೧೯೭೯-೮೧ರಲ್ಲಿ ಕನ್ನಡ ಅಧ್ಯಯನ ಕೇಂದ್ರ ಬೆಂಗಳೂರು ವಿ.ವಿದಲ್ಲಿ ವಿದ್ಯಾರ್ಥಿಗಳಾಗಿದ್ದಾಗಿನ ಸುವರ್ಣಯುಗದ ನೆನಪು ೧೦. – ರಘುನಾಥ್ ಕೃಷ್ಣಮಾಚಾರ್, ತಪ್ಪದೆ ಮುಂದೆ ಓದಿ…
ಡಾ.ಕೆ.ಮರುಳಸಿದ್ದಪ್ಪ ನಮ್ಮ ಪ್ರೀತಿಯ ಮೇಷ್ಟ್ರು. ನಮಗೆ ಸಿಂಜ್ ನ ‘ರೈಡರಸ್ ಟು ದಿ ಸೀ ‘ ಎನ್ನುವ ಅಪೂರ್ವ ನಾಟಕವನ್ನು ಪಾಠ ಮಾಡುತ್ತಿದ್ದರು. ಅದೊಂದು ಸಾವಿನೊಂದಿಗೆ ಸೆಣಸಾಡುವವರ ದೈನಿಕದ ವಸ್ತುವನ್ನು ಹೊಂದಿದ ನಾಟಕ. ಅವರ “ಆಧುನಿಕ ಕನ್ನಡ ನಾಟಕ” ಮಹಾಪ್ರಬಂಧ ಕನ್ನಡ ನಾಟಕ ಕುರಿತು ಅಧ್ಯಯನ ಮಾಡುವವರಿಗೆ ಒಂದು ಅಧಿಕೃತ ಜ್ಞಾನ ಭಂಡಾರ. ಅದಕ್ಕೆ ನಮ್ಮ ಇನ್ನೊಬ್ಬ ಗುರುಗಳಾದ ಡಾ.ಎಂ.ಚಿದಾನಂದ ಮೂರ್ತಿಗಳು ಮುನ್ನುಡಿ ಬರೆದಿದ್ದಾರೆ. ನಮ್ಮ ಬೌದ್ಧಿಕ ಬೆಳವಣಿಗೆಗೆ ಗಟ್ಟಿಯಾದ ತಳಪಾಯ ಹಾಕಿದರು. ನಾವು ಎಂ.ಎ. ಮುಗಿಸಿ ಮುಂಬಯಿ ವಿಶ್ವವಿದ್ಯಾಲಯದ ಪಿಎಚ್ಡಿ ವಿದ್ಯಾರ್ಥಿಗಳಾಗಿ ಡಾಕ್ಟರ್ ತಾಳ್ತಜೆ ವಸಂತ ಕುಮಾರ ಮಾರ್ಗದರ್ಶನದಲ್ಲಿ ಮಹಾಪ್ರಬಂಧ ಸಲ್ಲಿಸಿದಾಗ ಅದಕ್ಕೆ ಮೌಲ್ಯ ನಿರ್ಣಾಯಾಕರಾಗಿ ಒಳ್ಳೆಯ ಮಾತುಗಳನ್ನು ಬರೆದು ಪ್ರೋತ್ಸಾಹ ನೀಡಿದರು. ಅಲ್ಲದೆ ನನ್ನ ಮೌಖಿಕ ಪರೀಕ್ಷೆಗೂ ಬಂದು ನಾನು ಮರೆತಿದ್ದ ,ಅವರು ಬರೆದ ಮೌಲ್ಯ ಮಾಪನ ವರದಿಯನ್ನು ತಂದು ನನ್ನ ಪಾರುಮಾಡಿದರು. ನಮ್ಮ ವೃತ್ತಿ ಜೀವನದ ಶ್ರೇಯಸ್ಸಿಗೆ ಕಾರಣಕರ್ತರಾದರು.

ಡಾ.ಕೆ.ಮರುಳಸಿದ್ದಪ್ಪ ಅವರ ಜೊತೆ ಅವರ ಮಗ ಖ್ಯಾತ ಸಿನಿಮಾ ನಿರ್ದೇಶಕ ಕೆ ಎಂ ಚೈತನ್ಯ
ನಾಲ್ಕಾರು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಗಿರಿಜಾಳ ಪುಸ್ತಕಗಳ ಬಿಡುಗಡೆಯನ್ನು ಕಪ್ಪಣ್ಣ ಅಂಗಳದಲ್ಲಿ ಆಯೋಜಿಸಿದಾಗ ಅವರನ್ನು ಮುಖ್ಯ ಅತಿಥಿಯಾಗಿ ಬಂದು ಪುಸ್ತಕಗಳು ಬಿಡುಗಡೆ ಮಾಡಿದರು. ಅಲ್ಲದೆ ಪುಸ್ತಕಗಳ ಕುರಿತು ಒಳ್ಳೆಯ ಮಾತುಗಳನ್ನು ಆಡಿ ಶುಭ ಹಾರೈಸಿದರು.
ಮೂರು ವರ್ಷಗಳ ಹಿಂದೆ ಅವರು ಕುವೆಂಪು ಭಾಷಾ ಭಾರತಿಯ ಅಧ್ಯಕ್ಷರಾಗಿದ್ದಾಗ ಗಿರಿಜಾ ಮಾಡಿದ ಮರಾಠಿ ‘ಸಾವಿತ್ರಿ’ ಕಾದಂಬರಿಯ ಅನುವಾದವನ್ನು ಪ್ರಕಟಿಸಿದರು. ಅದಕ್ಕೆ ಅವರು ಬರೆದ ಬೆನ್ನುಡಿಯನ್ನು ಮುಂದೆ ಕೊಡಲಾಗಿದೆ: “ಈ ಕಾದಂಬರಿಯ ನಾಯಕಿ ೧೯೩೯ ರಿಂದ ೧೯೪೭ ರ ಅವಧಿಯಲ್ಲಿ ‘ ಅವನಿಗೆ ಬರೆದ ಪತ್ರಗಳು. ಕಾದಂಬರಿಯುದ್ದಕ್ಕೂ ಅವಳೆ ಬರೆಯುತ್ತಾಳೆ. ‘ಅವನು’ ಬರೆಯುವುದಿಲ್ಲ. ‘ಅವಳು’ ಬರೆದ ಪತ್ರಗಳಲ್ಲೇ ‘ಅವನ’ ಉತ್ತರಗಳೂ ಇವೆ. ಚೆನ್ನಮಲ್ಲಿಕಾರ್ಜುನನ್ನು ಅಕ್ಕ ಹೇಗೆ ಪ್ರೀತಿಸುತ್ತಾಳೋ ಅದೇ ರೀತಿ ’ಅವನು’ ಕೇವಲ ಪತ್ರಗಳ ಮೂಲಕ ಆತ್ಮ ಸಖನಾಗಿ ಬಿಡುತ್ತಾನೆ. ಅವರ ಪರಸ್ಪರ ಬೆಂಬಲ, ಪ್ರೀತಿ, ಸ್ನೇಹ, ಇಬ್ಬರನ್ನೂ ಪರಸ್ಪರ ಬೆಳೆಸಿವೆ. ಹೆಣ್ಣು ಗಂಡು ಸಂಬಂಧದ ಸ್ವರೂಪ ಈ ಕಾದಂಬರಿಯಲ್ಲಿ ಅನಾವರಣಗೊಂಡಿದೆ. ಸಾವಿತ್ರಿಯ ಪ್ರೇಮದ ಕಲ್ಪನೆಯು ವೈಯಕ್ತಿಕವಾಗಿದ್ದರೂ ಅದು ಜಾಗತಿಕ ವಾಗಿಯು ಇರುವಂತೆ ಕಾದಂಬರಿಯ ವಿನ್ಯಾಸವಿದೆ.” ಕಳೆದ ವರ್ಷ ಗುರುಗಳಾದ ಜಿ ಎಸ್. ಎಸ್ ಪ್ರತಿಷ್ಠಾನ ನಡೆಸಿದ ಅವರ ಕುರಿತ ವಿಚಾರ ಸಂಕಿರಣಕ್ಕೆ ಅಧ್ಯಕ್ಷರಾಗಿ ಆಗಮಿಸಿ ಜಿ.ಎಸ್‌ಎಸ್.ಕುರಿತು ನಾನು ಆಡಿದ ಮಾತುಗಳನ್ನು ಮೆಚ್ಚಿ ಪ್ರೋತ್ಸಾಹ ನೀಡಿದರು. ಇಂತಹ ಗುರುಗಳು ನಮಗೆ ದೊರೆತದ್ದು ನಮ್ಮ ಭಾಗ್ಯ.
- ರಘುನಾಥ್ ಕೃಷ್ಣಮಾಚಾರ್
