ಪ್ರೀತಿ ಮತ್ತು ಕ್ರಾಂತಿ – ಕೇಶವ ಮಳಗಿಪಾಬ್ಲೋ ನೆರೂಡ ತನ್ನ ಮೊದಲ ಕವನ ಸಂಕಲನ ಪ್ರಕಟಿಸಿದಾಗ ಆತನ ವಯಸ್ಸು ಹತ್ತೊಂಬತ್ತು. ಲೋಕಮಾನ್ಯ ನೊಬೆಲ್‌ ಪುರಸ್ಕಾರ ಪಡೆದಾಗ ವಯಸ್ಸು ಅರವತ್ತೇಳು. ಅವರ ಕುರಿತು ಖ್ಯಾತ ಬರಹಗಾರರು, ಅನುವಾದಕರು ಕೇಶವ ಮಳಗಿ ಅವರು ಬರೆದ ಲೇಖನ ಓದುಗರ ಮುಂದೆ…

ಪಾಬ್ಲೋ ನೆರೂಡ ತನ್ನ ಮೊದಲ ಕವನ ಸಂಕಲನ ಪ್ರಕಟಿಸಿದಾಗ ಆತನ ವಯಸ್ಸು ಹತ್ತೊಂಬತ್ತು. ಲೋಕಮಾನ್ಯ ನೊಬೆಲ್‌ ಪುರಸ್ಕಾರ ಪಡೆದಾಗ ವಯಸ್ಸು ಅರವತ್ತೇಳು. ಬದುಕಿದ್ದಾಗ, ಭೌತಿಕವಾಗಿ ಇಲ್ಲವಾದ ಮೇಲೂ ವಿಶ್ವದ ಮೇರು ಕವಿಯಾಗಿ, ಎಲ್ಲ ಕಾಲಕ್ಕೂ ಸಮಕಾಲೀನ ಕವಿಯಾಗಿ ಉಳಿದು ಬಂದಿರುವುದು ಆತನ ಅಗ್ಗಳಿಕೆ. ಕೃತಕತೆಯೇ ಸೋಕದ ಸಹಜತೆ, ಸರಳತೆ, ಲೋಕದ ಕುರಿತು ಆತನಿಗಿರುವ ಅದಮ್ಯ ಪ್ರೀತಿ, ಎಂದೂ ಬತ್ತದ ಅನುರಾಗ ಮತ್ತು ಕ್ರಾಂತಿಯ ಕುರಿತು ನಂಬಿಕೆಗಳು ಆತನ ಕಾವ್ಯದ ಜೀವಾಳ.

ಕ್ರಾಂತಿಕಾರಿ, ಮುತ್ಸದ್ದಿ, ರಾಜಕೀಯ ಮಹತ್ವಾಕಾಂಕ್ಷಿಯಾಗಿದ್ದ, ಸಾಹಿತ್ಯವನ್ನು ಉಸಿರಾಗಿಸಿಕೊಂಡಿದ್ದ ನೆರೂಡ ಅಂತರ್ಯುದ್ಧದ ಸಮಯದಲ್ಲಿ ಸಾವಿರಾರು ನಿರ್ಗತಿಕರನ್ನು, ದೇಶಭ್ರಷ್ಟರನ್ನು ರಕ್ಷಿಸಿದ ಕವಿ ಮತ್ತು ಕಲಿ. ಸರ್ವಾಧಿಕಾರದ ವಿರುದ್ಧ ಸೆಡ್ಡು ಹೊಡೆದಿದ್ದರಿಂದ ಮೂರು ವರ್ಷ ವನವಾಸವನ್ನೂ ವೃತದಂತೆ ಅನುಭವಿಸಿದವನು.

ನೆರೂಡ ಹುಟ್ಟಿದ್ದು ೧೯೦೪ರ ಜುಲೈ ೧೨ರಂದು ಲ್ಯಾಟಿನ್‌ ಅಮೆರಿಕನ್‌ ರಾಷ್ಟ್ರ ಚಿಲಿಯ ಪುಟ್ಟ ಪಟ್ಟಣ ಪರೆಲ್‌ನಲ್ಲಿ. ನೆರೂಡನ ಅಪ್ಪ ಹೊಸೆ ಸೆರ್ಮನ್‌ ರೇಯಾಸ್‌ಗೆ ಮಗ ಕವಿಯಾಗುವುದು ಇಷ್ಟವಿರಲಿಲ್ಲ. ಹೀಗಾಗಿ, ತನ್ನ ಹದಿನಾರನೆಯ ವಯಸ್ಸಿನಲ್ಲಿಯೇ ಹುಟ್ಟು ಹೆಸರಾದ ರಿಕಾರ್ಡೋ ಎಲೈಸರ್‌ ನೆಫ್ತಾಲಿ ರೇಯಾಸ್‌ ಬಾಸೊಲ್ತೊ ಎಂಬ ಹೆಸರನ್ನು ಮರೆಮಾಚಿ ‘ಪಾಬ್ಲೋ ನೆರೂಡ’ ಎಂಬ ಕಾವ್ಯನಾಮದಲ್ಲಿ ಕವಿತೆಗಳನ್ನು ಬರೆಯಲಾರಂಭಿಸಿದ. ಬದುಕಿನ ಕೊನೆಯುಸಿರು ಇರುವವರೆಗೂ ಅದೇ ಆತನ ನಿಜ ನಾಮಧೇಯವಾಯಿತು. ಆತ ಕೊನೆಯುಸಿರೆಳೆದಿದ್ದು, ಸೆಪ್ಟೆಂಬರ್‌ ೨೩, ೧೯೭೩.

ನೆರೂಡನ ಆತ್ಮೀಯ ಕಿರಿಯ ಗೆಳೆಯನಾಗಿದ್ದ ಗೇಬ್ರಿಯಲ್‌ ಗಾರ್ಸಿಯ ಮಾರ್ಕೇಸ್‌ ನೆರೂಡಗೆ ನೊಬೆಲ್‌ ಪ್ರಶಸ್ತಿ ಘೋಷಣೆಯಾದಾಗ ಪ್ಯಾರಿಸ್‌ನಲ್ಲಿ ಆತನ ಜತೆಗಿದ್ದ. ಆ ಗಳಿಗೆಗಳನ್ನು ಮಾರ್ಕೇಸ್‌ ಹೀಗೆ ಬರೆಯುತ್ತಾನೆ:

ಕವಿ ಗಾರ್ಸಿಯ ಮಾರ್ಕೇಸ್‌ ನೆರೂಡ ಫೋಟೋ ಕೃಪೆ : google

” ನೊಬೆಲ್‌ ಪುರಸ್ಕಾರದ ಊಹಾಪೋಹಗಳ ಕರಾರುವಾಕ್ಕಾದ ಭವಿಷ್ಯವಾಣಿ ನಿಜವಾದುದು ನನಗಂತೂ ನೆನಪಿಲ್ಲ. ಪ್ರಶಸ್ತಿ ಪುರಸ್ಕೃತರು ಸಾಮಾನ್ಯವಾಗಿ ಸಖೇದಾಶ್ಚರ್ಯಕ್ಕೆ ಒಳಗಾಗಿರುತ್ತಾರೆ. ೧೯೬೯ರಲ್ಲಿ ಪ್ರಶಸ್ತಿ ಸುದ್ದಿ ತಿಳಿಸಲು ಐರಿಶ್‌ ನಾಟಕಕಾರ ಸ್ಯಾಮುಯಲ್‌ ಬೆಕೆಟ್‌ರಿಗೆ ಮಾಡಿದ ಕರೆಯನ್ನು ಸ್ವೀಕರಿಸಿದ ಅವರು ದಿಗ್ಭ್ರಾಂತರಾಗಿ: “ಅಯ್ಯೋ! ದೇವರೇ, ಎಂಥಾ ದುರ್ಘಟನೆ!” ಎಂದು ಕೂಗಿ ಕೊಂಡಿದ್ದರಂತೆ. ೧೯೭೧ರಲ್ಲಿ ಅಕಾಡೆಮಿ ಅಧಿಕೃತವಾಗಿ ಬಹುಮಾನ ಘೋಷಿಸುವ ಮೂರು ದಿನಗಳ ಮೊದಲು ಪಾಬ್ಲೋ ನೆರೂಡರಿಗೆ ಗೋಪ್ಯವಾಗಿ ಸುದ್ದಿ ತಿಳಿಸಲಾಗಿತ್ತಂತೆ. ಆ ಸಮಯದಲ್ಲಿ ಪ್ಯಾರಿಸ್‌ನಲ್ಲಿ ಚಿಲಿಯ ರಾಯಭಾರಿಯಾಗಿದ್ದ ನೆರೂಡ ಹಿಂದಿನ ರಾತ್ರಿ ಗೆಳೆಯರ ಗುಂಪನ್ನು ಔತಣಕ್ಕೆ ಕರೆದಿದ್ದರು. ಸತ್ಕಾರಕ್ಕೆ ಹೋಗಿದ್ದ ನಮಗೆ ಸಂಜೆ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗುವವರೆಗೆ ಔತಣಕೂಟ ಯಾವುದಕ್ಕಾಗಿ ಎಂಬ ಸುಳಿವು ಕೂಡ ಇರಲಿಲ್ಲ.

“ನಾನು ಪ್ರಕಟಣೆಯಲ್ಲಿ ನೋಡುವವರೆಗೂ ಯಾವುದನ್ನೂ ನಂಬುವುದಿಲ್ಲ!” ಎಂದು ಆಮೇಲೆ ನೆರೂಡ ತಮ್ಮ ಅಜೇಯ ನಗುವಿನಲ್ಲಿ ಹೇಳಿದ್ದರು.

ಕೆಲವು ದಿನಗಳಾದ ಮೇಲೆ ಅಸರಂತ ಗಿಜಿಗುಡುವ ರೆಸ್ತುರಾದಲ್ಲಿ ನಾವು ಊಟ ಮಾಡುತ್ತಿದ್ದೆವು. ತಾನಿನ್ನೂ ಪುರಸ್ಕಾರ ಸ್ವೀಕಾರದ ಭಾಷಣವನ್ನು ಬರೆದಿಲ್ಲವೆಂದು ನೆರೂಡ ನೆನಪಿಸಿಕೊಂಡರು. ಸ್ಟಾಕ್‌ಹೋಂನಲ್ಲಿ ಸಮಾರಂಭ ಜರುಗಲು ಇನ್ನೂ ನಲ್ವತ್ತೆಂಟು ಗಂಟೆಗಳು ಮಾತ್ರ ಬಾಕಿಯಿದ್ದವು! ತಕ್ಷಣವೇ ತಿನಿಸು ವಿವರಗಳ ಪಟ್ಟಿಯ ಹಾಳೆವೊಂದನ್ನು ತಿರುಗಿಸಿದರು. ಬಳಿಕ ರೆಸ್ತುರಾದಲ್ಲಿ ನೆರೆದಿದ್ದ ಗೌಜುಗದ್ದಲದ ಕುರಿತು ಕೊಂಚವೂ ವಿಚಲಿತರಾಗದೆ ಸಹಜವಾಗಿ ಉಸಿರಾಡುತ್ತ, ದಣಿವರಿಯದೆ ತಮ್ಮ ಕವಿತೆಗಳನ್ನು ಬರೆಯುತ್ತಿದ್ದ ಹಸಿರು ಶಾಯಿಯ ಪೆನ್ನಿನಿಂದ ಕುಳಿತಲ್ಲಿಯೇ ಬೆರಗುಗೊಳಿಸುವ ಸನ್ಮಾನ ಸ್ವೀಕಾರ ಭಾಷಣವನ್ನು ಬರೆದು ಮುಗಿಸಿದರು.”

ಕವಿ  ಪಾಬ್ಲೋ ನೆರೂಡ (ಫೋಟೋ ಕೃಪೆ : google)

ಶೋಕಗೀತೆ

ಸಾವು ಮರುಕಳಿಸಿ ಸ್ಮಶಾನ, ಗೋರಿಗಳಲಿ
ಕುಣಿಯುತಲೇ ಇತ್ತು. ಬಾಕು ಹಿಡಿದ, ಇಲ್ಲವೇ
ಬೈಚಿಟ್ಟುಕೊಂಡ ಮನುಷ್ಯರು
ನಡು ಹಗಲು ಅಥವ ಕಾರಿರುಳು
ಹತ್ಯೆಗೆ ಹೊಂಚಿ, ಹತ್ಯೆ ಮಾಡುತಲೇ ಇದ್ದರು.
ಜೀವಿಗಳ ಸಮಾಧಿ ಸಾಧಿಸುತಲೇ ಇದ್ದರು
ಹೆಣಗಳನು ಬೇಯಿಸುತಲೇ ಇದ್ದರು.

ಜೀವಿಗಳು ವಾಸಿಸುವ ಮನೆಗಳು ಸತ್ತಿವೆ
ಮುರಿದ ಮಾಳಿಗೆ, ಗಸಿಗಷ್ಟು, ಮೂತ್ರ.
ಅಡ್ಡಾದಿಡ್ಡಿ ಓಣಿ, ಮುರಿದ ಜೋಪಡಿ
ಜೀವಿಯ ಕಣ್ಣೀರಲಿ ಕೊಚ್ಚಿಹೋಗುತಲಿಹವು.

“ನೀವು ಬದುಕಬೇಕಿರುವುದು ಹೀಗೇ”, ಎನ್ನುವುದು ಶಾಸನ
“ನಿನ್ನ ಚಿಂದಿಯಲ್ಲಿಯೇ ನೀನು ಕೊಳಿ” ಎನ್ನುವನು ಚೌಕಿದಾರ
“ನೀನೊಬ್ಬ ಕೊಳಕ” ಎನ್ನುವುದು ‘ಮತ’
“ಕೊಚ್ಚೆಯಲ್ಲಿಯೇ ಬದುಕಿ ಸಾಯಿ” ಎನ್ನುವರು ಅವರು.

ಮಾನವಕುಲದ ಹೂವು ತಮಗೆಂದೇ ಕಟ್ಟಿದ
ಗೋಡೆಗೆ ಡಿಕ್ಕಿ ಹೊಡೆಯುತಲಿರುವಾಗ
ಕೆಲವರು ಬೂದಿಯನೇ ಅಸ್ತ್ರವಾಗಿಸಿ
ಅಧಿಕಾರ ನಡೆಸಲು ಹೊಂಚಿದರು.

ಕೊನೆಗೂ ನೀನಿಲ್ಲಿಗೆ ತಲುಪಿದ್ದೀಯ
ಕೊನೆಗೂ ನಮ್ಮನು ಕಹಿ ತುಂಬಿದ ಮನಗಳ
ಗೊಂಡಾರಣ್ಯದಲಿ ಬಿಟ್ಟು ಹೊರಡುತಲಿರುವೆ
ಕೊನೆಗೂ ನೀನು ಒಡೆಯಲಾರದ
ಗೋಡೆಗಳ ನಡುವೆ ನಿಶ್ಚಲನಾಗಿ ಮಲಗಲಿರುವೆ.

ಆಮೇಲೆ, ಪ್ರತಿದಿನವೂ ಹೂವುಗಳು-
ಸುಗಂಧ ಸೂಸುವ ನದಿಯಂತೆ-
ಮೃತ ನದಿಯನ್ನು ಸೇರಲಿಹವು.

ಬದುಕಿನ್ನೂ ಮುಟ್ಟಿರದ ಹೂವುಗಳು
ನೀನು ಬಿಟ್ಟು ಹೋದ ಶೂನ್ಯದ ಮೇಲೆ ಉದುರುವವು.

ಪಾಬ್ಲೋ ನೆರೂಡ


  • ಕನ್ನಡಕ್ಕೆ ಅನುವಾದ : ಕೇಶವ ಮಳಗಿ

 

5 1 vote
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW