ಅಹಲ್ಯಾಬಾಯಿ ಇಲ್ಲದೆ ಇದ್ದರೇ ನೂರಾರು ಪುರಾತನ ಹಿಂದೂ ದೇವಾಲಯಗಳು ಕಣ್ಮರೆಯಾಗುತ್ತಿದ್ದವು. ನೂರಾರು ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿ, ನಮ್ಮ ಹಿಂದೂ ಧರ್ಮ ಹೆಮ್ಮೆ ಪಡುವಂತೆ ಮಾಡಿರುವ ಸಾಂಸ್ಕೃತಿಕ ರಾಯಭಾರಿ, ಆಧ್ಯಾತ್ಮಿಕ ಜೀವಿ. ಡಾ. ಪ್ರಕಾಶ ಬಾರ್ಕಿ ಅವರ ನರ್ಮದಾ ಪರಿಕ್ರಮಾ ಅನುಭವ ಕಥನ ತಪ್ಪದೆ ಮುಂದೆ ಓದಿ…
ಬೆಳಿಗ್ಗೆ “ರಾಮಕೃಷ್ಣ ಕುಟಿ”ಯಿಂದ ಹೊರಗೆ ಇಣುಕಿದರೆ, ತೆಳು ಮಂಜು ನರ್ಮದೆಯ ಮೇಲ್ಪದರಕ್ಕೆ ಜಾಳು ಜಾಳಾಗಿ ಬಿದ್ದಿತ್ತು. ತಣ್ಣನೆಯ ಸುಳಿಗಾಳಿ ಬೀಸುತ್ತಿತ್ತು. ಮೈ ತುಂಬಾ “ರಗ್ಗು” ಹೊದ್ದು ಹೊರಗೆ ಬಂದರೆ ಸಹಸ್ರಧಾರಾ ಹಾಲಿನ ನೊರೆಯಂತೆ ಕಾಣುತ್ತಿತ್ತು. ಜುಳು ಜುಳು ನಾದ ಮೋಹಕವಾಗಿತ್ತು.
“ಚಹಾ” ಕುಡಿದು, ನದಿಗೆ ಹೋಗಿ ಸ್ನಾನ ಮುಗಿಸಿ ಬಂದಾಗ “ಅವಲಕ್ಕಿ” ನಮಗಾಗಿ ಕಾಯುತ್ತಿದ್ದವು. ಕುಟೀರದ ಸಂತ “ಬಾಲಭೋಗ ಮಾಡು, ಮಧ್ಯಾಹ್ನದ ಭೋಜನದ ನಂತರ ಮುಂದಿನ ಪಯಣ ಬೆಳೆಸಿ” ಎಂದು ಆಜ್ಞೆಯಿತ್ತರು.
ಮರು ಮಾತನಾಡದೆ..

ಅವಲಕ್ಕಿ ಸೇವಿಸಿ.. ಬಟ್ಟೆ ತೊಳೆದು.. ಒಣಹಾಕುವುದರಲ್ಲಿ ತಲ್ಲೀನನಾದೆ. ಸಮಯ 12 ಗಂಟೆ ತಲುಪುವ ಸಮಯಕ್ಕೆ ಬಟ್ಟೆಗಳು ರಣ ಬಿಸಿಲಿಗೆ ಒಣಗಿ ಗಾಳಿಗೆ ತೂರಾಡುತ್ತಿದ್ದವು.
ಮಧ್ಯಾಹ್ನದ ಭೋಜನವು ಮುಗಿಯಿತು.. ಹೊರಡಲು.. ಇರುವ ಲಗೇಜನ್ನು ಹೊಂದಿಸಿಕೊಂಡು, ನಂದಿಯ ಹೆಗಲಿಗೇರಿಸಿದೆ.
ಸಂತರು ತಮ್ಮ ಕೋಣೆಗೆ ಕರೆದು.. ತಮ್ಮ ಬಳಿಯ ಸುಂದರವಾದ ಒಂದು “ಉಣ್ಣೆ ಅಂಗಿ” ತೆಗೆದು ಕೊಟ್ಟರು.

ನನ್ನಲ್ಲಿ ಎಲ್ಲವೂ ಇದೆ, ಬೇಡ” ಎಂದು ನಿರಾಕರಿಸಿದರೂ.. ಅವರ ಮಮತೆ, ಕಾಳಜಿಗೆ ತಲೆಬಾಗಿ… ಆಶೀರ್ವದಿಸಿ ಕೊಟ್ಟದ್ದನ್ನು ಸ್ವೀಕರಿಸಿದೆ. ಮತ್ತೆ ಮೂರು ಗಂಟೆಯ ತನಕ ಮಾತಿಗೆ ಮಾತಿಗೆ ಕೂತರು. ಹಲವು ವಿಷಯಗಳು, ಚರ್ಚೆಗಳು ನಡೆದವು. ಸಂತ ಮಹಾತ್ಮರ ಸಂಗದಿಂದ ಕಲಿಯಲು ಹಲವು ಸಿಗುತ್ತವೆ. ಮತ್ತೆ ಚಹಾ ಮಾಡಿಸಿ, ಕುಡಿಸಿ. ನಾಲ್ಕು ಗಂಟೆಗೆ ನನ್ನ ಬೀಳ್ಕೊಟ್ಟರು.
ಆ ತಾಯಿ ನರ್ಮದೆಯ ಕೃಪೆ ಮತ್ತು ಆ ತಾಯಿಯ ತಟದ ಸಂತರ ಸೇವೆಗೆ ಧನ್ಯತೆಯಿಂದ ನಮಸ್ಕರಿಸಿ. ಮಹೇಶ್ವರದತ್ತ ಹೊರಟೆ. ಸಹಸ್ರಧಾರಾ”ದಿಂದ 6 ಕಿ.ಮೀ ದೂರಕ್ಕೆ ಮಹೇಶ್ವರ ಊರಿದೆ. ಮಹೇಶ್ವರ ಊರಿಗೆ ಬಂದಾಗ ಸಮಯ 5 ಗಂಟೆಯಾಗಿತ್ತು. ನೇರವಾಗಿ ಹೋಗಿದ್ದು ನರ್ಮದಾ ನದಿಯ “ಪೇಶ್ವೆ ಘಾಟ್”ಗೆ.

ಇಲ್ಲಿ ತಾಯಿ ನರ್ಮದೆ ಹರವು ವಿಶಾಲವಾಗಿದೆ. ನಿಧಾನವಾಗಿ ಶುಭ್ರವಾಗಿ ಹರಿಯುತ್ತಿದ್ದಾಳೆ. ಘಾಟ್ನಲ್ಲಿ “ರಾಮೇಶ್ವರ ಧಾಮ” “ಶಿವ ಧಾಮ” ದೇವಸ್ಥಾನಗಳಿಗೆ ಪೂಜೆ ಸಲ್ಲಿಸಿ..
“ಪರುಶುರಾಮ ಮಹಾದೇವ ಮಂದಿರ”ಕ್ಕೆ ಹೋದೆ.

ಅಷ್ಟರಲ್ಲಿ ಸೂರ್ಯ ಮುಳುಗುವ ಪ್ರಕ್ರಿಯೆಯ ವೇಗ ಹೆಚ್ಚಿಸಿಕೊಂಡಿದ್ದೆ. ನದಿಯ ದಡದಲ್ಲಿ ಧ್ಯಾನದಲ್ಲಿ ಲೀನವಾಗಿದ್ದ ಶಿವಲಿಂಗಕ್ಕೆ ಪೂಜಿಸಿ.. ಸ್ಥಳೀಯರಲ್ಲಿ ತಂಗಲು ಸ್ಥಳ ಕೇಳತೊಡಗಿದೆ.
ಮಹೇಶ್ವರದಲ್ಲಿ ಸ್ಥಳೀಯವಾಗಿ ಸಿಗುವ “ರಬ್ಡಿ” ಸಿಹಿ ತಿನಿಸು ತುಂಬಾ ವಿಶಿಷ್ಟ. ಊರಿನ ನಡುವಿನ ಚೌಕದಲ್ಲಿರುವ “ರಾಜರಾಜೇಶ್ವರಿ ಸ್ವೀಟ್ಸ್” ಅಂಗಡಿಯಲ್ಲಿ “ರಬ್ಡಿ” ಸೇವಿಸಿದೆ. ಆಹಾ ಅದ್ಭುತ .. ರುಚಿಕರ.. ನಾಲಿಗೆಯ ರುಚಿಗ್ರಂಥಿಗಳಿಗೆ ಹಬ್ಬ.

ಕೊನೆಗೆ..
“ಪ್ರಾಚೀನ ಭರ್ತೃಹರಿ ಗುಹೆಗೆ” ಬಂದೆ. ಭರ್ತೃಹರಿ ಸುಮಾರು 7 ನೇಯ ಶತಮಾನದಲ್ಲಿ ಇದ್ದಂತ ಸಂಸ್ಕೃತ ಸಾಹಿತ್ಯದ ಪ್ರಸಿದ್ದ ವಿಧ್ವಾಂಸ. ಭರ್ತೃಹರಿಯ ಗ್ರಂಥಗಳು 1) ವಾಕ್ಯಪದೀಯ 2)ಸುಭಾಷಿತ ತ್ರಿಶತೀ ಎಂಬ ಎರಡು ಗ್ರಂಥಗಳು.
ವಾಕ್ಯಪದೀಯ ವ್ಯಾಕರಣಶಾಸ್ತ್ರದ ದಾರ್ಶನಿಕ ತತ್ತ್ವಗಳನ್ನು ವಿವರಿಸುವ ಗ್ರಂಥ. ಈ ಗ್ರಂಥದಲ್ಲಿ ಸುಮಾರು 2,000 ಶ್ಲೋಕಗಳಿವೆ. ಸುಭಾಷಿತ ತ್ರಿಶತೀ ಕೃತಿಯಲ್ಲಿ ನೀತಿಶತಕ, ಶೃಂಗಾರಶತಕ, ವೈರಾಗ್ಯಶತಕಗಳೆಂಬ ಮೂರು ಶತಕಗಳಿವೆ. ಒಂದೊಂದು ಶತಕದಲ್ಲಿ 100 ಶ್ಲೋಕಗಳಂತೆ ಒಟ್ಟು 300 ಶ್ಲೋಕಗಳಿವೆ. ಇದನ್ನು ಅಬ್ರಹಾಮ್ ರೋಜರ್ ಎಂಬ ಪಾಶ್ಚಾತ್ಯ ಪಂಡಿತ 1651ರಲ್ಲಿಯೇ ಡಚ್ ಭಾಷೆಗೆ ಅನುವಾದಿಸಿದ.

ಭರ್ತೃಹರಿ ಗುಹೆ ಇಂದಿನ ತಂಗುವ ತಾಣ. ಈ ಗುಹೆ ನರ್ಮದಾ ನದಿಯ ದಂಡೆಗೆ ಒರಗಿಕೊಂಡಿದೆ. ನಾಳೆ ಸಂಪೂರ್ಣ ಮಹೇಶ್ವರ’ನ ಮಂದಿರ, ಕೋಟೆ, ಮಹೇಶ್ವರ ಸೀರೆಗಳ ಮಾರ್ಕೆಟ್ ಹೋಗುವುದಿದೆ. ಭರ್ತೃಹರಿ ಗುಹೆಯೊಳಗೆ ಸಣ್ಣಗೆ ಚಳಿ ನುಸುಳಿ ಬರತೊಡಗಿತು. ಎಚ್ಚರವಾದಾಗ ಸಮಯ 5:30 ಬೆಳಿಗ್ಗೆ. ಮೈ ತುಂಬಾ ಚಾದರ ಹೊದ್ದುಕೊಂಡು ಹೊರಗೆ ಇಣುಕಿ ನೋಡಿದೆ, ಮಂಜು ಇಲ್ಲದ ಬೆಳಗು ಇದು, ತಾಯಿ ನರ್ಮದೆಯ ಮೇಲ್ಮ ಮೇಲೆ ಹಬೆಯಾಡುತ್ತಿತ್ತು. ಸ್ನಾನಕ್ಕೆ ಹೊರಡುವ ಮೊದಲು ಒಬ್ಬ ಸನ್ಯಾಸಿ ತಾಯಿ ಬಟ್ಟಲು ತುಂಬಾ ಚಹಾ ತಂದುಕೊಟ್ಟರು. ನಿನ್ನೇಯೆ ನಾನು ಮಲಗುವ ಸ್ಥಳ ನೋಡಿಕೊಂಡು ಕಾಯುತ್ತಿದ್ದರು ತಾಯಿ.
ಬಿಸಿ ಬಿಸಿ ಚಹಾ ಕುಡಿದು ನದಿಯತ್ತ ಹೊರಟೆ. ಸೂರ್ಯ ಹಾಜರಿ ಹಾಕಲು ಇಣುಕಿ ಮೆಲ್ಲಗೆ ಬರುತ್ತಿದ್ದ. ನದಿಯ ಮಡಿಲಿಗೆ ಇಳಿದಾಗ ಬೆಚ್ಚನೆಯ ನೀರು. ಮುಳುಗು ಹಾಕಿ ಸಾಕು ಸಾಕಾಗುವಷ್ಟು ಮಿಂದೆದ್ದೆ.
ನರ್ಮದೆಯ ಮಮತೆ ಅಪಾರ.. ಬಯಸುವ ಮೊದಲೇ ಸರ್ವ ಸವಲತ್ತು ಒದಗಿಸುವ ಕಲ್ಪವೃಕ್ಷ. ಸ್ನಾನ..ಪೂಜೆ ಮುಗಿಸಿ “ಮಹೇಶ್ವರ” ಸುತ್ತುವ ಕಾಯಕ ಕೈಗೆತ್ತಿಕೊಳ್ಳುವ ಮೊದಲೆ, ತಟ್ಟೆಯ ತುಂಬಾ “ಹಲ್ವಾ” ಜಿಲೇಬಿ, ಸಮೋಸಾ ತುಂಬಿಕೊಂಡು ಬಂದ ಆ ನರ್ಮದೆಯ ಇನ್ನೊಂದು ಸ್ವರೂಪದಂತ ತಾಯಿ ನನ್ನ ಮುಂದಿಟ್ಟು “ತಿಂದು.. ಆಮೇಲೆ ಹೊರಡಿ” ಎಂದು ನಕ್ಕಳು.

ಕೈ ಮುಗಿದು ಆ ತಾಯಿಯ ಜೊತೆ ಒಂದಿಷ್ಟು ಹಂಚಿಕೊಂಡು ತಿಂದೆ. ಗುಹೆಯ ಪಕ್ಕದ ಮಾತಂಗೇಶ್ವರ ಮಹಾದೇವ ಮಂದಿರ ಪೂಜೆ ಮಾಡುತ್ತಾ, ಸನ್ಯಾಸಿ ಜೀವನ ನಡೆಸಿತ್ತಿರುವ ತಾಯಿ ಅವಳು. ಸಂಸಾರದಿದ್ದ ನಿವೃತ್ತಳಾದರೂ ಸನ್ಯಾಸಿ ಗಂಡನ ಜೊತೆ ದೇವಸ್ಥಾನ, ಗುಹೆ, ನದಿಯ ಪೂಜೆ ಮಾಡುತ್ತಿರುವ ಆದರ್ಶಳು ತಾಯಿ. ಗಂಡ ಹೆಂಡತಿ ಇಬ್ಬರೂ ಸಂಸಾರದಿಂದ ಮುಕ್ತ ಆದರೂ ಒಂದೇ ಕಾಯಕದಲ್ಲಿ ಸನ್ಯಾಸತ್ವ ಜೀವನ ನಡೆಸುತ್ತಿರುವ ವೈರಾಗಿಗಳು.
ತಾಯಿ ನರ್ಮದೆಯ ತಟಕ್ಕೆ ನಡೆದೆ….
ಮೊದಲು ಸಿಕ್ಕಿದ್ದೆ “ಅಹಲ್ಯಾಬಾಯಿ ಘಾಟ್”. ವಿಶಾಲವಾಗಿ ಚಾಚಿಕೊಂಡಿದೆ. ಜನಜಂಗುಳಿಯಿಂದ ಸದಾ ಗಜಿಬಿಜಿ.
ನದಿಯಲ್ಲಿ ಮುಳುಗಿ ಏಳುವ ಭಕ್ತ ವೃಂದ, ನದಿ ಪೂಜಿಸುವವರು ಇನ್ನೊಂದು ಕಡೆ, ಫೋಟೋ ತೆಗೆಯುತ್ತಾ ಮಾತಿಗೆ ನಿಂತವರು, ತಮ್ಮ ವಸ್ತು ಬಿಕರಿ ಮಾಡುವ ವ್ಯಾಪಾರಿಗಳು, ಸೆಲ್ಫಿಯಲ್ಲಿ ತಲ್ಲೀನರಾದ ಪ್ರವಾಸಿಗರು , ಕ್ಯಾಮೆರಾ ಕೊರಳಿಗೆ ನೇತು ಹಾಕಿಕೊಂಡು ದೌಡಾಯಿಸುವ ಚಿತ್ರಗ್ರಾಹಕರು, ಅಂಡಲೆಯುವ ಗೋವುಗಳು, ಆಡುಗಳ ಹಿಂಡು, ಬಾಲ ಅಲ್ಲಾಡಿಸುತ್ತಾ ನುಸುಳುವ ನಾಯಿಗಳು, ಆಹಾರಕ್ಕೆ ಗುಂಪು ಕಟ್ಟಿಕೊಂಡು ಈಜುವ ಮೀನುಗಳು, ನದಿಯ ಮೇಲೆ ತೇಲುವ ದೋಣಿಗಳ ದಂಡು, ಶಾಂತಚಿತ್ತಳಾಗಿ ಹಸನ್ಮುಖಿಯಾಗಿ ಹರಿಯುವ ಪಾಪನಾಶಿನಿ ನರ್ಮದೆ………
ಬೃಹತ್ “ಅಹಲ್ಯಾಬಾಯಿ ಹೋಳ್ಕರ್” ಕೋಟೆ ಇಂದು ಮೌನವಾಗಿ ನಿಂತಿದೆ. ತಾನು ಈ ಹಿಂದೆ ವಿಜೃಂಭಿಸಿ ಮೆರೆದ ಸವಿನೆನಪಿನೊಂದಿಗೆ. ಹಲವು ಶಿಲೆಗಳು ಕೋಟೆಯ ಭಾಗವಾಗಿ ಧನ್ಯತೆಯಿಂದ ಜೀವನ ಕಳೆಯುತ್ತಿವೆ.

ಈ ಕೋಟೆ ಮಾತೆ ಅಹಲ್ಯಾಬಾಯಿ ಹೋಳ್ಕರ್ ಆಡಳಿತ ಕಾಲಘಟ್ಟದಲ್ಲಿ ರಚಿಸಲಾಗಿದೆ. ಮಹೇಶ್ವರ ರಾಜಧಾನಿಯಾಗಿತ್ತು. ತನ್ನ ಗಂಡನ ಮರಣಾನಂತರ “ಅಹಲ್ಯಾಬಾಯಿ” ಬಿಳಿ ಸೀರೆಯಲ್ಲಿ ಆಡಳಿತ ನಡೆಸಿದ ಶೂರ ಮಹಿಳೆ. ತಾನು ವಿಧವೆಯ ಜೀವನ ನಡೆಸುತ್ತಲೆ ಆಡಳಿತ ನಡೆಸಿದ, ಯುದ್ಧ ನಡೆಸಿದ ಆದರ್ಶ ಮಹಿಳೆ.
ಅಂದು ಅಹಲ್ಯಾಬಾಯಿ ಇಲ್ಲದೆ ಇದ್ದರೇ ನೂರಾರು ಪುರಾತನ ಹಿಂದೂ ದೇವಾಲಯಗಳು ಕಣ್ಮರೆಯಾಗುತ್ತಿದ್ದವು. ನೂರಾರು ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿ, ನಮ್ಮ ಹಿಂದೂ ಧರ್ಮ ಹೆಮ್ಮೆ ಪಡುವಂತೆ ಮಾಡಿರುವ ಸಾಂಸ್ಕೃತಿಕ ರಾಯಭಾರಿ, ಆಧ್ಯಾತ್ಮಿಕ ಜೀವಿ.
ಶಿವನನ್ನು ಆರಾಧ್ಯದೈವ ಎಂದು ಪೂಜಿಸುತ್ತಿದ್ದ ಅಹಲ್ಯಾಬಾಯಿ ಸರಳ ಜೀವನ ನಡೆಸಿದ ವೀರ ರಾಣಿ. ಬೃಹತ್ “ಅಹಲ್ಯೆಶ್ವರ ಮಂದಿರದ ನಿರ್ಮಾತೃ. ಕೋಟೆಯ ಗೋಡೆ, ದೇವಸ್ಥಾನಗಳು ವಿಧವಿಧ ತರಹದ ಚಿತ್ರಕಲೆಯಿಂದ ಕಂಗೊಳಿಸುತ್ತಿವೆ. ಸಣ್ಣಪುಟ್ಟ ವಿಗ್ರಹಗಳು ಕೂಡ ಕಲಾನೈಪುಣ್ಯದಿಂದ ಶ್ರೀಮಂತವಾಗಿವೆ. ಅಹಲ್ಯಾಬಾಯಿ ಹೋಳ್ಕರ್ ವಾಸಿಸುತ್ತಿದ್ದ “ಹೋಳ್ಕರ್ ರಾಜವಾಡೆ”ಯಂತೂ ತೀರಾ ಸರಳವಾಗಿದೆ.
ಕಟ್ಟಡದ ಮೊದಲ ಮಹಡಿಯಲ್ಲಿ ರಾಣಿ ಅಹಲ್ಯಾಬಾಯಿ ವಾಸಿಸುತ್ತಿದ್ದರು. ಬಿಳಿ ಸೀರೆ, ಹಣೆಗೆ ತಿಲಕ, ಸದಾ ಶಿವನ ಧ್ಯಾನದೊಂದಿಗೆ ಸರಳ ಜೀವನ ನಡೆಸುತ್ತಿದ್ದರು.
ಕೆಳ ಮಹಡಿಯಲ್ಲಿ ಪ್ರತಿ ದಿನ ಬೆಳಿಗ್ಗೆ ಮಣ್ಣಿನಿಂದ ಏಳು ಬ್ರಾಹ್ಮಣರ ಸಹಾಯದೊಂದಿಗೆ 11000 ಶಿವಲಿಂಗಗಳನ್ನು ರಚಿಸಿ, ಪ್ರಾಣ ಪ್ರತಿಷ್ಠಾನ, ಪೂಜೆ , ಅರ್ಚನೆ, ಆರತಿ ಮಾಡುವ ಕಾಯಕವನ್ನು 1767 ರಿಂದ ಶುರು ಮಾಡಿದರು, ಅದು ಇಂದಿಗೂ ಚಾಲ್ತಿಯಲ್ಲಿದೆ. ಅಮರ ಸಾಂಸ್ಕೃತಿಕ ರಾಯಭಾರಿ ಅಹಲ್ಯಾಬಾಯಿ ಹೋಳ್ಕರ್ ತಮ್ಮ ವಾಡೆಯಲ್ಲಿ ಜನರ ವ್ಯಾಜ್ಯಗಳನ್ನು ನಿಷ್ಪಕ್ಷಪಾತವಾಗಿ ಬಗೆಹರಿಸುತ್ತಿದ್ದರು.
ಇಲ್ಲಿನ ಜನರ ಜೀವನಮಟ್ಟ ಸುಧಾರಿಸಲು ಮತ್ತು ಕಾಯಕ ಒದಗಿಸಲು ದೇಶದ ವಿವಿಧ ಕಡೆಯಿಂದ ಕುಶಲ ನೇಕಾರರನ್ನು ಮಹೇಶ್ವರಕ್ಕೆ ಕರೆದು, ಇಲ್ಲಿನ ಜನರು ಸೀರೆ ನೇಯುವುದನ್ನು ಕಲಿಯುವಂತೆ ಮಾಡಿದರು. ಇಂದು ಮಹೇಶ್ವರದ ಹಲವು ಮನೆಗಳಲ್ಲಿ ಸೀರೆ ನೇಯುವ ಕಾಯಕ ಜಾರಿಯಲ್ಲಿದೆ. ಕೋಟೆಯ ಗೋಡೆಗಳ ಮೇಲಿನ ಚಿತ್ರಾಕಾರಗಳನ್ನು ಸೀರೆಯಲ್ಲಿ ನೇಯ್ದು ಮಾರುತ್ತಿರುವ ಜನ, ಇಲ್ಲಿ ನೇಯ್ದಂತ ಸೀರೆಗೆಳು “ಮಹೇಶ್ವರಿ ಸೀರೆ” ಎಂದು ವಿಶ್ವಪ್ರಸಿದ್ಧ.
ಹಲವು ಚಲನಚಿತ್ರಗಳು ಅಹಲ್ಯಾಬಾಯಿ ಹೋಳ್ಕರ್ ಕೋಟೆ, ನರ್ಮದಾ ನದಿಯ ದಡ, ದೇವಸ್ಥಾನಗಳಲ್ಲಿ ರಚಿತವಾಗಿವೆ. ಅಹಲ್ಯಾಬಾಯಿ ದೇಹ ತ್ಯಾಗ ಮಾಡಿದಾಗ, ಕೋಟೆಯ ಎದುರಿಗೆ ನರ್ಮದಾ ನದಿಯ ದಡದಲ್ಲಿ ದಹನ ಕಾರ್ಯ ಕೈಗೊಳ್ಳಲಾಯಿತು. ಬೂದಿಯನ್ನು ನರ್ಮದೆಯಲ್ಲಿ ಲೀನವಾಗಿಸಿದರು.
ಮಹೇಶ್ವರವೆಂದರೆ ಅಹಲ್ಯಾಬಾಯಿ ಹೋಳ್ಕರ್ ಅಷ್ಟೆ. ಭೂಮಿ ಇರುವ ತನಕ ಅಹಲ್ಯಾಬಾಯಿ ಹೋಳ್ಕರ್ ಅಜರಾಮರ. ನರ್ಮದೆ ನಿತ್ಯ ಹರಿಯುವ ಪಾಪನಾಶಿನಿ, ಮೋಕ್ಷದಾಯಿನಿ.
ಹಿಂದಿನ ಸಂಚಿಕೆಗಳು :
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೨)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೩)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೪)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೫)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ –೬)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೭)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೮)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೯)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೦)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೧)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೨)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೩)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೪)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೫)
- ಪ್ರಕಾಶ ಬಾರ್ಕಿ – ವೈದ್ಯರು, ಲೇಖಕರು, ಕಾಗಿನೆಲೆ.
