‘ಸತ್ತ ದಿನವೇ ಹೆಣದ ಸನಿಹ ಕುಳಿತುಕೊಳ್ಳಲು ಹೆದರುವರು, ಇರುವಾಗಲೇ ಎಲ್ಲ ಸಂಬಂಧಗಳು’ …ಕವಿ ಲಕ್ಷ್ಮಣ ಕೌಂಟೆ ಅವರು ಬರೆದ ಸುಂದರ ಕವನ ಜೀವನಕ್ಕೆ ಪಾಠವಾಗಬಹುದು, ತಪ್ಪದೆ ಓದಿ…
ಇರುವಾಗಲೇ ಎಲ್ಲ #ಸಂಬಂಧಗಳು
ಪತಿ ಪತ್ನಿ ಮಕ್ಕಳು ಸಹೋದರ ಸಹೋದರಿಯರು
ಪ್ರಿಯತಮ ಪ್ರಿಯತಮೆಯರು..
ಸತ್ತ ದಿನವೇ ಹೆಣದ ಸನಿಹ
ಕುಳಿತುಕೊಳ್ಳಲು ಹೆದರುವರು..
ಇರುಳಲ್ಲಾದರೇ
ಬಂಧು ಬಾಂಧವ ನೆಂಟರಿಷ್ಟರೊಂದಿಗೆ
ಹೆಣದಿಂದ ದೂರವೇ ಕುಳಿತು
ಸಣ್ಣಗೆ ಅಳುವರು
ಮಧ್ಯರಾತ್ರಿ ಮೀರಿದ ಮೇಲೆ
ಕುಳಿತಲ್ಲಿಯೇ ನಿದ್ರೆಗಿಳಿವರು
ಮಧ್ಯ ಮಧ್ಯ ಅವರಿವರ ಒತ್ತಾಯಕ್ಕೆಂಬಂತೆ
ಚಹಾ ಕಾಫಿ ಹೀರುವರು..
ಹಗಲಾಯಿತೋ
ಹೆಣಕ್ಕೊಂದು ಗತಿಗಾಣಿಸಲು
ಅವಸರಿಸುವರು
ಬರಬೇಕಿರುವವರು ಬಾರದಿದ್ದರೂ
ಕಾಯುವುದು ಸಾಕು
ಮಳೆ ಬರುವ ಹಾಗಿದೆ
ಎತ್ತಿರಿ ಹೆಣವ ಎಂದು
ಜನ ಜುಲುಮೆ ಮಾಡುವರು
ಅಂತೆಯೇ ಜೀವ ಇರುವುದರೊಳಗೆ
ಬಾಳಬೇಕು ಸಾಧ್ಯವಾದಷ್ಟು ಸುಖವಾಗಿ
ಈರ್ಷೆ ಕಲಹಾದಿಗಳ ತೊರೆಯ ಬೇಕು
ಎಲ್ಲರೊಂದಿಗೂ ಸ್ನೇಹ-ವಿಶ್ವಾಸಗಳೊಂದಿಗೆ ಬದುಕಬೇಕು
ಪ್ರೀತಿ ಹಂಚುತ್ತ ದ್ವೇಷ ಅಳಿಯುತ್ತ
ಸುಖವಾಗಿಸಿಕೊಳ್ಳ ಬೇಕು ಸಂಸಾರವ…
- ಲಕ್ಷ್ಮಣ ಕೌಂಟೆ (ಕವಿ, ಲೇಖಕರು, ಉಪನ್ಯಾಸಕರು) ಕಲಬುರಗಿ.