ಆದಿಮಾಯೆ ಮಹಾಕಾಳಿ ಉದ್ಭವ ತ್ರಿಶಕ್ತಿ ಸ್ವರೂಪಿಣಿ : ಬರಮೇಲುದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಾದ್ಯಂತ ಹಲವಾರು ದೇವಾಲಯಗಳಿದ್ದು, ಐವರ್ನಾಡು ಗ್ರಾಮದ ಬರಮೇಲು ಎಂಬಲ್ಲಿ ಉದ್ಭವವಾದ ತ್ರಿಶಕ್ತಿ ಸ್ವರೂಪಿಣಿ ಕುರಿತು ಬಾಲು ದೇರಾಜೆ ಅವರು ಬರೆದ ಲೇಖನವನೊಮ್ಮೆ, ಮುಂದೆ ಓದಿ…

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಾದ್ಯಂತ ಹಲವಾರು ದೇವಾಲಯಗಳಿದ್ದು, ಈ ತಾಲೂಕಿಗೆ ಒಳಪಟ್ಟ ಐವರ್ನಾಡು ಗ್ರಾಮದಲ್ಲಿಯೂ ದೇವಾಲಯಗಳು, ದೈವಸ್ಥಾನಗಳು ಜೊತೆಗೆ ನಾಗ ಪ್ರತಿಷ್ಟಾಪನೆ ಗೊಂಡಿದೆ.  ಸರ್ವೇಸಾಮಾನ್ಯವಾಗಿ ಮಾತಿರುವುದು -” ಭೂಮಿಗೆ ಇಳಿದ ಭಗವಂತ ಎಂದು”. ಆದರೆ ಇಲ್ಲೊಂದು 5 ವರ್ಷಗಳ ಹಿಂದೆಯೇ ಇದಕ್ಕೆ ಬದಲಾಗಿ – ಭೂಮಿಯಿಂದ ಮೇಲೆದ್ದು (ಉದ್ಭವ)ಬಂದ ಭಗವಂತ. ಇದನ್ನು ಕೂಲಂಕುಷವಾಗಿ ನೋಡಿ, ಚಿಂತನೆ ಮಾಡಿದಾಗ ಇದು ದೇವಿ ಎಂದು ಗೊತ್ತಾಯ್ತು.ಇದು ಪವಾಡವೋ ಎಂಬಂತೆ ಐವರ್ನಾಡು ಗ್ರಾಮದ ಬರಮೇಲು ಎಂಬಲ್ಲಿ ಉದ್ಭವವಾದ ತ್ರಿಶಕ್ತಿ ಸ್ವರೂಪಿಣಿ…

ನೂಜಾಲು ಶ್ರೀ ಬಾಲು ಗೌಡ ಹಾಗೂ ಪರಮೇಶ್ವರಿ ದಂಪತಿಗಳ ಹನ್ನೊಂದು ಮಕ್ಕಳಲ್ಲಿ ಅತೀ ಕಿರಿಯವರಾದ ಬರಮೇಲು ಶ್ರೀ ಶೀನಪ್ಪ ಗೌಡರು. ಮೂಲ ಎಡಮಲೆ ಆಸ್ತಿ ವಿಭಾಗವಾದಾಗ ಇವರು ಅನಿವಾರ್ಯವಾಗಿ ವಿದ್ಯಾಭ್ಯಾಸವನ್ನು ಕುಂಠಿತಗೊಳಿಸಿ ತನ್ನ13ನೇ ವಯಸ್ಸಿನಲ್ಲಿ ಬರಮೇಲು ಜಾಗಕ್ಕೆ ಬಂದು ನೆಲೆಸಿ ಕೃಷಿ ಕಾರ್ಯದಲ್ಲಿ ತೊಡಗಿದರು. ಸರಳ ಸಜ್ಜನ ವ್ಯಕ್ತಿಯವರಾಗಿದ್ದು , ಸದಾ ಹಸನ್ಮುಖಿಯವರಾಗಿದ್ದು, ಕೃಷಿಕರಾಗಿ, ಸಮಾಜ ಸೇವಕರಾಗಿ,ಕೊಡುಗೈದಾನಿಯಾಗಿಯೂ ಸುಳ್ಯ ತಾಲೂಕಿನಲ್ಲಿ ಹೆಸರುವಾಸಿಯಾದದ್ದಲ್ಲದೇ,ಶೀನಪ್ಪಣ್ಣ, ಶೀನಪ್ಪಗೌಡರು ಬರಮೇಲುತಾರು,ಹೀಗೆ ಐವರ್ನಾಡು ಗ್ರಾಮದಲ್ಲಿ ಮನೆ ಮಾತಾಗಿರುವ ಇವರದ್ದು ನೇರ ನಡೆ ನುಡಿಯ ಅಪರೂಪದ ವ್ಯಕ್ತಿತ್ವ.

1963 ರಿಂದ 1984ರ 21ವರ್ಷಗಳಲ್ಲಿ ಐವರ್ನಾಡಿನ ಗ್ರಾಮ ಪಂಚಾಯತ್ ನ ಅಧ್ಯಕ್ಷ ಜೊತೆಗೆ 7 ವರ್ಷ ಸೊಸೈಟಿ ಅಧ್ಯಕ್ಷರಾಗಿ ಯೂ ಕಾರ್ಯನಿರ್ವಹಿಸಿದ ಕಾಲದಲ್ಲಿ ಚುನಾವಣೆಗಳು ಶೂನ್ಯವಾಗಿ ಪಂಚಾಯತ್- ಸೊಸೈಟಿಗಳ ಆಡಳಿತ ಮಂಡಳಿಯು ಅಸ್ಥಿತ್ವಕ್ಕೆ ಬಂದಿದ್ದು, ಸುಳ್ಯ ತಾಲೂಕು ಮಟ್ಟದಲ್ಲೇ ದಾಖಲೆ ನಿರ್ಮಾಣವಾಗಿದೆ.ಗ್ರಾಮದ ಶಾಲೆಗಳ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಯೂ ಇದ್ದರು. 1984ನೇ ಇಸವಿಯಲ್ಲಿ ರಾಜಕೀಯದಿಂದ ನಿವೃತ್ತಿಗೊಂಡು ವಿಶ್ರಾಂತ ಜೀವನ ನಡೆಸಿದ್ರು.ಇವರ ಸಮಾಜಸೇವೆಗಾಗಿ 1994 ರಲ್ಲಿ ಸುಳ್ಯ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ‌ಸನ್ಮಾನಿತರಾಗಿದ್ದರು. ಐವರ್ನಾಡು ಗ್ರಾಮದಲ್ಲಿ ಶೀನಪ್ಪ ಗೌಡರಿಗೆ ಆಪ್ತರಾದವರಲ್ಲಿ ದಿ/ ಸತ್ಯಮೂರ್ತಿ ದೇರಾಜೆ (ಅಣ್ಣ)ಯವರೂ ಒಬ್ಬರು. ಮೂರ್ತಿಲೆ- ಶೀನಪ್ಪರೇ ಎಂದು ತುಳು ಭಾಷೆಯಲ್ಲಿ ಸಂಬೋಧಿಸಿಕೊಂಡು ,ಮಾತುಕತೆಗಳು ಆರಂಭವಾಗಿ ಇವರ ಗೆಳೆತನ ಸುಧೀರ್ಘ ವಾಗಿತ್ತು.2003ನೇ ಇಸವಿಯಲ್ಲಿ ತನ್ನ 84 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರೂ ,ಇವರ ನೆನಪುಗಳು ಮಾತ್ರ ಗ್ರಾಮದ ಜನತೆಯ ಮನಸ್ಸಿನಾಳದಲ್ಲಿ ಇಂದಿಗೂ ಅಚ್ಚಳಿಯದಂತೆ ಉಳಿದಿದೆ…

ಬರಮೇಲು ದಿ/ಶೀನಪ್ಪ ಗೌಡರು ಹಾಗೂ ವೀರಮ್ಮ ದಂಪತಿಗಳಿಗೆ ಐದು ಜನ ಹೆಣ್ಣು ಮಕ್ಕಳಾಗಿದ್ದು ,ನಂತರ ಗಂಡು ಸಂತಾನಕ್ಕಾಗಿ ಈ ದಂಪತಿಗಳು ಕುಕ್ಕೇ ಸುಬ್ರಹ್ಮಣ್ಯ ದೇವರಿಗೆ ಬೆಲ್ಲದ ತುಲಾಭಾರ ಮಾಡಿಸುತ್ತೇವೆ ಎಂಬ ಹರಕೆಯ ಪ್ರತಿಫಲ ವಾಗಿ 1960ನೇ ಇಸವಿಯಲ್ಲಿ ಜನಿಸಿ ,ಇಲ್ಲಿ ವಾಸ್ತವ್ಯವಾಗಿರುವವರೇ ಬರಮೇಲು ಶ್ರೀ ಕರುಣಾಕರ ಗೌಡರು…

ಬರಮೇಲು ಕರುಣಾಕರಗೌಡರು ಬೆಳ್ಳಾರೆ, ಸುಳ್ಯ ದಲ್ಲಿ ವಿದ್ಯಾಭ್ಯಾಸ ಮುಗಿಸಿ ನಂತರ ಮಂಗಳೂರಿನ ಲ್ಲಿ ಪದವಿ ಮುಗಿಸಿದ್ದರು. ತನ್ನ ತಂದೆಯ ಆದರ್ಶಗಳನ್ನು ಮೈಗೂಡಿಸಿಕೊಂಡು,ಜನರನ್ನು ಬಹಳ ಗೌರವದಿಂದ ಕಾಣುತ್ತಿದ್ದ ಇವರು ತಂದೆಗೆ ತಕ್ಕ ಮಗನಾಗಿ 1999ನೇ ಇಸವಿಯಿಂದ 2017 ರ ತನಕ ರಾಜಕೀಯ, ಧಾರ್ಮಿಕ, ಹಾಗೂ ಸಾಮಾಜಿಕ ಚಟುವಟಿಕೆಗಳ ಸಮಿತಿಗಳ ಜಿಲ್ಲಾಧ್ಯಕ್ಷ, ನಿರ್ದೇಶಕ,ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಯಾಗಿಯೂ ,ಅಲ್ಲದೆ ಗ್ರಾಮಪಂಚಾಯತ್ ನ ಸದಸ್ಯರಾಗಿದ್ದರು.ನಂತರ ಧಾರ್ಮಿಕ ಚಿಂತಕರಾಗಿ ,ಪತ್ನಿ ಹೇಮಲತಾ,ಜೊತೆಗೆ ಶಶಾಂಕ- ಮಯಾಂಕ ಮಕ್ಕಳೊಂದಿಗೆ ಚಿಕ್ಕದಾದ ಚೊಕ್ಕವಾದ ಸಂಸಾರ ಇವರದ್ದು. ಆರತಿಗೊಂದು ,ಕೀರ್ತಿಗೊಂದು ಪದಕ್ಕೆ ಬದಲಾಗಿ ಇವರದ್ದು ಎರಡೂ ಕೀರ್ತಿಗೇ ಮೀಸಲು…

ಬರಮೇಲು ಶ್ರೀ ಕರುಣಾಕರ ಗೌಡರಿಗೆ ರಾತ್ರಿ ವಿಚಿತ್ರ ಕನಸುಗಳು, ಮುಂಜಾನೆ ಗಂಟೆ 6.30ಕ್ಕೆ ಮನೆಯ ಪಕ್ಕ ಎತ್ತರದಲ್ಲಿರುವ ಅಡಿಕೆ ಅಂಗಳಕ್ಕೆ ಬಂದು ,ಬರಿದಾದ ಗದ್ದೆಯ ಕಡೆಗೆ ನೋಡಿದಾಗ ಅಸ್ಪಷ್ಟತೆಯ ಒಂದು ದೊಡ್ಡಗಾತ್ರದಲ್ಲಿ ,ಉಳಿದದ್ದು ಸಣ್ಣ ಗಾತ್ರದಲ್ಲಿದ್ದ 8-10ಆಡಿನ ಆಕಾರದಲ್ಲಿದ್ದ ಪ್ರಾಣಿಗಳ ಹಿಂಡನ್ನು ಕಂಡು ,ತಕ್ಷಣ ಕೋವಿಯ ಜೊತೆಗೆ ಅಂಗಳ ತುದಿಗೆ ಬಂದಾಗ ಪೂರ್ವದಿಂದ ಪಶ್ಚಿಮ ಕಡೆಗೆ ಓಡುವುದನ್ನು ಕಂಡರು .ಹಿಂದಿನಿಂದ ಮನೆಯ ನಾಯಿಗಳೆರಡು ಅವುಗಳನ್ನು ಅಟ್ಟಿಸಿಕೊಂಡು ಹೋಗುವುದರ ಜೊತೆಗೆ ಸುಮಾರು ಒಂದು ಫರ್ಲಾಂಗು ದೂರ ಓಡಿ ಹೋಗಿ ನಿಂತು ನೋಡಿದಾಗ ,ಗುಡ್ಡದ ಜರಿಯ ತನಕ ನಾಯಿಗಳು ಅಟ್ಟಿಸಿಕೊಂಡು ಹೋಗಿ, ಅಲ್ಲೇ ಹತ್ತು ನಿಮಿಷಗಳ ಕಾಲ ಸುತ್ತುವರಿದು ಮರಳಿ ಇವರಿದ್ದ ಜಾಗದಲ್ಲಿ ಬಂದು ಕುಳಿತುಕೊಂಡವು.ನಂತರ ಕರುಣಾಕರ ಗೌಡರು ಮನೆಗೆ ಹಿಂತಿರುಗುವ ವೇಳೆಯಲ್ಲಿ ಅಚಾನಕ್ಕಾಗಿ “ಶಿವಲಿಂಗದಂತೆ” ಆಕಾರವೊಂದು ಕಿನ್ನಿಗೋಳಿ ಮರದಡಿಯಲ್ಲಿ ಗೋಚರವಾಗಿ ,ಕುತೂಹಲದಿಂದ ಹತ್ತಿರ ಹೋಗಿ ನೋಡಿದಾಗ ಗೆದ್ದಲು ನಿರ್ಮಿತವಾದ “ಕಲ್ಲುಮರ” ಎಂಬ ಆಕಾರದ ಒಳಗೆ ಬಿಂಬದ ಮುಖ ಮತ್ತು ಕಿರೀಟ ಭಾಗ ಮಾತ್ರ ಕಂಡು ಬಂದು,ನಂತರ ಒಂದು ಗಂಟೆ ಹೆಣಗಾಡಿ ಬಿಂಬದ ಅರ್ಧಾಂಶದಷ್ಟು ಆಕಾರ ಕಾಣುವಂತೆ ಬಿಡಿಸಿ ನೋಡಿ,ಹತ್ತಿರದ ಆತ್ಮೀಯ ಗೆಳೆಯರಿಗೆ ವಿಷಯ ತಿಳಿಸಿದ್ರು.ಈ ಸುದ್ದಿ ಗ್ರಾಮದ ಎಲ್ಲೆಡೆ ಪಸರಿಸಿ ಬಿಂಬದ ದರ್ಶನ ಪಡೆಯಲು ಜನಸ್ತೋಮ ವೇ ನೆರೆದಿತ್ತು..

This slideshow requires JavaScript.

2016 ನೇ ಇಸವಿ ದಶಂಬರ 15ರ ಬೆಳಗ್ಗೆ ಅಂದಾಜು ಗಂಟೆ 7 ಕ್ಕೆ ಧನು ಸಂಕ್ರಾಂತಿ ಮತ್ತು ಮಹಾನಕ್ಷತ್ರ ಮೂಲದ ದಿವಸ ಗುರುವಾರ ಉದ್ಭವ ರೀತಿಯಲ್ಲಿ ಕಂಡು ಬಂದು , 29-12-2016ರಂದು ಕೇರಳದ ಪ್ರಖ್ಯಾತ ಜ್ಯೋತಿಷ್ಯ ರಾದ ಶ್ರೀ ಶ್ರೀಧರನ್ ಚಟ್ಟಂಚಾಲ್ ಹಾಗೂ ಶ್ರೀ ಲಕ್ಷ್ಮೀನಾರಾಯಣ ಮಲ್ಲರ ಸಮ್ಮುಖದಲ್ಲಿ ಜ್ಯೋತಿಷ್ಯ ನೋಡಿ ,ತಾಂಬೂಲ ಪ್ರಶ್ನೆಯ ಮೂಲಕ ಆರೂಢ ರಾಶಿಯಲ್ಲಿ ಧನುರಾಶಿ ಮತ್ತು ನಿವೃತ್ತ ರಾಶಿಯಲ್ಲಿ ಮಕರ ರಾಶಿ ಕಂಡು ಬಂದು ಚಿಂತನೆ ಮಾಡಿದಾಗ ಬಿಂಬವು ವಿಷ್ಣು ಶಿವ ಹಾಗೂ ದೇವಿಯ ಮೂರೂ ರಾಶಿ ಫಲಗಳು ಕಂಡು ಬಂದು ,ಇದರಲ್ಲಿ ಈ ಮೂರೂ ಶಕ್ತಿಗಳು ಸಮ್ಮಿಲನಕ್ಕೊಳಪಟ್ಟಿರುವುದರಿಂದ ” ಶ್ರೀ ತ್ರಿಶಕ್ತಿ ಸ್ವರೂಪಿಣಿ, ಮಹಾಕಾಳಿ” ಎಂದು ಪರಿಗಣಿಸಿ ಆರಾಧಿಸಿಕೊಂಡು ಬರುವುದೆಂದು ನಿರ್ಣಯಿಸಿದಂತೆ‌ 13-01-2017ರಿಂದ ಆರಾಧನಾ
ಪ್ರಕ್ರಿಯೆಗಳು ಆರಂಭವಾಗಿದ್ದು, ಹಕ್ಕಿನ ಪ್ರಕಾರ ಶ್ರೀ ಕರುಣಾಕರ ಗೌಡರು ಮುಂದಿನ ದಿನಗಳಲ್ಲಿ ಸ್ವರ್ಣ ಪ್ರಶ್ನೆಯ ಮೂಲಕ ಚಿಂತನೆ ನಡೆಸಲು ತೀರ್ಮಾನಿಸುತ್ತಾರೆ…ಬರಮೇಲು ಮನೆಯ ನೈರುತ್ಯ ಭಾಗದಲ್ಲಿರುವ ಕಿನ್ನಿಗೋಳಿ ಮರದ ಬುಡದಲ್ಲಿ ಉದ್ದಭವವಾಗಿದ್ದು, ಇನ್ನೊಂದು ಭಾಗದಲ್ಲಿ ಗಂಗೋತ್ಪತ್ತಿಯಂತೆ ನೀರಿನ ಒಸರು. ಸೇರಿದಂತೆ ಕೊರಜ್ಜಿ,ಧೂಪ,ಈಶ್ವರ ಬೇರು,ಕಾಡು ಮಲ್ಲಿಗೆ ಕೊರೆಂಬೆ,ಕಿಲೇರಿ ಬಳ್ಳಿ( ಚೆನ್ನರ ಬಳ್ಳಿ) ಉಮಿ ಬಳ್ಳಿ , ಗುಡ್ಡೆ ಕೇಪಳೆ ಹೀಗೆ 9ಬಗೆಯ ಸಸ್ಯ ಬಳ್ಳಿಗಳು ಈ ಸಾನಿಧ್ಯವನ್ನು ಆವರಿಸಿಕೊಂಡಿದ್ದು ಅಲ್ಲದೆ,ಛತ್ರಿಯಷ್ಟು ಭಾಗ ಈ ಸಾನಿಧ್ಯವು ನೆನೆಯದಂತೆ ಈ ಮರವು ರಚನೆಗೊಂಡು ,ಮಳೆ ನೀರಿನಿಂದ ರಕ್ಷಣೆಗೊಳಪಟ್ಟಿದೆ. ಗೆದ್ದಲು ಮರದ ಹುಡಿ ಮತ್ತು ಅಂಟನ್ನು ಸೇರಿಸಿ ರಚಿಸಿದ ಕಲ್ಲುಮುರವೂ ನೀರನ್ನು ಹೀರಿಕೊಳ್ಳುವುದಿಲ್ಲ.ಸಾನಿಧ್ಯದ ಎದುರು ಭಾಗ ,ಸುತ್ತ ಮುತ್ತ ಅರ್ಧ ಎಕರೆಯಷ್ಟು ಜಾಗದಲ್ಲಿ ಕೇಪಳೆ ಹೂಗಿಡಗಳ ಪ್ರಾಕೃತಿಕ ತೋಟವು ತನ್ನಿಂದ ತಾನಾಗಿಯೇ ಕಂಡು ಬಂದುದಲ್ಲದೆ ಆಗಾಗ ” ಕೃಷ್ಣಸರ್ಪದ” ಗೋಚರ ,ಮರದಲ್ಲಿ ಬಿಲಗಳೂ ,ಈ ತನಕ ಪರಿಚಯವಾಗದ ಕೆಂಪು ಬಣ್ಣದ ಹಿಂಭಾಗವನ್ನು ಹೊಂದಿದ ದೊಡ್ಡ ದುಂಬಿಗಳ ಹಾರಾಟ ಈ ಸಾನಿಧ್ಯದ ವಿಶೇಷತೆಯಾಗಿದೆ. ಉದಯಿಸಿದ ಸೂರ್ಯನ ಕಿರಣಗಳು ನೇರವಾಗಿ ಬಿಂಬವನ್ನು ಸ್ಪರ್ಷಿಸುತ್ತದೆ.ಇದರ ಈಶಾನ್ಯ ಭಾಗದಲ್ಲಿ ಕ್ಷೇತ್ರಪಾಲಕ ವೀರಭದ್ರ ,ವಾಯುವ್ಯ ಭಾಗದಲ್ಲಿ ಸುಬ್ರಮಣ್ಯ, ಅಲ್ಲದೆ ಕರುಣಾಕರ ಗೌಡರಿಗೆ ಸ್ವಪ್ನದಲ್ಲಿ ಕಂಡು ಬಂದಂತೆ ಮಣ್ಣನ್ನು ಅಗೆದಾಗ ಕೆಂಪುಕಲ್ಲಿನಲ್ಲಿ ಸಿಕ್ಕಿದ ಅಲ್ಲೇ ಪೂರ್ವ ಆಗ್ನೇಯದಲ್ಲಿ ಮೂಡುಗಣಪ ಸ್ಥಾಪಿಸಲ್ಪಟ್ಟಿದೆ.

ಶ್ರೀ ಉದ್ಭವ ತ್ರಿಶಕ್ತಿ ಸ್ವ ರೂಪಿ ಣಿ ಮಹಾಕಾಳಿಗೆ ಬೆಳಗ್ಗೆ 7.30 ರಿಂದ 8.30 ತನಕ ಪೂಜೆ ,ಸಂಜೆ 6.30 ರಿಂದ ,7.30 ರ ತನಕ ತುಪ್ಪದ ದೀಪಾರಾಧನೆಯನ್ನ ಪ್ರತೀ ನಿತ್ಯ ಕರುಣಾಕರ ಗೌಡರೇ ನೆರವೇರಿಸುತ್ತಿದ್ದು, ಅಲ್ಲದೇ ಜನವರಿ ದಿನಾಂಕ 14 ರಂದು ಮಕರ ಸಂಕ್ರಮಣ ದಿವಸ ವಿಶೇಷ ಆರಾಧನೆ ವರ್ಷದ ಉತ್ಸವವೂ ವುಷುಕಣಿ ದಿನದಂದು ಆಹ್ವಾನಿಸಿದ ಅರ್ಚಕರ ನೇತೃತ್ವದಲ್ಲಿ, ಪೂಜಾಕಾರ್ಯ ನಡೆಯುವುದಲ್ಲದೆ, ವಿಷುಕಣಿ ದಿವಸದಂದು ದ್ರವ್ಯ ಪ್ರಸಾದ ನೆರವೇರಿ ಊರಿನ ಭಕ್ತಾದಿಗಳು ಈ ಶುಭಸಂದರ್ಭದಲ್ಲಿ ಪಾಲ್ಗೊಳ್ಳುತ್ತಾರೆ.

ಐವರ್ನಾಡು ಗ್ರಾಮ ದೇವರುಗಳಾದ ದೇರಾಜೆ ಶ್ರೀ ಪಂಚಲಿಂಗೇಶ್ವರ, ಪಾಲೆಪ್ಪಾಡಿ ಶ್ರೀ ಗೋಪಾಲಕೃಷ್ಣ,ಬರಮೇಲು ಶ್ರೀ ಉದ್ಭವ ತ್ರಿಶಕ್ತಿ ಸ್ವರೂಪಿಣಿ ಮಹಾಕಾಳಿ ಈ ತ್ರಿಶಕ್ತಿಗಳ ಅನುಗ್ರಹವೂ ಆಶೀರ್ವಾದ ವೂ ಅಲ್ಲದೆ ಊರಿನ ನಾಗ ಹಾಗೂ ದೈವಗಳ ಕೃಪಾಕಟಾಕ್ಷವೂ ಗ್ರಾಮದ ಎಲ್ಲಾ ಜನತೆಯ ಮೇಲೆರಲಿ ಎಂಬುದು ನಮ್ಮೆಲ್ಲರ ಭಕ್ತಿ ಪೂರ್ವಕ ಪ್ರಾರ್ಥನೆ.


  • ಬಾಲು ದೇರಾಜೆ ಸುಳ್ಯ

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW