ಸುವರ್ಣ ಯುಗದಲ್ಲಿ ಮೆರೆದ ಕಪ್ಪೆಕೆರೆ ಸುಬ್ರಾಯ ಭಾಗವತರು, ಅವರ ಸಾಧನೆಯ ಕುರಿತು ಲೇಖಕ ಗಣಪತಿ ಹೆಗಡೆ ಕಪ್ಪೆಕೆರೆ ಅವರು ಬರೆದ ಲೇಖನ, ಮುಂದೆ ಓದಿ…
ಪ್ರಸ್ತುತ ಬಡಗಿನ ಡೇರೆ ಮೇಳಗಳೆರಡರಲ್ಲಿರುವ ನಾಲ್ವರೂ ಪ್ರಧಾನ ಭಾಗವತರೂ ಸಹ ಸಶಕ್ತ ಭಾಗವತರೇ ಹೌದು. ಧ್ವನಿ ಮಾಧುರ್ಯವಿದೆ. ತಾಳದ ಹಿಡಿತವೂ ಸಹ ಇದೆ. ಸಾಕು.
ಆದರೆ ಬಡಗಿನ ಸುವರ್ಣ ಯುಗದಲ್ಲಿ ಮೆರೆದ ಒಬ್ಬ ಪ್ರಧಾನ ಭಾಗವತರ ಕುರಿತು ನಾನು ಹೇಳ ಹೊರಟಿರುವುದು. ನಿಮಗೆ ಅಮೃತೇಶ್ವರಿ ಮೇಳದಲ್ಲಿ ಊಪ್ಪುರರು ಇದ್ದರೆಂದು ಗೊತ್ತು, ಕೆರೆಮನೆಯಲ್ಲಿ ನೆಬ್ಬೂರರಿದ್ದರೆಂದೂ ಸಹ ತಿಳಿದಿರಬಹುದು. ಆದರೆ ಇವರಿಬ್ಬರ ಜೊತೆ 1966-70 ರ ಸುಮಾರಿಂದ 1990-91 ರವರೆಗೆ ಅಂದರೆ ಸರಿಸುಮಾರು 20-25ವರ್ಷಗಳ ಕಾಲ ಬಡಗಿನ ಡೇರೆ ಮೇಳಗಳ ಸ್ಟಾರ್ ಭಾಗವತರಾಗಿ ಮೆರೆದ, ಟಾಪ್ ನಾಲ್ಕೈದು ಭಾಗವತರುಗಳಲ್ಲಿ ಒಬ್ಬರಾಗಿದ್ದ ಭಾಗವತರು ನಮ್ಮ ಕಪ್ಪೆಕೆರೆ ಸುಬ್ರಾಯ ಭಾಗವತರು. ನಾನು ಇಷ್ಟೆಲ್ಲಾ ಪೀಠಿಕೆ ಹಾಕಿ ಹೊಗಳಿದ ಭಾಗವತರ್ಯಾಕೆ ನೇಪಥ್ಯ ಸೇರಿದರು?? ಯಾಕೆಂದರೆ ಸ್ವರ ಹೋದದ್ದರಿಂದ.
ನಿಮಗೆ ಆಶ್ಚರ್ಯ ಆಗಬಹುದು.. ಇಂದಿನ ಕಾಲದ ಬಹುಚರ್ಚಿತ ವಿಚಾರಗಳಾದ ಪ್ರಯೋಗ, ಆಯಾಮ ಎಂದೆಲ್ಲಾ ದೊಡ್ಡ ಮಟ್ಟದಲ್ಲಿ ಪ್ರಾರಂಭವಾದದ್ದು, ಮುನ್ನೆಲೆಗೆ ಬಂದದ್ದು ಬಹುತೇಕ ಇಡಗುಂಜಿ(ಕೆರೆಮನೆ) ಮೇಳದಲ್ಲಿ. ಆ ಮೇಳ ತಮಗೊಂದು ಸಾಂಸ್ಕೃತಿಕ ಸ್ವರೂಪ ಇದೆ ಎಂದು ಹೇಳಿಕೊಳ್ಳುತ್ತಿದ್ದರೆ ಅದಕ್ಕೆ ಬಲುದೊಡ್ಡ ಕಾರಣ 1973-1984ರ ವರೆಗಿನ ಡೇರೆ ಮೇಳವಾಗಿದ್ದಾಗ ಅದು ಆಡಿದ ಪ್ರಸಂಗಗಳು ಮತ್ತು ಅದು ಕಟ್ಟಿಕೊಂಡ ಪ್ರೇಕ್ಷಕ ವರ್ಗದ ಕಾರಣಕ್ಕೆ. ಆಗ ಎಲ್ಲಾ ಮೇಳಗಳೂ ಸಾಂಸ್ಕೃತಿಕವಾಗಿ ಶ್ರೀಮಂತವೆ ಆಗಿದ್ದವು.
ಕೆರೆಮನೆ ಮೇಳದಲ್ಲಿ ಭಾಗವತಿಕೆಯಲ್ಲಿ ಅದರಲ್ಲೂ ವಿಶೇಷವಾಗಿ ರಂಗಸೂತ್ರದಲ್ಲಿ ಕೃಷಿ ಮಾಡಿದವರು ಕಪ್ಪೆಕೆರೆ ಭಾಗವತರು.. ತನ್ನ ಸೋದರ ಮಾವ ಹಡಿನಬಾಳ ಪಟೇಲ್ ಗಣಪತಿ ಹೆಗಡೆಯವರಲ್ಲಿ ಭಾಗವತಿಕೆಯ ಕಲಿಕೆ ಪ್ರಾರಂಭಿಸಿದರೂ ಸಹ ಕೆರೆಮನೆ ಮಹಾಬಲ ಹೆಗಡೆಯವರೆ ಇವರ ಗುರುಗಳು. ನಾವುಡರ ನಾಗಶ್ರೀ ರಂಗಕ್ಕೆ ಬರುವ ಮೊದಲು ಕೆರೆಮನೆ ಮೇಳದಲ್ಲಿ ಹೊಸ್ತೋಟರ ‘ಭಾಸವತಿ’ ಎಂಬ ಪ್ರಸಂಗ ಪ್ರಚಂಡ ಯಶಸ್ಸನ್ನು ಗಳಿಸಿತ್ತು. ನೆಬ್ಬೂರರಿಗೆ ಆಗ ಸ್ವಲ್ಪ ಅಸೌಖ್ಯವಾದದ್ದರಿಂದ ಬೆಳಗಿನವರೆಗೂ ಕಪ್ಪೆಕೆರೆಯವರೇ ಭಾಗವತರಾದ ಸಂದರ್ಭ ಅನೇಕವಿತ್ತು. ಕೆರೆಮನೆ ಗಜಾನನ ಹೆಗಡೆಯವರದ್ದೆ ಭಾಸವತಿ. ಜಲಕ್ರೀಡೆ, ವನವರ್ಣನೆಗಳಲ್ಲಿ ಬಹಳಷ್ಟು ಹೊಸಕ್ರಮಗಳು ಬಂದದ್ದೂ ಸಹ ಆಗಲೆ. ನೀವು ಹೊಸ್ತೋಟರ ಕುರಿತಾದ ಪುಸ್ತಕ ಓದಿದರೆ ಈ ಮಾತು ನಿಮಗೆ ಸ್ಪಷ್ಟವಾಗುತ್ತದೆ. ಕೆರೆಮನೆ ಗಜಾನನ ಹೆಗಡೆಯವರು ಮತ್ತು ಕಪ್ಪೆಕೆರೆ ಭಾಗವತರ ಜೋಡಿ ಮೆರೆದ ಕಾಲವದು. ಗಜಾನನ ಹೆಗಡೆಯವರಿಗೆ ಕಪ್ಪೆಕೆರೆ ಯವರೆ ಭಾಗವತರಾಗಬೇಕಿತ್ತು.
ಕಪ್ಪೆಕೆರೆ ಭಾಗವತರೇ ಬಹುಶಃ ಬಹಳಷ್ಟು ಪ್ರಥಮಗಳಿಗೆ ಕಾರಣರಾದವರಿರಬಹುದು.. ಜಾನಪದ ಗೀತೆಯಾದ ‘ಶಿವನು ಭಿಕ್ಷೆಗೆ ಬಂದ’ ಅಳವಡಿಸಿದವರು ಅವರೆ. ಪೌರಾಣಿಕ ಪ್ರಸಂಗ ಭರತಾಗಮನಕ್ಕೆ ಹೊಸಪ್ರಸಂಗದ ಪದ್ಯ ‘ಬಂದು ಕಂಡನು ತನ್ನ ನಗರವ’ ಅಳವಡಿಸಿದವರು ಅವರೆ. ಬ್ರಹ್ಮ ಕಪಾಲದಲ್ಲಿ ಸ್ವಂತ ರಚನೆ ‘ಆಡಿದನಾಗ ಆಹಾ ಶಂಕರ’, ಸಂಧಾನದಲ್ಲಿ ವಿದುರನಿಗೆ ಕೃಷ್ಣ ಸ್ತುತಿಗೆ ಪೂರಕವಾಗಿ ಪದ್ಯ, ಹೀಗೆ ಹತ್ತು ಹಲವು.
ಕೆಲವು ವರ್ಷಗಳ ಕಾಲ ಅಮೃತೇಶ್ವರಿ(ಆಗ ಡೇರೆ ಮೇಳ) ಮೇಳದಲ್ಲಿ ಊಪ್ಪೂರರೊಟ್ಟಿಗಿದ್ದಾಗಲೂ ಸಹ ಕಪ್ಪೆಕೆರೆ ಭಾಗವತರು ಒತ್ತು ಭಾಗವತರಲ್ಲ. ಸರಿಯಾದ ಭಾಗವತರೆ ಆಗಿದ್ದರು. ಹೀಗಾಗಿ ಅಲ್ಲಿ ಆಡುತ್ತಿದ್ದ ಅನೇಕ ಪೌರಾಣಿಕ ಪ್ರಸಂಗಗಳಲ್ಲಿ ಅದ್ಭುತವಾದ ಹಿಡಿತವಿದೆ. ಹೀಗಾಗಿ ಕಪ್ಪೆಕೆರೆ ಭಾಗವತರು ಪ್ರಯೋಗ ಮತ್ತು ಪರಂಪರೆಯ ಸಮನ್ವಯಕಾರರಾಗಿ ಒಬ್ಬ ಅಧ್ಯಯನಕ್ಕೆ ಯೋಗ್ಯ ವ್ಯಕ್ತಿಯಾಗಿದ್ದಾರೆ.
1982-84 ರ ಸುಮಾರಿಗೆ ಇರಬಹುದು, ಕಪ್ಪೆಕೆರೆಯವರು ತನ್ನೆರಡು ಚಿಕ್ಕವರಾದ ಹೆಣ್ಣು ಮಕ್ಕಳನ್ನು ಕಳೆದುಕೊಂಡು ಮಾನಸಿಕ ಕ್ಷೋಭೆಗೊಳಗಾಗಿ ಶಾಕ್ ಟ್ರೀಟ್ಮೆಂಟ್ವರೆಗೂ ಪಡೆದು ಚೆನ್ನಾಗಿಯೇ ಇದ್ದ ಧ್ವನಿ ಕಳೆದುಕೊಂಡರು. ಆನಂತರವೂ ಸಹ 7-8 ವರ್ಷಗಳ ಕಾಲ ಡೇರೆಮೇಳಗಳಲ್ಲಿ ಭಾಗವತರಾಗಿದ್ದರು. ಬಚ್ಚಗಾರ ಮೇಳವೇ ಅವರ ಕೊನೆಯ ಡೇರೆ ಮೇಳಗಳ ತಿರುಗಾಟವಾಯಿತು. ಸ್ವರ ಮಾಧುರ್ಯ ಕಳೆದುಕೊಂಡದ್ದರಿಂದ ಪ್ರೇಕ್ಷಕರ ವಿರೋಧ ಪ್ರಾರಂಭವಾಯಿತು. ಇದಕ್ಕೆ ದುಡ್ಡು ಕೊಟ್ಟು ಬರುವ ಪ್ರೇಕ್ಷಕನ ತಪ್ಪು ಎನ್ನುವ ಹಾಗಿಲ್ಲ. ಬೆಳಗಿನವರೆಗೆ ಕರ್ಕಶ ಧ್ವನಿ ಕೇಳುವುದು ಹೇಗೆ? ಒಟ್ಟಾರೆ ನಮ್ಮ ದುರ್ದೈವ.(ಕಪ್ಪೆಕೆರೆ ಭಾಗವತರು ನನಗೆ ದೊಡ್ಡಪ್ಪ).
ಮಂದಾರ್ತಿ ರಾಮಣ್ಣ(ಕಾಳಿಂಗ ನಾವುಡರ ಒಡನಾಡಿ, ಚಂಡೆ ವಾದಕರು) ನಾಲ್ಕೈದು ವರ್ಷಗಳ ಹಿಂದೆ ಸಿಕ್ಕಾಗ ಹೇಳಿದರು.. ಮೂವತ್ತು ಮೂವತ್ತೈದು ವರ್ಷಗಳ ಹಿಂದೆಲ್ಲ ಜೋಡಿಯಾಗುತ್ತಿತ್ತು.. ಶಂಭು ಹೆಗಡೆ – ನೆಬ್ಬೂರರು, ಚಿಟ್ಟಾಣಿ – ಉಪ್ಪೂರರು, ನಾವುಡರು – ಯಾಜಿಯವರು ಹಾಗೆಯೇ ಮಹಾಬಲ ಹೆಗಡೆಯವರು ಮತ್ತು ಕಪ್ಪೆಕೆರೆಯವರು ಎಂದು. ಸ್ವತಃ ಕೆರೆಮನೆ ಮಹಾಬಲ ಹೆಗಡೆಯವರೆ ಮಂಗಳೂರಿನಲ್ಲಿ ಸಿಕ್ಕಾಗ, ‘ನನಗೆ ಸುಬ್ರಾಯನೆ ಆಗಬೇಕಿತ್ತು’ ಎಂದಿದ್ದಾರೆ.
ಇದೆಲ್ಲಾ ಇತಿಹಾಸ. ಇಂಥಹ ಮೇರು ಭಾಗವತರಿಗೆ ರಾಜ್ಯೋತ್ಸವ ಪ್ರಶಸ್ತಿ, ಪಾರ್ತಿಸುಬ್ಬ(ಪ್ರಸಂಗ ಸಹ ಬರೆದಿದ್ದಾರೆ) ಪ್ರಶಸ್ತಿ ಬರದೇ ಇರುವುದು ದುರದೃಷ್ಟಕರ. ಕಪ್ಪೆಕೆರೆ ಭಾಗವತರ ಸ್ವರ ಈಗ ಬಹಳ ಸುಧಾರಿಸಿದೆ. ದೈವಾನುಗ್ರಹ ಇದ್ದರೆ ಮತ್ತೊಮ್ಮೆ ರಂಗಸ್ಥಳ ಏರಬಹುದು. ಕಾಲದ ನಿರೀಕ್ಷೆಯಲ್ಲಿ ನಾನಿದ್ದೇನೆ.
- ಗಣಪತಿ ಹೆಗಡೆ ಕಪ್ಪೆಕೆರೆ ( ವೃತ್ತಿಯಲ್ಲಿ ಸಾಫ್ಟ್ ವೆರ್ ಇಂಜೀನಿಯರ್ ,ಹವ್ಯಾಸಿ ಬರಹಗಾರರು), ಬೆಂಗಳೂರು.