ಆಸ್ಪತ್ರೆಗೆ ಹೋಗುವಾಗ ಇಡೀ ದಿನ ಪುರಸೊತ್ತು ಮಾಡಿ ಕೊಂಡು ಹೋಗಬೇಕು, ೩೬೫ ದಿನಗಳ ಒಂದು ವರ್ಷ ಅಥವಾ ಜೀವಮಾನದಲ್ಲಿ ಒಂದೆರಡು ದಿನಗಳನ್ನು ನಮ್ಮ ಆರೋಗ್ಯಕ್ಕಾಗಿ ವ್ಯಯಿಸಿದರೆ ಏನೂ ತೊಂದರೆ ಇಲ್ಲ. ಉತ್ತಮ ವೈದ್ಯರ ಆಯ್ಕೆ ಹೇಗೆ? ಕುರಿತು ಡಾ. ಎನ್.ಬಿ.ಶ್ರೀಧರ ಅವರು ಬರೆದಿರುವ ಈ ಲೇಖನವನ್ನು ತಪ್ಪದೆ ಓದಿ…
“ಆ ಡಾಕ್ಟ್ರೇ ಸರಿ ಇಲ್ಲ. ಹತ್ತು ಕೇಳಿದರೆ ಒಂದು ಮಾತು ಆಡ್ತಾರೆ, ಫೀಸೂ ದುಬಾರಿ, ಸುಮ್ ಸುಮ್ನೆ ಲ್ಯಾಬ್ ಪರೀಕ್ಷೆ ಬರ್ದು ಕೊಡ್ತಾರೆ, ಸ್ಟ್ರಾಂಗ್ ಗುಳಿಗೆ ಬರೆದು ಕೊಡ್ತಾರೆ” ಹೀಗೆಲ್ಲಾ ಮಾತನಾಡುವುದು ಸಹಜ. ಇದಲ್ಲದೇ ಸರಿಯಾದ ರೋಗಪತ್ತೆಯೇ ಆಗದೆ ತಪ್ಪು ಚಿಕಿತ್ಸೆ ಆಗಿ ಬಳಲುವವರ ಸಂಖ್ಯೆಯೂ ಸಹ ಜಾಸ್ತಿಯೇ ಇದೆ.
ಆರೋಗ್ಯದ ಕಡೆ ಗಮನ ಕೊಡುವುದರಲ್ಲಿ ಬಗ್ಗೆ ಭಾರತೀಯರು ತೀರಾ ಅನಾಸಕ್ತರು! ನಡು ವಯಸ್ಸಿನಲ್ಲಿ ಆರೋಗ್ಯ ರಕ್ಷಣೆಯ ಬಗ್ಗೆ ಏನಾದರೂ ಹೇಳಿದರೆ “ತೊಂದರೆ ಬಂದಾಗ ನೋಡಿಕೊಳ್ಳೋಣ” ಎಂಬ ಉಡಾಫೆಯ ಮನೋಭಾವ ವೃದ್ಧಾಪ್ಯದಲ್ಲಿ ಬಹಳ ಸಂಕಷ್ಟಗಳನ್ನು ಒಡ್ಡುತ್ತದೆ. “ಆರೋಗ್ಯವೇ ಮಹಾಭಾಗ್ಯ” ಎಂಬ “ಉತ್ತಮ ಜೀವನ ಶೈಲಿ ಹೊಂದಬೇಕು” “ಸದಾ ವಿಷಮುಕ್ತ ಸಾವಯವ ವಸ್ತುಗಳನ್ನೇ ತಿನ್ನಬೇಕು” ಇತ್ಯಾದಿ ಅಣಿಮುತ್ತುಗಳನ್ನು ಉದುರಿಸುವ ಬಹಳಷ್ಟು ಮಂದಿ ತಮ್ಮ ಆರೋಗ್ಯದ ವಿಷಯದಲ್ಲಿಯೇ ತಾತ್ಸಾರ ಹೊಂದಿರುತ್ತಾರೆ. ಇನ್ನು ಆರೋಗ್ಯಕ್ಕಾಗಿ ವಿಮೆಯಂತೂ ನಮಗೆ ಬಹಳ ದೂರ. ಏನೂ ಕಾಯಿಲೆ ಬರದಿದ್ದರೂ ಸುಮ್ಮನೆ ವಿಮೆಗೆ ದುಡ್ಡು ಬಡಿಯುವುದು ಹೇಗೆ ಎಂಬ ಸಂಕಟ. ಆರೋಗ್ಯ ಕೆಟ್ಟಾಗ ಅದಕ್ಕೆ ಕಾರಣರಾದ ಅವರನ್ನೇ ಹಳಿದುಕೊಳ್ಳುವುದನ್ನು ಬಿಟ್ಟು ರೋಗ ಪತ್ತೆ ಮಾಡಿದ್ದಕ್ಕೆ ಅಥವಾ ರೋಗಕ್ಕೆ ವೈದ್ಯನೇ ಹೊಣೆ ಎಂದೂ, ಆಸ್ಪತ್ರೆಗಳನ್ನೂ, ವೈದ್ಯರನ್ನೂ, ವ್ಯವಸ್ಥೆಯನ್ನೂ ಅಷ್ಟೇ ಏಕೆ ವಿಜ್ಞಾನವನ್ನೂ ಸಾರಾಸಗಟವಾಗು ವಾಚಾಮಗೋಚರವಾಗಿ ಬೈಯುವ ಕಾಯಕ ಹಲವರದ್ದು. ಹಾಗಿದ್ದಾಗ ಒಳ್ಳೆಯ ವೈದ್ಯರನ್ನು ಆಯ್ಕೆ ಮಾಡಿಕೊಳ್ಳುವುದು ಬಹಳ ಜಾಣತನದ ಕೆಲಸ.

ಫೋಟೋ ಕೃಪೆ :Freepik
೧. ಆರೋಗ್ಯದ ನಿರ್ವಹಣೆಗಾಗಿ ಕುಟುಂಬದ ವೈದ್ಯರನ್ನು ಆಯ್ಕೆ ಮಾಡಿಕೊಂಡು ಅವರನ್ನು ಅವಲಂಭಿಸುವುದು ಹಲವರಿಗೆ ಅಭ್ಯಾಸ. ಇದು ಒಳ್ಳೆಯದು ಕೂಡಾ. ವಾಸಿಸುವ ಯಾವುದೇ ಸಮೀಪದ ಪಟ್ಟಣದಲ್ಲಿ ಫಿಸಿಸಿಯನ್ ಒಬ್ಬರು ಇದ್ದೇ ಇರುತ್ತಾರೆ. ಅವರನ್ನು ಸದಾ ಸಂಪರ್ಕಿಸುತ್ತಿದ್ದರೆ ಅವರು ಉತ್ತಮ ಸಲಹೆ ನೀಡಬಹುದು.ಅವರಿಗೆ ಸಾಧ್ಯವಾಗದ ಚಿಕಿತ್ಸೆಗೆ ಬೇರೆ ಆಸ್ಪತ್ರೆಗಳಿಗೆ ಕಳಿಸುವುದು ಸಹ ಉತ್ತಮ ಕುಟುಂಬ ವೈದ್ಯರ ಲಕ್ಷಣ.
೨. ಸಮೀಪದಲ್ಲಿ ಕೈಗೆಟಕುವ ದರದಲ್ಲಿ ಇರುವ ಬಹುವಿಶೇಷತೆಯ ಆಸ್ಪತ್ರೆಗಳನ್ನು ಸಹ ಅವಲಂಭಿಸಬಹುದು. ಇದರಲ್ಲಿ ಒಂದೇ ಸೂರಿನಲ್ಲಿ ಹಲವಾರು ಸೌಲಭ್ಯಗಳಿದ್ದು ವಿವಿಧ ತಜ್ಞರು, ಪ್ರಯೋಗಾಲಯದ ಸೌಲಭ್ಯ, ಆಧುನಿಕ ವೈದ್ಯಕೀಯ ಉಪಕರಣಗಳು ಇತ್ಯಾದಿಗಳಿರುವುದರಿಂದ ರೋಗ ಪತ್ತೆ ಸುಲಭ. ಆದರೆ ಇದು ವೈದ್ಯಕೀಯ ಉದ್ಯಮ. ಇದೂ ಸಹ ಒಂದು ಉದ್ಯಮದಂತೆಯೇ ನಡೆಯುತ್ತದೆ. ಹಾಕಿದ ಬಂಡವಾಳ ಮತ್ತು ಲಾಭ ಇವರಿಗೆ ಬರಲೇ ಬೇಕಲ್ಲ. ಕಾರಣ ಇವು ದುಬಾರಿ ಸಹ. ಆದರೆ ಎರಡನೆಯ ದರ್ಜೆ ಪಟ್ಟಣಗಳಲ್ಲಿ ಬೆಂಗಳೂರಿನಂತೆ ಅಷ್ಟೊಂದು ವಾಣಿಜ್ಯಿಕರಣಗೊಂಡಿಲ್ಲ.
೩. ವೈದ್ಯರನ್ನು ಮತ್ತು ಆಸ್ಪತ್ರೆಯನ್ನು ಆಯ್ಕೆ ಮಾಡುವ ಮುನ್ನ ಅವರಿವರ ಮಾತು ಕೇಳದೇ ವೈದ್ಯಕೀಯ ರಂಗದಲ್ಲಿ ಅನುಭವ ಇರುವವರ ಸಲಹೆ ಪಡೆಯುವುದು ಒಳ್ಳೆಯದು. ಆದರೆ ವೈದ್ಯಕೀಯ ಜ್ಞಾನ ಕಿಂಚಿತ್ತೂ ಇರದವರು ಮತ್ತು ಪೂರ್ವಾಗ್ರಹ ಇರದವರ ಸಲಹೆ ಪಡೆಯಿರಿ.
೪. ಕಾಯಿಲೆ ಬಂದಾಗ ಅನೇಕರು ಚಿತ್ರ ವಿಚಿತ್ರ ಬಗೆ ಬಗೆಯ ತರಹೆವಾರಿ “ಉಚಿತ” ಸಲಹೆಗಳನ್ನು ನೀಡುತ್ತಾರೆ. ಅದರೆ ನೀವು ತಜ್ಞ ವೈದ್ಯರ ಮಾತನ್ನು ಮಾತ್ರ ಕೇಳಿ.
೫. ಕಾಯಿಲೆಯ ಬಗ್ಗೆ ವೈದ್ಯರ ಹತ್ತಿರ ಎಷ್ಟು ಅವಶ್ಯವಿದ್ದರೂ ಸಲಹೆ ಪಡೆಯಿರಿ. ಆದರೆ ವೈದ್ಯರನ್ನು ಹೊರತು ಪಡಿಸಿ ಉಳಿದವರ ಸಲಹೆಯನ್ನು ’ಎಡ ಕಿವಿಯಿಂದ ಕೇಳಿ ಬಲ ಕಿವಿಯಿಂದ’ ಬಿಟ್ಟು ಬಿಡಿ.
೬. ಆಸ್ಪತ್ರೆಗೆ ಹೋಗುವಾಗ ಇಡೀ ದಿನ ಪುರಸೊತ್ತು ಮಾಡಿ ಕೊಂಡು ಹೋಗಿ. ಅಲ್ಲಿ ಒಂದಿಷ್ಟು ತಡವಾಗಬಹುದು. ಸುಮ್ಮನೆ ಚಡಪಡಿಸುವುದು, ಪದೇ ಪದೇ ನರ್ಸುಗಳನ್ನು ಕೇಳುವುದು, ಯಾರ್ಯಾರಿಗೋ ಕರೆ ಮಾಡುವುದು ಮಾಡದಿರಿ. ಒಂದಿಷ್ಟು ಪುಸ್ತಕಗಳನ್ನು ಒಯ್ದರೆ ಅಲ್ಲಿಯೇ ಓದಬಹುದು. ೩೬೫ ದಿನಗಳ ಒಂದು ವರ್ಷ ಅಥವಾ ಜೀವಮಾನದಲ್ಲಿ ಒಂದೆರಡು ದಿನಗಳನ್ನು ನಮ್ಮ ಆರೋಗ್ಯಕ್ಕಾಗಿ ವ್ಯಯಿಸಿದರೆ ಏನೂ ತೊಂದರೆ ಇಲ್ಲ.
೭. ಏನೇನೋ ಪರೀಕ್ಷೆಗಳನ್ನು ಸುಮ್ಮ ಸುಮ್ಮನೆ ಮಾಡಿಸುತ್ತಾರೆ, ಸುಮ್ಮನೆ ಸುಮ್ಮನೆ ಔಷಧಿಗಳನ್ನು ಬರೆದು ಕೊಡುತ್ತಾರೆ, ಸುಮ್ಮನೆ ಶಸ್ತ್ರಚಿಕಿತ್ಸೆ ಮಾಡಿ ದುಡ್ಡು ಕೀಳುತ್ತಾರೆ ಎಂಬ ಭಾವನೆ ಬೇಡ. ಆಸ್ಪತ್ರೆಗಳು ವಾಣಿಜ್ಯ ಉದ್ದೇಶಕ್ಕೆಂದೇ ಇದ್ದರೂ ಸಹ ಬಹುತೇಕ ವೈದ್ಯರು ನೈತಿಕತೆ ಮತ್ತು ನೀತಿ ಹೊಂದಿರುತ್ತಾರೆ ಎಂಬುದು ನೆನಪಿರಲಿ.
8. ನಾವು ಆಯ್ಕೆ ಮಾಡುವ ವೈದ್ಯರಿಗೆ ಸೂಕ್ತ ಅರ್ಹತೆ ಇದೆಯೇ ಎಂಬುದು ಬಹಳ ಮುಖ್ಯ. ಬಹುತೇಕ ವೈದ್ಯರು ಕನಿಷ್ಟ ಅರ್ಹತೆಯಾದ ಎಂಬಿಬಿಎಸ್ ಪದವಿಯನ್ನು ಹೊಂದಿದ್ದು ಅವರು ಯಾವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮಾಡಿದ್ದಾರೆ ಎಂಬ ಅಂಶದ ಮೇಲೆ ಅವರ ತಜ್ಞತೆ ನಿಗದಿಯಾಗುತ್ತದೆ. ಇದು ಎಂಡಿ (ಡಾಕ್ಟರ್ ಆಫ್ ಮೆಡಿಸಿನ್) ಅಥವಾ ಎಂಎಸ್ (ಮಾಸ್ಟರ್ ಆಫ್ ಸರ್ಜರಿ) ಇರಬಹುದು. ಇನ್ನು ಕೆಲವರು ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಸಹ ಮಾಡಿರುತ್ತಾರೆ. ಆದರೆ ಇವಾವೂ ಸಹ ಸ್ನಾತಕೋತ್ತರ ಎಂಡಿ ಅಥವಾ ಅಥವಾ ಎಂಎಸ್ ಗೆ ಸಮ ಅಲ್ಲ. ಇದಲ್ಲದೇ ಕೆಲವರು ಹೆಸರಿನ ಮುಂದೆ ಫ಼ೆಲ್ಲೊ ಆಫ್ — ಎಂದು ನಮೂದಿಸಿಕೊಂಡಿರುತ್ತಾರೆ. ಇದು ಅವರಿಗೆ ಅವರವರ ಸಂಘದ ಒಂದು ಸನ್ಮಾನವೇ ಹೊರತು ಪದವಿ ಅಥವಾ ಡಿಪ್ಲೋಮಾ ಅಲ್ಲ. ಕೆಲವರು ಎಂಡಿ ಎಂದು ನಮೂದಿಸಿ ಮುಂದೆ ಬಾಂಬೆ, ನಿಮ್ಹಾನ್ಸ್ ಇತ್ಯಾದಿ ನಮೂದಿಸಿಕೊಂಡಿರುತ್ತಾರೆ. ಭಾರತೀಯ ವೈದ್ಯಕೀಯ ಪರಿಷತ್ತಿನಿಂದ ಮಾನ್ಯತೆ ಪಡೆದ ಪದವಿಗಳನ್ನು ಮಾತ್ರ ಸಾರ್ವಜನಿಕರ ಮಾಹಿತಿಗಾಗಿ ಹಾಕಿಕೊಳ್ಳಬೇಕು. ಉಳಿದಂತೆ ಜನರನ್ನು ಆಕರ್ಷಿಸಲು ಹಾಕುವ ಬಿರುದುಗಳು ಪ್ರದರ್ಶಿಸಲು ಯೋಗ್ಯವಲ್ಲ.
9. ವೈದ್ಯರ ಸಲಹೆಯನ್ನು ಚಾಚು ತಪ್ಪದೇ ಪಾಲಿಸಿ. ಮಾತ್ರೆಗಳು ಹೀಟು, ತುಂಬಾ ಅಡ್ಡಪರಿಣಾಮ ಹೊಂದಿವೆ ಎಂಬ ಭಾವನೆ ಬೇಡ. ಅಡ್ಡ ಪರಿಣಾಮ ಆದಷ್ಟು ಕಡಿಮೆ ಮಾಡಿ ಪರಿಣಾಮ ಜಾಸ್ತಿ ಮಾಡುವತ್ತ ಸದಾ ಸಂಶೋಧನೆ ಮುಂದುವರೆಯುತ್ತದೆ ಎಂಬುದು ಗೊತ್ತಿರಲಿ. ಸ್ವಯಂ ನಿರ್ಧಾರದಿಂದ ಔಷಧಿಯನ್ನು ನಿಲ್ಲಿಸಬೇಡಿ. ಯಾವ ಔಷಧಿಗೆ ಪರಿಣಾಮವಿರುತ್ತದೆಯೋ ಅದಕ್ಕೊಂದಿಷ್ಟು ಪ್ರಮಾಣದಲ್ಲಿ ಅಡ್ಡ ಪರಿಣಾಮ ಇದ್ದೇ ಇರುತ್ತದೆ. ಅಡ್ಡ ಪರಿಣಾಮವಿಲ್ಲದಿರುವುದಕ್ಕೆ ಪರಿಣಾಮವೂ ಇರುವುದಿಲ್ಲ. ಇದು ಭ್ರಮೆ.
10. ಯಾವುದೇ ಪದ್ಧತಿಯಲ್ಲಿ ಚಿಕಿತ್ಸೆಯನ್ನು ಮಾನ್ಯತೆ ಪಡೆದಿರುವವರಿಂದ ಪಡೆಯುವುದು ರೋಗಿಯ ಹಕ್ಕು. ಆದರೆ ಪದ್ಧತಿಯನ್ನು ಆಯ್ಕೆ ಮಾಡಿಕೊಳ್ಳಬೇಕಾದಾಗ ಅದರ ಲಾಭ ನಷ್ಟ, ನಿಖರತೆ, ವೈಜ್ಞಾನಿಕ ಪುರಾವೆ, ಹಣಕಾಸಿನ ವ್ಯಯ, ಕಾರ್ಯ ತತ್ಪರತೆ, ವೃತ್ತಿಪರತೆ ಇತ್ಯಾದಿ ಅನೇಕ ಅಂಶಗಳನ್ನು ಗಮನಿಸಿ ಯಾವ ಪದ್ಧತಿ ಖಚಿತ, ಸಂಶೋಧನಾತ್ಮಕ ಎಂಬುದನ್ನು ಗಮನಿಸಿಕೊಳ್ಳಬೇಕು.
ಸರಿಯಾದ ವೈದ್ಯರನ್ನು ಮತ್ತು ವೈದ್ಯಕೀಯ ಪದ್ಧತಿಯನ್ನು ಆಯ್ಕೆ ಮಾಡುವಲ್ಲಿ ಮದುವೆ ಆಗಬೇಕಾದಾಗ ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ಹೇಗೆ ಅತ್ಯಂತ ಜಾಗರೂಕತೆಯಿಂದ ಆಯ್ಕೆ ಮಾಡುತ್ತೇವೆಯೋ ಹಾಗೆಯೇ ಉತ್ತಮ ವೈದ್ಯರನ್ನೂ ಸಹ ಆಯ್ಕೆ ಮಾಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ತೊಂದರೆಗೊಳಗಾಗುವುದು ನಾವೇ.. ಏಕೆಂದರೆ ಎರಡರ ಪರಿಣಾಮವೂ ಸಹ ಜೀವನ ಪರ್ಯಂತ ಇರುವುದು.ಒಟ್ಟಿನಲ್ಲಿ ಇದ್ದಷ್ಟು ದಿನ ಆರೋಗ್ಯದಿಂದ ನಗು ನಗುತ್ತಾ ಖುಷಿಯಿಂದ ಇರುವುದು ಬಹಳ ಮುಖ್ಯ.
- ಡಾ. ಎನ್.ಬಿ.ಶ್ರೀಧರ – ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ ಶಿವಮೊಗ್ಗ.
