ಕಾಶಿ ಅನುಭವ (ಭಾಗ೩ ) – ಡಾ.ಪ್ರಕಾಶ ಬಾರ್ಕಿ



ವಾರಣಾಸಿಯ ಗಂಗೆಯ ತಟ ಅರಸಿ ಬಂದ ಸೈಬೇರಿಯನ್ ಸೀಗಲ್’ಗಳು Black headed gull ಮತ್ತು brown headed gullಗಳು ಸಾವಿರಾರು ಮೈಲು ದೂರದ ಅಂಟಾರ್ಟಿಕಾ ಮೂಲಗಳಿಂದ ತೀವ್ರ ಚಳಿಯಿಂದ ತಪ್ಪಿಸಿಕೊಳ್ಳಲು, ಆಹಾರಕ್ಕಾಗಿ ಮತ್ತು ಸಂತಾನೋತ್ಪತ್ತಿಗೆ ಅನುಕೂಲವಾದ ಬೆಚ್ಚನೆಯ ಪ್ರದೇಶಗಳಿಗೆ ವಲಸೆ ಬರುತ್ತವೆ. ಪ್ರವಾಸಿಗರು ಅಲ್ಲಲ್ಲಿ ಪ್ಲಾಸ್ಟಿಕ್ ಕವರ್ ಬಿಸಾಡಿ ಅದರ ಜೀವಕ್ಕೆ ಕುತ್ತು ತರುತ್ತಿದ್ದಾರೆ ಎನ್ನುತ್ತಾರೆ ಅರಣ್ಯಾಧಿಕಾರಿ ಪ್ರವೀಣ್ ಬಾರ್ಕಿಯವರು. ಕಾಶಿಯ ಅನುಭವದ ಜೊತೆಗೆ ಸಾಮಾಜಿಕ ಪ್ರಜ್ಞೆಯನ್ನು ಡಾ ಪ್ರಕಾಶ ಬಾರ್ಕಿಯವರು ಈ ಲೇಖನದ ಮೂಲಕ ಓದುಗರಿಗೆ ಮಾಡಿದ್ದಾರೆ.ಮುಂದೆ ಓದಿ…

#ಸೀಗಲ್ಗಂಗೆಯ ಅತಿಥಿಗಳು

ಮೋಕ್ಷ ನಗರಿ, ವಿಶ್ವನಾಥ ಸನ್ನಿಧಿ ಭಕ್ತರಿಗೆ “ಕಾಶಿ”ಯಾತ್ರೆ. ಪ್ರವಾಸಿಗರಿಗೆ “ವಾರಣಾಸಿ” ಮತ್ತು ಸ್ಥಳೀಯರಿಗೆ “ಬನಾರಸ್”.

ವಾರಣಾಸಿಯ ಬೆಳಗು ಚಿಮ್ಮುವ ಕ್ಷಣಕ್ಕೆ, ಗಂಗೆಗೆ ಪ್ರಥಮ ಆರತಿ ಸಲ್ಲುವುದು “ಅಸ್ಸಿ ಘಾಟ್”ನಲ್ಲಿ. “ಸುಬಹ-ಏ-ಬನಾರಸ” ಯೋಜನೆ ಮೂಲಕ. ಪ್ರವಾಸಿಗರ ದಂಡು ಮುಂಜಾವಿನಲ್ಲಿ ಜಮಾಯಿಸಿ “ಗಂಗೆಗೆ ನಮಿಸಿ”, ನದಿಯ ಏದುಸಿರ ತೆರೆಗಳನ್ನು, ಅರುಣೋದಯದ ಕಿರಣ ಕಣ್ತುಂಬಿಕೊಳ್ಳುವ ಅಪರೂಪದ ಗಳಿಗೆಗಳು ನೆರವೇರುವುದು ಇದೇ ಅಸ್ಸಿ ಘಾಟ್’ನಲ್ಲಿ.

ಸೂರ್ಯ ಕೆಂಗಣ್ಣಿನಿಂದ ಕೆಕ್ಕರಿಸುವ ಮೊದಲೆ, ಮುಸುಕಿದ ಮಂಜು ಲೆಕ್ಕಿಸದೆ ಹೊರಡುವ “Boat Riding” (ದೋಣಿ ವಿಹಾರ) ಪ್ರವಾಸದ ಪ್ರಮುಖ ಪುಟ.

ಮೋಟಾರು ದೋಣಿ ಒಂದು ಘಾಟ್”ನಿಂದ ಮತ್ತೊಂದು “ಘಾಟ್” ಮೈದಡವುದುತ್ತಾ ಆನೆ ನಡಿಗೆಯಲ್ಲಿ ತೇಲಾಡುತ್ತೆ. ಲೆಕ್ಕಕ್ಕೆ ಸಿಗದಷ್ಟು ಘಾಟ್’ಗಳು ಒಂದೊಂದು ಘಾಟ್’ನದು ವಿಭಿನ್ನ ಕಥೆ, ಕಥೆಗೊಂದು ಉಪಕಥೆ. ಮುಖ ಸಿಂಡರಿಸಿಕೊಂಡು ಬೆನ್ನುಕೊಟ್ಟು ನಿಂತ ಕೆಂಪನೆಯ ಕಟ್ಟಡಗಳು. ಬೃಹದಾಕಾರದ ವಿವಿಧ ಮೈಕಟ್ಟಿನ, ಆಯಕಟ್ಟಿನ ಗುಡಿಗಳು. ಕಲ್ಲಿನಲ್ಲಿ ಕೆತ್ತಿದ ದೇವಸ್ಥಾನಗಳು, ಕೈ ಚಳಕದ ಕಲಾಕೃತಿ ಗೋಪುರಗಳು, ಅಲ್ಲಲ್ಲಿ ಹಲ್ಲು ಕಿರಿಯುವ ಕಾಂಕ್ರೀಟ್ ಕಾಡು. ಶಾಂತವಾಗಿ ನೆಲಸಿರುವ “ಶಿವಲಿಂಗ”ಗಳು. ದೂರದಲ್ಲಿ “ಶವ” ಸುಡುವ ದಟ್ಟ ಹೊಗೆ ಮತ್ತು ಕಮಟು ವಾಸನೆ ಇವೆಲ್ಲವುಗಳನ್ನು ಮೀರಿಸುವ ಗಂಧದ ಘ್ರಾಣ. ಶಂಖ, ಡಮರುಗ, ಘಂಟೆ ವಿವಿಧ ವಾದ್ಯಗಳ ನಿನಾದ. ಮಂತ್ರ-ಘೋಷಗಳು.

(ಪ್ರಕಾಶ ಬಾರ್ಕಿ ಮತ್ತು ಅವರ ಸಹೋದರ ಪ್ರವೀಣ ಬಾರ್ಕಿ)

ಕರಗುತ್ತಿರುವ ಮಂಜು, ಸ್ಪಷ್ಟವಾಗುತ್ತಿರುವ ನಿಸರ್ಗದ ಬಯಲು, ಹರಿಯುವ ಗಂಗೆಯ ಮೇಲ್ಮೈ. ಆಳ, ಶಾಂತ ಗಂಗೆಯ ಮೇಲೆ “ದೋಣಿಗಳ ವಿಚಿತ್ರ ಆಟೋಟ.

ತಂಪೆರೆಯುವ ತಿಳಿಗಾಳಿ, ಕನಸಿನ ವಾರಣಾಸಿಯ ದಟ್ಟ ಸೌಂದರ್ಯ ಕಣ್ತುಂಬಿಕೊಳ್ಳುತ್ತಿದ್ದ ನಾನು, ಮೈ ಮರೆತು ನನಗರಿಯದೆ ಮಾಯಾಲೋಕದಲ್ಲಿ ಇರುವವನಂತೆ ಕಣ್ಣೋಟ ಕೀಲಿಸದೆ ಕೂತಿದ್ದೆ.
ಜೊತೆಗಿದ್ದ ನನ್ನ ತಮ್ಮ “ಪ್ರವೀಣ”…ಖುಷಿಯಾಗಿ ಕಣ್ಣಗಲಿಸಿ ವಾರಣಾಸಿ ಸೌಂದರ್ಯಕ್ಕೆ ಮರುಳಾಗಿದ್ದ.

“ದೋಣಿ ವಿಹಾರ” ಕೊನೆಗೆ ತಲುಪಿದ್ದು “ದಶಾಶ್ವಮೇಧ ಘಾಟ್”ಗೆ. ಸಾವಿರಾರು ವರ್ಷಗಳಿಂದ ಹಾಜರಿದ್ದ ಅನೇಕ ಅಚ್ಚರಿಗಳನ್ನು ನಾವು ಇಂಚಿಂಚು ಬಿಡದೆ ಆಸ್ವಾದಿಸಿದಿವಿ‌.

ಕೊನೆಯ ಘಾಟ್”ನಿಂದ “ದೋಣಿ” ಅದೇ ಅಸ್ಸಿ ಘಾಟ್”ಗೆ ಉರುಳತೊಡಗಿತು.

ಹಾರುವ ಬಿಳಿ ಪಕ್ಷಿಗಳ ದಂಡು ಕೀರಲಾಗಿ ಅರಚುತ್ತಾ ಗುಂಪು ಗುಂಪಾಗಿ ದೋಣಿಯ ಸನಿಹಕ್ಕೆ ರೆಕ್ಕೆ ಬಡಿಯತೊಡಗಿದವು. ಕೆಲವಂತೂ ದೋಣಿಯ ಅಂಚಿಗೆ ಕೂತು ನೀರಿಗೆ ಬಿದ್ದು ತೇಲಾಡುತ್ತಿದ್ದವು..
ಆವಾಗಲೇ ಒಂದು ಚಿಕ್ಕ ದೋಣಿ ನಮ್ಮನ್ನು ಸಮೀಪಿಸಿತು‌. ಅದರಲ್ಲಿನ ಬಾಲಕ “ಚಿಪ್ಸ್”, ಬಿಸ್ಕೇಟ್, ಬ್ರೇಡ್, ಚುರುಮುರಿ, ಭತ್ತದ ಅರಳು, ಪಾಪ್ ಕಾರ್ನ Packet ಗಳನ್ನ ಮಾರುತ್ತಿದ್ದ.

ನಮ್ಮ Boat ನಲ್ಲಿದ್ದ ಹಲವರು ಖರೀದಿಸಿ, ಅವುಗಳನ್ನು ನದಿಗೆ ಎಸೆಯತೊಡಗಿದರು. ತಿಂಡಿಯ ಆಮಿಷಕ್ಕೆ ಪಕ್ಷಿಗಳು ನಮ್ಮ Boat ಹಿಂಬಾಲಿಸಿದವು. ಅವುಗಳ ಗಾತ್ರ, ದಾಳಿ, ಬಡಿದಾಡಿಕೊಳ್ಳುವ ಪರಿ, ಅವುಗಳ ಚೀರುವಂತ ದ್ವನಿ ಎಲ್ಲವೂ ಹೊಸತು ನನಗೆ.



ಹಲವರು Photo ಕ್ಲಿಕ್ಕಿಸಿಕೊಳ್ಳುತ್ತಿದ್ದರು. Mobile camera ಗಳು ಅವುಗಳನ್ನ ಸೆರೆಹಿಡಿಯುತ್ತದ್ದವು. ಚಂದಗೆ ಅಲಂಕರಿಸಿದಂತ ಪರಿಸರ.

ಎಲ್ಲರಲ್ಲೂ ಹರ್ಷೋದ್ಗಾರ. ಖರೀದಿಸಿದ ತಿಂಡಿಗಳು ನದಿಯ ಮೇಲ್ಮೈ ತಾಗಿ, ಅಲ್ಲಿಯ ಪಕ್ಷಿಗಳ ಹೊಟ್ಟೆ ಸೇರುತ್ತಿದ್ದವು. ನನಗಂತೂ ಮತ್ತೊಂದು ಮಗದೊಂದು ಹರುಷ.

ಆದರೆ….

ಜೊತೆಗಿದ್ದ ತಮ್ಮನಿಗೆ ಅದೇನೂ ಅಸಹನೆ. ಒಳಗೊಳಗೆ ಬೇಜಾರು, ಕೋಪ ಮೇಳೈಸಿಕೊಂಡ ಮಾತಿನಲ್ಲಿ ಉಳಿದವರಿಗೆ ತಿಂಡಿ ಎಸೆಯಬೇಡಿ ಎನ್ನುತ್ತಿದ್ದ. “ಓ ಮರ್ ಜಾಯೇಗಾ..!! ಪ್ಲಾಸ್ಟಿಕ್ ಮತ್ ಫೇಂಕೂ…!!!”

Boat ride ಮುಗಿದ ನಂತರ ಘಾಟ್’ನಲ್ಲಿ ಚಹಾ ಹೀರುತ್ತಾ ಮಾತಿಗೆಳದೆ.

“ಅದ್ಯಾವ ಜಾತಿ ಪಕ್ಷಿ?? ಪ್ಲಾಸ್ಟಿಕ್ ಎಸೆಯಬಾರದು ಸರಿ ಆದರೆ ಆಹಾರ ಕೊಟ್ಟರೆ ತಪ್ಪೇನು? ಪ್ರವೀಣ” ಎಂದೆ.

“ಪ್ರವೀಣ ಬಾರ್ಕಿ”ಗೆ ಪಕ್ಷಿ ವೀಕ್ಷಣೆ, ಗಣತಿ ಹಳೆಯ ಖಯ್ಯಾಲಿ, ಹೊಸ ಓದಿಗೆ ತೆರೆದುಕೊಂಡವ.

ಅರಣ್ಯ ಶಾಸ್ತ್ರ ಪದವಿಧರ. ವಿವಿಧ ಪ್ರಾಣಿ, ಪಕ್ಷಿ, ಸಸ್ಯ ಸಂಕುಲ ಪರಿಚಯವಿರುವಾತ. ಇವಾಗ ಬಾಗಲಕೋಟೆಯಲ್ಲಿ ಉಪವಲಯ ಅರಣ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ.
Praveen Barki. Deputy Range forest officer. Bagalkot Range.

“ಪ್ರವೀಣ ಬಾರ್ಕಿ” ಅಲ್ಲಿನ ಪಕ್ಷಿಗಳ ವಿವರಣೆ ನೀಡಿದ್ದು ಹೀಗೆ……..

ಪ್ರವೀಣ ಬಾರ್ಕಿ (ಉಪವಲಯ ಅರಣ್ಯಾಧಿಕಾರಿ)  Bagalkot Range.

ಕಾಶಿ ಯಾತ್ರೆಯಲ್ಲಿ ಜೊತೆಯಿದ್ದ ನನ್ನ ತಮ್ಮ ಪ್ರವೀಣ ಬಾರ್ಕಿ. ಇತನೇ ಸೀಗಲ್ ಗುರುತಿಸಿ, ಪ್ರವಾಸಿಗರಿಗೆ ತಿಳುವಳಿಕೆ ನೀಡುವ ಪ್ರಯತ್ನ ಮಾಡಿದ

ದೋಣಿ ಬೆನ್ನಟ್ಟಿ ಬರುತ್ತಿದ್ದ ಕೀರಲು ಚೀರುವ ಧ್ವನಿ ಹೂರಡಿಸುವ ಪಕ್ಷಿಗಳ ಹೆಸರು “Seagull”( ಸೀಗಲ್)/ siberian gulls. ಇವು Migratory birds.(ವಲಸೆ ಪಕ್ಷಿಗಳು). ಇವುಗಳನ್ನ Winter visitors ಎನ್ನುವರು.

ಚಳಿಗಾಲದ ಆರಂಭದಲ್ಲಿ ಸಾವಿರಾರು ಮೈಲು ದೂರದ ಅಂಟಾರ್ಟಿಕಾ ಮೂಲಗಳಿಂದ ಅಲ್ಲಿನ ಪರಿಸರದ ಏರಿಳಿತ, ತೀವ್ರ ಚಳಿ ಯಿಂದ ತಪ್ಪಿಸಿಕೊಳ್ಳಲು, ಆಹಾರಕ್ಕಾಗಿ ಮತ್ತು ಸಂತಾನೋತ್ಪತ್ತಿಗೆ ಅನುಕೂಲವಾದ ಬೆಚ್ಚನೆಯ ಪ್ರದೇಶಗಳಿಗೆ ವಲಸೆ ಬರುವವು.

ವಾರಣಾಸಿಯ ಗಂಗೆಯ ತಟ ಅರಸಿ ಬಂದ ಸೈಬೇರಿಯನ್ ಸೀಗಲ್’ಗಳು Black headed gull ಮತ್ತು brown headed gullಗಳು.

ಫೋಟೋ ಕೃಪೆ : traveltalesfromindia

ಉತ್ತರದ ಚಳಿಗಾಲದ ಕಠೋರ ಬದಲಾವಣೆಗಳಿಂದ ಪಾರಾಗಲು ಅಂಟಾರ್ಟಿಕಾ, ಸೈಬೀರಿಯಾ ಅಥವಾ ಆಸ್ಟ್ರೇಲಿಯಾದಿಂದ ಚಳಿಗಾಲಕ್ಕೆ ವಾರಣಾಸಿ, ಪ್ರಯಾಗರಾಜ್ ಪ್ರದೇಶಗಳ ಸುತ್ತಮುತ್ತ ಬರುತ್ತವೆ.

(ಭಾರತದ ವಿವಿಧ ಪ್ರದೇಶಗಳಿಗೂ ವಲಸೆ ಬರುತ್ತವೆ).

ಮೀನು, ಕೀಟ, ಚಿಕ್ಕ ಸಸ್ತನಿಗಳು ಸೀಗಲ್’ಗಳ ಪ್ರಮುಖ ಆಹಾರ. ಗುಂಪಾಗಿ ವಾಸಿಸುವ ತುಂಬಾ ಬುದ್ದಿವಂತಿಕೆ ಮತ್ತು ಚಾಣಾಕ್ಷತನ ಹೊಂದಿರುವ ಪಕ್ಷಿಗಳಿವು. ಆಹಾರಕ್ಕಾಗಿ ತೀವ್ರ ಕಾದಾಡಬಲ್ಲವು. ದಾಳಿಗೆ ಪ್ರತಿದಾಳಿ ಮಾಡುವ ಪ್ರಬಲ ಪಕ್ಷಿಗಳು.

ನೆಲದ ಮೇಲೆ, ಸ್ವಲ್ಪ ಎತ್ತರದ ಪ್ರದೇಶಗಳಲ್ಲಿ ಬೆಚ್ಚಗೆ ಗೂಡು ಕಟ್ಟಿ. ಮೊಟ್ಟೆಯಿಡುತ್ತವೆ. ಸಂತಾನೋತ್ಪತ್ತಿ ನಂತರ ಮರಿಗಳ ಜೊತೆ ಮತ್ತೆ ತಮ್ಮ ಸ್ವಸ್ಥಾನಕ್ಕೆ ಮರಳಿ ಮುಂದಿನ ಚಳಿಗಾಲಕ್ಕೆ ವಾಪಸ್ಸಾಗುತ್ತವೆ.

ಪ್ರವಾಸಿಗರು “ಚಿಪ್ಸ್”, ಬಿಸ್ಕೇಟ್, ಬ್ರೇಡ್, ಚುರುಮುರಿ, ಭತ್ತದ ಅರಳು, ಪಾಪ್ ಕಾರ್ನ, ಹಿಟ್ಟಿನ ಉಂಡೆಯಂತ Junk food ಹಾಕುವುದರಿಂದ ಸೀಗಲ್’ಗಳ ಮೂಲ ಆಹಾರ ಕ್ರಮದಲ್ಲಿ ಭಾರಿ ಬದಲಾವಣೆಗಳಾಗುತ್ತವೆ. ಇದರಿಂದ ಪಕ್ಷಿಗಳ ಆರೋಗ್ಯ ಕ್ಷೀಣಿಸಿ, ರೋಗಗಳು ಬರುತ್ತವೆ. ಕೊನೆಗೂ ಸಾವು ಕಟ್ಟಿಟ್ಟ ಬುತ್ತಿ.

ಸೀಗಲ್‌’ಗಳು ಪ್ರೋಟೀನ್‌ನಲ್ಲಿ ಸಮೃದ್ಧವಾಗಿರುವ ಮೀನು ಮತ್ತು ಇತರ ಕೀಟಗಳನ್ನು ತಿನ್ನುವ ಮೂಲಕ ಸ್ನಾಯುಗಳಿಗೆ ಬಲ ಪಡೆಯುತ್ತವೆ. ಆದರೆ ಅವು ತಿನ್ನುವ junk food ಅವುಗಳು ಮರಳಿ ವಾಪಸ್ಸು ಹೋಗಬೇಕಾದಾಗ ಅಡ್ಡಿಯಾಗುತ್ತದೆ, ಏಕೆಂದರೆ junk food ಗಳು ಕೇವಲ ಕಾರ್ಬೋಹೈಡ್ರೇಟ್, ಕೊಬ್ಬನ್ನು ಹೊರತುಪಡಿಸಿ ಬೇರೆ ಏನನ್ನೂ ನೀಡುವುದಿಲ್ಲ ಆವಾಗ ಪಕ್ಷಿಗಳ ದೇಹದಲ್ಲಿ ಅಜೀರ್ಣ, ಜೀರ್ಣಾಂಗ ಸಮಸ್ಯೆ, ಇತರ ಕಾಯಿಲೆಗಳು ಉಂಟಾಗುತ್ತವೆ.

(ಕಾಶಿಯಲ್ಲಿ ಪ್ರವೀಣ ಬಾರ್ಕಿಯವರು )

ನದಿಗೆ ಎಸೆದ ಪ್ಲಾಸ್ಟಿಕ್’ನ್ನು ಸೀಗಲ್’ಗಳು ಆಹಾರವೆಂದು ತಪ್ಪು ಭಾವಿಸಿ ತಿಂದಾಗ, ಪ್ಲಾಸ್ಟಿಕ್ ಅವುಗಳ ಹೊಟ್ಟೆ ಸೇರಿ ಕರುಳು ತುಂಬುತ್ತವೆ. ಆವಾಗ ಪಕ್ಷಿಗಳು ಹಸಿವಿನಿಂದ ಕಂಗಾಲಾಗಿ ಸಾಯುತ್ತವೆ.

Paulson Institute, Chicago ( published in 2019) ಮೌಲ್ಯಮಾಪನ ವರದಿ ಒತ್ತಿ ಹೇಳುವುದೆಂದರೆ. ಪ್ಲಾಸ್ಟಿಕ್ ಸೇವನೆಯಿಂದ ಪ್ರತಿವರ್ಷ ಒಂದು ಮಿಲಿಯನ್ Sea birds ಸಾವಿಗೀಡಾಗುತ್ತಿವೆ.

ಪ್ರವಾಸಿಗರು ಎಸೆಯುವ Junk foodಗಳನ್ನು ಸೀಗಲ್’ಗಳು ರೂಢಿಸಿಕೊಂಡರೆ ಅವುಗಳ ದೇಹದಲ್ಲಿ ಕೇವಲ ಕಾರ್ಬೋಹೈಡ್ರೇಟ್, ಕೊಬ್ಬು ತುಂಬಿಕೊಂಡು ಅವುಗಳ ಜೀರ್ಣಾಂಗವ್ಯೂಹದ ಕಾರ್ಯ ಏರುಪೇರಾಗುತ್ತೆ. ಕೊನೆಗೆ Fatty liver ನಂತ ಗಂಭೀರ ಸಮಸ್ಯೆಗಳು ತಲೆದೂರುತ್ತವೆ.

ಇದರಿಂದ ಪಕ್ಷಿಗಳ ಮೊಟ್ಟೆ ಇಡುವಿಕೆ ಮತ್ತು ಸಂತಾನೋತ್ಪತ್ತಿ ಚಕ್ರದಲ್ಲಿ ಭಾರೀ ಏರುಪೇರಾಗಿ ಸೀಗಲ್’ಗಳ ಸಂಖ್ಯೆ ಕುಸಿಯುತ್ತದೆ.

ಹೀಗೆ ಆಹಾರ ಹಾಕುವುದರಿಂದ, migratory birds ತಮ್ಮ ಸ್ವಸ್ಥಾನಕ್ಕೆ ಮರಳಿದ ನಂತರ ಅವುಗಳ ನಡುವಳಿಕೆಯಲ್ಲಿ ಬದಲಾವಣೆಗಳು ಕಂಡುಬರುತ್ತವೆ. ಅಲ್ಲಿ ಸೀಗಲ್’ಗಳು ಆಹಾರ ಪದಾರ್ಥ ನೀಡುವವರ ಮೇಲೆ ದಾಳಿ ಮಾಡುವ ನಿದರ್ಶನಗಳು ಇದನ್ನು ಸಾಬೀತುಪಡಿಸಿವೆ.

ಪಕ್ಷಿಗಳಿಗೆ ಆಹಾರ ನೀಡುವ ಉದ್ದೇಶ ಉತ್ತಮವೇ.. ಆದರೆ ಅವುಗಳ ಆರೋಗ್ಯ, ಸಂತಾನ ಮತ್ತು ಪ್ರಾಣಕ್ಕೆ ಮಾರಕವೆಂದು ತಿಳಿದಾಗ ಅವುಗಳಿಗೆ ಕೇವಲ ಪ್ರೀತಿ ಮತ್ತು ಕಾಳಜಿ ನೀಡೋಣ.

ಕೆಲವು ತಿಂಗಳುಗಳ ಕಾಲದ ಮಟ್ಟಿಗೆ ಸಾವಿರಾರು ಮೈಲು ದೂರದ ಪ್ರದೇಶಗಳಿಂದ ವಾಸಕ್ಕೆ ಬಂದು, ತಮ್ಮ ಸಂತಾನ ಪಡೆದು ಖುಷಿಯಿಂದ ಮರುಳುವ ಸೀಗಲ್’ಗಳು ನಮಗೆ “ಅತಿಥಿಗಳ ಸಮಾನ” ಅವುಗಳ ರಕ್ಷಣೆ ಮಾಡೋಣ.

Thank you dear Praveen Barki.

“ಅತಿಥಿ ದೇವೋ ಭವ”


  • ಪ್ರಕಾಶ ಬಾರ್ಕಿ (ವೈದಕೀಯ ಬರಹಗಾರರು, ಆಯುರ್ವೇದ ವೈದ್ಯರು) , ಕಾಗಿನೆಲೆ

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW