‘ಒಂದು ಡೈರಿಯ ಪರಿಮಳ’ ಕೃತಿ ಪರಿಚಯ – ವಾಣಿಶ್ರೀ ಕೊಂಚಾಡಿ

ಕಥೆಗಾರರಾದ ವಾಸುದೇವ ನಾಡಿಗ್ ಅವರ ‘ ಒಂದು ಡೈರಿಯ ಪರಿಮಳ ‘ ಕಿರು ಕಥೆಗಳ ಕಥಾ ಸಂಕಲನದ ಕುರಿತು ವಾಣಿಶ್ರೀ ಕೊಂಚಾಡಿ ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ..

ಪುಸ್ತಕದ ಹೆಸರು:ಒಂದು ಡೈರಿಯ ಪರಿಮಳ
ಲೇಖಕರು : ವಾಸುದೇವ ನಾಡಿಗ್
ಪ್ರಕಾಶಕರು: ಸಾಹಿತ್ಯ ಲೋಕ ಪಬ್ಲಿಕೇಶನ್ಸ್
ಬೆಲೆ :೨೧೦ ರೂ/

ಲೇಖಕರ ಬಗ್ಗೆ:
ತರಂಗ, ಸುಧಾ ,ತುಷಾರ ಓದುವವರಿಗೆ ವಾಸುದೇವ ನಾಡಿಗ್ ಹೆಸರು ಚಿರಪರಿಚಿತ. ‘ಭವದ ಹಕ್ಕಿ’, ‘ವೃಷಭಾಚಲದ ಕನಸು’, ‘ನಿನ್ನ ಧ್ಯಾನದ ಹಣತೆ’ ಮೊದಲಾದವು ಇವರ ಕವನ ಸಂಕಲನಗಳು. ಲೀಲಾಜಾಲವಾಗಿ ಕವಿತೆಗಳನ್ನು ಬರೆಯುವ ಅವರಿಗೆ ಕಥೆಯೂ ಅಷ್ಟೇ ಸಲೀಸು ಎಂದು ತಿಳಿದದ್ದು ಸುಮಾರು ನಾಲ್ಕೈದು ವರ್ಷಗಳ ಇತ್ತೀಚೆಗೆ. ೨೦೧೯ರ ಡಿಸೆಂಬರ್ ತಿಂಗಳ ತುಷಾರದಲ್ಲಿ ಅವರು ರೂಹು ಕಥೆ ಬ‌ಹಳ ಇಷ್ಟವಾಗಿತ್ತು. ಹಾಗಾಗಿ ‘ಕಥಾಭರಣ’ ವಿಮರ್ಶೆಯಲ್ಲಿ ಮೆಚ್ಚುಗೆ ಬಹುಮಾನವಾಗಿ ಇವರ ಕಥಾಸಂಕಲನ ‘ ಈ ಜನಗಳು ಈ ನರಕ ಈ ಪುಳಕ’ ಪುಸ್ತಕವನ್ನೇ ಆರಿಸಿದ್ದೆ. ಇದೇ ಬಳಗದಲ್ಲಿ ಅದನ್ನು ಪರಿಚಯಿಸಿದ್ದೆ. ಸ್ನೇಹ ಪೂರ್ವಕವಾಗಿ ನಾಡಿಗ್ ಸರ್ ಅವರು ಅವರ ‘ ಒಂದು ಡೈರಿಯ ಪರಿಮಳ ‘ ಕಿರು ಕಥೆಗಳ ಕಥಾ ಸಂಕಲನವನ್ನು ನನಗೆ ಕಳಿಸಿದ್ದರು.

ಕೃತಿಯ ಬಗ್ಗೆ :

‘ಒಂದು ಡೈರಿಯ ಪರಿಮಳ’ ಇದರಲ್ಲಿ ಸುಮಾರು ೯೬ ಪುಟ್ಟ ಪುಟ್ಟ ಕಥೆಗಳಿವೆ. ದಿನನಿತ್ಯದ ಸಂಭಾಷಣೆ, ಪ್ರಯಾಣದಲ್ಲಿ ಎದುರಾಗುವ ಜನರು , ಪ್ರೀತಿ, ಒಂಟಿತನ, ಸಂಸಾರದ ದು:ಖ , ಖುಷಿ, ಪುರಾಣದ ಪಾತ್ರಗಳು , ಎಲ್ಲವನ್ನೂ ಕಥೆಯ ವಸ್ತುವನ್ನಾಗಿಸಿದ್ದಾರೆ. ನಿಧಾನವಾಗಿ ಓದುತ್ತಾ ಹೋದಂತೆ ‌ಯಾವುದೋ ಹೊಸ ಜಗತ್ತಿಗೆ ಕಾಲಿಟ್ಟ ಭಾವ. ಕೆಲವನ್ನು ಓದಿಯಾದ ಮೇಲೆ ಓಹ್ ಹೌದಲ್ವಾ ! ಎಂದು ಈಗಷ್ಟೇ ಮನಸ್ಸಿಗೆ ಹೊಳೆದಂತೆ ಭಾಸವಾಗುತ್ತದೆ. ರವಿ ಕಾಣದನ್ನು ಕವಿ ಕಂಡನೆಂಬುದು ಇದಕ್ಕೇನೋ. ಇಷ್ಟೂ ಕಥೆಗಳಲ್ಲಿ ಕೆಲವು ಕಥೆಗಳು ನಿಮ್ಮ ಓದಿಗಾಗಿ….

೧ ವಾಕ್

ಈ ಕಥೆಯಲ್ಲಿ ವೃದ್ಧ ದಂಪತಿಗಳ ಮನದ ಬೇಗುದಿಯನ್ನು ಚಿತ್ರಿಸಲಾಗಿದೆ. ನಿತ್ಯ ಬೆಳಗಿನ ಜಾವ ವಾಕ್ ಹೋಗುವ ದಂಪತಿಗಳಿಗೆ ಯಾವಾಗಲೂ ಮಕ್ಕಳದೇ ಯೋಚನೆ. ವರ್ಷಗಳು ಕಳೆದರೂ ಜರ್ಮನಿಯ ಎಂಬ ದೂರದ ದೇಶದಿಂದ ಬಾರದ ಮಗ, ಯಾವಾಗಲೂ ಒತ್ತಡವೇ ಬದುಕಾಗಿರುವ ಐಟಿಯಲ್ಲಿರುವ ಮಗಳು, ಅವಳ ಯೋಚನೆಗಳಿಗೆ ಜೊತೆಯಾಗುವ ಧನದಾಹಿ ಅಳಿಯನ ಅದೇ ಭಾವನೆಗಳಿಲ್ಲದ ಮನಸ್ಸು, ಇನ್ನು ಚಿಗುರೊಡೆಯದ ಅವರ ಬದುಕಿನ ಕುಡಿ ಹೀಗೆ ಹತ್ತು ಹಲವು ಚಿಂತೆಗಳು ದಂಪತಿಗಳಿಗೆ. ಯಾವುದೇ ಯೋಚನೆಗಳಿಲ್ಲದೇ ನಡೆಯಬೇಕೆಂಬ ಅವರ ನಿರ್ಧಾರವು ಪ್ರತಿಸಲವೂ ಸೋಲನ್ನೇ ಕಾಣುತ್ತದೆ.

ಅಷ್ಟರಲ್ಲಿ ‘ಪತ್ನಿ ಕೆಲಸಕ್ಕೆ ಸೇರಿದ್ದಾಳೆ ..ಮಕ್ಕಳನ್ನು ನೋಡಲು ಆಗುತ್ತಿಲ್ಲ’ ಎಂಬ ಮಗನ ಫೋನ್‌ ಒಂದೆಡೆಯಾದರೆ ,’ಕನ್ಸೀವ್ ಆಗಿದ್ದೇನೆ, ಅಪ್ಪ ಅಮ್ಮ ನಮ್ಮ ಮನೆಗೆ ಬನ್ನಿ’ ಎಂಬ ಮಗಳ ಫೋನ್ ಇನ್ನೊಂದೆಡೆ. ಇವೆರಡರ ನಡುವೆ ಇದೀಗ ಇಬ್ಬರಿಗೂ ವಾಕ್ ತಪ್ಪಿ ಹೋಗುತ್ತದೆ ಎಂಬ ಆತಂಕ -‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದೇ ಜೀವನವಲ್ಲವೇ’ ಎಂಬ ಮಾತು ಎಷ್ಟು ಸತ್ಯ. ತೃಪ್ತಿ, ನೆಮ್ಮದಿ ಎಂಬುದು ನಮ್ಮ ನಮ್ಮ ಮನಸ್ಸಲ್ಲೇ ಇದೆ. ಚಳಿಗಾಲ ಬಂದಾಗ ಬಿಸಿಲಿನ ಆಸೆ , ಬೇಸಗೆಯಲ್ಲಿ ಮಳೆಯ ಬಯಕೆ ಒಟ್ಟಿನಲ್ಲಿ ಇರುವ ಸುಖವನ್ನು ಅನುಭವಿಸುವ ಮನಸ್ಸು ನಮ್ಮದಾಗಿರುವುದಿಲ್ಲ. ಚಿಂತೆ ಮಾಡಲೇಬೇಕಾದರೆ ಕಾರಣಗಳು ಹಲವಾರು ಸಿಗುತ್ತವೆ, ಆಯ್ಕೆ ನಮ್ಮದೇ.. ಎಂಬ ಸತ್ಯವನ್ನು ತಿಳಿಸುವ ಕಥೆ ಇಷ್ಟವಾಯ್ತು..

೨ ಸುಖ

ನಿಜವಾದ ಸುಖವನ್ನು ಹಣ, ಐಷಾರಾಮ ಬದುಕು ಕೊಡುವುದಿಲ್ಲ ಎಂಬುದನ್ನು ಮನದಟ್ಟು ಮಾಡುವ ಕಥೆ. ಫ್ಲಾಟ್ ನ ಬಾಲ್ಕನಿಯಲ್ಲಿ ನಿಂತು ನೋಡುವ ಆತನಿಗೆ ಸಮಯಕ್ಕೆ ಸರಿಯಾಗಿ ಕೆಳಗೆ ಕಾಣುವುದು ಪ್ರಭು ಜೆಂಟ್ಸ್ ಪಾರ್ಲರ್ ,ಮತ್ತು ಅದರೊಡೆಯನ ಸುಂದರ ಸಂಸಾರ. ರಾಜೇಶ್ ಮತ್ತವನ ಪತ್ನಿ ಪಾರ್ವತಿ ಮಗಳು ರತ್ನ . ಸಲೂಲಿನ ಅಂಗಳದ ಕಸ ಗುಡಿಸಿ ನೀರು ಹಾಕಿ, ಕನ್ನಡಿ, ಕುರ್ಚಿ ಒರೆಸಿ ಕೊಡುವವರೆಗೂ ಎರಡು ವರ್ಷದ ಮಗಳು ತಂದೆಯ ಕೈಯಲ್ಲಿ. ಸಲೂನಿನ ಎದುರೇ ಪತ್ನಿ ಪಾರ್ವತಿಯ ಕಿರಾಣಿ ಅಂಗಡಿ. ಅದಕ್ಕೆ ಮೂಟೆಗಳನ್ನು ಸುರಿದು ಸಿದ್ಧಗೊಳಿಸುವುದು ರಾಜೇಶನ ಕೆಲಸ. ಬೀದಿ ದಾಟುತ್ತಾ ಅಪ್ಪ ಅಮ್ಮನ ಮಧ್ಯೆ ಓಡಾಡಿಕೊಂಡು ಸದಾ ಖುಷಿಯಿಂದ ಇರುವ ಪುಟ್ಟ ಮಗಳು ರತ್ನ. ಆದರೆ ಆತನ ಬದುಕು ಇದಕ್ಕೆ ತದ್ವಿರುದ್ಧ.

ಪತ್ರಿಕಾ ವರದಿ ಸಿದ್ಧಪಡಿಸಿ ಮನೆಗೆ ಬಂದರೆ ಟೇಬಲ್ ಮೇಲಿನ ಹಾಟ್ ಬಾಕ್ಸ್ ನಲ್ಲಿ ಊಟ ರೆಡಿ ಮಾಡಿ ಬಾಗಿಲು ಹಾಕಿ ಮಲಗಿರುವ ಹೆಂಡತಿ. ಯಾಕೆಂದರೆ ಮರುದಿನ ಅವಳಿಗೆ ಕಾಲೇಜ್ ಇದೆ. ಆತ ಏಳುವ ಹೊತ್ತಿಗೆ ಮತ್ತೆ ಹಾಟ್ ಬಾಕ್ಸ್ ನಲ್ಲಿ ತಿಂಡಿ . ಇವಳ ರಾತ್ರಿ ಅವನ ಹಗಲು. ಅವನ ಹಗಲು ಇವಳಿಗೆ ರಾತ್ರಿ. ಸುಮ್ನೆ ಮಲಗೋಕೆ ಈ ಮನೆ . ಇನ್ನು ಹುಟ್ಟದ ಮಗ/ ಮಗಳ ಯೋಚನೆ ಇಲ್ಲ . ಇವರಿಬ್ಬರಿಗೂ ಬಿಡುವು ಭಾನುವಾರ.

ಅಂದು ನಿಜವಾದ ‘ಸುಖದ’ ಅರ್ಥವನ್ನು ತಿಳಿಸುವ ಸಂಸಾರವನ್ನು ನೋಡುತ್ತಾ ಕಾಲ ಕಳೆಯುವುದು ಇವರಿಬ್ಬರ ಕೆಲಸ.

೩ ದೊರೆ

ವಂಶ ಪಾರಂಪರ್ಯವಾಗಿ ಬಂದ ಎಲ್ಲಾ ಸವಲತ್ತುಗಳಿರುವ ಅಭಿಜಾತ ದೊರೆ. ನಿಂತರೆ ಛತ್ರಿ, ಓಡಾಡಲು ರಥ. ಹಣ, ಕೀರ್ತಿ, ಗೌರವ,ಪ್ರಜಾ ಪ್ರೀತಿ ಎಲ್ಲವೂ ಇವೆ. ಯಾವುದಕ್ಕೂ ಕೊರತೆಯಿಲ್ಲ. ಒಂದು ದಿನ ದೊರೆ ಕುದುರೆಯಲ್ಲಿ ತಿರುಗಾಡಲು ಹೊರಟ. ಕಾಡು ಸುತ್ತಿದ ಆತನಿಗೆ ಬಾಯಾರಿಕೆ .ನದಿಯ ಪಕ್ಕದಲ್ಲಿ ಕುದುರೆ ನಿಲ್ಲಿಸಿ ಬೊಗಸೆಯಲ್ಲಿ ನೀರು ಕುಡಿಯಬೇಕೆನ್ನುವಷ್ಟರಲ್ಲಿ ಚೆಲುವೆಯನ್ನು ಕಂಡ. ನೀರು ಸೋರಿತು. ಆಕೆ ನಕ್ಕು ಬಿಂದಿಗೆಯ ನೀರನ್ನು ದೊರೆಯ ಬೊಗಸೆಗೆ ಸುರಿದಳು.ಕುಡಿದಂತೆ ನಟಿಸಿದ. ಆಕೆ ಕಣ್ಣುಗಳಲ್ಲೇ ನಕ್ಕಳು. ಮೊಣಕಾಲೂರಿ ದೊರೆಯನ್ನು ಎಬ್ಬಿಸಿ ಅಪ್ಪಿದಳು. ದೊರೆಯಾದರೂ ಅವನ ಕಣ್ಣುಗಳಲ್ಲಿನ ಪ್ರೀತಿಯ ಕೊರತೆ ಅವಳಿಗೆ ಕಂಡಿತು. ಪ್ರೀತಿ ಕೊಟ್ಟಳು. ಈಗ ದೊರೆ ಮಗುವಾದ . ಮತ್ತೆ ಸಿಗುವೆನೆಂದವಳು ಮಾಯವಾದಳು. ಆತ ಹುಡುಕಿ ಹುಡುಕಿ ಕಂಗಾಲಾದ. ನಿರೀಕ್ಷೆಯಲ್ಲಿಯೇ ಕಳೆದ.ಈಗ ಆತನಿಗೆ ಸುಖ ವೈಭವ ರುಚಿಸದು. ಅವಳಿಲ್ಲದ ಆತ ದೊರೆಯಾದರೂ ಜಗತ್ತಿನಲ್ಲೇ ಕಡು ಬಡವನೆನಿಸಿದ. ಪ್ರೀತಿಯಿಲ್ಲದ ಒಂಟಿ ಜೀವನಕ್ಕೆ ಅರ್ಥವಿದೆಯೇ?

೪ ಕುರುಡು

ನಿತ್ಯವೂ ಕಾಲೇಜಿನಲ್ಲಿ ಪಾಠ ಮುಗಿಸಿ ಬಸ್ ಹತ್ತಿದ ಅವಳ ಮೊದಲ ಮೆಸೇಜ್ ಅಭಿರಾಮನಿಗೆ ‘ಎಲ್ಲಿದ್ದೀರಿ? ಯಾವಾಗ ಬರುತ್ತೀರಿ,’ ಮಾನಸಿಯ ಪ್ರತಿ ಮೆಸೇಜಿಗೂ ಮುಕ್ಕಾಲು ಗಂಟೆಯ ಬಳಿಕವೇ ಆಚುಟುಕಾದ ಪ್ರೀತಿಯಿಲ್ಲದ ನೀರಸ ಪ್ರತ್ಯುತ್ತರ ಆತನದು. ಮರು ಪ್ರಶ್ನೆಗಳಿಲ್ಲ. ಆ ಸಂಜೆ ಆಕೆಗೆ ಸೀಟು ಸಿಗಲಿಲ್ಲ. ಕೊನೆಗೆ ಸಿಕ್ಕಿದ ಸೀಟು ಪುರುಷರದಾಗಿತ್ತು. ಸುಂದರ ಸಂಜೆ ಮತ್ತೆ ಅಭಿಯ ನೆನಪು ತಂದಾಗ ” ಹಲೋ ಅಭಿ ಮಳೆ ಇದೆ ಹುಷಾರು ಬೇಗ ಬನ್ನಿ, ಮತ್ತೆ ಮೆಸೇಜ್ ಮಾಡಿದಳು. ಆ ಕಡೆಯಿಂದ ಅದೇ ನಿರ್ಭಾವುಕತೆಯ ಉತ್ತರ..’Let me complete work’. ಮುಂದಿನ ನಿಲ್ದಾಣದಲ್ಲಿ ಕುರುಡನೊಬ್ಬ ಮಾನಸಿಯ ಪಕ್ಕವೇ ಕುಳಿತ. ಅವನದು ಫೋನಲ್ಲಿ ಒಂದೇ ಸಮನೆ ಮಾತು . ‘ ತನು ಚಂದ ಮಳೆ ಬರ್ತಾ ಇದೆ.ಜೊತೆಗೆ ಮಣ್ಣಿನ ಪರಿಮಳ ಕೂಡಾ. ತಂಪು ಬೇರೆ. ಬೇಗ ಬರ್ತೀನಿ ತನು . ಬಿಸಿ ಬಿಸಿ ಈರುಳ್ಳಿ ಪಕೋಡ ಮಾಡಿ ಕೊಡು. ಮಾನಸಿಗೆ ಅನ್ನಿಸಿತು… ಈ ಮಳೆಯ ರೋಮಾಂಚನ ನಾನು ಅಭಿಗೆ ವರ್ಣಿಸಬೇಕು. “Abhi raining beautifully here. ರಿಮ್ ಜಿಮ್ ನೆನಪಾಗ್ತಿದೆ. ನಿನ್ನ ಜೊತೆ ಈರುಳ್ಳಿ ಬಜ್ಜಿ ತಿನ್ನುವ ಆಸೆ ಆ ಕಡೆಯಿಂದ ತಡವಾದ ಅದೇ ಮಾಮೂಲು ಉತ್ತರ.’ No way I am busy… ಹಾಗಾದರೆ ಇವರಲ್ಲಿ ನಿಜವಾದ ಕುರುಡ‌ ಯಾರು??

೫ ಒಂದು ಡೈರಿಯ ಪರಿಮಳ

ಈ ಪುಸ್ತಕದಲ್ಲಿನ ಕೊನೆಯ ಕಥೆ.

ಇಕ್ಕಟ್ಟಿನ ಗಲ್ಲಿಯಲ್ಲಿದ್ದ ಗಾಳಿ ಬೆಳಕಿಲ್ಲದ ಪುಟ್ಟ ಮನೆ, ಶಬ್ದ ಮಾಡುವ ಮುಂಚ, ಮುಗ್ಗಲ ವಾಸನೆಯ ಹೊದಿಕೆ, ಧೂಳು ಹಿಡಿದ ಕಪಾಟಿನ ತುಂಬ ಇರುವುದು ಮಾತ್ರ ಪುಸ್ತಕಗಳ ರಾಶಿ. ರಾತ್ರಿಯನ್ನು ಕಳೆಯಲು ಮಾತ್ರ ಅಲ್ಲಿಗೆ ಬರುವ ಅವನಿಗೆ ಆ ರಾತ್ರಿಯೇ ಹಿತ. ಹಾಳೆಯ ಮೇಲೆ ಗೀಚುತ್ತಾ, ಎಲ್ಲಾ ಪುಸ್ತಕಗಳನ್ನು ಮತ್ತೆ ಮತ್ತೆ ತೆರೆದು ಮಡಚಿ ಮುಚ್ಚಿಡುವ ಅವನು ಆ ಡೈರಿಯನ್ನು ಮಾತ್ರ ಎದೆ ಮೇಲೆ ಇಟ್ಟುಕೊಂಡೆ ಮಲಗುತ್ತಾನೆ. ಆ ಪುಟಗಳ ನಡುವಿನ ಘಮಲು. ಮತ್ತು ಗುಲಾಬಿ ಹೂಗಳ ದಳಗಳನ್ನು ಒತ್ತಿ ಅಂಟಿದ ಕಲೆಯ ಕಂಪು ಅವನಿಗೆ ಜೋಗುಳ. ಎಷ್ಟೇ ಬಾರಿ ಕೋಣೆಗಳನ್ನು ಆತ ಬದಲಾಯಿಸಿದರೂ ಆ ಡೈರಿಯ ಒಳಗಿನ ನವಿಲುಗರಿಯನ್ನು ಮಾತ್ರ ಜೀವದಷ್ಟೇ ಜತನವಾಗಿ ಕಾಪಾಡಿಕೊಂಡಿದ್ದಾನೆ. ಇವಿಷ್ಟೇ ಅಲ್ಲ. ಇಂತಹ ೯೬ ಕಥೆಗಳಿವೆ. ಹೆಚ್ಚಿನವು ದಿನನಿತ್ಯ ನಾವು ನೋಡುವ ಅನುಭವಕ್ಕೆ ಬರುವ ಘಟನೆಗಳೇ ಆಗಿವೆ. ‘ಕುಬ್ಜೆ’ ಕಥೆಯಲ್ಲಿ ಕೃಷ್ಣ ಕುಂಬ್ಜೆಯ ಪ್ರೀತಿ, ಬಾಂಧವ್ಯದ ಚಿತ್ರಣವಿದ್ದರೆ, ಇಕ್ಕಟ್ಟಿನ ಮನೆಯಲ್ಲಿದ್ದ ಪ್ರೀತಿಯ ಮಾತು , ಬದುಕುವ ರೀತಿ ಬಂಗಲೆಗೆ ಹೋದಾಗ ಬದಲಾಗುತ್ತದೆ .ಆ ವಿಶಾಲ ಜಾಗದಲ್ಲಿ ಒಬ್ಬರಿಗೊಬ್ಬರು ‌ಮುಖಾಮುಖಿಯಾಗದ ಸ್ಥಿತಿ.
ಒಂದೇ ಮನೆಯೊಳಗಿದ್ದರೂ ಕೆಲಸದ ಒತ್ತಡದಿಂದಾಗಿ ಅವರವರ ಕೆಲಸಗಳಲ್ಲಿ ಹುದುಗುವ ಕಾರಣ ಬೇರೆ ಬೇರೆ ಮನೆಯಲ್ಲಿದ್ದಂತೆ ಬದುಕುವ ರೀತಿ ‘ಯೆ ತೇರ ಘರ್ ಯೆ ಮೇರ ಘರ್’ ನಲ್ಲಿ ಚಿತ್ರಿತವಾಗಿದೆ. ‘ನಿರ್ಗಮನ’ ‘ಪದಬಂಧ’ ‘ಕನ್ನಡಿ’ ಕಥೆಗಳೂ ಮನಸ್ಸನ್ನು ಮುಟ್ಟುತ್ತದೆ.

‘ಒಂದು ಡೈರಿಯ ‌ಪರಿಮಳ’ ಪುಸ್ತಕ ದಲ್ಲಿರುವುದು. ವಿಶೇಷವಾದ ಪರಿಮಳ. ಇದರ ಪ್ರತಿಯೊಂದು ಪುಟದಲ್ಲಿರುವುದು ವಿಭಿನ್ನವಾದ ಕಂಪು . ಒಂದರಂತೆ ಇನ್ನೊಂದಿಲ್ಲ. ಜೀವನ ಪ್ರೀತಿ , ವೃದ್ಧ ಮನಸ್ಸಿನ ಚಿತ್ರಣ, ಪುರಾಣದ ಪಾತ್ರಗಳು, ವಿಷಾದ , ಮಾನವೀಯತೆ , ಒಂಟಿತನ ಹೀಗೆ ಎಲ್ಲವೂ ಇಲ್ಲಿನ ಕಥೆಯ ವಸ್ತುವಾಗಿ ಕೊನೆಯಲ್ಲಿ ಯಾವುದೋ ನೀತಿಯನ್ನು ನಮಗೆ ಹೇಳುತ್ತವೆ.

ಒಂದೆರಡು ಪುಟಗಳಲ್ಲಿ ಮುಗಿದೇ ಹೋಗುವ ಇಲ್ಲಿನ ಕಥೆಗಳು ಪುಟ್ಟದಾದರೂ ಅರ್ಥಗರ್ಭಿತವಾಗಿದ್ದು , ಬದುಕಿನ ನಿತ್ಯಸತ್ಯವನ್ನು ತೆರೆದಿಡುತ್ತಾ ನಮ್ಮನ್ನು ಚಿಂತನೆಗೆ ಹಚ್ಚುತ್ತದೆ.
ಧನ್ಯವಾದಗಳೊಂದಿಗೆ


  • ವಾಣಿಶ್ರೀ ಕೊಂಚಾಡಿ

 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW