ಜ್ಯೋತಿ ಕುಮಾರ್.ಎಂ(ಜೆ.ಕೆ.) ಅವರು ಐದು ಪುಟ್ಟ ಕತೆಗಳನ್ನ ಬರೆದಿದ್ದಾರೆ. ಒಂದು ಕತೆಯಂತೂ ಕೇವಲ ಎರಡೇ ಸಾಲಿನಲ್ಲಿ ಮುಗಿಯುತ್ತದೆ. ಇದೊಂದು ಕತೆಗಾರನ ಹೊಸ ಪ್ರಯತ್ನ. ತಪ್ಪದೆ ಮುಂದೆ ಓದಿ…
ಅವರಿಬ್ಬರೂ ಜನ್ಮತಃ ಪ್ರೇಮಿಗಳು. ಅದಕ್ಕೆ ಪೂರಕವಾಗಿದ್ದು ಅವರಿಬ್ಬರ ಸಂಬಂಧ. ಅವನು ಅವಳ ಸೋದರ ಮಾವ, ಮತ್ತವಳು ಮುದ್ದಿನ ಸೊಸೆ. ಅವನು ಬೆಂಗಳೂರಿನ ಪ್ರಸಿದ್ದ ವಿದೇಶಿ ಸಾಫ್ಟ್ ವೇರ್ ಕಂಪನಿಯ ಟೆಕ್ಕಿ. ಅವಳು ಹೆಗ್ಗೋಡಿನ ಖಾದಿ ಉದ್ದಿಮೆಯಲ್ಲಿ ಮ್ಯಾನೇಜರ್. ಅವನು ವಿದೇಶಿ, ಅವಳು ಅಪ್ಪಟ ಸ್ವದೇಶಿ. ವಿದೇಶಿ-ಸ್ವದೇಶಿ ವಿಷಯವೇ ಅವರಿಬ್ಬರ ಆ ಜನ್ಮ ಪ್ರೀತಿಯನ್ನು ಸುಮಾರು ಒಂದು ವರ್ಷದಿಂದೀಚೆಗೆ, ಬ್ರೇಕಪ್ ರೇಂಜಿಗೆ ತಂದು ನಿಲ್ಲಿಸಿತ್ತು.
ಅದೊಂದಿನ ರಾತ್ರಿ ಅವಳಿಗೆ ಅವನ ನೆನಪಿನ ಪುಷ್ಕರಣಿಯಿಂದ ಹೊರ ಬರಲು ಸಾಧ್ಯವೇ ಆಗಲಿಲ್ಲ. ಯಾವುದಕ್ಕೂ ಸೇಫ್ಟಿಗೆ ಅಂತ ಇರಲಿ ಎಂದುಕೊಂಡು, “ಹಾಯ್” ಎಂಬ ಮೆಸೇಜ್ ಅನ್ನು, ರಾತ್ರಿ ಹನ್ನೆರೆಡೂವರೆಗೆ ವಾಟ್ಸಪ್ ಕಳುಹಿಸಿದ್ದಳು. ಕೆಲಸದಲ್ಲಿ ನಿರತನಾಗಿದ್ದ ಅವನು “ಹಲೋ” ಎಂದು ರಿಪ್ಲೇ ಮಾಡಿದ್ದ, ಆ ರಾತ್ರಿ ಅವರಿಬ್ಬರ ಬೆಡ್ ರೂಮಿನ ಲೈಟ್ ಗಳು ಆಫ್ ಆದರೂ, ಅವರುಗಳ ಮೊಬೈಲಿನ ಇಂಟರ್ನೆಟ್ ಆಫ್ ಆಗಲಿಲ್ಲ.
ಅದರ ಮುಂದಿನ ವಾರಕ್ಕೆ ಲಾಂಗ್ ವೀಕೆಂಡ್ ಬಂದು ಕೂತಿತ್ತು. ಒಂದು ವರ್ಷಕ್ಕೆ ಪ್ರೇಮದ ಬರದ ಬೇಗೆ ಇಬ್ಬರನ್ನೂ ಚೆನ್ನಾಗಿ ಅಣಿದಿತ್ತು. ಇನ್ಫರ್ಮೇಶನ್ ಶೇರ್ ಮಾಡಿಕೊಳ್ಳದೇ, ಇಬ್ಬರೂ ಶುಕ್ರವಾರ ಬೇಗನೆ ಎದ್ದು, ಒಬ್ಬರಿಗೊಬ್ಬರು ಸರ್ಪ್ರೈಸ್ ಕೊಟ್ಟು ಕೊಳ್ಳಲು ನಿರ್ಧರಿಸಿ, ವಿರುದ್ಧ ದಿಕ್ಕಿನಲ್ಲಿ ಹೊರಟು ನಿಂತರು.
ಅವನು ಆರ್ .ಆರ್. ನಗರದಿಂದ ಮೆಜೆಸ್ಟಿಕ್ಗೆ ಬಂದವನೇ, ಅವಳಿಗೆ ಇಷ್ಟವಾದ ಡೈರಿ ಮಿಲ್ಕ್ ಚಾಕ್ಲೇಟ್ ಗಿಫ್ಟ್ ಬಾಕ್ಸ್ ಖರೀದಿಸಿ, ಶಿವಮೊಗ್ಗಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್ಸಿಡಿದು, ಟಿಕೇಟ್ ತೆಗೆಸಿ ಅವಳನ್ನೇ ನೆನೆಯುತ್ತಾ ಕಣ್ಮುಚ್ಚಿದ.
ಅವಳು, ಹೆಗ್ಗೋಡಿನಿಂದ ಮೊದಲೇ ಬುಕ್ ಮಾಡಿಕೊಂಡಿದ್ದ ಕ್ಯಾಬ್ ಹಿಡಿದು, ಶಿವಮೊಗ್ಗ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡಿಗೆ ಬಂದು ಬಸ್ ಹತ್ತಿ,ತನ್ನ ತೊಡೆಯ ಮೇಲೆ ಕೂತಿದ್ದ ಅವನಿಗಿಷ್ಟವಾದ ಬ್ಲಡ್ ರೆಡ್ ಕಲರಿನ ಆಫ್ ಶರ್ಟ್ ಅನ್ನು ಮೃದುವಾಗಿ ಸವರುತ್ತಾ,ಅವನ್ನನ್ನು ನೆನೆದು ಕಣ್ಣೀರಾದಳು.
ಆ ದಿನ ಬೆಳಿಗ್ಗೆ ಒಂಭತ್ತು ಗಂಟೆಯ ಸುಮಾರಿಗೆ,ಸುದ್ದಿ ಮಾಧ್ಯಮಗಳಲ್ಲಿ “ಬಾಣಾವರದ ಬಳಿ, ಎರಡೂ ಕೆ.ಎಸ್.ಆರ್.ಟಿ.ಸಿ ಬಸ್ಸುಗಳ ಮುಖಾಮುಖಿ ಢಿಕ್ಕಿ,ಇಪ್ಪತ್ತಕ್ಕೂ ಹೆಚ್ಚು ಜನರ ಸಾವು, ಅನೇಕ ಜನರಿಗೆ ಗಾಯ” ಎಂಬ ಸುದ್ದಿ ರಾರಾಜಿಸಿತು. ಆದರೆ,ಇಬ್ಬರು ಅಪ್ಪಟ ಪ್ರೇಮಿಗಳ ಧಾರುಣ ಅಂತ್ಯ ಎಂಬ ವಿಷಯ ಎಲ್ಲಿಯೂ ಸುದ್ದಿಯಾಗಲಿಲ್ಲ.
***
ಶ್ವೇತ ಗುಲಾಬಿ
ವಿದ್ಯಾರ್ಥಿ ಭವನ್ ಬಸ್ಟಾಪಿನಲ್ಲಿ ಅವರಿಬ್ಬರೂ ಇಳಿದಿದ್ದರು. ಅವಳನ್ನು ಮುಂದೆ ಹೋಗಲು ಬಿಟ್ಟು, ನಿಧಾನವಾಗಿ ಹಿಂಬಾಲಿಸಲು ಪ್ರಾರಂಭಿಸಿದ. ಅವಳು ಎ.ವಿ.ಕೆ. ಪಿ ಯು ಕಾಲೇಜಿನ ರಾಣಿ. ಮಾಡ್ ಗರ್ಲ್. ಇವನೋ ಮೋತಿ ವೀರಪ್ಪ ಸರ್ಕಾರಿ ಪಿ ಯು ಕಾಲೇಜಿನ ಪ್ರಾಡೆಕ್ಟ್ ದೊಗಳೆ ಫ್ಯಾಂಟ್, ಹವಾಯ್ ಚಪ್ಪಲಿ,ಮಾಮೂಲಿ ಅಂಗಿ,ಕ್ಲೀನ್ ಶೇವ್ಡ್ ,ಮೊಡವೆಗಳಿಂದ ತುಂಬಿದ ಮುಖ,ಹುಬ್ಬಿನವರೆಗೂ ಇಳಿ ಬಿದ್ದ ಕೂದಲು, ಫೇಲಾದಂತೆ ಪಾಸಾದ ಮೊದಲ ಪಿ.ಯು.ಸಿ.ಸೈನ್ಸ್ ವಿದ್ಯಾರ್ಥಿ.
ಬ್ಲೀಚ್ಡ್ ಹೇರ್ಸ್, ಸಲ್ವಾರ್ ಕಮೀಜ್, ಹೈ ಹೀಲ್ಡ್ಸ್, ಹೆಸರಿನಂತೆ ಶ್ವೇತ ವರ್ಣದ ಮೊದಲ ಪಿ.ಯು.ಸಿ. ಹುಡುಗಿ ಅವಳು. ಇಬ್ಬರೂ ಒಂದೆ ಹಳ್ಳಿಯವರು. ಅಂದು ಅವಳ ಬರ್ತ್ ಡೇ.ಚೆಂದದ ಒಂದು ಗ್ರೀಟಿಂಗ್ ಕಾರ್ಡ್,ಬರ್ತ್ ಡೇ ವಿಶಷ್, ಕೊನೆಯಲ್ಲಿ ಒಂದು “ಐ ಲವ್ ಯೂ ಶ್ವೇತಾ” ಎಂಬ ಲೈನ್,ಜೊತೆಗೊಂದು ವೈಟ್ ರೋಸ್.
ಸ್ವಲ್ಪ ದೂರ ಹಿಂಬಾಲಿಸಿ, ಶ್ವೇತ ಶ್ವೇತಾ… ಎಂದು ಕರೆದ. ಅವಳ ನಡಿಗೆ ಬಿರುಸಾಯಿತು. ಎಷ್ಟು ಕರೆದರೂ ನೋ ರೆಸ್ಪಾನ್ಸ್! ಅಂದು ಅವನು ಪ್ರಪೋಸ್ ಮಾಡಬಹುದೆಂದು ಮೊದಲೇ ಅಂದಾಜಿಸಿದಂತೆ ಕಾಣುತ್ತಿದ್ದಳು. ಅವಳಿಗೆ ಅವನಂಥವನು ಬೇಕೇ ಆಗಿರಲಿಲ್ಲ.
ತುಂಬ ದೂರ ಹಿಂಬಾಲಿಸಿದ ಅವನಿಗೆ ಅರಿವಾಯಿತು “ಅವಳಿಗೆ ನನ್ನ ಪ್ರೀತಿ ಬೇಕಾಗಿಲ್ಲ, ಅವಳಿಗೆ ಬೇಕಾಗಿರುವುದು ನನ್ನ ಬಳಿ ಇಲ್ಲ”. ಅವನ ಕಣ್ಣಾಲಿಗಳು ತುಂಬಿ ಬಂದವು, ನೆಲಕ್ಕೆ ಜಾರಿದ ಶ್ವೇತ ಗುಲಾಬಿ ನಿಧಾನಕ್ಕೆ ತನ್ನ ಬಣ್ಣ ಕಳೆದುಕೊಳ್ಳಲು ಪ್ರಾರಂಭಿಸಿತು.
***
ಬೇಟೆ
ಅವನು, ಅವಳ ಸಹಪಾಠಿ. ಅನೇಕ ವರ್ಷಗಳ ನಂತರ ಅವನು ಬೆಂಗಳೂರಿನಿಂದ ಊರಿಗೆ ಬಂದಿದ್ದ. ಪರಿಚಯ ಸಲುಗೆಯಾಯಿತು, ಸಲುಗೆ ಪ್ರೇಮವಾಯಿತು. ಒಪ್ಪಿಗೆಯಿಂದಲೆ ಇಬ್ಬರೂ ದೇಹಗಳನ್ನು ಪರಿಚಯಿಸಿಕೊಂಡರು. ಈ ಊರಿನಲ್ಲಿ ನಮ್ಮಿಬ್ಬರ ಸಂಬಂಧವನ್ನು ಯಾರೂ ಒಪ್ಪುವುದಿಲ್ಲ, ಅಲ್ಲಿಗೆ ಬಂದು ಬಿಡು ಎಂದು ಹೇಳಿ ವಿಳಾಸ, ಫೋನ್ ನಂಬರ್, ಹಣ ಕೊಟ್ಟು ಹೋದ.
ಬಸ್ ಹತ್ತಿ ಹೊರಟವಳನ್ನು ಬೆಂಗಳೂರಿನ ಮೆಜೆಸ್ಟಿಕ್ ರಣಹದ್ದಿನಂತೆ ನಿರೀಕ್ಷಿಸುತ್ತಿತ್ತು.
***
ನೀವು ಕರೆ ಮಾಡುತ್ತಿರುವ ಚಂದದಾರರು
ತುಂಬ ದಿನದಿಂದ ಅವರಿಬ್ಬರೂ ಪರಸ್ಪರ ಫೋನ್ ಮಾಡಿಕೊಂಡಿರಲಿಲ್ಲ.”ಅರೇ,ಹೌದಲ್ವ”ಎಂದುಕೊಂಡು,ಇಬ್ಬರೂ ಪರಸ್ಪರರಿಗೆ ಫೋನ್ ಮಾಡಿಕೊಂಡರು.
“ನೀವು ಕರೆ ಮಾಡುತ್ತಿರುವ ಚಂದದಾರರು ಬೇರೆಯವರೊಂದಿಗೆ ಮಾತನಾಡುತ್ತಿದ್ದಾರೆ”.ಯಾರದೋ ಜೊತೆ ಮಾತನಾಡುತ್ತಿದ್ದಾರೆ,ಅಂದರೆ??!!…. ಎಂದುಕೊಂಡು ಕಟ್ ಮಾಡಿದರು.
ಮತ್ತೆ ಫೋನ್ ಮಾಡಿದರೆ, ಬೀಪ್ ಬೀಪ್ ಸೌಂಡ್.
ಥತ್! ಹೃದಯದ ನನ್ನ ಜಾಗ ಬೇರೆಯವರ ಪಾಲಾಗಿದೆ ಎಂದುಕೊಂಡು,ಪರಸ್ಪರರು ನಂಬರ್ ಗಳನ್ನು ಬ್ಲಾಕ್ ಮಾಡಿಕೊಂಡರು.
***
ಪ್ರೇಮಿಗಳ ದಿನ
ಮೂರು ವರ್ಷದ ಹಿಂದೆ ಅವನು ಅವಳಿಗೆ ಪ್ರೇಮಿಗಳ ದಿನ ಗಿಫ್ಟ್ ಆಗಿ ಕೊಟ್ಟಿದ್ದ ಸ್ಯಾಮ್ಸಂಗ್ ಎ ಸಿರೀಸ್ ಮೊಬೈಲಿಂದ,ಇಂದು ಅವಳು ಮತ್ತೊಬ್ಬನಿಗೆ “ಐ ಲವ್ ಯೂ,ಡಿಯರ್”ಎಂದು ಮೆಸೇಜ್ ಸೆಂಡ್ ಮಾಡಿದ ಮರುಕ್ಷಣವೇ, ಮೊಬೈಲ್ ಹ್ಯಾಂಗ್ ಆಗಿ,ನಿಧಾನಕ್ಕೆ ಸಾಯಲು ಪ್ರಾರಂಭಿಸಿತು.
- ಜ್ಯೋತಿ ಕುಮಾರ್.ಎಂ (ಜೆ.ಕೆ.)
