‘ನಾನು ಸತ್ತಾಗ’ ಕವಿತೆಯ ಅರ್ಥ – ಜಲಾಲೂದ್ದೀನ ರೂಮಿ

ಮಣ್ಣಿಗೆ ಹಾಕಿದ ಬೀಜಗಳು ತಮ್ಮ ಭೌತ ಶರೀರವನ್ನು ಕಳೆದುಕೊಂಡು ಹೊಸ ಜೀವನ ಪಡೆದು ಹೇಗೆ ಮೇಲೇರುತ್ತವೆಯೋ ಹಾಗೆಯೇ ಮಾನವ ದೇಹ ಎಂಬ ಬೀಜವು ತನ್ನ ಭೌತಿಕ ಅಸ್ತಿತ್ವವನ್ನು ಕಳೆದುಕೊಂಡು ಹೊಸ ಚೈತನ್ಯದಲ್ಲಿ ಮೇಲೇರುತ್ತದೆ ಎಂದು ರೂಮಿ ಹೇಳುತ್ತಾರೆ. ಸಂತಶಿಶು (ಇಮ್ತಿಯಾಜ ಖಾನ) ಅವರು ಸಂತ ಜಲಾಲೂದ್ದೀನ ರೂಮಿಯವರ “ನಾನು ಸತ್ತಾಗ” ಎಂಬ ಕವಿತೆ ಸಾವಿನ ಬಗ್ಗೆ ಆಳವಾದ ದೃಷ್ಟಿಕೋನವನ್ನು ವ್ಯಕ್ತಪಡಿಸುತ್ತದೆ. ತಪ್ಪದೆ ಮುಂದೆ ಓದಿ…
ನಾನು ಸತ್ತಾಗ
ನನ್ನ ಶವಪೆಟ್ಟಿಗೆ ನೋಡಿ
ನಾನು ಈ ಲೋಕ ಕಳೆದುಕೊಳ್ಳುತ್ತಿದ್ದೇನೆಂದು
ನೀವು ಎಂದಿಗೂ ಯೋಚಿಸಬಾರದು

ಯಾವುದೇ ಕಣ್ಣೀರು ಸುರಿಸಬಾರದು
ಶೋಕಿಸಬಾರದು ಇಲ್ಲವೇ ಮರುಗಬಾರದು
ನಾನು ಬೀಳುತ್ತಿಲ್ಲ
ದೈತ್ಯಾಕಾರದ ಪ್ರಪಾತಕ್ಕೆ
ನನ್ನ ಶವ ಒಯ್ಯವುದನ್ನು
ನೀವು ನೋಡಿದಾಗ
ನಾನು ಹೋಗುತ್ತಿದ್ದೇನೆಂದು ಅಳಬೇಡಿ
ನಾನು ಹೋಗುವುದಿಲ್ಲ
ಶಾಶ್ವತ ಪ್ರೇಮದೆಡೆಗೆ ಮರಳುತ್ತೇನೆ
ನೀವು ನನ್ನನ್ನು ಸಮಾಧಿಯಲ್ಲಿಳಿಸಿ
ವಿದಾಯ ಹೇಳಬೇಡ
ನೆನಪಿಡಿ ಸಮಾಧಿ
ಅದರಾಚೆಗಿನ ಸ್ವರ್ಗಕ್ಕಾಗಿ
ಒಂದು ಪರದೆ ಮಾತ್ರ
ನೀವು ನನ್ನನ್ನು ನೋಡುತ್ತೀರಿ
ಸಮಾಧಿಗೆ ಇಳಿಯುವುದು
ಈಗ ನನ್ನ ಪುನರುತ್ಥಾನವನ್ನು ನೋಡಿರಿ
ಸೂರ್ಯ ಮುಳುಗುವುದು ಅಥವಾ
ಚಂದ್ರನು ಅಸ್ತಮಿಸುವುದು
ಒಂದು ಅಂತ್ಯವೆನ್ನಲು ಹೇಗೆ ಸಾಧ್ಯ?
ಇದು ಅಂತ್ಯದಂತೆ ಕಾಣುತ್ತದೆ
ಇದು ಸೂರ್ಯಾಸ್ತದಂತೆ ತೋರುತ್ತದೆ
ಆದರೆ ವಾಸ್ತವದಲ್ಲಿ ಇದು ಸೂರ್ಯೋದಯ
ಸಮಾಧಿಯಲ್ಲಿ ನಮ್ಮನ್ನು ಬಂಧಿಸಿದಾಗಲೇ
ನಮ್ಮ ಆತ್ಮಕ್ಕೆ ಮುಕ್ತಿ ದೊರೆಯುತ್ತದೆ
ನೀವು ನೋಡಿದ್ದೀರಾ
ಭೂಮಿಗೆ ಬಿದ್ದ ಬೀಜ
ಹೊಸ ಜೀವನದೊಂದಿಗೆ ಮೇಲೇರುವುದನ್ನು
ಮಾನವ ಹೆಸರಿನ ಬೀಜದ
ಏರಿಕೆಯನ್ನು ನಿವೇಕೆ ಅನುಮಾನಿಸುತ್ತೀರಿ
ಒಂದು ಬಕೆಟನ್ನು ಬಾವಿಗೆ ಇಳಿಸಿದಾಗ
ಖಾಲಿ ಬರುವುದನ್ನು
ನೀವು ಎಂದಾದರೂ ನೋಡಿದ್ದೀರಾ
ಆತ್ಮಕ್ಕಾಗಿ ಏಕೆ ಅಳುತ್ತೀರಿ
ಅದು ಯಾವಾಗಲೂ ಹಿಂತಿರುಗಬಹುದು
ಬಾವಿಯಿಂದ ಯುಸೂಫನ ಹಾಗೆ
ಕೊನೆಯ ಬಾರಿಗೆ ಯಾವಾಗ
ನೀವು ಬಾಯಿ ಮುಚ್ಚುತ್ತೀರೋ
ನಿಮ್ಮ ಪದಗಳು ಮತ್ತು ಆತ್ಮ
ಕಾಲಾತೀತ ದೇಶಾತೀತ
ಲೋಕಕ್ಕೆ ಸೇರುತ್ತವೆ
ಸಂತ ಜಲಾಲೂದ್ದೀನ ರೂಮಿಯವರ “ನಾನು ಸತ್ತಾಗ” ಎಂಬ ಪ್ರತಿಮಾತ್ಮಕ ಕವಿತೆ ಸಾವಿನ ಬಗ್ಗೆ ಆಳವಾದ ದೃಷ್ಟಿಕೋನವನ್ನು ವ್ಯಕ್ತಪಡಿಸುತ್ತದೆ. ಅದರ ಪರಿವರ್ತನೆಯ ಸ್ವರೂಪ ಮತ್ತು ನಶ್ವರ ಶರೀರವನ್ನು ಮೀರಿ ಈಶ್ವರ ಅಸ್ತಿತ್ವ ಪಡೆಯುವುದರ ಸಾಮರ್ಥ್ಯವನ್ನು ಒತ್ತಿಹೇಳುತ್ತದೆ. ರೂಮಿಯ ಈ ಕವಿತೆ ಸಾವಿನ ಪರಿಕಲ್ಪನೆಯನ್ನು ತಾತ್ವಿಕ ಮತ್ತು ಸೈದ್ಧಾಂತಿಕ ನೆಲೆಯಲ್ಲಿ ಪರಿಶೋಧಿಸುತ್ತದೆ. ಸಾವು ದುರಂತವಲ್ಲ ಆದರೆ ಪ್ರೇಮ ಮತ್ತು ಚಿರಂತನ ಅಸ್ತಿತ್ವದ ಉನ್ನತ ರೂಪಕ್ಕೆ ಅದು ಹೆಬ್ಬಾಗಿಲು. ಇದನ್ನೇ ಅವರು ಶಾಶ್ವತ ಪ್ರೇಮದತ್ತ ಮರಳುವುದು ಎನ್ನುತ್ತಾರೆ.

ಸಾಮಾನ್ಯವಾಗಿ ಸಾವು ಎಂದಾಕ್ಷಣ ಎಲ್ಲರಿಗೂ ಭಯ. ಜಗತ್ತಿನ ಯಾವ ದಾರ್ಶನಿಕನೂ, ಯಾವ ಚಿಂತಕನೂ, ವಾಯ ವೈದ್ಯನೂ ಸಾವನ್ನು ನಿರಾಕರಿಸುವುದಿಲ್ಲ. ದೇವರ ಅಸ್ತಿತ್ವವನ್ನು ಬೇಕಾದರೂ ನಿರಾಕರಿಸುತ್ತಾರೆ; ಆದರೆ ಸಾವನ್ನಲ್ಲ. ಅದು ಅಂತಹ ಸತ್ಯ. ಸತ್ತ ನಂತರದ ಬದುಕು, ಅಲ್ಲಿ ಎಲ್ಲರಿಗೂ ಅವರವರ ಕರ್ಮಾನುಸಾರ ನ್ಯಾಯ, ಈ ಪರಿಕಲ್ಪನೆಗಳು ಜಗತ್ತಿನ ಎಲ್ಲ ಧರ್ಮಗಳಲ್ಲಿಯೂ ಸಾಮಾನ್ಯಗಿವೆ.

ಆದರೆ ಸೂಫಿಗಳ ದರ್ಶನವೇ ಬೇರೆ. ಅವರಿಗೆ ಸಾವು ಬದುಕಿನ ಕೊನೆಯಲ್ಲ ಬದುಕಿನ ಆರಂಭ. ಮಣ್ಣಿಗೆ ಹಾಕಿದ ಬೀಜಗಳು ತಮ್ಮ ಭೌತ ಶರೀರವನ್ನು ಕಳೆದುಕೊಂಡು ಹೊಸ ಜೀವನ ಪಡೆದು ಹೇಗೆ ಮೇಲೇರುತ್ತವೆಯೋ ಹಾಗೆಯೇ ಮಾನವ ದೇಹ ಎಂಬ ಬೀಜವು ತನ್ನ ಭೌತಿಕ ಅಸ್ತಿತ್ವವನ್ನು ಕಳೆದುಕೊಂಡು ಹೊಸ ಚೈತನ್ಯದಲ್ಲಿ ಮೇಲೇರುತ್ತದೆ ಎಂದು ರೂಮಿ ಹೇಳುತ್ತಾರೆ. ಇಸ್ಲಾಮಿನ ನಂಬಿಕೆಯಂತೆ ಸಾವು ಕೊನೆಯಲ್ಲ ಅದು ಆತ್ಮದ ಸ್ಥಳಾಂತರವಷ್ಟೇ. ಆತ್ಮಗಳು ತಮ್ಮ ಪಯಣದಲ್ಲಿ ಹಾದು ಹೋಗುವಾಗ ಈ ಲೋಕವೂ ಅವುಗಳಿಗೆ ಎದುರಾಗುವ ಒಂದು ಮಾರ್ಗ. ಸಾವು ಆತ್ಮವನ್ನು ಅಮರಗೊಳಿಸುತ್ತದೆ. ಹಾಗಾಗಿ ಸಾವು ಶೋಕಾಸ್ಪದವಲ್ಲ. ಈ ಕಲ್ಪನೆಯು ಅತೀಂದ್ರಿಯ ಮತ್ತು ಆಧ್ಯಾತ್ಮಿಕ ನಂಬಿಕೆಗಳೊಂದಿಗೆ ಬೆಸೆದುಕೊಂಡಿದೆ. ರೂಮಿಯ ಕವಿತೆಯು ಸಾವಿನ ರೂಪಾಂತರವನ್ನು ಬೀಜದ ಉಪಮೆ ಮೂಲಕ ಒತ್ತಿ ಹೇಳುತ್ತದೆ, ಸಾವು ಐಹಿಕ ನಿರ್ಬಂಧಗಳಿಂದ ವಿಮೋಚನೆ ಎಂದು ಪ್ರತಿಪಾದಿಸುತ್ತದೆ.

“ಸೂರ್ಯ ಮುಳುಗುತ್ತಾನೆ” ಮತ್ತು “ಚಂದ್ರನು ಅಸ್ತಮಿಸುತ್ತಾನೆ” ಎಂಬ ಉಲ್ಲೇಖವು ಸಾವು ಶಾಶ್ವತ ಅಂತ್ಯವಲ್ಲ. ಆದರೆ ಹೊಸ ಆರಂಭಕ್ಕೆ ಮುನ್ನುಡಿ ಎಂಬುದನ್ನು ಸೂಚಿಸುತ್ತದೆ. ಲೋಕದ ಕಣ್ಣಿಗೆ ಸಾವು ಸೂರ್ಯಾಸ್ತದಂತೆ ಕಂಡರೂ ಅದು ಮೂಲತಃ ಸೂರ್ಯೋದಯ. ಒಂದು ಹೊಸ ಉದಯ ಒಂದು ಹೊಸ ಆಶಯ. ಮೃತ ಶರೀರವನ್ನು ಸಮಾಧಿಯಲ್ಲಿ ಬಂಧಿಸಿದಾಗ ಮಾತ್ರ ಆತ್ಮಕ್ಕೆ ಬಿಡುಗಡೆ ಸಿಗುತ್ತದೆ ಎನ್ನುವಲ್ಲಿ ಅಧ್ಯಾತ್ಮಿಕತೆಯ ಅತ್ಯುನ್ನತ ಸತ್ಯದ ಪ್ರಖರತೆಯಿದೆ. ಸಾವು ಎನ್ನುವುದು eternal ಪ್ರೇಮದತ್ತ ಪಯಣ ಎನ್ನುವಲ್ಲಿ ಕವಿ ಮಾಡುವ ಪ್ರೇಮದ ವ್ಯಾಖ್ಯಾನ ಅಪ್ಯಾಯಮಾನವಾಗಿದೆ.

ಬಾವಿಯಿಂದ ನೀರು ಸೇದುವ ಬಕೆಟ್‌ನ ಸಾದೃಶ್ಯವು, ಪ್ರವಾದಿ ಯೂಸುಫ್ (ಜೋಸೆಫ್‌)ನ ಅದ್ಭುತ ಆರೋಹಣದಂತೆಯೇ, ತನ್ನ ಮೂಲಕ್ಕೆ ಮರಳುವ ಆತ್ಮದ ಸಾಮರ್ಥ್ಯವನ್ನು ಸೂಚಿಸುತ್ತದೆ. ಪ್ರವಾದಿ ಯೂಸುಫರವರು ಪ್ರವಾದಿ ಯಾಕೂಬ (ಜಾಕೋಬ್)ರವರ 12 ಜನ ಮಕ್ಕಳಲ್ಲಿ ಅತ್ಯಂತ ಕಿರಿಯವರು. ಯಾಕೂಬರವರು ತನ್ನ ಕಿರಿಯ ಮಗನಿಗೆ ಅತೀ ಹೆಚ್ಚು ಪ್ರೀತಿಸುತ್ತಿದ್ದರು. ಆ ಎಳೆಯ ಹುಡುಗನ ಕಣ್ಣುಗಳಲ್ಲಿ ಭವಿಷ್ಯದ ದಾರ್ಶನಿಕನೊಬ್ಬನ ದೃಷ್ಟಿಯನ್ನು ಗುರುತಿಸಿದ್ದರು ಅವರು. ತನ್ನ ಉಳಿದ ಮಕ್ಕಳು ಯೂಸುಫನನ್ನು ಸಹಿಸದಿರುವುದೂ ಅವರಿಗೆ ತಿಳಿದಿತ್ತು. ಹಾಗಾಗಿ ಅವನನ್ನು ಯಾವತ್ತೂ ತನ್ನೊಂದಿಗೇ ಇರಿಸಿಕೊಳ್ಳಲು ಇಷ್ಟಪಡುತ್ತಿದ್ದರು. ತಮ್ಮ ತಂದೆ ಯೂಸುಫನ ಮೇಲೆ ಇಟ್ಟಿರುವ ಪ್ರೀತಿ ಮತ್ತು ಕಾಳಜಿಯನ್ನು ಸಹಿಸದ ಉಳಿದ ಮಕ್ಕಳು ಯೂಸುಫನ ಕೊಲೆಗೆ ಮುಂದಾದರು. ಒಂದು ದಿನ ತಂದೆಯ ಬಳಿ ಬಂದು ಕಟ್ಟಿಗೆ ತರಲು ತಮ್ಮೊಂದಿಗೆ ಯೂಸುಫನನ್ನು ಕಾಡಿಗೆ ಕಳುಹಿಸುವುದಾಗಿ ಅಂಗಲಾಚಿದರು.

ಪ್ರವಾದಿ ಯಾಕೂಬ “ಅಲ್ಲಿ ತೋಳ ಬಂದು ತನ್ನ ಮಗನಿಗೆ ಹಾನಿಗೊಳಿಸುವ ಭಯ ತನಗಿದೆ” ಎಂದು ಹುಡುಗನನ್ನು ಕಳುಹಿಸಿಕೊಡಲು ನಿರಾಕರಿಸಿದರು. ಆದರೆ ಮಕ್ಕಳು ಬಿಡದೇ ಒತ್ತಾಯಿಸಿದರು. ಅವರ ಒತ್ತಾಸೆಗೆ ಮಣಿದು ಹುಡುಗನನ್ನು ಒಲ್ಲದ ಮನಸ್ಸಿನಿಂದಲೇ ಕಳುಹಿಸಿಕೊಟ್ಟರು. ಅವರು ಕಾಡಿಗೆ ಬಂದು ಒಂದು ತೋಳನನ್ನು ಕೊಂದು ಅದೇ ಕಾಡಿನ ಮಧ್ಯದಲ್ಲಿದ್ದ ಹಳೆಯ ಬಾವಿಯೊಂದರಲ್ಲಿ ಯೂಸುಫನನ್ನು ನೂಕಿ ಅವನ ಅಂಗಿಯನ್ನು ಹರಿದು ತೋಳನ ರಕ್ತದಲ್ಲಿ ಅದ್ದಿ ಅಳುತ್ತ ಗೋಗರೆಯುತ್ತ ಮನೆಗೆ ಬಂದು ಅಪ್ಪಾಜಿ ತಮ್ಮ ಹೇಳಿಕೆಯಂತೆ ಯೂಸುಫನಿಗೆ ತೋಳ ಹಿಡಿದು ತಿಂದಿತು. ಇಗೋ ಸಾಕ್ಷಿ ಅವನ ರಕ್ತಮಯ ಈ ಅಂಗಿಯೆಂದು ಯಾಕೂಬರಿಗೆ ತೋರಿಸಿದರು. ತಮ್ಮ ಮಗನ ಅಗಲಿಕೆ ಶೋಕದಲ್ಲಿ ತಂದೆ ಹಗಲಿರುಳು ಪರಿತಪಿಸುತ್ತಾ ಕಣ್ಣುಗಳನ್ನು ಕಳೆದುಕೊಂಡು ಗೋಳಾಡುವಂತಾಯಿತು.

ಇತ್ತ ಅದೇ ಕಾಡಿನ ಮಾರ್ಗದಿಂದ ವ್ಯಾಪಾರಸ್ಥರ ಒಂದು ದಂಡು ದಾಟುತ್ತಿತ್ತು. ಪ್ರಯಾಣದ ದಣಿವು ಆರಿಸಲು ಸ್ವಲ್ಪಹೊತ್ತು ಅವರು ಅಲ್ಲೇ ಬಾವಿಯ ಸಮೀಪ ವಿಶ್ರಾಂತಿಸಿದರು. ಅವರಲ್ಲಿ ಒಬ್ಬನು ನೀರು ತರಲು ಬಾವಿಗೆ ಹೋಗಿ ಬಕೆಟಿಗೆ ಹಗ್ಗ ಕಟ್ಟಿ ಬಾವಿಯಲ್ಲಿ ಇಳಿಬಿಟ್ಟನು. ಅವನು ಇಳಿಬಿಟ್ಟ ಬಕೆಟಿನಲ್ಲಿ ಕುಳಿತುಕೊಂಡು ಯೂಸುಫ ಮೇಲೆ ಬಂದಿದ್ದರು. ಆ ನಂತರ ಆ ವ್ಯಾಪಾರಸ್ಥರ ದಂಡು ಅವರನ್ನು ಸಿರಿಯಾಗೆ ಕರೆದೊಯ್ಯಿತು. ಆ ಘಟನೆಯನ್ನು ಸೂಚ್ಯವಾಗಿ ರೂಮಿ ಪದ್ಯದ ಸಾಲೊಂದರಲ್ಲಿ ಪ್ರಸ್ತಾಪಿಸುತ್ತಾರೆ.

ರೂಮಿಯ ಕವಿತೆ ಸಾವಿನ ಬಗ್ಗೆ ಸಾಂತ್ವನ ಮತ್ತು ರೂಪಾಂತರದ ನೋಟವನ್ನು ನೀಡುತ್ತದೆ, ಭೌತಿಕ ಜೀವನದ ಅಂತ್ಯವು ಪಾರಮಾರ್ಥಿಕತೆಯ ಕಡೆಗೆ ಹೊಸ ಪ್ರಯಾಣದ ಆರಂಭ ಎಂಬುದನ್ನು ಓದುಗರಿಗೆ ನೆನಪಿಸುತ್ತದೆ. ಅದು ಮರಣದ ಮುಖದಲ್ಲಿ ಸಾಂತ್ವನ ಮತ್ತು ಭರವಸೆಯನ್ನು ನೀಡುತ್ತದೆ. ಈ ಲೋಕ ತ್ಯಜಿಸಿದ ನಂತರವೇನು? ಅದು ಕಾಲಾತೀತ, ದೇಶಾತೀತ ಲೋಕ. ಅಲ್ಲಿ ಸಮಯದ ಗೊಡವೆಯಿಲ್ಲ ಗಡಿಗಳ ಹಂಗಿಲ್ಲ.

  • ಸಂತಶಿಶು (ಇಮ್ತಿಯಾಜ ಖಾನ)

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW