ವರ್ತಮಾನದಲ್ಲಿ ನಾವು ಎದುರಿಸುತ್ತಿರುವ ಕನ್ನಡ ಭಾಷೆಯ ಆತಂಕಗಳನ್ನು ಗ್ರಹಿಸಲು ನಾವು ಇತಿಹಾಸಕ್ಕೆ ಮರಳುವುದು ಅನಿವಾರ್ಯ. ಬ್ರಿಟಿಷ್ ರು ನಮ್ಮ ಭಾಷೆಗಳನ್ನು ವರ್ನಾಕ್ಯುಲರ್ ಲ್ಯಾಂಗ್ವೇಜಸ್ ಎಂದು ಕರೆದರು. ವರ್ನ್ಯಾಕ್ಯುಲರ್ ಎಂದರೆ ಗುಲಾಮರ ಭಾಷೆ ಎಂದು ಅರ್ಥ.ದರಿಂದ ಎಚ್ಚೆತ್ತುಕೊಳ್ಳಲು ಗಾಂಧಿಯವರು ಬರಬೇಕಾಯಿತು. ಅವರು ಶಿಕ್ಷಣದಲ್ಲಿ ಮಾತೃಭಾಷೆ ಯ ಮಹತ್ವವನ್ನು ಎತ್ತಿ ಹಿಡಿದರು.ರಘುನಾಥ್ ಕೃಷ್ಣಮಾಚಾರ್ ಅವರು ಕನ್ನಡ ಪ್ರಜ್ಞೆಯ ಸುತ್ತ ಮುತ್ತ ಪುಸ್ತಕದ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದ್ ಓದಿ…
ಪುಸ್ತಕ : ಕನ್ನಡ ಪ್ರಜ್ಞೆಯ ಸುತ್ತ ಮುತ್ತ
ಸಂಪಾದಕರು : ಗೀತಾ ಡಿ ಸಿ ಮತ್ತು ನಾಗರೇಖಾ ಗಾಂವಕರ್
ಪ್ರಕಾಶಕರು : ಕ್ರಿಯಾ ಪುಸ್ತಕ ಪ್ರಕಾಶನ
ಬೆಲೆ : ೪೦೦.೦೦
‘ಕನ್ನಡ ಪ್ರಜ್ಞೆಯ ಸುತ್ತ ಮುತ್ತ ‘ಪುಸ್ತಕಕ್ಕೆ ನನ್ನ ಲೇಖನವನ್ನು ಅಹ್ವಾನಿಸಿ ಪ್ರಕಟಿಸಿದ, ಗೌರವ ಪ್ರತಿಯನ್ನು ಕಳಿಸಿದ, ಸಂಪಾದಕರಾದ ಡಾ.ಗೀತಾ ಡಿ.ಸಿ , ಮತ್ತು ನಾಗರೇಖಾ ಗಾಂವಕರ್ ಅವರಿಗೆ ಕೃತಜ್ಞತೆ.
ಕನ್ನಡ ಭಾಷೆಯ ಆತಂಕಗಳು: ‘ಹಿಂದಣ ಹೆಜ್ಜೆಯ ಅರಿದು ಕಂಡಲ್ಲದೆ ಮುಂದಣ ಹೆಜ್ಜೆ ಯ ಇಡಲಾಗದು’- ಎನ್ನುವ ಅರ್ಥದ ಅಲ್ಲಮನ ವಚನವಿದೆ. ವರ್ತಮಾನದಲ್ಲಿ ನಾವು ಎದುರಿಸುತ್ತಿರುವ ಕನ್ನಡ ಭಾಷೆಯ ಆತಂಕಗಳನ್ನು ಗ್ರಹಿಸಲು ನಾವು ಇತಿಹಾಸಕ್ಕೆ ಮರಳುವುದು ಅನಿವಾರ್ಯ. ಸಂಸ್ಕೃತದಿಂದ ಆತಂಕ ಒದಗಿದಾಗ ಅದನ್ನು ಎದುರಿಸಲು ವಚನಕಾರರು ಕನ್ನಡವನ್ನು ತಮ್ಮ ಅಭಿವ್ಯಕ್ತಿಯ ಮಾಧ್ಯಮವನ್ನಾಗಿಸಿಕೊಂಡರು.ಅವರು ತಮ್ಮ ಕಾಯಕದ ಪರಿಭಾಷೆಯನ್ನು ತಮ್ಮ ಅನುಭವದ ಅಭಿವ್ಯಕ್ತಿಯ ಸಾಧನವಾಗಿ ಬಳಸಿಕೊಂಡರು. ಮೊದಲ ಬಾರಿಗೆ ಕಾಯಕಜೀವಿಗಳ ಭಾಷೆಯೊಂದು ಕನ್ನಡದ ಮೂಲಕ ಪ್ರಕಟವಾಯಿತು. ಇದರಿಂದ ಕನ್ನಡಕ್ಕೆ ಒಂದು ಅನನ್ಯವಾದ ತೇಜಸ್ಸು ಒದಗಿ ಬಂದದ್ದು ಈಗ ಸಿದ್ದವಾದ ಮಾತಾಗಿದೆ.

ಬ್ರಿಟಿಷ್ ರು ಭಾರತಕ್ಕೆ ಬಂದಾಗ ಇಂಗ್ಲೀಷ್ ಭಾಷೆ ಎದುರಾಯಿತು. ಅದು ಅನ್ನದ ಭಾಷೆಯಾಗಿ, ಅಧಿಕಾರದ ಭಾಷೆಯಾಗಿ, ಪ್ರತಿಷ್ಠೆಯ ಭಾಷೆಯಾದಾಗ ಅದನ್ನು ಮೇಲು ವರ್ಗದವರು ಬೆನ್ನು ಹತ್ತಿದರು.ನಮ್ಮ ಮೊದಲ ಘಟ್ಟದ ಬಹುತೇಕ ಲೇಖಕರು ಇದಕ್ಕೆ ನಿದರ್ಶನ. ಬ್ರಿಟಿಷ್ ರು ನಮ್ಮ ಭಾಷೆಗಳನ್ನು ವರ್ನಾಕ್ಯುಲರ್ ಲ್ಯಾಂಗ್ವೇಜಸ್ ಎಂದು ಕರೆದರು. ವರ್ನ್ಯಾಕ್ಯುಲರ್ ಎಂದರೆ ಗುಲಾಮರ ಭಾಷೆ ಎಂದು ಅರ್ಥ. ಇದರಿಂದ ಎಚ್ಚೆತ್ತುಕೊಳ್ಳಲು ಗಾಂಧಿಯವರು ಬರಬೇಕಾಯಿತು. ಅವರು ಶಿಕ್ಷಣದಲ್ಲಿ ಮಾತೃಭಾಷೆ ಯ ಮಹತ್ವವನ್ನು ಎತ್ತಿ ಹಿಡಿದರು. ಹಿಂದಿಯನ್ನು ರಾಷ್ಟ್ರಭಾಷೆ ಎಂದು ಕರೆಯುವುದರ ಮೂಲಕ ಅದನ್ನು ಇಂಗ್ಲೀಷ್ ಗೆ ಪ್ರತಿಯಾಗಿ ನಿಲ್ಲಿಸಿದರು. ಹಿಂದಿ, ಜನರನ್ನು ಒಗ್ಗೂಡಿಸುವ ಭಾಷೆಯಾಗಿ ಸ್ವಾತಂತ್ರ್ಯ ಚಳವಳಿಗೆ ಮಾಧ್ಯಮವಾಗಿ ಪರಿಣಮಿಸಿತು.
ದಕ್ಷಿಣದಲ್ಲಿ ಇದನ್ನು ಒಪ್ಪದವರು ಹಿಂದಿ ವಿರುದ್ಧ ಚಳವಳಿಯನ್ನು ಆರಂಭಿಸಿದರು. ಈಗಲೂ ತಮಿಳು ನಾಡಿನಲ್ಲಿ ತಮಿಳು ಮತ್ತು ಇಂಗ್ಲೀಷ್ ಮಾತ್ರ ಶಿಕ್ಷಣ ಮಾಧ್ಯಮವಾಗಿದೆ.ಅಲ್ಲಿ ಹಿಂದಿ ಕಲಿಯುವ ಅವಕಾಶ ಇಲ್ಲ. ಉಳಿದಂತೆ ತ್ರಿಭಾಷಾ ಸೂತ್ರವನ್ನು ಜಾರಿಗೆ ತರಲಾಗಿದೆ. ಇಂಗ್ಲೀಷ್ ಜನಾಂಗ ವ್ಯಾಪಾರಿಗಳದು.ವ್ಯಾಪಾರಿಗಳಿಗೆ ಯಾವಾಗಲೂ ಲಾಭದ ಮೇಲೆ ಕಣ್ಣು. ಅವರನ್ನು ಮೇಲ್ಪಂಕ್ತಿಯನ್ನಾಗಿಸಿಕೊಂಡ ಮೇಲ್ವರ್ಗದವರಿಗೆ ಅವರ ಭಾಷೆ ಮತ್ತು ಸಂಸ್ಕೃತಿಗಳು ಮಾದರಿಯಾದವು.ಆದರೆ ಕೆಳವರ್ಗದವರಿಗೆ?ಕುಂ.ವೀ.ಅವರ’ ಗಾಂಧಿ ಕ್ಲಾಸ’ನ್ನು ಓದಿದರೆ ಅದರಲ್ಲಿ ಗಾಂಧಿಯವರ ಒಂದು ಮಾತನ್ನು ಮೊದಲಲ್ಲೆ ಉಲ್ಲೇಖಿಸಿದ್ದಾರೆ.ಯಾರೋ ಅವರನ್ನು ‘ ಯಾಕೆ ಯಾವಾಗಲೂ ಮೂರನೇ ತರಗತಿಯಲ್ಲಿ ಪ್ರಯಾಣ ಮಾಡುತ್ತೀರಿ?’ ಎಂದು ಕೇಳಿದಾಗ ಅವರು’ ನಾಲ್ಕನೇ ತರಗತಿ ಇಲ್ಲದ್ದಕ್ಕೆ’ ಎಂದು ಉತ್ತರ ಕೊಡುತ್ತಾರೆ. ಕುಂವೀ ಅವರು ಬಳ್ಳಾರಿಯ ಗಡಿ ಭಾಗದಲ್ಲಿ ಶಿಕ್ಷಕರಾಗಿ ನೇಮಕಗೊಂಡರು.ಅಲ್ಲಿ ಮೇಲು ವರ್ಗದ ರೆಡ್ಡಿ ಜನಾಂಗದವರು ,ಶಾಲೆಯಲ್ಲಿ ಕೆಳವರ್ಗದವರಿಗೆ ಅವಕಾಶ ಕೊಡಬಾರದೆಂದು ಹಟಹಿಡಿದರಂತೆ. ಆಗ ಅವರು ದಲಿತರ ಕೇರಿಗೆ ಹೋಗಿ ಅಲ್ಲಿಯೇ ಶಾಲೆ ತೆರೆದರು. ಆದ್ದರಿಂದ ಕನ್ನಡಕ್ಕೆ ಒದಗಿರುವ ಆತಂಕಗಳನ್ನು ಕುರಿತು ಮಾತನಾಡುವಾಗ ಅದು ಯಾರ ಕನ್ನಡಕ್ಕೆ ಒದಗಿರವ ಆತಂಕ ಎಂಬ ಪ್ರಶ್ನೆ ಎದುರಾಗುತ್ತದೆ. ಏಕೆಂದರೆ ನಮ್ಮಲ್ಲಿ ಒಂದು ಕನ್ನಡ ಇಲ್ಲ ಹಲವು ಕನ್ನಡಗಳು ಇವೆ.
ಆದ್ದರಿಂದ ನಾವು ಕನ್ನಡಕ್ಕೆ ಒದಗಿರುವ ಆತಂಕಗಳು ಎನ್ನುವಾಗ ಅದರ ಬಗ್ಗೆ ನಾವು ಖಚಿತವಾದ ನಿಲುವು ಗಳನ್ನು ತೊಳೆಯಬೇಕಾದ ಅಗತ್ಯವಿದೆ.ಆಗ ಮಾತ್ರ ನಾವು ಅದನ್ನು ಎದುರಿಸುವ ಬಗೆ ಹೇಗೆ ಎಂಬುದನ್ನು ಕುರಿತು ಸ್ಪಷ್ಟವಾಗಿ ಆಲೋಚಿಸಲು ಸಾಧ್ಯವಾಗುತ್ತದೆ. ಕನ್ನಡವನ್ನು ಅನ್ನದ ಭಾಷೆಯನ್ನಾಗಿ ಮಾಡುವುದು ಹೇಗೆ ಎಂಬುದು ಮಹತ್ವದ ಪ್ರಶ್ನೆಯಾಗಿದೆ.ಅದಕ್ಕೆ ಉತ್ತರವನ್ನು ಪಡೆಯಲು ನಾವು ಸರ್ಕಾರದ ಭಾಷಿಕ ನೀತಿಯ ಕಡೆಗೆ ಗಮನ ಕೊಡಬೇಕಾಗುತ್ತದೆ. ಒಂದು ಕಡೆಗೆ ಸಾಹಿತ್ಯ ಸಮ್ಮೇಳನಗಳಿಗೆ ಕೋಟ್ಯಂತರ ರೂಗಳನ್ನು ಬಿಡುಗಡೆ ಮಾಡುವ ಸರ್ಕಾರವೆ ಇನ್ನೊಂದು ಕಡೆ ಇಂಗ್ಲೀಷ್ ಮಾಧ್ಯಮದ ಶಾಲೆಗಳಿಗೆ ಅವಕಾಶ ನೀಡುತ್ತದೆ. ಇರುವ ಕನ್ನಡ ಶಾಲೆಗಳ ಗುಣಮಟ್ಟ ಉತ್ತಮಗೊಳಿಸುವ ಕಡೆಗೆ ಅದರ ಗಮನವಿಲ್ಲ. ಇಂತಹ ಸಂದರ್ಭದಲ್ಲಿ ಕನ್ನಡ ಶಾಲೆಗಳಿಗೆ ಯಾರಾದರೂ ಯಾಕೆ ತಮ್ಮ ಮಕ್ಕಳನ್ನು ಕಳಿಸುತ್ತಾರೆ. ಅವರು ಲಕ್ಷಾಂತರ ಹಣ ಸಾಲ ಮಾಡಿಯಾದರೂ ತೆತ್ತು ತಮ್ಮ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮದ ಶಾಲೆಗಳಿಗೆ ಕಳಿಸುತ್ತಾರೆ.

ಖಾಸಗೀಕರಣಕ್ಕೆ ಅವಕಾಶ ಮಾಡಿಕೊಟ್ಟು ವಿದೇಶಿ ಕಂಪನಿಗಳನ್ನು ಕೈಮಾಡಿ ಕರೆದುಕೊಂಡಿರುವ ಸರ್ಕಾರಕ್ಕೆ ಅಲ್ಲಿ ಕನ್ನಡ ಕಲಿತವರಿಗೆ ಅವಕಾಶ ಕೊಡಿ ಎಂದು ಕೇಳುವ ಧೈರ್ಯ ಎಲ್ಲಿದೆ.? ಈಗ ಎಲ್ಲರಿಗೂ ಬೇಕಿರುವುದು ಎಂ.ಎನ್.ಸಿ ಉದ್ಯೋಗವೆ ಹೊರತು ಯಾರಿಗೆ ಸರ್ಕಾರದ ಕೆಲಸ ಬೇಕಾಗಿದೆ?. ಅಂದಮೇಲೆ ಯಾವುದನ್ನು ಕಲಿಯುವುದರಿಂದ ತಮ್ಮ ಮಕ್ಕಳಿಗೆ ಆಕರ್ಷಕ ಹುದ್ದೆ ದೊರೆಯುತ್ತದೆ ಎನ್ನುವುದರ ಕಡೆಗೆ ವಾಲುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ
ಈಗ ಕನ್ನಡ ಮಾಧ್ಯಮವನ್ನು ಆಕರ್ಷಕವಾಗಿಸಲು ಇರುವ ಒಂದೆ ಮಾರ್ಗವೆಂದರೆ ಅದರಲ್ಲಿ ಕಲಿತವರಿಗೆ ಮೀಸಲಾತಿಯನ್ನು ಒದಗಿಸುವುದು. ಮಹಾರಾಷ್ಟ್ರದ ಲ್ಲಿ ಮರಾಠಿ ಕಲಿತವರಿಗೆ ಪ್ರಾಧಾನ್ಯ ಎಂದು ಪ್ರತೀ ಜಾಹೀರಾತಿನಲ್ಲಿ ಹಾಕುತ್ತಾರೆ. ಇದು ಮಹಾರಾಷ್ಟ್ರ ದಲ್ಲಿ ಸಾಧ್ಯವಾದರೆ ಕರ್ನಾಟಕದಲ್ಲಿ ಏಕೆ ಸಾಧ್ಯವಿಲ್ಲ? ಎಂದರೆ ಸರ್ಕಾರಕ್ಕೆ ಬದ್ದತೆ ಇಲ್ಲ ಎಂದು ಅರ್ಥ. ಮಹಾರಾಷ್ಟ್ರದ ಕನ್ನಡ ಶಾಲೆಗಳಲ್ಲಿ ಮರಾಠಿ ಕಲಿಯುವುದು ಅನಿವಾರ್ಯವಾಗಿದೆ. ಅದೆ ನಿಯಮವನ್ನು ಕರ್ನಾಟಕದಲ್ಲಿ ಜಾರಿಗೆ ತರಲು ಏಕೆ ಸಾಧ್ಯವಿಲ್ಲ? ಆಗ ಅನಿವಾರ್ಯವಾಗಿಯಾದರೂ ಅವರು ಕನ್ನಡ ಕಲಿಯುತ್ತಾರೆ. ಮಾತ್ರವಲ್ಲ .ಅವರಾಗಿಯೆ ಹೊಂದಿಕೊಳ್ಳುತ್ತಾರೆ. ಇಂತಹ ವಾತಾವರಣವನ್ನು ನಿರ್ಮಾಣ ಮಾಡುವುದರ ಮೂಲಕ ಕನ್ನಡವನ್ನು ಅನ್ನದ ಭಾಷೆಯನ್ನಾಗಿ ಮಾಡಲು ಸಾಧ್ಯವಿದೆ. ಅಲ್ಲದೆ ಅದರಿಂದ ಜಾಗತೀಕರಣದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗುತ್ತದೆ. ಸರ್ಕಾರ ಭಾಷೆಯ ಬದ್ದತೆಯನ್ನು ತೋರಿಸಬೇಕಾದರೆ ಅದಕ್ಕೆ ಸಾರ್ವಜನಿಕ ಒತ್ತಡ ಅನಿವಾರ್ಯ. ಇದನ್ನು ಕನ್ನಡ ಪರವಾದವರನ್ನು ಚುನಾವಣೆಯಲ್ಲಿ ಆಯ್ಕೆ ಮಾಡುವುದರಿಂದ ಮಾತ್ರ ಸಾಧ್ಯವಾಗುತ್ತದೆ. ಇದಕ್ಕೆ ಜಾತಿ, ಮತ ಮತ್ತು ಧರ್ಮಗಳನ್ನು ಮೀರಬೇಕಾದ ಅಗತ್ಯವಿದೆ. ಹಾಗೆ ಆಯ್ಕೆ ಆದವರು ಎಷ್ಟರಮಟ್ಟಿಗೆ ಕನ್ನಡ ಪರವಾದ ಕಾರ್ಯಗಳನ್ನು ಕೈಗೆತ್ತಿಕೊಳ್ಳುತ್ತಾರೆ ಎನ್ನುವುದರ ನಿರಂತರವಾಗಿ ಮೇಲ್ವಿಚಾರಣೆ ಮಾಡುವ ಅಗತ್ಯವಿದೆ. ‘ ನಿರಂತರ ಜಾಗರೂಕತೆಯೆ ಪ್ರಜಾಪ್ರಭುತ್ವಕ್ಕೆ ತೆರಬೇಕಾದ ಬೆಲೆ: ಎನ್ನುವ ಮಾತು ಭಾಷೆಗೆ ಸಂಬಂಧ ಪಟ್ಟಂತೆಯು ಅನ್ವಯಿಸುತ್ತದೆ. ಕನ್ನಡ ಅಧ್ಯಾಪಕರಾಗಿ ನಮ್ಮಂತಹವರ ಜವಾಬ್ದಾರಿ ಹೆಚ್ಚಿನದು. ಏಕೆಂದರೆ, ವಿದ್ಯಾರ್ಥಿಗಳಲ್ಲಿ ಕನ್ನಡದ ಕುರಿತು ಪ್ರೀತಿಯ ಬೀಜವನ್ನು ಬಿತ್ತಬೇಕಾದವರು. ಅದಕ್ಕೆ ಸ್ವತಃ ಅಧ್ಯಾಪಕರಿಗೆ ಕನ್ನಡದ ಬಗ್ಗೆ ಪ್ರೀತಿ ಮತ್ತು ಬದ್ದತೆಗಳು ಇರುವುದು ಅಗತ್ಯ. ಸರಿಯಾದ ಕನ್ನಡವನ್ನು ಕಲಿಸುವುದು ಕನ್ನಡಕ್ಕೆ ಒದಗಿರುವ ಆತಂಕಗಳನ್ನು ಎದುರಿಸಲು ಅವರನ್ನು ಸಜ್ಜುಗೊಳಿಸುವುದು ಅಗತ್ಯ.
ಭಾಷೆ ಎನ್ನುವುದು ಕೇವಲ ಭಾಷೆಯಲ್ಲ. ಅದು ಸಂಸ್ಕೃತಿಯ ವಾಹಕ. ಆ ಸಂಸ್ಕೃತಿ ಉಳಿಯಬೇಕಾದರೆ ಭಾಷೆ ಉಳಿಯಬೇಕು. ನಮಗೆ ನಮ್ಮ ಸಂಸ್ಕೃತಿಯ ಬಗ್ಗೆ ಕಾಳಜಿ ಇದ್ದರೆ ಅದರ ವಾಹಕವಾದ ಭಾಷೆಯನ್ನು ಉಳಿಸುವುದರತ್ತ, ಬೆಳೆಸುವುದರತ್ತ ಸಹಜವಾಗಿಯೆ ಗಮನ ಹರಿಸುತ್ತೇವೆ.
- ರಘುನಾಥ್ ಕೃಷ್ಣಮಾಚಾರ್ – ಲೇಖಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು.
