ಈ ಹಣ್ಣು ತಿಂದರೆ ನಾಲಗೆ ನೀಲಿ!
ಖ್ಯಾತ ಲೇಖಕರಾದ ಶಶಿಧರ ಹಾಲಾಡಿ ಅವರು ನೇರಳೆ ಹಣ್ಣಿನ ವಿಶೇಷತೆ, ಅದರ ಔಷಧಿ ಗುಣಗಳು, ಅದರ ಪ್ರಭೇದದ ಬಗ್ಗೆ ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ಓದಿ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ .

ಮಳೆಗಾಲ ಆರಂಭವಾಗಿ ನಾಲ್ಕಾರು ವಾರಗಳ ಕಾಲ ಎಲ್ಲೆಲ್ಲೂ ನೇರಳೆ ಮರಗಳಲ್ಲಿ ಹಣ್ಣು ಬಿಡತೊಡಗುತ್ತದೆ! ನಮ್ಮೂರಿನಲ್ಲ ಕಾಡು, ಗುಡ್ಡ, ಹಾಡಿ, ಹಕ್ಕಲುಗಳಲ್ಲಿ ಬೆಳೆದಿದ್ದ ನಾನಾ ಪ್ರಭೇದದ ಮರಗಿಡಗಳಲ್ಲಿ, ನೇರಳೆ ಮತ್ತು ಸಳ್ಳೆ ಹಣ್ಣುಗಳು ಹಣ್ಣು ಬಿಡುವುದೇ ಮಳೆಗಾಲದಲ್ಲಿ. ಮೇ ಕೊನೆಯ ವಾರದಿಂದ ಜುಲೈ ತನಕವೂ ನೇರಳೆ ಮತು ಸಳ್ಳೆ ಹಣ್ಣುಗಳನ್ನು ಗುಡ್ಡೆಯಲ್ಲಿ, ಹಾಡಿಯಲ್ಲಿ ಆರಿಸಿ ತಿನ್ನುವುದು ಮಕ್ಕಳ ಕೆಲಸ. ಶಾಲೆಗೆ ಹೋಗುವ ದಾರಿಯುದ್ದಕ್ಕೂ ಅಲ್ಲಲ್ಲಿ ನೇರಳೆ ಹಣ್ಣುಗಳಾಗಿರುತ್ತಿದ್ದವು. ಯಾರು ಹೆಚ್ಚು ಹಣ್ಣು ತಿನ್ನುತ್ತಾರೆ, ಯಾರ ನಾಲಗೆ ಹೆಚ್ಚು ನೀಲಿ ಆಗುತ್ತೆ ಎಂಬುದಕ್ಕೆ ನಮ್ಮ ನಮ್ಮಲ್ಲೇ ಸ್ಪರ್ಧೆ!

ನೇರಳೆ ಹಣ್ಣುಗಳನ್ನು ಜೇಬಿನಲ್ಲೋ, ಶಾಲೆಯ ಪಾಟಿ ಚೀಲದಲ್ಲೋ ಹಾಕಿಕೊಳ್ಳುವಂತಿಲ್ಲ. ಏಕೆಂದರೆ, ಅದರ ರಸ ತಾಗಿದಲ್ಲೆಲ್ಲಾ ನೇರಳೆ ಬಣ್ಣ ಹರಡಿಬಿಡುತ್ತದೆ. ಮಳೆ ಬಂದ ನಂತರ, ನೇರಳೆಯ ರುಚಿ ಹೆಚ್ಚು. ನಮ್ಮ ಮನೆಸುತ್ತಲಿನ ನೇರಳೆಯು ಪುಟಾಣಿ ಹಣ್ಣುಗಳ ಪ್ರಭೇದ. ಅಲ್ಲೇಲ್ಲಾ ಸಿಗುತ್ತಿದ್ದ ಕಿಸ್ಕಾರ, ನೇರಳೆ, ಸೊಳ್ಳೆ, ಬೆಳಮಾರು ಎಲ್ಲವೂ ಒಂದೇ ಗಾತ್ರ. ಕಡಲೆ ಕಾಳಿಗಿಂತ ಸ್ವಲ್ಪ ದೊಡ್ಡ ಗಾತ್ರದ ಆ ನೇರಳೆ ಹಣ್ಣುಗಳು ತುಸು ಸಿಹಿ, ತುಸು ಹುಳಿ, ತುಸು ಒಗರು. ಜಾಸ್ತಿ ತಿಂದರೆ, ನಾಲಗೆ ದಪ್ಪವಾದಂತಹ ಅನುಭವ!

