ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ ಮುಕುತಿ..ದೊರೆಯದಣ್ಣ ಭಕುತಿ..ಅವರೇ ನಮ್ಮ ಬಾಳಿನ ಶಕ್ತಿ… ಗುರುವಿನ ಕುರಿತು ಲೇಖಕ ಪೀರಸಾಬ ನದಾಫ ಅವರು ಬರೆದ ಲೇಖನ ಎಲ್ಲರ ಮನ ಮುಟ್ಟಲಿ, ತಪ್ಪದೆ ಎಲ್ಲರೂ ಓದಿ…
ಬಿಕೋ …ಎನ್ನುವ ರಸ್ತೆಯಲ್ಲಿ ನಡೆಯುವಾಗ ಯಾಕೋ ಮನಸ್ಸಿಗೆ ಕಸಿವಿಸಿಯಾಯಿತು. ಏನೋ ಕಳೆದುಕೊಂಡ ಭಾವ… ಮಟಮಟಾ ಮಧ್ಯಾಹ್ನ ನೆತ್ತಿ ಸೂಡುವ ಸೂರ್ಯ, ಕಣ್ಣೋರಳಿಸಿ ಸುತ್ತ ದೃಷ್ಟಿ ಹರಿಸಿದೆ. ದೂರ ದೂರದವರೆಗೂ ನರಪಿಳ್ಳೆ ಕಾಣತಿಲ್ಲ. ಬೀದಿ ನಾಯಿಯೊಂದು ಬಾಲ ಅಲ್ಲಾಡಿಸುತ್ತ ಬಂತು. ಸಣ್ಣ ಮರಿ, ಅರರೇ ಏನ್ ಚಂದ ಅಯ್ಯತಿ ಇದು…! ಎಂದು ಹಿಡಿದುಕೊಳ್ಳಲು ಹೋದೆ.
ಪಾಪ ಅದಕ್ಕೆ ಹೆದರಿಕೆಯಾಯಿತೋ ಏನೋ… ಓಡಿ ಹೋಯಿತು. ನನ್ನ ಬಾಲ್ಯ ನೆನಪಾಯಿತು. ಮೆಲ್ಲಗೆ ಹೆಜ್ಜೆ ಹಾಕುತ್ತಿರುವ ನನಗೆ ಯಾಕೋ ಹೆಜ್ಜೆಗಳು ಭಾರವಾದಂತೆ ಅನಿಸಿತು, ದಟ್ಟಾನ ದರಿದ್ರತೆಯೇ ತುಂಬಿದ ಬಡತನ, ಹೊಟ್ಟೆ ಹಸಿವು ಅದೆಂತಾ ಹಸಿವು ಅಂತೇನು ಆಗ …! ಕೈಗೆ ಏನ್ ಸಿಕ್ಕರೂ ಮುಕ್ಕಿಬಿಡುವ ಹಪಾಹಪಿ… ಈಗ ಸರ್ವವೂ ಇದೆ ತಿನ್ನಲು.. ಮನಸ್ಸಿಲ್ಲ…ಅದು ಸರಿಯಿಲ್ಲ ಇದು ಸರಿಯಿಲ್ಲ ಎಂಬ ಕೊಂಕು… ಇದ್ದಾಗ ದೇವರು ಬಾಯಿ ಕೊಟ್ಟಿರುವುದಿಲ್ಲ …ಇಲ್ಲದಾಗ ಏನ್ ಕೊಟ್ಟರು ಸರಿ… ಮನ ಹಿಂದೆ ಹಿಂದೆ ಸರಿತಾ ಹೋಯಿತು.

