ಹೆಣ್ಣಿನ ಅಂತರಂಗದ ಒಳನೋಟವೇ ‘ಸ್ತ್ರೀ ಲಹರಿ’

ಗೃಹಿಣಿಯಾಗಿ ಕುಟುಂಬದ ಜವಾಬ್ದಾರಿಯನ್ನು ಹೊತ್ತಿದರೂ ಕೂಡ ತನ್ನ ಅರ್ಧಕ್ಕೆ ನಿಂತ ಓದನ್ನು ಮುಂದುವರಿಸಬೇಕೆಂಬ ಛಲವನ್ನು ಹೊತ್ತು , ಆ ಛಲದ ಜೊತೆಗೆ ಕನ್ನಡ ಸಾಹಿತ್ಯದ ಬರವಣಿಯನ್ನು ಪ್ರವೃತ್ತಿಯಾಗಿ ಬೆಳೆಸಿಕೊಂಡು, ಈಗಾಗಲೇ ಎರಡು ಕೃತಿಗಳನ್ನು ಬರೆದು ಲೋಕಾರ್ಪಣೆ ಮಾಡಿರುವ ಪ್ರತಿಭಾವಂತ ಯುವ ಲೇಖಕಿಯೇ ದೀಪಿಕಾ ಬಾಬು ಮಾರಘಟ್ಟ ಅವರ ‘ಸ್ತ್ರೀ ಲಹರಿ ಅಂಕಣ ಬರಹಗಳು’ ಕುರಿತು ಕವಿ ನಾರಾಯಣಸ್ವಾಮಿ (ನಾನಿ) ಅವರು ಪರಿಚಯ ಮಾಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕಗಳು : ಸ್ತ್ರೀ ಲಹರಿ
ಲೇಖಕರು : ದೀಪಿಕಾ ಬಾಬು ಮಾರಘಟ್ಟ
ಪ್ರಕಾರ : ಅಂಕಣ ಬರಹಗಳು
ಪ್ರಕಾಶನ : ಅರ್ಯನ್ ಪ್ರಕಾಶನ 
ಬೆಲೆ : 200 ರೂಪಾಯಿಗಳು

ಗೃಹಿಣಿಯಾಗಿ ಕುಟುಂಬದ ಜವಾಬ್ದಾರಿಯನ್ನು ಹೊತ್ತಿದರೂ ಕೂಡ ತನ್ನ ಅರ್ಧಕ್ಕೆ ನಿಂತ ಓದನ್ನು ಮುಂದುವರಿಸಬೇಕೆಂಬ ಛಲವನ್ನು ಹೊತ್ತು , ಆ ಛಲದ ಜೊತೆಗೆ ಕನ್ನಡ ಸಾಹಿತ್ಯದ ಬರವಣಿಯನ್ನು ಪ್ರವೃತ್ತಿಯಾಗಿ ಬೆಳೆಸಿಕೊಂಡು, ಈಗಾಗಲೇ ಎರಡು ಕೃತಿಗಳನ್ನು ಬರೆದು ಲೋಕಾರ್ಪಣೆ ಮಾಡಿ, ತನ್ನದೆ ಓದುಗ ಬಳಗವನ್ನು ಸೃಷ್ಟಿಕೊಂಡು, ರಾಜ್ಯದ ಪತ್ರಿಕೆಗಳಲ್ಲಿ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳನ್ನು ಬರೆಯುತ್ತಾ, ಕನ್ನಡ ಸಾಹಿತ್ಯ ಲೋಕದಲ್ಲಿ ತನ್ನನ್ನು ಗುರುತಿಸಿಕೊಳ್ಳುತ್ತಿರುವ ಪ್ರತಿಭಾವಂತ ಯುವ ಲೇಖಕಿಯೇ ದೀಪಿಕಾ ಬಾಬು ಮಾರಘಟ್ಟರವರು.

ಇಂದಿನ ಯುವ ಬರಹಗಾರರು ಬರೆಯುತ್ತಿರುವ ಸಾಹಿತ್ಯವು ಪ್ರಬುದ್ದವೋ, ಗಟ್ಟಿಬರಹವೋ, ಜೊಳ್ಳು ಬರಹವೋ ಅಂತ ಗಮನಿಸದೇ ಅವರು ಹೊರ ತಂದಿರುವ ಕೃತಿಯನ್ನು ಒಮ್ಮೆ ಓದುಗರು. ಹಿರಿಯರು ಪ್ರಬುದ್ಧ ಸಾಹಿತಿಗಳು ಇಂದಿನ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕಾಗುತ್ತದೆ ತಿದ್ದಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಸಾಹಿತ್ಯವಲಯದಲ್ಲಿ ಗುಂಪುಗಾರಿಕೆ, ಜಾತಿಯತೆ, ಹಲವರನ್ನು ಮಾತ್ರ ಹೊಗಳಿ ಬರೆಯುವುದು ಹೆಚ್ಚಾಗಿದೆ. ಇಂದಿನ ಯುವ ಪ್ರತಿಭೆಗಳೇ ಮುಂದೆ ಯಶಸ್ವಿ ಬರಹಗಾರರಾಗಿಯೂ ಕೂಡ ರೂಪಗೊಳ್ಳಬಹುದು ಅದಕ್ಕೆ ಓದುಗರ ಪ್ರೋತ್ಸಾಹ ಬಹಳಷ್ಟು ಅಗತ್ಯವಾಗಿದೆ.

ನಾನು ಯಾವುದೇ ಕೃತಿಯನ್ನು ವಿಮರ್ಶೆ ಮಾಡಲು ಹೋಗುವುದಿಲ್ಲ. ಕಾರಣ ಒಂದು ಕೃತಿಯನ್ನು ವಿಮರ್ಶೆ ಮಾಡುವಷ್ಟು ಜ್ಞಾನವಾಗಲಿ, ಪ್ರಬುದ್ಧತೆಯಾಗಲಿ ನನ್ನೊಳಗೆ ಇಲ್ಲ ಅಂತ ನಾನು ನಂಬಿದ್ದೇನೆ.

ಲೇಖಕಿಯಾದ ದೀಪಿಕಾ ಬಾಬು ರವರು ಸ್ತ್ರೀ ಲಹರಿ ( ಅಂಕಣ ಬರಹಗಳು) ಕೃತಿಯನ್ನು ಪ್ರೀತಿಯಿಂದ ಗೌರವ ಪ್ರತಿಯನ್ನು ಕಳಿಸಿದ್ದರು. ಕವನ ಗಜಲ್ ಓದಿ ಬರೆಯಬಲ್ಲೆ ಅದರೆ ಬರಹವನ್ನು ಓದುವುದು ಕಷ್ಟಸಾಧ್ಯ ನನಗೆ ಅದರೂ ಕೂಡ ಯುವ ಲೇಖಕಿಯ ಬರಹವನ್ನು ಓದಲು ಮನಸ್ಸು ಮಾಡಿದೆ.

ಸ್ತ್ರೀ ಲಹರಿ ( ಅಂಕಣ ಬರಹಗಳು) ಕೃತಿಯಲ್ಲಿ ಸುಮಾರು 52 ಲೇಖನಗಳಿವೆ. ಈ ಎಲ್ಲಾ ಲೇಖನಗಳೂ ಕೂಡ ವಿನಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳು. ಪತ್ರಿಕೆ ಪ್ರಕಟವಾದ ಎಲ್ಲಾ ಲೇಖನಗಳನ್ನು ಕ್ರೂಢಿಕರಿಸಿ ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ ಬೆಂಗಳೂರಿನ ಆರ್ಯನ್ ಪ್ರಕಾಶನದವರು.

ಇವರು ತಮ್ಮ ಮನದಾಳದ ಮಾತಿನಲ್ಲಿ ಯಾವುದೇ ಸಂಕೋಚವಿಲ್ಲದೆ ಜಬೀವುಲ್ಲಾ ಎಮ್ ಅಸದ್ ರವರು ಈ ಕೃತಿಗೆ ಚಿತ್ರಗಳನ್ನು ಬರೆಯುವಾಗ ಅವರ ಬರಹವನ್ನು ಓದಿ ಬರಹವು ಇನ್ನಷ್ಟು ಪ್ರಬುದ್ದವಾಗಿರಬೇಕಿತ್ತು ಅಸಮಾಧಾನ ತೋರುತ್ತಾ ಇನ್ನಷ್ಟು ಸಾಹಿತ್ಯವನ್ನು ಆಳವಾದ ಅಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಳ್ಳ ಬೇಕು ಎಂದು ಹೇಳಿದ ಮಾತನ್ನು ಪ್ರೀತಿಯಿಂದ ಸ್ವೀಕರಿಸಿ ಧನ್ಯವಾದಗಳನ್ನು ಹೇಳುದ್ದಾರೆ. ಈ ಮನಸ್ಥಿತಿ ಬರಹಗಾರರಲ್ಲಿ ಇದ್ದಾಗ ಮಾತ್ರ ಮುಂದಿನ ಸಾಹಿತ್ಯದ ಪಯಣವನ್ನು ಅವರು ಯಶಸ್ವಿಯಾಗಿಸಬಲ್ಲರು ಎಂಬುದು ನನ್ನ ಭಾವನೆ.

ಈ ಕೃತಿಗೆ ಗುರುಗಳಾದ ಮತ್ತು ಹಿರಿಯ ಹಿರಿಯ ಸಾಹಿತಿಯಾದ ಶ್ರೀಮತಿ ಎ. ಸರಸಮ್ಮ ಚಿಕ್ಕಬಳ್ಳಾಪುರ ಇವರು ಮುನ್ನುಡಿಯನ್ನು ಬರೆದಿದ್ದು, ಸಾಮಾಜಿಕ ಕಳಕಳಿಗೆ ಪೂರಕವಾದ ಕವಿತೆ, ಕಥೆ, ಲೇಖನ, ಕಾದಂಬರಿ ಹೀಗೆ ಹತ್ತು ಹಲವು ಪ್ರಕಾರಗಳಲ್ಲಿ ಬರೆಯುತ್ತಾ ಸಾಗುತ್ತಿರುವುದು ಪ್ರಶಂಸನೀಯ ಈ ಲೇಖನಗಳಲ್ಲಿ ಹೆಣ್ಣಿನ ಸ್ಥಾನಮಾನ, ಅಸಹಾಯಕತೆ, ನಿರಂತರ ಶೋಷಣೆ ಇತ್ಯಾದಿಗಳ ಬಗ್ಗೆ ಹೆಣ್ಣುಮಕ್ಕಳಿಗೆ ಆಗುವ ಅನ್ಯಾಯದ ಬಗ್ಗೆ ಮುಕ್ತವಾಗಿ ವಿವರಿಸಿದ್ದಾರೆ. ಇವರ ಲೇಖನಿಯಿಂದ ಇನ್ನಷ್ಟು ಕೃತಿಗಳು ಹೊರ ಬಂದು ಓದುಗರ ಮನಸ್ಸು ತಣಿಸಲಿ ಎಂದು ಹೇಳಿ ಹಾರೈಸಿದ್ದಾರೆ.

ಬೆನ್ನುಡಿಯನ್ನು ಬರೆದಿರುವ ಕೊಪ್ಪಳದ ಪತ್ರಕರ್ತರಾಗಿರುವ ವಾಯ್ ಎಮ್ ಕೋಲಕಾರ ರವರು ಹೇಳುತ್ತಾರೆ. ಶ್ರೀಮತಿ ದೀಪಿಕಾ ಬಾಬು ರವರ ಬರಹಗಳಲ್ಲಿ ಈ ಸಮಾಜದಲ್ಲಿ ಹೆಣ್ಣನ್ನು ನೋಡುವ ಪರಿ ಅವರ ಹಾವಭಾವಗಳ ವಿಶ್ಲೇಷಣೆ , ಅಂತರಿಕ ಪಲ್ಲಟಗಳ ತೊಳಲಾಟಗಳು ಪ್ರೀತಿಯ ಸಂಕೇತದ ಆಶಾದಾಯಕ ಸಾಲುಗಳು ಈ ಬರಹಗಳಲ್ಲಿ ಮೂಡಿ ಬಂದಿವೆ ಎಂದು ಹೇಳಿದ್ದಾರೆ.

ಆಶಯ ನುಡಿಯನ್ನು ಬರೆದಂತಹ ಕವಯಿತ್ರಿ ಅಕ್ಷರ ಚಪ್ಪರ ಸಾಹಿತ್ಯ ಸಂಘಟನೆಯ ಅಧ್ಯಕ್ಷರು ಆದಂತಹ ಮಧು ಅಕ್ಷರಿರವರು ಈ ಕೃತಿಯ ಲೇಖನಗಳ ಬಗ್ಗೆ ಹೇಳುತ್ತಾರೆ. ಈ ಲೇಖನಗಳು ಬಹುಶಃ ಯಾರ ಚಿಂತನೆಯಿಂದ ಎರವಲು ಪಡೆದ ಅಂಶಗಳಲ್ಲ, ಸ್ವತಂತ್ರ ಆಲೋಚನೆ ತಕ೯ಗಳಂತಿವೆ. ಲೇಖಕಿಯು ತಮ್ಮ ಈ ಅಂಕಣ ಸರಣಿಯಲ್ಲಿ ಹಲವು ವಿಚಾರಗಳನ್ನು ತೆರೆದಿಡಲು ಪ್ರಯತ್ನಿಸಿದ್ದಾರೆ. ಮತ್ತು ಪ್ರತಿಯೊಂದು ಲೇಖನಕ್ಕೂ ಬಳಸಲಾಗಿರುವ ಚಿತ್ರದಲ್ಲಿ ಆ ಲೇಖನದ ಮಹತ್ವವನ್ನು ಆ ಚಿತ್ರಗಳು ತೆರೆದಿಡುತ್ತವೆ.

ಸ್ತ್ರೀ ಲಹರಿ ( ಅಂಕಣ ಬರಹಗಳು) ಈ ಕೃತಿಯಲ್ಲಿ ಸಮಾರು ೫೨ ಅಂಕಣ ಬರಹಗಳಿವೆ. ಈ ಬರಹಗಳು ಪತ್ರಿಕೆಯಲ್ಲಿ ಪ್ರಕಟವಾದ ಬರಹಗಳಾಗಿವೆ. ಬಹಳಷ್ಟು ಬರಹಗಳು ಹೆಣ್ಣಿನ ಒಡಲಾಳದ ನೋವುಗಳು, ಅವಳ ಕೌಟುಂಬಿಕ ಬದುಕು, ಹೆಣ್ಣು ಮಾನಸಿಕ ಸ್ಥಿರತೆಯನ್ನು ಹೇಗೆ ಕಾಪಾಡಿಕೊಳ್ಳಬೇಕು ಒಂದು ಹೆಣ್ಣು ಗಂಡನ ಮರಣದ ನಂತರದ ಬದುಕಿನ ಕೊನೆಯವರೆಗೂ ವಿಧವೆಯಾಗಿಯೇ ಬದುಕಬೇಕೆ? ಎಂದು ಪ್ರಶ್ನಿಸುವ ಬರಹಗಳು ಓದುಗರನ್ನು ಸೆಳೆಯುತ್ತವೆ.

ಈ ಕೃತಿಯನ್ನು ಓದಿದಾಗ ನನ್ನನ್ನು ಕಾಡಿದ ಒಂದಷ್ಟು ಲೇಖನಗಳನ್ನು ಪರಿಚಯ ಮಾಡಲು ಪ್ರಯತ್ನ ಪಡುವೆ.ಮೊದಲ ಲೇಖನ” ಹೆಣ್ಣಿನ ಸಾಥ೯ಕತೆಯ ಭಾವ ತಾಯ್ತನ” ಈ ಲೇಖನದಲ್ಲಿ ಒಂದು ಹೆಣ್ಣು ಗಭ೯ಧರಿಸಿ ಪ್ರಸವ ವೇದನೆಯನ್ನು ಅನುಭವಿಸಿ ಮಗುವಿಗೆ ಜನ್ಮವನ್ನು ಅಮ್ಮ ಅಂತ ಕರೆಯಿಸಿಕೊಂಡಾಗ ಅವಳ ಜೀವನ ಪಾವನವಾದಂತೆ ಮತ್ತು ಹೆಣ್ಣು ಹೆರಿಗೆಯ ನಂತರ ಎನೆಲ್ಲಾ ತೊಂದರೆ ಅನುಭವಿಸುತ್ತಾಳೆ. ಅವಳ ದೇಹದಲ್ಲಿ ಆಗುವ ಬದಲಾವಣೆಗಳು ತಿಳಿಸಿರುವ ಲೇಖಕಿ ಮಾನವನ ಉಗಮದ ಸೃಷ್ಟಿಕರ್ತೆ ಹೆಣ್ಣು ಅವಳು ದೇವತೆಗೆ ಸಮಾನವಾದವಳು ಎಂದು ಈ ಲೇಖನದಲ್ಲಿ ವಿವರಿಸುತ್ತಾರೆ.

ಅವಳ ಮುಟ್ಟು ಮೈಲಿಗೆಯೇ? ಈ ಲೇಖನದಲ್ಲಿ ಹೆಣ್ಣು ಮಗಳು ಋತುಚಕ್ರವಾದಾಗ ಹಿಂದಿನ ಕಾಲದಲ್ಲಿ ಅದನ್ನು ಒಂದು ಮೈಲಿಗೆಯಂತೆ ಭಾವಿಸಿ ಅವಳನ್ನು ಮನೆಯಿಂದ ದೂರ ಊರ ಹೊರಗಿಡುವ ಸಂಪ್ರದಾಯವನ್ನು ಅನುಸರಿಸುತ್ತಿದ್ದರು. ಇಂದಿನ ಅಧುನಿಕ ಯುಗದಲ್ಲಿ ಜನರು ವಿದ್ಯಾವಂತರಾದರೂ ಕೂಡ ಮೊದಲಿನ ಸಂಪ್ರದಾಯ ರೂಢಿಸಿಕೊಂಡು ಬರುತ್ತಿದ್ದಾರೆ. ಸಂಪ್ರದಾಯಗಳ ಹೆಸರಿನಲ್ಲಿ ಮೂಢನಂಬಿಕೆಗಳಿಗೆ ಬಲಿಯಾಗುವುದು ಇನ್ನೂ ಎಲ್ಲಿಯಾ ತನಕ? ಎಂದು ಪ್ರಶ್ನಿಸುತ್ತಾ ಶಿಕ್ಷಕಿಯಾಗಿದ್ದ ತನ್ನ ಗೆಳತಿಯೊಳಬ್ಬ ಕಥೆಯನ್ನು ವಿವರಿಸುತ್ತಾ ಮನೆಯೊಳಗಿನ ಸಂಪ್ರದಾಯಗಳಿಗೆ ತಲೆಬಾಗಿ ಮನೆಯವರು ಹೇಳಿದ ನಿಯಮಗಳನ್ನು ಪಾಲಿಸುತ್ತಿದ್ದ ಶಿಕ್ಷಕಿ ಶಾಲೆಯಲ್ಲಿ ಹೆಣ್ಣು ಮಕ್ಕಳಿಗೆ ಮುಟ್ಟಿನ ಬಗ್ಗೆ ಅರಿವು ಮೂಡಿಸುವ ಸಮಯ ಬಂದಾಗಲೆಲ್ಲಾ ಹಿಂಜರಿಕೆ ಆ ಶಿಕ್ಷಕಿಯನ್ನು ಕಾಡುತ್ತಿತ್ತು ಕಾರಣ ಅವಳು ಮುಟ್ಟಾದಾಗ ಅನುಭವಿಸಿದ ಕೀಳಿರುವೆ ಮತ್ತು ಪರಿಸ್ಥಿತಿಯು ಅಪರಾಧದ ಪ್ರಜ್ಞೆಯಂತೆ ಅವರನ್ನು ಕಾಡುತ್ತಿತ್ತು. ಹೆಣ್ಣು ಮುಟ್ಟಾಗುವುದು ಹೆಣ್ಣಿನ ದೇಹ ಶುದ್ದಿಸುವ ಒಂದು ಕ್ರಮವಷ್ಟೆ. ಅದು ಮೈಲಿಗೆಯಲ್ಲ ಇಂತಹ ತಿಳುವಳಿಕೆ ಯಾಂತ್ರಿಕ ಯುಗದಲ್ಲಿ ಕೂಡ ಮುಟ್ಟನ್ನು ಮೈಲಿಗೆಯಂತೆ ಭಾವಿಸುವ ಸಂಪ್ರದಾಯವಾದಿಗಳ ಮನಸ್ಸು ಬದಲಾಗಲಿಲ್ಲವೆಂದು ಚಂದವಾಗಿ ಈ ಲೇಖನವನ್ನು ಬರೆದಿದ್ದಾರೆ.

“ವಿಶೇಷ ಚೇತನರೆಂಬ ಗೌರವವಿರಲಿ” ಮನುಷ್ಯ ಸಂಘಜೀವಿ ಅವನು ಇತರರನ್ನು ತನ್ನಂತೆ ಪ್ರೀತಿಸಬೇಕು ಗೌರವಿಸಬೇಕು. ವಿಕಲತೆ ಎಂಬುದು ಹುಟ್ಟಿನಿಂದಲೋ ವಾಸಿಯಾದ ಕಾಯಿಲೆಗಳಿಂದಲೋ ಆಕಸ್ಮಿಕವಾಗಿ ನಡೆದ ಘಟನೆಗಳಿಂದಲೋ ವಿಕಲಾಂಗರು ಆಗಿರುತ್ತಾರೆ. ಅವರಿಗೆ ದುಡಿಯಲು ಇತರರಂತೆ ಸಾಧ್ಯವಾಗದಿದ್ದರೂ ಕೂಡ ತಮ್ಮ ಪ್ರತಿಭೆಯನ್ನು ತೋರಿಸಿ ರಾಷ್ಟ್ರಮಟ್ಟದಲ್ಲಿ ಕೀರ್ತಿಯನ್ನು ತಂದವರು ಇದ್ದಾರೆ. ಅವರನ್ನು ನಾವು ಗೌರವಿಸಬೇಕು ಎಂದು ಈ ಲೇಖನದ ಮೂಲಕ ತಿಳಿಸುತ್ತಾರೆ.

“ಧರ್ಮಶಾಸ್ತ್ರದ ಉಲ್ಲೇಖನದ ವ್ಯಾಖ್ಯಾನ ಹೆಣ್ಣಿಗಷ್ಟೆ” ಈ ಲೇಖನದಲ್ಲಿ ಬರುವ ರಾಧಿಕಾಳ ತಂದೆ ಸಂಪ್ರದಾಯ ಶರಣರು. ಅವರು ಭೋದಿಸಿದ ಪಾಠಗಳನ್ನು ಅವಳು ಪಾಲಿಸಬೇಕಿತ್ತು. ಕಟ್ಟುಪಾಡುಗಳು ಹೆಣ್ಣಿಗೆ ಮಾತ್ರ ಯಾಕೆ? ಎಂದು ಪ್ರಶ್ನಿಸುವ ಲೇಖಕಿ ಭಾರತದಲ್ಲಿ ಅಂದಿನ ಕಾಲದಲ್ಲಿ ಪುರುಷ ಪ್ರಧಾನ ಕುಟುಂಬದಲ್ಲಿ ಧರ್ಮಶಾಸ್ತ್ರ ಹೇಗೆ ಅಳವಡಿಸಿಕೊಳ್ಳಬೇಕು, ಅವಳು ಪುರುಷನಿಗೆ ಅಡಿಯಾಳಾಗಿ ಹೇಗೆ ಬದುಕಬೇಕಿತ್ತು ಎಂಬುದನ್ನು ಅಧ್ಯಯನ ನಡೆಸಿ ಬರೆಯಬೇಕಿತ್ತು, ಮನು ಧರ್ಮಶಾಸ್ತ್ರ ಹಿಂದಿನ ಕಾಲದಲ್ಲಿ ಮಾತ್ರವಲ್ಲ ಇಂದಿಗೂ ಕೂಡ ಅದರ ನಿಯಮಗಳು ಕಟ್ಟು ಪಾಡುಗಳು ಚಾಲ್ತಿಯಲ್ಲಿ ಇವೆ. ಧರ್ಮಶಾಸ್ತ್ರ ಬರೀ ಮಹಿಳೆಯರಿಗೆ ಮಾತ್ರವಲ್ಲದೆ. ಅಸ್ಪೃಶ್ಯತೆಯ ಆಚರಣೆಯನ್ನು ಒಪ್ಪಿಕೊಂಡು ಜಾತಿ ಎಂಬ ಅಂತರವನ್ನು ಸೃಷ್ಟಿಸಿ ಸಮಾಜವನ್ನು ವಿವಿಧ ವರ್ಗಗಳಾಗಿ ಸೃಷ್ಟಿಸಿತು. ಈ ಲೇಖನವು ತನ್ನ ಶೀರ್ಷಿಕೆಗೆ ನ್ಯಾಯವನ್ನು ಒದಗಿಸಿಲ್ಲ ಎಂಬುದು ನನ್ನ ವೈಯುಕ್ತಿಕ ಭಾವನೆ.

ಸ್ತ್ರೀ ಲಹರಿ ( ಅಂಕಣ ಬರಹಗಳು) ಈ ಕೃತಿಯ ಎಲ್ಲಾ ಲೇಖನಗಳು ಹೆಣ್ಣುಮಕ್ಕಳ ಮನೋಗಾಥೆ ಜೀವನಗಾಥೆಗಳೇ ಆಗಿವೆ. ಬಹಳಷ್ಟು ಲೇಖನಗಳು ಉತ್ತಮ ಸಂದೇಶಗಳು ಸಾರುತ್ತಿದ್ದರೂ ಕೂಡ ಕೆಲವೊಂದು ಕಡೆ ಲೇಖನ ಸುಖಾಂತ್ಯವನ್ನು ಕಂಡಿಲ್ಲ ಲೇಖಕಿಯಾದ ಶ್ರೀಮತಿ ದೀಪಿಕಾ ಬಾಬು ರವರ ಬರಹ ಚಿಗರೊಡೆದು ಹೂವಾಗಿ ಕಾಯಿಯಾಗುತಿದೆ. ಬರಹವು ಇನ್ನೂ ಮಾಗಬೇಕಾಗಿದೆ. ಲೇಖನದ ಆರಂಭ ಮತ್ತು ಅಂತ್ಯವನ್ನು ಮಾಡುವ ಬಗೆಯನ್ನು ನಮ್ಮ ಕನ್ನಡ ಹಿರಿಯ ಬರಹಗಾರರ ಕೃತಿಗಳನ್ನು ಓದಿ ಮನನ ಮಾಡಿಕೊಂಡು ಮತ್ತಷ್ಟು ಉತ್ತಮವಾದ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡಲಿ ಇವರ ಪ್ರತಿಭೆಯನ್ನು ಈ ಸಮಾಜ ಗುರುತಿಸಲಿ ಗೌರವಧಾರಗಳು ಸಿಗಲಿ ಎಂದು ಹಾರೈಸುವೆ.


  • ನಾರಾಯಣಸ್ವಾಮಿ (ನಾನಿ) – ವಕೀಲರು ಮತ್ತು ಲೇಖಕರು, ಮಾಸ್ತಿ ಕೋಲಾರ ಜಿಲ್ಲೆ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW