‘ಇಬ್ಬನಿ – ಬನಿ’ ಕಿರು ಪರಿಚಯ – ಎನ್.ವಿ.ರಘುರಾಂ‘ಇಬ್ಬನಿ-ಬನಿ’ ಕಿರು ಕಾವ್ಯ ಸಂಗ್ರಹ ಕಳೆದ ವಾರ ಲೋಕಾರ್ಪಣೆಗೊಂಡಿದ್ದು, ಅದರ ಕಿರು ಪರಿಚಯ. ಪುಸ್ತಕದ ಕೃತಿ ಬಗ್ಗೆ ಲೇಖಕರಾದ ಎನ್.ವಿ.ರಘುರಾಂ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ಮುಂದೆ ಓದಿ…

ಪುಸ್ತಕ : ಇಬ್ಬನಿ – ಬನಿ
ಇಬ್ಬನಿ ಲೇಖಕರು : ಶ್ರೀರಂಗರಾಜನ್
ಬನಿ ಲೇಖಕರು : ಶ್ರೀರವಿಂದ್ರ
ಪ್ರಕಾಶಕರು : ಭಾರತೀಯ ಸ್ಟೇಟ್ ಬ್ಯಾಂಕ್ ಕನ್ನಡ ಸಂಘ
ಬೆಲೆ : 30/

ಮಲೆನಾಡಿನ ಚಳಿಗಾಲದಲಿ ಬೆಳಿಗ್ಗೆ ಎದ್ದು ಅಂಗಳದಲ್ಲಿ ಮುಸುಕಿರುವ ಮಂಜಿನಲಿ ಸ್ವಲ್ಪ ಓಡಾಡಿದರೆ ಮೊದಲು ಕಣ್ಣಿಗೆ ಬೀಳುವುದೇ ಗಿಡದ ಎಲೆ, ಹುಲ್ಲು, ಹೂಗಳ ಮೇಲಿನ ಇಬ್ಬನಿ ಹನಿಗಳು. ಅದರ ಮೇಲೆ ಎಳೆ ಸೂರ್ಯನ ಕಿರಣಗಳು ಬಿದ್ದಾಗ ಉಂಟಾಗುವ ಕಾಮನಬಿಲ್ಲು ನೋಡಲು ಅತ್ಯಂತ ಸುಂದರ. ಕುವೆಂಪುರವರು ಇದನ್ನು ತಮ್ಮ ‘ಪಕ್ಷಿಕಾಶಿ’ ಕವನ ಸಂಗ್ರಹದಲ್ಲಿ ‘ಶರತ್ಕಾಲದ ಸೂರ್ಯೋದಯದಲಿ’ ಕವನದಲ್ಲಿ ಬಣ್ಣಿಸಿರುವ ರೀತಿ ಅತ್ಯಂತ ಸೊಗಸಾಗಿದೆ.

‘ಹಚ್ಚನೆ ಪಚ್ಚನೆ ವೇದಿಕೆಯಲ್ಲಿ
ಸಾಸಿರಗಟ್ಟಲೆ ಮುತ್ತನು ಚೆಲ್ಲಿ,
ರನ್ನದ ಕಿರುಹಣತೆಗಳಲ್ಲಿ
ಶ್ಯಾಮಲ ತೈಲದಿ ಹೊನ್ನಿನ ಬತ್ತಿ
ಕಾಮನ ಬಿಲ್ಲಿನ ಬೆಂಕಿಯು ಹೊತ್ತಿ
ಸೊಡರುರಿಯುತ್ತಿದೆ ಅಲ್ಲಲ್ಲಿ!’

ಕಣ್ಣಿಗೆ ಅಷ್ಟೆಲ್ಲಾ ಮುದ ನೀಡುವ ಇಬ್ಬನಿ ಹನಿಗಳು ಸಣ್ಣದಾದರೂ ಸೂರ್ಯನ ಕಿರಣಗಳಲ್ಲಿ ಕಾಮನಬಿಲ್ಲು ಮೂಡಿಸಬಲ್ಲವು. ನಂತರ ಹನಿಗಳು ತೊಟ್ಟಿಕ್ಕಿ ಆ ಸಸ್ಯಗಳಿಗೆ ಜೀವಜಲವೇ ಆಗುತ್ತದೆ. ಆ ‘ಇಬ್ಬನಿ’ಯ ‘ಹನಿ’ಗಿರುವ ಈ ಶಕ್ತಿ ನಾವು ಪಡೆದುಕೊಳ್ಳುವುದು ಸಾಧ್ಯವೇ? ಅದನ್ನು ತಿಳಿದುಕೊಳ್ಳಲು ‘ಇಬ್ಬನಿ-ಬನಿ’ ಮುಕ್ತಕಗಳನ್ನು ಓದಬೇಕು.

ಶ್ರೀರಂಗರಾಜನ್ ನಾಲ್ಕು ಸಾಲಿನ ಪದ್ಯಗಳನ್ನು ‘ಇಬ್ಬನಿ’ಯಾಗಿ ರಚಿಸಿದರೆ, ಅದರ ಸಂವಾದಿಯಾಗಿ ನಾಲ್ಕು ಸಾಲಿನ ಪದ್ಯಗಳನ್ನು ‘ಬನಿ’ಯಾಗಿ ಶ್ರೀರವಿಂದ್ರರವರು ರಚಿಸಿದ್ದಾರೆ. ಮುನ್ನುಡಿ ಬರೆದಿರುವ ಶ್ರೀ ಬಿ.ಎಸ್.ಚಂದ್ರಶೇಖರ್ ಹೇಳಿರುವಂತೆ ಇದೊಂದು ಕಿರುಕಾವ್ಯ ಜುಗಲ್ ಬಂದಿ ಮತ್ತು ಬದುಕಿನ ಪ್ರೀತಿಯೇ ಇಲ್ಲಿಯ ಪ್ರಧಾನ ದ್ರವ್ಯ.

‘ಇಬ್ಬನಿ’ ಕವಿತೆಯ ಲೇಖಕರು ಶ್ರೀ ರಂಗರಾಜನ್

ಮೊದಲ ‘ಇಬ್ಬನಿ’ ನೋಡಿ:

ನಮ್ಮನು ನೋಡಲು ಉದಯಿಸಿ ಬರುವನು ರವಿ
ಅವನ ಬಣ್ಣಗಳ ನೋಡಿ ಆಗುವೆನು ನಾ ಕವಿ
ಜಗಕೆ ಹೇಳುವನು ನಿನ್ನ ಕಾಯಕವ ನೀ ಮಾಡು
ಜೀವ ಸಂಕುಲ ಸಂತಸದಿ ನಗಲು ಕಾರಣ ನೀನಾಗು.
‘ಬನಿ’
ಯಾರು ಮಾಡಲಿ ಬಿಡಲಿ
ತನ್ನ ಕಾಯಕವ ತಾನು
ಅಕ್ಷ ತಪ್ಪದೆ ರವಿ ವಿಶ್ವದಲಿ
ನಮ್ಮ ಉಸಿರಾಗಿಹನು.

ಶ್ರೀರಂಗರಾಜನ್ ‘ಕಾಯಕ ತರುವ ಸಂತೋಷ’ದ ಬಗ್ಗೆ ಮೊದಲ ‘ಇಬ್ಬನಿ’ಯಲ್ಲಿ ಬರೆದರೆ, ಅವರ ‘ನಿನ್ನ ಕಾಯಕವ ನೀ ಮಾಡು’ ಸಾಲಿಗೆ ‘ತನ್ನ ಕಾಯಕವ ತಾನು ತಪ್ಪದೇ ಮಾಡುವ ರವಿ’ಯ ಬಗ್ಗೆ ‘ಬನಿ’ಯಲ್ಲಿ ಬರೆಯುತ್ತಾ ಶ್ರೀರವಿಂದ್ರರವರು ಅರಿವಿನ ಪರಧಿಯನ್ನು ವಿಸ್ತರಿಸಿದ್ದಾರೆ.

ಈ ಕಿರುಕಾವ್ಯ ಸಂಗ್ರಹದ ವಿಶೇಷವೇ ಇಬ್ಬನಿಯ ತರಹವೇ ಪದ್ಯಗಳಲ್ಲಿ ಇರುವ ಸರಳತೆ. ನಾಲ್ಕು ಸಾಲಿನ ಪದ್ಯಗಳು ಜನ ಸಾಮಾನ್ಯರು ಯಾವುದೇ ‘ಡಿಕ್ಷನರಿ’ ಸಹಾಯವಿಲ್ಲದೆ ಓದಿ ಮನನ ಮಾಡಿಕೊಳ್ಳಬಹುದು. ಇದೊಂದು ಹೊಸ ರೀತಿಯ ಜುಗಲ್ ಬಂದಿ. ‘ಇಬ್ಬನಿ’ ಮತ್ತು ‘ಬನಿ’ ಮಧ್ಯೆ ಯಾವುದೇ ರೀತಿಯ ಸ್ಪರ್ಧೆಯಿಲ್ಲ. ಸೂರ್ಯ-ಚಂದ್ರನ ತರಹ ಒಬ್ಬರ ಬೆಳಕಿನಲ್ಲಿ ಇನ್ನೊಬ್ಬರು ಬೆಳಗುವ ಅಥವ ಚಂದ್ರನನ್ನು ಕನ್ನಡಿಯಲ್ಲಿ ತೋರಿಸುವ ಪ್ರಯತ್ನವಾಗಿಲ್ಲ. ಒಂದು ಇನ್ನೊಂದಕ್ಕೆ ಪೂರಕವಾಗಿದೆ. ‘ಒಗ್ಗಟ್ಟಿನಲ್ಲಿ ಬಲವಿದೆ’ ಎಂಬ ಮಾತು ಇಲ್ಲಿ ಇನ್ನೊಮ್ಮೆ ಸಾಬೀತಾಗಿದೆ.

ಕೆಲವು ಕವನಗಳ ಸಾರ ನೋಡಿ. ಕಾಯಕ ಮಾಡುವವರಿಗೆ ಕಷ್ಟಗಳು ಸಾಮಾನ್ಯ. ಈ ಕಷ್ಟಗಳು ಯಾವಾಗಲೂ ಇರುವುದಿಲ್ಲ ಎಂದು ಹೇಳಲು ಅಮಾವಾಸ್ಯೆಯ ನಂತರ ಬರುವ ಹುಣ್ಣಿಮೆಯ ಉದಾಹರಣೆ ಕೊಡುತ್ತಾ ಸಾಧನೆ ಮಾಡಲು ಧೃಡ ಸಂಕಲ್ಪದ ಅಗತ್ಯವೆಂದು ‘ಇಬ್ಬನಿ’ಯೊಂದು ಹೇಳಿದರೆ, ಸಾಧನೆಗೆ ಶ್ರಮದ ಕಾಯಕಲ್ಪವಿದ್ದರೆ ಇಷ್ಟಾರ್ಥ ಪಡೆದುಕೊಳ್ಳಬಹುದುದೆಂದು ಹೇಳುತ್ತಾ ಕೆಲಸದಿಂದ ಸಾಧನೆ ಸಾಧ್ಯವೆಂದು ‘ಬನಿ’ ಅತ್ಮವಿಶ್ವಾಸ ತುಂಬುತ್ತದೆ. (39ನೇ ಇಬ್ಬನಿ) ನಮ್ಮ ಬಾಳ ಹಾದಿಯಲ್ಲಿ ಅನೇಕ ಕಷ್ಟಗಳಿವೆ. ಈ ಜೀವನದ ಪಯಣ ಒಂದು ದೋಣಿಯಲ್ಲಿ ಸಾಗಿದಂತೆ. ಗಾಳಿ ಬೀಸುವ ದಿಕ್ಕು ಹೇಗೆ ತಿರುಗಿಸಲಾಗದೊ ಹಾಗೆ ಕಷ್ಟಗಳನ್ನು ಬರುವುದನ್ನು ತಡೆಯಲಾಗುವುದಿಲ್ಲ. ಆದರೆ ದೋಣಿಯ ಹಾಯಿ ನಮ್ಮ ಕೈಯಲ್ಲಿ ಇದೆ ಎಂದೆನ್ನುತ್ತಾ ‘ಇಬ್ಬನಿ’ಯೊಂದು ದೋಣಿಯನ್ನು ಎಚ್ಚರಿಕೆಯಿಂದ ನಡೆಸಿ ದಡ ಸೇರಬಹುದೆಂದು ಸೂಚಿಸುತ್ತದೆ. ಜೀವನವೆಂಬ ದೋಣಿಯನ್ನು ನೈಪುಣ್ಯತೆಯಿಂದ ಸಾಗಿಸುವ ಸಾಮರ್ಥ್ಯ ನಿನ್ನಲ್ಲಿದೆ ಎಂದು ಅತ್ಮವಿಶ್ವಾಸ ತುಂಬುತ್ತದೆ ಅದರ ‘ಬನಿ’. (38ನೇ ಇಬ್ಬನಿ)

ಬನಿ ಕವಿತೆಯ ಲೇಖಕರು ಶ್ರೀರವಿಂದ್ರ

ಎಷ್ಟು ಕೆಲಸ ಮಾಡಿದರೂ ಬಡ್ತಿ ಅಷ್ಟು ಸುಲಭದಲ್ಲಿ ಸಿಗುವುದಿಲ್ಲವೆಂದು ಬೇಸರಗೊಂಡವರಿಗೆ ಇಬ್ಬನಿಯೊಂದು ಈ ಹುದ್ದೆಗಳು ಶಾಶ್ವತವಲ್ಲ ಎಂದು ಹೇಳುತ್ತಾ ಚದುರಂಗ ಆಟ ಮುಗಿದ ನಂತರ ರಾಜ, ಕಾಲಾಳು ಎಲ್ಲವನ್ನು ಒಂದೇ ಡಬ್ಬಿಯಲ್ಲಿ ತುಂಬಿಡುವ ರೀತಿಯಲ್ಲಿ ಉನ್ನತ ಹುದ್ಧೆಯಲ್ಲಿಯಿದ್ದು ಮೆರೆದವರೂ ಕೂಡ ಜೀವನದ ಪಯಣ ಮುಗಿದಾಗ ಭೇಧವಿಲ್ಲದೇ ಎಲ್ಲರೂ ಸೇರುವುದು ಒಂದೇ ಮಣ್ಣಿಗೆ ಎಂಬ ಚಿಂತನೆಯ ಮಾತುಗಳನ್ನು ನುಡಿಯುತ್ತದೆ. ವಿನಯದಿಂದ ಜೀವನ ನಡೆಸಿದರೆ ಹಿರಿತನ ಸಾಧಿಸಬಹುದೆಂದು ಹೇಳುತ್ತಾ ‘ಹಿರಿತನ’ ಬರುವುದು ಹುದ್ದೆಯಿಂದಲ್ಲವೆಂದು ಸೂಚಿಸುತ್ತದೆ ಅದರ ‘ಬನಿ’. ಅದು ಜೀವನದ ಪಯಣಕ್ಕೆ ಹೊಸದಿಕ್ಕನ್ನೂ ತೋರಿಸುತ್ತದೆ. (49ನೇಯ ಇಬ್ಬನಿ)

ಈ ಇಬ್ಬನಿ (32) ನೋಡಿ:

ಬರೆಯುತ್ತಿದ್ದ ಲಕೋಟೆ ಪತ್ರಗಳು ಇಮೈಲುಗಳಾದವು
ತಿಂಡಿ, ಕಾಫಿ ಕೊಡುತ್ತಿದ್ದ ಮಾಣಿ ರೋಬೋ ಆದನು
ರುಬ್ಬುವ, ಅರೆವಾಹಕ ಕಲ್ಲು, ಮಿಕ್ಸರ್ ಗ್ರೈಂಡರ್ ಆಯಿತು
ತಿಂಡಿ ಊಟದ ಬದಲಿಗೆ ವಿಟಮಿನ್ ಮಾತ್ರೆ ಬಂದಿತು
ಬನಿ
ಬದಲು ಕ್ಷಣಕ್ಷಣವು
ನವಾನ್ವೇಷಣೆ ಕಣವು
ಜೀವನಗತಿಚಕ್ರ ಸರಾಗ
ಬೆರೆತು ಬೆಳೆ ಅನುರಾಗ.

ಬದಲಾದ ಕಾಲದ ಚಿತ್ರಣವೊಂದನ್ನು ಇಬ್ಬನಿ ಕಟ್ಟಿ ಕೊಟ್ಟಿದೆ. ಪತ್ರದ ಜಾಗದಲ್ಲಿ ಈ-ಮೈಲ್ ಬಂದು ಸಂಬಂಧಗಳು ಬರಿದಾಗುತ್ತಿದೆಯೇನೊ ಭಾವನೆ ಬಂದಿರುವಾಗ ಎಲ್ಲರ ಜೊತೆ ಬೆರೆತು ಪ್ರೀತಿಯಿಂದ ಬದುಕಿದರೆ ಈ ಜೀವನಚಕ್ರ ಸರಾಗವಾಗಿ ಸಾಗುತ್ತದೆ ಎನ್ನುತ್ತಾ ‘ಬನಿ’ ಅರಿವಿನ ವಿಸ್ತಾರ ಹೆಚ್ಚಿಸುತ್ತದೆ.ನಮ್ಮನ್ನು ಪ್ರೀತಿಸುವ ಜೀವಗಳಿಗೆ ಆದರದಿಂದ ಒಲವನ್ನು ತೋರಿದರೆ ಆ ದೇವ ನಮ್ಮ ಮೇಲೆ ಒಲವನ್ನು ತೋರುತ್ತಾನೆ ಎಂದು ಇಬ್ಬನಿಯೊಂದು ಹೇಳುತ್ತಾ ಜೀವನದ ವಿಧಾನವನ್ನು ಹೇಳಿದರೆ, ಮೋಹ ತೊರೆದರೆ ಆ ದೇವನ ಒಲವಿನ ತೊರೆಯಲ್ಲಿ ಮೀಯಬಹುದೆಂದು ‘ಬನಿ’ ಮೋಕ್ಷದ ಮಾರ್ಗ ಹೇಳುತ್ತದೆ. (60ನೇ ಇಬ್ಬನಿ).

ಪ್ರಕೃತಿಯಲ್ಲಿ ವಾತಾವರಣದಲ್ಲಿರುವ ತೇವಾಂಶ ಸಾಂದ್ರೀಕರಣಗೊಂಡು ‘ಇಬ್ಬನಿ’ಯಾಗುತ್ತದೆ. ‘ ಇಬ್ಬನಿ-ಬನಿ’ ನಮ್ಮ ಸುತ್ತಲಿನಲ್ಲಿ ನಡೆಯುತ್ತಿರುವ ವಿಷಯಗಳು ಸಾಂದ್ರೀಕರಣಗೊಂಡು ಓದುಗರ ಕಣ್ಣ ಮುಂದೆ ಬಂದಿವೆ. ರಾಷ್ಟ್ರಕವಿ ಕುವೆಂಪುರವರು ಹೇಳಿದಂತೆ ಅಲ್ಲಿ ‘ಕಾಮನ ಬಿಲ್ಲಿನ ಬೆಂಕಿಯು ಹೊತ್ತಿ ಸೊಡರುರಿಯುತ್ತಿದೆ’ . ಅದೊಂದು ಸಾಮಾನ್ಯದ ದೀಪವಲ್ಲ. ಅದು ಜ್ಞಾನದ ಬೆಳಕು. ಆದನ್ನು ಅರಿತರೆ ನಮ್ಮ ಜೀವನ ಕಾಮನಬಿಲ್ಲಿನ ತರಹ ವರ್ಣಮಯವಾಗಿರುತ್ತದೆ. ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ, ಇಬ್ಬನಿ ತೊಟ್ಟಿಕ್ಕಿ ಬೇರನ್ನು ಸೇರಿ ಜೀವಸಲೆಯಾಗುವ ರೀತಿಯಲ್ಲಿ, ಈ ವರ್ಣ ಮಯ ಬದುಕು ಶಾಶ್ವತವಾಗುತ್ತದೆ.

ಕುವೆಂಪು ಅವರು ‘ಶ್ರೀ ರಾಮಾಯಣ ದರ್ಶನಂ’ನ ಪ್ರಾರಂಭದ ಕವಿಕೃತ ದರ್ಶನಂ ಸಂಚಿಕೆಯಲ್ಲಿ ತಾವು ಕೈಗೊಂಡಿರುವ ಮಹಾಕಾವ್ಯದ ರಸಯಾತ್ರೆಯಲ್ಲಿ ಪ್ರಕೃತಿಯಲ್ಲಿರುವ ಇಬ್ಬನಿಯೂ ಸೇರಿ ಸಮಸ್ತವೂ ಮಾನ್ಯವಾದುದು ಎಂದು ಹೇಳಿದ್ದಾರೆ.

‘ರಾಮನ ಕಿರೀಟದಾ ರನ್ನವಣಿಯೊಲೆ ರಮ್ಯಂ, ಪಂಚವಟಿಯೊಳ್‌
ದಿನೇಶೋದಯದ ಶಾದ್ವಲದ ಪಸುರು ಗರುಕೆಯೊಳ್‌
ತೃಣಸುಂದರಿಯ ಮೂಗುತ್ತಿಯ ಮುತ್ತು ಪನಿಯಂತೆ
ಮಿರುಮಿರುಗಿ ಮೆರೆವ ಹಿಮಬಿಂದುವುಂ’

ಶ್ರೀರಾಮನ ಕಿರೀಟದಲ್ಲಿರುವ ರತ್ನದ ಮಣಿಯಷ್ಟೆ ಗರಿಕೆಯ ಸುಂದರಿಯ ಮೂಗುತಿಯಲ್ಲಿನ ಮುತ್ತು ಆಗಿರುವ ಹಿಮಬಿಂದುವೂ ಅಮೂಲ್ಯವಾದುದೆಂದು ಕುವೆಂಪುರವರು ಹೇಳಿದ್ದಾರೆ. ಹಾಗೆಯೇ ಇಲ್ಲಿರುವ ಎಲ್ಲಾ ‘ಇಬ್ಬನಿ-ಬನಿ’ಗಳು ಕನ್ನಡ ಕಾವ್ಯ ಕನ್ನಿಕೆಗೆ ತೊಡಿಸಿದ ಮೂಗುತಿಯಂತಿದೆ ಮತ್ತು ಅಮೂಲ್ಯವಾಗಿದೆ.

ಈ ಹೊಸ ರೀತಿಯ ಕಿರುಕಾವ್ಯ ಸಂಗ್ರಹವನ್ನು ಭಾರತೀಯ ಸ್ಟೇಟ್ ಬ್ಯಾಂಕ್ನ ಕನ್ನಡ ಸಂಘ ಪ್ರಕಟಿಸಿರುವುದು ಇನ್ನೊಂದು ವಿಶೇಷ. ಇದು ಇತರ ಕನ್ನಡ ಸಂಘಗಳಿಗೆ ಮಾದರಿ. ಕೇವಲ 30ರೂಪಾಯಿಗೆ ಸಿಗುವ ಈ ಕಿರುಕಾವ್ಯ ಸಂಗ್ರಹ ಪ್ಯಾಂಟ್ನ ಜೇಬಿನಲ್ಲಿ ಇಟ್ಟುಕೊಂಡು ಬೇಕಾದಾಗ ಓದಬಹುದು. ತಮ್ಮೆಲ್ಲರ ಸಹಕಾರವಿದ್ದರೆ ಕನ್ನಡ ಕಾವ್ಯ ಕನ್ನಿಕೆಗೆ ಈ ಹೊಸ ರೀತಿಯ ಮೂಗುತಿಯ ಜೊತೆಗೆ ಕಂಠಿಹಾರವೊಂದು ಬೇಗ ಬರಲು ಸಾಧ್ಯವಾಗುತ್ತದೆ.

ಉತ್ತಮ ಕಿರುಕಾವ್ಯ ಸಂಗ್ರಹ ‘ಇಬ್ಬನಿ-ಬನಿ’ ಕೊಟ್ಟ ಶ್ರೀರಂಗರಾಜನ್ – ಶ್ರೀರವಿಂದ್ರರವರಿಗೆ ಮತ್ತು ಎಲ್ಲರ ಕೈಗೆಟುಕುವ ಬೆಲೆಯಲ್ಲಿ ಪ್ರಕಟಿಸಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಕನ್ನಡ ಸಂಘದವರಿಗೆ ಹಾರ್ದಿಕ ಅಭಿನಂದನೆಗಳು.


  • ಎನ್.ವಿ.ರಘುರಾಂ (ಲೇಖಕರು, ನಿವೃತ್ತ ಅಧೀಕ್ಷಕ ಅಭಯಂತರ(ವಿದ್ಯುತ್) ಕ.ವಿ.ನಿ.ನಿ) 

5 1 vote
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW