ಬೆಂಗಳೂರು ಸಮುದಾಯದ ಹಿರಿಯ ಕಲಾವಿದೆ ಶ್ರೀಮತಿ ಲಕ್ಷ್ಮಿ ಚಂದ್ರಶೇಖರ್ ಅವರ ಜನ್ಮದಿನ. ಅವರ ಜನ್ಮದಿನದ ಅಂಗವಾಗಿ ರಂಗಸಂಘಟಕ, ರಂಗಕರ್ಮಿ ಗುಂಡಣ್ಣ ಚಿಕ್ಕಮಗಳೂರು ಅವರು ಲಕ್ಷ್ಮಿ ಚಂದ್ರಶೇಖರ್ ಅವರ ರಂಗಭೂಮಿ ಸೇವೆಯ ಕುರಿತು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…
ಲಕ್ಷ್ಮಿ ಅವರು ಸಮುದಾಯದ ಜೊತೆ ಗೆಲಿಲಿಯೋ ನಾಟಕದಿಂದ ಗುರುತಿಸಿಕೊಂಡರು. ಇದಕ್ಕೂ ಮುನ್ನ ಅವರು ಮೈಸೂರಿನ ಖ್ಯಾತ ರಂಗತಂಡ ಸಮತೆಂತೋ ಜೊತೆಗೆ ಚಟುವಟಿಕೆಗಳನ್ನು ಮಾಡುತಿದ್ದರು.
ಗೆಲಿಲಿಯೋ ನಂತರದಲ್ಲಿ ಕುರಿ, ಕತ್ತಲೆ ದಾರಿ ದೂರ, ಸಂಸ್ಕಾರ, ತಾಯಿ (ಎರಡನೇ ಆವೃತ್ತಿ) ಹುತ್ತವ ಬಡಿದರೆ (ಮರು ಪ್ರದರ್ಶನಗಳು) ಮ್ಯಾಕ್‌ಬೆತ್, ದಂಗೆಯ ಮುಂಚಿನ ದಿನಗಳು,ಮಾದಾರಿ ಮಾದಯ್ಯ, ಈ ಕೆಳಗಿನವರು, ಮುಂತಾದ ಹಲವು ಪ್ರಮುಖ ನಾಟಕಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದರು.
ಪ್ರಸನ್ನ, ಎಮ್ ಎಸ್ ಸತ್ಯು, ಟಿ ಎನ್ ನರಸಿಂಹನ್, ದೇವೇಂದ್ರ ರಾಜ್ ಅಂಕೂರ್, ಬಸವಲಿಂಗ್ಯ ಬಸೂ, ಎನ್ ಎ ಸೂರಿ, ಶಶಿಧರ ಭಾರೀಘಾಟ್ ಮುಂತಾದ ರಾಷ್ಟ್ರೀಯ ನಿರ್ದೇಶಕರುಗಳ ನಿರ್ದೇಶನದಲ್ಲಿ ಅಭಿನಯಿಸಿದವರು.

ಸ್ವಲ್ಪ ಕಾಲ ಬೆಂಗಳೂರು ಸಮುದಾಯದ ಅಧ್ಯಕ್ಷ ರಾಗಿ ಬೆಂಗಳೂರು ಸಮುದಾಯದ ರಂಗ ಚಟುವಟಿಕೆಗಳಿಗೆ ಮಾರ್ಗದರ್ಶನ ನೀಡಿದವರು.
ಅವರು ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತಿದ್ದ ಎನ್ ಎಮ್ ಕೆ ಆರ್ ವಿ ಕಾಲೇಜಿನ ವಿದ್ಯಾರ್ಥಿನಿಯರಿಗೆ ರಂಗಭೂಮಿ ಪರಿಚಯ ಮಾಡಿಸಿದ ಯಶಸ್ಸು ಲಕ್ಷ್ಮಿ ಅವರಿಗೆ ಸಲ್ಲಬೇಕು. ಅವರ ಕಾಲೇಜಿನ ಥಿಯೇಟರ್ ಕ್ಲಬ್ ನಿಂದ ಸುಮಾರು ವಿದ್ಯಾರ್ಥಿನಿಯರು ಬೆಂಗಳೂರು ನಗರದ ರಂಗಚಟುವಟಿಕೆಗಳಲ್ಲಿ, ಪಾಲ್ಗೊಂಡು; ಭಾರತ ಯಾತ್ರಾ ಕೇಂದ್ರದ ಬೆಂಗಳೂರು ವಿಶ್ವವಿದ್ಯಾಲಯದ ಅಂತರ ಕಾಲೇಜು ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸಿ, ಕಾಲೇಜಿಗೆ ಹಲವು ವರ್ಷ ಪಾರಿತೋಷಕಗಳನ್ನು ಪಡೆದಿದ್ದಾರೆ. ರಂಗಭೂಮಿಯ ಹಲವು ಕಿರಿಯ ನಿರ್ದೇಶಕರುಗಳನ್ನು ಕಾಲೇಜಿಗೆ ಆಹ್ವಾನಿಸಿ, ಅವರುಗಳಿಂದ ನಾಟಕಗಳನ್ನು ನಿರ್ದೇಶಿಸಲು ಅವಕಾಶ ಮಾಡಿಕೊಟ್ಟು ಕಾಲೇಜು ರಂಗಭೂಮಿಯ ಚಟುವಟಿಕೆಗಳನ್ನು ಶ್ರೀಮಂತ ಗೊಳಿಸಿದ್ದಾರೆ.
ಗೆಲಿಲಿಯೋ ಕುರಿತು ಇಂಗ್ಲೀಷ್ ಭಾಷೆಯಲ್ಲಿ ಬರವಣಿಗೆ ಮಾಡಿ ಪುಸ್ತಕವನ್ನು ಪ್ರಕಟಿಸಿದ್ದಾರೆ.
ಸಮುದಾಯದಿಂದ ಬಿಡುವು ಪಡೆದುಕೊಂಡ ಲಕ್ಷ್ಮಿ ಅವರು ನಂತರ, ತಮ್ಮದೇ ರಂಗ ತಂಡ ಕ್ರಿಯೇಟಿವ್ ಥಿಯೇಟರ್ ಅನ್ನು ಸ್ಥಾಪಿಸಿ, ಅವರೇ ಅಭಿನಯಿಸಿದ ಏಕವ್ಯಕ್ತಿ ಪ್ರದರ್ಶನ ಗಳನ್ನೂ ಹಾಗೂ ಹಲವು ಕಲಾವಿದರನ್ನು ಒಳಗೊಂಡು ನಾಟಕ ಪ್ರದರ್ಶನಗಳನ್ನೂ ನೀಡಿದ್ದಾರೆ. ದೇಶ-ವಿದೇಶದಲ್ಲಿ ಪ್ರದರ್ಶನಗಳನ್ನು ನೀಡಿ, ತಮ್ಮ ಅಭಿನಯವನ್ನೂ, ರಂಗಭೂಮಿ ಬಗ್ಗೆ ತಮಗೆ ಇರುವ ವಿಭಿನ್ನ ರೀತಿಯ ಚಿಂತನೆಗಳನ್ನೂ ಪರಿಚಯಿಸಿದ್ದಾರೆ; ಪರಿಚಯಿಸಿಕೊಂಡಿದ್ದಾರೆ. ಮಹಿಳಾ ಜಾಗೃತಿ, ಪರಿಸರ ವಿಜ್ಞಾನ, ಮುಂತಾದ ಪ್ರಮುಖ ಸಾಮಾಜಿಕ ಕಳಕಳಿಯ ನಾಟಕಗಳ ಜೊತೆಗೆ, ಡಾ.ಚಂದ್ರಶೇಖರ ಕಂಬಾರ ಅವರ ಸಿಂಗಾರವ್ವ ಮತ್ತು ಅರಮನೆ ಕಾದಂಬರಿಯನ್ನು ಏಕವ್ಯಕ್ತಿ ಪ್ರದರ್ಶನವಾಗಿ ರೂಪಾಂತರಿಸಿ, ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಅಭಿನಯಿಸಿ ವಿಶಿಷ್ಟ ಅನುಭವದ ಪ್ರದರ್ಶನ ನೀಡಿದ್ದಾರೆ. ಅದೇ ರೀತಿ ಯಲ್ಲಿ ವಿಶ್ವರಾಜ್ ಅವರು ನಿರ್ದೇಶಿಸಿದ ಶೇಕ್ಸ್‌ಪಿಯರ್ ನ ಶ್ರೀಮತಿ ನಾಟಕ ಸಹ ಲಕ್ಷ್ಮಿ ಅವರ ಅಭಿನಯಕ್ಕೆ ಹೆಸರು ತಂದಿದೆ.…

ಸಮುದಾಯದ ಜೊತೆಗೆ ಕೇವಲ ಲಕ್ಷ್ಮಿ ಮಾತ್ರ ಅಲ್ಲದೆ, ಪ್ರೊ.ಬಿ ಕೆ ಚಂದ್ರಶೇಖರ್ ಮತ್ತು ಅವರ ಮಕ್ಕಳನ್ನೂ ಸಹ ಒಂದು ಕಾಲದಲ್ಲಿ ಒಳಗೊಂಡಿತ್ತು. ಪ್ರೊ. ಬಿ ಕೆ ಸಿ ಅವರ ಕೊಡುಗೆ, ಸಮುದಾಯಕ್ಕೆ ಅನನ್ಯ.
ಲಕ್ಷ್ಮಿ ಚಂದ್ರಶೇಖರ್ ಅವರಿಗೆ ಹುಟ್ಟು ಹಬ್ಬದ ಈ ವಿಶೇಷ ದಿನದಲ್ಲಿ ಸಮುದಾಯ ಬೆಂಗಳೂರಿನ ಪರವಾಗಿ, ನನ್ನ ವ್ಯಯಕ್ತಿಕ ನೆಲೆಯಲ್ಲಿ ಹಾರ್ದಿಕ ಶುಭಾಶಯಗಳು… ಅಭಿನಂದನೆಗಳು..
ರಂಗಭೂಮಿ ಚಟುವಟಿಕೆಗಳು ಮತ್ತು ರಂಗ ಚಿಂತನೆಗಳು ತಮ್ಮಿಂದ ಮತ್ತಷ್ಟು ವರ್ಷಗಳು ಮುಂದುವರೆಯಲಿ…
- ಗುಂಡಣ್ಣ ಚಿಕ್ಕಮಗಳೂರು – ರಂಗಸಂಘಟಕ, ರಂಗಕರ್ಮಿ, ಬೆಂಗಳೂರು.
