ನಾ. ಮೊಗಸಾಲೆಯವರ “ಇದ್ದೂ ಇಲ್ಲದ್ದು” ಪುಸ್ತಕ ಪರಿಚಯ

ಎಪ್ಪತ್ತೊಂಬತ್ತರ ಪ್ರಾಯದ ಡಾ. ನಾ. ಮೊಗಸಾಲೆಯವರ ಹೊಸ ಕಾದಂಬರಿ ‘ಇದ್ದೂ ಇಲ್ಲದ್ದು’ ಇತ್ತೀಚಿನ ಹೊಸ ಸಮಸ್ಯೆಯೊಂದನ್ನು ಕೇಂದ್ರವಾಗಿರಿಸಿಕೊಂಡಿದ್ದು, ಅವರು ಸಾಮಾನ್ಯವಾಗಿ ದೇವರ ಅಸ್ತಿತ್ವವನ್ನು ಒಪ್ಪುವವರನ್ನು ಮೂರು ಬಗೆಯ ವರ್ಗಗಳಲ್ಲಿ ಗುರುತ್ತಿಸಿದ್ದಾರೆ. ಈ ಕಾದಂಬರಿ ಪ್ರಾರಂಭವಾಗುವುದೇ ದೇವರಲ್ಲಿ ನಂಬಿಕೆ ‘ಇರದ’ ಸ್ಥಿತಿಯಿಂದ. ವಿಮರ್ಶಕ ಡಾ.ಎಚ್.ಎಸ್. ಸತ್ಯನಾರಾಯಣ ಅವರ ಲೇಖನಿಯಲ್ಲಿ ‘ಇದ್ದೂ ಇಲ್ಲದ್ದು’ ಪುಸ್ತಕ ಪರಿಚಯ, ತಪ್ಪದೆ ಓದಿ…

ಎಪ್ಪತ್ತೊಂಬತ್ತರ ಪ್ರಾಯದ ಡಾ. ನಾ. ಮೊಗಸಾಲೆಯವರ ಹೊಸ ಕಾದಂಬರಿ ‘ಇದ್ದೂ ಇಲ್ಲದ್ದು’ ಇತ್ತೀಚಿನ ಹೊಸ ಸಮಸ್ಯೆಯೊಂದನ್ನು ಕೇಂದ್ರವಾಗಿರಿಸಿಕೊಂಡಿದೆ. ಮೂಲ ಮನೆಯ ದೇವರುಗಳ ಪೂಜೆಯ ನಿರ್ವಹಣೆ ನಗರ ವಲಸೆಯ ಕಾರಣದಿಂದಲೋ ಮತ್ತಾವುದೋ ಕಾರಣದಿಂದಲೋ ತೊಡಕಾಗುತ್ತಿರುವ, ಅನಾಥ ರಕ್ಷಕನಾದ ದೇವರೇ ಅನಾಥನಾಗುತ್ತಿರುವ ಸಂದರ್ಭವನ್ನು ಚಿತ್ರಿಸುವ ಈ ಕಾದಂಬರಿಯು ದೇವರನ್ನು ಕುರಿತಾದ ನಮ್ಮ ನಿಲುವು ಮತ್ತು ನಂಬಿಕೆಗಳು ಬದಲಾಗುತ್ತಿರುವುದನ್ನು ಚರ್ಚಿಸುತ್ತದೆ. ಹೊಸಕಾಲದ ಮನ್ವಂತರಕ್ಕೆ ಮನೆದೇವರೂ ಒಳಪಡುವ ಪರಿ ಈ ಕಾದಂಬರಿಯ ವಸ್ತು. ಕಾದಂಬರಿಗೆ ಈ ವಸ್ತು ಹೊಸತು ಕೂಡ.

ಹಾಗೆ ನೋಡಿದರೆ ನಮ್ಮ ಶಿವರಾಮಕಾರಂತರು ತಮ್ಮ ಮೂಕಜ್ಜಿಯ ಕನಸುಗಳು, ಬಾಳ್ವೆಯೇ ಬೆಳಕು ಮುಂತಾದ ವಿಚಾರಪೂರ್ಣ ಕೃತಿಗಳಲ್ಲಿ, ಡಿ.ವಿ.ಜಿಯವರು ತಮ್ಮ ದೇವರು ಕೃತಿಯಲ್ಲಿ, ಎ.ಎನ್. ಮೂರ್ತಿರಾಯರು ದೇವರು ಕೃತಿಯಲ್ಲಿ, ವಸುದೇವ ಭೂಪಾಲಂ ತಮ್ಮ ದೇವರು ಸತ್ತ ಎಂಬ ಕೃತಿಯಲ್ಲಿ, ಗೌರೀಶ ಕಾಯ್ಕಿಣಿಯವರ ಅನೇಕ ವೈಚಾರಿಕ ಲೇಖನಗಳಲ್ಲಿ ದೇವರು ಇರುವ ಅಥವಾ ಇಲ್ಲದಿರುವ ಚರ್ಚೆಗಳು, ಈ ವಿಚಾರ ಕುರಿತಾಗಿ ಮನುಷ್ಯ ಜೀವಿಯ ನಂಬಿಕೆಗಳು, ನಡುವಳಿಕೆಗಳ ಕುರಿತಾದ ಚರ್ಚೆಗಳನ್ನು ಈಗಾಗಲೇ ಕನ್ನಡದ ಓದುಗರು ಗಮನಿಸಿದ್ದಾರೆ. ಮೇಲೆ ಉಲ್ಲೇಖಿಸಿದವರ ಆನಂತರದ ತಲೆಮಾರಿನ ಲೇಖಕರ ಚರ್ಚೆಯನ್ನೂ ನೋಡಿಯಾಗಿದೆ. ನಮ್ಮ ಕನ್ನಡ ಸಾಹಿತ್ಯ ಪರಂಪರೆಯೊಳಗೆ ಈ ಚರ್ಚೆಯ ಮೂಲ ಬೇರುಗಳಿವೆ. ಮುಂದಿನ ತಲೆಮಾರಿನವರಲ್ಲಿಯೂ ಈ ಚರ್ಚೆ ಚಾಲ್ತಿಯಲ್ಲಿರಲಿದೆ ಕೂಡ.

ಡಾ. ಎಸ್. ರಾಧಾಕೃಷ್ಣನ್ ಅವರು ಚರ್ಚೆ ಮತ್ತು ತರ್ಕಗಳು ಸರಳ ರೇಖೆಯಿದ್ದಂತೆ, ಅವು ಒಂದನ್ನೊಂದು ಸಂಧಿಸುವುದೇ ಇಲ್ಲ, ಹಾಗಾಗಿ ಕೆಲವೊಂದು ವಿಚಾರದಲ್ಲಿ ತರ್ಕದದ ಉತ್ತರ ಕಂಡುಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. ಬಹುಶಃ ದೇವರ ವಿಚಾರದ ತರ್ಕಕ್ಕೂ ಈ ಮಾತು ಅನ್ವಯಿಸುತ್ತದೆ. ದೇವರಿದ್ದಾನೆಂದು ತರ್ಕಿಸಲು ನೂರು ಕಾರಣಗಳಿರುವಂತೆ, ಅವನಿಲ್ಲವೆಂದು ತರ್ಕಿಸಲೂ ಸಾವಿರ ಕಾರಣಗಳಿರಬಹುದು. ದೇವರ ವಿಚಾರದಲ್ಲಿ ಬಹುಶಃ ಮೊಗಸಾಲೆಯವರು ಅನಾಸ್ತಿಕರು. ‘ಅನಾಸ್ತಿಕ’ ಎಂಬ ಪದವನ್ನು ಮೊದಲು ಬಳಸಿದವರು ಶಿವರಾಮ ಕಾರಂತರೇ. ಮೊಗಸಾಲೆಯವರಲ್ಲಿ ಈ ಕುರಿತಾಗಿ ಒಂದು ಸ್ಪಷ್ಟ ನಿಲುವಿದೆ. ಆದರೆ ಅದನ್ನವರು ಓದುಗರ ಮೇಲೆ ಹೇರುವುದಿಲ್ಲವೆಂಬುದು ಸಮಾಧಾನದ ಸಂಗತಿ. ಲೇಖಕರ ಮಾತುಗಳಲ್ಲಿ ಮೊಗಸಾಲೆಯವರು ಹೇಳಿರುವುದನ್ನು ಗಮನಿಸಿ ಮುಂದುವರಿಯಬಹುದು:

೧. ದೇವರು ಎನ್ನುವುದು ಒಂದು ಕಲ್ಪನೆ ಇಲ್ಲವೇ ಭಾವ ಅಥವಾ ಇವೆರಡನ್ನೂ ಮೀರಿದ, ಇಲ್ಲವೆ ವಿವರಿಸಲಾಗದ ‘ಇನ್ನೇನೋ’ ಎನ್ನುವವರು ನಮ್ಮಲ್ಲಿ ಅನೇಕರಿದ್ದಾರೆ. ಅಂಥವರಿಗೆ ದೇವರು ಒಂದು ಅನುಭವವಲ್ಲ, ಆದರೆ ಅನುಭಾವ. ನನ್ನ ಎಪ್ಪತ್ತಾರು ವರುಷಗಳಲ್ಲಿ ನಾನು ಮೇಲೆ ಹೇಳಿದ ರೀತಿಯಲ್ಲಿ ದೇವರನ್ನು ಕಂಡುಕೊಳ್ಳಲಾಗಲಿಲ್ಲ. ‘ಇದೆ’ ಎಂದಾಗ ‘ಇಲ್ಲ’ ಎನ್ನುವಂತಾಗುವ, ‘ಇಲ್ಲ’ ಎಂದಾಗ ‘ಇರಬಹುದು’ ಎಂದು ಕಾಡುವ ದೇವರನ್ನು ಕಾಣುವುದು ಕಷ್ಟ. ಇದರಿಂದಾಗಿ ನನಗೆ ದೇವರ ಬಗ್ಗೆ ಎಲ್ಲಿಲ್ಲದ ಕುತೂಹಲ. ಪ್ರಾಯಃ ಙನ್ನ ಬದುಕಿನಲ್ಲಿ ದೇವರಷ್ಟು ಕಾಡಿದ್ದು ಯಾವುದೂ ಇಲ್ಲ.

೨. ಬಹುತೇಕ ಎಲ್ಕ ಧರ್ಮ ಅಥವಾ ಮತಗಳಲ್ಲಿ ದೇವರ ಅಸ್ತಿತ್ವವಿದೆ. ಅವನನ್ನು ‘ಕಾಣುವ’ ವಿಧಾನಗಳೂ ಆಯಾ ಮತಗಳಿಗೆ ಅನುಸಾರವಾಗಿ ಇವೆ. ಹೀಗಾಗಿ ದೇವರು ಬಹುತ್ವದಲ್ಲೂ ಇರುತ್ತಾನೆ, ಏಕತ್ವವನ್ನೂ ಒಪ್ಪಿಕೊಳ್ಳುತ್ತಾನೆ.

ಮೊಗಸಾಲೆಯವರು ಗುರುತಿಸುವಂತೆ ಸಾಮಾನ್ಯವಾಗಿ ದೇವರ ಅಸ್ತಿತ್ವವನ್ನು ಒಪ್ಪುವವರನ್ನು ಮೂರು ಬಗೆಯ ವರ್ಗಗಳಲ್ಲಿ ಗುರುತಿಸಬಹುದು. ಮೊದಲನೆಯವರು ದೇವರನ್ನು ಶ್ರದ್ಧೆ ಅದರ ಭಯದಿಂದ ನಂಬಿ, ತಮ್ಮ ಬದುಕು-ಬವಣೆಗಳೆಲ್ಲವೂ ತಮ್ಮ ಪೂರ್ವಜನ್ಮದ ಪಾಪ-ಪುಣ್ಯಗಳಿಂದ ನಿರ್ಧರಿತವಾದವು. ದೇವರನ್ನು ಆರಾಧಿಸುವುದರಿಂದ ಇವುಗಳಲ್ಲಿ ಒಂದು ಮಿತಿಯಲ್ಲಿ ನಿವಾರಣೆಯಾಗಿ ತಮ್ಮ ಬಯಕೆಗಳು ಈಡೇರಬಹುದು ಎಂದುಕೊಳ್ಳುವವರು. ಎರಡನೆಯ ವರ್ಗದವರಿಗೆ ಪೂರ್ವಜನ್ಮದ ವಾಸನೆಯಲ್ಲಿ ವಿಶ್ವಾಸವಿಲ್ಲ. ಅವರಿಗೆ ಬಹುತ್ವದ ದೇವರು ಬೇಡ. ಆತ್ಮಸಮ್ಮಾನತೆಯನ್ನು ಗೌರವಿಸಲೆಂದು ಏಕದೇವೋಪಾಸನೆ ಬೇಕು. ಮೂರನೆಯ ವರ್ಗದವರು ‘ನಾ ದೇವನಲ್ಲದೆ ನೀ ದೇವನೆ?’ ಎಂಬ ಅಲ್ಲಮನಂಥ ಅನುಭಾವಿಯ ತರ್ಕದಿಂದ ದೇವರಿಗೆ ಸವಾಲನೆಸೆದು, ದೇವರೆನ್ನುವುದು ನಮ್ಮ ನಡೆನುಡಿ ಅಥವಾ ಕಾಯಕವಲ್ಲದೆ ಬೇರೆಯಲ್ಲ ಎಂದು ಬಲವಾಗಿ ನಂಬಿದವರು. ಈ ಮೂರು ನೆಲೆಯಲ್ಲಿ ಚಿಂತಿಸುವ ಪಾತ್ರಗಳ ಹರಳುಗೊಂಡ ಚಿಂತನೆಯ ಫಲವೆಂಬಂತೆ ನಾ. ಮೊಗಸಾಲೆಯವರು ‘ಇದ್ದೂ ಇಲ್ಲದ್ದು’ ಕಾದಂಬರಿ ಇದೆ.

ಈ ಕಾದಂಬರಿ ಪ್ರಾರಂಭವಾಗುವುದೇ ದೇವರಲ್ಲಿ ನಂಬಿಕೆ ‘ಇರದ’ ಸ್ಥಿತಿಯಿಂದ. ರಮಾನಂದನ ಮನೆಯಲ್ಲಿ ಪೂಜೆ ಮಾಡಿಕೊಂಡಿದ್ದ ಕುಪ್ಪಣಾಚಾರ್ಯರು ಮಗನ ಆತ್ಮಹತ್ಯೆಯಿಂದ ಆವರಿಸಿದ ದುಗುಡದಿಂದ ‘ದೇವರಪೂಜೆ’ಯನ್ನು ನಿರಾಕರಿಸುವ ನಿರ್ಧಾರಕ್ಕೆ ಬರುವುದರಿಂದಾಗಿ ಇಪ್ಪತ್ತು ವರ್ಷಗಳ ಹಿಂದೆ ದೇವರಮನೆಯೆಂಬ ತವರೂರನ್ನು ತೊರೆದುಹೋದ ರಮಾನಂದನನ್ನು ಅತ್ತೆಯ ಮಗ ಗೋವಿಂದಾಚಾರ್ಯರು ಊರಿಗೆ ಆಹ್ವಾನಿಸುವುದರಿಂದ. ಕುಲದೇವರೇ ತನ್ನ ತಲೆಗೆ ನೀರು ಹಾಕಬೇಕಾಗಿರುವ ರಮಾನಂದನನ್ನು ಊರಿಗೆ ಕರೆಸಿಕೊಳ್ಳುತ್ತದೆ.

ರಮಾನಂದ ತನ್ನ ಔದ್ಯೋಗಿಕ ವಲಯದಲ್ಲಿ ‘ರಮಾನಂದ ದೇವರಮನೆ’ ಎಂಬ ಹೆಸರಿನಿಂದಲೇ ಖ್ಯಾತನಾದವನು. ದೇವರ ಅಸ್ತಿತ್ವವನ್ನು ನಿರಾಕರಿಸುವ ರಮಾನಂದ ತನ್ನ ಹೆಸರಿನೊಂದಿಗೆ ಊರ ಹೆಸರನ್ನು ಸೇರಿಸಿಕೊಳ್ಳುವ ಅಸ್ಮಿತೆಯ ನೆಪದಲ್ಲಿ ‘ದೇವರಮನೆ’ ಎಂಬ ಹೆಸರನ್ನು ತಳುಕುಹಾಕಿಕೊಂಡಿರುವುದೇ ಒಂದು ಐರನಿ! ಮೂರು ಹೆಣ್ಣುಮಕ್ಕಳಾದ ಬಳಿಕ ಮನೆದೇವರ ತಲೆಗೆ ನೀರುಹಾಕಲೆಂದೇ ಹುಟ್ಟಿದವನು. ಅಗ್ರಿಕಲ್ಚರ್ ಎಂಎಸ್ಸಿ ಮುಗಿದ ಬಳಿಕ ವಿದೇಶಿ ಕಂಪೆನಿಯೊಂದರಲ್ಲಿ ಉನ್ನತ ಹುದ್ದೆಯನ್ನಲಂಕರಿಸಿದವನು. ಕುಪ್ಪಣಾಚಾರ್ಯರು ಪೂಜೆ ಮುಂದುವರೆಸುವುದಿಲ್ಲವೆಂದು ಹಠಹಿಡಿದು ಕುಳಿತಿರುವ ಕಾರಣಕ್ಕೆ ಊರಿಗೆ ಬಂದಿದ್ದಾನೆ. ಊರು, ಮನೆದೇವರುಗಳ ಸಹವಾಸ ಬೇಡವೆಂದು, ಮನೆಯವರ ವಿರೋಧವನ್ನು ಧಿಕ್ಕರಿಸಿ ಕ್ರೈಸ್ತಮತದ ಹುಡುಗಿಯನ್ನು ಪ್ರೇಮಿಸಿ ನಗರದಲ್ಲಿ ಬದುಕನ್ನು ಕಟ್ಟಿಕೊಂಡು ಬದುಕುತ್ತಿರುವ ರಮಾನಂದ ಮತ್ತು ಶ್ರದ್ಧೆಯಿಂದ ದೇವರನ್ನು ಪೂಜಿಸುತ್ತಿದ್ದು ಮಗನ ದುರ್ಮರಣದ ಕಾರಣಕ್ಕೆ ಪೂಜೆಯ ವಿಚಾರದಲ್ಲಿ ಜುಗುಪ್ಸೆ ತಳೆದಿರುವ ಕುಪ್ಪಣಾಚಾರ್ಯರು ದಂಪತಿ- ಈ ಎರಡು ವಿರುದ್ಧ ಧ್ರುವಗಳ ನಡುವೆ ಸಿಲುಕಿರುವ ಮನೆದೇವರು ಈ ಪ್ರಕ್ರಿಯೆಯಲ್ಲಿ ಕಾದಂಬರಿಯ ಹರಹು ಬಿಚ್ಚಿಕೊಳ್ಳುತ್ತದೆ.

(‘ಇದ್ದೂ ಇಲ್ಲದ್ದು’ ಕೃತಿಯ ಲೇಖಕರು ಡಾ. ನಾ. ಮೊಗಸಾಲೆ)

ತನ್ನ ಬಾಲ್ಯದ ಸಹಪಾಠಿಯಾದ ಮೇರಿಯಲ್ಲಿ ಅನುರಕ್ತನಾಗುವ ರಮಾನಂದ ಎಲ್ಲ ಕಟ್ಟುಪಾಡುಗಳ ತಡೆಗೋಡೆಗಳನ್ನು ದಾಟಿ ಆಕೆಯನ್ನು ಮದುವೆಯಾಗುತ್ತಾನೆ. ನೈಷ್ಠಿಕ ಬ್ರಾಹ್ಮಣ್ಯದ ಪರಿಸರದಲ್ಲಿ ಹುಟ್ಟಿ ಬೆಳೆದ ರಮಾನಂದನ ಈ ಕ್ರಾಂತಿಕಾರಕ ನಿಲುವುಗೆ ಶಿಕ್ಷಣದ ಮೂಲಕ ಪಡೆದ ಪ್ರಗತಿಪರ ಧೋರಣೆಯ ಬಲವಿದೆ. ಭಾರತಿಯಾಗಿ ಪರಿವರ್ತನೆಗೊಂಡಿರುವ ಮೇರಿಯಲ್ಲೂ ಸಹಜವಾಗಿಯೇ ರಮಾನಂದನ ಸಾಂಗತ್ಯದ ಕಾರಣಕ್ಕೆ ವೈಚಾರಿಕತೆಯ ನೆರಳಿದೆ. ಪೂರ್ವಾಶ್ರಮದ ಯಾವುದೇ ಗೋಜಲು-ಹಪಹಪಿಕೆಗಳಿಲ್ಲದ ಸರಳ ಸುಂದರ ಬದುಕಿನ ಮೇರಿ-ರಮಾನಂದರ ಬದುಕು ಸುಖವಾಗಿಯೇ ಸಾಗಿದೆ. ದೇವರಮನೆ ರಮಾನಂದನ ತವರೂರು, ಮೇರಿಯೂ ಅದರ ಆಸುಪಾಸಿನವಳೆ. ಎರಡು ದಶಕಗಳ ಕಾಲ ಇವರಿಬ್ಬರ ಪಾಲಿಗೆ ಮೂಲನೆಲೆಯ ಬದುಕಿನ ವಿವರಗಳು ರಮಾನಂದ ಗೋವಿಂದಾಚಾರ್ಯರ ಆಹ್ವಾನದ ಮೇರೆಗೆ ಊರಿಗೆ ಬರುವುದರೊಂದಿಗೆ ಆರಂಭವಾಗುತ್ತದೆ. ಆಧುನಿಕತೆ ಮತ್ತು ಪುರಾತನ ಮೌಲ್ಯಗಳ ಅಥವಾ ಮತ್ತೊಂದು ರೀತಿಯಲ್ಲಿ ಗ್ರಹಿಸುವುದಾದರೆ ನಗರ ಜೀವನ ಮತ್ತು ಗ್ರಾಮ್ಯ ಬದುಕಿನ ಮುಖಾಮುಖಿ ಇಲ್ಲಿಂದ ಮೊದಲ್ಗೊಳ್ಳುತ್ತದೆ. ಮುನ್ನುಡಿಯಲ್ಲಿ ಶ್ರೀ ರಮೇಶ್ ಭಟ್ ಬೆಳಗೋಡು ಅವರು ಸಮರ್ಪಕವಾಗಿ ಗುರುತಿಸಿರುವಂತೆ “ಅಲ್ಲಿಯತನಕ ರಮಾನಂದನ ಪಾಲಿಗೆ ಬಹುತೇಕ ನಿಶ್ಚಲವೇ ಆಗಿದ್ದ ಸೀತಾಪುರದ ಬದುಕು, ಅವನಿಗೆ ಗೊತ್ತಿರುವ ಮತ್ತು ಗೊತ್ತಿಲ್ಲದ ದಿಕ್ಕುಗಳಲ್ಲಿ ಚಲಿಸುತ್ತಲೇ ಇದ್ದದ್ದು ಅರಿವಾಗುತ್ತದೆ. ‘ಅಲ್ಲಿಯತನಕ’ ರಮಾನಂದನಿಗೂ ತನ್ನ ಭೂತಕಾಲದ ಬಗ್ಗೆ ಅವ್ಯಕ್ತ ಸಂಕೋಚವಿದ್ದರೂ ಅನಪೇಕ್ಷಿತವಾಗಿ ಅವನ ಮೂಲಕವೇ ಉಳಿದವರ ನಂಬಿಕೆಗಳು ಶೋಧಕ್ಕೆ ಒಳಗಾಗುವ ಚೋದ್ಯಗಳು ಈಗ ಸಂಭವಿಸತೊಡಗುತ್ತವೆ.”

ತಂದೆ-ತಾಯಿಯಿಂದ ತಿರಸ್ಕೃತನಾಗಿದ್ದ ರಮಾನಂದ ತಂದೆ ಬರೆದಿಟ್ಟ ದಿನಚರಿಯನ್ನಾಧರಿಸಿ ಬರೆಯುವ ಮೂರು ತಲೆಮಾರಿನ ಕಥನ ಕಾದಂಬರಿಯ ನವೀನ ತಂತ್ರಗಾರಿಕೆಯನ್ನು ಓದುಗರಿಗೆ ಪರಿಚಯಿಸುತ್ತದೆಂಬುದು ಗಮನಾರ್ಹ. ರಮಾನಂದನ ತಂದೆ ದಾಸಭಟ್ಟರು, ಅವರಪ್ಪ ಅಂದರೆ ರಮಾನಂದನ ಅಜ್ಜನ ಹೆಸರೂ ರಮಾನಂದ ಭಟ್ಟ. ಓದಿನ ಅನುಕೂಲಕ್ಕೆ ಬೇಕಾದರೆ ದೊಡ್ಡ ರಮಾನಂದ ಎಂದು ಗುರುತಿಸಿಕೊಳ್ಳಬಹುದು. ಕೈಹಿಡಿದ ಧರ್ಮಪತ್ನಿಯೊಂದಿಗೆ ಸಂಸಾರ ಮಾಡುತ್ತಲೇ ಮನೆಗೆಲಸದಾಕೆ ‘ಸುಂದರಿ’ಯೊಡನೆ ಸಂಬಂಧ ಬೆಳೆಸುವ ಚಪಲದ ದೊಡ್ಡ ರಮಾನಂದರದು. ಮನೆ, ದೇವರು, ಕೃಷಿ, ಕಾಮ, ಭೂಮಿಯ ವಿಚಾರಗಳಲ್ಲಿ ದೊಡ್ಡ ರಮಾನಂದರದು ಹರಿಚಿತ್ತ ಸತ್ಯ! ಅವರ ಮಗ ದಾಸಭಟ್ಟರು ಅಪ್ಪನಂತಲ್ಲ. ಅಪ್ಪನಿಗಿಂತ ನಿಷ್ಠೆಯಲ್ಲಿ, ಸಂಪ್ರದಾಯ ಶ್ರದ್ಧೆಯಲ್ಲಿ ಒಂದು ಕೈ ಮೇಲು. ಕಾಲದ ವಿಘಟನೆಗಳು ದಾಸಭಟ್ಟರ ಕಾಲದಲ್ಲಿ ಹೆಚ್ಚು ಪ್ರವರ್ಧಮಾನಕ್ಕೆ ಬರುತ್ತವೆ. ನಿಷ್ಠೂರ ವ್ಯಕ್ತಿತ್ವದ, ಆದರ್ಶ ಮೇಷ್ಟ್ರಾದ ದಾಸಭಟ್ಟರು ಮನೆಯ ಸಮರ್ಥ ಜವಾಬ್ದಾರಿಯ ಜೊತೆಜೊತೆಯಲ್ಲೇ ಯುವಕ ಮಂಡಳವನ್ನು ಕಟ್ಟಿ ಅವರಲ್ಲಿ ಸಾಮಾಜಿಕ ಹೊಣೆಗಾರಿಕೆಯನ್ನು ತುಂಬುವ ಬಗೆ, ಭೂಮಸೂದೆಯ ವಿಚಾರದಲ್ಲಿ ಉಳುವವರ ಸಂಘಟನೆಯಂತಹ ಮುಖ್ಯ ಸಂಗತಿಗಳು ಈ ಕಾದಂಬರಿ ಕಾಣಿಸುವ ಆ ಕಾಲದ ಮನ್ವಂತರದ ಚಿತ್ರಣಗಳು.

ದೊಡ್ಡ ರಮಾನಂದರ ಅಕ್ಕ ರಾಧಕ್ಕ ಈ ಕಾದಂಬರಿಯ ಗಟ್ಟಿ ಪಾತ್ರಗಳಲ್ಲೊಂದು. ವಿಧವೆ ರಾಧಕ್ಕ ತಾಯಿ ಕಾರುಣ್ಯದ ಜೀವ. ಸದಾ ತವೆಇನ ಹಿತದ ಚಿಂತೆಯಲ್ಲಿ ತಾನು ಕೂಡಿಟ್ಟ ಮತ್ತು ಮಠದ ಪರಿಚಾರಿಕೆಯಿಂದ ಒಟ್ಟುಮಾಡಿಟ್ಟ ಸಾವಿರ ರೂಪಾಯಿಗಳನ್ನು ತಮ್ಮನ ಸಂಕಷ್ಟಕ್ಕೆ ಕೊಟ್ಟುಬಿಡುವುದಲ್ಲದೆ, ಮಠದಿಂದ ಜಮೀನನನ್ನು ಖರೀದಿಸಿ ಕೊಡುತ್ತಾಳೆ. ಸುಂದರಿಯ ತೋಳ್ತೆಕ್ಕೆಯಿಂದ ತಮ್ಮನನ್ನು ಬಿಡಿಸಿ, ನಾದಿನಿಗೆ ಕುವಿಮಾತು ಹೇಳಿ ಅವರ ಸಂಸಾರವನ್ನು ನೇರ್ಪಡಿಸಲು ಹೆಣಗುವ ಅಂತಃಕರಣಿ.

ಮೇರಿ-ರಮಾನಂದ ದೇವರಮನೆಯವರುಗಳ ಬಾಲ್ಯ ಮತ್ತು ಪ್ರೌಢಾವಸ್ಥೆಯ ತವಕ ತಲ್ಲಣಗಳನ್ನು ಈ ಕಾದಂಬರಿ ಸೊಗಸಾಗಿ ಚಿತ್ರಿಸುತ್ತದೆ. ಯೌವನಾವಸ್ಥೆಯಲ್ಲಿ ಅಂಕುರಗೊಂಡ ಇವರ ಪ್ರೇಮನಿಷ್ಠೆ ಕೊನೆಯವರೆಗೂ ತನ್ನ ತೀವ್ರತೆಯನ್ನು ಬಿಟ್ಟುಕೊಡುವುದಿಲ್ಲವೆಂಬುದು ಮಹತ್ತ್ವದ್ದು. ಯಾವುದೇ ಪೂರ್ವಾಗ್ರಹಕ್ಕೆ ಆಸ್ಪದವೀಯದೆ ಕಾದಂಬರಿಕಾರರು ಮೇರಿ ಮತ್ತವಳ ಪೋಷಕರ ಘನತೆಗೆ ಕುಂದುಬಾರದಂತೆ ಅವರ ವಿವರಗಳನ್ನು ತರುವಲ್ಲಿ ಮೆರೆಯುವ ಜಾಣ್ಮೆ ಮೆಚ್ಚತಕ್ಕದ್ದು. ಕ್ರಿಶ್ಚಿಯನ್ ಹುಡುಗಿಯನ್ನು ಮಾಧ್ವ ಬ್ರಾಹ್ಮಣರ ಹುಡುಗ ಮದುವೆಯಾಗುವುದು ಮಾಧ್ವ ಬ್ರಾಹ್ಮಣ ಪರಂಪರೆಯ ವಿಘಟನೆಯ ಕುರುಹಾಗಿ ಲೇಖಕರು ಭಾವಿಸಿದಂತಿದೆ.

ಹಾಗೆ ನೋಡಿದರೆ, ಇಂಥ ಅನೇಕ ವಿಘಟನೆಗಳ ವರ್ತುಲವೇ ಕಾದಂಬರಿಯ ಕೇಂದ್ರವಾಗಿರುವಂತಿದೆ. ನಾನಾ ಕಾರಣಕ್ಕೆ ಮೂಲ ಮನೆಗಳಿಂದ ದೂರಾಗಿ ಬದುಕನ್ನಯ ಕಟ್ಟಿಕೊಂಡವರ ‘ಮನೆ ದೇವರು’ ಮತ್ತು ಈ ಬಗೆಯ ನಂಬಿಕೆ-ಆಚರಣೆಗಳಲ್ಲಾಗುತ್ತಿರುವ ಪಲ್ಲಟಗಳನ್ನು ಹಿಡಿದಿಡುವ ಮೂಲಕ ಈ ಕೃತಿಯು ಸಮಾಜಶಾಸ್ತ್ರೀಯವಾದ ಸಮಕಾಲೀನ ಚರಿತ್ರೆಯನ್ನು ಒಳಗೊಳ್ಳಲು ತವಕಿಸುತ್ತದೆ. ಹಾಗೆಯೇ ನಗರಕ್ಕೆ ವಲಸೆ ಬಂದವರಲ್ಲಿ ಮನೆದೇವರ ಪೂಜೆಯಂತಹ ಸಾಂಪ್ರದಾಯಿಕ ಆಚರಣೆಗಳು ಸವಾಲಿನ ಸಂಕೇತದ ರೂಪದಲ್ಲಿ ವ್ಯಕ್ತವಾಗುವುದು ಮತ್ತು ರಮಾನಂದನಂತವರು ಜಾಣ್ಮೆಯಿಂದ ಅದನ್ನು ಪರಿಹರಿಸಿಕೊಳ್ಳುವುದು.

ಸಂತಾನಹರಣ ಶಸ್ತ್ರಚಿಕಿತ್ಸೆಯಲ್ಲಿ ಪುರುಷರೂ ಪಾಲುದಾರರಾಗುವಂತೆ ಪ್ರೇರೇಪಿಸುವ ವಿಚಾರ ಮತ್ತು ಬದಲಾದ ಕಾಲಮಾನದಲ್ಲಿ ಕೃಷಿಪದ್ಧತಿ ಕುರಿತಾಗಿ ರೈತರ ಧೋರಣೆಗಳನ್ನು ಸೂಚ್ಯವಾಗಿ ಕಾಣಿಸುವುದು. ಕಾರಂತರ ‘ಚಿಗುರಿದ ಕನಸು’ ಕಾಂದಬರಿಯ ಎಳೆಯನ್ನು ತಮ್ಮ ಕಾದಂಬರಿಯ ಹತಾರವಾಗಿಸಿಕೊಳ್ಳುವ ಲೇಖಕರ ಜಾಣತನ ಕೂಡ ಹಿರಿಯರಿಗೆ ನಂತರದ ತಲೆಮಾರಿನ ಲೇಖಕರು ತೋರುವ ಗೌರವದಂತೆ ಕಾಣುತ್ತದೆ. ಇದು ಲೇಖಕರ ಸೌಜನ್ಯವನ್ನೂ ಪರಂಪರೆಯನ್ನು ಧನಾತ್ಮಕವಾಗಿ ದುಡಿಸಿಕೊಳ್ಳುವ ಮೇಲ್ಪಂಕ್ತಿಯನ್ನೂ ಒಟ್ಟಾಗಿ ಮೂಡಿಸಿರುವುದು ವಿಶೇಷ. ಕಾದಂಬರಿಯ ವಸ್ತು, ನಿರೂಪಣೆ, ಸಂವಿಧಾನ ಮತ್ತು ತಂತ್ರಗಾರಿಕೆ ಮುಂತಾದವುಗಳಲ್ಲಿ ಲೇಖಕರು ಮಾಡಿರುವ ಪ್ರಯೋಗಶೀಲತೆಯನ್ನೂ ನಾವು ಚರ್ಚಿಸಲು ಈ ಕಾದಂಬರಿ ವಿಫುಲವಾದ ಅವಕಾಶಗಳನ್ನು ತೆರೆದಿಟ್ಟಿದೆ.


  • ಡಾ.ಎಚ್.ಎಸ್. ಸತ್ಯನಾರಾಯಣ (ಉಪನ್ಯಾಸಕರು, ಲೇಖಕರು, ಕತೆಗಾರರು) ಚಿಕ್ಕಮಂಗಳೂರು 

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW