ನಾನು ಕಂಡ ಹೂಲಿಶೇಖರ್ – ರಾಘವೇಂದ್ರ ಪಿ ಅಪರಂಜಿ

ನಾಟಕಕಾರ ಹೂಲಿಶೇಖರ್ ಅವರನ್ನು ಹತ್ತಿರದಿಂದ ಕಂಡ ರಾಘವೇಂದ್ರ ಪಿ ಅಪರಂಜಿ ಅವರ ನೆನಪಿನಂಗಳದಲ್ಲಿ ಮೂಡಿ ಬಂದ ಲೇಖನ ತಪ್ಪದೆ ಓದಿ…

ಅಂಬಿಕಾನಗರವೇ ಹಾಗಿತ್ತು. ಪ್ರತಿಭೆಗಳ ಗಣಿಯನ್ನೇ ಹೊತ್ತುಕೊಂಡಿತ್ತು. ಹಾಗೆ ಅಂಬಿಕಾನಗರವನ್ನು ಪ್ರತಿಸಾರಿ ನೆನಪು ಮಾಡಿಕೊಂಡಾಗ ದೈತ್ಯ ಪ್ರತಿಭೆ ಹೂಲಿಶೇಖರ ನೆನಪಾಗದೇ ಇರಲು ಸಾಧ್ಯವೇ ಇಲ್ಲ.

ಇವರ ಮಗ ನನಗೆ ಟೈಪಿಂಗ್ ದಿಂದ ಕಂಪ್ಯೂಟರ್ ಕಲಿಯಲು ಗುರುವಾದರೆ, ಹೂಲಿಶೇಖರ ಅವರು ನಾನು ಕಥೆ, ಕವನ, ಸಾಹಿತ್ಯ ಬರಿಬೇಕು ಎಂದು ಪ್ರೇರಣೆ ಆದವರು. ಹೆಗಲ ಮೇಲೆ ಒಂದು ಚೀಲ ಏರಿಸಿಕೊಂಡು ಸೈಕ್ಸ್ ಪಾಯಿಂಟ್ ಗೆ ಕೆಲಸಕ್ಕೆ ಹೊರಟು ಬಿಡತ್ತಿದ್ದರು. ಹಾಗೆ ಹೋಗುವಾಗ ಪೆನ್ನು ಪೇಪರ್ ಒಯ್ಯುವುದನ್ನು ಮರಿತಿರಲಿಲ್ಲ. ಇವರು ಬರೆದಂತ ಕಾದಂಬರಿಗಳು, ಕಥೆಗಳು ಅನೇಕ. ಇವರಿಗೊಮ್ಮೆ ನಾನು ಕೇಳಿದ್ದೆ, ಸರ್ ಕಥೆ ಬರಿಬೇಕಾದ್ರೆ ಏನು ಮಾಡಬೇಕು ಸರ್ ಅಂತ. ಅದಕ್ಕೆ ಅವರು ಉತ್ತರ ಕೊಟ್ಟಿದ್ದು ತುಂಬಾ ಸೊಗಸಾಗಿತ್ತು ‘ನಮ್ಮ ಸುತ್ತ ಇರೋ ಜನರಲ್ಲಿ ಒಂದೊಂದು ಕತೆ ಇರುತ್ತೆ, ಅವುಗಳನ್ನ ಸೂಕ್ಷ್ಮವಾಗಿ ಗಮನಿಸಿ, ಆಗ ತಾನಾಗೆ ಕಥೆ ಹುಟ್ಟೋತ್ತೆ ಅಂತ’ ಆ ಮಾತು ಇನ್ನು ನನ್ನ ಬರವಣಿಗೆ ಜೀವಂತವಾಗಿಟ್ಟಿದೆ.

ಅಷ್ಟೇ ಅಲ್ಲ, ಅಂಬಿಕಾನಗರದ ಮಕ್ಕಳಿಗೆ, ಮಹಿಳೆಯರಿಗೆ,ಪುರುಷರಿಗೆ ನಾಟಕದ ಗೀಳನ್ನು ಅಂಟಿಸಿದವರು. ನನ್ನ ಒಮ್ಮೆ ಹೂಲಿಶೇಖರ್ ಅವರು ‘ರಾಘು,  ಚಂಡಕ ಪಿಂಡಕ ಪುರಾಣ’ ಎನ್ನುವ ನಾಟಕವನ್ನು ನಾನು ಬರೆದಿದ್ದೇನೆ. ನೀನು ನೀನು ಅದರಲ್ಲಿ ನಟಿಸುತ್ತೀಯಾ ಅಂತ ಕೇಳಿದ್ರು. ಅದಕ್ಕೆ ಸರ್… ಅದೆಲ್ಲ ನನ್ನ ಕೈಯಲ್ಲಿ ಆಗಲ್ಲ, ಅಂದ್ದೆ. ಅದಕ್ಕವರು ಸುಮ್ಮನೆ ನಾಟಕದಲ್ಲಿ ಒಂದು ಕೋಲು ಕೊಟ್ಟು ನಿಲ್ಲಸ್ತಿನಿ, ಹಿಡಕೊಂಡು ನಿಲ್ಲು, ಮುಂದಿನ ಬಾರಿ ಧೈರ್ಯ ಬರುತ್ತೆ ಅಂದ್ರು. ನಾನು ಆಯಿತು ಸರ್ ಎಂದು ನಾಟಕದಲ್ಲಿ ಬಣ್ಣ ಹಚ್ಚಿದೆ. ಕಡೆಗೆ ಆ ನಾಟಕದಲ್ಲಿ ಗೌಡನ ಪಾತ್ರ ಹಾಗೂ ಜಡ್ಜ್ ಪಾತ್ರ ಹೀಗೆ ಎರಡು ಪಾತ್ರ ಮಾಡಿಸಿ ನೆರೆದ ಪ್ರೇಕ್ಷಕರಿಂದ ಶಿಳ್ಳೆ ಹೊಡೆಸಿ ತಾವು ಖುಷಿ ಪಟ್ಟಿದ್ದರು.

ಮೂಡಲಮನೆ, ಗಂಗಾ ಧಾರವಾಹಿಗೆ ಸಂಭಾಷಣೆ ಬರೆದ ಮೇಲೆ ಸಾಕಷ್ಟು ಜನರಿಗೆ ಪರಿಚಯವಾದ್ರೂ, ಇವರ ಖ್ಯಾತಿ ಎಲ್ಲೆಡೆ ಹಬ್ಬಿತು. ಹೂಲಿಶೇಖರ್ ಎಂದರೆ ಅಂಬಿಕಾನಗರದ ನಾಟಕ ರಂಗದ  ಪಿತಾಮಹ ಅಂದರೆ ತಪ್ಪಾಗಲಿಕ್ಕಿಲ್ಲ. ಇವರ ಮಗಳು ಶಾಲಿನಿ ಫೇಸ್ ಬುಕ್ ದಲ್ಲಿ ಬರಿದಿದ್ದನ್ನ ನೋಡಿದಾಗಲೆಲ್ಲ ಹೂಲಿಶೇಖರ ಸರ್ ಮನದಾಳದಲ್ಲಿ ಬಂದು ಹೋಗ್ತಾರೆ.


  • ರಾಘವೇಂದ್ರ ಪಿ ಅಪರಂಜಿ – ಪತ್ರಕರ್ತ, ಲೇಖಕ , ಹುಬ್ಬಳ್ಳಿ 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading