ತಲೆಸುತ್ತು, ಉಸಿರಾಟದ ತೊಂದರೆ, ಅತಿಯಾದ ಬಾಯಾರಿಕೆ ಇತ್ಯಾದಿ ರಕ್ತಹೀನತೆಯ ಲಕ್ಷಣವಾದರೆ, ಅದಕ್ಕೆ ಆಯುರ್ವೇದದಲ್ಲಿ ಚಿಕಿತ್ಸೆ ಕುರಿತು ಡಾ.ರಮ್ಯಾ ಭಟ್ ಅವರು ಬರೆದಿರುವ ಒಂದು ಮಹತ್ವಪೂರ್ಣ ಲೇಖನವನ್ನು ತಪ್ಪದೆ ಓದಿ…
ರಕ್ತಚರಿತೆ:
ಇತ್ತೀಚಿನ ದಿನಗಳಲ್ಲಿ ಮಹಿಳೆ ಹಾಗೂ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಮುಖ್ಯ ತೊಂದರೆ ರಕ್ತಹೀನತೆ. ನಿಶ್ಯಕ್ತಿ, ಬಳಲಿಕೆ ಇತ್ಯಾದಿ ಕಾರಣಗಳಿಂದ ದಿನನಿತ್ಯ ಆಸ್ಪತ್ರೆಗೆ ದಾಖಲಾಗುತ್ತಿರುವವರನ್ನು ನಾವು ಕಾಣುತ್ತೇವೆ. ನಮ್ಮ ದೇಶದಲ್ಲಿ ಸರ್ವೇಸಾಮಾನ್ಯ ಕಂಡುಬರುವ ರಕ್ತಹೀನತೆಗೆ ಕಬ್ಬಿಣದ ಅಂಶ ಹಾಗೂ ವಿಟಮಿನ್‍ಗಳ ಕೊರತೆ ಮುಖ್ಯ ಕಾರಣ. ಇಂತವರು ತಜ್ಞ ವೈದ್ಯರಿಂದ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು.ಇಂತಹ ಸಂದರ್ಭದಲ್ಲಿ ರಕ್ತಹೀನತೆಯಂತಹ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕೆಂದು ತಿಳಿದುಕೊಳ್ಳುವುದು ಕೂಡಾ ಅಷ್ಟೇ ಆವಶ್ಯಕ.
ಶೇಖರಿಸಿದ ಆಹಾರಗಳನ್ನು ಬಳಸುವುದು ಇಂದು ಹೆಚ್ಚಾಗಿದೆ. ಆಹಾರಗಳನ್ನು ಬಹಳ ದಿನಗಳವರೆಗೆ ಶೇಖರಿಸಿದಾಗ ಅವುಗಳ ಗುಣಮಟ್ಟ ಕಡಿಮೆಯಾಗುತ್ತದೆ.ಆಹಾರದಲ್ಲಿನ ಜೀವಸತ್ವ ನಷ್ಟವಾಗುತ್ತದೆ. ಇದರ ಸೇವನೆ ಕೂಡ ರಕ್ತಹೀನತೆಗೆ ಕಾರಣವಾಗುತ್ತದೆ.
ಫೋಟೋ ಕೃಪೆ : google
ರಕ್ತಹೀನತೆಯನ್ನು ನಿರ್ಲ್ಯಕ್ಷಿಸದೆ ಸೂಕ್ತ ಚಿಕಿತ್ಸೆಯಿಂದ ಪ್ರತಿ ದಿನ ಕಬ್ಬಿಣ ಹಾಗೂ ವಿಟಮಿನ್‍ಯುಕ್ತ ಆಹಾರ ಸೇವಿಸುವ ಮೂಲಕ ಈ ತೊಂದರೆಯನ್ನು ನಿವಾರಿಸಿಕೊಳ್ಳಬಹುದು.
ಕಾರಣಗಳೇನು?
• ಸಮತೋಲನ ಆಹಾರದ ಕೊರತೆ
• ಖಾಯಿಲೆಗಳು
• ಜಂತುಹುಳುವಿನ ಬಾಧೆ(ಇದು ಹೆಚ್ಚಾಗಿ ಮಕ್ಕಳಲ್ಲಿ ಕಂಡುಬರುತ್ತದೆ)
• ಮಹಿಳೆಯರಲ್ಲಿ ಉಂಟಾಗುವ ಅತಿಯಾದ ಮುಟ್ಟಿನ ಸ್ರಾವ, ಬಿಳಿ ಸ್ರಾವ , ದೀರ್ಘಕಾಲ ಗರ್ಭನಿರೋಧಕ ಸಾಧನಗಳ ಅಳವಡಿಕೆ
• ಅತಿಯಾದ ಕ್ಷಾರ, ಆಮ್ಲ, ಲವಣ ಪದಾರ್ಥಗಳ ಸೇವನೆ
• ಅತಿಯಾದ ವ್ಯಾಯಾಮ
• ಮನಸ್ಸಿನ ದುಗುಡ, ಚಿಂತೆ, ಒತ್ತಡದಲ್ಲಿ ಕೆಲಸ ಮಾಡುವುದು
ಲಕ್ಷಣಗಳು :
• ಮನಸ್ಸು ಹಾಗೂ ಶರೀರ ದುರ್ಬಲವಾಗುವುದು
• ತಲೆಸುತ್ತು ಹಾಗೂ ಉಸಿರಾಟದ ತೊಂದರೆ
• ಆಲಸ್ಯ ಊಟ ಸೇರದಿರುವುದು
• ಕೈ ಕಾಲು ಸಂದುಗಳಲ್ಲಿ ನೋವು
• ಅತಿಯಾದ ಬಾಯಾರಿಕೆ
• ಅತಿಯಾಗಿ ಜೊಲ್ಲು ಸುರಿಯುವುದು
ಆಯುರ್ವೇದ ಮತ್ತು ರಕ್ತಹೀನತೆ :
ಆಯುರ್ವೇದದಲ್ಲಿ ರಕ್ತಹೀನತೆಗೆ ಅನೇಕ ರೀತಿಯ ಚಿಕಿತ್ಸಾ ವಿಧಾನಗಳನ್ನು ಹೇಳಲಾಗಿದೆ. ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಕೂಡಾ ಅತೀ ಮುಖ್ಯ.
1. ಪಂಚಕರ್ಮ ಚಿಕಿತ್ಸೆ
ರಕ್ತಹೀನತೆ ಬಹಳ ಸಮಯಗಳಿಂದ ಇದ್ದು ರೋಗಿಯು ತೀವ್ರವಾದ ತೊಂದರೆಗಳಿಂದ ಬಳಲುತ್ತಿದ್ದಲ್ಲಿ (ಏದುಸಿರು, ಸುಸ್ತು, ಮೈಕೈನೋವು ಇತ್ಯಾದಿ) ಅವರಿಗೆ ವಿರೇಚನ ಮೊದಲಾದ ಪಂಚಕರ್ಮ ಚಿಕಿತ್ಸೆಯನ್ನು ನೀಡಲಾಗುವುದು. ಜಂತುಹುಳು ಬಾಧೆಯಿದ್ದಲ್ಲಿ ಮೊದಲು ಅದನ್ನು ನಿವಾರಿಸುವುದಕ್ಕೋಸ್ಕರ ವಿರೇಚನ ಅಥವಾ ವಮನ ಚಿಕಿತ್ಸೆಯನ್ನು ರೋಗಿಯ ದೇಹಬಲದ ಆಧಾರದ ಮೇಲೆ ಕೊಡಲಾಗುವುದು
2. ಶಮನ ಚಿಕಿತ್ಸೆ
ಪಂಚಕರ್ಮ ಚಿಕಿತ್ಸೆಯ ನಂತರ ಹಾಗೂ ಕಡಿಮೆ ಸ್ವರೂಪದ ರಕ್ತಹೀನತೆಗೆ ಶಮನ ಚಿಕಿತ್ಸೆ, ಔಷಧೋಪಚಾರಗಳನ್ನು ಕೊಡಲಾಗುವುದು. ಇದರಲ್ಲಿ ರೋಗಿಯ ದೇಹಪ್ರಕೃತಿಗೆ ಅನುಗುಣವಾಗಿ ವಿವಿಧ ರೀತಿಯ ಔಷಧಗಳನ್ನು ನೀಡಲಾಗುವುದು. ಪುನರ್ನವಾ ಮಂಡೂರ, ದ್ರಾಕ್ಷಾರಿಷ್ಟ, ಲೋಹಸಾವ, ಧಾತ್ರಿಲೋಹ, ನವಾಯಾಸ ಲೋಹ ಮುಂತಾದ ಔಷಧಗಳನ್ನು ಕೊಡಲಾಗುತ್ತದೆ.
3. ಪಥ್ಯ-ಅಪಥ್ಯ
ಆಯುರ್ವೇದದಲ್ಲಿ ಔಷಧದ ಜತೆಗೆ ಪಥ್ಯಾಪಥ್ಯತೆಗೆ ವಿಶೇಷ ಪ್ರಾಮುಖ್ಯತೆ ನೀಡಲಾಗುತ್ತದೆ. ಅಂದರೆ ಅತಿಯಾದ ಖಾರ ಹಾಗೂ ಉಪ್ಪು ಸೇವನೆ , ಫಾಸ್ಟ್‌ಫುಡ್ ಹಾಗೂ ಜಂಕ್‌ಫುಡ್ ಸೇವನೆ ನಿಷಿದ್ಧ. ಹಸಿರು ಸೊಪ್ಪು ತರಕಾರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು.
ಫೋಟೋ ಕೃಪೆ : google
ರಕ್ತಹೀನತೆಗೆ ಸರಳವಾದ ಮನೆಮದ್ದು :
• ಮೆಂತೆಹುಡಿ ಅಥವಾ ಕರಿಬೇವಿನ ಹುಡಿಯನ್ನು ಖಾಲಿಹೊಟ್ಟೆಯಲ್ಲಿ ಸೇವಿಸಬೇಕು
• ನುಗ್ಗೆಸೊಪ್ಪನ್ನು ಆಹಾರವಾಗಿ ಸೇವಿಸಬೇಕು
• ಬಾಳೆದಿಂಡಿನ ರಸವನ್ನು ಜೇನುತುಪ್ಪದೊಂದಿಗೆ ಸೇವಿಸುವುದರಿಂದ ರಕ್ತಹೀನತೆ ನಿವಾರಣೆಯಾಗುತ್ತದೆ
• ನೆಲ್ಲಿಕಾಯಿ ಪುಡಿ ಹಾಗೂ ಜೀರಿಗೆ ಪುಡಿಯನ್ನು ಮಜ್ಜಿಗೆಯ ಜತೆ ಊಟಕ್ಕೆ ಮೊದಲು ಸೇವಿಸುವುದರಿಂದ ರಕ್ತಹೀನತೆ ಕಡಿಮೆಯಾಗುತ್ತದೆ
• ಆಡುಸೋಗೆ ಸೊಪ್ಪಿನ ರಸದ ಜೊತೆ ಜೇನುತುಪ್ಪ ಸೇರಿಸಿ ಸೇವಿಸಬೇಕು
• ಒಣದ್ರಾಕ್ಷಿ ಹಾಗೂ ಖರ್ಜೂರ ಸೇವನೆ
• ಬಸಳೆಸೊಪ್ಪಿನ ಉಪಯೋಗದಿಂದ ರಕ್ತಹೀನತೆ ನಿವಾರಣೆಯಾಗುವುದು
• ಬೂದುಕುಂಬಳಕಾಯಿ ರಸದ ಜೊತೆ ಜೀರಿಗೆಪುಡಿ ಸೇವನೆ
• ದಾಳಿಂಬೆ ರಸವನ್ನು ಧನಿಯಾ ಪಿಪ್ಪಲಿ , ಶುಂಠಿ ಜೊತೆ ಸೇವಿಸುವುದರಿಂದಲೂ ರಕ್ತಹೀನತೆ ನಿವಾರಣೆಯಾಗುವುದು.
- ಡಾ.ರಮ್ಯಾ ಭಟ್ – ಆಯುರ್ವೇದ ವೈದ್ಯರು, ವೈದಕೀಯ ಬರಹಗಾರರು, ಬೆಂಗಳೂರು.