‘ಕರಿಯು ಕನ್ನಡಿಯೊಳಗೆ’ ಪುಸ್ತಕ ಪರಿಚಯ- ವಸಂತ ಗಣೇಶ್



ಆಕೃತಿ ಅಂತರ್ಜಾಲ ಪತ್ರಿಕೆಯ ಮುಖ್ಯ ಸಂಪಾದಕರು, ಮೂಡಲ ಮನೆ ಖ್ಯಾತಿಯ ಸಂಭಾಷಣಾಕಾರರಾದ, ನಾಟಕಕಾರರಾದ ಹೂಲಿಶೇಖರ್ ಅವರ ‘ಕರಿಯು ಕನ್ನಡಿಯೊಳಗೆ’ ನಾಟಕದಲ್ಲಿ ಹಿರಿಯ ಇತಿಹಾಸ ಸಂಶೋಧಕರಾದ ಡಾ. ಎಂ.ಎಂ ಕಲಬುರ್ಗಿಯವರನ್ನು ಮುಖ್ಯ ನಿರೂಪಕರಾಗಿ ಬಳಸಿಕೊಂಡಿರುವುದು ಮೊದಲ ಆಕರ್ಷಣೆ. ಪುಸ್ತಕದ ಕುರಿತು ಲೇಖಕಿ ವಸಂತ ಗಣೇಶ್ ಅವರು ಬರೆದಿರುವ ಪರಿಚಯ ಓದಿ…ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ…

ಪುಸ್ತಕ: ಕರಿಯು ಕನ್ನಡಿಯೊಳಗೆ
ಪ್ರಕಾರ: ನಾಟಕ
ಲೇಖಕರು: ಹೂಲಿ ಶೇಖರ್
ಪ್ರಕಾಶನ : ಬೆರಗು ಪ್ರಕಾಶನ

ಆಕೃತಿ ಅಂತರ್ಜಾಲ ಪತ್ರಿಕೆಯ ಮುಖ್ಯ ಸಂಪಾದಕರು, ಮೂಡಲ ಮನೆ ಖ್ಯಾತಿಯ ಸಂಭಾಷಣಾಕಾರರಾದ, ನಾಟಕಕಾರರಾದ ಹೂಲಿಶೇಖರ್ ಅವರು ಬರೆದ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಆಯೋಜಿಸಿದ ನಾಟಕ ರಚನಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕೃತಿ. ಪುಸ್ತಕಕ್ಕೆ ಡಾ.ಎಚ್.ಎಸ್.ಗೋಪಾಲರಾವ್ ಅವರು ಮುನ್ನುಡಿ ಬರೆದಿದ್ದಾರೆ.

#ಡಾ_ಎಂ_ಎಂ_ಕಲಬುರ್ಗಿ, ಯೂನಿವರ್ಸಿಟಿ ಪ್ರೊಫೆಸರ್, ಇತಿಹಾಸ ಸಂಶೋಧಕರು ಆಗಿದ್ದಅವರ ಹೆಸರನ್ನು ನಾಟಕದ ಮುಖ್ಯ ನಿರೂಪಕರಾಗಿ ಬಳಸಿಕೊಂಡಿರುವುದು ಇಲ್ಲಿನ ನಾಟಕದ ಕಥೆಗೆ ಸಂದರ್ಭೋಚಿತ.

‘ಕರಿಯು ಕನ್ನಡಿಯೊಳಗೆ’ ಮುಖಪುಟ

ಕಾಲ ಯಾವುದಾದರೂ ಆಳುವವರು, ಆಳಿಸಿಕೊಳ್ಳುವವರ ನಡುವಿನ ವ್ಯತ್ಯಾಸ ಬದಲಾಗುವುದಿಲ್ಲ ಎನ್ನುವುದು ಸಾರ್ವಕಾಲಿಕ ಸತ್ಯ. ಆಳುವವರ ದರ್ಪದ ಮುಂದೆ ಪ್ರಜೆಗಳು ತಲೆಬಾಗಲೇ ಬೇಕು. ಇದು ಹಿಂದೆಯೂ ಇತ್ತು, ಈಗ ಪ್ರಜೆಗಳೇ ಪ್ರಭುಗಳು ಎಂದರೂ ಅದು ಬರೀ ಬಾಯಿ ಮಾತೇ ಹೊರತು ಪೂರ್ಣ ಸತ್ಯ ಅಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿಯೇ ಸರಿ. ಹಾಗೆಯೇ “ರಾಜಾ ಪ್ರತ್ಯಕ್ಷ ದೈವ” ಎಂದು ನಾಣ್ಣುಡಿ ಇದ್ದರೂ ಎಲ್ಲ ರಾಜರೂ ದೇವರ ಹಾಗೆ ಇರಲಿಲ್ಲ, ಈಗಲೂ ನಮ್ಮನ್ನು ಆಳುವ ಎಲ್ಲರೂ ಹಾಗೆ ಇಲ್ಲ ಅನ್ನುವುದು ಕೂಡ ಒಪ್ಪಿಕೊಳ್ಳಲೇ ಬೇಕಾದ ಸತ್ಯ.

ಪ್ರಸ್ತುತ ಈ ನಾಟಕ ಚಿಕ್ಕದಾಗಿದ್ದರೂ ಇದರ ಮೂಲಕ ಲೇಖಕರು ಹೇಳಲು ಹೊರಟಿರುವ ಸಂದೇಶ ಮಾತ್ರ ದೊಡ್ಡದು. ಆದರೆ ಅರ್ಥ ಮಾಡಿಕೊಳ್ಳುವ, ಅಳವಡಿಸಿಕೊಳ್ಳುವವರು ಸಿಗುವುದು ಅಪರೂಪ. ಇದನ್ನೇ ಮುನ್ನುಡಿಯಲ್ಲಿ “ಈ ನಾಟಕದ ಕಥನ ಮತ್ತು ರಂಗರೂಪವು ಕನ್ನಡಿಯಲ್ಲಿ ಕಂಡಷ್ಟೇ. ಅದಕ್ಕಿಂತ ಹೆಚ್ಚಾಗಿ ನಿರೀಕ್ಷಿಸಲು ಸಾಧ್ಯವಿಲ್ಲ” ಎಂದಿದ್ದಾರೆ ಡಾ. ಎಚ್.ಎಸ್.ಗೋಪಾಲರಾವ್ ಅವರು. ಈ ಮಾತುಗಳನ್ನು ಒಪ್ಪಲೇ ಬೇಕಾದ ಅನಿವಾರ್ಯವಾದಂತಹ ಕಾಲಘಟ್ಟದಲ್ಲಿ ನಾವು ಬಂದು ನಿಂತಿದ್ದೇವೆ.

(‘ಕರಿಯು ಕನ್ನಡಿಯೊಳಗೆ’ ಲೇಖಕರು ಹೂಲಿ ಶೇಖರ್)

ಬಸವ ಪೂರ್ವ ಯುಗ ಹಾಗೂ ಇಂದಿನ ದಿನಗಳ ನಡುವಿನ ರಾಜಕೀಯ, ಧರ್ಮ ಜಾತೀಯತೆಗಳ ನಡುವಿನ ಸಂಘರ್ಷ ವನ್ನು ನಮ್ಮೆದುರು ಬಿಚ್ಚಿಡುತ್ತಾ ಹೋಗುವ ನಾಟಕ ಇದು, ಇಲ್ಲಿ ನಿರೂಪಕರಾದ ಕಲಬುರ್ಗಿ ಮತ್ತು ಹನುಮ್ಯ ನ ಮಾತುಗಳನ್ನು ಎಲ್ಲಿಯೂ ಅಲ್ಲಗಳೆಯುವಂತಿಲ್ಲ. ಇತಿಹಾಸ ಮತ್ತು ವರ್ತಮಾನ ಎರಡನ್ನೂ ಒಟ್ಟಿಗೆ ಹೇಳುತ್ತಾ ಹೋಗುತ್ತಾರೆ ಲೇಖಕರು.

ಪುರಾಣಗಳೇ ಆಗಲಿ, ಶರಣರ ವಚನಗಳೇ ಆಗಲೀ, ದಾಸರ ಪದಗಳೇ ಆಗಲಿ ಅದರಲ್ಲಿ ಇರುವ ಸಾರವನ್ನು ಅರಿತು ಜೀವನಕ್ಕೆ ಅಳವಡಿಸಿಕೊಳ್ಳದ ಹೊರತು ಅವುಗಳನ್ನು ಉಲ್ಲೇಖಿಸುತ್ತಾ, ರಾಗವಾಗಿ ಹಾಡುತ್ತಾ ಇರುವುದರಿಂದ ಯಾವುದೇ ರೀತಿಯ ಸಾಮಾಜಿಕ ಬದಲಾವಣೆ ಸಾಧ್ಯವೇ ಇಲ್ಲ.



ಕಲಬುರ್ಗಿ ಹಾಗೂ ಹನುಮ್ಯಾ ಅವರ ಸಂಭಾಷಣೆಯಲ್ಲಿ ಹಿಂದೆ ಜಾತಿ ಮಾತ್ರ ಇತ್ತು, ಧರ್ಮ ಇರಲಿಲ್ಲ , ಹಾಗೂ ಅವರವರು ಮಾಡುವ ಕಾಯಕಗಳೇ ಅವರ ಜಾತಿಯನ್ನೂ ನಿರ್ಧರಿಸುತ್ತಿತ್ತು ಎನ್ನುತ್ತಾರೆ. ಇದೇ ಸಂದರ್ಭದಲ್ಲಿ ಪಂಡಿತರು ಹಾಗೂ ನಾನ್ ಪಂಡಿತರು ಎನ್ನುವ ವಿಚಾರ ಬಂದಾಗ ಹನುಮ್ಯಾ ಹೇಳುವ ಮಾತು “ಹಿಂದಿನ ಕಾಲದಲ್ಲಿ ಡಿಗ್ರಿ ಅನ್ನೋದು ಇರಲೇ ಇಲ್ಲ, ಆದರೂ ಅವರು ಭೂಮಿ ಗುಂಡಗಿದೆ, ಗಿಡಕ್ಕೂ ಜೀವ ಇದೆ ಅನ್ನೋದನ್ನು ಕಂಡು ಹಿಡಿದರು. ಮಂಗಳ, ಬುಧ, ಗುರು ಮುಂತಾದ ಗ್ರಹಗಳು ಇದೆ ಅನ್ನುವುದನ್ನೂ ಹೇಳಿದರು, ಪಂಚಾಂಗ ಕೂಡಾ ಬರೆದರು. ಇತಿಹಾಸ ತಿಳಿಲಿಕ್ಕೆ ಡಿಗ್ರಿಯೇ ಬೇಕಂತಿಲ್ಲ, ನಾಕ ಮಂದಿ ಜೊತೆ ಕೂತು ಮಾತಾಡಿದರೆ ಇತಿಹಾಸ ಪೂರಾ ಹೇಳ್ತೀವಿ ನಾವು. ನಮ್ಮ ಯೂನಿವರ್ಸಿಟಿ ಅಂದರೆ ಚಹಾದ ಅಂಗಡಿ” ಎನ್ನುವ ಮಾತು ಚಿಂತನೆಗೆ ಹಚ್ಚುತ್ತದೆ.

ಇನ್ನೂ ಸ್ವಲ್ಪ ಮುಂದುವರಿದು ಕನಕ, ಪುರಂದರ ದಾಸರು, #ಸರ್ವಜ್ಞ , ಬಸವಣ್ಣನವರು, #ಲಾವಣಿಕಾರರು, ದೊಡ್ಡಾಟ ಸಣ್ಣಾಟ ಬರೆದವರು ಯಾರು ಯಾವ ಯೂನಿವರ್ಸಿಟಿ ಯಲ್ಲೂ ಕಲಿತು “#ಡಾಕ್ಟರೇಟ್” ಪಡೆದವರು ಅಲ್ಲ, ಹಾಗಾಗಿ ಅವರೆಲ್ಲ ನಾನ್ ಅಕಾಡೆಮಿಕ್ ಪಂಡಿತರು. ಜೀವನದ ಯೂನಿವರ್ಸಿಟಿ ಯಲ್ಲಿ ನಂಬರ್ ಒನ್ ಆದವರು ಎನ್ನುವ ಮಾತಿನಲ್ಲಿ ಇರುವ ಸತ್ಯವನ್ನು ಒಪ್ಪಿಕೊಳ್ಳಲೇ ಬೇಕು.

(ಡಾ. ಎಚ್.ಎಸ್.ಗೋಪಾಲರಾವ್ ಖ್ಯಾತ ಬರಹಗಾರರು , ಕರಿಯೂ ಕನ್ನಡಿಯೊಳಗೆ ಕೃತಿಯ ಮುನ್ನಡಿಕಾರರು)

ನಾಟಕದ ಏಳನೆಯ ದೃಶ್ಯದಲ್ಲಿ ಸಂಶೋಧಕ #ಕಲಬುರ್ಗಿ ಅವರು “ಜಾತಿಗಳು ಸುಳ್ಳು, ಧರ್ಮ ಸತ್ಯ ಎನ್ನುವುದನ್ನು ಜಗತ್ತಿಗೆ ಸಾರಿದ ಶರಣರಿಗೆ, ಕಾಯಕವೇ ಪೂಜೆ, ಅರ್ಪಣೆಯೆ ಪ್ರಸಾದ, ಸಮಾನತೆಯೇ ಆಚಾರ” ಎಂದ ಶರಣರಿಗೆ ನಮಿಸುತ್ತಾರೆ. ಹಾಗೆಯೇ ಮುಂದುವರೆಯುವ ಅವರ ಮಾತುಗಳಲ್ಲಿ ಶರಣರ ಕ್ರಾಂತಿ ಇನ್ನೂ ನಿಂತಿಲ್ಲ ಎನ್ನುವ ಅಭಿಪ್ರಾಯವೂ ವ್ಯಕ್ತ ವಾಗುತ್ತದೆ. ಮುಂದುವರೆದ ದೃಶ್ಯದಲ್ಲಿ ಶರಣರು ” ನಾವು ಹೊಸ ಸಮಾಜ ಕಟ್ಟುವ ಆಶಯ ಹೊತ್ತಿದ್ದೆವು, ಮನುಷ್ಯರಾಗಿ ಹುಟ್ಟಿದ ಎಲ್ಲರೂ ಸಮಾನರು, ಎಲ್ಲರಿಗೂ ಗೌರವದಿಂದ ಬಾಳುವ ಹಕ್ಕಿದೆ, ನಾವು ಜಾತಿ ಸಂಕೋಲೆಯಿಂದ ಹೊರ ಬರಬೇಕೆಂದವರು, ಹೊಸ ಧರ್ಮ ಹುಟ್ಟು ಹಾಕಬೇಕು ಎಂದೆವು, ಆದರೆ..ಅವರು ನಮ್ಮನ್ನು ಉಳಿಯಗೊಡಲಿಲ್ಲ. ಸಾವಿನ ಮನೆಗೆ ಕಳುಹಿಸಿಯೇ ಬಿಟ್ಟರು” ಎನ್ನುವ ಮಾತುಗಳು ಅತೀ ಹೆಚ್ಚು ಪ್ರಭಾವ ಬೀರುತ್ತವೆ.

No photo description available.

(ಹೂಲಿ ಶೇಖರ್ ಅವರ  ‘ಕರಿಯು ಕನ್ನಡಿಯೊಳಗೆ’ ಖ್ಯಾತ ನಿರ್ದೇಶಕ ಟಿ ಎಸ್ ನಾಗಾಭರಣ ಅವರು ಬಿಡುಗಡೆಗೊಳಿಸಿದರು)

ಕೊನೆಯಲ್ಲಿ #ಬಿಜ್ಜಳನ ಸಾವಿನ ಕುರಿತು ತನಿಖೆ ಮಾಡುವ ಕಲಬುರ್ಗಿ ಅವರು ವಿಚಾರಣೆಗೆ ವರ್ತಮಾನದ ಯಾರನ್ನೂ ಕರೆಸಲು ಹಿಂಜರಿಯುವುದು ಸ್ವಾಭಾವಿಕ ಹಾಗೂ ಸರಿ ಎನಿಸುತ್ತದೆ. ನಿರೂಪಕ ಕಲಬುರ್ಗಿ ಅವರ ಹಣೆಗೆ ಗುಂಡು ಬಿದ್ದು ತೂತಾಗಿ ರಕ್ತ ಹರಿಯುವ ಮೂಲಕ ಶರಣರ ಕನಸುಗಳು ಭಗ್ನವಾಗುತ್ತಿರುವುದನ್ನು ಸೂಚ್ಯವಾಗಿ, ಮಾರ್ಮಿಕವಾಗಿ ಹೇಳುವ ಲೇಖಕರ ಪ್ರಯತ್ನ ಪೂರ್ಣ ಸಫಲವಾಗಿದೆ.

ನಾಟಕದ ವಸ್ತು, ವಿಷಯ ನಿರೂಪಣೆ, ಪಾತ್ರಗಳ ಅರ್ಥಪೂರ್ಣ ಹಾಗೂ ಹರಿತವಾದ ಸಂಭಾಷಣೆ ಎಲ್ಲವೂ ಓದುಗರನ್ನು, ನಾಟಕ ನೋಡುವ ಪ್ರೇಕ್ಷಕರನ್ನು ತನ್ನತ್ತ ಸೂಜಿಗಲ್ಲಿನಂತೆ ಸೆಳೆಯುವ ಹಾಗೆ ಇವೆ.

May be an image of book and text that says 'আমন PRE-ORDER ಕರಿಯು ಕರಿಯುಕನ್ನಡಿಯೊಳಗ NOW ಕನ್ನಡಿಯ ಳಗ ಹೂಲಿ ಹೂಲಿಶೇಖರ್ ಪ್ರಕಟಣಾ ಪೂರ್ವ ಮಾರಾಟ ಕರಿಯು ಕನ್ನಡಿಯೊಳಗೆ ಬಿಡುಗಡೆ ದಿನಾಂಕ: ಆಗಸ್ಟ್ 30, 2021 ಪುಸ್ತಕದ ಮುಖಬೆಲೆ 11- ಪ್ರೀ-ಆರ್ಡರ್ಬೆಲೆ ಬೆಲೆ ಪ್ರೀ-ಆರ್ಡ ಅಂಚೆವೆಚ್ಚ ಸೇರಿ: 100/- ವಿಳಾಸಜೊತೆ ಹಣವನ್ನು ನಂಬರಿಗೆ ಕಳುಹಿಸಿ 7795341335 Account 51130100000417 IFSC:BARBOALMELX :BARBOALMELX'

ಹೆಚ್ಚಾಗಿ ನಾಟಕಗಳನ್ನು ಓದದ ನನಗೆ ಒಂದು ಒಳ್ಳೆಯ ನಾಟಕವನ್ನು ಓದಿದ ಅನುಭವ ನೀಡಿತು ಈ ಕೃತಿ. ಶರಣರ ವಚನಗಳನ್ನು ಹಾಡಿ ಸುಮ್ಮನಾದಂತೆ ಈ ಕೃತಿಯನ್ನು ಓದಿ ಸುಮ್ಮನಾಗದೆ ಅದರಲ್ಲಿನ ಒಂದು ಸಣ್ಣ ಅಂಶವನ್ನಾದರೂ ಓದಿದವರು ಆಚರಣೆಗೆ ತರುವ ಪ್ರಯತ್ನ ಮಾಡಿದರೆ ಮನುಕುಲದ ಉದ್ದಾರ ಮಾಡುವಲ್ಲಿ ನಮ್ಮದೂ ಒಂದು ಅಳಿಲು ಸೇವೆ ಸಲ್ಲಿಸಿದ ತೃಪ್ತಿ ಸಿಗುವುದು ನಿಶ್ಚಿತ.

(ಪ್ರಬುದ್ಧ ಬರವಣಿಗೆಯ ನಾಟಕವನ್ನು ವಿಮರ್ಶೆ ಮಾಡುವಷ್ಟು ತಿಳುವಳಿಕೆ ನನ್ನಲ್ಲಿ ಇಲ್ಲ, ಆದರೆ ಓದಿದ್ದನ್ನು ತಕ್ಕ ಮಟ್ಟಿಗೆ ಅರ್ಥೈಸಿಕೊಂಡು ನಿಮ್ಮ ಮುಂದೆ ಇಡುವ ಪ್ರಯತ್ನ ಮಾಡಿದ್ದೇನೆ).


  • ವಸಂತ ಗಣೇಶ್ (ಲೇಖಕಿ, ಸಾಹಿತಿಗಳು) ಬೆಂಗಳೂರು

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW