ಹಾವೇರಿಯಿಂದ ಗುತ್ತಲ ಮಾರ್ಗವಾಗಿ ಗಳಗನಾಥೇಶ್ವರ ದೇವಸ್ಥಾನವನ್ನು ತಲುಪಬಹುದು. ಗಳಗನಾಥೇಶ್ವರ ದೇವಾಲಯದ ಸೌಂದರ್ಯವನ್ನು ಡಾ. ಪ್ರಕಾಶ ಬಾರ್ಕಿ ಅವರು ತಮ್ಮ ಬರಹದ ಮೂಲಕ ಓದುಗರ ಮುಂದೆ ಹಂಚಿಕೊಂಡಿದ್ದಾರೆ, ಮುಂದೆ ಓದಿ…
ವೀಕೆಂಡ್ ರೈಡ್… ತುಂತುರು ಹನಿಯುವ ಮಳೆಯಲಿ, ಮೋಡ ಕವಿದ ವಾತಾವರಣದಲ್ಲಿ….!!
ಈ ರವಿವಾರ ಬರಸೆಳೆದು ಅಪ್ಪಿದ ನದಿ “ತುಂಗಭದ್ರಾ”. ಮನಸೆಳೆದು ತಣಿಸಿದ್ದು ನದಿಯ ದಂಡೆಯ ಮೇಲಿನ “ಶಿವ” ನೆಲೆ. ಈಜಿಪ್ಟ್ ಪಿರಾಮಿಡ್ ಹೋಲುವ ವಿಶಿಷ್ಟ ಕಲೆಯ ಬಲೆ ಹೊದ್ದ ಶಿಲಾ ನೆಲೆಯೊಳಗೆ ಎದುರಿಗಿದ್ದ ಶಿವಲಿಂಗವನ್ನೆ ತದೇಕಚಿತ್ತದಿಂದ ದಿಟ್ಟಿಸುತ್ತಾ ಕುಳಿತು ಗಂಟೆಯ ಮೇಲಾಯಿತು. ಒಂಚೂರು ವಿಚಲಿತಗೊಳಿಸಿದ ಪ್ರಶಾಂತ ಪರಿಸರ, ತುಂತುರು ಮಳೆ ಸುರಿಸಿ ಸರಿಯುತ್ತಿರುವ ಕರಿ ಮೋಡಗಳು, ಮೋಡಗಳ ಹಿಂದೆ ಅಡಗಿ ಕೂತು ಬಿಸಿಲು ಬೀರದ ನೇಸರ ತಂಗಾಳಿಗೆ ಸಾಕ್ಷಿ. ಬೀಸುತ್ತಿರುವ ತಣ್ಣನೆಯ ಆರ್ದ್ರ ಗಾಳಿ, ಇನ್ನಷ್ಟೂ ವಿನಮ್ರಳಾಗಿ ಧನ್ಯತೆಯಿಂದ ಹರಿದು ನಡೆಯುತ್ತಿರುವ “ತುಂಗಭದ್ರಾ” ಜಲಿಲ. ಲೀಲಾಜಾಲವಾಗಿ ಶಿಲೆಯಲ್ಲಿ ಅರಳಿದ್ದ ಕಲಾವೈಭವ. ಕಲ್ಲೊಳಗೆ ಅರಳಿ ಮುಸುನಗೆ ಹೊತ್ತಿದ್ದ ಕಲಾಕೃತಿಗಳು, ಶತಮಾನಗಳ ಸಾಕ್ಷಿ ಹೇಳುತ್ತಿವೆ.
ಮರದ ಮೇಲೆ ಕೂತು ತಮ್ಮ ಇರುವು ಸೂಚಿಸಲು ಹಾತೊರೆದು ಕಲರವವೆಬ್ಬಿಸಿದ್ದ ಗುಬ್ಬಿ, ಗಿಳಿಗಳು. ಸ್ವರ್ಗವೇ ದೊಪ್ಪನೆ ನೆಲಕ್ಕುರುಳಿದ ನೈಜ ದೃಶ್ಯ. ದಕ್ಷಿಣ ಭಾರತದ ಅದರಲ್ಲೂ ಕರ್ನಾಟಕದಲ್ಲಿರುವ ಅತಿ ಸುಂದರ, ಜಟಿಲ, ಸೂಕ್ಷ್ಮ ಕೆತ್ತನೆಗಳ ದೇವಾಲಯಗಳಲ್ಲಿ ಒಂದಾಗಿರುವ ದೇವಾಲಯವಿದು, ತನ್ನ ಭವ್ಯ ಶ್ರೀಮಂತವಾದ ಹಾಗೂ ಅಷ್ಟೆ ಸೂಕ್ಷ್ಮವಾದ ಕೆತ್ತನೆಗಳಿಂದ ಆಕರ್ಷಿಸುತ್ತಿದೆ.
ತುಂಗಭದ್ರಾ ಮತ್ತು ವರದಾ ನದಿಯ ಸಂಗಮ ಕ್ಷೇತ್ರದಲ್ಲಿದೆ.
ತುಂಗಭದ್ರಾ ನದಿಯ ಬಲ ದಂಡೆಯ ಮೇಲೆ ಪೂರ್ವಾಭಿಮುಖವಾಗಿ ಕ್ರಿ.ಶ ಸುಮಾರು11 ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರು ನಿರ್ಮಿಸಲಾದ ಶಿವನ ದೇವಾಲಯವಿದು, ರಚನೆಯಲ್ಲಿ ಗರ್ಭಗೃಹ, ಅಂತರಾಳ, ನವರಂಗಗಳನ್ನ ಹೊಂದಿದೆ.
ಗರ್ಭಗೃಹದಲ್ಲಿ ಬೃಹತ್ ಸ್ಪುರದ್ರೂಪಿ “ಶಿವಲಿಂಗ”ವಿದೆ. ಐತಿಹ್ಯದಂತೆ ಇದು “ಸ್ಪರ್ಶಲಿಂಗ”ವಾಗಿದ್ದು ಯಾವುದೇ ಲೋಹವನ್ನು ಲಿಂಗಕ್ಕೆ ತಾಗಿಸಿದರೆ ಅರೆಗಳಿಗೆಯಲ್ಲಿ ಸ್ವರ್ಣವಾಗುತಿತ್ತು. ಆದ್ದರಿಂದಲೇ “ಸ್ಪರ್ಶಲಿಂಗ”ವೆಂಬ ಬಿರುದು ಹೊಂದಿದೆ ಶಿವಲಿಂಗ, ಇದರಿಂದ ಮುಂದೆ ಆಪತ್ತು ಎದುರಾಗಬಹುದೆಂದು ಮನಗಂಡ “ಗರ್ಗ ಋಷಿ”ಗಳು ಇದನ್ನು ಎಂದಿಗೂ ಮುಟ್ಟಲಾಗದಂತೆ ಗಳಗದಿಂದ ಮುಚ್ಚಿದರು. ಆದ್ದರಿಂದಲೇ “ಗಳಗೇಶ್ವರ, ಗಳಗನಾಥೇಶ್ವರ ” ಎಂದು ಕರೆಯಲ್ಪಡುತ್ತಿದೆ. ಗಳಗನಾಥೇಶ್ವರ ದೇವಸ್ಥಾನ ಹೊಂದಿದ್ದರಿಂದ ಊರು “ಗಳಗನಾಥ”ವಾಯಿತು.
ಗಳಗನಾಥೇಶ್ವರ ದೇವಸ್ಥಾನವು ಅದ್ಭುತ ಆಕೃತಿಯ, ಕಲಾ ಸಿರಿವಂತಿಕೆ ಹೊಂದಿದ ತಾಣವಾಗಿದೆ. ಇಂದು ಭಾರತೀಯ ಪುರಾತತ್ವ ಇಲಾಖೆಯಿಂದ ಸಂರಕ್ಷಿಸಲ್ಪಡುತ್ತಿದೆ. ಐತಿಹಾಸಿಕವಾಗಿ, ಧಾರ್ಮಿಕವಾಗಿ ಸಾಕಷ್ಟು ಪ್ರಾಮುಖ್ಯತೆ ಪಡೆದಿದೆ.
ದೇವಸ್ಥಾನವನ್ನು ಮೂರು ಕಡೆಯಿಂದ ಪ್ರವೇಶಿಸಬಹುದು. ಧಾರಾಳವಾಗಿ ಗಾಳಿ, ಬೆಳಕು ತುಂಬುವಂತಿದೆ. ಶಿವನ ಎದುರಿಗೆ ಕಾಯುತ್ತಾ ಕುಳಿತ ನಂದಿಯ ಮೂರ್ತಿ ಜೀವಂತವಾಗಿರುವಂತೆ ಭಾಸವಾಗುತ್ತದೆ, ಅಷ್ಟೊಂದು ಜೀವಂತಿಕೆ ತುಂಬಿದ ಕಲಾ ನೈಪುಣ್ಯತೆಯ ವಿಗ್ರಹ. ಐದು ಅಡಿ ಎತ್ತರದ ಆದಿಶಕ್ತಿ, ಗಣಪತಿ, ಸೂರ್ಯನಾರಾಯಣ, ದಶಾವತಾರ ವಿಷ್ಣುವಿನ ಶಿಲ್ಪಗಳಿವೆ.
ಗರ್ಭಗೃಹದ ಹೊರಗೆ ಕಲ್ಲಿನಲ್ಲಿಯೇ ಜಾಲರಿಯನ್ನು (ಜಾಲಂಧ್ರ) ಕೆತ್ತಲಾಗಿದೆ. ಸರಸ್ವತಿ, ನಂದಿ, ಪಂಚಲಿಂಗಗಳ ಕೆತ್ತನೆಗಳು ನಯನಮನೋಹರವಾಗಿದ್ದು ಸ್ಮೃತಿಯಲ್ಲಿ ನೆಲೆ ನಿಂತು ಅಂದಿನ ನಿಪುಣ ಕೆತ್ತನೆಕಾರರನ್ನು ಪ್ರತಿ ಕ್ಷಣಕ್ಕೂ ಶ್ಲಾಘಿಸುವಂತೆ ಮನ ಹುರಿದುಂಬಿಸುತ್ತವೆ.
ಭವ್ಯ ಪುರಾತನ ಶಿಲ್ಪಕಲೆ ಹೊದ್ದ ಸ್ಪರ್ಷಲಿಂಗ “ಗಳಗನಾಥೇಶ್ವರ” ದೇವಾಲಯದ ಕಣ್ಣಿಗೆಟಕಿಸಿದಷ್ಟೂ ಇಂಚಿಂಚು ಮನದುಂಬಿಕೊಂಡೆ.
ದೇವಾಲಯದ ಒಳ ಗೋಡೆಗಳ ಮೇಲೆ ಹಲವಾರು ಶಿಲ್ಪಕಲೆಗಳನ್ನು ಮನೋಜ್ಞವಾಗಿ ಕೆತ್ತಲಾಗಿದೆ. ಅದರಲ್ಲಿ ಪಂಚತಂತ್ರದ ಕಥೆಗಳನ್ನು ವಿವರಿಸುವ, ಪೌರಾಣಿಕ ಪ್ರಸಂಗಗಳನ್ನು ಅನಾವರಣಗೊಳಿಸುವ ಕೆತ್ತನೆಗಳು ಗಮನಸೆಳೆಯುತ್ತವೆ. ವಿಶೇಷವಾಗಿ ಶಿವ ತಾಂಡವ ಹಾಗೂ ಶಿವನು ಅಂಧಕಾಸುರನನ್ನು ಸಂಹರಿಸುತ್ತಿರುವ ಪ್ರಸಂಗ ವಿವರಿಸುವ ಕೆತ್ತನೆ ಮನದಲ್ಲಿ ಹಾಗೆ ಅಚ್ಚೊತ್ತಿಬಿಡುತ್ತದೆ.
ಗರ್ಭಗೃಹದ ಹಿಂಭಾಗದ ರಚನೆಯೇ ಪಿರಾಮಿಡ್ ಆಕೃತಿ ಹೊಂದಿದ್ದರು, ಅದರ ಮೇಲೆ ಚಿಕ್ಕ ಚಿಕ್ಕ ಮೆಟ್ಟಿಲಾಕಾರದ ಆಕೃತಿಗಳನ್ನು ಕೆತ್ತಲಾಗಿದೆ. ಮುಂಭಾಗ ಸಂಪೂರ್ಣವಾಗಿ ಬೃಹತ್ ನುಣುಪು ಗೋಲಾಕಾರದ ಕೆತ್ತನೆಯ, ಕುಸುರಿ ಕಲೆಯಿಂದ ಅಲಂಕೃತ ಶಿಲಾ ಕಂಬಗಳಿಂದ ಆಸರೆ ಪಡೆದಿದೆ. ಒಳಗಡೆ ಸುತ್ತಲೂ ಕುಳಿತುಕೊಳ್ಳಲು ಕಟ್ಟೆಗಳನ್ನು ನಿರ್ಮಿಸಲಾಗಿದೆ. ದೇವಸ್ಥಾನದ ಒಳಗೆ ಕುಳಿತು ಶಿವಲಿಂಗದ ನೇರ ದರ್ಶನದ ಜೊತೆಗೆ, ಹೊರಗೆ ಅಂಗಳದಲ್ಲಿ “ತುಂಗಭದ್ರಾ” ರಮ್ಯತೆಯಿಂದ ಹರಿಯುವುದನ್ನು ಕಣ್ತುಂಬಿಕೊಳ್ಳಬಹುದು. ಗಾಢ ಶಾಂತತೆ ಮತ್ತು ಉಲ್ಲಾಸಕರ ನಿಸರ್ಗ ಸೌಂದರ್ಯ.
ಗಳಗನಾಥೇಶ್ವರ ದೇವಾಲಯದ ಆರಂಭದಲ್ಲಿ ಭೂಮಟ್ಟದಿಂದ “ಪಿರಾಮಿಡ್” ಆಕೃತಿ ಪಡೆಯಲು ಮುಖ್ಯ ಕಾರಣವೆಂದರೆ, ನದಿ ತುಂಬಿ ನೆರೆ ಹಾವಳಿಯಿಟ್ಟಾಗ ದೇವಸ್ಥಾನಕ್ಕೆ ಜಖಂ ಆಗದೇ ಇರುವಂತೆ ಕಾಪಾಡಲು ನಿರ್ಮಿಸಲಾದ ಆಕೃತಿ ಅಷ್ಟೆ. ಮೇಲಕ್ಕೆ ಹೋಗುತ್ತಿದ್ದಂತೆ ನಿಧಾನವಾಗಿ ಗೋಪುರದ ಆಕೃತಿ ಪಡೆದಿದೆ.
ಗಳಗನಾಥ ಎಂದಾಕ್ಷಣ ನೆನಪಿನಲೆಯಲ್ಲಿ ಸುಳಿಯುವವರು “ಕಾದಂಬರಿ ಪಿತಾಮಹ” ಗಳಗನಾಥ”ರು. ಹ್ಞಾಂ…!!!
“ಗಳಗನಾಥ” ಎಂಬ ಕಾವ್ಯನಾಮದಿಂದಲೆ ಪ್ರಸಿದ್ಧರಾದ ಲೇಖಕ ಕಾದಂಬರಿಕಾರ ಪ್ರಖ್ಯಾತ “ಶ್ರೀ ವೆಂಕಟೇಶ್ವರ ತ್ರಿವಿಕ್ರಮಭಟ್ ಕುಲಕರ್ಣಿ” ಇವರ ಊರು ಇದೇ ಗಳಗನಾಥ. ಇದೇ “ಗಳಗನಾಥೇಶ್ವರ” ದೇವಾಲಯದ ಮಂಟಪದಲ್ಲಿ ಕುಳಿತು, ಈ ವರ್ಣಿಸಲಸದಳ ವಿಹಂಗಮ ನಿಸರ್ಗದ ಮಡಿಲಲ್ಲಿ ಹಲವಾರು ಕಾದಂಬರಿಗಳನ್ನು ಬರೆದು, ಪ್ರಕಟಿಸಿ, ಊರುರು ಸುತ್ತಿ ಹೊತ್ತು ಮಾರಿದವರು.
ತಮ್ಮ ಊರಿನ ಹೆಸರನ್ನೆ ಕಾವ್ಯನಾಮವನ್ನಾಗಿ ಇರಿಸಿಕೊಂಡ ಕನ್ನಡ ನಾಡಿನ ಹೆಮ್ಮೆಯ ಪುತ್ರ.
ಇಂದು ನಾನು ಧನ್ಯ ಎಂದೆಂದಿಗೂ…!
ಸ್ಥಳ: ಗಳಗನಾಥ.
ಜಿಲ್ಲೆ, ತಾಲೂಕು : ಹಾವೇರಿ
ಮಾರ್ಗ: ಹಾವೇರಿಯಿಂದ ಗುತ್ತಲ ಮಾರ್ಗವಾಗಿ ಗಳಗನಾಥ ತಲುಪಬಹುದು. ಹಾವೇರಿ ನಗರ ಕೇಂದ್ರದಿಂದ ಅಂದಾಜು 40 ಕಿ.ಮೀ ಗಳಷ್ಟು ದೂರದಲ್ಲಿದೆ. ಸರ್ಕಾರಿ ಬಸ್ಸುಗಳು, ಖಾಸಗಿ ಆಟೋಗಳು ಲಭ್ಯ.
- ಡಾ. ಪ್ರಕಾಶ ಬಾರ್ಕಿ (ವೈದಕೀಯ ಬರಹಗಾರರು, ಆಯುರ್ವೇದ ವೈದ್ಯರು) , ಕಾಗಿನೆಲೆ