ಸರಿಸುಮಾರು ನಂಗಾಗ ಎಂಟು ವರುಷವಿರಬೇಕು, ಎರಡನೇ ಇಯತ್ತೆಯಲ್ಲಿ ಓದುತ್ತಿದ್ದೆ. ಶಾಲೆ ಅಂದರ ಅದೇನು ಇಷ್ಟಾ ಅಂತಿರಿ. ಹೊಲಕ್ ಹೋಗು ಅಂದರ ಎಲ್ಲರ ಕಣ್ಣ ತಪ್ಪಿಸಿ ಪಾಠಿಚೀಲ ಎತ್ತಿಕೊಂಡು ಕುಂಡಿ ಕೆಳಗ ಇಳಿಯೋ ಚಡ್ಡಿ ಮೇಲೆರಿಸಿಕೊಳ್ಳತ, ಓಡಿ ಬಂದು ಶಾಲೆಯಲ್ಲಿ ಕೂಡ್ರುತಿದ್ದೆ. ಪಾಟೀಲ ಮಾಸ್ತರು ನೋಡಿ ಮುಸಿ ಮುಸಿ ನಗತಿದ್ದರು. ಹಂಗ್ ನನ್ನ ಕಡೆ ಬಂದು ನಿಮ್ಮಜ್ಜ ಹೊಲಕ್ ಕರಿಲಿಲ್ಲ ನಿನ್ನ… ಎಂದು ಛೇಡಿಸುತ್ತಿದ್ದರು. ಆದರ ನಮ್ಮ ಮನೆಯ ಸದಸ್ಯರ್ಯಾರೆ ಬರಲಿ, ಮರಳಿ ಕಳುಹಿಸುವ ಮಾತೆ ಇಲ್ಲ. ಹೊರಗ ಬಂದವರನ ತಡದು ನಾ ಹುಡುಗುನ್ನ ಕಳೋಸಿದಿಲ್ಲ ಅಂವ ಶ್ಯಾಣೆ ಅದಾನು ಹೋಗ್ ಹೋಗ್… ಇಲ್ಲಿಂದ ಅಂತಾ ನಿಲ್ಲಲೂ ಬಿಡದೆ ಅಟ್ಟಿಬಿಡಿತಿದ್ದರು.
ಅವರ ಸಹಾಯ ಸಹಕಾರ ಇರದಿದ್ದರ… ನಾ ಶಾಲೆಯ ಕಟ್ಟೆಯಿಂದ ಹೊರತಾಗುತ್ತಿದ್ದೆನೇನೋ…! ಗುರುಗಳೆಲ್ಲರೂ ಹಾಗೇ ಇದ್ದರು. ಲಮಾಣಿ ಮಾಸ್ತರು, ಬಡಿಗೇರ ಮಾಸ್ತರ…..ಇನ್ನೂ ಅನೇಕರು ತಮ್ಮ ತಮ್ಮ ತರಗತಿಯ ಹುಡುಗುರ ಕಾಳಜಿಯ ಜೊತೆಗೆ ಅವರನ್ನು ಸತ್ಪ್ರಜೆಯಾಗಿ ನಿಲ್ಲಿಸಬೇಕೆಂಬ ಧ್ಯೇಯೋದ್ಯೇಶ ಮನದಲ್ಲಿಟ್ಟುಕೊಂಡು ತುಡಿಯುವಂತವರಾಗಿದ್ದರು. ಕಷ್ಟ ನಷ್ಟಗಳ ನಡುವೆಯು ಮುಲ್ಕಿ ಪರೀಕ್ಷೆಯನ್ನು ಜಿಲ್ಲೆಗೆ ಪ್ರಥಮ ತರುವ ಮೂಲಕ ಪೊರೈಸಿದೆ ಇದರ ಹಿಂದೆ ಆ ನನ್ನೆಲ್ಲ ಗುರುಬಂಧುಗಳ ಪರಿಶ್ರಮವಿತ್ತು. ಇದಕ್ಕೆ ನಾನ್ಯಾವತ್ತು ಅವರಿಗೆ ಚಿರುಋಣಿ. ‘ಗುರು’ ಎಂಬ ಆ ಮಹಾಚೇತನಕ್ಕೆ ಶಿರಬಾಗುವೆಯಾವತ್ತು.
ಗುರುಬ್ರಹ್ಮ ಗುರುವಿಷ್ಣು ಗುರು ದೇವೋ ಮಹೇಶ್ವರ
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೆ ನಮಃ
- ಪೀರಸಾಬ ನದಾಫ – ಭೂ ವಿಜ್ಞಾನ ವಿಭಾಗ, ಕ ವಿ ವಿ ಧಾರವಾಡ,