ಫೋಟೋ ಕೃಪೆ : google

ಪುಟಾಣಿ ನೇರಳೆ

ನಮ್ಮೂರ ನೇರಳೆ ಹಣ್ಣುಗಳೂ ಪುಟಾಣಿ, ಅದರ ಮರಗಳೂ ಕಡಿಮೆ ಎತ್ತರ ಗಾತ್ರದವು. ಹತ್ತರಿಂದ ಹದಿನೈದು ಅಡಿ ಎತ್ತರ ಬೆಳೆದರೆ ಹೆಚ್ಚು. ಪೊದೆಯ ರೂಪದಲ್ಲಿದ್ದ ಗಿಡದಲ್ಲೇ ಹಣ್ಣುಗಳು ಸಿಗುವುದುಂಟು. ಒರಟು ಒರಟಾಗಿ ಬೆಳೆಯುವ ನಮ್ಮೂರ ನೇರಳೆ ಮರಗಳ ನಾಟಾ ಅಷ್ಟೊಂದು ಉಪಯೋಗಕ್ಕೆ ಬರುವುದಿಲ್ಲವಾದ್ದರಿಂದ, ಕಾಡುಗಳ್ಳರು ಅವನ್ನು ಕಡಿಯಲಾರರು. ಆದರೇನು ಮಾಡುವುದು, ಈಚಿನ ವರ್ಷಗಳಲ್ಲಿ ಬುಲ್ ಡೋಜರ್‌ನಂತರ ಭಾರೀ ಗಾತ್ರದ ಯಂತ್ರಗಳಿಂದ ನೆಲ ಚೊಕ್ಕಟ ಮಾಡುವ ಗೀಳು ರೈತರಿಗೆ ಅಂಟಿರುವುದರಿಂದಾಗಿ, ನೇರಳೆ, ಸಳ್ಳೆ, ಬೆಳಮಾರು, ಬುಕ್ಕಿ, ಕಿಸ್ಕಾರ ಮೊದಲಾದ ಎಲ್ಲಾ ಗಿಡಮರಗಳನ್ನು, ಬಳ್ಳಿಗಳನ್ನು ಕತ್ತರಿಸಿ, ಬೇರು ಸಮೇತ ಕಿತ್ತು, ನೆಲ ಸಪಾಟು ಮಾಡಿ, ವಾಣಿಜ್ಯಕ ಮರಗಿಡಗಳನ್ನು ಬೆಳೆಯುತ್ತಿದ್ದಾರೆ.

ಫೋಟೋ ಕೃಪೆ : google

ನೇರಳೆ ಕುಡಿ ತಂಬುಳಿ

ಮುಷ್ಟಿ ಮುಷ್ಟಿ ನೇರಳೆ ಹಣ್ಣುಗಳನ್ನು ತಿನ್ನುತ್ತಿದ್ದ ನಮಗೆ, ಆಗ ಅದರ ಔಷಧೀಯ ಗುಣ ಗೊತ್ತಿರಲಿಲ್ಲ. ಮನೆಯಲ್ಲಿದ್ದ ದೊಡ್ಡವರು, ಅದೇ ನೇರಳೆ ಗಿಡದ ಕುಡಿ ಎಲೆಗಳಿಂದ ಕಷಾಯ, ತಂಬುಳಿಯನ್ನು ಅಪರೂಪಕ್ಕೆ ಮಾಡುವುದಿತ್ತು, ಆದರೂ, ಇಂತಹz್ದೆÃ ಆರೋಗ್ಯಸಮಸ್ಯೆಗೆ ಅದು ಔಷಧ ಎಂದು ಅವರಿಗೂ ಸ್ಪಷ್ಟವಿರಲಿಲ್ಲ. ನಮ್ಮೂರ ಕಾಡುಗಳಲ್ಲಿ ತುಸು ದೊಡ್ಡ ನೇರಳೆ ಹಣ್ಣು ಬಿಡುವ ಮರಗಳೂ ಇದ್ದವು, ಆದರೆ ತುಸು ಅಪರೂಪ. ಅವು ಎತ್ತರಕ್ಕೆ ಬೆಳೆಯುತ್ತಿದ್ದವಾದ್ದರಿಂದ, ಮಕ್ಕಳ ಕೈಗೆ ಸುಲಭಕ್ಕೆ ಸಿಗವು!

ಓದು ಮುಗಿದು, ವೃತ್ತಿಯನ್ನರಸುತ್ತಾ ಪೇಟೆ ಸೇರಿದ ನಂತರ, ಮಳೆಗಾಲದ ತಿಂಗಳುಗಳಲ್ಲಿ ಗಾಡಿಯಲ್ಲಿ ನೇರಳೆ ಹಣ್ಣುಗಳನ್ನು ಮಾರುವುದನ್ನು ಕಂಡೆ. ಈ ನೇರಳೆ ಹಣ್ಣುಗಳು ದೊಡ್ಡ ಗಾತ್ರದವು. ಜನರು ಮುಗಿಬಿದ್ದು, ದುಬಾರಿ ಬೆಲೆಗೆ ಅದನ್ನು ಖರೀದಿಸಿ, ತಿನ್ನುತ್ತಿದ್ದರು. ಏಕೆ ಎಂದು ಕೇಳಿದರೆ, ಸಕ್ಕರೆ ಕಾಯಿಲೆಗೆ ಇದು ಔಷಧವಂತೆ! ರಾಶಿ ರಾಶಿ ನೇರಳೆ ಹಣ್ಣನ್ನು ತಂದು, ಈ ರೀತಿ ಪೇಟೆಯಲ್ಲಿ ಮಾರಿದರೆ, ಅದರ ದುಬಾರಿ ಬೆಲೆಯ ಆಸೆಗೆ, ಹಣ್ಣು ಸಂಗ್ರಹಿಸುವವರು ಕಾಡಿನಲ್ಲಿದ್ದ ಮರಗಳಿಗೆ ಹಾನಿಯಲ್ಲವೆ ಎಂಬ ಕಾಳಜಿ ನನ್ನದು. ಆದರೆ, ಈಚೆಗೆ ನೇರಳೆ ಮರದ ಕೃಷಿಯೂ ಆರಂಭವಾಗಿದೆ. ಈಗ ಬೆಂಗಳೂರಿನಲ್ಲೂ ನೇರಳೆ ಹಣ್ಣು “ಪ್ರಿಯ”! (costly)

ದೊಡ್ಡ ಗಾತ್ರದ, ರಸಭರಿತ ಈ ನೇರಳೆ ಹಣ್ಣುಗಳಿಗೆ ಪೇಟೆಯಲ್ಲಿ ಕಿಲೋಗೆ ಮುನ್ನೂರು ನಾನ್ನೂರು ರುಪಾಯಿಯ ಬೆಲೆ ಎಂದು ತಿಳಿದು ಅಚ್ಚರಿ ಆಯಿತು. ನಮ್ಮೂರ ಮನೆ ಸುತ್ತಲೂ ಬೆಳೆಯುತ್ತಿದ್ದ ನೇರಳೆಯನ್ನು ನಮಗೆ ಪ್ರಕೃತಿ ಮಾತೆಯು ಉಚಿತವಾಗಿ ಕೊಡುತ್ತಿದ್ದಳು! ದೊಡ್ಡ ಗಾತ್ರದ ನೇರಳೆ ಹಣ್ಣು ರುಚಿಕರ, ಎಲೆಯೂ ಜಾಸ್ತಿ. ಇನ್ನೊಂದು ವಿಚಾರ ಗೊತ್ತಗಾಯಿತು! ನಮ್ಮೂರಲ್ಲಿ ಬೆಳೆಯುವ ಪುಟಾಣಿ ನೇರಳೆ ಹಣ್ಣನ್ನು ನಾವು ನೇರಳೆ ಎಂದು ಕರೆದರೂ, ಪೇಟೆಯ ನೇರಳೆ ಜನಪ್ರಿಯವಾದ ನಂತರ, ನಮ್ಮೂರ ನೇರಳೆಗೆ ಇನ್ನೊಂದೇ ಹೆಸರನ್ನು ಇಟ್ಟಿದ್ದಾರಂತೆ! ಸಣ್ಣ ಹಣ್ಣಿನ ನೇರಳೆಯನ್ನು `ಕುಂಟನೇರಳೆ’ ಎಂದು ಕರೆಯುತ್ತಾರೆ!

ನೇರಳೆಯನ್ನು ಹೋಲುವ ಇತರ ಪ್ರಭೇದದ ಹಣ್ಣುಗಳೂ ನಮ್ಮ ನಾಡಿನಲ್ಲಿವೆ. ಪನ್ನೇರಳೆ, ಬನ್ನೇರಳೆ, ಕುಂಟ ನೇರಳೆ, ಸಿಂಪಿ ನೇರಳೆ, ಗುಡ್ಡೆ ನೇರಳೆ, ನಾಯಿ ನೇರಳೆ ಇನ್ನೂ ಅವೆಷ್ಟೋ! ಮೂಲತಃ ನೇರಳೆ ಕುಟುಂಬದ ಸಸ್ಯಗಳು ಭಾರತ ಮತ್ತು ಸುತ್ತಮುತ್ತಲಿನ ದೇಶದವು. ಇಂದು ವಿಶ್ವದ ಬೇರೆ ಪ್ರದೇಶದಲ್ಲೂ ಇವೆ. ರಸಭರಿತ ವಾಟರ್ ಆ್ಯಪಲ್ ಸಹ ನೇರಳೆ ಕುಟುಂಬದ್ದು. ನಮ್ಮ ಊರಿನ ಸರಹದ್ದಿನ ಕಾಡುಗಳಲ್ಲಿ ಅಪರೂಪಕ್ಕೆ ಇಂತಹ ಹಣ್ಣುಗಳನ್ನು ನೋಡಿದ್ದುಂಟು, ತಿಂದಿದ್ದೂ ಉಂಟು. ಈಗ ಅಂತಹ ಎಲ್ಲಾ ಹಣ್ಣುಗಳನ್ನು ವಾಣಿಜ್ಯಕವಾಗಿ ಬೆಳೆಯುವ ಪದ್ಧತಿ ಆರಂಭವಾಗಿದೆ. ಮೂಲತಃ ಕಾಡಿನಲ್ಲೇ ಬೆಳೆಯುತ್ತಿದ್ದ ನೇರಳೆ ಕುಟುಂಬದ ಹಲವು ಪ್ರಭೇದದ ಮರಗಳು ಇಂದು ವಾಣಿಜ್ಯಕ ಕೃಷಿಗೆ ಸಿಲುಕಿವೆ, ಸಕ್ಕರೆ ಕಾಯಿಲೆಯನ್ನು ವಾಸಿಮಾಡುತ್ತದೆಂಬ ಪ್ರಚಾರದೊಂದಿಗೆ ಮನುಷ್ಯನ ಆಧುನಿಕ ಜೀವನ ಶೈಲಿಯ ಭಾಗವಾಗಲು ಹೊರಟಿವೆ.

ಹಲವು ಪ್ರಭೇದದ ನೇರಳೆಗಳಿದ್ದರೂ, ನಮ್ಮೂರಿನ ಕಾಡುದಾರಿಯಲ್ಲಿ ಸಿಗುತ್ತಿದ್ದ ಪುಟಾಣಿ ನೇರಳೆಯೇ ನನಗೆ ರುಚಿ, ಅದನ್ನು ತಿಂದ ನೆನಪೇ ಮಧುರ!

ಫೋಟೋ ಕೃಪೆ : google

ಔಷಧವಾಗಿ ನೇರಳೆ

ಪೇಟೆ, ನಗರಗಳ ಜನರು ನೇರಳೆ ಹಣ್ಣನ್ನು ದುಬಾರಿ ಬೆಲೆಗೆ ಖರೀದಿಸಿ ತಿನ್ನಲು ಆರಂಭಿಸಿದ್ದು, ಅದರ ಔಷಧೀಯ ಗುಣಗಳಿಗೆ ಪ್ರಚಾರ ದೊರೆತ ನಂತರ. ಮಧುಮೇಹವನ್ನು ನಿಯಂತ್ರಿಸುವ ಅಂಶಗಳು `ಜಾಮೂನ್’ ನೇರಳೆ ಹಣ್ಣಿನಲ್ಲಿವೆ ಎಂಬ ವಿಚಾರ ಮಹತ್ವದ್ದು. ಆದರೆ, ನೇರಳೆ ಒಂದು ಸೀಸನಲ್ ಹಣ್ಣು. ಆದ್ದರಿಂದ, ಅದನ್ನು ಜಾಮ್ ಮಾಡಿ ಸೇವಿಸುವ ಪದ್ಧತಿಯೂ ಆರಂಭವಾಯಿತು. ಅದರ ಬೇರು, ಎಲೆಗಳಲ್ಲೂ ಔಷಧೀಯ ಗುಣಗಳಿವೆ ಎಂದು ತಿಳಿದ ನಂತರ, ನೇರಳೆಯು ಹೆಚ್ಚಿನ ಪ್ರಾಮುಖ್ಯತೆ ಪಡೆಯಿತು. ಆಯುರ್ವೇದದಲ್ಲಿ ನೇರಳೆಯನ್ನು ಬಹು ಹಿಂದಿನಿಂದ ಔಷಧವಾಗಿ ಉಪಯೋಗಿಸಲಾಗುತ್ತಿದೆ. ಮಧುಮೇಹ ನಿಯಂತ್ರಣಕ್ಕೆ ಇದನ್ನು ಬಳಸಲಾಗುತ್ತಿತ್ತು. ಜತೆಗೆ, ಜೀರ್ಣಶಕ್ತಿ ಬೆಳೆಸಲು, ಬಾಯಿಯ ಆರೋಗ್ಯಕ್ಕೆ, ರಕ್ತಶುದ್ಧಿಗೆ, ಶ್ವಾಸಕೋಶದ ಸಮಸ್ಯೆಗಳಿಗೆ, ಜಂತುಹುಳಗಳ ಸಮಸ್ಯೆಗಳಿಗೆ ಮತ್ತು ಇತರ ಹಲವು ಆರೋಗ್ಯ ಸಮಸ್ಯೆಗಳಿಗೆ ಇದನ್ನು ಔಷಧವಾಗಿ ಉಪಯೋಗಿಸಲಾಗುತ್ತಿದೆ.

ಫೋಟೋ ಕೃಪೆ : google

ನೇರಳೆಯ ಕೆಲವು ಪ್ರಭೇದಗಳು :

ನೇರಳೆ Syzygium cumini
ಕುಂಟನೇರಳೆ Syzygium Caryophyllatum
ಪನ್ನೇರಳೆ Syzygium Jambos
ಬನ್ನೇರಳೆ Syzygium hemisphericum
ಸಿಂಪಿನೇರಳೆ Syzygium heyeneanum
ಕಿರು ನೇರಳೆ Syzygium Malabaricum
ಗುಡ್ಡೆ ನೇರಳೆ Syzygium Zeylanicum
ನಾಯಿನೇರಳೆ Syzygium operculatum

(ಕನ್ನಡ ಹೆಸರಿನಲ್ಲಿ ಪ್ರಾದೇಶಿಕ ವ್ಯತ್ಯಯವಾಗಬಹುದು. ಕರ್ನಾಟಕದ ಬೇರೆ ಬೇರೆ ನೇರಳೆ ಪ್ರಭೇದದ ಬಗ್ಗೆ ನಿಮಗೆ ಗೊತ್ತಿದ್ದರೆ ತಿಳಿಸಿ… ನಿಜ ಹೇಳಬೇಕೆಂದರೆ, ನಮ್ಮ ಹಾಲಾಡಿ ಸುತ್ತ ಮುತ್ತ ಮೂರು ಪ್ರಭೇದದ ನೇರಳೆ ಮಾತ್ರ ನಾನು ನೋಡಿದ್ದೆ. ಅಷ್ಟೇ. (ನೇರಳೆ, ಪನ್ನೆ ರಲೆ, ಬನ್ನೆರಲೆ). ನಿಮಗೆ ಗೊತ್ತಿರುವ ನೇರಳೆ ಮಾಹಿತಿಯನ್ನೆಲ್ಲ ದಯವಿಟ್ಟು ಹೇಳಿ..)


  • ಶಶಿಧರ ಹಾಲಾಡಿ  (ಖ್ಯಾತ ಕಾದಂಬರಿಕಾರರು, ಕತೆಗಾರರು, ಪತ್ರಕರ್ತರು)

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW