“ಮೋಹಗಾಂವ್”‘ನಲ್ಲಿ ಬೆಳಗಿನ ಚಳಿಯ ತೀವ್ರತೆ ಅಷ್ಟೇನು ಇಲ್ಲವಾದ್ದರಿಂದ, ಸ್ನಾನ.. ಪೂಜೆ ಮುಗಿಸಿ 6:30 ಕ್ಕೆಲ್ಲ ಹೊರಟು ನಿಂತೆ. ನಂದಿ ಓಡುತ್ತಿದ್ದ ಹಾಗೇ ಚಳಿ ಗಾಳಿಗೆ ಮೈಯಲ್ಲಿ ಸಣ್ಣಗೆ ನಡುಕ ಶುರುವಾಯಿತು, ಸ್ವಲ್ಪ ಹೊತ್ತಿನಲ್ಲೇ ಕೈ ಬೆರಳು.. ಕಾಲ್ಬೇರಳು ಜೋಮು ಹಿಡಿದವು. ಮುಂದೇನಾಯಿತು ಡಾ. ಪ್ರಕಾಶ ಬಾರ್ಕಿ ಅವರ ನರ್ಮದಾ ಪರಿಕ್ರಮಾ ಅನುಭವ ಕಥನ ತಪ್ಪದೆ ಮುಂದೆ ಓದಿ…
ಡಿಂಡೋರಿ ಜಿಲ್ಲೆಯ “ಗಡಸರಯಿ’ಯ “ರೇವಾ ಧರ್ಮಶಾಲೆ” ಬಿಟ್ಟು ಹೊರಟಿದ್ದು ಬೆಳಿಗ್ಗೆ 6 ಗಂಟೆಗೆ. ನಂದಿಯನ್ನು ಮುಂದೆ ನೂಕಿದಾಗ.. ನಿಧಾನಕ್ಕೆ ಮಿಸುಕಾಡಿತು. ತಿರುಗಿ ಹಿಂದಿನ ಗಾಲಿ ನೋಡಿದರೆ.. ಚೂರು ಗಾಳಿಯಿರಲಿಲ್ಲ. ಹಿಂದಿನ ಗಾಲಿಯನ್ನು ಪಂಕ್ಚರ್ ಮಾಡಿಕೊಂಡು ಕುಂಟುತ್ತಿದ್ದ ನಂದಿ. ಅಮರಕಂಟಕ್ ಕಾಡಿನ “ಸೈಡ್ ಎಫೆಕ್ಟ್” ಇದು.
ಗಾಳಿಯನ್ನು ತುಂಬಿ ನೋಡಿದೆ, ಒಂದೈದು ಕಿ.ಮೀ ಹೋದ ತಕ್ಷಣ ಮತ್ತೆ ಗಾಲಿ ನೆಲಕಚ್ಚಿತು. ರಸ್ತೆಯ ಮಗ್ಗಲಿಗೆ ನಂದಿಯನ್ನು ಮಲಗಿಸಿ, ಪಂಕ್ಚರ್ ಸರಿಮಾಡಿದೆ. ಒಂದು ದಪ್ಪನೆಯ ಮುಳ್ಳು “ಟ್ಯೂಬ್”ನ್ನು ಗಂಭೀರವಾಗಿ ಇರಿದು ತೂತಾಗಿಸಿತ್ತು. ಮುಂದಿನ ಪಯಣದಲ್ಲಿ ಏನೂ ಸಮಸ್ಯೆಯಾಗಲಿಲ್ಲ. ಪಯಣ ಹಳ್ಳಿಗಳನ್ನು ದಾಟಿಕೊಂಡು ಸಾಗಿತ್ತು. ಹೆಚ್ಚಿನ ಏರು ರಸ್ತೆಗಳೆ ಭೇಟಿಯಾಗುತ್ತಿದ್ದವು. ಅವುಗಳನ್ನು ಹತ್ತಿ ಸಾಗುವುದರಲ್ಲಿ ಸುಸ್ತು.

ಆಮೇಲೆ ಏರು ರಸ್ತೆಗಳು ಸಾಲು ಸಾಲಾಗಿ ಬಂದು ನಿಂತವು. ಸುತ್ತಲೂ ಕಣ್ಣಾಡಿಸಿದರೆ ಬೋಳು ಗುಡ್ಡಗಳದೆ ಧರ್ಬಾರು. ದೂರದಿಂದ ನೋಡಿದರೆ “ಮರಳುಗಾಡು” ನೋಡಿದಂತೆ ಭಾಸವಾಗುತ್ತಿದ್ದವು. ಮರಗಳ ಸುಳಿವಂತೂ ಇಲ್ಲ, ಹುಲ್ಲು ಸಹ ಇಲ್ಲದ ಉರಿ ಬಿಸಿಲಿನ ಗುಡ್ಡಗಳು. ಹಿಂಡು ಗೋವುಗಳನ್ನು ಬೋಳು ಗುಡ್ಡದಲ್ಲಿ ನೋಡಿದಾಗ “ದನಗಾಹಿ”ಗೆ ಕೇಳಿದೆ.. “ಗೋವುಗಳು ಏನು ತಿನ್ನಬೇಕು ಮಾರಾಯ!! ಇಲ್ಲಿ ಏನು ಇಲ್ವಲ್ಲಾ” ಎಂದಾಗ ತಿಳಿದಿದ್ದು… ದನ ಮೇಯಿಸಲು ಸುಮಾರು 15 ಕಿ. ಮೀ ಗಿಂತ ಹೆಚ್ಚು ದೂರ ಹೋಗಬೇಕೆಂಬ ವಿಷಯ. ಹಸಿರು ಜೀವಕ್ಕೆ ತುಂಬಾ ಮುಖ್ಯ.
ಆಮೇಲೆ “ಡಿಂಡೋರಿ”ಗೆ ಬಂದು ಬೆಳಗಿನ ಉಪಹಾರ ಸೇವಿಸಿ, ಮುಂದೆ ಹೊರಟವನಿಗೆ ಅಚ್ಚರಿಯೆಂಬಂತೆ ಕಂಡಿದ್ದು ರಸ್ತೆ ಪಕ್ಕ ಹಸಿರು ತುಂಬಿದ ಮರಗಳು, ನೆರಳನ್ನು ರಸ್ತೆಯ ಮೇಲೆ ಹರಡಿಕೊಂಡು ನಿಂತಿವೆ. ಮುಂದೆ ಮುಂದೆ ಹೋಗುತ್ತಿದ್ದಂತೆ ರಾಶಿ ರಾಶಿ ಮರಗಳು. ಬೃಹತ್ ಬೆಟ್ಟಗಳು ಎದುರಾದವು ಮೈ ತುಂಬಾ ಹಸಿರು ಹೊದ್ದುಕೊಂಡು. ಅವುಗಳ ಸೌಂದರ್ಯ ರಾಶಿ ಅಪ್ರತಿಮ. ಚಿಲಿಪಿಲಿ ಹಕ್ಕಿಗಳು, ವನ್ಯಜೀವಿಗಳು, ಕೀಟಗಳಿಗೆ ಜೀವ ತುಂಬಿದ ಹಸಿರು ಮರಗಳು. ನೋಡಲು ಚೆಂದ. ಮುಂದೆ ಎದುರಾಗಿದ್ದು ಬೃಹತ್ ಹಸಿರು ಬೆಟ್ಟ. ಮೂರು ಕಿ.ಮೀ ಎತ್ತರದವರೆಗೆ ಏರಬೇಕಿತ್ತು. ಆ ಕಾಡಿನ ಬೆಟ್ಟವನ್ನು ದಾಟಿದರೆ ಮಾತ್ರ ಮುಂದಿನ ರಸ್ತೆ.

ಸರಿ ಏದುಸಿರು ಬಿಡುತ್ತಾ ನಂದಿಯನ್ನು ನೂಕಿಕೊಂಡು ಹೊರಟೆ. ಮೈತುಂಬಾ ಬೆವರು. ಬಿಸಿಲಿನ ತಾಪ ಒಂದೆಡೆಯಾದರೆ, ಬೆಟ್ಟ ಏರುವುದು ಇನ್ನೊಂದು. ಮಧ್ಯಾಹ್ನ ಊಟ ಮಾಡೋಣವೆಂದರೆ ಹತ್ತಿರದಲ್ಲಿ ಹೋಟೆಲ್, ಢಾಬಾಗಳಿಲ್ಲ. ಯಾವ ಆಶ್ರಮಗಳು ಸಹ ಇರಲಿಲ್ಲ. ಬೆಟ್ಟದ ತುದಿಗೆ ಹೋಗಿ ಒಂದು ಮರದ ಕೆಳಗೆ ಕೂತು ” ಶೇಂಗಾ, ಬೆಲ್ಲ ತಿಂದು ನೀರು ಕುಡಿದು ಮತ್ತೆ ಮುಂದಕ್ಕೆ ಹೊರಟಿದ್ದೆ. ಪರಿಕ್ರಮವಾಸಿಗಳ ಬಸ್ಸು ನನ್ನ ನೋಡಿ ನಿಲ್ಲಿಸಿ, ಬಿಸ್ಕೆಟ್ ಪೊಟ್ಟಣ…, ಒಂದಿಷ್ಟು ಹಣ್ಣು ಕೊಟ್ಟು, ಕೈ ಮುಗಿದು ಹೋದರು. ಕಷ್ಟವೆಂದಾಗ ದೇವರು ವಿವಿಧ ರೀತಿಯಲ್ಲಿ ಬಂದು ಕಷ್ಟ ನಿವಾರಿಸುವುದು ಎಂದರೆ ಇದೆ ಅನಿಸುತ್ತೆ. ಹೀಗೆ ಕಷ್ಟದ 2 ಬೆಟ್ಟಗಳನ್ನು ಏರಿ ಇಳಿದಿದ್ದಾಯಿತು. ಆಮೇಲೆಯೇ ಹಳ್ಳಿ ಮತ್ತು ಮನುಷ್ಯರ ದರ್ಶನವಾಗಿದ್ದು.
ರಸ್ತೆಯನೂ ಸುಲಭದ್ದಾಗಿರಲಿಲ್ಲ.. ಬೃಹತ್ ಏರು.. ಪ್ರಪಾತದಂತ ಇಳಿತ ಹೊಂದಿತ್ತು. ನಂದಿಯನ್ನು ಓಡಿಸುವುದು ಕಷ್ಟ ಕಷ್ಟ. ಇಳಿಜಾರಿನಲ್ಲಿ ಇಳಿಯಬಹುದು. ಎದೆಯೆತ್ತರದ ಏರು ಬಂದಾಗ ತೊಡೆ, ಮೀನುಖಂಡ, ತೋಳು, ಮುಂಗೈ ಒದ್ದಾಡಿ ಹೋಗುತ್ತಿದ್ದವು.

ಸಾಯಂಕಾಲದವರೆಗೂ ಬೆಟ್ಟಗಳನ್ನು ಏರಿ ಇಳಿದಿದ್ದಾಯಿತು. ಜನ ಸಂಚಾರವು ಅಷ್ಟಕಷ್ಟೆ ಇದ್ದಂತ ರಸ್ತೆಗಳಿವು. ಸಾಯಂಕಾಲ 5 ಗಂಟೆಗೆ “ಡಿಂಡೋರಿ” ಜಿಲ್ಲೆಯ “ಮೋಹಗಾಂವ” ಊರಿಗೆ ಬಂದೆ. ಇಲ್ಲಿ ಆಶ್ರಮಗಳಿಲ್ಲ, ಉಳಿಯಲು ದೇವಸ್ಥಾನ ಎಲ್ಲಿ ಎಂದು ಹೋಟೆಲ್’ನವನಿಗೆ ಕೇಳಿದಾಗ.
“ಅಪ್ನಾ ಢಾಬಾ”ದ ಮಾಲೀಕರೊರ್ವರು.. “ದೇವಸ್ಥಾನದಲ್ಲಿ ತುಂಬಾ ಚಳಿ ಇರುತ್ತೆ… ಬನ್ನಿ” ಎಂದು ತಮ್ಮ ಢಾಬಾ ಪಕ್ಕದ ಒಂದು “ರೂಮ್” ಕೊಟ್ಟು… ನೀವು ಆರಾಮಾಗಿ ವಿಶ್ರಾಂತಿ ತೆಗೆದುಕೊಳ್ಳಿ ಎಂದು ಹೋದರು. ರಾತ್ರಿ ಊಟಕ್ಕೆ ಜೊತೆಯಲ್ಲಿದ್ದ ಬಿಸ್ಕೆಟ್ ಪೊಟ್ಟಣ ಸಾಕಷ್ಟು ಆದೀತು ಎಂದುಕೊಂಡು ಮಲಗಿಕೊಂಡಿದ್ದೆ. 8: 30 ಕ್ಕೆ ಗೋದಿ ರೊಟ್ಟಿ, ದಾಲ್, ಅನ್ನ ಬಿಸಿ ಬಿಸಿ ಊಟವನ್ನು ಡಬ್ಬಿಯಲ್ಲಿ ತುಂಬಿ ಢಾಬಾದ ಮಾಲೀಕ ಕೊಟ್ಟು ಕಳುಹಿಸಿದ್ದರು.

“ಅಯ್ಯೋ.. ಊಟ ಬೇಡವಾಗಿತ್ತು.. ನಿಮಗೇಕೆ ತೊಂದರೆ” ಎಂದಾಗ, “ಪರಿಕ್ರಮವಾಸಿಗಳ ಸೇವೆ ಮಾಡಲು ಅನುವು ಮಾಡಿಕೊಡಿ” ಎಂದರು. ಅವರ ಸೇವೆ ಮತ್ತು ಪ್ರೀತಿ ದೊಡ್ಡದು.
ಊಟ ಮಾಡಿ.. ಮಲಗಿರುವೆ.
“ಮೋಹಗಾಂವ್”‘ನಲ್ಲಿ ಬೆಳಗಿನ ಚಳಿಯ ತೀವ್ರತೆ ಅಷ್ಟೇನು ಇಲ್ಲವಾದ್ದರಿಂದ, ಸ್ನಾನ.. ಪೂಜೆ ಮುಗಿಸಿ 6:30 ಕ್ಕೆಲ್ಲ ಹೊರಟು ನಿಂತೆ. ನಂದಿ ಓಡುತ್ತಿದ್ದ ಹಾಗೇ ಚಳಿ ಗಾಳಿಗೆ ಮೈಯಲ್ಲಿ ಸಣ್ಣಗೆ ನಡುಕ ಶುರುವಾಯಿತು, ಸ್ವಲ್ಪ ಹೊತ್ತಿನಲ್ಲೇ ಕೈ ಬೆರಳು.. ಕಾಲ್ಬೇರಳು ಜೋಮು ಹಿಡಿದವು. ತಮ್ಮ ಮನೆಯ ಮುಂದೆ ಬೆಂಕಿ ಕಾಯಿಸುತ್ತಿದ್ದವರ ಹತ್ತಿರ ಹೋಗಿ, ಅವರು “ಕುಳಿತುಕೊಳ್ಳಿ” ಎನ್ನುವ ಮೊದಲೆ ಕುಕ್ಕುರುಗಾಲಿನಲ್ಲಿ ಕೂತು ಬೆಂಕಿ ಮುಂದೆ ಕೈ ಆಡಿಸತೊಡಗಿದೆ. ಆಹಾ ಜೀವ ಮರಳಿದಂತಾಯಿತು. ಅವರು ಏನೂ ಅನ್ನದೆ ಚಹಾ ತಂದು ಕೊಟ್ಟರು. ಸ್ವರ್ಗಕ್ಕೆ ಕಿಚ್ಚು ಹಚ್ಚಲು ಇನ್ನೇನು ಬೇಕು ಹೇಳಿ. ಆಹಾ..!!
ನನ್ನ ದಾರಿಗೆ ಅಡ್ಡಲಾಗಿ ಬೃಹತ್ ಬೆಟ್ಟವೆ ನಿಂತಿತ್ತು. ಹೆಚ್ಚು ಹಸಿರಿನಿಂದ ಕಂಗೊಳಿಸುತ್ತಿದ್ದ ಬೆಟ್ಟವದು. ಕಟ್ಟಿಗೆ ಕಡಿದು ತಲೆ ಮೇಲೆ ಹೊತ್ತುಕೊಂಡು ಬರುತ್ತಿದ್ದ ಸಾಲು ಸಾಲು ಮಹಿಳೆಯರು. ಈ ಬೆಳಗಿನ ಚಳಿ ಅವರ ಲೆಕ್ಕಕ್ಕೆ ಇರಲಿಲ್ಲ. ಚೂರೇ ಚೂರು ಸೂರ್ಯನ ಕಿರಣ ನೆಲಕ್ಕೆ ಬೀಳುತ್ತಿದ್ದಂತೆ.. ಬೆಟ್ಟವೇರಲು ಅಣಿಯಾದೆ. ರಸ್ತೆ ರಿಪೇರಿ ಕೆಲಸ ನಡೆಯುತ್ತಿದ್ದರಿಂದ ಟ್ರ್ಯಾಕ್ಟರ್, ಲಾರಿ, ಜೆಸಿಬಿಗಳು ಧೂಳೆಬ್ಬಿಸಿಕೊಂಡು ಓಡುತ್ತಿದ್ದವು.

ಮುಖಕ್ಕೆ ಮಾಸ್ಕ್ ತರಹ ಕರ್ಚೀಫ್ ಕಟ್ಟಿಕೊಂಡು ನಂದಿಯನ್ನು ನೂಕಿಕೊಂಡು ಹೊರಟೆ. ಏರು ಹತ್ತುವುದು.. ಅಲ್ಲಲ್ಲಿ ನಿಲ್ಲುತ್ತಾ ಕಾಡಿನ ನಿಸರ್ಗ ಸೌಂದರ್ಯ ರಾಶಿ ಕಣ್ತುಂಬಿಕೊಳ್ಳುತ್ತಾ.. ಮುಂದೆ ನಡೆಯುತ್ತಿದ್ದೆ. ಮನಸ್ಸು ಆಹ್ಲಾದಕರವಾಗಿತ್ತು. ಅಮರಕಂಟಕ್ ಸಿಗುವ 150 ಕಿ.ಮೀ ಮೊದಲಿಗಿಂತ ಬೆಟ್ಟಗಳು, ಕಾಡುಗಳ ಜೊತೆಗಿನ ಒಡನಾಟ ಇನ್ನೂ ಮುಂದುವರೆದೆ ಇದೆ.
ಅಮರಕಂಟಕ್ ಇರುವುದೆ ವಿಂದ್ಯಾ ಮತ್ತು ಸಾತ್ಪುರ ಪರ್ವತ ಶ್ರೇಣಿಗಳ ಸಂಗಮದಲ್ಲಿ ಅದರ ಜೊತೆ ಮೈಕೆಲ್ ಬೆಟ್ಟಗಳು ಒಂದಾಗಿವೆ.
ನಾನಿನ್ನೂ ವಿಂದ್ಯಾ ಮತ್ತು ಸಾತ್ಪುರ ಪರ್ವತ ಶ್ರೇಣಿಯಲ್ಲಿರುವೆ. ಇಲ್ಲಿನ ಕಾಡು ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿದೆ. ಬೆಟ್ಟಗಳಂತೂ ಘನ ಗಂಭೀರ. ತಮ್ಮನ್ನು ಏರಿಳಿಯಲು ಸುಲಭವಾಗಿ ಬಿಡದ ಜಿದ್ದಿಗಳು. ಬೆಟ್ಟವನ್ನು ಏರಿಳಿದು ಮಂಡಲಾ ಜಿಲ್ಲೆಯ ರಾಮನಗರಕ್ಕೆ ಬಂದೆ. ನಮ್ಮ ರಾಜ್ಯದಲ್ಲಿಯೂ ರೇಶ್ಮೆ ಮಾರುಕಟ್ಟೆ ಹೊಂದಿದ ರಾಮನಗರವಿದೆ.
ಮಧ್ಯಪ್ರದೇಶದಲ್ಲಿನ ರಾಮನಗರದ ಕಥೆಯಿದು.
ರಾಮನಗರ ಇರುವುದು ತಾಯಿ ನರ್ಮದೆಯ ದಂಡೆಗೆ. 17 ನೇಯ ಶತಮಾನದಲ್ಲಿ “ಗೊಂಡ ರಾಜರಿಂದ” ಆಳ್ವಿಕೆಗೆ ಒಳಪಟ್ಟಂತ ಪ್ರದೇಶವಿದು, ಕುರುಹು ಎಂಬಂತೆ “ಮೊಘಲ್ ವಾಸ್ತುಶಿಲ್ಪ”ದಲ್ಲಿ ನಿರ್ಮಿಸಲ್ಪಟ್ಟಂತ “ರಾಯ್ ಭಗತ್ ಕೋಟೆ” ಮತ್ತು “ಮೋತಿ ಮಹಲ್” ಇದೆ.

ಗೊಂಡ ಸಾಮ್ರಾಜ್ಯದ ರಾಜ “ಹೃದಯ ಷಾ” ಬಹು ಸಮಯ ವ್ಯಯಿಸಿ ನಿರ್ಮಿಸಿದ ಕಟ್ಟಡ “ಮೋತಿ ಮಹಲ್”.. ನರ್ಮದೆ ದಂಡೆಗೆ ಅಂಟಿಕೊಂಡಿದೆ.ಕೋಟೆಯ ಅಡಿಪಾಯವನ್ನು 1651 ರಲ್ಲಿ ಹಾಕಲಾಯಿತು ಮತ್ತು ನಿರ್ಮಾಣವು 1667 ರಲ್ಲಿ ಪೂರ್ಣಗೊಂಡಿತು. ರಾಜಧಾನಿಯನ್ನು ಮಾಂಡ್ಲಾಕ್ಕೆ ಸ್ಥಳಾಂತರಿಸುವ ಮೊದಲು ಮೋತಿ ಮಹಲ್ ಸುಮಾರು 85 ವರ್ಷಗಳ ಕಾಲ ಉತ್ತರ ಗೊಂಡ್ವಾನಾದ ರಾಜರ ಶಕ್ತಿ ಕೇಂದ್ರವಾಗಿತ್ತು.
ಮೋತಿ ಮಹಲ್” ಮೂರು ಅಂತಸ್ತಿನ ಕಟ್ಟಡ ಹೊಂದಿದ್ದು, ನರ್ಮದಾ ನದಿ ರಕ್ಷಾಕವಚದಂತಿದೆ. “ರಾಯ್ ಭಗತ್ ಕೋಟೆ”ಯನ್ನು ಸಹ ಗೊಂಡ ರಾಜ ಹೃದಯ ಷಾ ನಿರ್ಮಿಸಿದ್ದು. ಇದು ರಾಜ ಹೃದಯ ಷಾ’ನ ದಿವಾನ್ ರಾಯ್ ಭಗತ್’ನ ವಾಸಕ್ಕಾಗಿ ಕಟ್ಟಿದ್ದು. ಗೊಂಡ ಸಾಮ್ರಾಜ್ಯದ ಕೋಟೆಗಳನ್ನು ನೋಡಿಕೊಂಡು ಹೊರಟ್ಟಿದ್ದು ಸಂಗಮ ಕ್ಷೇತ್ರಕ್ಕೆ.

ನರ್ಮದಾ ನದಿಗೆ ಬುರ್ನರ್ ನದಿ ಬಂದು ಸೇರುವ ತಾಣ ಇದನ್ನ “ಸುನಬಹರಿ ಸಂಗಮ ಘಾಟ್” ಎಂದು ಕರೆಯಲಾಗುತ್ತೆ. ನದಿಯ ದಡದಲ್ಲಿ ಪ್ರಾಚೀನ ಸುನಬಹರಿ ದೇವಿಯ ಮಂದಿರವಿದೆ. ಆಂಜನೇಯ ದೇವಸ್ಥಾನ, ನರ್ಮದಾ ದೇವಿ ದೇವಸ್ಥಾನಗಳು ಇವೆ. ಈ ಘಾಟ್ ಜನಜಂಗುಳಿಯಿಂದ ಗಿಜುಗುಡುತಿತ್ತು.
ಘಾಟ್ನಲ್ಲಿ ಸುಮಾರು ಹೊತ್ತು ಮರದ ನೆರಳಲ್ಲಿ ಕೂತಿದ್ದೆ. ಮೈಕೆಲ್ ಪರ್ವತದ ಕುಂಡದಲ್ಲಿ ಚೂರೇ ಚೂರು ಪುಟಿದೇಳುತ್ತಾ, ಚಿಕ್ಕ ಕಾಲುವೆಯಲ್ಲಿ ಕಿ. ಮೀ ಗಟ್ಟಲೆ ಚಲಿಸಿ, ಮುಂದೆ ಹೋಗುತ್ತಾ ತನ್ನ ಹರಿವನ್ನು, ಆಳವನ್ನು, ಪಾತ್ರವನ್ನು ವಿಸ್ತರಿಸಿಕೊಳ್ಳುವ ತಾಯಿ ನರ್ಮದೆ ನನಗೆ ಸದಾ ಅಚ್ಚರಿಯ ಸಂಗತಿ.

ಮಧ್ಯಾಹ್ನದ ಬಿರು ಬಿಸಿಲು ಸ್ವಲ್ಪ ತಗ್ಗಿದ್ದರಿಂದ ಮುಂದೆ ಹೊರಟೆ. ಮಧ್ಯಾಹ್ನದ ನಂತರ ನಂದಿಯ ಓಟ ಜೋರಾಗಿಯೇ ಇತ್ತು. ಇವಾಗ ಮತ್ತೊಂದು ಬೆಟ್ಟವೇರಿದ್ದೆ. ಈ ಬೆಟ್ಟ ಹಚ್ಚು ಹಸಿರಿನಿಂದ ಕೂಡಿದ್ದಲ್ಲ. ಒಣಗಿ ಹೋದ ಮರಗಳಿದ್ದವು, ಬೋಳು ಗುಡ್ಡಗಳಿದ್ದವು, ಅಂಡೆಲೆದಾಡುವ ಗೋವುಗಳು ಇದ್ದವು.. ಆಮೇಲೆ ಮತ್ತದೆ ನಿರ್ಜನ ರಸ್ತೆಗಳು.
ಇವುಗಳ ಸಾಂಗತ್ಯ ಮನಸ್ಸಿಗೆ ಮುದ ನೀಡುವಂತದ್ದು. ನಿಸರ್ಗದ ಜೊತೆಗಿನ ಒಡನಾಟ ದೇಹ ಮತ್ತು ಮನಸ್ಸನ್ನು ಲವಲವಿಕೆಯಿಂದ ಇಟ್ಟಿರುತ್ತದೆ.. ಅದರ ಅನುಭವ ನನಗಾಗುತ್ತಿದೆ.
ಕಾಡು, ಬೆಟ್ಟಗಳು ಸಾಲುಗಟ್ಟಿ ಎದುರಾಗುತ್ತಿವೆ.. ಇದೇ ದಾರಿಯಲ್ಲಿ ಅಲ್ಲಲ್ಲಿ ಚಿಕ್ಕ ಚಿಕ್ಕ ಊರುಗಳು ಇವೆ. ಕಾಡಿನಲ್ಲಿ ಊರುಗಳೊ..ಊರುಗಳಲ್ಲಿ ಕಾಡೋ ಎಂಬುದು ತಿಳಿಯದ ಬೆಸುಗೆ.
ನಂದಿಯನ್ನು ಬೆಟ್ಟ, ಅರಣ್ಯ, ನಿರ್ಜನ ರಸ್ತೆ, ಏರಿಳಿವಿನಲ್ಲಿ ಓಡಿಸಿಕೊಂಡು ಸಂಜೆಯ ಹೊತ್ತಿಗೆ ಸಿಲೋನ್ ಜಿಲ್ಲೆಯ “ಭೀಲಾಯಿ” ಗ್ರಾಮಕ್ಕೆ ಬಂದೆ. ದೂರ ದೂರದವರೆಗೂ ತಂಗಲು ಯಾವುದೇ ಲಾಡ್ಜ್, ದೊಡ್ಡ ದೇವಸ್ಥಾನ, ಆಶ್ರಮಗಳಿಲ್ಲ.

ಊರಿನಲ್ಲಿನ “ಪಟೇಲ್ ಮೆಡಿಕಲ್ ಶಾಪ್”ನವರು ಉಳಿದುಕೊಳ್ಳಲು ಮತ್ತು ಊಟಕ್ಕೆ ವ್ಯವಸ್ಥೆ ಮಾಡಿದ್ದಾರೆ. ಹಾಗಂತ ನಾನು ವೈದ್ಯ ಅಂತ ಏನೂ ಹೇಳಿಕೊಂಡಿಲ್ಲ. ಇಲ್ಲಿ ನಾನೊಬ್ಬ ನರ್ಮದಾ ಪರಿಕ್ರಮ ಮಾಡುವ ಶ್ರದ್ಧಾಳು ಅಷ್ಟೇ. ಇದು ಪರಿಕ್ರಮವಾಸಿಗಳಿಗೆ ಅವರ ಸೇವೆಯಂತೆ. ಧನ್ಯತೆಯ ಸೇವೆ ಅವರದು.
ಮುಂದಿನ ಪಯಣ ನಾಳೆಗೆ.
ನರ್ಮದೇ ಹರ್
ಹಿಂದಿನ ಸಂಚಿಕೆಗಳು :
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೨)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೩)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೪)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೫)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ –೬)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೭)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೮)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೯)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೦)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೧)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೨)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೩)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೪)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೫)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೬)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೭)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೮)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೯)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೨೦)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೨೧)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೨೨)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೨೩)
- ಡಾ. ಪ್ರಕಾಶ ಬಾರ್ಕಿ – ವೈದ್ಯರು, ಲೇಖಕರು, ಕಾಗಿನೆಲೆ.
