ಒಂದು ಬಾಟಲಿ ರಕ್ತ ಕಥಾ ಸಂಗ್ರಹ ಜೀವನಕ್ಕೆ ಹತ್ತಿರವಾದ ಇವು ಕುತೂಹಲಕರವಾಗಿದೆ. ಹೂಲಿಶೇಖರ್ ದಟ್ಟ ಅನುಭವಗಳೇ ಇಲ್ಲಿ ಕತೆಗಳಾಗಿವೆ. ಓದುವಾಗ ಕುತೂಹಲ ಇಮ್ಮಡಿಯಾಗುವುದು. ಇಲ್ಲಿಯ ಹಲವು ಕತೆಗಳು ತಮಿಳು , ತೆಲುಗು, ಮಲಯಾಳಂ, ಮರಾಠಿ ಭಾಷೆಗಳಿಗೂ ಅನುವಾದಗೊಂಡಿದೆ, ಲೇಖಕ ರಾಘವೇಂದ್ರ ಇನಾಮದಾರ ಅವರ ಲೇಖನಿಯಲ್ಲಿ ಅರಳಿದ ಒಂದು ಬಾಟಲಿ ರಕ್ತ, ಮುಂದೆ ಓದಿ…
ಕೃತಿ: “ಒಂದು ಬಾಟಲಿ ರಕ್ತ”
ಲೇಖಕರು: ಹೂಲಿ ಶೇಖರ್
ಪ್ರಕಾಶನ: ಸಾಹಿತ್ಯ ಸಾಧನ
ಬೆಲೆ: ೧೪೦
ಪುಟಗಳು: ೧೩೯
“ಒಂದು ಬಾಟಲಿ ರಕ್ತ”
ಒಂದು ಬಾಟಲಿ ರಕ್ತ ಎಂಬ ಕಥಾ ಸಂಕಲನದ ಮೊಟ್ಟ ಮೊದಲನೇ ಕಥೆ “ಗೆಳೆಯರೇ ಯಾರಿದ್ದೀರಿ..??” ಓದುತ್ತಿದ್ದಂತೆ ಕಣ್ಣು ಒದ್ದೆಯಾಯಿತು. ಈ ಕಥೆಯಲ್ಲಿ…ಕಟ್ಟಡದ ಮೇಲಿರುವ ಆಫೀಸಿನ ಕಿಟಿಕಿ ಬಳಿ ನಿಂತ ಹರೀಶನಿಗೆ ಕೆಳಗಡೆ ಹೋಗುತ್ತಿರುವ ಹೆಣದ ಮೆರವಣಿಗೆ ಏನನ್ನೋ ನೆನಪು ಮಾಡಿಕೊಡುತ್ತದೆ. ತಕ್ಷಣ ಅವನೂ ಕೂಡ ಸ್ಮಶಾನದ ಕಡೆಗೆ ಹೋಗುತ್ತಾನೆ. ಹಾಗಾದ್ರೆ ಆ ಹೆಣ ಯಾರದ್ದು.. ? ಅವನಿಗೂ ಸತ್ತ ವ್ಯಕ್ತಿಗೂ ಏನು ಸಂಬಂಧ ಅಂತ ತಿಳಿಯಲು ಈ ಕಥೆ ಓದಲೇ ಬೇಕು.

‘ಒಂದು ಬಾಟಲಿ ರಕ್ತ’ ಕಥಾ ಸಂಗ್ರಹ ಪುಸ್ತಕ ಬರಹಗಾರ ಹೂಲಿಶೇಖರ್
“ಸಂದರ್ಭಗಳು”
ಈ ಕಥೆಯ ಶೀರ್ಷಿಕೆಯೇ ಹೇಳುವಂತೆ ರಾಮನಿಗೆ ಒದಗಿ ಬಂದ ಸಂದರ್ಭ ಆತನನ್ನು ಶ್ರೀಮಂತನನ್ನಾಗಿ ಮಾಡುತ್ತದೆ. ಆದರೆ ಕೊನೆಯಲ್ಲಿ ಅವನಿಗೆ, “ತಾನು ಇಷ್ಟು ದಿನ ಕೂಡಿಟ್ಟ ಸಂಪತ್ತು ನಾಯಿಯ ಹಾಲಿನಂತೆ ಯಾವುದಕ್ಕೂ ಪ್ರಯೋಜನವಿಲ್ಲ” ಅಂತ ಅನಿಸಿದ್ದು ಏಕೆ…? ಅವನ ಮನೆಯನ್ನು ತೆರಿಗೆ ಅಧಿಕಾರಿಗಳು ಶೋಧಿಸಿದ್ದಾರೂ ಏಕೆ..? ಎಂಬುದನ್ನು ಕಣ್ಣಿಗೆ ಕಟ್ಟುವಂತೆ ಶೇಖರ್ ಸರ್ ನಿರೂಪಣೆ ಮಾಡಿದ್ದಾರೆ.
“ಯಾವ ಹುತ್ತದಲ್ಲಿ ಯಾವ ಹಾವು”
ಇನ್ನು ಈ ಕಥೆಯಲ್ಲಿ.. ಮದುವೆ ಅನ್ನುವುದು ಸುಶೀಲಳ ಜೀವನದಲ್ಲಿ ನಡೆಯುವ ಒಂದು ಪವಿತ್ರ ಘಟನೆ. ಅದು ಅವಳ ಬಾಳಿಗೆ ಅನಿವಾರ್ಯತೆ ಕೂಡ ಆಗಿತ್ತು. ಆದರೆ ಅವಳಪ್ಪ ಅಂದುಕೊಂಡದ್ದು, ಅವಳು ನಿರೀಕ್ಷಿಸಿದ್ದು ಎಂದಿನಂತೆ ಹುಸಿಯಾಗಿತ್ತು. ದಿನಗಳು ಉರುಳಿದವು. ಸುಶೀಲಳಿಗೆ ಗಂಡು ಅನ್ನುವ ಪ್ರಾಣಿ ಸಿಗದೇ ಹೋದಾಗ ಅವಳು ಮಾನಸಿಕವಾಗಿ ಕುಗ್ಗುತ್ತಾ ಹೋಗುವಳು. ಹೀಗಿರುವಾಗ ಒಂದು ದಿನ ಮತ್ತೆ ಅವಳ ಕನಸುಗಳಿಗೆ ಬಣ್ಣ ತೀಡಿದವು. ಕಮರಿ ಹೋದ ಆಸೆ ಚಿಗುರಿತು ಇದಕ್ಕೆಲ್ಲ ಕಾರಣ ಮೋಹನ. ಅವನು ಅವಳನ್ನು ಮದುವೆ ಆಗಲು ಒಪ್ಪಿದ್ದ. ಮುಂದೆ ಅವಳ ಜೀವನ ಏನಾಯ್ತು..?? ಎಂಬುದು ಮಾತ್ರ ಸಸ್ಪೆನ್ಸ್…

“ಕಲಸಿಹೋದ ರಾಡಿ”
ಈ ಕಥೆಯಲ್ಲಿ… ಬಸ್ಸಿಗಾಗಿ ಕಾಯುತ್ತಿರುವ ಪ್ರಯಾಣಿಕರ ಸಹನೆ ಕಟ್ಟೆ ಇನ್ನೇನು ಒಡೆಯುವುದರಲ್ಲಿತ್ತು ಅಷ್ಟರಲ್ಲಿ ಬಸ್ಸು ಬಂತು. ಜನರು “ಹ್ಹೋ!” ಎಂದು ಬೊಬ್ಬೆ ಹಾಕಿದರು. ಉನ್ಮಾದದಲ್ಲಿ ಎಲ್ಲರ ಕಾಲಿನ ನರಗಳು ಸಡಿಲಗೊಂಡು ಒಬ್ಬರ್ನೊಬ್ಬರು ನೂಕುತ್ತಾ ಎಲ್ಲರೂ ಬಸ್ ಏರುವಾಗ, ಓರ್ವ ಮುದುಕ ಜನರ ಕಾಲ್ತುಳಿತಕ್ಕೆ ಬಲಿಯಾಗುತ್ತಾನೆ. ಅದು ಪೊಲೀಸ್ ಕಂಪ್ಲೇಂಟ್ ಕೂಡ ಆಗುತ್ತೆ. ಮುಂದೆ ಅಲ್ಲಿನ ಪ್ರಯಾಣಿಕರು ಈ ಸಮಯದಲ್ಲಿ ಅನುಭವಿಸಿದ ಸಂಕಟವನ್ನು ಶೇಖರ್ ಸರ್ ತಮ್ಮ ಸರಳ ಭಾಷೆಯಲ್ಲಿ ತುಂಬಾ ಚೆನ್ನಾಗಿ ನಿರೂಪಣೆ ಮಾಡಿದ್ದಾರೆ. ಕಥೆ ಕೊನೆಯಲ್ಲಿ ಒಂದು ಸಂದೇಶ ಕೂಡ ತಿಳಿಸಿದ್ದಾರೆ ಹಾಗಾಗಿ ಎಲ್ಲರೂ ಓದಲೇ ಬೇಕಾದ ಕಥೆ.
ಇದೇ ರೀತಿ ಈ ಸಂಕಲನದಲ್ಲಿ ಇನ್ನೂ ಅನೇಕ ಕಥೆಗಳು ಓದುಗನಿಗೆ ಇಷ್ಟ ಆಗುತ್ತಾ ಹೋಗುತ್ತವೆ. ಇಲ್ಲಿನ ಪ್ರತಿಯೊಂದು ಕಥೆಗಳು ನಮ್ಮ ಜೀವನಕ್ಕೆ ಹತ್ತಿರವಾದವು ಅಂದರೆ ತಪ್ಪಾಗಲಾರದು.
ಹ್ಯಾಟ್ಸ್ ಆಫ್ ಶೇಖರ್ ಸರ್……
- ರಾಘವೇಂದ್ರ ಇನಾಮದಾರ (ವಿಮರ್ಶಕರು, ಕತೆಗಾರರು, ಲೇಖಕರು) ಹುಬ್ಬಳ್ಳಿ.
