825 ಮೀ. ಎತ್ತರದ ಕುಂದಾದ್ರಿ ಮೋಹ – ನೆಂಪೆ ದೇವರಾಜ್

ಬೆಂಗಳೂರು ಸಮೀಪದ ನಂದಿ ಬೆಟ್ಟದಂತಹ ವಾತಾವರಣವನ್ನೂ,826 ಅಡಿಗಳ ಎತ್ತರವನ್ನೂ ಹೊಂದಿ ನೂರಾರು ಕಿರು ಬೆಟ್ಟಗುಡ್ಡಗಳನ್ನು ಪಾಲಿಸಿ ಪೋಷಿಸುತ್ತಾ ಬಂದಿರುವ ಬೆಟ್ಟವೆಂದರೆ ಈ ಕುಂದಾದ್ರಿ ಬೆಟ್ಟ. ಹೈಸ್ಕೂಲಿನಲ್ಲಿರುವಾಗ ಅದೆಷ್ಟೋ ಸಲ ಒಳದಾರಿಯಲ್ಲಿ ಈ ಬೆಟ್ಟಕ್ಕೆ ಹೋಗಿದ್ದು ಉಂಟು, ಆದರೆ ಈ ಬೆಟ್ಟ ಈಗ ಅಭಿವೃದ್ದಿಯ ಹೆಸರಲ್ಲಿ ಸಂಪೂರ್ಣ ಬಂದನದಲ್ಲಿಡಲಾಗಿದೆ ಎನ್ನುತ್ತಾ ಕುಂದಾದ್ರಿ ಬೆಟ್ಟ ಚಾರಣದ ಅನುಭವವನ್ನು ಲೇಖಕ ನೆಂಪೆ ದೇವರಾಜ್ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ಮುಂದೆ ಓದಿ…

ಹೈಸ್ಕೂಲಿನಲ್ಲಿರುವಾಗ ಅದೆಷ್ಟೋ ಸಲ ಒಳದಾರಿಯಲ್ಲಿ ಕುಂದಾದ್ರಿಗೆ ಹೋಗಿದ್ದೆ. ತೀರ್ಥ ಮುತ್ತೂರು, ಹಳ್ಳದ ಬೈಲು,ಕೊಂಗಬಳ್ಳಿ ಅರೇಹಳ್ಳಿ, ನಡಬೂರಿನ ಮೇಲಾಗಿ ಕುಂದಾದ್ರಿಯ ತಪ್ಪಲಿನ ತಟ್ಟೇ ಹಕ್ಕಲಿಗಿಳಿಯುತ್ತಿದ್ದೆವು. ಕುಂದಾದ್ರಿಯನ್ನು ಹತ್ತುವಾಗ ಗದ್ದೆ ತೋಟ,ಸರಕಲು, ಹಳ್ಳ, ಅಡೆಹಳ್ಳ, ಚಿಲುಮೆ, ದೊಡ್ಡಹಳ್ಲ, ಮುಂಡುಗ ಮತ್ತು ಕ್ಯಾದಿಗೆ ಉಡಿ, ಬಿದಿರು, ಬೆತ್ತಾದಿಗಳನ್ನು ಮುಟ್ಟುತ್ತಾ, ತೊಡೆ, ಮಂಡಿ, ಅಕ್ಕಂಡೆ, ಮೇಗಾಲುಗಳನ್ನು ಕಬಳೆ, ಕರ್ಜಿ, ಬಾಡು ಬೆಕ್ಕಿನ ಮುಳ್ಳುಗಳಿಂದ ಗರಗಸದೋಪಾದಿಯಲ್ಲಿ ಗೀರಿಸಿಕೊಳ್ಳುತ್ತಾ ಅಂಗಾಲುಗಳಿಗೆ ಕಾರೆ, ಬಿದಿರು ,ಸಂಪಿಗೆ ಮುಳ್ಳುಗಳನ್ನು ಚುಚ್ಚಿಸಿಕೊಳ್ಳುತ್ತಾ ಹೋಗುವುದು ಅನಿವಾರ್ಯವಾಗಿತ್ತು. ಅಂತಹ ದರ್ದು ಈಗಿಲ್ಲ. ಏಕೆಂದರೆ ವಾಹನಗಳ ಭರಾಟೆ ಎಲ್ಲರನ್ನೂ ,ಎಲ್ಲವನ್ನೂ ಆಲಂಗಿಸಿಕೊಳ್ಳಲು ಕಾದಿರುತ್ತವೆ. ವಾಹನಗಳ ಓಡಾಟಕ್ಕೆತಕ್ಕುದಾದ ರಸ್ತೆಗಳು ಫಳ ಪಳ ಹೊಳೆಯುತ್ತಾ ಬೆಟ್ಟಗಳನ್ನು ಕೊರೆದು ತುದಿಯವರೆಗೂ ಹೋಗಿರುತ್ತವೆ.ಬೆಂಗಳೂರು ಸಮೀಪದ ನಂದಿ ಬೆಟ್ಟದಂತಹ ವಾತಾವರಣವನ್ನೂ, 826 ಅಡಿಗಳ ಎತ್ತರವನ್ನೂ ಹೊಂದಿ ನೂರಾರು ಕಿರು ಬೆಟ್ಟಗುಡ್ಡಗಳನ್ನು ಪಾಲಿಸಿ ಪೋಷಿಸುತ್ತಾ ಬಂದಿದೆ ಈ ಕುಂದದ ಬೆಟ್ಟ. ನಲವತ್ತು ವರುಷಗಳ ಹಿಂದೆ ಅಲ್ಲಿದ್ದ ಭಟ್ಟರೊಬ್ಬರು ಬೆಳೆದಿದ್ದ ಟೊಮೆಟೊ ಹಣ್ಣಿನ ಗಾತ್ರ ಉಡುಪಿ ಬದನೆ ಕಾಯಿಯ ಗಾತ್ರವನ್ನು ಮೀರಿಸುತ್ತಿತ್ತು.ಬೆಟ್ಟ ಹತ್ತಿ ಬಸವಳಿದವರಿಗೆ ಅಲ್ಲಿದ್ದ ಭಟ್ಟರು ಸಂತೋ಼ಷ ಸಡಗರದಿಂದ ಟೊಮೆಟೋ ಹಣ್ಣಿನ ಪಾನಕ ಮಾಡಿಕೊಟ್ಟಿದ್ದೂ ಉಂಟು.

ಆ ಕಾಲದಲ್ಲಿನ ಗುಡ್ಡ ಬೆಟ್ಟ ಹತ್ತುವಿಕೆಗೆ, ಕಾಡು ಮೇಡುಗಳ ಅಲೆಯುವಿಕೆಗೆ ಪಿಕ್ನಿಕ್ಕೊ,ಟ್ರಕ್ಕಿಂಗೆಂದೋ ನಾಮಕರಣ ಮಾಡಿರಲಿಲ್ಲ.ಕಳೆದ ಹತ್ತದಿನೈದು ವರ್ಷಗಳ ಹಿಂದೆ ಕುಂದಾದ್ರಿಗೆ ರಣಭೀಕರ ಬಿಸಿಲಲ್ಲಿ ಹೋಗಿ ಇಡೀ ರಾತ್ರಿ ಉಳಿದುಕೊಂಡಿದ್ದಾಗ ನಾಡಿನ ತಂಪನ್ನೆಲ್ಲ ಹೊತ್ತುಕೊಂಡು ಬಂದು ಅ ಹುಣ್ಣಿಮೆಯ ರಾತ್ರಿ ನಮ್ಮ ಮೈಮೇಲೆ ಹೊಯ್ಯತ್ತಿದ್ದ ಕುಂದಾದ್ರಿಯ ಸೃಷ್ಟಿಗೆ ಮತ್ತೊಂದು ಸ್ಪರ್ಧಿ ಇರಲಿಕ್ಕಿಲ್ಲ.ಆ ಬೆಳದಿಂಗಳಲ್ಲಿ ಕೋಡ್ಳು ವೆಂಕಟೇಶ್, ಎಸ್.ಟಿ ದೇವರಾಜ್,ಶಿವಾನಂದ ಕರ್ಕಿ,ರಮೇಶ್ ಕರ್ಕಿ,ಶಿರನೆಲ್ಲಿ ಸುನಿಲ್ ಮುಂತಾದವರು ಚರ್ಚಿಸಿದ ಮಾತಾಡಿದ, ಹರಟಿದ ಎಷ್ಟೊಂದು ವಿಷಯಗಳು ನನ್ನನ್ನು ರೂಪಿಸಿದ್ದಿದೆ.ಆ ನಂತರವೂ ಮೂರ್ನಾಲ್ಕು ಬಾರಿ ಹೋಗಿದ್ದೇನೆ.ಒಮ್ಮೆ ಅಂದರೆ ಕಳೆದ ವರ್ಷ ಗೆಳೆಯರೊಂದಿಗೆ ಹೋದಾಗ ನಮ್ಮನ್ನು ಗೇಟು ಕಾಯುತ್ತಿದ್ದ ವ್ಯಕ್ತಿ ಒಳಗೆ ಬಿಡಲಿಲ್ಲ.ಕುಂದಾದ್ರಿ ತಲುಪಲು ಸಮಯ ನಿಗದಿ ಮಾಡಿದ್ದ. ಕುಂದಾದ್ರಿ ಎಂಬ ಘಟ್ಟದ ಅಂಚಿನ ದೈತ್ಯ ಪರ್ವತದ ಮೇಲೆ ಅಭಿವೃದ್ದಿಯ ಹೆಸರಲ್ಲಿ ಸಂಪೂರ್ಣ ಬಂದನದಲ್ಲಿಡುವ ಮತ್ತು ಅನಧಿಕೃತವಾಗಿ ಅಧಿಪತ್ಯ ಸಾಧಿಸುವ ಹುನ್ನಾರದ ವಾಸನೆ ಮೂಗಿಗೆ ಬಡಿದಾಕ್ಷಣ ಈತನ ಮಾತಿಗೆ ಮರು ಮಾತಾಡದೆ ಸುಮ್ಮನಿರಲಾದೀತೆ?ಅರಣ್ಯ ಇಲಾಖೆಯೋ,ಲೊಕೋಪಯೋಗಿ ಇಲಾಖೆಯೋ ಕುಂದಾದ್ರಿಗೆ ಹೋಗುವ ಪ್ರವಾಸಿಗರ ಮೇಲೆ ನಿಯಂತ್ರಣ ಹೇರಿದರೆ ಸಹಿಸಿಕೊಳ್ಳಬೇಕಾಗಬಹುದು. ಆದರೆ ಖಾಸಗಿ ವ್ಯಕ್ತಿಗಳು ಕುಂದಾದ್ರಿಯ ರಕ್ಷಕರೆಂಬ ಬಿರುದಾಂಕಿತರಾಗುತ್ತಾ ಸ್ಥಳೀಯ ಮಟ್ಟದಲ್ಲಿ ಒಡೆದಾಳುವ ದಾಳಗಳನ್ನುಪಯೋಗಿಸುತ್ತಾ ಹೋಗುತ್ತಿರುವ ಕತೆಗಳು ಬಹು ರೋಚಕವಾಗಿಯೆ ಹರಡುತ್ತಿದ್ದುದು ಗೊತ್ತಿತ್ತೆನ್ನಿ.

ಒಳಗೆ ಬಿಡಲು ಸಾಧ್ಯವಿಲ್ಲೆಂದು ದಬಾಯಿಸುತ್ತಿದ್ದ ಗೇಟ್ ಕೀಪರ್ಗೆ ಕುಂದಾದ್ರಿ ಮತ್ತು ನಮ್ಮ ನಡುವಿನ ಸಂಬಂಧಗಳನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಿದರೂ ನಮ್ಮ ಮೇಲೆ ಪ್ರೀತಿ ಸಹಾನುಭೂತಿಯ ಲವಲೇಶವನ್ನೂ ತೋರಿಸದಾದ. ಕುಂದಾದ್ರಿಯ ಹೆಬ್ಬಂಡೆ, ಕೊಳಗಳ ಆ ಎತ್ತರಕ್ಕೆ ಜಿಗಿ ಜಿಗಿದು ರಣಕೇಕೆಯೊಂದಿಗೆ ಹಾರಿ ಬರುತ್ತಿದ್ದ ಅದರ ತಳಿರ್ಗಾಳಿ ನಮ್ಮನ್ನು ಅಲ್ಲಿಗೆ ಕರೆಸಿಕೊಳ್ಳದಿದ್ದೀತೆ?. ನನ್ನ ಮತ್ತು ಸಂಗಡಿಗರ ವಾದದ ಸರಣಿಗಳು ಕುಂದಾದ್ರಿ ಕಾಯುವವನ ಮರ್ಮಾಂಗಕ್ಕೆ ತಾಗ ಹತ್ತಿತು. ವಾದಕ್ಕೆ ಮನಸೋತೋ ಅಥವಾ ಇವರುಗಳಿಗೆ ಕುಂದಾದ್ರಿಯ ಒಳ ಹೋಗಗೊಡದಿದ್ದರೆ ಇಲ್ಲದ ತರಲೆಗಳನ್ನು ಮೈಮೇಲೆಳೆದುಕೊಳ್ಳಬೇಕಾಬಹುದೆಂಬ ಬಹು ದೂರದ ಆತಂಕವೊಂದಕ್ಕೆ ಬೆದರಿಯೋ ಏನೋ ಒಳಹೋಗಲು ಅನುಮತಿ ಇತ್ತ. ನಮ್ಮ ವಾಹನ ತಿರುವುಗಳನ್ನೆಲ್ಲ ಭೇದಿಸಿ ಮೇಲೆರುತ್ತಿದ್ದಂತೆಯೆ ಬೆಟ್ಟದ ಮೇಲಿನಿಂದ ಕೆಳಕ್ಕೆ ವಾಹನವೊಂದು ಧಾವಿಸಿ ನಮಗೆದುರಾಯಿತು.ಅದರೊಳಗಿದ್ದ ಜನರು ವಿವಿಧ ಅನುಮಾನಗಳಿಗೆ ಎಡೆಮಾಡಿ ಕೊಡುವಂತಿದ್ದರು. ನಮ್ಮಗಳ ಮನಸ್ಸೊಳಗೆ ತೂರಿದ ಅನುಮಾನಕ್ಕೂ, ಗೇಟೊಂದನ್ನು ಕಾಯುವ ವ್ಯಕ್ತಿ ನಮ್ಮೊಂದಿಗೆ ನಡೆಸಿದ ವಾಗ್ವಾದಕ್ಕೂ ಇರುವ ಸಂಬಂಧಗಳು ಒಂದೊಂದಾಗಿ ನಮ್ಮ ನಡುವೆ ವ್ಯಾಖ್ಯಾನಗೊಳ್ಳತೊಡಗಿದವು.

ನಮ್ಮೂರಿನ ಹತ್ತಾರು ಪುಟಾಣಿಗಳೂ ಮತ್ತು ಅವರ ತಾಯಂದಿರುಗಳನ್ನೆಲ್ಲ ಒಂದುಗೂಡಿಸಿ ಇಂದು ಬೆಳಿಗ್ಗೆ ಆರಕ್ಕೆ ಎದ್ದು ನಾನೂ, ನನ್ನ ಮಡದಿಯೂ,ಮಗನೂ ಸೇರಿದಂತೆ ಒಟ್ಟು ಇಪ್ಪತ್ತೆರಡು ಪುಟಾಣಿಗಳೊಂದಿಗೆ ಹೊರಟೆವು.ಲಕ್ಷಾಂತರ ವರ್ಷಗಳಿಂದ ಮಳೆಗಾಳಿಯ ದಾಳಿಗೆ ಮೈಯೊಡ್ಡಿ ಕದಲದೆ, ಬೆದರದೆ ಕೂತಿರುವ ಕುಂದಾದ್ರಿಯ ಮೇಲೆ ಅಪಾರ ಪ್ರಮಾಣದ ಮನುಜ ಕುಲದ ಕಣ್ಣು ಬಿದ್ದಿದೆ ಎಂಬುದಕ್ಕೆ ಸಾಕ್ಷಿಯಾಗಿ ಇಂದು ನೆತ್ತಿಯ ಮೇಲೆ ಕಾರುಗಳು ನಿಂತಿದ್ದವು.ಕುಂದಾದ್ರಿಯ ಸುತ್ತ ಮುತ್ತಲಿನ ಹೋಟೆಲು,ಹೋಂಸ್ಟೇ,ರೆಸಾರ್ಟುಗಳಲ್ಲಿ ತಂಗಿದ್ದವರನೇಕರು ಸೂರ್ಯನಿಗಾಗಿ ನೆತ್ತಿಯ ಮೇಲೆ ನಿಂತು ಕಾಯುತ್ತಿದ್ದರು.ಆದರೇನು ಮಾಡುವುದು. ಸೂರ್ಯನ ಸಣ್ಣ ಕಿರಣದ ಬಿಂಧುವೂ ಅಲ್ಲಿ ಕಾಣಲಿಲ್ಲ..ಕುಂದಾದ್ರಿಯ ಕೆಳಗಿನ ವಿಸ್ತಾರ ಬಯಲಲ್ಲಿದ್ದ ಗದ್ದೆ, ತೋಟ ಹಡ್ಡೆ , ಹಂಕಲುಗಳೂ, ಆಗುಂಬೆ -ಕುದುರೆಮುಖದವರೆಗೆ ಹಬ್ಬಿದ್ದ ಅಭೇದ್ಯ ವೃಕ್ಷ ಸಂಕುಲಗಳೂ ಕರಿ ಮಂಜಿನಿಂದಾವೃತವಾಗಿ ನಮ್ಮನ್ನೆಲ್ಳ ಆಟವಾಡಿಸತೊಡಗಿದ್ದವು.ಕರಿಮೋಡಗಳು ಭಯಭೀತರನ್ನಾಗಿಸಿ ಈಗಲೋ ಆಗಲೋ ಧೋ…ಎಂಬ ಭಯಂಕರ ಸದ್ದುಗಳಿಂದ ಪ್ರಕೃತಿ ಪ್ರಿಯತೆ ಸೋಗಿನ ಆಧುನಿಕರನ್ನು ಓಡೋಡಿಸಿ ಗೂಡು ಸೇರಿಸಲು ರೆಡಿಯಾದ ವಾತಾವರಣವಿತ್ತು. ಬೆಳಗಿನ ತಂಗಾಳಿಗೆ ಮೈ ಒಡ್ಡಿ ಆಸ್ವಾದಿಸಬೇಕೆಂದಿದ್ದವರುಗಳನ್ನು ಉರಿ ಸೆಖೆಯ ಅಪ್ಪುಗೆ ಬೇಸರಾಗಿಸಿತ್ತು.ನಮ್ಮ ಜೊತೆ ಬಂದಿದ್ದ ಹಾಗೂ ಬೆಂಗಳೂರು,ಮೈಸೂರು,ಬೆಳಗಾವಿ ಮುಂತಾದೆಡೆಗಳಿಂದ ಬಂದಿದ್ದ ಜನರು ಕರೆ ತಂದಿದ್ದ ಮಕ್ಕಳು ಮಾತ್ರ ಪ್ರಕೃತಿಯ ಒಡಲನ್ನು ಸೇರಿ ಮುಗ್ಧ ಮನೋಹರ ನೋಟ ಬೀರುತ್ತಾ ವಾತಾವರಣವನ್ನು ಒಂಚೂರು ಛೇತೋಹಾರಿಗೊಳಿಸಿದ್ದವು.

ನಮ್ಮೂರ ಮಕ್ಕಳ ಜೊತೆ ನಮ್ಮೂರ ಅಂಚಿನಲ್ಲಿರುವ ಕಲ್ಲು ಗುಡ್ಡ, ಕರಿಗುಡ್ಡ, ಅಡ್ಡಗುಡ್ಡ, ನವಿಲು ಕಲ್ಲು ಗುಡ್ಡಗಳಿಗೆ ಭೆಟಿ ನೀಡಿ ಮುಗಿಸಿದ್ದೆವು. ಮುಳ್ಳಯ್ಯನಗಿರಿ,ನಂದಿ ಬೆಟ್ಟ,ಕೊಡಚಾದ್ರಿಗಳ ರೇಂಜಿನ ಡೆಕೋರಾಮ್ ಸೃಷ್ಟಿಸಿ ಮಕ್ಕಳನ್ನೊಂಚೂರು ಪ್ರಕೃತಿ ಜೊತೆ ಅನುಸಂಧಾನಿಸಲು ಅನುವು ಮಾಡಿ ಕೊಡುವ ಭಾಗವಾಗಿ ಇಂದು ಬೆಳಿಗ್ಗೆ ಬೆಳಿಗ್ಗೆಯೆ ನಮ್ಮೂರಿನಿಂದ ಸ್ವಲ್ಪ ಮಟ್ಟಿನ ದೂರವೇ ಎಂದು ಹೇಳ ಬಹುದಾದ ಕುಂದಾದ್ರಿಗೆ ಹೋಗಿಬಂದೆವು.ಈ ಹಿಂದಿನ ಸಣ್ಣ ಪುಟ್ಟ ಗುಡ್ಡ ಬೆಟ್ಟಗಳನ್ನು ನೋಡಿ ಮನತುಂಬಿಸಿಕೊಂಡು ತಮ್ಮ ತಾಯಂದಿರ ಬಳಿ ಪದೆ ಪದೆ ತಮ್ಮ ಕುಷಿಯನ್ನು ಹಂಚಿಕೊಂಡಿದ್ದರಿಂದ ಇವತ್ತಿನ ಕಿರು ಪ್ರವಾಸಕ್ಕೆ ಮಕ್ಕಳ ತಾಯಂದಿರು ಕೂಡಾ ಬಂದದ್ದು ವಿಶೇಷವೇ ಸರಿ.

ಕುಂದಾದ್ರಿಯನ್ನು ನಮ್ಮೂರಿನ ಒಳದಾರಿಯಲ್ಲಿ ಹೊಗುವಾಗಿದ್ದ ಖುಷಿ ಹಾಗೂ ದುಃಖದ ನೆನಪುಗಳು ಮಾಸಿಹೋಗದೆ ಹಾಗೇ ಉಳಿದಿವೆ.ಆದರೆ ಕಾರಿನಲ್ಲೋ ಜೀಪಿನಲ್ಲೋ ಹೋದಾಗಿನ ನೆನಪುಗಳು ಅಚ್ಚಳಿಯದೆ ಉಳಿಯದಿರಲು ಕಾರಣವೇನೆಂದು ಪ್ರಶ್ನಿಸಿಕೊಂಡು ಸುಮ್ಮನಾಗುತ್ತೇನೆ.ಗುತ್ತಿ ತಿಮ್ಮಿಯರು ಉಳಿದುಕೊಂಡಿದ್ದ ಹುಲಿಕಲ್ಲು ನೆತ್ತಿ ಯಾವುದೆಂದು ಪದೆ ಪದೆ ಕುಂದಾದ್ರಿಯ ಮೇಲೆ ನಿಂತು ಹುಡುಕುತ್ತಲೆ ಇರುತ್ತೇನೆ.


  • ನೆಂಪೆ ದೇವರಾಜ್  (ಲೇಖಕರು, ಪತ್ರಕರ್ತರು), ತೀರ್ಥಹಳ್ಳಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW