ಪತ್ರಿಕೋದ್ಯಮದಿಂದ ಹೊರಗೆ ಬಂದು ಕೃಷಿ ಉದ್ಯಮದಲ್ಲಿ ಕಲ್ಲು ಮುಳ್ಳಿನ ಹಾದಿಯನ್ನು ದಾಟಿ ಯಶಸ್ಸನ್ನು ಸಾಧಿಸಿದ ನಾಗೇಂದ್ರ ಸಾಗರ್ ಅವರ ಒಂದು ಪರಿಶ್ರಮದ ಒಂದು ಪುಟ್ಟ ಲೇಖನ, ತಪ್ಪದೆ ಮುಂದೆ ಓದಿ…
ಇಷ್ಟು ದೊಡ್ಡ ಟ್ರಕ್ ಲೋಡಿನಷ್ಟು ನಮ್ಮ ಸಾವಯವ ಗೊಬ್ಬರವನ್ನು ಕಳಿಸುವುದು ನಮ್ಮ ಬಹು ದಿನದ ಕನಸಾಗಿತ್ತು.. ಈ ಒಂದು ಕನಸು ಸಾಕಾರ ವಾಗಲು ಸುಮಾರು ಇಪ್ಪತ್ತೈದು ವರ್ಷಗಳೇ ಬೇಕಾದವು.. ಇಂದು ಆ ಕನಸು ನನಸಾಗಿದ್ದರ ಬಗ್ಗೆ ನಮಗೆ ಒಂಥರಾ ಭರಪೂರ ಸಂತಸ.
ವಿವಿಧ ಬಗೆಯ ಕೃಷಿ ಚಟುವಟಿಕೆಗಳೊಂದಿಗೆ ಎರೆಗೊಬ್ಬರ ಮತ್ತು ಜೀವಾಣುಗೊಬ್ಬರ ತಯಾರಿಸಿ ಅವಶ್ಯಕತೆ ಉಳ್ಳ ರೈತರಿಗೆ ಅದನ್ನು ಪೂರೈಸುತ್ತಾ ಬದುಕು ಕಟ್ಟಿಕೊಳ್ಳೋಣ ಎಂದು ನಾವು ಮದುವೆ ಆದ ಹೊಸತರಲ್ಲಿ ನಿರ್ಧರಿಸಿದ್ದೆವು. ಎಲ್ಲವೂ ಎಣಿಕೆಯಂತೆಯೇ ನಡೆಯಬೇಕಲ್ಲ? ಲೆಕ್ಕಾಚಾರ ಅಲ್ಪ ಸ್ವಲ್ಪ ತಪ್ಪಿದರೂ ಇರಿಸಿದ ಗುರಿ ತಪ್ಪಲಿಲ್ಲ.. ನಮ್ಮ ಸಾವಯವ ಗೊಬ್ಬರ ತಯಾರಿಕೆ ಘಟಕವನ್ನು ಸ್ವಲ್ಪ ಸ್ವಲ್ಪವೇ ವಿಸ್ತರಿಸುತ್ತಾ ಬರುತ್ತಿದ್ದೆವು.. ಈ ಇಪ್ಪತ್ತೈದು ವರ್ಷಗಳಿಂದ ಗ್ರಾಹಕರ ನಂಬಿಕೆ ವಿಶ್ವಾಸವನ್ನು ಉಳಿಸಿಕೊಂಡ ಹೆಮ್ಮೆ ನಮ್ಮದು.. ನಿಜ ಹೇಳಬೇಕೆಂದರೆ ನಮ್ಮ ಎಷ್ಟೋ ಗ್ರಾಹಕರ ಮುಖ ಭೇಟಿಯನ್ನೂ ನಾವು ಮಾಡಿದ್ದಿಲ್ಲ.. ಫೋನಿನಲ್ಲೇ ಆರ್ಡರ್ ಪಡೆದು ಆನಲೈನಿನಲ್ಲೇ ಪೇಮೆಂಟ್ ಪಡೆದಿದ್ದೇವೆ…
ಬೇಡಿಕೆಗೆ ತಕ್ಕಂತೆ ಉತ್ಪಾದನೆ ಹೆಚ್ಚಿಸುತ್ತಾ ಬಂದರೂ ಕಾರ್ಮಿಕರ ಕೊರತೆಯ ಬಾಧೆ ಕೂಡ ಇದೆ.. ಇಂದು ಬಂದ ಕೆಲಸದವರು ನಾಳೆ ಬಂದೇ ಬಿಡುತ್ತಾರೆ ಎಂಬ ನಂಬಿಕೆ ಇರಲಿಲ್ಲ.. ಎಷ್ಟೋ ಬಾರಿ ಆರ್ಡರ್ ಪಡೆದರೂ ಸಕಾಲದಲ್ಲಿ ಪೂರೈಕೆ ಮಾಡಲು ಆಗದೇ ಕಸಿವಿಸಿ ಪಟ್ಟಿದ್ದಿದೆ… ಈ ವರ್ಷ ವ್ಯವಸ್ಥೆಯನ್ನು ಉನ್ನತೀಕರಿಸಿದ್ದೇವೆ.. ಅನುಕೂಲಕ್ಕೆ ತಕ್ಕಂತೆ ಯಾಂತ್ರೀಕರಣ ಮಾಡಿದ್ದೇವೆ.. ಜೊತೆಗೆ ಕೆಲಸಗಾರರನ್ನು ಪೂರೈಸುವ ಮಂಡಗಳಲೆ ಗಣಪತಿಯೊಂದಿಗೆ ಒಡಂಬಡಿಕೆ ಮಾಡಿಕೊಂಡ ಮೇಲೆ ಹೊಸ ಹುಮ್ಮಸ್ಸು ಬಂದಿದೆ.. ನಿಗದಿತ ದಿನದಂದು ಗೊಬ್ಬರ ಪೂರೈಸಲು ಸಾಧ್ಯವಾಗುತ್ತಿದೆ.
ಹಿಂದೆಯೂ ದೊಡ್ಡ ಆರ್ಡರ್ ಸಿಗುತ್ತಿರಲಿಲ್ಲ ಅಂತಲ್ಲ.. ಆದರೆ ಪೂರೈಕೆಯನ್ನು ಹಂತ ಹಂತವಾಗಿ ಕೊಡಲಷ್ಟೇ ಆಗುತ್ತಿತ್ತು.. ಈಗ ಮಾಡಿಕೊಂಡ ವ್ಯವಸ್ಥೆಯ ಬಳಿಕ ಹಿಡಿದ ಆರ್ಡರ್ರನ್ನು ಒಂದೆರಡು ದಿನ ಹೆಚ್ಚೂ ಕಡಿಮೆ ಪೂರೈಸುವ ಧೈರ್ಯ ಬಂದಿದೆ.. ಅದೇ ಲೆಕ್ಕದಲ್ಲಿ ಇಂದು ದೊಡ್ಡ ಆರ್ಡರ್ ಪೂರೈಸಿದ ಹೆಮ್ಮೆ ನಮ್ಮದು…
ಮಾರುಕಟ್ಟೆಯಲ್ಲಿ ಸಾವಯವ ಗೊಬ್ಬರದ ಹೆಸರಿನಲ್ಲಿ ನೂರಾರು ಬ್ರಾಂಡುಗಳಿವೆ. ಇಂದು ಬಹುತೇಕ ಗೊಬ್ಬರಗಳು ಸಿಟಿ ವೇಸ್ಟು ಮತ್ತು ಫ್ಯಾಕ್ಟರಿ ವೇಸ್ಟನ್ನೇ ಆಧರಿಸಿವೆ.. ನಾವು ಮಾತ್ರ ಇದರೊಂದಿಗೆ ರಾಜಿ ಮಾಡಿಕೊಂಡಿಲ್ಲ.. ಇದರಲ್ಲಿ ಬಳಸುವ ಎರೆಗೊಬ್ಬರ ನಮ್ಮದೇ.. ಅದಕ್ಕೆ ಬಳಸಿದ ಹಸುವಿನ ಸಗಣಿ ಕೂಡ ನಮ್ಮ ಕೊಟ್ಟಿಗೆಯದ್ದೇ ಆಗಿದೆ.. ಮತ್ತೆ ವಿಶ್ವಾಸದವರಿಂದಲೇ ಕುರಿಗೊಬ್ಬರ ಖರೀದಿ. ಅದರೊಂದಿಗೆ ಬೆರೆಸುವ ಬೇವಿನ ಹಿಂಡಿ ಮತ್ತಿತರ ಒಳಸುರಿಗಳ ಬಗ್ಗೆ ಕಟ್ಟೆಚ್ಚರ ವಹಿಸಿದ್ದೇವೆ.
ನಮ್ಮ ಕೃಷಿ ಕೆಲಸಗಳನ್ನು ನೋಡಲು ವರ್ಷವೂ ಸಾವಿರಾರು ಜನ ಬರುತ್ತಾರೆ.. ನಮ್ಮೆಲ್ಲ ಕೃಷಿ ಚಟುವಟಿಕೆಗಳು ತೆರೆದಿಟ್ಟ ಸತ್ಯ.. ನಮ್ಮಂತೆಯೇ ಕಷ್ಟಪಟ್ಟು ಬದುಕು ಕಟ್ಟಿಕೊಂಡವರೂ ಇದ್ದಾರೆ.. ಅಂತೆಯೇ ಗ್ರಾಮೀಣ ಪ್ರದೇಶಗಳಲ್ಲಿ ವಿಪುಲ ಉದ್ಯೋಗಾವಕಾಶಗಳೂ ಇವೆ. ಅನೇಕ ಸಮಸ್ಯೆ, ಸಂಕಷ್ಟಗಳ ನಡುವೆಯೂ ಗೆಲುವಿನ ಹಳಿಯ ಮೇಲಿನ ನಮ್ಮ ಪಯಣಕ್ಕೆ ಸಹಕರಿಸಿದವರ ಸಂಖ್ಯೆ ದೊಡ್ಡದಿದೆ.. ಅವರಿಗೂ, ನಮ್ಮ ಹೆಮ್ಮೆಯ ಗ್ರಾಹಕರಿಗೂ ನಮ್ಮ ಧನ್ಯವಾದಗಳು.
- ನಾಗೇಂದ್ರ ಸಾಗರ್