗುವ ಸಮಯ. ಈ ವಿಚಾರವನ್ನು ತಿಳಿದ ಗಣೇಶ್ ಶಿವಗಂಗಮ್ಮನ ಮನೆಯನ್ನು ಹುಡುಕಿಕೊಂಡು ಹೋಗಿ ಆಕೆಯ ಎದುರು ಕುಳಿತು ಬಿಟ್ಟ! ಕಣ್ಣು ಕಾಣದಿದ್ದರೂ ಹುಬ್ಬೇರಿಸಿಕೊಂಡು ನೋಡುವ ಪ್ರಯತ್ನ ಪಟ್ಟ ಅಜ್ಜಿ ತಾನು ಅತಿಯಾಗಿ ಇಷ್ಟಪಡುವ ಕಾರ್ಯಕ್ರಮದ ವ್ಯಕ್ತಿ ತನ್ನ ಮುಂದೆಯೇ ಕುಳಿತಿರುವುದನ್ನು ಕಂಡು ಒಂದು ಕ್ಷಣ ಮೂಕಳಾದರೂ ಮರುಕ್ಷಣ ಸಾವರಿಸಿಕೊಂಡು ಗಣೇಶನನ್ನು ಆಶೀರ್ವದಿಸಿದ ಆ ದೃಶ್ಯ ಈಗಲೂ ನನ್ನ ಕಣ್ಣ ಮುಂದಿದೆ!
‘#ವಿಜಯಕರ್ನಾಟಕ‘ ಪತ್ರಿಕೆಯಲ್ಲಿ ನಾನು ‘#ಚದುರಿದ_ಚಿತ್ರಗಳು‘ ಅಂಕಣ ಬರೆಯುತ್ತಿದ್ದ ಕಾಲ. ಇದನ್ನು ರೆಗ್ಯುಲರ್ ಆಗಿ ಓದುತ್ತಿದ್ದ ಗಣೇಶ್ ನನ್ನನ್ನು ಭೇಟಿಯಾದಾಗಲೆಲ್ಲಾ ‘ಅಣ್ಣಾ, ನಾನು ಕನ್ನಡ ಚಿತ್ರರಂಗದಲ್ಲಿ ಯಾವತ್ತಾದ್ರೂ ಸ್ಟಾರ್ ಆದ್ರೆ ಇಂಥಾ ಅಸಹಾಯಕ ಕಲಾವಿದರಿಗಾಗಿಯೇ ಒಂದು ಆಶ್ರಮ ತೆರೆಯುತ್ತೇನೆ. ಇದು ನನ್ನ ಗುರಿ…’ ಎನ್ನುತ್ತಿದ್ದ. ಒಮ್ಮೆ ನಾನು ‘ಉದಯ ಟಿವಿ’ಯ ಕಾರ್ಯಕ್ರಮವೊಂದರ ಚಿತ್ರೀಕರಣಕ್ಕಾಗಿ ಎರಡೂ ಕಾಲಿನ ಸ್ವಾಧೀನ ಕಳೆದುಕೊಂಡ ಮೈಸೂರಿನ ರೇಣುಕಾಪ್ರಸಾದ್ ಮನೆಗೆ ಹೊರಟಿದ್ದಾಗ ನನ್ನ ಕೈಗೆ ಒಂದಷ್ಟು ಸಾವಿರ ರೂಪಾಯಿಗಳನ್ನು ತುರುಕಿ ‘ಇದನ್ನು ರೇಣುಕಾ ಅವರಿಗೆ ತಲುಪಿಸಿ ಬಿಡಿ ಅಣ್ಣಾ…ಪಾಪ ಹೇಗಿದ್ದ ಕಲಾವಿದ ಹೇಗಾದರಲ್ವಾ?’ ಎಂದದ್ದು ಕೂಡಾ ಈಗಲೂ ಕಣ್ಣಲ್ಲಿದೆ!
ಇವಿಷ್ಟು ನನಗೆ ಗೊತ್ತಿರುವಂಥಾ ಘಟನೆಗಳು. ನನ್ನ ಗಮನಕ್ಕೆ ಬಾರದೇ ಅವೆಷ್ಟು ಅಸಹಾಯಕರಿಗೆ ಈ ಗಣೇಶ್ ಸಹಾಯ ಮಾಡಿದ್ದಾನೋ ಗೊತ್ತಿಲ್ಲ. ಗೊತ್ತಿರುವ ಮತ್ತೊಂದು ರೀಸೆಂಟ್ ಘಟನೆ ಅಂದ್ರೆ ಅದು ಅಸಹಾಯಕ ಹೆಣ್ಣು ಮಗಳೊಬ್ಬಳನ್ನು ಭೇಟಿಯಾಗಿ ಸಾಂತ್ವನ ಹೇಳಿರುವ ಪ್ರಕರಣ. ಒಂದು ಬೆಳಿಗ್ಗೆ ಪತ್ರಕರ್ತ ಮಿತ್ರ ನಂದಕುಮಾರ್ ಫೋನ್ ಮಾಡಿ ‘ಸರ್, ಅಸಹಾಯಕ ಹೆಣ್ಣು ಮಗಳೊಬ್ಬಳು ಗೋಲ್ಡನ್ ಸ್ಟಾರ್ ಗಣೇಶ್ ಅವರ ಅಪ್ಪಟ ಅಭಿಮಾನಿ. ನೀವು ಗಣೇಶ್’ಗೆ ತೀರಾ ಆಪ್ತರಾದವರು. ಒಂದು ಮಾತು ಹೇಳಿದ್ರೆ ಅವ್ರು ಈ ಮಗುವನ್ನು ನೋಡಲು ಬರಬಹುದು. ಬಂದ್ರೆ ಮಗುವಿನ ದೊಡ್ಡ ಕನಸೊಂದು ನನಸಾಗುತ್ತದೆ…’ ಅಂದರು. ನಾನಂದೆ : ‘ಇಂಥಾ ವಿಚಾರಕ್ಕೆ ನನ್ನ ಮಧ್ಯಸ್ಥಿಕೆ ಯಾಕೆ ನಂದಾ? ನೀವೇ ಫೋನ್ ಮಾಡಿ ವಿಚಾರ ತಿಳಿಸಿದ್ರೆ ಗಣೇಶ್ ಖಂಡಿತಾ ಇಲ್ಲ ಅನ್ನಲ್ಲ. ಆದ್ರೆ 15 ದಿನಗಳಿಗಾಗಿ ದುಬೈಗೆ ಹೋಗುವುದಾಗಿ ಗಣೇಶ್ ನನ್ನಲ್ಲಿ ಹೇಳಿಕೊಂಡಿದ್ರು. ಟ್ರೈ ಮಾಡಿ ನೋಡಿ. ಫೋನ್ ನಂಬರ್ ಕೊಡ್ತೇನೆ…’ ಅಂತ ಹೇಳಿ ನಂಬರ್ ವಾಟ್ಸಾಪ್ ಮಾಡಿದ್ದೆ…
ನಿನ್ನೆ ಮತ್ತೆ ಫೋನ್ ಮಾಡಿ ನಂದಕುಮಾರ್ ಹೇಳಿದ್ದಿಷ್ಟು : ‘ಸಾರ್, ತುಂಬಾ ಥ್ಯಾಂಕ್ಸ್. ಇವತ್ತು ಆ ಹುಡುಗಿಯನ್ನು ಮೀಟ್ ಮಾಡಲು ಗಣೇಶ್ ಬಂದಿದ್ರು. ಖುಷಿಯೋ ಖುಷಿ…ಆಕೆಯ ಹೆಸರು ಸ್ಫೂರ್ತಿ. #ಗೋಲ್ಡನ್_ಸ್ಟಾರ್_ಗಣೇಶ್ ಅವರ ಅಪ್ಪಟ ಅಭಿಮಾನಿ. ವಯಸ್ಸು ಇಪ್ಪತ್ತಾದರೂ ಮಗುವಿನಂತಹ ಮುಗ್ಧ ಮನಸ್ಸು, ವರ್ತನೆ…’ಮುಂಗಾರು ಮಳೆ’ಯ ದಿನಗಳಿಂದಲೂ ಗಣೇಶ್ ಅವರ ಎಲ್ಲಾ ಸಿನಿಮಾಗಳನ್ನು ನೋಡಿ ಖುಷಿ ಪಟ್ಟಿದ್ದಾಕೆ. ಈಕೆ ಕಳೆದ ವಾರ ಬಿಡುಗಡೆಯಾದ ‘ಸಖತ್’ ಚಿತ್ರವನ್ನು ಓರಿಯನ್ ಮಾಲ್’ನಲ್ಲಿ ಕುಟುಂಬ ಸಮೇತ ನೋಡುವಾಗ, ಗಣೇಶ್ ಅವರೂ ಅನಿರೀಕ್ಷಿತವಾಗಿ ಥೇಟರ್’ಗೆ ಆಗಮಿಸಿದ್ದರಂತೆ. ಅಭಿಮಾನಿಗಳ ಗುಂಪಿನ ಮಧ್ಯೆ ತನ್ನ ನೆಚ್ಚಿನ ನಟ ಗಣೇಶ್ ಅವರನ್ನು ಮಾತನಾಡಿಸುವ ಅವಕಾಶ ಮಿಸ್ ಆಗಿದ್ದಕ್ಕೆ ಸ್ಫೂರ್ತಿ ನಿರಾಸೆಯಿಂದ ಊಟ ಮಾಡದೆ ಗಣಿ ಮಾಮನನ್ನು ನೋಡಲೇ ಬೇಕೆಂದು ಹಠ ಹಿಡಿದು ಕುಳಿತು ಬಿಟ್ಟಿದ್ದಾಳಂತೆ…ವಿಷಯ ತಿಳಿದ ಕೂಡಲೇ ತಮ್ಮ ಸಿನಿಮಾದ ಪ್ರಚಾರ ಕಾರ್ಯಕ್ರಮಗಳ ನಡುವೆಯೂ ಗಣೇಶ್ ಅವರು ಈ ಅಪರೂಪದ ಅಭಿಮಾನಿಯನ್ನು ತಮ್ಮ ಕಛೇರಿಯಲ್ಲಿ ಭೇಟಿ ಮಾಡಲು ಅವಕಾಶ ಕಲ್ಪಿಸಿಕೊಟ್ಟು ಹೃದಯ ವೈಶಾಲ್ಯತೆ ಮೆರೆದಿದ್ದಾರೆ…’ – ಇದು ನಂದಕುಮಾರ್ ವಾಟ್ಸಾಪ್ ಮಾಡಿರುವ ವಿವರ…
#ಗಣೇಶ್ ಯಾವತ್ತಿದ್ರೂ ಗಣೇಶನೇ. ನೆಲಮಂಗಲದ ಅಡಕಮಾರನಹಳ್ಳಿಯಿಂದ ಬೆಂಗಳೂರಿಗೆ ನಡೆದುಕೊಂಡೇ ಬರುತ್ತಿದ್ದ ಗಣೇಶ್ ಈಗಲೂ ನೆಲದ ಮೇಲೆಯೇ ಇದ್ದಾರೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ…ಕಂಗ್ರಾಟ್ಸ್ ಗಣಿ…ಕೀಪ್ ಇಟ್ ಅಪ್…
- ಗಣೇಶ ಕಾಸರಗೋಡು (ಖ್ಯಾತ ಸಿನಿ ಬರಹಗಾರರು, ಪತ್ರಕರ್ತರು, ಹಳೆಯ ಸಿನಿಮಾದ ಕೊನೆಯ ಫ್ರೆಮ್ ‘ಶುಭಂ’ ಕೃತಿಯ ಲೇಖಕರು)