‘ತಂಗುದಾಣ ಬೇಕು ಬದುಕಿಗೆ’ ಪುಸ್ತಕ ಪರಿಚಯ

ಕವಿಯತ್ರಿ ರೇಶ್ಮಾ ಗುಳೇದಗುಡ್ಡಾಕರ್ ಅವರ ಚೊಚ್ಚಲ ಕವನ ಸಂಕಲನದ ‘ತಂಗುದಾಣ ಬೇಕು ಬದುಕಿಗೆ’ ಕುರಿತು ನನ್ನ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದೇನೆ, ತಪ್ಪದೆ ಮುಂದೆ ಓದಿ…

ಪುಸ್ತಕ : ತಂಗುದಾಣ ಬೇಕು ಬದುಕಿಗೆ
ಕವಿಯತ್ರಿ : ರೇಶ್ಮಾ ಗುಳೇದಗುಡ್ಡಾಕರ್
ಪ್ರಕಾಶನ : ಸ್ನೇಹ ಸೌಹಾರ್ದ ಪ್ರಕಾಶನ
ಪುಟ : ೭೨/ 
ಬೆಲೆ : ೧೦೦.೦೦

‘ಮೇಡಂ…ಬ್ಯುಸಿ ಇದ್ದೀರಾ?’… ಆ ಕಡೆಯಿಂದ ರೇಶ್ಮಾ ಗುಳೇದಗುಡ್ಡಕಾರ್  ಧ್ವನಿ ಬಂತು, ‘ಇಲ್ಲಾ ಪಾ… ಹೇಳು ಏನಾಗ್ಬೇಕಿತ್ತು’.. ಅಂದೆ. ಇಬ್ಬರ ನಡುವೆ ತುಂಬಾ ವರ್ಷದಿಂದ ಒಡನಾಟವಿದ್ದರಿಂದ ನಮ್ಮಿಬ್ಬರ ನಡುವೆ ಸಹಜವಾದ ಒಂದು ಬಾಂಧವ್ಯ ಬೆಳೆದಿತ್ತು. ‘ಮೇಡಂ… ಏನು ಇಲ್ಲ, ನನ್ನ ಕವನಗಳನ್ನೆಲ್ಲ ಸೇರಿಸಿ ಪುಸ್ತಕ ಮಾಡುವ ಆಲೋಚನೆ ಇದೆ,  ಹೀಗೀಗೆ ಹೆಸರು ಇಡಬೇಕು ಅಂತ ಅನ್ಕೊಂಡಿದ್ದೀನಿ’… ಅಂತ ತನ್ನ ಮೊದಲ ಕೂಸಿನ ಸಂಭ್ರಮವನ್ನು ನನ್ನೊಂದಿಗೆ ಹಂಚಿಕೊಂಡಳು. ‘ಆಯ್ತು, ಒಳ್ಳೆದಾಗಲಿ ರೇಶ್ಮಾ’… ಅಂತ ಶುಭಕೋರಿ ಫೋನ್ ಇಟ್ಟೆ.

ನನ್ನ ಆಕೃತಿಕನ್ನಡ ಮ್ಯಾಗಝಿನ್ ಶುರುವಾಗಿ ಐದು ವರ್ಷವಾಯಿತು, ಶುರುವಾದಾಗಿನಿಂದಲೂ ರೇಶ್ಮಾ ನನ್ನ ಪತ್ರಿಕೆಗೆ ಕವನ, ಕತೆ, ಲೇಖನಗಳನ್ನು ಬರೆಯುತ್ತಲ್ಲೇ ಬಂದಿದ್ದಾಳೆ. ರೇಶ್ಮಾ ಸಾಹಿತ್ಯದಲ್ಲಿ ಅಂಬೆಗಾಲನ್ನಿಟ್ಟು ಹಂತ ಹಂತವಾಗಿ ನನ್ನ ಕಣ್ಣಮುಂದೆ ಬೆಳೆದಂತಹ ಕವಿಯತ್ರಿ. ಈಗ ಅವಳ ಚೊಚ್ಚಲ ಕವನ ಸಂಕಲನ ಪುಸ್ತಕ ರೂಪದಲ್ಲಿ ಬರುತ್ತಿದೆ ಎಂದರೆ  ನನಗೆ ಸಂತೋಷವಾಗದೆ ಇರುತ್ತದೆಯೇ!. ವಿಷಯ ಕೇಳಿಯೇ ತುಂಬಾ ಸಂತೋಷವಾಯಿತು.

ಕರೆ ಮಾಡಿ ಮೂರೂ ತಿಂಗಳಾದ ಮೇಲೆ ನನ್ನ ಮನೆಗೆ ಒಂದು ಕೊರಿಯರ್ ಬಂತು, ತಗೆದು ನೋಡಿದ್ರೆ ಅದು ರೇಶ್ಮಾ ಗುಳೇದಗುಡ್ಡಕಾರ್ ಅವರ ಕವನ ಸಂಕಲನ ಪುಸ್ತಕವಿತ್ತು. ಕೂಸಿಗೆ ಇಟ್ಟತಂಹ ಹೆಸರು ‘ತಂಗುದಾಣ ಬೇಕು ಬದುಕಿಗೆ’. ಪುಸ್ತಕವನ್ನು ನೋಡಿ ಎಲಾ ಇವಳಾ …ಹೇಳಿ ಮೂರೂ ತಿಂಗಳೊಳಗೆ ಯಾವ ಆಡಂಬರವಿಲ್ಲದೆ ಪುಸ್ತಕ ರೆಡಿ ಮಾಡಿದ್ದೂ ಅಲ್ಲದೆ, ಬಿಡುಗಡೆಯ ಸದ್ದು ಇಲ್ಲದೆ ನನಗೆ ಪೋಸ್ಟ ಮಾಡಿಯೇ ಬಿಟ್ಟಿದ್ದಾಳೆ ಎಂದು ಅಚ್ಚರಿ ಹಾಗೂ ಹಿಡಿದ ಕೆಲಸ ಬಿಡದ ಛಲಗಾರ್ತಿ ಎಂದು ಮನಸ್ಸಲ್ಲೇ ಅಂದುಕೊಂಡು ಪುಸ್ತಕವನ್ನು ಕೈಗೆ ಎತ್ತಿಕೊಂಡೆ.

‘ತಂಗುದಾಣ ಬೇಕು ಬದುಕಿಗೆ’ ಈಗ ನನ್ನ ಮನೆ ಸೇರಿದೆ. ನನ್ನ ಅಂಗೈಯಲ್ಲಿ ಪುಸ್ತಕ ಹಿಡಿದಾಗ ಪುಸ್ತಕದ ಮುಖಪುಟ ತುಂಬಾನೇ ಇಷ್ಟವಾಯಿತು. ಯಾವುದೇ ಗಿಜಿ ಗಿಜಿ ವಿನ್ಯಾಸವಿಲ್ಲದೆ, ಸರಳವಾಗಿ ಸುಂದರವಾಗಿದೆ ಮುಖಪುಟ. ಪುಸ್ತಕದಲ್ಲಿ ಒಟ್ಟು ೪೦ ಕವನಗಳಿದ್ದು, ಪ್ರತಿಯೊಂದು ಕವಿತೆಯಲ್ಲಿ ಕವಿಯತ್ರಿಯ ಭಾವನೆ ಅಡುಗಿದೆ. ಪ್ರಸಕ್ತ ವಿದ್ಯಮಾನವನ್ನು ಸೂಕ್ಷ್ಮವಾಗಿ ತಮ್ಮ ಕವನಗಳ ಮೂಲಕ ಕಟ್ಟಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಅವರ ಪ್ರಯತ್ನ ಯಶಸ್ವಿಯಾಗಿದೆ..

ಮತ್ತೆ ಮತ್ತೆ ಸಾಭೀತು ಪಡಿಸಬೇಕೇನು,
ನಾವು ಹಿಂದೂ, ಮುಸ್ಲಿಂ, ಕ್ರೈಸ್ತ ರೆಂದು
ಮರೆಯದಿರಿ … ಮರೆಯದಿರಿ
ಮತ್ತೆ ಮತ್ತೆ ಸಾಬೀತು ಪಡಿಸುವೆವು
ಭಾರತೀಯರು ನಾವೆಂದು
ತಲೆ ತಲೆಮಾರು ಕಳೆದರು
ಅಳಿಯಗೊಡೆವು ನಮ್ಮ ಸರ್ವಜನಾಂಗದ ಶಾಂತಿಯ ತೋಟವ

ಜಾತಿ,ಧರ್ಮ,ರಾಜಕೀಯ ಹೆಸರಿನಲ್ಲಿ ಎಷ್ಟೋ ಯುವಕರು ರಕ್ತದ ಓಕಳಿ ಆಡುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ಸಮಾಜಕ್ಕೆ ಶಾಂತಿಯ ಅವಶ್ಯಕತೆ ಇದೆ. ಆ ಶಾಂತಿ ಬರುವುದು ನಾವು ಭಾರತೀಯರು ಎಂದು ಅರ್ಥಮಾಡಿಕೊಂಡಾಗ ಮಾತ್ರ ಎಂದು ಕವಿಯತ್ರಿ ನಮ್ಮದು ಸರ್ವಜನಾಂಗದ ಶಾಂತಿಯ ತೋಟ ಎಂದು ಈ ಕವಿತೆಯಲ್ಲಿ ಮತ್ತೆ ಮತ್ತೆ ನೆನಪಿಸುತ್ತಾರೆ.

ಸಾಮಾಜಿಕ ತಾಣ ಖಾಸಗಿತನದ
ಸರಕಾಯಿತು ಸಮಾಜ, ಬದುಕಿನ ನಡುವಿನ ಸೂಕ್ಷ್ಮ ಗೆರೆ ಅಳಿಸಿಹೋಯಿತು
ವಿವೇಕ ಎಂಬ ಬುದ್ದಿಗೆ ಗೆದ್ದಲು ಹಿಡಿಯಿತು
ಖಾಸಗಿತನ ಮಾಯವಾಯಿತು.

ಮೊಬೈಲ್ ಬಂದಿದ್ದೆ ಬಂದದ್ದು, ಸೆಲ್ಫಿ ಗಮಲಿನಲ್ಲಿ ಖಾಸಗಿತನ ಮರೆಯಾಗಿ ಸಾರ್ಜನಿಕ ಸ್ವತ್ತಾಗಿದ್ದೀವಿ. ಜಾಲತಾಣಗಳೇ ಮನೆಯಾಗಿವೆ, ಕೂತದ್ದು, ತಿಂದದ್ದು, ನಿಂತದ್ದೆಲ್ಲಾ ಇತರರಿಗೆ ಮಾತಿಗೆ ಆಹಾರವಾಗಿ ಕೂತಿದ್ದೇವೆ ಎನ್ನುವ ಎಚ್ಚರಿಕೆ ಗಂಟೆಯಂತೆ ಕವಿಯತ್ರಿ ಈ ಕವಿತೆಯಲ್ಲಿ ಕಟ್ಟಿಕೊಟ್ಟಿದ್ದಾರೆ.

ಜಾಲಿಯ ಮದರಂತೆ ನೆರಳು
ನೀಡದೆ ಬದುಕಿ ಮನೆಯ ಮೇಲೆ
ಮನೆ ಕಟ್ಟಿದರೆ ಏನು ಬಂತು?
ಮಮತೆ ಇಲ್ಲದ ಮನ, ಮನವೇ?
ಸ್ನೇಹವಿಲ್ಲದ ಬದುಕು ಬದುಕಲ್ಲ

ಹುಟ್ಟಿದ ಮನುಷ್ಯನಲ್ಲಿ ಪ್ರೀತಿ, ವಾತ್ಸಲ್ಯವಿಲ್ಲದಿದ್ದರೆ ಅವನು, ನೆರಳು ನೀಡದ ಜಾಲಿ ಮರದಂತೆ… ಇದ್ದು ಯಾರಿಗೂ ಬೇಡವಾದಂತೆ. ಎಷ್ಟೇ ಅಂತಸ್ತಿನ ಮನೆ ಕಟ್ಟಿದರೂ ಆ ಮನೆಯಲ್ಲಿ ಹಿಡಿ ಪ್ರೀತಿ ಇಲ್ಲವೆಂದರೆ ಆ ಮನೆ ಸ್ಮಶಾನಕ್ಕೆ ಸಮಾನ. ಬದುಕಿರುವವರೆಗೂ ಪ್ರೀತಿ, ವಿಶ್ವಾಸವನ್ನು ಹಂಚಿಕೊಂಡು ಬಾಳಿ ಎನ್ನುವ ಸಂದೇಶ ಈ ಕವಿತೆಯಲ್ಲಿದೆ.

ಹೀಗೆ ಪ್ರತಿ ಕವಿತೆಯಲ್ಲಿಯೂ ಸಮಾಜಕ್ಕಾಗಿ ಒಳಿತನ್ನು ಬಯಸುವ ಸಂದೇಶಗಳ ಬುತ್ತಿ ಈ ಕವನ ಸಂಕಲನದಲ್ಲಿದೆ.

ರೇಶ್ಮಾ ಅವರಿಗೆ ಕವನ ಬರೆಯಲು ಕನ್ನಡದ ಮೇಲಿನ ಒಲವು ಒಂದು ಕಾರಣವಾದರೆ, ಇನ್ನೊಂದು ಕಾರಣ ಅವರ ತಂದೆ ಮೊದಲ ಗುರುವಾಗಿ ವರ್ಣಮಾಲೆ ಕಲಿಯುವ ಮೊದಲೇ ಮಗಳಿಗೆ ಸರ್ವಜ್ಞನ ೩೦ ವಚನಗಳನ್ನ ಬಾಯಿಪಾಠ ಮಾಡಿಸಿದ್ದು, ಹಾಗಾಗಿ ಕವಿಯತ್ರಿಗೆ ಕನ್ನಡ ಭಾಷೆಯ ಮೇಲೆ ಹಿಡಿತವನ್ನು ಸಾಧಿಸಲು ಅವರ ತಂದೆಯೇ ಪಾತ್ರ ದೊಡ್ಡದಿದೆ.

ಕೊನೆಯದಾಗಿ ನಾನು ಮೊದಲೇ ಹೇಳಿದಂತೆ ಈ ಪುಸ್ತಕಕ್ಕೆ ಯಾವುದೇ ಆಡಂಬರವಿಲ್ಲಾ. ಇದಕ್ಕೆ ಮುನ್ನುಡಿ ಬರೆದವರು ಅಮೃತ ಎಂ ಡಿ. ಅವರು ಕೂಡಾ ಯುವ ಬರಹಗಾರ್ತಿ. ಅವರು ಸಾಹಿತ್ಯಲೋಕದಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ ಅವರ ಮೊದಲ ಕೃತಿಗೆ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಬಹುಮಾನ ಪಡೆದವರು. ಬೆನ್ನುಡಿಯಲ್ಲಿ ಕೃತಿ ಆರ್ ಹಾಗೂ ಶರಣ್ಯ ನಿಲುವಾಯಿ ಆಶಯ ನುಡಿಗಳಿವೆ.

ಈ ಪುಸ್ತಕ ನನಗೆ ಇಷ್ಟವಾಗಲು ಇನ್ನೊಂದು ಕಾರಣವೆಂದರೆ ಯುವ ಲೇಖಕಿಯರು ಸೇರಿ ಪ್ರೀತಿಯಿಂದ ಪೋಣಿಸಿದಂತಹ ಪುಸ್ತಕವಿದು. ಯುವ ಕವಿಯತ್ರಿಗೆ  ಯುವ ಕವಿಯತ್ರಿಯರೇ ಪೋಷಿಸಿ ಬೆಳೆಸಿದಂತಹ ‘ತಂಗುದಾಣ ಬೇಕು ಬದುಕಿಗೆ’. ಯುವ ಕವಿಯತ್ರಿಯರ ಪ್ರೀತಿ ನೋಡಿ ಸಂತೋಷವಾಯಿತು.

ರೇಶ್ಮಾ ಅವರು ಚೊಚ್ಚಲ ಕವನ ಸಂಕಲನದ ಮೂಲಕ ಸಾಹಿತ್ಯಲೋಕಕ್ಕೆ ಅಧಿಕೃತವಾಗಿ ಪಾದಾರ್ಪಣೆ ಮಾಡಿದ್ದಾರೆ, ಹಾಗಾಗಿ ಅವರ ಮೇಲೆ ಇನ್ನಷ್ಟು ಭರವಸೆಗಳ ಭಾರ ನಾನು ನೀಡುತ್ತಾ… ಅವರಿಗೆ ಆಕೃತಿ ಕನ್ನಡದಿಂದ ಶುಭಕೋರುತ್ತೇನೆ.


  • ಶಾಲಿನಿ ಹೂಲಿ ಪ್ರದೀಪ್

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW