ಯಕ್ಷಗಾನದಲ್ಲಿ ಹೀಗೊಂದು ಸಂಸ್ಕೃತಿಯ ಚಿಂತನೆಪ್ರಯೋಗ, ಆಯಾಮ, ಕೊರಿಯೋಗ್ರಾಫಿ, ಭಾವಾಭಿನಯ, ಏಕವ್ಯಕ್ತಿ, ಯುಗಳ ಯಕ್ಷಗಾನಕ್ಕೆ ನಿರ್ದೇಶಕನದಲ್ಲಿಅಗತ್ಯತೆ ಹೀಗೆ. ಈ ಪದಪುಂಜಗಳು ಮತ್ತು ಅವುಗಳಲ್ಲಿನ ಪ್ರಶ್ನೆಗಳನ್ನು ಬದಿಗಿಟ್ಟು ಯಕ್ಷಗಾನದ ವಾಚಿಕದ ಕಡೆ ಮತ್ತು ಕೊಂಡದಕುಳಿಯವರ ಕಾರ್ತವೀರ್ಯನ ಪೀಠಿಕೆಯಲ್ಲಿ ನಮ್ಮ ಸಂಸ್ಕೃತಿಯ ಚಿಂತನೆಗಳ ಕಡೆ ಗಮನ ಹರಿಸೋಣ. – ಗಣಪತಿ ಹೆಗಡೆ ಕಪ್ಪೆಕೆರೆ, ಮುಂದೆ ಓದಿ…

(ನನ್ನ ಫೇಸ್ಬುಕ್ ಅಲ್ಪವಿರಾಮಕ್ಕೊಂದು ಅಲ್ಪವಿರಾಮ)

ನೀನಾಸಂನ ಕೆ.ವಿ.ಅಕ್ಷರ ರವರು ಉದಯವಾಣಿ ಪತ್ರಿಕೆಗೆ ಬರೆದ ಅಂಕಣಗಳ ಸಂಕಲನ ಪುಸ್ತಕ ‘ಸಮ್ಮುಖದಲ್ಲಿ ಸ್ವಗತ’ದಲ್ಲಿ ಯಕ್ಷಗಾನವನ್ನು ‘ರಿಕ್ತ ರಂಗಭೂಮಿ’ ಎಂದು ಕರೆದಿದ್ದಾರೆ. ರಿಕ್ತ ಎಂದರೆ ಖಾಲಿ ಎಂದರ್ಥ. ಯಕ್ಷಗಾನದಲ್ಲಿ ಏನೂ ಇಲ್ಲ ಎಂದು ಇದರರ್ಥವಲ್ಲ. ವಿಶೇಷವಾಗಿ ಏನನ್ನೂ ಬಳಸದ ರಂಗಭೂಮಿ ಎಂಬ ಅರ್ಥದಲ್ಲಿ ಹಾಗೆ ಹೇಳಿದ್ದಾರೆ. ಹಿಮ್ಮೇಳವನ್ನು ಬಿಟ್ಟು ರಂಗವನ್ನು ಒಮ್ಮೆ ನೋಡಿ. ಪಾತ್ರಗಳು ಬಳಸುವ ಆಯುಧಗಳೂ ಸಹ ಈ ರಂಗವನ್ನು ಕಥಾ ಕಾಲಕ್ಷೇಪ ಎಂಬ ಹಿನ್ನೆಲೆಯಲ್ಲಿ ಹೇಳಿ ಒಂದು ಆವರಣ ನಿರ್ಮಾಣಕ್ಕೆ ಸಹಾಯಕವಾಗಿ ಬಳಕೆಯಾಗುತ್ತವೆ.
ಈ ನಮ್ಮ ರಿಕ್ತ ರಂಗಭೂಮಿ ಕಳೆದ ನಾಲ್ಕೈದು ದಶಕಗಳಿಂದ ವಿವಿಧ ರೀತಿಯ ಪ್ರಶ್ನೆಗಳನ್ನು ಎದುರಿಸುತ್ತಾ ಬಂದಿದೆ. ಹಾಗೆಯೇ ಆ ಪ್ರಶ್ನೆಗಳಿಗೆ ಹೊಸ ಹೊಸ ರೀತಿಯಲ್ಲಿ ಉತ್ತರಿಸುತ್ತಲೂ ಬಂದಿದೆ. ಪ್ರಯೋಗ, ಆಯಾಮ, ಕೊರಿಯೋಗ್ರಾಫಿ, ಭಾವಾಭಿನಯ, ಏಕವ್ಯಕ್ತಿ, ಯುಗಳ, ಯಕ್ಷಗಾನಕ್ಕೆ ನಿರ್ದೇಶಕನ ಅಗತ್ಯತೆ ಹೀಗೆ. ಈ ಪದಪುಂಜಗಳು ಮತ್ತು ಅವುಗಳಲ್ಲಿನ ಪ್ರಶ್ನೆಗಳನ್ನು ಬದಿಗಿಟ್ಟು ಯಕ್ಷಗಾನದ ವಾಚಿಕದ ಕಡೆ ಗಮನಹರಿಸೋಣ.

 

ಯಕ್ಷಗಾನದ ವಾಚಿಕದಲ್ಲಿ ಮೂರು ವಿಧವನ್ನು ನಾನು ಈ ಸಂದರ್ಭದಲ್ಲಿ ಗುರುತಿಸುತ್ತೇನೆ. ಒಂದು ಮಾತು. ಎರಡನೆಯದು ಮಾಹಿತಿ. ಮೂರನೆಯದು ಚಿಂತನೆ.

ಈ ಮೂರೂ ತೆರನಾದ ವಾಚಿಕಕ್ಕೆ ಶಾಸ್ತ್ರ ವಾಕ್ಯ, ಗಾದೆ ಮಾತು ಮತ್ತು ಪಾತ್ರಗಳ ಪೂರ್ವಾಪರಗಳ ಮೂಲಕ ಒಂದು ಲಾಜಿಕಲ್ ಹೆಣಿಗೆ ಇವುಗಳನ್ನು ಬಳಸುವುದು ಕ್ರಮ. ಮಾತೆಂದರೆ ಸುಲಭವಾಗಿ ಹೇಳಬೇಕೆಂದರೆ ಪಂಚ್(ನಾಟುವಂಥದ್ದು) ಆಗುವಂಥದ್ದು. ಭಾಷೆಯ ವೈಶಿಷ್ಟ್ಯತೆ, ಭಾಷಾ ವಿನೋದ ಇಂಥವು ಇಲ್ಲಿ ಪ್ರಧಾನ. ಈ ನಿಟ್ಟಿನಲ್ಲೂ ಯಕ್ಷಗಾನ ಕನ್ನಡದ ಹಿರಿಮೆಯನ್ನು ಎತ್ತಿ ಹಿಡಿಯುತ್ತದೆ. ಆದರೆ ಇವುಗಳನ್ನು ಬೇರೆ ಭಾಷೆಗೆ ಭಾಷಾಂತರಿಸಿದಾಗ ಇವುಗಳ ವಿಶೇಷತೆ ಗೌಣವಾಗಬಹುದು. ಮಾಹಿತಿಯೆಂದರೆ ಪಾತ್ರದ ವರ, ಶಾಪ, ಅಥವಾ ಆ ಪಾತ್ರದ ಪೂರ್ವಾಪರ ಇತ್ಯಾದಿಗಳನ್ನು ಹೇಳುವುದು. ಇವುಗಳಿಗೂ ಒಂದು ಮಹತ್ವವಿದೆ. ಬಹಳಷ್ಟು ಸಂದರ್ಭದಲ್ಲಿ ಕಥಾನಡಿಗೆಯಲ್ಲಿ ಇವು ಪ್ರಮುಖ ಪಾತ್ರ ವಹಿಸುತ್ತವೆ. ಆವರಣ ನಿರ್ಮಾಣ ಇವುಗಳಿಂದಲೂ ಸಾಧ್ಯ. ಕೊನೆಯದಾಗಿ ಚಿಂತನೆಗಳು. ಯಕ್ಷಗಾನದ ಮಹಾಬಲರೆಂದೇ ಖ್ಯಾತರಾಗಿದ್ದ ಶ್ರೀ ಕೆರೆಮನೆ ಮಹಾಬಲ ಹೆಗಡೆಯವರು ಕಥೆಯನ್ನು ನಾವು ಹೇಳಬೇಕು, ಅವುಗಳ ಸಮಕಾಲೀನ ಪ್ರಸ್ತುತತೆಯನ್ನು ಪ್ರೇಕ್ಷಕರಿಗೇ ಬಿಟ್ಟುಬಿಡಬೇಕು ಎನ್ನುತ್ತಿದ್ದರಂತೆ. ಪಾತ್ರಗಳ ಮಾತಿಗೆ ಸಾಹಿತ್ಯಿಕ ಸ್ವರೂಪ ಬೇಕೆಂದು ರಂಗದಲ್ಲಿ ಪಾತ್ರವಾಗಿ ಎಲ್ಲವನ್ನೂ ಹೇಳಲಿಕ್ಕಾಗುವುದಿಲ್ಲ ಎನ್ನುವುದು ಸಹ ಸರಿಯೆ. ಆದರೂ ನನ್ನಂಥವರಿಗೆ ನಮ್ಮ ಧರ್ಮದ ಅಥವಾ ಸಾಹಿತ್ಯಿಕ ಸ್ವರೂಪದ ಚಿಂತನೆಗಳಿದ್ದರೆ ಬಹಳ ಸಂತೋಷ.

 

(ಯಕ್ಷಗಾನದ ಮಹಾಬಲರೆಂದೇ ಖ್ಯಾತರಾಗಿದ್ದ ಶ್ರೀ ಕೆರೆಮನೆ ಮಹಾಬಲ ಹೆಗಡೆಯ) ಫೋಟೋ ಕೃಪೆ : google

ಜುಲೈ 16, 2022ರ ರವೀಂದ್ರ ಕಲಾಕ್ಷೇತ್ರದ ಕಾರ್ತವೀರ್ಯಾರ್ಜುನ ಕಾಳಗದ ಶ್ರೀ ಕೊಂಡದಕುಳಿ ರಾಮಚಂದ್ರ ಹೆಗಡೆಯವರ ಕಾರ್ತವೀರ್ಯನ ಪೀಠಿಕೆ ಒಂದು ವಿಶೇಷ ಚಿಂತನೆಯನ್ನು ಹೊರಗೆಡವಿತು.

ಕೊಂಡದಕುಳಿಯವರ ಕಾರ್ತವೀರ್ಯ ಹಿಂದಿನಿಂದಲೂ ಬಂದ ಮಾಮೂಲಿ ಪೀಠಿಕೆಯಾದ ಹರ ಮುನಿದರೆ ಗುರು ಕಾಯ್ವ ಎಂಬುದಕ್ಕಿಂತ ಸಂಪೂರ್ಣ ಭಿನ್ನ. ಅವರು ಕಾರ್ತವೀರ್ಯನ ಸಮಗ್ರ ಜೀವನವನ್ನು ಮತ್ತು ಆ ಪಾತ್ರದ ಪೀಠಿಕೆ ಹೇಳುವಾಗ ಕ್ಷಾತ್ರದ ಮಹತ್ವವನ್ನು ಎತ್ತಿ ಹೇಳುವುದು ಕ್ರಮ. ನಾನಿವಾಗ ಅದನ್ನು ಪುನರುಚ್ಚರಿಸುವುದಿಲ್ಲ. ಈ ಆಟದಲ್ಲಿ ಅವರು ಮಾಮೂಲಿ ಅವರಾಡುವ ಮಾತಿನೊಡನೆ ಹೊಸತೊಂದು ಮಾತನ್ನಾಡಿದರು. ‘ಅಜ್ಞಾನದ ವಿರುದ್ಧ ಹೋರಾಡುವವನು ಬ್ರಾಹ್ಮಣ, ಅಬಲರಿಗಾಗಿ ಹೋರಾಡುವವ ಕ್ಷತ್ರಿಯ, ಅಭಾವದ ವಿರುದ್ಧ ಹೋರಾಡುವವ ವೈಶ್ಯ, ಆಲಸ್ಯದ ವಿರುದ್ಧ ಹೋರಾಡುವವ ಶೂದ್ರ’ ಎಂದರು. ಇಡೀ ಸಭೆ ಚಪ್ಪಾಳೆ ತಟ್ಟಿತು. ಅಂದರೆ ಪರಿಣಾಮಕಾರಿಯಾಗಿಯೇ ಮಂಡಿಸಲ್ಪಟ್ಟಿತು ಎನ್ನುವುದು ನನ್ನ ಮಾತಿನ ಸೂಚ್ಯಾರ್ಥ.

(ಶ್ರೀ ಕೊಂಡದಕುಳಿ ರಾಮಚಂದ್ರ ಹೆಗಡೆ) ಫೋಟೋ ಕೃಪೆ : google

ಚಾತುರ್ವರ್ಣವನ್ನು ವ್ಯಾಖ್ಯಾನಿಸುತ್ತಾ ಒಂದು ಆದರ್ಶ ಸಮಾಜವನ್ನು ನಮ್ಮ ಧರ್ಮ ಹೇಗೆ ಕಂಡಿದೆ ಎಂದು ಹೇಳುತ್ತಾರೆ. ‘ವ್ಯಾಪಾರಂ ದ್ರೋಹ ಚಿಂತನಂ’ ಎಂಬ ಮಾತಿದೆ. ಅದನ್ನು ಧಿಕ್ಕರಿಸಿ ವ್ಯಾಪಾರಿಯಾದವ ಸುಳ್ಳು ಅಭಾವ ಸೃಷ್ಟಿಸಬಾರದು ಎಂಬ ಆದರ್ಶವಿದೆ. ಶೂದ್ರರ ಶ್ರಮ ಸಂಸ್ಕೃತಿಯನ್ನು ಹೇಳುತ್ತಲೇ ಜ್ಞಾನ ಮತ್ತು ಕರ್ಮದ ಮಹತ್ವವನ್ನು ನಮ್ಮ ಹಿರಿಯರು ಚಾತುರ್ವರ್ಣದ ಮೂಲಕ ಹೇಳಿದರು ಎಂಬ ಮಾತಿದೆ. ಇಷ್ಟೂ ಮಾತಾಡುವಾಗ ಕಾರ್ತವೀರ್ಯನ ಪಾತ್ರಕ್ಕೆ ಎಲ್ಲೂ ಲೋಪವಿಲ್ಲ. ಚಾತುರ್ವರ್ಣ ನಮ್ಮ ಸನಾತನ ಧರ್ಮದ ಸಮಾಜ ವ್ಯವಸ್ಥೆಯ ತಳಹದಿ. ಚಾತುರ್ವರ್ಣ್ಯವನ್ನು ಈ ರೀತಿ ಕಲೆಯ ಮೂಲಕ ವ್ಯಾಖ್ಯಾನಿಸುವುದರ ಮೂಲಕ ನಮ್ಮ ಸಂಸ್ಕೃತಿಯ ಚಿಂತಕರಾಗುತ್ತಾರೆ ಕೊಂಡದಕುಳಿಯವರು. ಹೀಗೆ ಪೌರಾಣಿಕ ಪ್ರಸಂಗಗಳ ಪುನರ್ಕಥನ ಮತ್ತು ಪುನರ್ಮಥನ ಯಕ್ಷಗಾನದ ಮೂಲಕ ಸಾಧ್ಯವಾಗುತ್ತಲೇ ಇಡೀ ಯಕ್ಷಗಾನ ವಲಯವನ್ನು ಯಕ್ಷಗಾನ ಕಲೆ ಜಾಗೃತ ಸಮಾಜವಾಗಿರಿಸಿದೆ.

ಫೋಟೋ ಕೃಪೆ : Deccan herald

ಇನ್ನಿಡೀ ರಾತ್ರಿ ಆಟ ಚೆನ್ನಾಗಿಯೇ ಸಾಗಿತು. ಜ್ವಾಲಾಪ್ರತಾಪದಲ್ಲಿ ಥಂಡೀಮನೆ ಮತ್ತು ಯಲಗುಪ್ಪರ ಜೋಡಿ ಚೆನ್ನಾಗಿತ್ತು. ಯಲಗುಪ್ಪರು ‘ತಾಯಿ ಮಾತು ಮಗ ಕೇಳಿದರೆ ಹಾಳಾಗುವುದಿಲ್ಲ, ಹೆಂಡತಿ ಮಾತು ಕೇಳಿದರೆ ಹಾಳಾದ ಎನ್ನುತ್ತಾರೆ’ ಎಂಬ ತೆರನಾದ ಮಾತುಗಳನ್ನಾಡಿ ಚರ್ಚಿಸಿದರು. ಭದ್ರಸೇನ ಕಾಳಗದಲ್ಲಿ ಜನ್ಸಾಲೆಯವರ ಪದ್ಯಗಳೇ ಹೈಲೈಟ್ ಆದವೇನೋ ಅನ್ನಿಸಿತು. ಸುಭದ್ರಾ ಕಲ್ಯಾಣದಲ್ಲಿ ಸಿದ್ದಾಪುರ ಅಶೋಕಭಟ್ಟರ ಹಾಸ್ಯ ಚೆನ್ನಾಗಿತ್ತು.. ಆದರೆ ಕಾಸರಕೋಡ ಶ್ರೀಧರ್ ಭಟ್ಟರು ತಾನೊಂದು ಟ್ಯಾಲೆಂಟ್ ಎಂದು ಮಗದೊಮ್ಮೆ ತೋರಿಸಿದರು.

ಜಲವಳ್ಳಿಯವರಿರಲಿ, ತೋಟಿಯವರಿರಲಿ ಅಥವಾ ಚಿಟ್ಟಾಣಿದ್ವಯರೋ ಅಥವಾ ಕಿರಾಡಿಯೋ, ಬೇರೊಳ್ಳಿಯೋ ಎಲ್ಲಾ ನಮ್ಮ ಕಲಾವಿದರು. ನಮ್ಮ ಕಲಾವಿದರು ನಮಗೆ ಚಂದವೆ.
ಕೊಂಡದಕುಳಿಯವರು ತಮ್ಮ ಪ್ರತಿಯೊಂದು ಪಾತ್ರದ ಕುರಿತು ಸಮಗ್ರವಾಗಿ ಯೋಚಿಸುತ್ತಾ ಬೆಳೆದು ನಿಂತವರು. ಅವರ ಚಿಂತನೆಗಳನ್ನು ಸಾರ್ವಜನಿಕ ವೇದಿಕೆಯಲ್ಲಿ ಪೂರ್ವಾಗ್ರಹವಿಲ್ಲದೆ ಚರ್ಚಿಸುವ ಸಮಯ ಬರಲಿ ಎಂದು ಆಶಿಸೋಣ.


  • ಗಣಪತಿ ಹೆಗಡೆ ಕಪ್ಪೆಕೆರೆ  ( ವೃತ್ತಿಯಲ್ಲಿ ಸಾಫ್ಟ್ ವೆರ್ ಇಂಜೀನಿಯರ್ ,ಹವ್ಯಾಸಿ ಬರಹಗಾರರು), ಬೆಂಗಳೂರು.

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW