ಸಾವಿರ ದಳದ ಸೌಗಂಧಿಕಾ ಪುಷ್ಪ ಅನ್ನುವುದೇನಾದರೂ ಇದ್ದಿದ್ದರೆ ಅದರ ಪಕಳೆಗಳಂತೆ ಹೆಚ್ ಎಸ್ ಮುಕ್ತಾಯಕ್ಕ ಅವರ ‘ನಿನಗಾಗಿ ಬರೆದ ಕವಿತೆಗಳಲ್ಲಿನ ಒಂದೊಂದೂ ಕವಿತೆಗಳಿವೆ. ಕೃತಿಯ ಕುರಿತು ಖ್ಯಾತ ಲೇಖಕಿ ಪ್ರಭಾವತಿ ಎಸ ವಿ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ನಿನಗಾಗಿ ಬರೆದ ಕವಿತೆಗಳು
ಲೇಖಕರು : ಹೆಚ್ ಎಸ್ ಮುಕ್ತಾಯಕ್ಕ
ಪುಟ : ೧೮೪
ಬೆಲೆ : ೨೦೦
ಪ್ರಕಾಶನ : ಸಂಗಾತ ಪ್ರಕಾಶನ – ೨೦೨೨
ಒಟ್ಟು ೨೩೬ ಕವಿತೆಗಳು ಒಂದರಂತೆ ಒಂದು, ಅದರಂತೆ ಇನ್ನೊಂದು ಎಂದು ಮೇಲು ನೋಟಕ್ಕೆ ಅನಿಸಿದರೂ, ಅದೊಂದೇ ವಿಷಯ ಮತ್ತೆ ಮತ್ತೆ ಎಷ್ಟು ಓದುವುದು ಅನಿಸಿದರೂ ಕೆಳಗಿಡಲಾಗದ ಸೆಳೆತ ಈ ಪುಸ್ತಕದ್ದು. ಕವಿತೆಗೆ ಹೆಸರಿಡುವ ಅಭ್ಯಾಸ ಇವರಿಗಿಲ್ಲ. ಅದರ ಅವಶ್ಯಕತೆಯೂ ಇಲ್ಲ. ಈ ಹಿಂದಿನ ‘ತನಹಾಯಿ’ ಥರದ ಕವಿತೆಗಳೇ ಆದರೂ ಆ ಪುಸ್ತಕದ ಮುಖಪುಟದ ಸೊಗಸು ಮುದ್ರಣದ ಮೋಹಕತೆ ಇಲ್ಲೂ ಇರಬೇಕಿತ್ತು ಅನಿಸುತ್ತದೆ.
ಕಾವ್ಯಕ್ಕೆ ಮುನ್ನ ಎಂಬ ಹೆಸರಿನ ೧೨ ಪುಟಗಳ ಪ್ರಾರಂಭದ ಮಾತುಗಳು ಕಾವ್ಯಾಭ್ಯಾಸಿಗಳು ಅವಶ್ಯವಾಗಿ ಮನನ ಮಾಡುವಷ್ಟು ಮಹತ್ವದ್ದಾಗಿವೆ. ಈ ಸಲಹೆ ಕೊಟ್ಟವರು ಪ್ರಸಿದ್ಧ ಅನುವಾದಕರಾದ ಟೇರ್ಲಿ ಶೇಖರ್ ಅಂತೆ. ಈ ೧೨ ಪುಟಗಳನ್ನು ಮುಖಪುಟದಲ್ಲಿ ( fb) ಹಾಕಿ ಆದಷ್ಟು ಹಂಚಿದರೆ ಎಳೆಯರಿಗೆ ಮಾರ್ಗದರ್ಶನ.

ಗಜಲ್ ಎಂದರೇನು ಎಂಬ ಉಪಯುಕ್ತ ಮಾಹಿತಿ – ಅದರ ಛಂದಸ್ಸು ಪಾದ ನಿಯಮ ಇತ್ಯಾದಿಗಳನ್ನೊಳಗೊಂಡ ಪುಸ್ತಕವನ್ನು ಶಾಂತರಸರ ಸಲಹೆಯಂತೆ ಇವರು ಬರೆಯುವವರೆಗೆ ಎರಡೆರಡು ಸಾಲು ಬರೆಯುವುದೇ ಗಜಲ್ ಎಂದು ಎಲ್ಲರೂ ಭಾವಿಸಿದ್ದಂತೆ ತೋರುತ್ತದೆ .
ಸಾವಿರ ದಳದ ಸೌಗಂಧಿಕಾ ಪುಷ್ಪ ಅನ್ನುವುದೇನಾದರೂ ಇದ್ದಿದ್ದರೆ ಅದರ ಪಕಳೆಗಳಂತೆ ಈ ಒಂದೊಂದೂ ಕವಿತೆಗಳಿವೆ. ಇವನ್ನು ಓದುತ್ತಾ ಹೋದಂತೆ ನಾನೂ ಇಂಥದೊಂದು ಪ್ರಯತ್ನ ಮಾಡಲೇ (ಅದೂ ಈ ವಯಸ್ಸಿನಲ್ಲಿ) ಎನಿಸಿಬಿಟ್ಟಿತು. ಪ್ರಕಟಿಸುವುದೇನೂ ಬೇಡ. ನನ್ನ ಆತ್ಮತೃಪ್ತಿಗಾಗಿ. ಅಕ್ಕ ಒಂದು ಹಂತದಲ್ಲಿ (ಪ್ರಣಯಿನಿಯ ಹಂತದಲ್ಲಿ) ನಿಂತು ಬಿಡುತ್ತಾಳೆ. ಒಬ್ಬ ಹೆಂಗಸಿನ ಅನುಭವದ ಮುಂದಿನ ಹಂತಗಳನ್ನು ಅವಳು ಬರೆಯುವುದೇ ಇಲ್ಲ. ಕರ್ನಾಟಕದ ಪರಿಧಿಯಲ್ಲಿ ಅಕ್ಕನನ್ನೂ ಇಂಡಿಯಾದ ಪರಿಧಿಯಲ್ಲಿ ಅಮೃತಾ ಪ್ರೀತಮ್ ಳನ್ನೂ ಈ ವಿಶೇಷಕ್ಕೆ ಗುರುತಿಸಲಾಗುತ್ತದೆ . ಈಗ ಈ ಸಾಲಿಗೆ ಮುಕ್ತಾಯಕ್ಕನನ್ನೂ ಸೇರಿಸಬಹುದು . ಮುಕ್ತಾಯಕ್ಕ ಯಾರು ಅವಳ ಗಂಡ ? ಮಕ್ಕಳು ? ಈ ಯಾವ ಪ್ರಶ್ನೆ ಯೂ ಇಲ್ಲಿ ಕಾಡುವುದೇ ಇಲ್ಲ ಕಾಡಲೂ ಬಾರದು. ಬದುಕಿನ ಒಂದು ಹಂತದಲ್ಲಿ ನಿಂತು ಬಿಟ್ಟ ಪ್ರಣಯಿನಿ ಇವಳು ಅಷ್ಟೇ. ಇವಳು ಗಂಡಾಗಿ ನಾನು ಇನ್ನೊಂದಿಷ್ಟು ವರ್ಷ ಗಳಷ್ಟು ಚಿಕ್ಕವಳಾಗಿದ್ದರೆ ಎಂಬ ಹಂಬಲ ನನ್ನನ್ನು ಕಾಡಿಬಿಟ್ಟಿತು.

ಇಲ್ಲದೇ ಇರುವ ಚೆನ್ನಮಲ್ಲಿಕಾರ್ಜುನ ನನ್ನು ಕುರಿತು ಅಕ್ಕ ಬರೆದಂತೆ ಇಲ್ಲದೇ ಇರುವವನನ್ನು ಕುರಿತು ಬರೆಯುವ ಬಗ್ಗೆ ಪ್ರಾರಂಭದಲ್ಲಿ ಕವಯಿತ್ರಿ ಹೇಳಿಕೊಂಡಿದ್ದಾರೆ. ಆದರೂ ಅವನು ಇಲ್ಲ ಎಂದು ನಮಗೆ ಅನಿಸುವುದೇ ಇಲ್ಲ . ಅದೇ ಈ ಕವಿತೆಗಳ ಮಾಂತ್ರಿಕತೆ . ಹೀಗೆ ಕಾಲ ದೇಶ ಸಂಸಾರಗಳಿಂದ ತನ್ನನ್ನು ಬಿಡಿಸಿಕೊಂಡು ಬರೆಯುವುದೇ ಒಂದು ಅನನ್ಯ ಸಾಧನೆ .
ಕವಿತೆಗಳನ್ನು ನಾನಿಲ್ಲಿ ಕೋಟ್ ಮಾಡುವುದಿಲ್ಲ . ಅವನ್ನು ನೀವು ಸಂಕಲನದಲ್ಲಿ ಯೇ ಓದಿ ಆಸ್ವಾದಿಸಬೇಕು.
ಪ್ರತಿಗಳಿಗಾಗಿ ಸಂಪರ್ಕಿಸಿ .
- ಪ್ರಭಾವತಿ ಎಸ ವಿ
