ಬೃಂದಾವನದಲ್ಲಿ ನೆಲೆಸಿ ಇಂದಿಗೂ ಭಕ್ತರನ್ನು ಕಷ್ಟ-ಕಾರ್ಪಣ್ಯಗಳಿಂದ ಕಾಪಾಡುತ್ತ, ಹೊಸ ಜೀವನ ನೀಡಿ ಹರಸುತ್ತ ಭಕ್ತರ ಹೃದಯದಲ್ಲಿ ನಿರಂತರವಾಗಿ ನೆಲೆಯೂರಿರುವ ಗುರು ರಾಘವೇಂದ್ರರು ಬಹು ಜನರಿಗೆ ನೆಚ್ಚಿನ ಹಾಗೂ ಆರಾಧ್ಯ ದೈವ. ರಾಯರ ಕುರಿತು ಸೌಮ್ಯ ಸನತ್ ಅವರು ಬರೆಯುತ್ತಿರುವ ‘ಕ್ಷೇತ್ರದೊಳ್ ಸಾನಿಧ್ಯದೊಳ್’ ಅಂಕಣವನ್ನು ತಪ್ಪದೆ ಮುಂದೆ ಓದಿ…
ಗುರುರಾಯರನ್ನು ನೆನೆದಾಗ ಮೊದಲು ನೆನಪಾಗುವುದೇ ರಾಯರ ಸನ್ನಿಧಿ ಮಂತ್ರಾಲಯ. ಯಾವುದೇ ಕಷ್ಟವಿದ್ದರು ರಾಯರನ್ನು ನೆನೆದರೆ , ರಾಯರ ದರ್ಶನ ಮಾಡಿದರೆ ಕಷ್ಟಗಳೆಲ್ಲಾ ನಿವಾರಣೆಯಾಗುತ್ತದೆ.’
“ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ….
ದುರ್ವಾದಿಧ್ವಾಂತರವಯೇ ವೈಷ್ಣವೇಂದೀವರೇಂದವೇ
ಶ್ರೀರಾಘವೇಂದ್ರ ಗುರವೇ ನಮೋತ್ಯಂತದಯಾಲವೇ “
ಮಂಚಾಲೆ ಆಂಧ್ರಪ್ರದೇಶದಲ್ಲಿರುವ ಒಂದು ಪುಟ್ಟ ಊರು. ಆದರೆ, ಈ ಸ್ಥಳ ಗುರುರಾಯರ ಕೃಪೆಯಿಂದ ವಿಶ್ವಭೂಪಟದಲ್ಲಿ ವಿಶಿಷ್ಟ ಸ್ಥಾನಪಡೆದಿದೆ. ಮಂಚಾಲೆ ಎಂಬುದು ಮಂತ್ರಾಲಯ ಕ್ಷೇತ್ರಕ್ಕಿದ್ದ ಹಿಂದಿನ ಹೆಸರು. ಈ ಪವಿತ್ರ ಪುಣ್ಯಸ್ಥಳದಲ್ಲಿ ಭಕ್ತರ ಸಕಲ ಇಷ್ಟಾರ್ಥಗಳನ್ನೂ ಈಡೇರಿಸುವ ಕಲಿಯುಗದ ಕಾಮಧೇನು ಗುರುರಾಘವೇಂದ್ರರು ಸಜೀವ ಬೃಂದಾವನಸ್ಥರಾಗಿದ್ದಾರೆ.
ಮಂತ್ರಾಯಲದ ಮೂಲ ಹೆಸರು “ಮಂಚಾಲೆ”. ಇಲ್ಲಿನ ಗ್ರಾಮ ದೇವತೆ ಮಂಚಾಲಮ್ಮ. ಮಂಚಾಲಮ್ಮ ಅಂದರೆ ಪಾರ್ವತಿಯ ಅಂಶ ಎಂದು ನಂಬಿಕೆ. ಶಿವಶಕ್ತಿಯ ಕೇಂದ್ರವಾದ ಮಂತ್ರಾಲಯವನ್ನು ಮಂಚಾಲೆ ಎಂದು ಹೇಳುತ್ತಾರೆ. ರಾಘವೇಂದ್ರ ರಾಯರು ಇಲ್ಲಿಗೆ ಆಗಮಿಸಿ ಮಂಚಾಲಮ್ಮನಿಂದ ಅನುಮತಿ ಪಡೆದು ಇಲ್ಲಿ ನೆಲೆಸಿ ವೃಂದಾವನಸ್ಥರಾದರು. ಆ ನಂತರ ಇದು ಮಂತ್ರಾಲಯ ಎಂದು ಪ್ರಖ್ಯಾತಿ ಪಡೆಯಿತು ಎಂಬುದು ಇತಿಹಾಸ.
ಫೋಟೋ ಕೃಪೆ : google
ಗುರುಸಾರ್ವಭೌಮರಾದ ರಾಘವೇಂದ್ರ ಸ್ವಾಮಿಗಳು ಕ್ರಿ.ಶ. 1595 ಮನ್ಮಥನಾಮ ಸಂವತ್ಸರ ಫಾಲ್ಗುಣ ಶುದ್ಧ ಸಪ್ತಮಿ ಗುರುವಾರ, ತಮಿಳುನಾಡಿನ ಭುವನಗಿರಿಯಲ್ಲಿ, ಬೀಗಮುದ್ರೆ ಮನೆತನದ ಗೋಪಮ್ಮ ಹಾಗೂ ತಿಮ್ಮಣ್ಣ ಭಟ್ಟ ದಂಪತಿಯ ಉದರದಲ್ಲಿ ತಿರುಪತಿ ತಿಮ್ಮಪ್ಪನ ಹರಕೆಯಿಂದ ಜನ್ಮವೆತ್ತಿದರು. ಮಗುವಿಗೆ ‘ವೆಂಕಟನಾಥ’ ಎಂದೇ ಹೆಸರಿಡಲಾಯಿತು. ವೆಂಕಟನಾಥನಿಗೆ ಪ್ರಾಥಮಿಕ ಗುರುಗಳು ಅಕ್ಕ ವೆಂಕಟಾಂಬೆಯ ಪತಿ ಲಕ್ಷ್ಮೀನರಸಿಂಹ ಆಚಾರ್ಯ, ಮುಂದೆ ಹೆಚ್ಚಿನ ವಿದ್ಯಾಭ್ಯಾಸ ಸುಧೀಂದ್ರತೀರ್ಥರಿಂದ ದೊರೆಯಿತು.
ಬ್ರಹ್ಮಲೋಕದ ಶಂಕುಕರ್ಣನೆಂಬ ದೇವತೆ, ಬ್ರಹ್ಮನ ಶಾಪಕ್ಕೆ ಗುರಿಯಾಗಿ ಶಾಪವನ್ನು ವರವಾಗಿ ಸ್ವೀಕರಿಸಿ ಕೃತಯುಗದಲ್ಲಿ ಹಿರಣ್ಯ ಕಶಿಪುವೆಂಬ ರಾಕ್ಷಸನ ಉದರದಲ್ಲಿ ‘ಭಕ್ತ ಪ್ರಹ್ಲಾದ’ನಾಗಿ, ದ್ವಾಪರದಲ್ಲಿ “ಬಾಹ್ಲಿಕ ರಾಜರಾಗಿ” ಕಲಿಯುಗದಲ್ಲಿ “ವ್ಯಾಸರಾಯರಾಗಿ” ಹಾಗೂ ಕೊನೆಯ ಅವತಾರವಾಗಿ “ರಾಘವೇಂದ್ರರಾಗಿ” ಭೂಲೋಕದಲ್ಲಿ ನಾಲ್ಕು ಅವತಾರ ಎತ್ತಿದರು ಎಂಬ ನಂಬಿಕೆ ಭಕ್ತರಲ್ಲಿ ಇದೆ. ರಾಘವೇಂದ್ರ ಸ್ವಾಮಿಗಳು ಕೃತಯುಗದಲ್ಲಿ ಪ್ರಹ್ಲಾದರಾಜನಾಗಿ ಜನ್ಮವೆತ್ತಿದಾಗ ಹತ್ತು ಸಹಸ್ರ ವರ್ಷ ಹರಿನಾಮ ಸ್ಮರಣೆ ಮಾಡಿ ಪುಣ್ಯದ ಕಣಜವನ್ನೇ ತಮ್ಮದಾಗಿರಿಸಿ ಕೊಂಡವರು. ತಾವು ಸಂಪಾದಿಸಿದ ಅಪಾರ ಪುಣ್ಯವನ್ನು ಹಂಚಿ ಜನರ ಬವಣೆಯನ್ನು ನೀಗಿಸಲೆಂದೇ ರಾಯರು ತಮ್ಮ 76ನೇ ವರ್ಷದಲ್ಲಿ ಅಂದರೆ ಕ್ರಿ.ಶ. 1671 ವಿರೋಧಿನಾಮ ಸಂವತ್ಸರ ಶ್ರಾವಣ ಕೃಷ್ಣ ಬಿದಿಗೆಯಂದು ಮಂತ್ರಾಲಯದ ಮಂಚಾಲಮ್ಮನ ಸನ್ನಿಧಿಯಲ್ಲಿ ಸಶರೀರವಾಗಿ ಬೃಂದಾವನ ಪ್ರವೇಶಿಸಿದರು. ಬೃಂದಾವನದಲ್ಲಿ ತಾವು ಏಳು ನೂರು ವರ್ಷಗಳು ನೆಲೆಸುವುದಾಗಿ ತಿಳಿಸಿದ್ದಾರೆ.
ರಾಘವೇಂದ್ರ ಸ್ವಾಮಿಗಳು ಬೃಂದಾವನ ಪ್ರವೇಶಿಸುವ ಮೊದಲು ಮಾಡಿದ ಕೊನೆಯ ಪ್ರವಚನದ ಸಾರಾಂಶ:
• ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೇ ಸತ್ಕಾರ್ಯಗಳನ್ನು ಮಾಡಬೇಕು.
• ಸಮಾಜಕ್ಕೆ ಒಳಿತಾಗುವಂತೆ ಮಾಡುವುದೇ ನಿಜವಾದ ದೇವರ ಪೂಜೆ.
• ಕಳೆದುಹೋದ ಒಂದು ನಿಮಿಷವೂ ಮತ್ತೆಬಾರದು ಎಂಬುದನ್ನು ಮರೆಯಬಾರದು.
• ದೇವರೆಡೆಗಿನ ನಿಮ್ಮ ಭಕ್ತಿ ಪರಿಶುದ್ಧವಾಗಿರಲಿ. ಪೂರ್ಣ ಮನಸ್ಸಿನಿಂದ ಅವನನ್ನು ಪೂಜಿಸಿ.
• ಸುಜ್ಞಾನ ಎಂಬುದು ಎಲ್ಲಾ ಪವಾಡಗಳಿಗಿಂತ ಮಿಗಿಲು.
ಜ್ಞಾನವಿಲ್ಲದಿದ್ದರೆ ಯಾವ ಪವಾಡವು ನಡೆಯದು
ಗುರುರಾಯರ ಜೀವನ ದರ್ಶನ, ತತ್ವಜ್ಞಾನ, ಪಾಂಡಿತ್ಯ, ಪವಾಡ, ಆಧ್ಯಾತ್ಮ ಎಲ್ಲವೂ ಆದರ್ಶಪ್ರಾಯ. ಇವರನ್ನು ಲೌಕಿಕರ ಕಷ್ಟ ಕಾರ್ಪಣ್ಯಗಳ ನಿವಾರಣೆಗೆ ಅವತರಿಸಿದ ಕಾಮಧೇನು ಕಲ್ಪವೃಕ್ಷವೆಂದು ಶ್ರದ್ಧಾವಂತ ಭಕ್ತರು ಪರಿಭಾವಿಸಿದ್ದಾರೆ. ಜಾತಿಮತ, ದೇಶ ಪಂಥಗಳ ಎಲ್ಲೆ ಮೀರಿ ಜನಮಾನಸ ಆವರಿಸಿಕೊಂಡ ಯತಿಕುಲ ತಿಲಕ ತುಂಗಭದ್ರಾ ನದಿ ತಟದ ಮಂತ್ರಾಲಯದಲ್ಲಿ ನೆಲೆ ನಿಂತ ರಾಘವೇಂದ್ರ ಸ್ವಾಮಿಗಳ ಮಾಂತ್ರಿಕ ಶಕ್ತಿಯಿದು.
ಹರಿದಾಸ ಪಂಥಕ್ಕೆ ಪ್ರೇರಣಾ ಶಕ್ತಿ, ಪ್ರತ್ಯಕ್ಷ ಘಟನೆಗಳ ಮೂಲಕ ಭಾರತೀಯ ಸಂಸ್ಕೃತಿ ಬಗ್ಗೆ ಅದರ ವೃದ್ಧಿಸುತ್ತಿರುವ ಮಹಾನುಭಾವ ಲೋಕ ಕಲ್ಯಾಣಕ್ಕಾಗಿ ವಿರೋಧಿಕೃತ ನಾಮಸಂವತ್ಸರ, ಶ್ರಾವಣ ಮಾಸ ಕೃಷ್ಣಪಕ್ಷ ದ್ವಿತೀಯ ಶುಕ್ರವಾರ (೧೬೭೧-೭೨) ಸಶರೀರ ವೃಂದಾವನಸ್ಥರಾದರು.
ಫೋಟೋ ಕೃಪೆ : google
ಎರಡು ಶತಮಾಗಳ ಕಾಲ ಜನರ ದೃಷ್ಟಿ ಪಥಕ್ಕೆ ಅಗೋಚರವಾಗಿ ವೃಂದಾವನದಲ್ಲಿದ್ದು, ಭವ ಭಯ ನೀಗಿಸುತ್ತಿದ್ದಾರೆ. ಶರಣು ಬಂದ ಭಕ್ತರ ಲೌಕಿಕ ಸಮಸ್ಯೆಗಳಿಗೆ ಪರಿಹಾರದ ಪರಮಮಂತ್ರವಾಗಿದ್ದಾರೆ. ಶ್ರೀ ರಾಘವೇಂದ್ರಸ್ವಾಮಿಗಳ ಅಲೌಕಿಕ, ಧಾರ್ಮಿಕ ತೇಜಸ್ಸು ಮತ್ತು ತಪೋಬಲ ಇಲ್ಲಿಗೆ ಭೇಟಿ ನೀಡುವ ಭಕ್ತರ ಮನೆ-ಮನವನ್ನು ಸದಾ ಬೆಳಗುತ್ತದೆ. ಗುರುರಾಯರ ಈ ತಪೋಭೂಮಿಗೊಮ್ಮೆ ಬಂದು ತಮ್ಮ ಜನ್ಮ ಸಾರ್ಥಕಪಡಿಸಿಕೊಳ್ಳಬೇಕೆಂದು ನಿತ್ಯವೂ ಸಾವಿರಾರು ಭಕ್ತರು ಆಗಮಿಸುತ್ತಾರೆ.
ಮಾನವೀಯ ಸಂಬಂಧಗಳ ಹರಿಕಾರ ರಾಘವೇಂದ್ರ ಸ್ವಾಮಿಗಳು ಮಾಡಿದ ಮಾಡಿಸುತ್ತಿರುವ ಕೆಲಸಗಳು ಅಗಣಿತ, ಧಾರ್ಮಿಕ ಆಧ್ಯಾತ್ಮಿಕ ಕೈಂಕರ್ಯದ ಜತೆಗೆ ಸಾಮಾಜಿಕ ಸೇವೆಗಳನ್ನು ರಾಯರ ಹೆಸರಿನಲ್ಲಿ ಭಕ್ತರು, ಶಿಷ್ಯರು, ಅಬಿಮಾನಿಗಳು ಅರ್ಪಿಸಿ ಕೃತಾರ್ಥರಾಗುತ್ತಿದ್ದಾರೆ. ರಾಯರ ನಂತರದ ಯತಿ ಪರಂಪರೆಯಲ್ಲಿ ಸುಯಮೀಂದ್ರ ತೀರ್ಥರು ಸುಜಯೀಂದ್ರ ತೀರ್ಥರು ಶ್ರೀ ಮಠಕ್ಕೆ ಹೊಸ ಆಯಾಮ ನೀಡಿದರು. ದೈವೀಪ್ರಜ್ಞೆ, ಸಾತ್ವಿಕ ಕಳೆಯಿಂದ ಈಗಿನ ಪೀಠಾಧಿಪತಿ ಸುಶಮೀಂದ್ರ ತೀರ್ಥರು ಪ್ರತ್ಯಕ್ಷ ರಾಯರು ಎಂದು ಕರೆಸಿಕೊಳ್ಳುತ್ತಿರುವುದು ಉತ್ಪ್ರೇಕ್ಷೆಯಲ್ಲ. ಕ್ಷೇತ್ರ ಮಹಿಮೆಯೊಂದಿಗೆ ಶ್ರೀಗಳ ದೃಢ ಸಂಕಲ್ಪ ಶ್ರೀಮಠದ ಕಾರ್ಯತತ್ಪರತೆ ದೇಶ ವಿದೇಶದ ಗಮನ ಸೆಳೆದಿದೆ.
ಲೋಕೋಪಕಾರಕ್ಕಾಗಿ ಮೈ ತಳೆದ ಕರ್ಮಯೋಗಿ ರಾಯರಾದರೆ, ಗುರುಗಳ ಅಪ್ಪಣೆ ಶಿರಸಾ ಪಾಲಿಸುತ್ತಿರುವ ಪೀಠಧಿಪತಿ ಸೌಹಾರ್ದದ ಪ್ರತೀಕ, ಆತ್ಮಸ್ಥೈರ್ಯದ ಸೆಲೆಯಾಗಿ ಅನಾವರಣಗೊಂಡಿದ್ದಾರೆ.
ದೇವರೆಂದರೆ ತಿರುಪತಿಯ ತಿಮ್ಮಪ್ಪ, ಗುರುಗಳೆದರೆ ಮಂತ್ರಾಲಯದ ರಾಘಪ್ಪ ಎನ್ನುವ ಭಕ್ತರು, ಸಜೀವವಾಗಿ ಬೃಂದಾವನದಲ್ಲಿ ತಪೋನಿರತರಾಗಿರುವ ಗುರುಗಳ ಪಾದಧೂಳಿನಿಂದ ಪವಿತ್ರವಾಗಿರುವ ಈ ಕ್ಷೇತ್ರಕ್ಕೆ ಬಂದು ಪಾವನರಾಗುತ್ತಾರೆ. ಜಾತಿ-ಮತ-ಬೇಧಗಳಿಲ್ಲದ ಈ ಸ್ಥಳಕ್ಕೆ ಆಗಮಿಸುವ ಭಕ್ತಕೋಟಿ ತುಂಗಾನದಿಯಲ್ಲಿ ಮಿಂದು ಮಂಚಾಲಮ್ಮನ ದರ್ಶನ ಮಾಡಿ, ಗುರುರಾಯರ ದರ್ಶನ ಮಾಡಿ ಧನ್ಯಭಾವದಿಂದ ತಮ್ಮೂರಿಗೆ ಮರಳುತ್ತಾರೆ.
ಫೋಟೋ ಕೃಪೆ : google
ದೇಶಾದ್ಯಂತ ರಾಯರ ಮಠಗಳು :
ಕೇವಲ ದಶಕಗಳ ಹಿಂದೆ ಕೇವಲ ಒಂದು ಧಾರ್ಮಿಕ ಕೇಂದ್ರವಾಗಿದ್ದ ಮಂತ್ರಾಲಯ ಇಂದು ಶೈಕ್ಷಣಿಕ ಕೇಂದ್ರವಾಗಿ, ಆರೋಗ್ಯದ ತಾಣವಾಗಿ, ಜ್ಞಾನವೈಜ್ಞಾನಿಕ ಕ್ಷೇತ್ರವಾಗಿ ಹೊರಹೊಮ್ಮಿದೆ. ಶ್ರೀಮಠ ಒಂದು ಬೃಹತ್ ಸಂಸ್ಥೆಯಾಗಿ ಮಾರ್ಪಟ್ಟಿದೆ. ಮಠದ ವತಿಯಿಂದ ದೇಶದ ನಾನಾ ಮೂಲೆಗಳಲ್ಲಿ ೧೬೦ಕ್ಕೂ ಹೆಚ್ಚು ಮೃತ್ತಿಕಾ ಬೃಂದಾವನ ನಿರ್ಮಿಸಲಾಗಿದೆ. ಮೂಲ ಮಠದ ಆಡಳಿತದ ನಿಯಂತ್ರಣದಲ್ಲಿಯೇ ಕರ್ನಾಟಕ, ಆಂಧ್ರ, ಕಾಶಿ, ಬದರಿ, ದೆಹಲಿ, ಮುಂಬೈ ಸೇರಿದಂತೆ ನಾನಾ ಭಾಗಗಳಲ್ಲಿ ೩೪ ಶಾಖಾ ಮಠ ಸ್ಥಾಪಿಸಲಾಗಿದೆ.ಈ ಎಲ್ಲ ಮಠಗಳೂ ಸುಸಜ್ಜಿತ ಕಾರ್ಯಾಲಯಗಳನ್ನು ಹೊಂದಿವೆ. ಈ ಮಠಗಳಿಗೆ ಮೂಲಮಠವೇ ಸಿಬ್ಬಂದಿಯ ನೇಮಕ ಮಾಡುತ್ತದೆ. ಮಠದ ಪರಂಪರೆಗೆ ಅನುಗುಣವಾಗಿ ಸಾಂಪ್ರದಾಯಿಕ – ಸಾಂಸ್ಕೃತಿಕ ಚಟುವಟಿಕೆಗಳು ಜರುಗುತ್ತವೆ. ಮಠಕ್ಕೆ ಹೊಂದಿಕೊಂಡಂತೆ ಕಲ್ಯಾಣ ಮಂಟಪಗಳನ್ನು ನಿರ್ಮಿಸಿದ್ದು, ಇಲ್ಲಿ ಧಾರ್ಮಿಕ – ಸಾಂಸ್ಕೃತಿಕ ಚಟುವಿಕೆಗಳೂ ಜರುಗುತ್ತವೆ. ಜ್ಞಾನಪ್ರಸಾರದ ಕೇಂದ್ರಗಳಾಗಿಯೂ ಇವು ಕೆಲಸ ಮಾಡುತ್ತವೆ. ದೇಶಾದ್ಯಂತ ಇಷ್ಟೊಂದು ಶಾಖೆಗಳನ್ನುಳ್ಳ ಏಕೈಕ ಮಠ ಇದಾಗಿದೆ.
ಫೋಟೋ ಕೃಪೆ : google
ಊಟ – ವಸತಿ :
ಮಂತ್ರಾಲಯದಲ್ಲಿ ಸುಸಜ್ಜಿತ ಸಂಸ್ಕೃತ ವಿದ್ಯಾಲಯ ರೂಪುಗೊಂಡಿದೆ, ಯಾತ್ರಾತ್ರಿಗಳಿಗಾಗಿ ಸುಸಜ್ಜಿತ ವಸತಿ ನಿಲಯಗಳನ್ನು ನಿರ್ಮಿಸಲಾಗಿದೆ. ಯಾತ್ರಾರ್ಥಿಗಳ ಆರೋಗ್ಯ ರಕ್ಷಣೆಗಾಗಿ ಸುವ್ಯವಸ್ಥಿತ ಮತ್ತು ಅತ್ಯಾಧುನಿಕ ಆಸ್ಪತ್ರೆಯನ್ನು ಶ್ರೀಮಠವೇ ಆರಂಭಿಸಿದೆ. ಭಕ್ತಾದಿಗಳಿಗೆ ಶುದ್ಧವಾದ ಕುಡಿಯುವ ನೀರು ಪೂರೈಸಲು ಜಲಶುದ್ಧೀಕರಣ ಘಟಕಗಳನ್ನೂ ಸ್ಥಾಪಿಸಲಾಗಿದೆ. ಭಕ್ತಾದಿಗಳಿಗೆ ಊಟದ ವ್ಯವಸ್ಥೆಯೂ ಇದೆ. ಮಠದ ನಿತ್ಯಪೂಜೆಗಾಗಿಯೇ ತುಳಸಿವನ, ಹೂತೋಟಗಳನ್ನು ಬೆಳಸಲಾಗಿದೆ. ಶ್ರೀಗುರುರಾಯರು ಅನುಸರಿಸಿಕೊಂಡು ಬಂದ ವೇದಶಾಸ್ತ್ರಗಳ ಸಂಶೋಧನೆ ಇಂದೂ ಅವ್ಯಾಹತವಾಗಿ ನಡೆಯುತ್ತಿದೆ. ವೈದಿಕ ಪರಂಪರೆ ಉಳಿಸುವ ದೃಷ್ಟಿಯಿಂದ ಇಲ್ಲಿ ವೇದಾಧ್ಯಯನ ಸಂಶೋಧನಾ ಕೇಂದ್ರವನ್ನೂ ತೆರೆಯಲಾಗಿದೆ. ಇಲ್ಲಿ ನೂರಾರು ವೇದಾಧ್ಯಯನಿಗಳಿಗೆ ಉಚಿತ ಊಟ, ವಸತಿ, ವಸ್ತ್ರ ನೀಡಿ ವೇದ ಶಿಕ್ಷಣ ನೀಡಲಾಗುತ್ತಿದೆ.ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅತ್ಯಮೂಲ್ಯವಾದ ವೇದರತ್ನಗಳ ಗ್ರಂಥ ಭಂಡಾರವನ್ನೂ ತೆರೆಯಲಾಗಿದೆ. ಇಲ್ಲಿ ಒಂದು ಲಕ್ಷಕ್ಕೂ ಹೆಚ್ಚು ವೇದ, ಶಾಸ್ತ್ರ, ವ್ಯಾಕರಣ, ವಾಜ್ಞಯ ಪುಸ್ತಕಗಳಿವೆ. ಅಪಾರ ಸಂಖ್ಯೆಯ ತಾಳೆಯ ಗರಿಯ ಕೃತಿಗಳೂ ಇವೆ. ಹಸ್ತಪ್ರತಿಗಳೂ ಇವೆ. ಪಂಚಮುಖಿ ದರ್ಶನ ಎಂಬ ಧರ್ಮಛತ್ರವೂ ಮಂತ್ರಾಲಯದಲ್ಲಿದೆ.
ಬಳ್ಳಾರಿಯಿಂದ ಮಂತ್ರಾಲಯಕ್ಕೆ ಕೇವಲ ೧೧೫ ಕಿ.ಮೀಟರ್. ಮಂತ್ರಾಲಯಕ್ಕೆ ಹೋದಾಗ ವಿಶ್ವವಿಖ್ಯಾತ ಹಂಪಿ, ತೆಕ್ಕಲಕೋಟೆಗಳಿಗೂ ಹೋಗಿ ಬರಬಹುದು. ದೇಶದ ವಿವಿಧ ಭಾಗಗಳಿಂದ ರೈಲು (ಮಂತ್ರಾಲಯ ರೋಡ್‌ವರೆಗೆ), ಬಸ್ ಸೌಕರ್ಯ ಇದೆ. ಕರ್ನಾಟಕದ ಎಲ್ಲ ಪ್ರಮುಖ ನಗರಗಳಲ್ಲಿರುವ ವಿವಿಧ ಟ್ರಾವಲ್ಸ್‌ಗಳೂ ಮಂತ್ರಾಲಯಕ್ಕೆ ನಿತ್ಯ ಪ್ರವಾಸ ಸೌಕರ್ಯ ಒದಗಿಸಿವೆ. ಈ ಎಲ್ಲ ಅನುಕೂಲತೆ ಹಾಗೂ ರಾಯರ ಅನುಗ್ರಹದ ಫಲವಾಗಿ ದಕ್ಷಿಣ ಭಾರತದಲ್ಲಿ ಅತ್ಯಂತ ವೇಗವಾಗಿ ಹೆಚ್ಚು ಹೆಚ್ಚು ಭಕ್ತರನ್ನು ತನ್ನೆಡೆಗೆ ಆಕರ್ಷಿಸುತ್ತಿರುವ ತೀರ್ಥ ಕ್ಷೇತ್ರ ಮಂತ್ರಾಲಯವಾಗಿದೆ.
ತಲುಪಲು ಸಾರಿಗೆ ಸಂಪರ್ಕ:
ಚೆನ್ನೈ_ಬೊಂಬಾಯಿ ರೈಲುಮಾರ್ಗದಲ್ಲಿರುವ ಮಂತ್ರಾಲಯಮ್ ರೋಡ್ ಸ್ಟೇಷನ್ ಎಂಬಲ್ಲಿಗೆ 15 ಕಿಮೀ ದೂರದಲ್ಲಿದೆ. ದಕ್ಷಿಣ ರೈಲುಮಾರ್ಗದಲ್ಲಿ ಮಂತ್ರಾಲಯಮ್ ರೋಡ್ ರಾಯಚೂರಿನಿಂದ 28 ಕಿಮೀ ದೂರದಲ್ಲಿಯೂ ಗುಂತಕಲ್ ಜಂಕ್ಷನ್‍ನಿಂದ 93 ಕಿಮೀ ದೂರದಲ್ಲಿಯೂ ಇದೆ. ಮಂತ್ರಾಲಯಮ್ ರೋಡ್ ಸ್ಟೇಷನ್‍ಗೆ ಅಣುಮಂತ್ರಾಲಯ ಎಂಬ ಇನ್ನೊಂದು ಹೆಸರಿದೆ.
‘ಕ್ಷೇತ್ರದೊಳ್ ಸಾನಿಧ್ಯದೊಳ್’ ಅಂಕಣದ ಹಿಂದಿನ ಸಂಚಿಕೆಗಳು :
- ಸೌಮ್ಯ ಸನತ್