ಮುಪ್ಪು ಆವರಿಸಿದಾಗ

ಪ್ರಕೃತಿಯಲ್ಲಿ ಜನಿಸಿದ ಪ್ರತಿಯೊಂದು ಜೀವಿಯೂ ಬಾಲ್ಯ, ಕೌಮಾರ್ಯ, ಯೌವ್ವನ, ಮುಪ್ಪು ಎಂಬ ನಾಲ್ಕು ಹಂತಗಳನ್ನು ದಾಟಲೇಬೇಕು. ದೇಹಕ್ಕೆ ವಯಸ್ಸಾಗುತ್ತಿದೆಯೇ ಹೊರತು ಮನಸ್ಸಿಗಲ್ಲ ಎಂಬುದನ್ನು ಚೆನ್ನಾಗಿ ಅರ್ಥೈಸಿಕೊಳ್ಳಬೇಕು. ಇದು ಮುಪ್ಪಿನ ವಿಷಯ, ಸರ್ವಮಂಗಳ ಜಯರಾಂ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

ಇತ್ತೀಚೆಗೆ ನಾನು ಒಂದು ಮದುವೆ ಸಮಾರಂಭಕ್ಕೆ ಹೋಗಿದ್ದಾಗ ಮದುವೆ, ಊಟ ಮುಗಿದ ಮೇಲೆ ಅಲ್ಲಿಯೇ ಇದ್ದ ನೆಂಟರಿಷ್ಟರನ್ನು ಕುಶಲೋಪರಿ ಮಾತನಾಡಿಸಿದೆ. ಅವರಲ್ಲಿ ಒಬ್ಬರು ಹಿರಿಯ ಮುತ್ತೈದೆ ಇದ್ದರು. ಅವರನ್ನು ನೋಡಿ ಸುಮಾರು 8 – 10 ವರ್ಷಗಳಾಗಿದ್ದವು. ಆ ದಿನಗಳಲ್ಲಿ ಅವರು ತುಂಬಾ ಸುಂದರವಾಗಿದ್ದರು. ಸಿನಿಮಾ ತಾರೆಯಂತೆ ಇದ್ದರೆಂದರೆ ತಪ್ಪಾಗಲಾರದು. ನಾವೆಲ್ಲಾ ಅವರನ್ನು ಕುತೂಹಲದಿಂದ ನೋಡುತ್ತಿದ್ದೆವು. ಆದರೆ ಈಗ ಅವರಿಗೆ ಮುಪ್ಪು ಆವರಿಸಿದೆ.

ಸುಕ್ಕಾದ ಚರ್ಮ, ಗುಳಿ ಬಿದ್ದ ಕೆನ್ನೆ, ಕಣ್ಣುಗಳು, ತಲೆಯಲ್ಲಿ ತೆಳುವಾದ ನೆರೆತ ಕೂದಲು, ಬೊಚ್ಚು ಬಾಯಿ…. ಹೀಗೆ ಅವರು ಭೌತಿಕವಾಗಿ ತುಂಬಾ ಬದಲಾಗಿದ್ದರು. ತುಂಬಾ ಸುಂದರವಾಗಿದ್ದ, ಯಾವಾಗಲೂ ನವ ಯುವತಿಯಂತೆ ಕಂಗೊಳಿಸುತ್ತಿದ್ದ ಅವರನ್ನು ಈ ಸ್ಥಿತಿಯಲ್ಲಿ ಕಂಡು ನನಗಂತೂ ಆಶ್ಚರ್ಯವಾಯಿತು. ಅವರೇನಾ ಇವರು ಅನ್ನುವಷ್ಟರ ಮಟ್ಟಿಗೆ. ನನ್ನ ಪಕ್ಕದಲ್ಲಿದ್ದ ಒಬ್ಬ ಹೆಂಗಸು ತನ್ನ ಆಶ್ಚರ್ಯವನ್ನು ವ್ಯಕ್ತಪಡಿಸಿಯೇ ಬಿಟ್ಟರು. ” ಅಯ್ಯೋ… ಅಮ್ಮ ಹೇಗಾಗಿಬಿಟ್ಟಿದೀರಿ ….ಎಷ್ಟು ಚಂದ ಇದ್ರಿ …..ಎಂದಕೂಡಲೇ ಆಕೆಗೆ ಕಣ್ಣೀರು ಫಳಫಳನೆ ಹರಿದು ಬಂದವು. ತನಗೆ ವಯಸ್ಸಾಗಿದೆ ಎಂಬುದು ಆಕೆಯ ಕೀಳರಿಮೆಗೆ ಕಾರಣ. “ವಯಸ್ಸಾಯ್ತು ನೋಡಿ ಹೇಗಾಗಿಬಿಟ್ಟಿದೀನಿ ” ಎನ್ನುತ್ತಾ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಅವರನ್ನು ನಾವೆಲ್ಲರೂ ಸಮಾಧಾನಗೊಳಿಸಿ ಸುಮ್ಮನಾಗಿಸಿದೆವು.

ಫೋಟೋ ಕೃಪೆ : google

ಮೇಲ್ನೋಟಕ್ಕೆ ಇದು ತೀರಾ ಸಾಮಾನ್ಯ ಸಂಗತಿ ಎನಿಸಿದರೂ ಇದರ ಹಿಂದಿನ ತಾತ್ಪರ್ಯ ಬಹಳ ಗಹನವಾದದ್ದು. ಪ್ರಕೃತಿಯಲ್ಲಿ ಜನಿಸಿದ ಪ್ರತಿಯೊಂದು ಜೀವಿಯೂ ಬಾಲ್ಯ, ಕೌಮಾರ್ಯ, ಯೌವ್ವನ, ಮುಪ್ಪು ಎಂಬ ನಾಲ್ಕು ಹಂತಗಳನ್ನು ದಾಟಲೇಬೇಕು. ಮನುಷ್ಯನೂ ಇದಕ್ಕೆ ಹೊರತಲ್ಲ. ಈ ಎಲ್ಲ ಸ್ಥಿತಿಗಳನ್ನು ಅನುಭವಿಸಲೇ ಬೇಕು. ಬಾಲ್ಯ, ಕೌಮಾರ್ಯ, ಯೌವನವನ್ನು ಮನಸೋ ಇಚ್ಛೆ ಅನುಭವಿಸುವ , ಸಂಭ್ರಮಿಸುವ ನಾವು ಮುಪ್ಪನ್ನು ಮಾತ್ರ ಸ್ವಾಗತಿಸುವುದಿಲ್ಲ. ಮುಂದೂಡಲು ಪ್ರಯತ್ನಿಸುತ್ತೇವೆ. ಅಥವಾ ಮುಪ್ಪು ಆವರಿಸಿದಾಗ ಆಕಾಶ ಕಳಚಿ ತಲೆ ಮೇಲೆ ಬಿದ್ದಂತೆ ವರ್ತಿಸುತ್ತೇವೆ.

ವಯೋಸಹಜ ಮುಪ್ಪು ಬಂದರೂ ಅದನ್ನು ಸ್ವೀಕರಿಸಲು ಮನಸ್ಸು ತಯಾರಿರುವುದಿಲ್ಲ. ಯಾರು ತಾನೇ ವಯಸ್ಸಾದವರಂತೆ ಕಾಣಲು ಇಚ್ಛಿಸುತ್ತಾರೆ. ಎಲ್ಲರ ಮನಸ್ಸೂ ನವ ಯುವತಿಯರಂತೆ, ಅಥವಾ ನವ ಯುವಕರಂತೆ ಕಾಣಲು ಹಾತೊರೆಯುತ್ತದೆ. ಕೇವಲ ಸ್ತ್ರೀಯರಷ್ಟೇ ಅಲ್ಲ ಪುರುಷರೂ ಕೂಡ ಯಾವಾಗಲೂ ಚಿರ ಯೌವ್ವನಿಗರಂತೆ ಕಾಣಲು ಬಯಸುತ್ತಾರೆ. ವೃದ್ಧಾಪ್ಯವನ್ನು ಯಾರೂ ಬಯಸುವುದಿಲ್ಲ. ಸಾವಿರಾರು ವರ್ಷಗಳ ಹಿಂದಿನ ಪುರಾಣಗಳನ್ನು ಅವಲೋಕಿಸಿದಾಗ ಇದು ವೇದ್ಯವಾಗುತ್ತದೆ.

ಮಹಾಭಾರತದ ಆದಿ ಪರ್ವದ ಕಥೆಯನ್ನಾಧರಿಸಿದ ಕಾರ್ನಾಡರ ಯಯಾತಿ ನಾಟಕದಲ್ಲಿ ಬರುವ ಪಾತ್ರಗಳು ಈ ವಿಷಯವನ್ನು ತುಂಬಾ ಪರಿಣಾಮಕಾರಿಯಾಗಿ ಬಿಂಬಿಸಿವೆ.
ಪಾಂಡವರ ಪೂರ್ವಜರಲ್ಲಿ ಒಬ್ಬನಾದ ಯಯಾತಿ ಮಹಾರಾಜನು ತನ್ನ ಪತ್ನಿ ದೇವಯಾನಿಯ ದಾಸಿಯಾದ ಶರ್ಮಿಷ್ಠೆಯನ್ನು ಬಯಸಿ, ಆಕೆಯ ಮೋಹ ಪಾಶದಲ್ಲಿ ಸಿಲುಕುತ್ತಾನೆ. ಇಬ್ಬರ ಮೋಹ ಬಯಲಾಗಿ ಪತ್ನಿ ದೇವಯಾನಿಯು ತನ್ನ ತಂದೆಯ ಬಳಿ ಹೋಗಿ ದೂರಲಾಗಿ ಅತ್ಯಂತ ಕೋಪಿಷ್ಠರಾದ ಶುಕ್ರಾಚಾರ್ಯರು ಯಯಾತಿಯ ಯೌವ್ವನವು ಕಳೆದು ಮುಪ್ಪು ಆವರಿಸುವಂತೆ ಶಾಪ ಕೊಡುತ್ತಾರೆ. ಇದರಿಂದ ಆತಂಕಕ್ಕೆ ಒಳಗಾದ ಯಯಾತಿ ಶಾಪವನ್ನು ಹಿಂಪಡೆಯುವಂತೆ ಬೇಡಿ ಕೊಳ್ಳುತ್ತಾನೆ. ಆದರೆ ಶುಕ್ರಾಚಾರ್ಯರು ಕೊಟ್ಟ ಶಾಪವನ್ನು ಹಿಂಪಡೆಯಲು ಸಾಧ್ಯವಿಲ್ಲ. ಪ್ರತಿಯಾಗಿ ಉಶ್ಯಾಪವನ್ನು ಪಡೆಯಬಹುದು ಎಂದು ಹೇಳುತ್ತಾನೆ.

ಫೋಟೋ ಕೃಪೆ : google

ಉಶ್ಯಾಪವೆಂದರೆ ಯಯಾತಿಯ ಮುಪ್ಪನ್ನು ಯಾರಾದರೂ ಪಡೆದರೆ ಅವರ ಯೌವನವನ್ನು ಯಯಾತಿ ಪಡೆದು ಶಾಪ ವಿಮುಕ್ತಿಯನ್ನು ಹೊಂದಬಹುದು. ತನ್ನ ರಾಜ್ಯದ ಅರ್ಧಭಾಗವನ್ನು ಕೊಡುವುದಾಗಿ ಡಂಗೂರ ಹೊಡೆಸಿದಾಗ್ಯೂ ಯಾರೂ ತಮ್ಮ ಯೌವ್ವನವನ್ನು ನೀಡಲು ಮುಂದೆ ಬರುವುದಿಲ್ಲ. ಅಷ್ಟೇ ಏಕೆ ಯಯಾತಿಯ ಐದು ಜನ ಗಂಡು ಮಕ್ಕಳಲ್ಲಿ ಒಬ್ಬನಾದ ಪುರು ಮಾತ್ರ ತಂದೆಯ ಆತಂಕವನ್ನು ಕಣ್ಣಾರೆ ಕಂಡು ತನ್ನ ಯೌವ್ವನವನ್ನು ಧಾರೆ ಎರೆದು ಅವನಿಂದ ಮುಪ್ಪನ್ನು ಪಡೆದು ತ್ಯಾಗವನ್ನು ಮೆರೆಯುತ್ತಾನೆ. ಇದರಿಂದ ಸಂತಸಗೊಂಡ ಯಯಾತಿ ಮಗನ ತ್ಯಾಗ ಗುಣವನ್ನು ಕೊಂಡಾಡುತ್ತಾನೆ. ಆದರೆ ವೃದ್ಧಾಪ್ಯವನ್ನು ಹೊತ್ತ ಪುರು ಅಂತಃಪುರಕ್ಕೆ ಕಾಲಿಟ್ಟಾಗ ಅವನ ಮುಪ್ಪಿನ ಕರಾಳ ಮುಖವನ್ನು ಕಂಡು ಹೆಂಡತಿ ಚಿತ್ರಲೇಖೆ ಕಿಟಾರನೆ ಕಿರುಚಿಕೊಳ್ಳುತ್ತಾಳೆ. ಅಲ್ಲಿಂದ ಪುರುವನ್ನು ಹೊರಗೆ ಹೋಗುವಂತೆ ಆಜ್ಞೆ ಮಾಡುತ್ತಾಳೆ. ಇಲ್ಲಿ ಪುರುವಿನ ಹೆಂಡತಿ ಚಿತ್ರಲೇಖೆ ಕೂಡ ಪ್ರೀತಿಸಿದ್ದು ಪುರುವಿನ ಯೌವ್ವನವನ್ನೇ ಹೊರತು ಪುರುವನ್ನಲ್ಲ ಎಂಬುದು ತಿಳಿಯುತ್ತದೆ.

ಸಾಮಾನ್ಯವಾಗಿ ನಲವತ್ತರ ನಂತರ ಅಲ್ಲೊಂದು ಇಲ್ಲೊಂದು ಬೆಳ್ಳಿಕೂದಲು ಕಾಣಿಸಿಕೊಂಡು ಕನ್ನಡಿಯ ಮುಂದೆ ನಿಂತಾಗಲೆಲ್ಲಾ ಕಿಸಕ್ಕನೆ ನಕ್ಕು ಅಣಕಿಸಿದಂತಾಗುತ್ತದೆ. ಸುಕ್ಕು ಗಟ್ಟಿದ ಚರ್ಮ, ಗುಳಿ ಬಿದ್ದ ಕಣ್ಣುಗಳು ನಿರಾಸೆ ಮೂಡಿಸುತ್ತವೆ. ಮಾಲ್‌ಗಳಲ್ಲಿ,ಮಾರ್ಕೆಟ್ ನಲ್ಲಿ ಸೇಲ್ಸ್‌ಮನ್, ಸೇಲ್ಸ್ ಗರ್ಲ್ ಗಳು, ಆಟೋ ಡ್ರೈವರ್ ಗಳು ತಮಗಿಂತ ಒಂದೆರಡು ವರ್ಷ ಚಿಕ್ಕವರಿರುತ್ತಾರಷ್ಟೇ ಅಥವಾ ಕೆಲವೊಮ್ಮೆ ನಮಗಿಂತಲೂ ದೊಡ್ಡವರಿರುತ್ತಾರೆ. ಅಂತವರೂ ಕೂಡ ಆಂಟಿ, (ಅಂಕಲ್) ಎಂದಾಗ ಮನಸ್ಸಿಗೆ ಕಸಿವಿಸಿಯಾಗುತ್ತದೆ. ಅಯ್ಯೋ… ನಾನು ಮುದುಕಿ ( ಮುದುಕ) ಆಗಿಬಿಟ್ಟೆನೆ ಎಂದು ಮನಸ್ಸು ಆತಂಕಕ್ಕೊಳಗಾಗುತ್ತದೆ. ಅಂತವರು ಕ್ರಮೇಣ ಖಿನ್ನತೆಗೂ ಒಳಗಾಗುತ್ತಾರೆ. ವಯಸ್ಸಾಗುವಿಕೆಯು ಒಂದು ಸಹಜ ಪ್ರಕ್ರಿಯೆ ಎಂದು ಮನಸ್ಸು ಒಪ್ಪುವುದೇ ಇಲ್ಲ. ಒಂದು ರೀತಿಯ ಮನೋವ್ಯಾಕುಲಕ್ಕೆ ಒಳಗಾಗುತ್ತಾರೆ. ಇನ್ನೂ ಕೆಲವರು ತನಗೆ ವಯಸ್ಸಾಯಿತು, ತಾನು ಹೀಗೆಲ್ಲಾ ಇರಬಾರದು, ಇಂತಹ ಉಡುಗೆಗಳನ್ನು ತೊಡಬಾರದು ಎಂದೆಲ್ಲಾ ಯೋಚಿಸಿ ತಮ್ಮಷ್ಟಕ್ಕೆ ತಾವೇ ಸ್ವಯಂ ಬೇಲಿಯನ್ನು ಹಾಕಿಕೊಳ್ಳುತ್ತಾರೆ.ನಿರಾಸೆ ,ದುಗುಡವನ್ನು ಮನಸ್ಸಿನಲ್ಲಿ ತುಂಬಿಕೊಂಡು ಸದಾ ಸಿಡಿಮಿಡಿಗೊಳ್ಳುತ್ತಾ ಮತ್ತಷ್ಟು ವಯಸ್ಸಾದವರಂತೆ ಕಾಣತೊಡಗುತ್ತಾರೆ.

ಇವೆಲ್ಲಾ ಸಂಕೋಲೆಗಳಿಂದ ಹೊರಬರಬೇಕೆಂದರೆ ಮೊದಲು ನಮ್ಮನ್ನು ನಾವು ಪ್ರೀತಿಸಬೇಕು, ನಮ್ಮನ್ನು ನಾವು ಹೇಗಿದ್ದರೂ ಒಪ್ಪಿಕೊಳ್ಳಬೇಕು. ಯಾವುದೇ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳಬಾರದು. ಶಾಂತ ಚಿತ್ತದಿಂದ ವರ್ತಿಸಬೇಕು. ದೇಹಕ್ಕೆ ವಯಸ್ಸಾಗುತ್ತಿದೆಯೇ ಹೊರತು ಮನಸ್ಸಿಗಲ್ಲ ಎಂಬುದನ್ನು ಚೆನ್ನಾಗಿ ಅರ್ಥೈಸಿಕೊಳ್ಳಬೇಕು. ಮೊದಲು ಯೌವನದ ದಿನಗಳಲ್ಲಿ ನಾವು ಹೇಗೆ ಕ್ರಿಯಾಶೀಲರಾಗಿದ್ದೆವೋ ಹಾಗೆಯೇ ಮುಪ್ಪಿನ ದಿನಗಳಲ್ಲೂ ರೂಢಿಸಿಕೊಂಡರೆ ಖಿನ್ನತೆ ಎಂಬುದು ಹತ್ತಿರಕ್ಕೆ ಸುಳಿಯುವುದಿಲ್ಲ. ನಿಯಮಿತ ವ್ಯಾಯಾಮ, ಸತ್ವಯುತ ಆಹಾರ, ಧನಾತ್ಮಕ ವಿಚಾರ, ಪ್ರಕೃತಿಯೊಂದಿಗಿನ ಒಡನಾಟ, ಆಗಾಗ ಪ್ರವಾಸ ಹೋಗುವುದು, ಮಕ್ಕಳೊಂದಿಗೆ ಮಕ್ಕಳಾಗಿ ನಲಿಯುವುದು, ಮನರಂಜನಾ ಕ್ರೀಡೆಗಳಲ್ಲಿ ಭಾಗವಹಿಸುವುದು, ಆಸಕ್ತಿಕರ ಕ್ಷೇತ್ರವನ್ನು ಗುರ್ತಿಸಿ ನಿರಂತರವಾಗಿ ತೊಡಗಿಸಿಕೊಳ್ಳುವುದರಿಂದ ಮುಪ್ಪು ಆವರಿಸಿದರೂ ಮನಸ್ಸು ಲವಲವಿಕೆಯಿಂದ ಕೂಡಿರುತ್ತದೆ.


  • ಸರ್ವಮಂಗಳ ಜಯರಾಂ – ಶಿಕ್ಷಕಿ, SSEA ಪ್ರೌಢಶಾಲೆ, ಗೌರಿಬಿದನೂರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW