ರಾಯರ 352ನೇ ಆರಾಧನಾ ಮಹೋತ್ಸವ

ಇಂದು ವಿಶ್ವಾದ್ಯಾಂತ ಗುರುಸಾರ್ವಭೌಮರಾದ ರಾಘವೇಂದ್ರ ಸ್ವಾಮೀಜಿ ಗುರು ರಾಯರ 352ನೇ ಆರಾಧನಾ ಮಹೋತ್ಸವ ನಡೆಯುತ್ತಿದೆ, ರಾಘವೇಂದ್ರ ಸ್ವಾಮಿಗಳು ಭವರೋಗವೈದ್ಯರು ಹಾಗೂ ಪವಾಡ ಪುರುಷರು ಎಂದೇ ಭಕ್ತರು ನಂಬಿದ್ದಾರೆ. ಮಾಂಸವನ್ನು ಫಲಪುಷ್ಪಾದಿಗಳಾಗಿ ಮಾಡಿದ ಹಾಗೂ ಒನಕೆಯನ್ನೇ ಚಿಗುರಿಸಿ ಜೀವ ತುಂಬಿ ಗಿಡವನ್ನಾಗಿ ಮಾಡಿದ ಕಥೆ ಅವರ ಜೀವನ ಚರಿತ್ರೆಯಲ್ಲಿ ಬರುತ್ತದೆ. ಮಹೋತ್ಸವ ಕುರಿತು ಡಾ.ಗುರುಪ್ರಸಾದ್ ರಾವ್ ಹವಲ್ದಾರ್ ಅವರು ಓದುಗರ ಮುಂದೆ ಲೇಖನವನ್ನು ಹಂಚಿಕೊಂಡಿದ್ದಾರೆ ತಪ್ಪದೆ ಓದಿ… 

ಮಧ್ವಾಚಾರ್ಯರ ಅನುಯಾಯಿಯಾಗಿ ಮಧ್ವ ಮತದ ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದರು, ಶ್ರೀ ಪ್ರಹ್ಲಾದ ರಾಯರ ಮೂರನೇ ಅವತಾರವೇ ಶ್ರೀ ರಾಘವೇಂದ್ರರು. ಎರಡನೆಯ ಅವತಾರವು ಶ್ರೀ ವ್ಯಾಸರಾಯರು. ಶ್ರೀ ಗುರು ರಾಘವೇಂದ್ರ ಸ್ವಾಮಿಗಳನ್ನು ಭಕ್ತರು ರಾಯರು, ಗುರುರಾಯರು, ಗುರುರಾಜರು ಎಂದು ಭಕ್ತಿಯಿಂದ ಕರೆಯುತ್ತಾರೆ.

ಗುರು ರಾಘವೇಂದ್ರರು ಮಾಡಿದ ಪವಾಡಗಳು, ತೋರಿದ ಮಹಿಮೆಗಳು ಅಪಾರ. ಇಂದಿಗೂ ಬೃಂದಾವನದಲ್ಲಿ ಅವರು ನೆಲೆಸಿದ್ದಾರೆ ಎನ್ನುವುದು ಅವರ ಪವಾಡಕ್ಕೆ ಮತ್ತೂಂದು ನಿದರ್ಶನ. “ರಾ - ಎನ್ನಲು ರಾಶಿ ದೋಷಗಳು ದಹಿಸುವುದು, ಘ- ಎನ್ನಲು ಘನ ಜ್ಞಾನ ಭಕುತಿಯನಿತ್ತು, ವೇಂ- ಎನ್ನಲು ವೇಗಾದಿ ಜನನ ಮರಣ ಗೆದ್ದು, ದ್ರ- ಎನ್ನಲು ದ್ರವಿಣಾಕ್ಷಪ್ರತಿಪಾದ್ಯನಕಾಂಬ’ ಎಂದು ಅವರ ನಾಮಸ್ಮರಣೆಗೆ ಇಷ್ಟು ಫಲವನ್ನು  ಶ್ರೀ ಗೋಪಾಲ ದಾಸರು ಹೇಳಿದ್ದಾರೆ.

ರಾಘವೇಂದ್ರ ಸ್ವಾಮಿಗಳು ಕ್ರಿ.ಶ. 1595 ಮನ್ಮಥನಾಮ ಸಂವತ್ಸರ ಫಾಲ್ಗುಣ ಶುದ್ಧ ಸಪ್ತಮಿ ಗುರುವಾರ, ತಮಿಳುನಾಡಿನ ಭುವನಗಿರಿಯಲ್ಲಿ, ಬೀಗಮುದ್ರೆ ಮನೆತನದ ಗೋಪಮ್ಮ ಹಾಗೂ ತಿಮ್ಮಣ್ಣ ಭಟ್ಟ ದಂಪತಿಯ ಉದರದಲ್ಲಿ ತಿರುಪತಿ ತಿಮ್ಮಪ್ಪನ ಹರಕೆಯಿಂದ ಜನ್ಮವೆತ್ತಿದರು. ಮಗುವಿಗೆ ‘ವೆಂಕಟನಾಥ’ ಎಂದೇ ಹೆಸರಿಡಲಾಯಿತು. ವೆಂಕಟನಾಥನಿಗೆ ಪ್ರಾಥಮಿಕ ಗುರುಗಳು ಅಕ್ಕ ವೆಂಕಟಾಂಬೆಯ ಪತಿ ಲಕ್ಷ್ಮೀನರಸಿಂಹ ಆಚಾರ್ಯ; ಮುಂದೆ ಹೆಚ್ಚಿನ ವಿದ್ಯಾಭ್ಯಾಸ ಸುಧೀಂದ್ರತೀರ್ಥರಿಂದ ದೊರೆಯಿತು.

ಫೋಟೋ ಕೃಪೆ : google

ಬ್ರಹ್ಮಲೋಕದ ಶಂಕುಕರ್ಣನೆಂಬ ದೇವತೆ, ಬ್ರಹ್ಮನ ಶಾಪಕ್ಕೆ ಗುರಿಯಾಗಿ ಶಾಪವನ್ನು ವರವಾಗಿ ಸ್ವೀಕರಿಸಿ ಕೃತಯುಗದಲ್ಲಿ ಹಿರಣ್ಯ ಕಶಿಪುವೆಂಬ ರಾಕ್ಷಸನ ಉದರದಲ್ಲಿ ‘ಭಕ್ತ ಪ್ರಹ್ಲಾದ’ನಾಗಿ, ದ್ವಾಪರದಲ್ಲಿ ಬಾಹ್ಲಿಕ ರಾಜರಾಗಿ, ಕಲಿಯುಗದಲ್ಲಿ ವ್ಯಾಸರಾಯರಾಗಿ ಹಾಗೂ ಕೊನೆಯ ಅವತಾರವಾಗಿ ರಾಘವೇಂದ್ರರಾಗಿ ಭೂಲೋಕದಲ್ಲಿ ನಾಲ್ಕು ಅವತಾರ ಎತ್ತಿದರು ಎಂಬ ನಂಬಿಕೆ ಭಕ್ತರಲ್ಲಿ ಇದೆ. ರಾಘವೇಂದ್ರ ಸ್ವಾಮಿಗಳು ಕೃತಯುಗದಲ್ಲಿ ಪ್ರಹ್ಲಾದರಾಜನಾಗಿ ಜನ್ಮವೆತ್ತಿದಾಗ ಹತ್ತು ಸಹಸ್ರ ವರ್ಷ ಹರಿನಾಮ ಸ್ಮರಣೆ ಮಾಡಿ ಪುಣ್ಯದ ಕಣಜವನ್ನೇ ತಮ್ಮದಾಗಿರಿಸಿ ಕೊಂಡರು. ತಾವು ಸಂಪಾದಿಸಿದ ಅಪಾರ ಪುಣ್ಯವನ್ನು ಹಂಚಿ ಜನರ ಬವಣೆಯನ್ನು ನೀಗಿಸ ಲೆಂದೇ ರಾಯರು ತಮ್ಮ 76ನೇ ವರ್ಷದಲ್ಲಿ ಅಂದರೆ ಕ್ರಿ.ಶ. 1671 ವಿರೋಧಿನಾಮ ಸಂವತ್ಸರ ಶ್ರಾವಣ ಕೃಷ್ಣ ಬಿದಿಗೆಯಂದು ಮಂತ್ರಾಲಯದ ಮಂಚಾಲಮ್ಮನ ಸನ್ನಿಧಿಯಲ್ಲಿ ಸಶರೀರ ವಾಗಿ ಬೃಂದಾವನ ಪ್ರವೇಶಿಸಿದರು; ಬೃಂದಾವನದಲ್ಲಿ ತಾವು ಏಳುನೂರು ವರ್ಷಗಳು ನೆಲೆಸುವುದಾಗಿ ತಿಳಿಸಿದ್ದಾರೆ.

ರಾಯರು ಬಯಸಿ ನೆಲೆಸಿರುವ ಮಂತ್ರಾಲಯದ ಮಹಿಮೆ ಬಣ್ಣಿಸಲಾಗದಷ್ಟು ಅಪಾರವಾಗಿದೆ. ಕೃತಯುಗದಲ್ಲಿ ಪ್ರಹ್ಲಾದರು ಯಜ್ಞ ಮಾಡಿದ ಸ್ಥಳ, ತ್ರೇತಾಯುಗದಲ್ಲಿ ರಾಮ–ಲಕ್ಷ್ಮಣರು ವಿಶ್ರಮಿಸಿದ ಬಂಡೆಯಿಂದ ನಿರ್ಮಿಸಿದ ಬೃಂದಾವನದ ಸ್ಥಳ, ದ್ವಾಪರದಲ್ಲಿ ಅನುಸಾಲ್ವನೆಂಬ ರಾಜ ಪಾಂಡವರ ಅಶ್ವಮೇಧಯಾಗದ ಕುದುರೆಯನ್ನು ಕಟ್ಟಿಹಾಕಿ ಪಾಂಡವರನ್ನು ಹಿಮ್ಮೆಟ್ಟಿದ ಸ್ಥಳ, ಮಂಚಾಲಮ್ಮನ ಸನ್ನಿಧಿ – ಇಂತಹ ಪುಣ್ಯಸ್ಥಳದಲ್ಲಿ ನೆಲೆಸಿರುವ ಗುರುಸಾರ್ವಭೌಮರು ಭಕ್ತರ ಪಾಲಿಗೆ ಕಲಿಯುಗದ ಕಲ್ಪತರು. ರಾಯರು ಬೃಂದಾವನಸ್ಥರಾಗಿ ಮುನ್ನೂರೈವತ್ತು ವಸಂತಗಳು ಉರುಳಿವೆ; ವಿಶ್ವದಾದ್ಯಂತ ಎರಡು ಸಾವಿರಕ್ಕೂ ಹೆಚ್ಚಿನ ಬೃಂದಾವನಗಳು ನಿರ್ಮಾಣವಾಗಿವೆ.

ಫೋಟೋ ಕೃಪೆ : google

ರಾಘವೇಂದ್ರ ಸ್ವಾಮಿಗಳು ಭವರೋಗವೈದ್ಯರು ಹಾಗೂ ಪವಾಡ ಪುರುಷರು ಎಂದೇ ಭಕ್ತರು ನಂಬಿದ್ದಾರೆ. ಮಾಂಸವನ್ನು ಫಲಪುಷ್ಪಾದಿಗಳಾಗಿ ಮಾಡಿದ ಹಾಗೂ ಒನಕೆಯನ್ನೇ ಚಿಗುರಿಸಿ ಜೀವ ತುಂಬಿ ಗಿಡವನ್ನಾಗಿ ಮಾಡಿದ ಕಥೆ ಅವರ ಜೀವನ ಚರಿತ್ರೆಯಲ್ಲಿ ಬರುತ್ತದೆ. ರಾಯರು ಬೃಂದಾವನಸ್ಥರಾಗಿ 135 ವರ್ಷಗಳ ನಂತರ, ಕ್ರಿ.ಶ. 1806ರಲ್ಲಿ, ಸರ್ ಥಾಮಸ್ ಮುನ್ರೋ ಅವರಿಗೆ ಬೃಂದಾ ವನದಿಂದ ಹೊರಬಂದು ದರ್ಶನ ನೀಡಿ ಇಂಗ್ಲೀಷ್ ನಲ್ಲಿ ಮಾತನಾಡಿದ್ದು ರಾಯರು  ಇಂದಿಗೂ ಭಕ್ತರೊಂದಿಗೆ ಇರುವುದಕ್ಕೆ ಸಾಕ್ಷಿಯಾಗಿದೆ. ಥಾಮಸ್ ಮುನ್ರೋ ವರ 5ನೇ ತಲೆ ಮಾರು ಈಗಲೂ ಶ್ರೀ ರಾಯರ ಆರಾಧನೆ ಮಾಡುತ್ತಿದೆ, ಮಂತ್ರಾಲಯ ಬಂದು ದರ್ಶನ ಮಾಡಿ ಸೇವೆಸಲ್ಲಿಸಿದ್ದು ರಾಯರ ಮಹಿಮೆಗೆ ಸಾಕ್ಷಿರೂಪವಾಗುತ್ತದೆ
ಒಳ್ಳೆಯ ಅಧಿಕಾರಿಯನ್ನು ಜನ ಹೇಗೆ ಗೌರವಿಸುತ್ತಾರೆ ಎಂಬುದಕ್ಕೆ ನಿದರ್ಶನ ಸರ್ ಥಾಮಸ್ ಮುನ್ರೋ. 1779 ರಿಂದ 1827ರ ವರೆಗೆ ಭಾರತದಲ್ಲಿ ಸೇವೆ ಸಲ್ಲಿಸಿದ ಒಬ್ಬ ದಕ್ಷ ಆಂಗ್ಲ ಅಧಿಕಾರಿ. ಎರಡನೇ ಮೈಸೂರು ಯುದ್ಧ ಮತ್ತು ಮೂರನೇ ಮೈಸೂರು ಯುದ್ಧ ಹಾಗೂ ಮೂರನೇ ಮರಾಠ ಯುದ್ಧದಲ್ಲಿ ಪಾಲ್ಗೊಂಡು ಈಸ್ಟ್ ಇಂಡಿಯಾ ಕಂಪನಿಯಿಂದ ಶ್ಲಾಘನೆಗೆ ಒಳಗಾಗಿದ್ದ.

ಬಳ್ಳಾರಿ, ಮಂಗಳೂರು, ಮದ್ರಾಸು ಮತ್ತಿತರ ಕಡೆ ಅಧಿಕಾರಿಯಾಗಿದ್ದು, ಜನರ ಪ್ರೀತಿ ಗಳಿಸಿದ್ದನು. ಅವನು ಸೇವೆ ಸಲ್ಲಿಸಿದ ಸ್ಥಳಗಳಲ್ಲಿ ಅಲ್ಲಿನ ಪ್ರಾದೇಶಿಕ ಭಾಷೆಯನ್ನೇ ಆಡಳಿತ ಭಾಷೆಯನ್ನಾಗಿ ಬಳಸಿದ ಮೊದಲ ಆಂಗ್ಲ ಅಧಿಕಾರಿ. ಹೀಗಾಗಿ ಅವನು ಸೇವೆ ಸಲ್ಲಿಸಿದ ಸ್ಥಳಗಳಲ್ಲಿ ಜನರೇ ಅವನ ಮೂರ್ತಿಯನ್ನು ನಿಲ್ಲಿಸಿ ತಮ್ಮ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

ಬಳ್ಳಾರಿಯ ಜನರು ಈ ಅಧಿಕಾರಿಯನ್ನು ಮುನ್ರಪ್ಪನೆಂದು ಪ್ರೀತಿಯಿಂದ ಕರೆಯುತ್ತಿದ್ದರು. ಕ್ರಿ.ಶ.1800 ರಲ್ಲಿ ಮುನ್ರೋ ಬಳ್ಳಾರಿಯ ಕಲೆಕ್ಟರ್ ಆಗಿದ್ದಾಗ ಮಂತ್ರಾಲಯ ಮಠದ ಮತ್ತು ಹಳ್ಳಿಯ ಆದಾಯವನ್ನು ಸರ್ಕಾರದ ಖಜಾನೆಗೆ ಸೇರಿಸಿಕೊಳ್ಳಬೇಕೆಂಬ ಮದ್ರಾಸು ಸರ್ಕಾರದ ಆದೇಶವನ್ನು ಹೊತ್ತು ಮಂತ್ರಾಲಯಕ್ಕೆ ಹೋಗಿದ್ದೂ, ಅಲ್ಲಿ ಬೃಂದಾವನದಿಂದ ಹೊರಬಂದ ರಾಯರನ್ನು ಮಾತನಾಡಿಸಿದ್ದು, ಅವರಿಂದ ಮಂತ್ರಾಕ್ಷತೆ ಪಡೆದು ಬಂದಿದ್ದು, ನಂತರ ಮದ್ರಾಸು ಸರ್ಕಾರದ ಆದೇಶವನ್ನು ಹಿಂಪಡೆಯುವಂತೆ ಮಾಡಿದ್ದು ಇವೆಲ್ಲಾ ಮದ್ರಾಸು ಸರ್ಕಾರದ ಆದೇಶವನ್ನು ಹಂಪಡೆಯುವಂತೆ ಮಾಡಿದ್ದು ಇವೆಲ್ಲಾ ಮದ್ರಾಸು ಸರ್ಕಾರದ ಗೆಜೆಟ್ನಲ್ಲಿ ಪ್ರಕಟವಾಗಿದೆ.

ಫೋಟೋ ಕೃಪೆ : google

ಮನ್ರೋ ಭೂಕಂದಾಯ ಕಾಯಿದೆ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದವನು. ರೈತವಾರಿ ವ್ಯವಸ್ಥೆಯನ್ನು ಜಾರಿಗೊಳಿಸುವಾಗ ಮನ್ರೋ ಎಲ್ಲ ಜಮೀನುಗಳನ್ನು ಸರ್ವೆ ಮಾಡಿಸಿ ಭೂಕಂದಾಯ ನಿಗದಿಪಡಿಸುತ್ತಿದ್ದ. ಮಂತ್ರಾಲಯ ಮಠದ ಜಮೀನಿನ ವಿಷಯ ಬರುವಾಗ ಗೊಂದಲವಾಗಿತ್ತು. ಭೂಮಾಲಕರಿಲ್ಲದ ಸ್ಥಳ ಈಸ್ಟ್‌ ಇಂಡಿಯ ಕಂಪೆನಿ ಸುಪರ್ದಿಗೆ ಹೋಗಬೇಕಿತ್ತು. ಇದರ ಬಗ್ಗೆ ಖಚಿತ ನಿಲುವು ತಳೆಯಲು ಮನ್ರೋ ಸ್ವತಃ ಮಂತ್ರಾಲಯ ಮಠಕ್ಕೆ ಬಂದ. ಆಗ ಮಂತ್ರಾಲಯ ಸ್ವಾಮಿಗಳು ಮನ್ರೋ ಜತೆ ಇಂಗ್ಲಿಷ್‌ನಲ್ಲಿ ಮಾತನಾಡಿದರು. ಮನ್ರೋ ಟಿಪ್ಪಣಿ ಮಾಡಿಕೊಂಡು ಹೋಗಿ ಮಠದ ಪರವಾಗಿ ಶಿಫಾರಸು ಮಾಡಿದ ಎಂಬುದು ಲಭ್ಯ ಮಾಹಿತಿ. ಗಜೆಟಿಯರ್‌ ಮಾಹಿತಿ ಪ್ರಕಾರ ಬೂಟ್ಸ್‌, ಹ್ಯಾಟ್‌ ತೆಗೆದಿಟ್ಟು ಮನ್ರೋ ಮಠದ ಒಳಗೆ ಹೋದ ಎಂದಿದೆ.  ರಾಘವೇಂದ್ರಸ್ವಾಮಿಗಳು ಮಂತ್ರಾಕ್ಷತೆ ಕೊಟ್ಟರು, ಅದನ್ನು ಮನ್ರೋ ತನ್ನ ನಿವಾಸಕ್ಕೆ ಹೋಗಿ ಅಡುಗೆ ಸಾಮಗ್ರಿಗಳ ಧಾನ್ಯದ ಪಾತ್ರೆಗೆ ಹಾಕಿದ ಎಂದು ಉಲ್ಲೇಖವಿದೆ. ಇನ್ನು ಕೆಲವು ದಾಖಲೆಗಳ ಪ್ರಕಾರ ಮನ್ರೋ ಮಠದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಬಂದಿದ್ದ ಎಂದಿದೆ. ವಿಷಯ ಏನೇ ಇದ್ದರೂ ಇಲ್ಲಿ ಆತ ಸಮಾಧಿಸ್ಥ ಸ್ವಾಮೀಜಿಯವರೊಂದಿಗೆ ಮಾತನಾಡಿದ್ದು ಮಾತ್ರ ಕುತೂಹಲದ ವಿಷಯ. ಮನ್ರೋ ಆದೇಶದಂತೆ ಮದ್ರಾಸ್‌ ಸರಕಾರದ ಗಜೆಟ್‌ನ ಚಾಪ್ಟರ್‌ 11, 213ನೆಯ ಪುಟದಲ್ಲಿ ಇದು ದಾಖಲಾಗಿದೆ. ಇದು ಚೆನ್ನೈಯ ರಾಜ್ಯ ಸರಕಾರದ ಪತ್ರಾಗಾರದಲ್ಲಿ ಇದೆ.

ಇಂದು ಭಕ್ತಕೋಟಿ ಗುರು ರಾಘವೇಂದ್ರ ಸ್ವಾಮಿಗಳ ಸನ್ನಿಧಿಗೆ ಬರುತ್ತದೆ ಎಂದರೆ ಆ ಸ್ಥಳ ಮಹಿಮೆ ಅಪಾರ. ಪವಾಡ ಮಾಡಿದವರೆಲ್ಲ ಮಹಾಮಹಿಮರಾಗಿಲ್ಲ. ಆದರೆ, ದೈವಾಂಶ ಸಂಭೂತರಂತೆ ಅವತರಿಸಿ ಜನರ ಕಷ್ಟ ಕಾರ್ಪಣ್ಯ ನೀಗಿದವರು ಮಹಾಮಹಿಮರಾಗುವರು. ಶ್ರೀ ರಾಘವೇಂದ್ರ ಸ್ವಾಮಿಗಳು ಅಕ್ಷರಶಃ ದೈವಾಂಶಸಂಭೂತರು. ಅದಕ್ಕೇ ಅವರನ್ನು “ಕಲಿಯುಗದ ಕಾಮಧೇನು’ ಎಂದೇ ಕರೆಯುವುದು.


  • ಡಾ.ಗುರುಪ್ರಸಾದ್ ರಾವ್ ಹವಲ್ದಾರ್ – ಲೇಖಕರು ಮತ್ತು ಉಪನ್ಯಾಸಕರು

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW